‘ಅವಧೂತ’ ಎಂಬ ವಿಶಿಷ್ಟ ಕೃತಿಯನ್ನು ರಾಯರ ಸುವಿಖ್ಯಾತ ಗ್ರಂಥ ‘ಶಾರದಾಪೀಠದ ಮಾಣಿಕ್ಯ’ಕ್ಕೆ ಅನುಬಂಧವೆನ್ನಬಹುದು. ಅವಧೂತತ್ವ ಎಂಬುದು ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಮಿಗಿಲಾದ ಆದರವನ್ನು ಗಳಿಸಿದೆ. ವೇದಾಂತವಾಗಲಿ, ಬೌದ್ಧವಾಗಲಿ, ಜೈನವಾಗಲಿ ನಿರೂಪಿಸುವ ಜೀವನ್ಮುಕ್ತರ, ಬುದ್ಧರ, ಅರ್ಹಂತರ ಕೇವಲಸ್ಥಿತಿ ಬಲುಮಟ್ಟಿಗೆ ಇದೇ ಆಗಿದೆ. ಪ್ರಕೃತ ಗ್ರಂಥದಲ್ಲಿ ‘ತ್ರಿಪುರಾರಹಸ್ಯ’ದ ‘ಅಷ್ಟಾವಕ್ರೀಯ’, ‘ಅವಧೂತಗೀತೆ’, ‘ಅವಧೂತೋಪನಿಷತ್ತು’, ‘ಮಹೋಪನಿಷತ್ತು’ ಮುಂತಾದ ಆಕರಗಳನ್ನು ಆಧರಿಸಿದ ಸರಳಸುಂದರ ವಿಷಯನಿರೂಪಣೆಯಿದೆ. ಇಲ್ಲಿರುವುದು ಪ್ರಖರವಾದ ವೈರಾಗ್ಯ, ಉತ್ಕಟವಾದ ಅದ್ವೈತತ, ಪ್ರಚಂಡವಾದ ಬ್ರಾಹ್ಮಭಾವ. ರಾಯರ ಹೆಚ್ಚಿನ ಬರೆಹಗಳಲ್ಲೆಲ್ಲ ಕಾಣಸಿಗುವ ಸಾಧನಪ್ರಧಾನವಾದ ಮನೋಧರ್ಮಕ್ಕೆ ‘ಅವಧೂತ’ವೂ ಒಂದು ಒಳ್ಳೆಯ ನಿದರ್ಶನ.
‘ಅಭಿನವಗುಪ್ತ’ ರಾಮಚಂದ್ರರಾಯರ ಜೀವಿತಾವಧಿಯ ಕೊನೆಕೊನೆಯ ವರ್ಷಗಳಲ್ಲಿ ಹೊರಬಂದ ಕೃತಿ. ಕಾಶ್ಮೀರದ ವಿಖ್ಯಾತ ದಾರ್ಶನಿಕ ಮತ್ತು ಆಲಂಕಾರಿಕ ಅಭಿನವಗುಪ್ತನ ಸಂಕ್ಷಿಪ್ತ ಪರಿಚಯವಿಲ್ಲಿದೆ. ವಿಷಯ-ಸಂಶೋಧನೆಗಳ ದೃಷ್ಟಿಯಿಂದ ಇದು ಹೊಸತನ್ನೇನೂ ಹವಣಿಸುವ ಹೆಬ್ಬಯಕೆಯಿಂದ ಹೊರಟಿಲ್ಲ. ಆದರೆ ಇದು ಹೇಳುವ ರೀತಿ ಮತ್ತು ಕಾಣಿಸುವ ಸಾಕಲ್ಯ ಹಿರಿದು. ಇಂಥ ಪುಟ್ಟ ಪುಸ್ತಕದಲ್ಲಿಯೂ ರಾಯರ ಸಾಹಿತ್ಯ-ದರ್ಶನಶಾಸ್ತ್ರಗಳ ಅಧ್ಯಯನ ಚೆನ್ನಾಗಿ ದುಡಿದಿದೆ. ಅಭಿನವಗುಪ್ತನ ಹಾಗೂ ಅವನ ಆಚೀಚಿನ ವಿದ್ವಾಂಸರ ಮಾತುಗಳಿಂದಲೇ ಮೈದುಂಬಿಕೊಂಡ ಈ ಪುಸ್ತಕದಲ್ಲಿ ಆತನ ‘ಭಗವದ್ಗೀತಾರ್ಥಸಂಗ್ರಹ’ದಿಂದ ಒಂದೊಂದು ಅಧ್ಯಾಯದ ತಾತ್ಪರ್ಯವನ್ನು ತಿಳಿಸುವ ಹದಿನೆಂಟು ಶ್ಲೋಕಗಳನ್ನು ನೀಡಿರುವುದು ರಾಯರಿಗೇ ಹೊಳೆಯಬಲ್ಲ ಸಂಗತಿ. ಏಕೆಂದರೆ ಅಭಿನವಗುಪ್ತನ ಪ್ರಸಿದ್ಧಿ ಇರುವುದು ‘ತಂತ್ರಾಲೋಕ’, ‘ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶಿನೀ’, ‘ಅಭಿನವಭಾರತೀ’, ‘ಧ್ವನ್ಯಾಲೋಕಲೋಚನ’ಗಳಂಥ ಮಾರ್ಗದರ್ಶಕ ಗ್ರಂಥಗಳ ಮೇಲೆ. ಅವನ ಭಗವದ್ಗೀತೆಯ ವಿವರಣೆ ಒಂದರ್ಥದಲ್ಲಿ ಗೌಣ ಕೃತಿ. ಆದರೆ ತನ್ನದೇ ಆದ ಮಹೂತ್ತ್ವ ಅದಕ್ಕುಂಟು. ಜೊತೆಗೆ ಅದು ಕಾಶ್ಮೀರಪಾಠವನ್ನು ಅನುಸರಿಸಿದೆ. ಇಲ್ಲಿ ವಾಡಿಕೆಯ ಏಳುನೂರಕ್ಕಿಂತ ಹೆಚ್ಚಿನ ಶ್ಲೋಕಗಳಿವೆ. ಅಲ್ಲದೆ ಪ್ರಸ್ಥಾನತ್ರಯದಲ್ಲಿ ಒಂದಾದ ಭಗವದ್ಗೀತೆಗೆ ಪ್ರತ್ಯಭಿಜ್ಞಾಶೈವದರ್ಶನದ ದೃಷ್ಟಿಯಿಂದ ಬಂದ ಏಕೈಕ ವ್ಯಾಖ್ಯಾನ ಇದೇ. ಈ ಎಲ್ಲ ವಿಚಾರಗಳು ರಾಯರ ಮನಸ್ಸಿನಲ್ಲಿ ಮಿಡಿದಿರುವುದು ಮೇಲ್ನೋಟಕ್ಕೆ ತೋರದ ಸಂಗತಿ. ಇನ್ನೊಂದು ಅನುಬಂಧವಾಗಿ ಅಭಿನವಗುಪ್ತನ ಶಿಷ್ಯ ಮಧುರಾಜನ ‘ಗುರುನಾಥಪರಾಮರ್ಶ’ ಎಂಬ ಸ್ತುತಿಕವಿತೆಯ ಹತ್ತಾರು ಪದ್ಯಗಳು ಇವೆ. ತನ್ನ ಗುರುವಿನ ಬಗೆಗೆ ಆತನ ನೇರ ಶಿಷ್ಯನೊಬ್ಬನ ಮನದುಂಬಿದ ನುಡಿಯೊಸಗೆ ಸಿಗುವುದು ನಮ್ಮ ಪರಂಪರೆಯಲ್ಲಿ ವಿರಳವೇ ಸರಿ. ಇದನ್ನು ಗಮನಿಸಿಕೊಂಡ ರಾಯರು ಮೂಲದಿಂದ ಅತ್ಯುತ್ತಮ ಪದ್ಯಗಳನ್ನೇ ಆಯ್ದು ಅನುವಾದಿಸಿದ್ದಾರೆ. ಇದಕ್ಕೆಲ್ಲ ಕಿರೀಟವಿಟ್ಟಂತೆ ಅಭಿನವಗುಪ್ತ ಮತ್ತವನ ಗುರು-ಹಿರಿಯರ ಕಲ್ಪನಾಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಈ ರೇಖೆಗಳಲ್ಲಿ ಕಾಣುವ ಅನುಭಾವದ ಬೆಳಕು-ನೆರಳುಗಳ ನಲಿದಾಟ ಮನಸೆಳೆಯುವಂಥದ್ದು. ಹೀಗೆ ಒಂದು ಪ್ರಾಥಮಿಕ ಸ್ತರದ ಪುಸ್ತಿಕೆಯೂ ತನ್ನದಾದ ಅನನ್ಯತೆಯನ್ನು ಗಳಿಸಿದೆ.
‘Bhāratīya Praṇāma-paddhati’ ಎಂಬ ವಿಶಿಷ್ಟ ಗ್ರಂಥ ತನ್ನ ಶೀರ್ಷಿಕೆಗೆ ಅನುಸಾರವಾಗಿ ನಮ್ಮ ದೇಶದ ಸಂಸ್ಕೃತಿ ಸಹಸ್ರಮಾನಗಳಿಂದ ಬೆಳೆಸಿಕೊಂಡು ಬಂದ ಗೌರವಪ್ರದರ್ಶನದ ಅಥವಾ ಆದರನಿವೇದನದ ರೀತಿಯೆನಿಸಿದ ನಮಸ್ಕಾರದ ಪದ್ಧತಿಗಳನ್ನು ವಿಶದವಾಗಿ ನಿರೂಪಿಸಿದೆ. ಮೊದಲಿಗೆ ನಮ್ಮ ಶ್ರುತಿ, ಸ್ಮೃತಿ, ಇತಿಹಾಸ, ಪುರಾಣ, ಆಗಮ ಮತ್ತು ಶಾಸ್ತ್ರಗಳಲ್ಲಿ ಕಂಡುಬರುವ ನಮಸ್ಕಾರಲಕ್ಷಣವನ್ನೂ ಅದರ ವಿವಿಧ ಪ್ರಕಾರಗಳನ್ನೂ ಕಾಣುತ್ತೇವೆ. ನಮ್ಮ ಪರಂಪರೆ ಯಾವೊಂದನ್ನೂ ‘ಹೇಗೋ’ ಮಾಡಿಮುಗಿಸುವ ಜಾಡಿನದಲ್ಲ. ಇಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ರೀತಿ-ನೀತಿಗಳಿವೆ, ನಯ-ನವುರುಗಳಿವೆ, ತತ್ತ್ವ-ಪ್ರಯೋಗಗಳಿವೆ. ಮನೋವಾಕ್ಕಾಯಗಳೆಂಬ ಕರಣತ್ರಯದ ಮೂಲಕ ಸಲ್ಲಿಸಬಹುದಾದ ಎಲ್ಲ ಬಗೆಯ ಪ್ರಣಾಮಗಳ ವಿವರಗಳಿವೆ. ಅನಂತರ ವಿವಿಧ ತಂತ್ರಾಗಮಗಳಲ್ಲಿ ಕಾಣಸಿಗುವ ನಮನವಿಧಾನಗಳ ಹೃದಯಂಗಮ ನಿರೂಪಣೆಯುಂಟು. ಮೂರನೆಯ ಅಧ್ಯಾಯದಲ್ಲಿ ಯಾವುದೇ ನಮಸ್ಕಾರದ ಹಿಂದಿರುವ ಭಕ್ತಿ-ಗೌರವಗಳ ನೆಲೆ-ಬೆಲೆಗಳು ಚರ್ಚೆಗೆ ಬಂದಿವೆ. ಬಳಿಕ ಕಲೆಯಲ್ಲಿ ನಮಸ್ಕಾರದ ನಿರೂಪಣೆ ಹೇಗಿದೆಯೆಂಬ ವಿವರಗಳಿವೆ. ಐದು ಮತ್ತು ಆರನೆಯ ಅಧ್ಯಾಯಗಳಲ್ಲಿ ಸುಪ್ರಸಿದ್ಧವಾದ ಸೂರ್ಯನಮಸ್ಕಾರ ಮತ್ತು ದೇವಾಲಯಗಳಲ್ಲಿ ಸಾಗುವ ವಿವಿಧ ನಮಸ್ಕಾರಪದ್ಧತಿಗಳ ವಿಚಾರ ಬಂದಿದೆ. ಅನುಬಂಧರೂಪದಲ್ಲಿ ಭಗವಂತನ ಆರಾಧನೆಯ ಅಂಗವಾಗಿ ಮಾಡುವ ದೀಪನಮಸ್ಕಾರ, ಪ್ರಣಾಮಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ನಮಸ್ಕೃತನು ಮಾಡುವ ಆಶೀರ್ವಾದ ಮತ್ತಿಲ್ಲಿ ವಿನಿಯುಕ್ತವಾಗುವ ಮಂತ್ರಗಳು ಹಾಗೂ ವೃದ್ಧಾಭಿವಾದನ ಎಂಬ ಹೆಸರಿನಲ್ಲಿ ಹಿರಿಯರಿಗೆ ಸಲ್ಲಿಸುವ ಪ್ರಣತಿಗಳ ವಿವರಗಳಿವೆ. ಒಟ್ಟಿನಲ್ಲಿ ಇಂಥ ‘ಸ್ವಲ್ಪಮಾತ್ರ’ದ ವಿಷಯವನ್ನು ಕುರಿತು ಪುಸ್ತಕವನ್ನೇ ಬರೆಯಬಹುದೆಂಬ ಊಹೆ ಯಾರಿಗೂ ಪ್ರಾಯಶಃ ಬರಲಿಕ್ಕಿಲ್ಲ. ಒಂದು ವೇಳೆ ಬಂದದ್ದೇ ಆದಲ್ಲಿ ಅಂಥ ಕೆಲಸವನ್ನು ಮಾಡಬಲ್ಲವರು ರಾಯರಲ್ಲದೆ ಬೇರೆಯವರಲ್ಲ ಎಂಬ ಸತ್ಯವನ್ನು ಈ ಹೊತ್ತಿಗೆ ಸಮರ್ಥವಾಗಿ ಸಾಬೀತು ಮಾಡಿದೆ.
‘Social Institutions among the Hindus’ ಎಂಬ ವಿಶಿಷ್ಟ ಗ್ರಂಥವನ್ನು ರಾಯರು ತಮ್ಮ ಸಾಹಿತ್ಯಜೀವನದ ಆರಂಭಿಕ ವರ್ಷಗಳಲ್ಲಿಯೇ ಬರೆದಿದ್ದರು. ಇದು ಐದು ಅಧ್ಯಾಯಗಳಲ್ಲಿ ವಿಭಕ್ತವಾಗಿದೆ. ಆದಿಯಲ್ಲೊಂದು ಪ್ರವೇಶಿಕೆಯೂ ಅಂತ್ಯದಲ್ಲೊಂದು ಅನುಬಂಧವೂ ಇವೆ. ರಾಯರು ತಮ್ಮ ಎಂದಿನ ಬಲವೆನಿಸಿದ ಭಾರತೀಯ ಪರಂಪರೆಯ ಮೂಲಗ್ರಂಥಗಳಾದ ಶ್ರುತಿ, ಸ್ಮೃತಿ, ಇತಿಹಾಸ, ಪುರಾಣ, ಧರ್ಮಶಾಸ್ತ್ರ ಮುಂತಾದ ಆಕರಗಳನ್ನು ಅವಲಂಬಿಸಿ ಹಿಂದು ಸಮಾಜದ ರೂಪರೇಖೆಗಳನ್ನು ಕಟ್ಟಿಕೊಟ್ಟಿದ್ದಾರೆ. ಇಷ್ಟಕ್ಕೇ ಸೀಮಿತರಾಗದೆ ಆಧುನಿಕ ವಿದ್ವಾಂಸರು ಬರೆದ ಹತ್ತಾರು ಸಂಶೋಧನಗ್ರಂಥಗಳನ್ನೂ ಜನಗಣತಿ, ಜಾತಿಗಣತಿ ಮೊದಲಾದ ಅಂಕಿ-ಅಂಶಗಳನ್ನೂ ಆಧರಿಸಿ ಮತ್ತಷ್ಟು ವಿಚಾರಗಳನ್ನು ಬೆಳೆಸಿದ್ದಾರೆ. ಕುಲ, ಗೋತ್ರ, ವರ್ಣ, ಜಾತಿ, ಶ್ರೇಣಿ ಮುಂತಾದ ಪ್ರಾಚ್ಯಭಾರತೀಯ ಸಮುದಾಯಗಳ ಬೆಳೆವಣಿಗೆ ಮತ್ತು ಪರಿಣಾಮಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿದ್ದಾರೆ. ಅವಿಭಕ್ತ ಕುಟುಂಬ, ಸ್ತ್ರೀಯರ ಸ್ಥಾನ-ಮಾನ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಉಪಪ್ಲವಗಳ ಬಗೆಗೂ ಗಮನ ಹರಿಸಿದ್ದಾರೆ. ಮುಖ್ಯವಾಗಿ ಪುರುಷಾರ್ಥ ಮತ್ತು ಚತುರಾಶ್ರಮಗಳ ಹಿನ್ನೆಲೆಯಲ್ಲಿ ಭಾರತೀಯ ಸಮಾಜ ರೂಪುಗೊಂಡ ಬಗೆಯನ್ನು ಗ್ರಹಿಸಿ ಸ್ವೋಪಜ್ಞ ವಿವೇಚನೆ ನಡಸಿದ್ದಾರೆ. ಇಂತಿದ್ದರೂ ಈ ಕೃತಿಯಲ್ಲಿ ಹಲಕೆಲವು ಅರಕೆಗಳು ಅನುಭವಕ್ಕೆ ಬರುತ್ತವೆ. ಇದಕ್ಕೆ ಮುಖ್ಯಕಾರಣ ರಾಯರು ಆ ಕಾಲದಲ್ಲಿ ಆರ್ಯ-ದ್ರಾವಿಡ ಸಂಘರ್ಷವನ್ನು ಕಣ್ಮುಚ್ಚಿ ಒಪ್ಪಿದ್ದೇ ಆಗಿದೆ. ಅಲ್ಲದೆ ನಮ್ಮ ಸಮಾಜಜೀವನದ ಆಧಾರಶ್ರುತಿಯೆನಿಸಿದ ಅಧ್ಯಾತ್ಮನಿಷ್ಠೆಯನ್ನು ಹೆಚ್ಚಾಗಿ ಅವಲಂಬಿಸದೆ ಇರುವುದು ಇಲ್ಲಿಯ ಕೊರತೆಗಳಲ್ಲಿ ಮುಖ್ಯವೆನ್ನಬೇಕು.
ಕಡೆಯದಾಗಿ ‘ಭಾರತೀಯ ಸಂಸ್ಕೃತಿ: ತಿರುಳು ಮತ್ತು ಪರಂಪರೆ’ ಎಂಬ ಪುಟ್ಟ ಪುಸ್ತಕವನ್ನು ಪರಿಶೀಲಿಸಬಹುದು. ಕೇವಲ ಐವತ್ತು ಪುಟಗಳಲ್ಲಿ ನಮ್ಮ ದೇಶದ ಭೌಗೋಳಿಕ ವಿಸ್ತಾರ, ಜನಸಮುದಾಯಗಳ ವೈವಿಧ್ಯ, ಕಲೆ-ಶಾಸ್ತç-ದರ್ಶನಗಳ ಪರಂಪರೆ ಮತ್ತು ಸಾಂಸ್ಕೃತಿಕ ಸಂದರ್ಭಗಳ ನಿರೂಪಣೆಯ ಮೂಲಕ ಓದುಗರಿಗೆ ಅಚ್ಚಳಿಯದ ಅನುಭವವನ್ನು ರಾಯರು ಎಟುಕಿಸಿಕೊಡುತ್ತಾರೆ. ಈ ಕೃತಿಚಕ್ರಕ್ಕೆ ನಾಭಿಯ ರೂಪದಲ್ಲಿ ಯಜ್ಞತತ್ತ್ವ ದುಡಿದಿದೆ. ಅದರಿಂದ ಹೊಮ್ಮುವ ಅರಗಳಂತೆ ವಿವಿಧ ಸಾಂಸ್ಕೃತಿಕ ಸತ್ತ್ವಗಳು ಅರಳಿವೆ. ಎಲ್ಲವನ್ನೂ ಬಳಸಿ ಬರುವ ನೇಮಿಯಾಗಿ ರಾಷ್ಟ್ರಪ್ರಜ್ಞೆ ಮೈಗೂಡಿದೆ. ಇದು ರಾಯರ ಸಮಾಸಶಕ್ತಿಗೆ ಅಸಾಧಾರಣ ನಿದರ್ಶನ. ವೇದಗಳು ಹೇಳುವ ‘ಅದ್ಧಾ ಪುರುಷ’ ಎಂಬ ವ್ಯಷ್ಟಿಸ್ತರದ ಸುಸಂಸ್ಕೃತ ವ್ಯಕ್ತಿ ವಿಶ್ವನಿಃಶ್ರೇಯಸದ ಸಮಷ್ಟಿಸ್ತರಕ್ಕೆ ಏರುವ ಪರಿಯೇ ಭಾರತೀಯ ಸಂಸ್ಕೃತಿ ಎಂಬ ಕಳಕಳಿ ಕೃತಿಯ ಉದ್ದಕ್ಕೂ ಮಿಡಿದಿದೆ.
ಇವೆಲ್ಲ ಆಸಕ್ತರಾದ ಹಿರಿಯರಿಗಾಗಿ ಬರೆದ ಹೊತ್ತಿಗೆಗಳು. ರಾಯರು ಪ್ರೌಢರಿಗೆ ಮಾತ್ರ ಸೀಮಿತರಲ್ಲ. ಮಕ್ಕಳಿಗಾಗಿಯೂ ಅವರು ಸಾಕಷ್ಟು ಬರೆದಿದ್ದಾರೆ; ಬೆಲೆಯುಳ್ಳ ಬರೆಹಗಳನ್ನೇ ಕೊಟ್ಟಿದ್ದಾರೆ. ಐವತ್ತು ವರ್ಷಗಳಿಗೂ ಮುನ್ನ ‘ಸುಧಾ’ ಪತ್ರಿಕೆಗಾಗಿ ವಾರವಾರವೂ ‘ಚಿತ್ರಮಯ ಜ್ಞಾನಕೋಶ’ ಎಂಬ ಶೀರ್ಷಿಕೆಯಲ್ಲಿ ನಾಲ್ಕು ಪುಟಗಳನ್ನು ಬರೆಯುತ್ತಿದ್ದರು. ಅದೆಲ್ಲ ಒಟ್ಟುಗೂಡಿದರೆ ಸಾವಿರ ಪುಟಗಳಿಗೆ ಕಡಮೆಯಿಲ್ಲದ ಹೆಬ್ಬೊತ್ತಿಗೆಯಾದೀತು. ಇದರ ಪ್ರಯೋಜನ ಪಡೆದ ಅಸಂಖ್ಯರ ಪೈಕಿ ನಾನೂ ಇದ್ದೇನೆ. ರಾಯರು ಅದೆಷ್ಟು ವಿಷಯಗಳನ್ನು ಅದೆಷ್ಟು ಇನಿದಾಗಿ ಬರೆಯುತ್ತಿದ್ದರು! ಆಫ್ರಿಕದ ಬುಡಕಟ್ಟುಗಳವರು ಬಳಸುವ ಮುಖವಾಡಗಳಿರಲಿ, ಕೂಚಿಪೂಡಿ ನಾಟ್ಯವಿರಲಿ, ಮ್ಯಾಕ್ಸ್ ಮುಲ್ಲರನ ಬದುಕಿರಲಿ, ಶ್ರೀರಂಗದ ದೇಗುಲಗಳ ಸಮುಚ್ಚಯವಿರಲಿ, ಉಣ್ಣೆಯ ಬಟ್ಟೆಗಳೇ ಆಗಲಿ, ಪಳೆಯುಳಿಕೆಗಳೇ ಆಗಲಿ, ಕುಕ್ಲುಕ್ಸ್ ಕ್ಲಾನ್ ಪಂಥದ ಬಗೆಗಿರಲಿ - ಎಲ್ಲವನ್ನೂ ಕುರಿತು ಎಲ್ಲರಿಗೂ ಸೊಗಯಿಸುವ ಹಾಗೆ ಬರೆದ ಬಲ್ಮೆ ರಾಯರದೇ.
‘ದಾಸಯ್ಯ’ ಎಂಬ ಗುಪ್ತನಾಮದಿಂದ ‘ವಿಚಾರಲಹರಿ’ ಎಂಬ ತಾತ್ತ್ವಿಕ ಅಂಕಣವನ್ನೂ ‘ಕೌಟಿಲ್ಯ’ ಎಂಬ ಹೆಸರಿನಿಂದ ಧನ-ಸಂಪತ್ತಿಗಳನ್ನು ಕುರಿತ ಅಂಕಣವನ್ನೂ ‘ಸುಧಾ’ ಪತ್ರಿಕೆಗೆ ಬರೆಯುತ್ತಿದ್ದರು. ವಿಚಾರಲಹರಿಯು ರಾಜರತ್ನಂ ಅವರ ‘ವಿಚಾರರಶ್ಮಿ’ಯ ಸ್ಥಾನದಲ್ಲಿ ಬಂದ ಬರೆಹಗಳ ಮಾಲೆ. ಇದರ ಹೂರಣವೇನೋ ರಾಯರಿಗೆ ಹೊಸತಲ್ಲದ, ಅವರ ಬಾಳಿನ ಅಂಗವೇ ಆದ ತತ್ತ್ವ, ಅಧ್ಯಾತ್ಮ, ಸಂಸ್ಕೃತಿ ಮತ್ತು ಜೀವನಸೌಂದರ್ಯಗಳ ಸುತ್ತಲೂ ಹೆಣೆದುಕೊಂಡ ಚಿಂತನೆಗಳ ಸಾರ. ಇದನ್ನು ಬರೆಯಲು ಅವರಿಗೆ ಕಷ್ಟವೂ ಇಲ್ಲ, ಕಾರ್ಪಣ್ಯವೂ ಇಲ್ಲ. ಆದರೆ ಹಣ, ಹೊನ್ನು, ಹೂಡಿಕೆ, ಹುರುಡು ಇಂಥ ವಿಷಯಗಳ ಸುತ್ತಲೂ ಸುಳಿಸುತ್ತುವ ಇನ್ನೊಂದು ಅಂಕಣದ ಹಾದಿ ಎಂಥದ್ದು? ಇದು ರಾಯರ ಮನೋಧರ್ಮಕ್ಕೆ ದೂರದ್ದೇ ಹೌದು. ಇಂತಿದ್ದರೂ ಅವರು ‘ಹಣ ಪ್ರಪಂಚ’ ಮತ್ತು ‘ಝಣ ಝಣ ಹಣ’ ಎಂಬ ಪುಟ್ಟ ಪುಸ್ತಕಗಳಿಗೆ ಆಗುವಷ್ಟರ ಮಟ್ಟಿಗೆ ಕೈತುಂಬಬಲ್ಲ ಬರೆಹಗಳನ್ನು ಈ ಅಂಕಣಗಳ ಮೂಲಕ ಹೊರತಂದರು. ದಿಟವೇ, ಇಲ್ಲಿ ಪುನರುಕ್ತಿ ಇದೆ, ಯಾತಯಾಮತೆ ಇದೆ, ವಿಷಯಾಭಾವವೂ ಕೈಕಟ್ಟಿದೆ. ಇಂತಿದ್ದರೂ ಅವರು ಹಣವನ್ನು ಪುರುಷಾರ್ಥಗಳಲ್ಲಿ ಒಂದಾದ ಅರ್ಥದ ನೆಲೆಯಲ್ಲಿ ಕಂಡ ಕಾರಣ ಬರೆವಣಿಗೆಗೊಂದು ತಾತ್ತ್ವಿಕ ಘನತೆ ಬಂದಿದೆ. ಜೊತೆಗೆ ಅವರ ನಿರುಪಮ ಭಾಷಾಲಾಲಿತ್ಯ ಸಾಹಿತ್ಯಸ್ವಾರಸ್ಯವೆಂಬ ‘ಅರ್ಥ’ವನ್ನು ಓದುಗರಿಗೆ ಮುಟ್ಟಿಸುವ ಕಾರಣ ಆಕರ್ಷಕವಾಗಿಯೇ ಉಳಿದಿದೆ.
ಇದೇ ‘ಸುಧಾ’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳ ಯುಗಾದಿ-ದೀಪಾವಳಿ ವಿಶೇಷಾಂಕಗಳಿಗೆ ರಾಯರು ನಿಯತವಾಗಿ ಬರೆಯುತ್ತಿದ್ದ ‘ಫೋಟೋ ಫೀಚರ್’ ಲೇಖನಗಳಂತೂ ಅನನ್ಯ, ಅಪೂರ್ವ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದ ‘ಕನ್ನಡ ವಿಶ್ವಕೋಶ’ಕ್ಕಾಗಿ ಕಲೆ, ಸಂಸ್ಕೃತಿ, ದರ್ಶನ ಮುಂತಾದ ಹಲವು ವಿಷಯಗಳನ್ನು ಕುರಿತು ಬರೆದ ನೂರಾರು ಬರೆಹಗಳು ಕೂಡ ಸ್ಮರಣೀಯ.
ಇದೇ ಸಾಲಿಗೆ ಸೇರುವಂಥವು ‘ಭಾರತ-ಭಾರತೀ ಪುಸ್ತಕಸಂಪದ’ ಮತ್ತು ಐ.ಬಿ.ಎಚ್. ಸಂಸ್ಥೆ ಪ್ರಕಟಿಸಿದ ಮಕ್ಕಳ ಪುಸ್ತಕಮಾಲೆಗಳಿಗಾಗಿ ಅವರು ಬರೆದ ಹತ್ತಾರು ಪುಸ್ತಿಕೆಗಳು.
To be continued.











































