ನಿನ್ನೆಯಷ್ಟೇ ನಮ್ಮನ್ನು ಭೌತಿಕವಾಗಿ ಅಗಲಿದ ಎಸ್. ಎಲ್. ಭೈರಪ್ಪನವರೊಡನೆ ಕನ್ನಡಸಾಹಿತ್ಯದ – ಮಾತ್ರವಲ್ಲ, ಭಾರತೀಯ ಸಾಹಿತ್ಯದ – ಒಂದು ಯುಗವೇ ಸರಿದುಹೋಗಿದೆ ಎಂದರೆ ಅತಿಶಯದ ಮಾತಲ್ಲ. ಪುಸ್ತಕಗಳ ಮೂಲಕ ರಸಾಸ್ವಾದವನ್ನು ಪಡೆಯುವ ಒಂದು ಸಂಸ್ಕೃತಿಯ ಸಾಕಾರವಾಗಿದ್ದ ಅವರು ಇದೀಗ ಓದಿನಿಂದಲೇ ದೂರವಾಗುತ್ತಿರುವ ಸಮಾಜದ ಸ್ಥಿತ್ಯಂತರವನ್ನು ಗಮನಿಸುತ್ತಲೇ ನಮ್ಮಿಂದ ದೂರವಾಗಿರುವುದು ಧ್ವನಿಪೂರ್ಣವಾದ ಎಚ್ಚರಿಕೆ. ಮುಂದೆ ಆಗಬಹುದಾದ ಪರಿಣಾಮಗಳು ಏನೇ ಇದ್ದರೂ ಭೈರಪ್ಪನವರನ್ನು ಮೂಲದಲ್ಲಿಯೇ ಓದಿಕೊಳ್ಳುವ ಆಸ್ವಾದದಿಂದ ವಂಚಿತರಾದವರನ್ನು ನತದೃಷ್ಟರೆಂದು ನಾವುಗಳಂತೂ ಭಾವಿಸಬಹುದು. ಇಂಥ ಸಾಹಿತ್ಯವಿಭೂತಿಯ ಅಸ್ತಮಾನ ಮತ್ತೊಂದು ಅರುಣೋದಯದ ಆಶೆಯನ್ನು ಹುಟ್ಟಿಸದೆಯೇ ಆಗಿರುವುದು ನಿಶೀಥದಷ್ಟೇ ವಿಷಾದದ ಸಂಗತಿ.
ಭೈರಪ್ಪನವರು ಒಬ್ಬ ಸಾಹಿತಿಯಾಗಿ ಓದುಗರ ಮನಮುಟ್ಟಿದಂತೆಯೇ ವ್ಯಕ್ತಿಯಾಗಿಯೂ ಅನೇಕರ ಬದುಕುಗಳನ್ನು ತಟ್ಟಿದ್ದಾರೆ. ಇದು ಸದ್ದಿಲ್ಲದೆ ನಡೆದ ಒಂದು ಪವಾಡ. ಇದಕ್ಕೆ ಮುಖ್ಯ ಕಾರಣ ಅವರಲ್ಲಿದ್ದ ಮೌಲ್ಯಪ್ರಜ್ಞೆ. ಅದು ಸಾಹಿತ್ಯದ ಮಟ್ಟಿಗೆ ರಸನಿಷ್ಠೆ, ಬಾಧ್ಯತೆಯುಳ್ಳ ಪ್ರಜೆಯ ಮಟ್ಟಿಗೆ ರಾಷ್ಟ್ರಭಕ್ತಿ, ವೈದುಷ್ಯದ ಮಟ್ಟಿಗೆ ಸತ್ಯತತ್ಪರತೆ ಮತ್ತು ವ್ಯಕ್ತಿಯ ಮಟ್ಟಿಗೆ ಪ್ರೀತಿ, ಸ್ನೇಹ, ವಾತ್ಸಲ್ಯಗಳು. ಇವುಗಳಿಲ್ಲದೆ ಇದ್ದಲ್ಲಿ ಅವರ ಬರೆಹಕ್ಕಾಗಲಿ, ಬದುಕಿಗಾಗಲಿ ದೊಡ್ಡ ಬೆಲೆ ಬರುತ್ತಿರಲಿಲ್ಲ. ಮುಂದೆಯಾದರೂ ಅವರಂತೆ ಸಾಫಲ್ಯವನ್ನು ಕಾಣಬೇಕೆಂದು ಬಯಸುವವರು ಇವುಗಳನ್ನು ಪ್ರಾಮಾಣಿಕವಾಗಿ ಅನುಸಂಧಾನಿಸುವುದು ಅನಿವಾರ್ಯ.ಇಂಥ ಮಹನೀಯರು “ಪ್ರೇಕ್ಷಾ ಪ್ರತಿಷ್ಠಾನ”ದ ಮಾರ್ಗದರ್ಶಕ ಮಂಡಲಿಯ ಹಿರಿಯ ಸದಸ್ಯರಾಗಿದ್ದು ತಮ್ಮ ಕಾಳಜಿಯನ್ನು ಇತ್ತ ಹಾಯಿಸಿದ್ದು ನಮ್ಮ ಸೌಭಾಗ್ಯ. ನಮ್ಮ ಪ್ರತಿಷ್ಠಾನದ ಎಲ್ಲ ಚಟುವಟಿಕೆಗಳನ್ನೂ ಆಸ್ಥೆಯಿಂದ ಗಮನಿಸುತ್ತಿದ್ದರಲ್ಲದೆ ನಾವಾಗಿ ಕೇಳಿದಾಗ ಸಂದರ್ಭೋಚಿತ ಸೂಚನೆಗಳನ್ನೂ ಕೊಟ್ಟು ಮುನ್ನಡಸುತ್ತಿದ್ದರು. ನಮ್ಮ ಎಲ್ಲ ಪ್ರಕಟನೆಗಳನ್ನೂ ಪರಿಶೀಲಿಸುತ್ತ ಬೆನ್ನು ತಟ್ಟುತ್ತಿದ್ದುದಲ್ಲದೆ ಕೆಲವಕ್ಕೆ ತಮ್ಮ ಲಿಖಿತ ಅಭಿಪ್ರಾಯವನ್ನೂ ನೀಡಿ ಪ್ರೋತ್ಸಾಹಿಸುತ್ತಿದ್ದರು. ಕೇವಲ ಮಾತಿಗಷ್ಟೇ ಸೀಮಿತವಾಗದೆ ಆರ್ಥಿಕವಾಗಿಯೂ ಉದಾರತೆಯನ್ನು ಮೆರೆದಿದ್ದರು. “ಪ್ರೇಕ್ಷಾ” ಸದಸ್ಯರನ್ನು ತಮ್ಮವರನ್ನಾಗಿ ಕಂಡಿದ್ದರ ಕುರುಹೆಂಬಂತೆ ಎಲ್ಲ ಕಾಲದಲ್ಲಿಯೂ ಅವರ ಮನೆ-ಮನಗಳು ನಮಗೆ ತೆರೆದ ಬಾಗಿಲಾಗಿದ್ದವು. “ಪ್ರೇಕ್ಷಾ” ಬಳಗಕ್ಕೆ ಒಮ್ಮೆ ಔತಣದ ಸತ್ಕಾರ ನೀಡಿದ ಅಕ್ಕರೆ ಅವರದು. ಇಂಥ ಮಾರ್ಗದರ್ಶಕ ಮಹನೀಯರು ಇಂದು ಇಲ್ಲವಾಗಿರುವುದು ಅಕ್ಷರಾರ್ಥದಲ್ಲಿ ತುಂಬಲಾಗದ ನಷ್ಟ. ಅವರು ಯಾವ ಮೌಲ್ಯಗಳನ್ನು ತಮ್ಮ ಬದುಕು-ಬರೆಹಗಳಲ್ಲಿ ಕಂಡರಿಸಿದರೋ ಅವಕ್ಕೆ ಅನ್ಯಾಯವಾಗದಂತೆ ನಡೆಯುವ ಶ್ರದ್ಧೆ ನಮ್ಮದಾಗಲಿ. ಇದು ಸಾಧಿತವಾದಲ್ಲಿ ಭೈರಪ್ಪನವರಿಗೆ ನಾವು ನೀಡಬಲ್ಲ ಶ್ರದ್ಧಾಂಜಲಿ ಮತ್ತೊಂದಿರುವುದಿಲ್ಲ.
ನಮ್ಮೊಳಗೆ ಸದಾ ಬಾಳುವ ಭೈರಪ್ಪನವರನ್ನು ನೆನೆಯುತ್ತ ಮತ್ತೊಮ್ಮೆ ಅವರ ಸಾಹಿತ್ಯಜೀವನದ ಕೆಲವೊಂದು ಮಜಲುಗಳನ್ನು ಮೆಲುಕುಹಾಕಬಹುದು.
* * *
ಪಾಶ್ಚಾತ್ತ್ಯ ದೇಶಗಳಲ್ಲಿ ಕಾದಂಬರಿಯೆಂಬ ಸಾಹಿತ್ಯಪ್ರಕಾರ ಆವಿರ್ಭವಿಸಿ ಮೂರು-ನಾಲ್ಕು ಶತಕಗಳಾಗಿ ಸದ್ಯಕ್ಕೆ ಅಲ್ಲಿ ಈ ಮಾಧ್ಯಮದ ಶಕ್ತಿ-ಸಾಧ್ಯತೆಗಳ ಆವಿಷ್ಕಾರ ಮುಗಿದ ಹಾಗೆಯೇ ಹೌದೆಂದರೆ ಅತಿಶಯವಲ್ಲ. ಆದರೆ ಭಾರತದಲ್ಲಿ - ಅದರ ಸಾಂಸ್ಕೃತಿಕ, ಐತಿಹಾಸಿಕ, ಭೌಗೋಳಿಕ ಮತ್ತು ಭಾಷಿಕ ಪರಿವೇಷದ ಹಿನ್ನೆಲೆಯಲ್ಲಿ - ಕಾದಂಬರಿ ತನ್ನ ವಿಶ್ವರೂಪವನ್ನು ಇನ್ನೂ ತೆರೆದಿಡುತ್ತಲೇ ಇದೆ. ಈ ನಿಟ್ಟಿನಿಂದ ನೋಡಿದಾಗ ಭೈರಪ್ಪನವರಂಥ ಮಹಾಲೇಖಕರ ಪ್ರಮುಖ ಕಾದಂಬರಿಗಳು ಭಾರತೀಯ ನೇಪಥ್ಯದ ಮೂಲಕ ತೆರೆದಿಟ್ಟ ಸತ್ಯ-ಶಿವ-ಸೌಂದರ್ಯಗಳೆಂಬ ಜೀವನಮೌಲ್ಯಗಳ ಪ್ರಪಂಚ ಬಹುಮುಖಿಯಾಗಿದೆ. ಭಾರತದಲ್ಲಿ ಆಧುನಿಕ ಕಾಲದ ಕಾದಂಬರಿಯ ಮಾಧ್ಯಮವು ಬಂಕಿಮಚಂದ್ರ, ರವೀಂದ್ರನಾಥ ಠಾಕೂರ್, ಶರಚ್ಚಂದ್ರ ಚಟರ್ಜಿ, ಪ್ರೇಮಚಂದ್ ಮುಂತಾದ ಬಂಗಾಳಿ-ಹಿಂದಿ ಲೇಖಕರ ಬಳಿಕ ಕನ್ನಡದ ಗುಲ್ವಾಡಿ ವೆಂಕಟರಾವ್, ಗಳಗನಾಥ, ಎಂ. ಎಸ್. ಪುಟ್ಟಣ್ಣ ಮೊದಲಾದವರ ದುಡಿಮೆಯ ಮೂಲಕ ನೆಲೆಗೊಂಡಿತಷ್ಟೆ. ಅನಂತರ ಮಾಸ್ತಿ, ದೇವುಡು, ಕಾರಂತ, ಅ.ನ.ಕೃ. ಮುಂತಾದವರ ಯೋಗದಾನದಿಂದ ಮತ್ತಷ್ಟು ಪುಷ್ಟವಾಯಿತು. ಹೀಗೆ ಗಟ್ಟಿಗೊಂಡ ಅಧಿಷ್ಠಾನದ ಮೇಲೆ ಭೈರಪ್ಪನವರು ತಮ್ಮ ಕಾದಂಬರೀಸೌಧಗಳನ್ನು ಸೊಗಸಾಗಿ ನಿರ್ಮಿಸಿದ್ದಾರೆ. ನವೋದಯಪೂರ್ವ ಮತ್ತು ನವೋದಯಗಳ ಎಲ್ಲ ಸತ್ತ್ವವನ್ನೂ ಹೀರಿಕೊಂಡು ನವ್ಯಾದಿಗಳ ಗುಣಾಂಶಗಳನ್ನೂ ಗಮನಿಸಿಕೊಂಡು ಹರಳುಗಟ್ಟಿದ ಇವರ ಕೃತಿಗಳನ್ನು ಗಮನಿಸಿದರೆ ಎಲ್ಲರಿಗೂ ಭಾರತೀಯ ಕಾದಂಬರೀಸಾಹಿತ್ಯದ ಶಕ್ತಿ-ಸಾಧ್ಯತೆಗಳು ಮನದಟ್ಟಾಗುತ್ತವೆ. ಹೀಗಾಗಿ ಭೈರಪ್ಪನವರ ರಸೋಜ್ಜ್ವಲವಾದ ಕೃತಿಶ್ರೇಣಿಯನ್ನು ನಮ್ಮ ನುಡಿಯ ಅತ್ಯುತ್ತಮ ಅಭಿವ್ಯಕ್ತಿಗಳ ಪೈಕಿ ಒಂದೆಂದೂ ಆದುದರಿಂದಲೇ ಅದು ಎಲ್ಲ ಕಾಲಗಳಿಗೂ ಸಲ್ಲುವ ಸಾಹಿತ್ಯವೆಂದೂ ನಿರ್ಧರಿಸಲು ಸಾಧ್ಯ.
ಭೈರಪ್ಪನವರ ಹೆಚ್ಚಿನ ಕಾದಂಬರಿಗಳ ಭಾಷೆ ಓಜಸ್ವಿಯಾದರೂ ತಿಳಿಯಾದ ಹೊಸಗನ್ನಡ. ಯಾವ ಗುಣವನ್ನು ನಮ್ಮ ಆಲಂಕಾರಿಕರು ಪ್ರಸಾದವೆಂದು ಹೇಳಿ ಗುರುತಿಸಿದ್ದಾರೋ ಅದು ಇವರ ಎಲ್ಲ ಬರೆಹಗಳ ಸೌಭಾಗ್ಯ. ಆದರೆ ಈ ತಿಳಿತನ ಸ್ವಲ್ಪವೂ ಜಾಳಾಗದೆ ತನ್ನೊಳಗಿನ ಭಾವದ ಗಟ್ಟಿತನದ ಮೂಲಕ ಬೆಳಗಿದೆ. ಹೆಚ್ಚಿನ ಕಾದಂಬರಿಗಳಲ್ಲಿ ಬರುವ ಆಡುನುಡಿ ನಿರಪವಾದವೆಂಬಂತೆ ತೆಂಗಿನ ಸೀಮೆಯ ನುಡಿಗಾರಿಕೆಯ ಜೀವಂತಿಕೆಯನ್ನೆಲ್ಲ ಸೂರೆಗೊಂಡಿದೆ. ಭೈರಪ್ಪನವರು ಬರೆಯುವ ತನಕ ಈ ಬಗೆಯ ಆಡುನುಡಿ ನಮ್ಮ ಸಾಹಿತ್ಯದಲ್ಲಿ ನೆಲೆ ಕಂಡಿರಲಿಲ್ಲ. ಹೀಗಾಗಿ ಅದಕ್ಕೊಂದು ಅಧಿಕೃತತೆಯನ್ನು ತಂದುಕೊಟ್ಟ ಶ್ರೇಯಸ್ಸು ಇವರದೇ.
ವಿಶ್ವಜೀವನ ಮತ್ತದನ್ನು ಅನುಸರಿಸಿ ಬರುವ ವಿಶ್ವಸಾಹಿತ್ಯದ ಮಹಾಕೃತಿಗಳೆಲ್ಲ ನಮ್ಮ ಹುಟ್ಟು-ಸಾವು, ಅರ್ಥ-ಕಾಮ, ಒಳಿತು-ಕೆಡುಕು ಮುಂತಾದ ಮೂಲಭೂತ ಸಂಗತಿಗಳ ಮೌಲ್ಯಮೀಮಾಂಸೆಯನ್ನು ದಣಿವಿಲ್ಲದೆ ಮಾಡುತ್ತ ಬಂದಿವೆ. ಈ ಕೆಲವು ಮಹತ್ತ್ವದ ಅಂಶಗಳನ್ನು ಕಲಾತ್ಮಕವಾಗಿ ವಿವೇಚಿಸದ ಸಾಹಿತ್ಯಕ್ಕೆ ಹೆಚ್ಚಿನ ನೆಲೆ-ಬೆಲೆಗಳು ದಕ್ಕವು. ಭೈರಪ್ಪನವರ ಕಾದಂಬರಿಗಳಲ್ಲಿ ಈ ಎಲ್ಲ ಮೌಲ್ಯಗಳ ವ್ಯಾಪಕವಾದ ಪ್ರಗಲ್ಭ ಮೀಮಾಂಸೆಯಿದೆ. ಮಾತ್ರವಲ್ಲ, ಇವುಗಳಿಗೆ ಅಂಟಿಬರುವ ಮತ್ತೆಷ್ಟೋ ಉಪಮೌಲ್ಯಗಳ, ಸಂಘರ್ಷಗಳ ಚಿತ್ರಣವಿದೆ. ಇವೆಲ್ಲ ತುಂಬ ಸಾಂದ್ರವಾದ ರಸಾನುಭವದ ಪರಿಪಾಕವನ್ನು ಮುಟ್ಟುವುದು ಗಮನಾರ್ಹ. ಈ ಮಟ್ಟದ ಆಳ-ಅಗಲಗಳಲ್ಲಿ ನಾನರಿತಂತೆ ಮತ್ತಾವ ಭಾರತೀಯ ಲೇಖಕರೂ ತಮ್ಮ ಸಾಹಿತ್ಯವನ್ನು ನಿರ್ಮಿಸಿಲ್ಲ.
ಭೈರಪ್ಪನವರ ಕಲಾಸೃಷ್ಟಿಯ ಹರಹು ಊಹಾತೀತ; ಪ್ರತಿಯೊಂದು ಅಂಶದಲ್ಲಿಯೂ ನವನವೀನ. ವೈವಿಧ್ಯ ಮತ್ತು ಗಾಂಭೀರ್ಯ, ಪ್ರಬುದ್ಧತೆ ಮತ್ತು ಪರಿಣಾಮಕಾರಿತೆ, ನಿರ್ಲಿಪ್ತತೆ ಮತ್ತು ನಿರ್ಭರತೆಗಳು ಅವರ ಎಲ್ಲ ಮಹಾಕೃತಿಗಳ ಸಾಮಾನ್ಯ ಲಕ್ಷಣ. ಇದು ವಿಶ್ವದ ಎಲ್ಲ ಶ್ರೇಷ್ಠ ಕೃತಿಗಳ ಅಸಾಮಾನ್ಯ ಲಕ್ಷಣವೂ ಹೌದು. ಒಂದು ಮಾತಿನಲ್ಲಿ ಹೇಳುವುದಾದರೆ ಎಸ್. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಮಾನವಜೀವನದ ಭೌತಿಕ ಮತ್ತು ಭಾವುಕ ಸ್ತರಗಳ ದ್ವಂದ್ವಗಳೆಲ್ಲ ಕಥನರೂಪದಲ್ಲಿ ಸಾಕಾರವಾಗುತ್ತ ಬೆಳೆದು ಸಜೀವ ಪಾತ್ರಗಳಿಂದ, ಸಮೃದ್ಧ ಸನ್ನಿವೇಶಗಳಿಂದ ಪುಷ್ಟಿಗೊಂಡು, ಸಹಜವೂ ಸಮರ್ಥವೂ ಆದ ನುಡಿಗಾರಿಕೆಯಲ್ಲಿ ಆವಿರ್ಭವಿಸಿ ನಮ್ಮೊಳಗೆ ನಾವೇ ಸಾರ್ಥಕ ಸಮನ್ವಯವನ್ನು ಕಂಡುಕೊಳ್ಳುವಂತೆ ಮಾಡುತ್ತವೆ. ಇದು ಅವರ ರಸಸಿದ್ಧಿಯ ಸ್ವರೂಪಲಕ್ಷಣ.
ಏಕಕಾಲಕ್ಕೆ ಯುಗಪ್ರಜ್ಞೆಯ ಹೆಪ್ಪುಗಟ್ಟುವಿಕೆಯಾಗಿ, ಯುಗಸಾಕ್ಷಿಯ ಪ್ರವಾಹವಾಗಿ ನಮ್ಮೆದುರು ನಿಂತ ಭೈರಪ್ಪನವರ ವಾಙ್ಮಯಜಗತ್ತು ಈಗಾಗಲೇ ಮೂರು ತಲೆಮಾರುಗಳಿಗೆ ಕಾಂತಿ-ಕಸುವುಗಳನ್ನು ನೀಡಿದೆ. ಅವರ ಸಾಹಿತ್ಯಸೃಷ್ಟಿಯ ವಿಶ್ವರೂಪಸಂದರ್ಶನಕ್ಕೆ ಇದು ಸಕಾಲ. ವಿಶೇಷತಃ ಮೂರನೆಯ ತಲೆಮಾರಿನಿಂದ ಇದು ನಡೆದಲ್ಲಿ ಮತ್ತೂ ಒಳಿತು, ಅರ್ಥಪೂರ್ಣ.
* * *
ವಿನೋದವಿರಲಿ, ವಿಚಾರವಿರಲಿ ಯಾವುದರಲ್ಲಿಯೂ ಭೈರಪ್ಪನವರಿಗೆ ಅವಸರವಿಲ್ಲ, ಆತುರವಿಲ್ಲ. ಇದನ್ನು ಅವರ ಬರೆಹ ಮತ್ತು ಭಾಷಣಗಳಿಗೂ ಅನ್ವಯಿಸಬಹುದು. ಸ್ವಲ್ಪವೂ ಓಟವಿಲ್ಲದೆ, ಸಾವಕಾಶವಾಗಿ ವಿಷಯನಿರೂಪಣೆ ಮಾಡುತ್ತಾರೆ; ಉಲ್ಲೇಖ, ಉದಾಹರಣೆಗಳನ್ನೂ ಬಳಸಿಕೊಳ್ಳುತ್ತಾರೆ. ಹಿಂದೆ ಸಂದರ್ಶನವೊಂದರಲ್ಲಿ ಅವರನ್ನು ಕೇಳಿದ ಲಘುವಾದ ಪ್ರಶ್ನೆ ಹೀಗಿತ್ತು: “ನೀವು ಹೆಚ್ಚಾಗಿ ಬೃಹದ್ಗಾತ್ರದ ಕಾದಂಬರಿಗಳನ್ನೇ ಏಕೆ ಬರೆಯುತ್ತೀರಿ?” ಇದಕ್ಕೆ ತುಂಬ ಪ್ರಾಮಾಣಿಕವಾದ ಉತ್ತರವನ್ನೇ ನೀಡಿದ್ದರು. ಅದನ್ನು ಹೀಗೆ ಸಂಗ್ರಹಿಸಬಹುದು: “ಇದು ನನ್ನ ಮನೋಧರ್ಮ. ಮೊದಲಿನಿಂದಲೂ ನನಗೆ ದೊಡ್ಡದೆಂದರೆ ಇಷ್ಟ, ವಿಸ್ತಾರವೆಂದರೆ ಆದರ. ವಿಶಾಲವಾದ ಬಾಳೆಯೆಲೆಯಲ್ಲಿ ಸಮೃದ್ಧವಾಗಿ ಬಡಿಸಿಕೊಂಡು ಕೈತುಂಬ ದೊಡ್ಡ ದೊಡ್ಡ ತುತ್ತು ಮಾಡಿಕೊಂಡು ತಿನ್ನಬೇಕು; ವಿಸ್ತಾರವಾದ ಕಡಲು-ಕಾಡುಗಳನ್ನೂ ಎತ್ತರವಾದ ಬೆಟ್ಟ-ಗುಡ್ಡಗಳನ್ನೂ ಸುತ್ತಾಡಿ ನೋಡಬೇಕು. ಬೃಹದ್ಗ್ರಂಥಗಳನ್ನು ಆದ್ಯಂತವಾಗಿ ಓದಬೇಕು. ಹೀಗೆ ಸಾವಧಾನವಾಗಿ ಓದಿದ್ದನ್ನ ಸಾವಕಾಶವಾಗಿ ಮನನ ಮಾಡಬೇಕು ...” ಹೀಗಾಗಿಯೇ ಅವರು ಗುಣ-ಗಾತ್ರಗಳಲ್ಲಿ ಹಿರಿದಾದ ಹಲವು ಮಹಾಕೃತಿಗಳನ್ನು ಏಕದೀಕ್ಷೆಯಿಂದ ಅಲ್ಪಕಾಲದಲ್ಲಿ ರಚಿಸಲು ಸಾಧ್ಯವಾಯಿತು; ಇದಕ್ಕಾಗಿ ಅಷ್ಟೇ ಏಕದೀಕ್ಷೆಯಿಂದ ಅನಲ್ಪ ಕಾಲದ ಸಿದ್ಧತೆ ಮಾಡಿಕೊಳ್ಳಲು ಯಾವುದೇ ಆಲಸ್ಯ ತಲೆದೋರಲಿಲ್ಲ.
ಜಗತ್ತೆಲ್ಲ ಬಲ್ಲಂತೆ ಭೈರಪ್ಪನವರು ಹೊತ್ತುಹೊತ್ತಿನ ಊಟಕ್ಕಿರಲಿ, ತುತ್ತುತುತ್ತಿನ ಅನ್ನಕ್ಕೂ ಕಷ್ಟಪಟ್ಟು ಮೇಲೆ ಬಂದವರು. ಸಾಮಾನ್ಯವಾಗಿ ತುಂಬ ಕಷ್ಟದಿಂದ ಮೇಲೆ ಬಂದವರು ಇಲ್ಲವೇ ಅಳವಿಲ್ಲದೆ ದುಂದು ಮಾಡುವ ಹಾಗೂ ಪ್ರದರ್ಶನರತಿಯ ವ್ಯಕ್ತಿಗಳಾಗುತ್ತಾರೆ ಇಲ್ಲವೇ ಸಿನಿಕತನದ ಜಿಪುಣರಾಗುತ್ತಾರೆ. ಭೈರಪ್ಪನವರು ಈ ಎರಡು ಅತಿರೇಕಗಳಿಗಿಂತ ವಿಭಿನ್ನವಾದ ಪ್ರಶಸ್ತ ಪಥದಲ್ಲಿ ನಡೆದಿದ್ದಾರೆ. ಹೀಗಾಗಿಯೇ ಅವರು ಹಲವು ದಶಕಗಳಿಂದ ಗುಪ್ತದಾನ ಮಾಡಿಕೊಂಡು ಬಂದಿದ್ದರು. ಅಷ್ಟೇಕೆ, ಇಂಥ ಸತ್ಕಾರ್ಯಗಳನ್ನು ದಾನವೆಂದಲ್ಲದೆ ಮಾನವಸಾಮಾನ್ಯವಾದ ಪ್ರತಿಸ್ಪಂದನವೆಂದೇ ನಂಬಿದ್ದರು.
ಸ್ವಯಂ ಪಾಶ್ಚಾತ್ತ್ಯ ದರ್ಶನಗಳನ್ನು ಆಳವಾಗಿ ಅಭ್ಯಸಿಸಿದ್ದರೂ ಭೈರಪ್ಪನವರಿಗೆ ಭಾರತೀಯ ತತ್ತ್ವಶಾಸ್ತ್ರದಲ್ಲಿಯೇ ಹೆಚ್ಚಿನ ಪ್ರೀತಿ. ಇದು ಅವರ ಮನೋಧರ್ಮಕ್ಕೆ ಸಹಜವೂ ಹೌದು. ವಿಶೇಷತಃ ಉಪನಿಷತ್ತುಗಳು ಪ್ರತಿಪಾದಿಸುವ ನಿರ್ಗುಣಬ್ರಹ್ಮತತ್ತ್ವ ಅವರಿಗೆ ತುಂಬ ಅಚ್ಚುಮೆಚ್ಚು. ನಮ್ಮ ಯುವಜನತೆ ಇದನ್ನು ಚೆನ್ನಾಗಿ ತಿಳಿಯಬೇಕೆಂಬುದು ಅವರ ಅಪೇಕ್ಷೆ. ಇದೇ ರೀತಿ ಭಗವದ್ಗೀತೆ ಮತ್ತು ಶ್ರೀಕೃಷ್ಣನ ವ್ಯಕ್ತಿತ್ವಗಳು ಕೂಡ ಅವರಿಗೆ ಮಿಗಿಲಾಗಿ ಆದರಾಭಿಮಾನದ ಸ್ಥಾನಗಳು. ಹಿಂದೊಮ್ಮೆ ಅವರೇ ನನಗೆ ಹೇಳಿದ್ದುಂಟು: ನಮ್ಮ ದೇಶದಲ್ಲಿ ಇಷ್ಟು ಸಾವಿರ ವರ್ಷಗಳ ಅವಿಚ್ಛಿನ್ನವಾದ ಸಾಂಸ್ಕೃತಿಕ ಚರಿತ್ರೆ ಇರುವಾಗಲೂ ಕೃಷ್ಣನ ಹಾಗಿರುವ ಮತ್ತೊಬ್ಬ ವ್ಯಕ್ತಿಯ ಆಗಮನವಾಗಿಲ್ಲ ಎಂಬ ಒಂದಂಶವೇ ಸಾಕು, ಆ ವ್ಯಕ್ತಿತ್ವ ಅದೆಷ್ಟು ಹಿರಿದೆಂದು ನಾವೆಲ್ಲ ಮನಗಾಣಲು. ದುರ್ದೈವವೆಂದರೆ ಇಂದಿಗೂ ಕೃಷ್ಣನ ನಿಜವಾದ ವ್ಯಕ್ತಿತ್ವಕ್ಕಿಂತ ಭಿನ್ನವಾದ ಲಘುರೂಪವೇ ಜನಮಾನಸದಲ್ಲಿ ಮೆರೆದಿದೆ. ಇನ್ನೊಮ್ಮೆ ಅವರು ಭಗವದ್ಗೀತೆಯ ಕರ್ಮಯೋಗದ ಮಹಿಮೆಯನ್ನು ವಿಸ್ತರಿಸಿದ್ದರು. ತೀರ ಈಚೆಗೂ ಭಗವದ್ಗೀತೆಯನ್ನು ಸರಿಯಾಗಿ ಅರಿಯುವ ಮೂಲಕ ಎಲ್ಲರೂ ತಮ್ಮ ಆಗ್ರಹ-ಅಹಂಕಾರಗಳನ್ನೂ ಪ್ರತ್ಯೇಕತಾಭಾವದ ಅನಾಹುತವನ್ನೂ ತಿದ್ದಿಕೊಳ್ಳಬಹುದೆಂದು ಮಾರ್ಮಿಕವಾಗಿ ವಿವೇಚಿಸಿದ್ದರು. ಇದನ್ನೆಲ್ಲ ಪರಿಭಾವಿಸಿದಾಗ ಭೈರಪ್ಪನವರ ಮನೋಧರ್ಮ ಸ್ಪಷ್ಟವಾಗದಿರದು.
ಹೀಗೆ ತಮ್ಮ ಸಾಹಿತ್ಯನಿರ್ಮಿತಿಯ ಆಚೆಗೂ ರಸದ ಸ್ತರದಲ್ಲಿ ಜೀವಿಸಬಲ್ಲ ಲೇಖಕರು ಬಹಳ ಮಂದಿ ಇರುವುದಿಲ್ಲ. ಇದ್ದರೂ ಅವರು ನಮ್ಮ ಕಾಲದಲ್ಲಿಯೇ ಬಾಳುತ್ತಿರುವರೆಂಬ ಖಾತರಿ ಇಲ್ಲ. ಇಂಥವರನ್ನು ನಾವು ಬಲ್ಲೆವು; ಅಷ್ಟೇ ಅಲ್ಲ, ಅವರೂ ನಮ್ಮನ್ನು ಬಲ್ಲರು ಎಂಬ ಭಾವವೇ ಬದುಕಿಗೊಂದು ಅರ್ಥವನ್ನು ಕೊಡುತ್ತದೆ.











































