ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ—ಉಪಸಂಹಾರ

This article is part 4 of 4 in the series Vedamurti Sri Sheshanna Shrauti

ಶೇಷಣ್ಣನವರ ಜೀವನದ ಕಡೆಯ ದಶಕಗಳಲ್ಲಿ ಬಂದೆರಗಿದ ಆಘಾತವೆಂದರೆ ಅವರ ಧರ್ಮಪತ್ನಿ ಶಾರದಮ್ಮನವರ ವಿಸ್ಮೃತಿರೋಗ. ಎಷ್ಟೆಲ್ಲ ಸಂಪ್ರದಾಯದ ಹಾಡು, ಸ್ತೋತ್ರ, ಗೀತಗಳನ್ನು ವಾಚೋ ವಿಧೇಯವಾಗಿ ಇರಿಸಿಕೊಂಡಿದ್ದ ಅವರಿಗೆ ಒಂದು ಅಕ್ಷರವನ್ನೂ ಮಾತನಾಡಲಾಗದಂಥ ಭೀಕರವಿಸ್ಮೃತಿ ಬಂದೆರಗಿತ್ತು. ಅವರಿಗೆ ತಮ್ಮ ದೇಹದ ಮೇಲೆಯೇ ನಿಯಂತ್ರಣವಿರುತ್ತಿರಲಿಲ್ಲ. ಮನೆಯಿಂದ ಹೊರಟರೆ ಮತ್ತೆ ಬರುವ ದಾರಿ ಗೊತ್ತಾಗುತ್ತಿರಲಿಲ್ಲ. ಅನುದಿನದ ಗೃಹಕೃತ್ಯಗಳಿರಲಿ, ವೈಯಕ್ತಿಕವಾದ ಕೆಲಸಗಳನ್ನು ನಿರ್ವಹಿಸಲು ಕೂಡ ಅರಿವಾಗುತ್ತಿರಲಿಲ್ಲ. ಇದೊಂದು ಬಗೆಯಲ್ಲಿ ಬೆಳೆದ ಮಗುವಿನ ಪರಿಸ್ಥಿತಿ. ಇಂಥ ಅನಾರೋಗ್ಯದ ತೊಂದರೆ ಎಂಥದ್ದೆಂಬುದನ್ನು ನಾನು ಆ ಬಳಿಕ ನನ್ನ ತಾಯಿಗೆ ಇದೇ ರೀತಿಯ ಸ್ಥಿತಿ ಬಂದಾಗಲೇ ಅರಿತದ್ದು, ಅನುಭವಿಸಿದ್ದು. ಆ ಹಿನ್ನೆಲೆಯಲ್ಲಿ ಹೇಳುವುದಾದರೆ, ಶೇಷಣ್ಣನವರಿಗೆ ಉಂಟಾದ ನೋವು-ಕಷ್ಟಗಳ ಪ್ರಮಾಣ ನನಗೆ ಚೆನ್ನಾಗಿ ತಿಳಿಯುತ್ತದೆ.

ಪರಿಸ್ಥಿತಿ ಹೀಗಿದ್ದರೂ ಅವರು ವಿಧಿಯನ್ನು ಹಳಿಯದೆ, ದೈವಶ್ರದ್ಧೆಯನ್ನು ಕಳೆದುಕೊಳ್ಳದೆ, ಎಲ್ಲರೊಡನೆ ಗೋಳಾಡದೆ, ಮನೆಯಾಕೆಯನ್ನೂ ದೂರದೆ ತುಂಬ ಆಸ್ಥೆಯಿಂದ ಅವರ ಯೋಗಕ್ಷೇಮವನ್ನು ಗಮನಿಸಿಕೊಂಡರು. ಈ ವಿಚಾರದಲ್ಲಿ ಕುಟುಂಬಸದಸ್ಯರ ನೆರವು ಚೆನ್ನಾಗಿದ್ದಿತಾದರೂ ಶೇಷಣ್ಣನವರೇ ಎಲ್ಲವನ್ನೂ ಹೆಚ್ಚಾಗಿ ನಿಭಾಯಿಸುತ್ತಿದ್ದರು. ನಿತ್ಯದ ವೇದಪಾಠಕ್ಕೆ ಹೋಗುತ್ತಿದ್ದ ನಾನು ಅವರ ಕಷ್ಟ-ಸುಖ ವಿಚಾರಿಸಿದಾಗ ತುಂಬ ಸಮಾಧಾನದಿಂದಲೇ ಉತ್ತರಿಸುತ್ತಿದ್ದರು: “ಇಷ್ಟು ವರ್ಷ ಅವರು ನಮಗೆ ಮಾಡಿಲ್ಲವೇ? ಈಗ ನಾನಲ್ಲದೆ ಮತ್ತೆ ಯಾರು ಯಾಕೆ ಮಾಡಬೇಕು? ಇದು ನನಗೆ ಭಗವಂತನೇ ಕೊಟ್ಟಿರುವ ಅವಕಾಶ. ಈ ಸೇವೆ ನನ್ನಿಂದ ಅವರಿಗೆ ಸಲ್ಲಬೇಕು. ಮಕ್ಕಳಿಗೂ ಹೇಳಿದ್ದೀನಿ, ‘ನೀವು ನಿಮ್ಮ ಪಾಡಿಗೆ ಬೇರೆ ಮನೆಯಲ್ಲಿರಿ, ಮೊಮ್ಮಕ್ಕಳಿಗೆಲ್ಲ ಇದನ್ನು ನೋಡಿ ಮುಜುಗರವಾಗುವುದು ಬೇಡ’ ಎಂದು. ನನಗೇನು, ಹೇಗೋ ನಡೆದುಹೋಗುತ್ತದೆ. ಊಟ-ತಿಂಡಿಗೆಲ್ಲ ವ್ಯವಸ್ಥೆ ಆಗಿದೆ. ಬಂಧು-ಬಳಗ ಬಂದು ವಿಚಾರಿಸಿಕೊಂಡು ಹೋಗುತ್ತಿರುತ್ತಾರೆ.”

ನನಗೆ ಮಾತ್ರ ಶೇಷಣ್ಣನವರ ಪರಿಸ್ಥಿತಿ ತುಂಬ ಕಷ್ಟದ್ದೆನಿಸಿತು. ಆದರೆ ಅವರ ಮನೋಬಲ, ಧರ್ಮಶ್ರದ್ಧೆಗಳು ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವು. ಸುಮಾರು ಆರು ವರ್ಷಗಳ ಕಾಲ ಶಾರದಮ್ಮನವರ ಪರಿಸ್ಥಿತಿ ಹೀಗೆಯೇ ಇತ್ತು; ದಿನದಿನಕ್ಕೆ ಮತ್ತಷ್ಟು ಹದಗೆಟ್ಟಿತೆಂದೇ ಹೇಳಬೇಕು. ಶೇಷಣ್ಣನವರು ಮಾತ್ರ ಒಂದಿಷ್ಟೂ ಉಪಶಾಂತಿಯನ್ನು ಕೆಡಿಸಿಕೊಳ್ಳಲಿಲ್ಲ. ಎಂದಿನಂತೆ ಅವರ ಅಧ್ಯಯನ, ಅಧ್ಯಾಪನ, ಲೇಖನಗಳು ಸಾಗಿದವು.

*       *       *

ಶಾರದಮ್ಮನವರ ಅವಸಾನದ ಬಳಿಕ ಮನೆಗೆಲ್ಲ ಅವರೊಬ್ಬರೇ ಆದರು. ತುಂಬ ಹಿಂದೆ ಚಿಕ್ಕದಾಗಿದ್ದ ಮನೆ ಮಗ ಪಾರ್ಥಸಾರಥಿಯ ಮದುವೆಯ ಬಳಿಕ ವಿಸ್ತಾರಗೊಂಡು ಕಟ್ಟಡ ದೊಡ್ಡದಾಗಿತ್ತು; ಮಹಡಿಯೂ ಸೇರಿದಂತೆ ಮನೆ ಬೆಳೆದಿತ್ತು. ಇಷ್ಟು ದೊಡ್ಡ ಮನೆಯನ್ನು ಗಮನಿಸಿಕೊಂಡು ಒಂಟಿಯಾಗಿ ಅಲ್ಲಿಯೇ ಉಳಿಯುವುದು ಕಷ್ಟವೆಂದು ಮಗ-ಸೊಸೆ ಅನುನಯಿಸಿದರೂ ಶೇಷಣ್ಣನವರು ಸಸೇಮಿರಾ ಒಪ್ಪಿಕೊಳ್ಳಲಿಲ್ಲ. ಅನುದಿನವೂ ಮಗನ ಬರುವಿಕೆ, ಹೋಗುವಿಕೆ ಇದ್ದೇ ಇತ್ತು. ವಾರಕ್ಕೊಮ್ಮೆ ಮಗನ ಮನೆಗೆ ಅವರು ಹೋಗುತ್ತಲೂ ಇದ್ದರು. ಅದನ್ನು ವಿನೋದವಾಗಿ, “ವಾರಕ್ಕೊಂದು ದಿವಸ ಪಾರ್ಥಸಾರಥಿಯ ಸಾರಥ್ಯದಲ್ಲಿ ಇಲ್ಲಿಂದ ಅಲ್ಲಿಗೆ ನನ್ನ ಮೆರವಣಿಗೆ ಆಗುತ್ತದೆ. ಊಟ-ತಿಂಡಿಗೆಲ್ಲ ವ್ಯವಸ್ಥೆಯಾಗಿದೆ. ಕಸ-ಮುಸುರೆಗೆ ಕೆಲಸದವರಿದ್ದಾರೆ. ಸಂಪರ್ಕಕ್ಕೆ ಫೋನಿದೆ. ಬಂದುಹೋಗುವ ಬಂಧುಗಳೂ ವಿದ್ಯಾರ್ಥಿಗಳೂ ಬೇಕಾದಷ್ಟು ಜನರಿದ್ದಾರೆ. ಇನ್ನೇಕೆ ಈ ಮನೆ ಬಿಟ್ಟು ತೆರಳಬೇಕು?” ಎನ್ನುತ್ತಿದ್ದರಾದರೂ ಆಳದಲ್ಲಿ ಅವರಿಗೆ ತಮ್ಮ ಕಷ್ಟಾರ್ಜಿತದ ಮನೆಯಲ್ಲಿ ತಾವು ಕಳೆದ ಬದುಕಿನೊಡನೆ ಗಾಢವಾದ ನಂಟಿತ್ತೆಂದು ಯಾರೂ ಊಹಿಸಬಹುದು. ಆದರೆ ಇದಕ್ಕೂ ಮಿಗಿಲಾದ ಘನತೆ ಅವರ ನಿರ್ಣಯದಲ್ಲಿತ್ತು.

ಯಾವಾಗಲೋ ಒಮ್ಮೆ ತಾವೇ ವಿಧಿಸಿಕೊಂಡ ಅವರ ಈ ಏಕಾಂತವಾಸದ ಬಗೆಗೆ ನಾನು ಪ್ರಶ್ನಿಸಿದಾಗ ನಕ್ಕು ನುಡಿದಿದ್ದರು: “ನಾವೆಲ್ಲ ಎಲ್ಲಿ ಒಂಟಿಯಾಗಿರುತ್ತೇವೆ? ವಿಶ್ವೇದೇವತೆಗಳೇ ನಮ್ಮ ಜೊತೆ ಇದ್ದಾರೆ. ಪಂಚಭೂತಗಳು, ದಿಕ್ಪಾಲಕರು, ಸೂರ್ಯ-ಚಂದ್ರರು ಸದಾ ನಮ್ಮೊಡನೆ ಇಲ್ಲವೇ?” ಎಂದು. ಅವರಿಂದ ನಿರಾಲೋಚಿತವಾಗಿ ಬಂದ ಈ ಉತ್ತರವನ್ನು ಕೇಳಿ ನಾನು ಭವ್ಯತಾನುಭೂತಿಯಿಂದ ತತ್ತರಿಸಿದ್ದೆ. ಇದು ನಿಜವಾಗಿ ವೇದವನ್ನು ನಚ್ಚಿಕೊಂಡವರ ನೆಲೆಯೆಂದಿನಿಸಿತ್ತು.

ನಾನು ಯಾವುದನ್ನೂ ಸುಮ್ಮನೆ ಬಿಡುವ ಘಟವಲ್ಲ. ಈ ವಿಷಯವನ್ನು ಮತ್ತೆ ಮತ್ತೆ ಪ್ರಕಾರಾಂತರವಾಗಿ ಕೇಳುತ್ತಿದ್ದೆ: “ನೀವು ಹೇಳಿದ್ದು ಪರಮಾರ್ಥವಾಯಿತು. ಆದರೆ ವ್ಯವಹಾರವೆನ್ನುವುದು ಒಂದು ಇದೆಯೆಲ್ಲ? ಅದಕ್ಕಾದರೂ ಬೆಲೆ ಕೊಡಬೇಕು. ಪಾರ್ಥಸಾರಥಿಯವರ ಮನೆ ಚೆನ್ನಾಗಿದೆ. ಈಚೆಗಂತೂ ನಮ್ಮ ಮನೆಯ ಹತ್ತಿರಕ್ಕೇ ಬಂದಿದ್ದಾರೆ. ವಿಶಾಲವಾದ ಮನೆ, ಸೊಗಸಾದ ವಾತಾವರಣ, ಯಾವುದೇ ವಿಕ್ಷೇಪವಿಲ್ಲದ ಶಾಂತಸುಂದರಪರಿಸರ. ಅವರೂ ಪಾಪ ನಿಮ್ಮ ಆಗಮನಕ್ಕಾಗಿ ಕಾದಿದ್ದಾರೆ.” ನನ್ನ ಈ ವರಸೆಯನ್ನು ಅವರು ಬಹಳ ಸುಲಭವಾಗಿ ಎದುರಿಸಿದ್ದರು:

“ವ್ಯವಹಾರವೇನು, ಪರಮಾರ್ಥವೇನು; ಎಲ್ಲ ಒಂದೇ. ಆದರೂ ನಿಮ್ಮ ಸಮಾಧಾನಕ್ಕೆ ಒಂದು ಮಾತು ಹೇಳುತ್ತೇನೆ. ವೇದಪಾಠಕ್ಕೆ ಬರುವವರಿಗೆ ಈ ಮನೆಯಲ್ಲಿ ತುಂಬ ಸೌಕರ್ಯವಿದೆ. ಬಿಡುಬೀಸಾಗಿ ಬರುತ್ತಾರೆ, ಹೋಗುತ್ತಾರೆ. ಈ ಸ್ವಾತಂತ್ರ್ಯ ಅಪಾರ್ಟ್ಮೆಂಟುಗಳಲ್ಲಿ ಇರುವುದಿಲ್ಲ. ಅಲ್ಲೆಲ್ಲ ತಮ್ಮತಮ್ಮದೇ ಜಗತ್ತಿನಲ್ಲಿರುವ ಜನ. ಅದೂ ಅಲ್ಲದೆ ನನ್ನ ಹತ್ತಿರ ವೇದ ಕಲಿಯುವುದಕ್ಕೆ ಬರುವ ಜನರೆಲ್ಲ ಹೆಚ್ಚಾಗಿ ಹಳೆಯ ಕಾಲದವರು, ಸಂಪ್ರದಾಯಸ್ಥರು, ಮಧ್ಯಮವರ್ಗದವರು. ಇವರಿಗೆ ಅತ್ಯಾಧುನಿಕವಾದ ಅಪಾರ್ಟ್ಮೆಂಟುಗಳ, ಎನ್‌ಕ್ಲೇವ್‌ಗಳ ಪರಿಸರ ಸಂಕೋಚ ತರಬಹುದು. ಗೇಟಿನ ಹತ್ತಿರವೇ ಒಂದು ಸಹಿ, ಒಳಗೆ ಬಂದಮೇಲೆ ಮತ್ತೊಂದು ಸಹಿ, ಇದರ ಮಧ್ಯದಲ್ಲಿ ಫೋನು ಮಾಡಬೇಕು ... ಇಷ್ಟೆಲ್ಲ ನಿಯಮಗಳು ಇರುವ ಜಾಗದಲ್ಲಿ ಇಂಥ ಜನಕ್ಕೆ ಮುಜುಗರವಾಗುತ್ತದೆ. ಇದು ಕ್ರಮೇಣ ಅವರು ಪಾಠಕ್ಕೇ ಬರದಂತೆ ಮಾಡುತ್ತದೆ. ನನ್ನ ಮಗ-ಸೊಸೆ ಅಲ್ಲಿ ಚೆನ್ನಾಗಿದ್ದಾರೆ, ಆ ವ್ಯವಸ್ಥೆ ಅವರಿಗೆ ಸರಿ. ನಾನು ಇಲ್ಲಿ ಚೆನ್ನಾಗಿದ್ದೀನಿ, ಈ ವ್ಯವಸ್ಥೆ ನನಗೆ ಸರಿ. ಹೇಗೂ ವಾರಕ್ಕೊಮ್ಮೆ ಮೆರವಣಿಗೆ ನಡೆಯುತ್ತಲೇ ಇರುತ್ತದಲ್ಲಾ.”

ಶೇಷಣ್ಣನವರ ಮಾತಿಗೆ ಮೂಕನಾಗಿ ದಂಡವತ್ ಪ್ರಣಾಮ ಸಲ್ಲಿಸಿದ್ದೆ. ಯಾರನ್ನೂ ದೂರದ, ಯಾವುದರಲ್ಲಿಯೂ ಆಗ್ರಹವಿಲ್ಲದ, ಆದರೆ ತನ್ನ ಉದ್ದೇಶದಲ್ಲಿ ಸ್ವಲ್ಪವೂ ರಾಜಿಯಿಲ್ಲದ ಈ ಹದ ಅದೆಷ್ಟು ಜನ್ಮಗಳ ತಪಸ್ಸಿನ ಫಲವೋ! ಪಾರ್ಥಸಾರಥಿಯವರ ಹೊಸಮನೆಯ ಗೃಹಪ್ರವೇಶಕ್ಕೆ ಶೇಷಣ್ಣನವರೇ ಮುಂದಾಗಿ ನಿಂತಿದ್ದರು. ವೈದಿಕವೈಭವದಿಂದ ಎಲ್ಲ ಬಂಧು-ಮಿತ್ರರ ಜೊತೆಯಲ್ಲಿ ಪಾಂಕ್ತವಾಗಿ ಸಮಾರಂಭ ಸಾಗಿಸಿದ್ದರು. ನನ್ನೊಡನೆ ಸಹಪಂಕ್ತಿಭೋಜನವನ್ನು ಮಾಡಬೇಕೆಂದೇ ಕಾದುಕೊಂಡಿದ್ದರು. ಅದೇ ಅವರೊಡನೆ ನಾನು ಮಾಡಿದ ಕಡೆಯ ಊಟ. ಇಷ್ಟೆಲ್ಲ ವಿಶ್ವಾಸ-ವಾತ್ಸಲ್ಯಗಳಿದ್ದರೂ ಅವರಿಗೆ ಅವರದಾದ ಗುರಿಯಲ್ಲಿ ನಿಶ್ಚಯವಿತ್ತು; ಅದರಲ್ಲಿ ನಯವೂ ಇತ್ತು.

*       *       *

ಸನಾತನಧರ್ಮದ ಅವಿಭಾಜ್ಯಾಂಗವೇ ಆದ ಸರಳಸಂಯಮದ ಜೀವನ ಶೇಷಣ್ಣನವರಿಗೆ ಸಹಜವಾಗಿಯೇ ಅಳವಟ್ಟಿತ್ತು. ನಿಯತವಾದ ವ್ಯಾಯಾಮ, ಹಿತವೆನಿಸುವ ಆಹಾರನಿಯಮ, ಏಕಾದಶಿಯಂಥ ನಿರಶನ ವ್ರತಗಳು, ನಿಸರ್ಗಚಿಕಿತ್ಸೆ, ತಿಂಗಳಿಗೊಂದು ದಿನ ಮೌನ ಇತ್ಯಾದಿ ಶಿಸ್ತುಗಳು ಅವರ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿದ್ದವೆನ್ನಬೇಕು. ಇಂತಾದರೂ ಕೊನೆಕೊನೆಯ ವರ್ಷಗಳಲ್ಲಿ ಬರೆಯುವಾಗ ಅವರ ಕೈ ತುಂಬ ನಡುಗುತ್ತಿತ್ತು. ಸಂಧಿಗಳಲ್ಲಿ ನೋವೂ ಸಾಕಷ್ಟಿತ್ತು. ಆದರೂ ಅವನ್ನು ಹಾಡಿಕೊಂಡು ಹಳಿಯದೆ ವ್ರತಬುದ್ಧಿಯಿಂದ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಆ ಕಾಲದಲ್ಲಿ ಅವರ ಎಂದಿನ ವೇಷಕ್ಕೆ ಉಣ್ಣೆಯ ಟೋಪಿ, ತೋಳಿಲ್ಲದ ಸ್ವೆಟರ್, ಕಾಲುಚೀಲ ಮತ್ತು ಕೈಪಟ್ಟಿ ಸೇರಿದ್ದವು. “ಇದೇನು ಹೊಸ ವೇಷ?” ಎಂದು ನಾನು ಸಲುಗೆಯಿಂದ ಕೇಳಿದಾಗ, “ನಮ್ಮ ಆರೋಗ್ಯವನ್ನು ನಮ್ಮ ಕೈಯಲ್ಲೇ ಇಟ್ಟುಕೊಳ್ಳುವುದಕ್ಕೆ ಇದೂ ಒಂದು ಬಗೆಯ ಯೋಗ” ಎಂದಿದ್ದರು. ಶೇಷಣ್ಣನವರು ಮೊದಲಿನಿಂದಲೂ ಯೋಗಾಭ್ಯಾಸ ಮಾಡುತ್ತಿದ್ದವರು. ಅವರದ್ದು ಸರ್ವಾರ್ಥಗಳಲ್ಲಿಯೂ ಸಂಪೂರ್ಣವಾದ ಅಷ್ಟಾಂಗಯೋಗ. ಯಮ-ನಿಯಮಗಳ ಅನುಷ್ಠಾನ ಉಸಿರಾಟದಂತಿತ್ತು. ಹಲವು ಬಗೆಯ ಆಸನಗಳನ್ನು ಮಾಡುತ್ತಿದ್ದರು. ಎಂಬತ್ತರ ವಯಸ್ಸಿನಲ್ಲಿಯೂ ಶೀರ್ಷಾಸನ ಹಾಕುತ್ತಿದ್ದರು! ಪ್ರಾಣಾಯಾಮವಂತೂ ಅವರಿಗೆ ಕರ್ಮಕಾಂಡದ ಒಂದು ಅಂಗವಷ್ಟೇ ಆಗಿರದೆ ಆತ್ಮನಿಯಂತ್ರಣದ ಬಗೆಯೂ ಆಗಿತ್ತು. ಇನ್ನು ಉಳಿದ ನಾಲ್ಕು ಅಂಗಗಳು ಅವರಿಗೆ ಸಿದ್ಧಿಸಿದ್ದುದರಲ್ಲಿ ನನಗಾವ ಸಂದೇಹವೂ ಇಲ್ಲ. ಅವು ಅಂತರಂಗದ ಅಂಶಗಳಾದ ಕಾರಣ ಅಚಿಂತ್ಯ, ಸ್ವಸಂವೇದ್ಯ.

ಇಂಥ ಪರಿಸ್ಥಿತಿಯಲ್ಲಿಯೂ ಮನೆಗೆ ಬಂದವರಿಗೆ ಆತಿಥ್ಯ ಸಲ್ಲುತ್ತಿತ್ತು. ತಾವೇ ಕಾಯಿಸಿಟ್ಟ ಹಾಲು, ಹೆಚ್ಚಿದ ಹಣ್ಣು ಸದಾ ಸಿದ್ಧವಿರುತ್ತಿದ್ದವು. ಬಾದಾಮಿ, ಒಣದ್ರಾಕ್ಷಿ, ಖರ್ಜೂರ ಮುಂತಾದವನ್ನು ಬಂದವರಿಗೆ ಧಾರಾಳವಾಗಿ ಹಂಚುತ್ತಿದ್ದರು. ನಿತ್ಯಾಹ್ನಿಕ, ದೇವತಾರ್ಚನೆ, ಬ್ರಹ್ಮಯಜ್ಞಾದಿಗಳು ಒಂದು ದಿನವೂ ತಪ್ಪಲಿಲ್ಲ. ಭಾರತೀಯಸಂಸ್ಕೃತಿಯಲ್ಲಿ ಆಸಕ್ತಿಯುಳ್ಳ ನನ್ನ ಹಲಕೆಲವು ತರುಣಮಿತ್ರರನ್ನು ಯಾವಾಗಲಾದರೂ ನಾನು  ಕರೆದುಕೊಂಡು ಹೋಗಿ ಆವರಿಗೆ ಪರಿಚಯಿಸಿದರೆ ತುಂಬ ಸಂತೋಷಪಡುತ್ತಿದ್ದರು. ಎಂಥ ಚಿಕ್ಕ ವಯಸ್ಸಿನವರನ್ನೂ ಪ್ರೀತಿ-ಗೌರವಗಳಿಂದ ಕಾಣುತ್ತಿದ್ದರು. ಆಗೆಲ್ಲ ಹೇಳುತ್ತಿದ್ದುದುಂಟು: “ನೀವೆಲ್ಲ ಬಂದರೆ ನನಗೆ ನಿಮ್ಮ ನಿಮ್ಮ ಗೋತ್ರಪ್ರವರ್ತಕರಾದ ಮಹರ್ಷಿಗಳೇ ಬಂದಂತೆ ಭಾವ ತುಂಬಿಬರುತ್ತದೆ” ಎಂದು. ಇಂಥ ವಿಶ್ವಾಸಕ್ಕೆ ನಾವೇನು ಪಡಿ ತೆರೋಣ?

ಹೀಗೆ ಮನೆಗೆ ಬಂದ ಆತ್ಮೀಯರಿಗೆಲ್ಲ ತಮ್ಮ ವಿಧುರಜೀವನದಲ್ಲಿಯೂ ಆತಿಥ್ಯ ಸಲ್ಲಿಸುತ್ತಿದ್ದ ಶೇಷಣ್ಣನವರು ತಾವು ಮಾತ್ರ ಯಾರಿಂದಲೂ ಯಾವುದೇ ತಿಂಡಿ-ತಿನಿಸುಗಳನ್ನು ಅಷ್ಟಾಗಿ ಸ್ವೀಕರಿಸುತ್ತಿರಲಿಲ್ಲ. ಇದಕ್ಕೆ ಮಡಿವಂತಿಕೆ ಕಾರಣವಲ್ಲ. ಒಮ್ಮೆ ಅವರು ರುಚಿಕಟ್ಟಾದ ಅವಲಕ್ಕಿಯ ಪುರಿಯನ್ನು ಮಾಡಿಕೊಳ್ಳುವುದನ್ನು ಕಂಡ ಶ್ರೀವತ್ಸ ಗುರುಗಳಿಗೇಕೆ ಈ ತೊಂದರೆ ಎಂದು ತಾನೇ ಮಾಡಿ ತಂದುಕೊಟ್ಟ. ಆಗ ಅದನ್ನು ನಿರಾಕರಿಸದ ಶೇಷಣ್ಣನವರು ಇದು ಮತ್ತೊಮ್ಮೆಯೂ ಪುನರಾವರ್ತನೆಯಾದಾಗ ಹೇಳಿದರಂತೆ: “ನೋಡಿ, ನೀವೇನೋ ಪ್ರೀತಿಯಿಂದ ತಂದುಕೊಡುತ್ತೀರಿ. ಆದರೆ ನಾನು ಇಂಥದ್ದನ್ನೆಲ್ಲ ಹೆಚ್ಚಾಗಿ ತೆಗೆದುಕೊಳ್ಳ ಬಾರದು. ಏಕೆಂದರೆ ನಾನೀಗ ನನ್ನ ಮಗ, ಸೊಸೆ, ಮೊಮ್ಮಕ್ಕಳ ನೆರಳಿನಲ್ಲಿದ್ದೇನೆ. ಅವರು ಏನಾದರೂ ನಾವು ನಮ್ಮ ತಂದೆಗೆ ಮಾಡುತ್ತಿರುವುದು ಸಾಕಾಗಲಿಲ್ಲವೇ ಏನೋ ಎಂದು ಭಾವಿಸಿಕೊಂಡು ನೊಂದರೆ ಎಷ್ಟು ಅನ್ಯಾಯ! ನಾವು ಯಾವತ್ತೂ ನಮ್ಮ ಹತ್ತಿರದವರಿಗೆ ಅವರು ನಮಗಾಗಿ ಮಾಡುತ್ತಿರುವುದು ಸಾಲದು ಎನ್ನುವ ಭಾವನೆಯನ್ನು ಬರಿಸಬಾರದು. ದಯಮಾಡಿ ನೀವೂ ಇದನ್ನು ತಪ್ಪಾಗಿ ತಿಳಿಯಬೇಡಿ.” ಇಂಥ ಸಂವೇದನಶೀಲರನ್ನು ಯಾರು ತಾನೆ ತಪ್ಪಾಗಿ ತಿಳಿದಾರು?

ಸಾಮಾನ್ಯವಾಗಿ ನೀತಿ-ನಿಯಮಗಳನ್ನು ಕುರಿತಾಗಲಿ, ಮಾನವಸಂಬಂಧಗಳ ಸೂಕ್ಷ್ಮತೆಯನ್ನು ಕುರಿತಾಗಲಿ ವಿವರಿಸುವಾಗ ಸೂತ್ರಪ್ರಾಯವಾದ ವಿಧಾಯಕವಾಕ್ಯಗಳಿಗಿಂತ ಇಂಥ ಸಂದರ್ಭಗಳು ತುಂಬ ಸಮರ್ಥವಾಗಿ ಉದ್ದಿಷ್ಟಪರಿಣಾಮವನ್ನು ಬೀರುತ್ತವೆ. ಈ ಕಾರಣದಿಂದಲೇ ಸಜ್ಜನರ ಆಚಾರ (ಎಲ್ಲ ನಿಟ್ಟಿನಿಂದಲೂ ಒಳಿತೆನಿಸುವ ವರ್ತನೆ) ಧರ್ಮಶಾಸ್ತ್ರಕ್ಕೆ ಪರಮಪ್ರಮಾಣವೆಂದು ಹೇಳಿರುವುದು:

ಅಥ ಯದಿ ತೇ ಕರ್ಮವಿಚಿಕಿತ್ಸಾ ವಾ ವೃತ್ತವಿಚಿಕಿತ್ಸಾ ವಾ ಸ್ಯಾತ್ | ಯೇ ತತ್ರ ಬ್ರಾಹ್ಮಣಾಃ ಸಂಮರ್ಶಿನಃ | ಯುಕ್ತಾ ಆಯುಕ್ತಾಃ | ಅಲೂಕ್ಷಾ ಧರ್ಮಕಾಮಾಃ ಸ್ಯುಃ | ಯಥಾ ತೇ ತತ್ರ ವರ್ತೇರನ್ | ತಥಾ ತತ್ರ ವರ್ತೇಥಾಃ ||” (ತೈತ್ತಿರೀಯೋಪನಿಷತ್ತು, ೧.೧೧)

ಹೀಗೆಯೇ ಬಂದವರು ಹೊರಟಾಗ ಗೇಟಿನವರೆಗೆ ಬಂದು ಬೀಳ್ಗೊಡುತ್ತಿದ್ದರು. ಅವರಿಗೆ ದೈಹಿಕ ದಾರ್ಢ್ಯವಿದ್ದಾಗ ಅವರ ಮನೆಯ ಮುಂದಿನ ರಸ್ತೆಯಂಚಿನವರೆಗೂ ಬಂದು ಬೀಳ್ಗೊಡುತ್ತಿದ್ದರು. ಆದರೆ ಅವರ ಕೊನೆಕೊನೆಯ ವರ್ಷಗಳಲ್ಲಿ ಈ ಸೌಲಭ್ಯವಿಲ್ಲದಿದ್ದಾಗ ಅದು ಕೇವಲ ಗೇಟಿಗೆ ಸೀಮಿತವಾಗಿತ್ತು.  ಇದನ್ನೂ ಅವರು ವಿನೋದವಾಗಿ ಹೇಳುತ್ತಿದ್ದರು: “ಧರ್ಮಶಾಸ್ತ್ರಗಳಲ್ಲಿ ಹೇಳುತ್ತಾರಲ್ಲ, ನೀರಿನ ಆಸರೆಯಿರುವ ಜಾಗದವರೆಗೆ ಬಂದು ಬೀಳ್ಗೊಡಬೇಕು ಎಂದು; ಈಗ ಮನೆಯ ಮುಂದಿರುವ ಮ್ಯಾನ್ ಹೋಲ್‌ವರೆಗೆ ಬಂದು ಬೀಳ್ಗೊಟ್ಟರೆ ಅದೇ ಜಲಸ್ಥಾನ” ಎಂದು. ಹೀಗೆ ಬೀಳ್ಗೊಡುವಾಗಲೆಲ್ಲ ನಿರಪವಾದವಾಗಿ ಸ್ವಸ್ತಿವಾಚನಮಂತ್ರಗಳನ್ನು ಹೇಳಿ ಎಲ್ಲರನ್ನೂ ಹಾರೈಸಿ ಕಳುಹುತ್ತಿದ್ದರು. ಆ ಸಾಮಗಳ ಹಿಂದಿರುವ ಆರ್ದ್ರತೆಯನ್ನು ಅನುಭವಿಸಿದವರೇ ಅವರ ಆತ್ಮೀಯತೆಯನ್ನು ಬಲ್ಲರು.

*       *       *

ಶೇಷಣ್ಣನವರು ಅವರ ಕಡೆಕಡೆಯ ದಿನಗಳಲ್ಲಿಯೂ ಆನಂದದ ಚಿಲುಮೆಯಾಗಿದ್ದರು, ಸ್ವಾವಲಂಬಿಗಳಾಗಿ ಬಾಳಿದ್ದರು. ಆ ದಿನಗಳಲ್ಲೊಮ್ಮೆ ಅವರನ್ನು ಕಾಣಲು ಹೋದಾಗ ಲೋಕಾಭಿರಾಮವಾದ ಮಾತಿನ ನಡುವೆ, “ಸುಮಾರು ತೊಂಬತ್ತೈದು ವರ್ಷಗಳಷ್ಟು ವಿಸ್ತರಿಸಿಕೊಂಡಿರುವ ನಿಮ್ಮ ಈ ದೀರ್ಘಜೀವನದ ಸಂಧ್ಯೆಯಲ್ಲಿ ಇದೀಗ ನಿಮ್ಮೊಳಗೆ ಯಾವುದಾದರೂ ಕೊರತೆ ಉಳಿದುಕೊಂಡಿದೆಯೇ? ಮತ್ತಾವುದಾದರೂ ಅಪೇಕ್ಷೆ ಇದೆಯೇ?” ಎಂದು ಕೇಳಿದೆ. ನನ್ನದು ತುಂಬ ಸಾಹಸದ ಮಾತೆಂದು ಯಾರೂ ಹೇಳಿಯಾರು. ಅದರೆ ಇಂಥ ಮಾತುಗಳನ್ನು ಹಿರಿಯರನೇಕರಲ್ಲಿ ಕೇಳಿದ್ದ ಕಾರಣ ನನಗೆ ಯಾವುದೇ ಸಂಕೋಚ ಕಾಡಲಿಲ್ಲ. ಅಲ್ಲದೆ ಶೇಷಣ್ಣನವರು ನನ್ನ ವಿಷಯದಲ್ಲಿ ತುಂಬ ವಾತ್ಸಲ್ಯವುಳ್ಳವರು. ಆಗ ಅವರು ಸಹಜವಾಗಿ, ಯಥಾಲಾಪವೆಂಬಂತೆ ಹೇಳಿದ ಮಾತಿದು:

“ಬೇರೆ ಯಾವ ಕೊರತೆ-ಕೋರಿಕೆಗಳೂ ಇಲ್ಲ; ಒಂದು ಕೊರತೆ ಮಾತ್ರ ಉಳಿದುಹೋಗಿದೆ. ಹಗಲಿಡೀ ಭಗವಂತನ ಧ್ಯಾನದಲ್ಲಿ, ವೇದಪುರುಷನ ಸೇವೆಯಲ್ಲಿ ಹೊತ್ತು ಕಳೆಯುತ್ತದೆ. ಮಲಗುವಾಗ ಕೂಡ ದೇವರ ಸ್ಮರಣೆ ಮಾಡಿಕೊಂಡು ನಿದ್ರೆ ಬರುವವರೆಗೂ ಹೊತ್ತು ಕಳೆಯುವುದಾಗುತ್ತದೆ. ಬೆಳಗ್ಗೆ ಏಳುವಾಗ ಮಾತ್ರ ಜ್ಞಾಪಕ ಮಾಡಿಕೊಂಡು ಭಗವನ್ನಾಮಸ್ಮರಣೆಗೆ ತೊಡಗಬೇಕು. ನಿದ್ರೆಯಿಂದ ಏಳುವಾಗಲೇ ನನ್ನ ಉಸಿರಾಟದಷ್ಟು ಸಹಜವಾಗಿ ಭಗವಂತನ ಚಿಂತನೆ ಹೊರಹೊಮ್ಮುವುದಿಲ್ಲ. ಅದೇ ನನಗಿರುವ ಕೊರತೆ.”

ಸ ಏಷ ರಸಾನಾಂ ರಸತಮಃ ಪರಮಃ ಪರಾರ್ಧ್ಯಃ” (ಛಾಂದೋಗ್ಯೋಪನಿಷತ್ತು, ೧.೧.೩)

Concluded.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.