ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ--ವ್ಯಕ್ತಿತ್ವ

This article is part 3 of 4 in the series Vedamurti Sri Sheshanna Shrauti

‘ಸಂಧ್ಯಾದರ್ಶನ’ವನ್ನು ಬರೆದ ಆಚೀಚಿನ ವರ್ಷಗಳಲ್ಲಿ ನನಗೆ ನಮ್ಮ ಕರ್ಮಕಾಂಡಗಳ ರೂಪ-ಸ್ವರೂಪಗಳನ್ನು ಪರಿಷ್ಕರಿಸಬೇಕು, ಸುಧಾರಣೆಗಳನ್ನು ಮಾಡಬೇಕು, ಜಳ್ಳು-ಕಾಳುಗಳನ್ನು ಬೇರ್ಪಡಿಸಿ ನಮ್ಮ ಕಾಲಕ್ಕೂ ಶ್ರುತಿ-ಸೂತ್ರ-ಸ್ಮೃತಿಗಳ ಆಂತರ್ಯಕ್ಕೂ ಒಪ್ಪಿಗೆಯಾಗುವಂಥ ಶುದ್ಧವಾದ ವ್ಯವಸ್ಥೆಗಳನ್ನು ಹವಣಿಸಬೇಕೆಂಬ ಹಂಬಲ ಹೆಚ್ಚಾಗಿತ್ತು. ಇದನ್ನು ಕುರಿತು ಶೇಷಣ್ಣನವರೊಡನೆ ಸಾಕಷ್ಟು ಹೇಳಿಕೊಂಡಿದ್ದೆ. ಆಗೆಲ್ಲ ಅವರು ನನ್ನ ವಿಚಾರಧಾರೆಯನ್ನು ಮೆಚ್ಚುವುದಲ್ಲದೆ ತಮ್ಮ ದೃಷ್ಟಿ-ಧೋರಣೆಗಳನ್ನೂ ಹೇಳುತ್ತಿದ್ದರು. ಅಂಥ ಒಂದು ಸಂವಾದದಲ್ಲಿ ಒಮ್ಮೆ ನಾನು ಮದುವೆ-ಮುಂಜಿಗಳಂಥ ಸಮಾರಂಭಗಳಲ್ಲಿ ಆಡಂಬರ-ಅಬ್ಬರ ಹೆಚ್ಚಾಗುತ್ತಿದೆ, ಅಶಾಸ್ತ್ರೀಯವೂ ಅನವಶ್ಯವೂ ಆದ ಆರ್ಭಟಗಳನ್ನು ಪುರೋಹಿತರೂ ಕರ್ತರೂ ಮೆರೆಸುತ್ತಿದ್ದಾರೆಂದು ಆಕ್ಷೇಪಿಸಿದೆ. ಆಗ ಅವರೆಂದರು:

“ನೀವು ಹೇಳುವುದೇನೋ ಸರಿ. ಆದರೆ ಒಂದಿಷ್ಟಾದರೂ ವೈಭವ ಇಲ್ಲದಿದ್ದರೆ ಆಯಾ ಕರ್ಮಗಳ ಭವ್ಯತೆ ಹೇಗೆ ತಾನೆ ಮನಸ್ಸಿಗೆ ಮುಟ್ಟುತ್ತದೆ? ಹೆಣ್ಣುಮಕ್ಕಳು ಒಳ್ಳೊಳ್ಳೆಯ ಸೀರೆ-ಒಡವೆಗಳನ್ನು ಉಟ್ಟು-ತೊಟ್ಟು, ಹೂವು-ಗಂಧ ಮುಡಿದು-ತಳಿದು ಆ ಪರಿಸರದಲ್ಲೆಲ್ಲ ಓಡಾಡುತ್ತಿರಬೇಕೆಂದು ಯಾವ ಆಪಸ್ತಂಬರೂ ಆಶ್ವಲಾಯನರೂ ಹೇಳಿಲ್ಲ. ಆದರೆ ಇವೆಲ್ಲ ಇಲ್ಲದಿದ್ದರೆ ಸಾಮಾನ್ಯರ ಕಣ್ಣಿನಲ್ಲಿ ಇವುಗಳಿಗೂ ಶ್ರಾದ್ಧಕ್ಕೂ ಏನು ತಾನೆ ಉಳಿಯುತ್ತದಪ್ಪ ವ್ಯತ್ಯಾಸ? ಹೀಗಾಗಿ ನೀವು ಇಂಥವನ್ನೆಲ್ಲ ಪರಿಷ್ಕರಿಸುವಾಗ ಲೋಕ ಸಾಮಾನ್ಯದ ಭಾವನೆಗಳಿಗೂ ಸ್ವಲ್ಪ ಬೆಲೆ ಕೊಡಿ. ನಾನೂ ನಮ್ಮ ಆಚಾರ-ವಿಚಾರಗಳಲ್ಲಿ ಆಡಂಬರವನ್ನು ಒಪ್ಪುವುದಿಲ್ಲ. ನಿಮಗೇ ಅದು ಗೊತ್ತಿದೆ. ಆದರೂ ಹೇಳುತ್ತಿದ್ದೀನಿ...”

ಇದನ್ನು ಆಲಿಸಿದ ಬಳಿಕ ನನಗೂ ಶೇಷಣ್ಣನವರ ಇಂಗಿತ ಸರಿಯೆನಿಸಿತು. ಈಚಿನ ವರ್ಷಗಳಲ್ಲಂತೂ ಇದು ಮತ್ತಷ್ಟು ಮನದಟ್ಟಾಗಿದೆ. ಅಷ್ಟಲ್ಲದೆ ಧರ್ಮ-ಗೃಹ್ಯಸೂತ್ರಕಾರರು “ಅತ್ರ ಗ್ರಾಮವೃದ್ಧಾಃ ಪ್ರಷ್ಟವ್ಯಾಃ”; ಹಳ್ಳಿಯ ಮುದುಕ-ಮುದುಕಿಯರ ಮಾತುಗಳು ಪ್ರಮಾಣ, ಅನುದಿನದ ಜಾನಪದಜೀವನದ ಅಂಶಗಳು ಅನುಷ್ಠೇಯವೆಂದು ಹೇಳುತ್ತಿದ್ದರೇ! ಭಗವಾನ್ ಬುದ್ಧನು ಹೇಳುವಂತೆ ಸನಾತನಧರ್ಮವು “ಬಹುಜನಹಿತಾಯ ಬಹುಜನಸುಖಾಯ” ಇರುವಂಥದ್ದು. ಎಲ್ಲರಿಗೂ ಎಟುಕಿ, ಎಲ್ಲರನ್ನೂ ತೃಪ್ತಿಗೊಳಿಸಿ ಆ ಬಳಿಕ ಅವ್ಯಾಜನಿಷ್ಠೆಯಿರುವ ಕೆಲವರನ್ನಾದರೂ ಉನ್ನತೋನ್ನತವಾದ ಮಟ್ಟಕ್ಕೇರಿಸುವ ಸೌಕರ್ಯವನ್ನು ಸನಾತನಧರ್ಮವಲ್ಲದೆ ಮತ್ತಾವುದು ಕೊಡುತ್ತದೆ? ಹೀಗೆ ಅದು ನೀಡುವ ಸೌಲಭ್ಯಗಳಲ್ಲೊಂದು ಶ್ರೀಶೇಷಣ್ಣ ಶ್ರೌತಿಗಳಂಥವರು ಎಲ್ಲರ ಕೈಯಳತೆಗೂ ಸಿಗುವಂಥ ಹವಣು.

ವೇದಗಳ ಆಧ್ಯಾತ್ಮಿಕಾರ್ಥವನ್ನು ಎತ್ತಿಹಿಡಿಯುವ ಭರದಲ್ಲಿ ಅವುಗಳಿಗಿರುವ ಅಧಿಯಜ್ಞೀಯವಾದ ಸ್ವಾರಸ್ಯವನ್ನು ಆಧುನಿಕರು ಉಪೇಕ್ಷಿಸುವುದರ ಬಗೆಗೆ ಶೇಷಣ್ಣನವರಿಗೆ ಬೇಸರವಿತ್ತು. ದಯಾನಂದರು, ಅರವಿಂದರು, ಕಪಾಲಿಶಾಸ್ತ್ರಿಗಳೇ ಮೊದಲಾದವರು ಹಠ ತೊಟ್ಟವರಂತೆ ವೇದಗಳ ಪ್ರತಿಯೊಂದು ಮಂತ್ರಕ್ಕೂ ತಾವೆಣಿಸಿಕೊಂಡ ಆಧ್ಯಾತ್ಮಿಕಾರ್ಥವನ್ನು ಬಲವಂತವಾಗಿ ಹೇರುವುದು ಅವರಿಗೆ ಸರಿ ಬರುತ್ತಿರಲಿಲ್ಲ. ಇಷ್ಟಾದರೂ ಅಂಥವರೊಡನೆ ಕಟುವಾದ ವಿರೋಧವನ್ನು ಶೇಷಣ್ಣನವರು ಇಟ್ಟುಕೊಳ್ಳಲಿಲ್ಲ. ನಾನಾದರೋ ಇಂಥ ಉಪದ್ವ್ಯಾಪಗಳನ್ನು ಖಂಡತುಂಡವಾಗಿ ವಿರೋಧಿಸಿಕೊಂಡು ಬಂದವನು. ತತ್ತ್ವತಃ ಶೇಷಣ್ಣನವರು ನನ್ನ ಪಕ್ಷದವರೇ. ಆದರೆ ಅವಧಾರಣೆ ಮಾತ್ರ ವಿಭಿನ್ನ.

ಈ ಸಂದರ್ಭದಲ್ಲಿ ನಾನು ಹೇಳಿದೆ, “ಆಧ್ಯಾತ್ಮಿಕಾರ್ಥ ಎಂಬುದು ಹೂವಿನ ಮಕರಂದದಂತೆ. ನೂರಾರು ಹೂಗಳಿಂದ ಸಂಗ್ರಹಿಸಿದರೂ ಅದರ ಸವಿಯೊಂದೇ, ಪ್ರಮಾಣ ಮಾತ್ರ ಸ್ವಲ್ಪ. ಆದರೆ ಆಧಿಭೌತಿಕ, ಆಧಿ ದೈವಿಕ ಮತ್ತು ಆಧಿಯಾಜ್ಞಿಕಸ್ತರಗಳ ಅರ್ಥ ಹಾಗಲ್ಲ. ಅವು ಗಿಡ, ಬಳ್ಳಿ, ಕೊಂಬೆ, ರೆಂಬೆ, ಎಲೆ, ಹೂವು, ದಳಗಳ ಆಕಾರ-ಬಣ್ಣ, ಅವುಗಳ ಪರಿಮಳ ಮುಂತಾದ ಎಲ್ಲ ಅಂಶಗಳನ್ನೂ ಸ್ವಾರಸ್ಯಕರವಾಗಿ ಪ್ರತಿನಿಧಿಸುತ್ತವೆ. ಹೂವಿನ ಪರಮಾರ್ಥವು ಮಕರಂದವೆಂಬುದರಲ್ಲಿ ಸಂದೇಹವಿಲ್ಲ. ಆದರೆ ಅದಕ್ಕಾಗಿ ಇಡಿಯ ಗಿಡ-ಬಳ್ಳಿಗಳ ಸೊಗಸನ್ನೂ ಸತ್ತ್ವವನ್ನೂ ಹಂಗಿಸಬೇಕಿಲ್ಲ. ಇಹದ ಪರಿಪಾಕವೇ ಪರ; ನಮ್ಮ ಮಟ್ಟಿಗಂತೂ ಇದು ಶೂನ್ಯದಿಂದ ಸಾಕ್ಷಾತ್ಕೃತವಾಗುವುದಿಲ್ಲ. ಈಶಾವಾಸ್ಯವು ‘ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾ ಅಮೃತಮಶ್ನುತೇ’ ಇತ್ಯಾದಿ ಮಂತ್ರಗಳ ಮೂಲಕ ಈ ಸತ್ಯವನ್ನೇ ಸಾರಿ ಎಚ್ಚರಿಸಿದೆ” ಎಂದು. ಇದನ್ನು ಕೇಳಿದ ಶೇಷಣ್ಣನವರು ತುಂಬ ಹರ್ಷಿಸಿದ್ದಲ್ಲದೆ ಈ ಭಾವವನ್ನೇ ಸಾಮವೇದ ಸಂಪುಟವೊಂದರ ಮುನ್ನುಡಿಯಾಗಿಯೂ ಬರೆಸಿಕೊಂಡರು. ಅವರ ಬದುಕೇ ಈ ಸತ್ಯದ ವ್ಯಾಖ್ಯಾನ. 

*       *       *

ಶೇಷಣ್ಣಶ್ರೌತಿಗಳಲ್ಲಿದ್ದ ಮಹಾಗುಣಗಳಲ್ಲೊಂದು ಅಪರಿಗ್ರಹವ್ರತ. ಅವರಂಥ ಬೇರೊಬ್ಬ ಅಪರಿಗ್ರಹಿಯನ್ನು ನಾನು ಕಂಡಿಲ್ಲ. ಅದೆಷ್ಟೋ ಬಾರಿ ಅವರು ಹಲವು ನಿಟ್ಟಿನಿಂದ ನನಗೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾದರ್ಶನ’ದಲ್ಲಿ ಬರುವ ಬುಡಿಲರ ಹಾಗೆ ತೋರಿದ್ದಾರೆ. ಶೇಷಣ್ಣನವರು ಯಾವ ದಾನವನ್ನೂ ಸ್ವೀಕರಿಸುತ್ತಿರಲಿಲ್ಲ. ದಕ್ಷಿಣೆಯು ಕರ್ಮಾಂಗವಾದ ಕಾರಣ ಅದನ್ನು ನಿರಾಕರಿಸುವಂತಿಲ್ಲ. ಹೀಗಾಗಿ ಅದರ ಅನಿವಾರ್ಯಭಾರವನ್ನು ತಪ್ಪಿಸಿಕೊಳ್ಳಲು ಅವರು ಆಚಾರ್ಯತ್ವವನ್ನೇ ವಹಿಸುತ್ತಿರಲಿಲ್ಲ. ತೀರ ವಿರಳವಾಗಿ ವಹಿಸಿದಾಗಲೂ ದಕ್ಷಿಣೆಯ ಹೆಸರಿನಲ್ಲಿ ಹೆಚ್ಚಾಗಿ ತಮಗೆ ನೀಡುವುದನ್ನು ಒಪ್ಪುತ್ತಿರಲಿಲ್ಲ. ಆದರೆ ವೈದಿಕರಿಗೆ ನ್ಯಾಯವಾಗಿ ಸಲ್ಲಬೇಕಾದುದರ ಬಗೆಗೆ ತುಂಬ ಮುತುವರ್ಜಿ ವಹಿಸುತ್ತಿದ್ದರು. ಮಾತ್ರವಲ್ಲ, ದಾನ-ದಕ್ಷಿಣೆಗಳನ್ನು ದಾತೃ-ಕರ್ತೃಗಳು ತಮ್ಮ ಶಕ್ತ್ಯನುಸಾರ ನೀಡುವಾಗ ವಿತ್ತಶಾಠ್ಯವನ್ನು ಮಾಡಬಾರದೆಂದೂ ವೈದಿಕರಿಗೆ ಯುಕ್ತರೀತಿಯ ಪೋಷಣೆ ಬೇಕೆಂದೂ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.

ಧಾರ್ಮಿಕಕರ್ಮಗಳನ್ನು ಮಾಡಿಸುವ ಎಲ್ಲ ವರ್ಗಗಳ ಬಗೆಗೂ ಅವರ ಆಸ್ಥೆ-ಕಾಳಜಿಗಳು ಮಿಗಿಲಾಗಿದ್ದವು. ಒಮ್ಮೆ ಹೇಳಿದ್ದರು: “ದಾಸಯ್ಯ ಮನೆಯ ಬಾಗಿಲಿಗೆ ಬಂದರೆ ನಾನು ಸಂಭ್ರಮದಿಂದ ಆತನಿಗೆ ದಾನ-ದಕ್ಷಿಣೆ ಕೊಡುತ್ತೇನೆ. ಬ್ರಾಹ್ಮಣವರ್ಗದ ಪುರೋಹಿತರು ಯಾರಲ್ಲಿ ಹೋಗಿ ಕರ್ಮಗಳನ್ನು ನಡಸಿಕೊಡುವುದಿಲ್ಲವೋ ಅಂಥ ನಿಮ್ನವರ್ಗದವರಿಗೆ ಇವರೇ ಆಚಾರ್ಯರಾಗಿ ಪೂರ್ವಾಪರ ಕರ್ಮಗಳನ್ನು ನಿರ್ವಹಿಸುತ್ತಾರೆ. ಇಂಥವರಿಗೆ ನಾವೇ ಗೌರವ ಕೊಡುವುದಿಲ್ಲ, ಆದರಿಸುವುದಿಲ್ಲ ಅಂದರೆ ಏನು ಗತಿ? ಸನಾತನಧರ್ಮ ಎಲ್ಲ ಸಮುದಾಯಗಳಲ್ಲೂ ಉಳಿದಿರುವುದು ಇವರಂಥ ಪುಣ್ಯವಂತರಿಂದ.”

ನನ್ನ ತಂದೆಯವರು ತೀರಿಕೊಂಡಾಗ ಶೇಷಣ್ಣನವರು ಮೊದಲ ದಿನವೇ ಆಗಮಿಸಿದ್ದರು. ಆಗ ಕಾಲೋಚಿತವಾದ ಒಂದೆರಡು ಸಾಂತ್ವನದ ಮಾತುಗಳನ್ನು ಹೇಳಿ, “ನಿಮಗೇ ಎಲ್ಲ ಗೊತ್ತಿದೆಯಲ್ಲ, ನೀವೇ ನಿಮ್ಮ ಪುರೋಹಿತರಿಗೆ ಯಾವುದು ಶಾಸ್ತ್ರಸಮ್ಮತ, ಮತ್ತಾವುದು ಅಸಮ್ಮತ ಎನ್ನುವುದನ್ನು ತಿಳಿಸಿ ಮುಂದುವರಿಯಿರಿ” ಎಂದು ಹೇಳಿದ್ದಲ್ಲದೆ ವೈಕುಂಠಸಮಾರಾಧನೆಯಂದು ಅವರೇ ಸಾಮಗಾನವನ್ನೂ ಉಪನಿಷತ್ಪಾರಾಯಣವನ್ನೂ ನಡಸಿಕೊಟ್ಟಿದ್ದರು. ಆದರೆ ಯಾವ ದಾನವನ್ನೂ ಸ್ವೀಕರಿಸಲು ಒಪ್ಪಲಿಲ್ಲ.

ಹೀಗೆ ಪ್ರೀತಿಗೆ ಪ್ರೀತಿ, ಕಾಳಜಿಗೆ ಕಾಳಜಿ, ಶಿಸ್ತಿಗೆ ಶಿಸ್ತು ಶೇಷಣ್ಣನವರ ಪರಿ.

*       *       *

ಶೇಷಣ್ಣಶ್ರೌತಿಗಳಿಗೆ ನನ್ನಲ್ಲಿ ಅಪಾರವಾದ ಪ್ರೀತಿ, ವಿಶ್ವಾಸ, ಅಭಿಮಾನ. ಸಾಮಾನ್ಯವಾಗಿ ಯತಿಗಳೂ ವೈದಿಕರೂ ಸಾಂಪ್ರದಾಯಿಕಪಂಡಿತರೂ ಕವಿ-ಕಾವ್ಯ-ಕಲೆಗಳ ವಿಷಯದಲ್ಲಿ ಉಪೇಕ್ಷೆ ತೋರುವುದುಂಟು. ಕಾವ್ಯವೆಂಬುದು ಅವರ ದೃಷ್ಟಿಯಲ್ಲಿ ಕಾಲಹರಣದ ಸಾಧನ, ಭೋಗಲೌಲ್ಯದ ಸಂಕೇತ, ಶಾಸ್ತ್ರಗಳನ್ನು ಕರಗತವಾಗಿಸಿಕೊಳ್ಳಲಾರದ ಸುಕುಮಾರಮತಿಗಳ ಅಪ್ರಬುದ್ಧ ಅಪಲಾಪ. ಶೇಷಣ್ಣಶ್ರೌತಿಗಳು ಇದಕ್ಕೆ ಹಿತವಾದ ಅಪವಾದ. ಅವರ ದೃಷ್ಟಿಯಲ್ಲಿ ಕಾವ್ಯಾನಂದವು ಬ್ರಹ್ಮಾನಂದಸಹೋದರ, ಸತ್ಕವಿಯು ಮತ್ತೊಬ್ಬ ಬ್ರಹ್ಮನಿದ್ದಂತೆ. ಇದು ನಮ್ಮ ಆರ್ಷದೃಷ್ಟಿಗೆ ಅನುಗುಣವಾದ ಅರಿವು. ಈ ಕಾರಣದಿಂದಲೇ ಅವರು ಸಾಮವೇದಸಂಹಿತೆಯನ್ನು ಸಭಾಷ್ಯವಾಗಿ ಕನ್ನಡಕ್ಕೆ ತರುವಾಗ ಪ್ರತಿಯೊಂದು ಮಂತ್ರಕ್ಕೂ ಗದ್ಯರೂಪದ ಅನುವಾದ-ವಿವರಣೆಗಳ ಜೊತೆಗೆ ಹಾಡಿಕೊಳ್ಳಲಾಗುವಂತೆ ಪದ್ಯರೂಪದ ಭಾಷಾಂತರವೂ ಇರಬೇಕೆಂದು ಬಯಸಿದರು. ಇದಕ್ಕಾಗಿ ನನ್ನ ಮನೆಗೆ ತಾವೇ ಬಂದು ಫಲ-ತಾಂಬೂಲ-ದಕ್ಷಿಣೆಗಳನ್ನು ಮುಂದಿರಿಸಿ ವಿಧ್ಯುಕ್ತವಾದ ರೀತಿಯಲ್ಲಿ ಅಭ್ಯರ್ಥಿಸಿದ್ದರು ಕೂಡ! ನಾನು ಅವರ ಈ ಔಪಚಾರಿಕವಿಧಾನಕ್ಕೆ ತುಂಬ ಸಂಕೋಚಗೊಂಡು ಆಕ್ಷೇಪಿಸಿದಾಗ ತಮ್ಮ ನಿಲವನ್ನೇ ಸಮರ್ಥಿಸಿಕೊಂಡಿದ್ದರು.

ಅವರು ನನ್ನ ಕಾವ್ಯರಚನೆ-ಅವಧಾನಾದಿಗಳನ್ನು ಮಿಗಿಲಾಗಿ ಮೆಚ್ಚಿದ್ದರು. ನನ್ನ ಅನೇಕಭಾಷಣಗಳನ್ನು ಕೇಳಿದ್ದರು, ಅವಧಾನಗಳನ್ನು ನೋಡಿದ್ದರು, ಹಲಕೆಲವು ಪುಸ್ತಕಗಳನ್ನು ಕೂಡ ಓದಿದ್ದರು. ನನ್ನ ಕನ್ನಡ ಶತಾವಧಾನವನ್ನು ಅಂತರ್ಜಾಲದ ಮೂಲಕ ನೋಡಿ ಆಸ್ವಾದಿಸಿದ್ದುದಲ್ಲದೆ ಆ ಕಾರ್ಯಕ್ರಮಕ್ಕಾಗಿ ಆಯೋಜಕರು ತಯಾರಿಸಿದ ನನ್ನ ಭಾವಚಿತ್ರವಿರುವ ಪೋಸ್ಟರ್ ಒಂದನ್ನು ಸಂಪಾದಿಸಿಕೊಂಡು ತಮ್ಮ ಮೇಜಿನ ಬಳಿಯಲ್ಲಿಯೇ ಇಟ್ಟುಕೊಂಡಿದ್ದರು. ನಾನು ಅವರನ್ನು ಕಾಣಲೆಂದು ಯಾವಾಗಲಾದರೂ ಹೋದಾಗ, “ನೀವು ಸದಾ ನನ್ನ ಬಳಿಯಲ್ಲಿ ಇರುತ್ತೀರಿ” ಎಂದು ಆ ಚಿತ್ರವನ್ನು ತೆಗೆದು ತೋರಿಸಿ ಹಿಗ್ಗುತ್ತಿದ್ದರು. ಈ ಪ್ರೀತಿಗೆ ಯಾವ ಪಡಿಯನ್ನು ತಾನೆ ಕೊಡಲು ಸಾಧ್ಯ?

*       *       *

ಶೇಷಣ್ಣನವರು ತಾವು ವೇದಪಾಠ ಹೇಳಿದ ಯಾರೊಬ್ಬರನ್ನೂ ತಮ್ಮ ಶಿಷ್ಯರೆಂಬಂತೆ ಭಾವಿಸಿರಲಿಲ್ಲ. ವಯಸ್ಸಿನ ಅಂತರವನ್ನೂ ಗಮನಿಸದೆ ಎಲ್ಲರನ್ನೂ ಗೆಳೆಯರಂತೆ ಕಾಣುತ್ತಿದ್ದರು. ಹೀಗಿರುವಾಗ ನನಗೂ ಅವರಲ್ಲಿ ಯಥೇಷ್ಟವಾದ ಸಲುಗೆಯಿದ್ದದ್ದು ಅತಿಶಯದ ಸಂಗತಿಯಲ್ಲ. ನಮ್ಮಿಬ್ಬರ ನಡುವೆ ಹೆಚ್ಚಾಗಿ ಸಾಗುತ್ತಿದ್ದ ಮಾತೆಲ್ಲ ವೇದವನ್ನು ಕುರಿತೇ. ನಾನು ಸ್ವಶಾಖೆಯಾದ ಕೃಷ್ಣಯಜುರ್ವೇದದ ಘೋಷವು ತರುವ ಭವ್ಯತೆ-ಘನತೆಗಳನ್ನು ಕುರಿತು ಮಾತನಾಡಿದಾಗಲೆಲ್ಲ ಅವರು ಅದನ್ನೊಪ್ಪುತ್ತ, “ಏನು ಮಾಡುವುದಪ್ಪ, ಶಂಕರಭಗವತ್ಪಾದರೂ ಸಾಯಣಾಚಾರ್ಯರೂ ನಿಮ್ಮ ಶಾಖೆಯವರೇ ಆಗಿಬಿಟ್ಟಿದ್ದಾರೆ ಅಂತ ನಿಮಗೆಲ್ಲ ಹೆಮ್ಮೆ. ಇರಲಿ, ವೇದಾಂತಭಾಷ್ಯಕರ್ತರೂ ವೇದಭಾಷ್ಯಕರ್ತರೂ ನಿಮ್ಮವರಾದರೆ ನಮ್ಮ ವೇದವನ್ನು ಸಾಕ್ಷಾತ್ ಶ್ರೀಕೃಷ್ಣನೇ ತಾನೆಂಬುದಾಗಿ ಭಗವದ್ಗೀತೆಯಲ್ಲಿ ಹೇಳಿಕೊಂಡಿದ್ದಾನೆ. ಇದನ್ನು ಒಪ್ಪುತ್ತೀರಲ್ಲವೇ!” ಎಂದು ನವುರಾಗಿ ವಿನೋದ ಮಾಡುವರು.

ಶ್ರೀರಾಮನಿಗೆ ತನ್ನ ಕುಲೋಚಿತವಾದ ಕ್ಷಾತ್ರಧರ್ಮದಲ್ಲಿ ಬಹುಮಾನವಿದ್ದಂತೆ ಶೇಷಣ್ಣನವರಿಗೆ ತಮ್ಮದಾದ ಸಾಮವೇದದ ಬಗೆಗೆ ಎಣೆಯಿಲ್ಲದ ಆದರಾಭಿಮಾನಗಳಿದ್ದವು. ಇದು ಉಪಾಸನವೇದವೆಂದು ಅವರ ಅವಧಾರಣೆ. ವಿಶೇಷತಃ ಛಾಂದೋಗ್ಯೋಪನಿಷತ್ತಿನ ಉದ್ಗೀಥಪ್ರಕರಣವನ್ನು ಅವರು ನೆನೆಯುತ್ತಿದ್ದರು. ಅಲ್ಲದೆ ಸಾಮವೇದಿಗಳು ಗಾಯತ್ರೀಮಂತ್ರವನ್ನು ಜಪಿಸುವಾಗ ಮಿಕ್ಕ ವೇದಗಳವರಂತೆ ಪ್ರಣವ-ಮಹಾವ್ಯಾಹೃತಿಗಳನ್ನು ಮೊದಲಿಗೆ ಹೇಳದೆ ಕಡೆಯಲ್ಲಿ ಹೇಳಬೇಕು; ಹಾಗೆ ಹೇಳುವಾಗಲೂ ಮಹಾವ್ಯಾಹೃತಿಗಳ ಬಳಿಕವೇ ಪ್ರಣವವನ್ನು ಉಚ್ಚರಿಸಬೇಕೆಂದು ಗೋಭಿಲ-ದ್ರಾಹ್ಯಾಯಣಾದಿಗಳ ಸೂತ್ರಗಳನ್ನು ಪ್ರಮಾಣವಾಗಿ ಮುಂದಿಡುತ್ತಿದ್ದರು. ಇದೇ ರೀತಿ ಕೇನ-ಛಾಂದೋಗ್ಯಗಳ ಹಲವು ಪ್ರಕರಣಗಳನ್ನೂ ವಿಸ್ತರಿಸುತ್ತಿದ್ದರು.

ಶೇಷಣ್ಣನವರಿಗೆ ನಮ್ಮ ಕರ್ಮಕಾಂಡದ ಸಣ್ಣಪುಟ್ಟ ವಿಷಯಗಳಲ್ಲಿಯೂ ಅದೆಷ್ಟು ಎಚ್ಚರ, ಆರ್ಷತ್ವದ ಬಗೆಗೆ ಅದೆಷ್ಟು ಕಾಳಜಿಯೆಂದರೆ ಸಾಮಾನ್ಯವಾಗಿ ಹೋಮಗಳ ಕಡೆಯಲ್ಲಾಗುವ ಪೂರ್ಣಾಹುತಿಯ ಹೊತ್ತಿಗೆ ಲೋಕರೂಢಿಯಾಗಿ ಬಂದಿರುವ ಚಪ್ಪಾಳೆ ತಟ್ಟುವುದರ ಬಗೆಗೂ ವಿಮರ್ಶಿಸುವಷ್ಟು! ವೈದಿಕವಾದ ಇಂಥ ಪ್ರಶಸ್ತಕಾರ್ಯದಲ್ಲಿ ಲೌಕಿಕವಾದ ಸಾಧುವಾದಗಳ ಸಂಕೇತವೆನಿಸಿದ ಚಪ್ಪಾಳೆ ಸರಿಯಾಗದು, ಅದು ಸಂದರ್ಭದ ಗಾಂಭೀರ್ಯವನ್ನು ತಗ್ಗಿಸುತ್ತದೆ; ಜೊತೆಗೆ ಶಾಸ್ತ್ರಕಾರರೂ ಇದನ್ನು ವಿಧಿಸಿಲ್ಲ ಎಂದು ಅವರ ಆಕ್ಷೇಪ. ಇದಕ್ಕೆ ಪ್ರತ್ಯಾಮ್ನಾಯವಾಗಿ ದೀರ್ಘೋಚ್ಚಸ್ವರದಿಂದ ಎಲ್ಲರೂ ಓಂಕಾರವನ್ನು ಘೋಷಿಸಬೇಕು ಎಂದು ಮತ್ತೆ ಮತ್ತೆ ಹೇಳುತ್ತಿದ್ದರು. ಮಾತ್ರವಲ್ಲ, ಅದೆಷ್ಟೋ ಪೂರ್ಣಾಹುತಿಗಳ ಹೊತ್ತಿನಲ್ಲಿ ನೂರಾರು ಚಪ್ಪಾಳೆಗಳ ಕೋಲಾಟದ ನಡುವೆ ಅವರೊಬ್ಬರದೇ ಓಂಕಾರ ಮೊಳಗುತ್ತಿತ್ತು. ಹೀಗೆ ತಾವು ಶಾಸ್ತ್ರಶುದ್ಧವಾಗಿ, ಸಂದರ್ಭನಿಷ್ಠವಾಗಿ ಕಂಡುಕೊಂಡದ್ದನ್ನು ಯಾರೊಬ್ಬರ ಸಹಮತಕ್ಕೂ ಕಾಯದೆ ಆಚರಣೆಗೆ ತರುವಲ್ಲಿ ಅವರು ಎಂದೂ ಹಿಂಜರಿದವರಲ್ಲ: “ಮನಃಪೂತಂ ಸಮಾಚರೇತ್.”

ನಾನೊಮ್ಮೆ ಅವರನ್ನು ಕೇಳಿದ್ದೆ, “ಸಕಾರಣವಾಗಿಯೇ ನಮಗೆ ಕೋಪ ಬಂದಾಗ ಏನು ಮಾಡಬೇಕು?” ಎಂದು. ಆಗ ಅವರು ಹೇಳಿದ್ದರು: “ನಾನು ಹತ್ತು ಪ್ರಾಣಾಯಾಮ ಮಾಡುತ್ತೇನೆ, ಇಪ್ಪತ್ತನಾಲ್ಕು ಪ್ರಣವ ಹೇಳಿಕೊಳ್ಳುತ್ತೇನೆ. ಆ ಹೊತ್ತಿಗೆ ಕೋಪ ಇಳಿದು ಕಾರಣ ಮಾತ್ರ ಉಳಿದಿರುತ್ತದೆ. ಅನಂತರ ಅದನ್ನು ತಕ್ಕಂತೆ ನಿರ್ವಹಿಸಿದರೆ ಸಾಕು.” ಹೀಗೆ ಓಂಕಾರವು ಶೇಷಣ್ಣನವರ ಜೀವನದಲ್ಲಿ ಅದೆಷ್ಟೋ ರೀತಿ ಪ್ರಭಾವಕಾರಿಯಾಗಿತ್ತು. ಅವರ ಪೌತ್ರನಿಗೆ ಪ್ರಣವ ಎಂದು ಹೆಸರಿಟ್ಟಿದ್ದು ಆಕಸ್ಮಿಕವಲ್ಲ.

ಇಂಥದ್ದೇ ಮತ್ತೊಂದು ಸಂಗತಿ ನೆನಪಾಗುತ್ತದೆ. ಅನುದಿನದ ಬ್ರಹ್ಮಯಜ್ಞದ ಅಂಗವಾಗಿ ನಾವೆಲ್ಲ ಮಾಡುವ ದೇವ-ಋಷಿ-ಪಿತೃತರ್ಪಣದ ವಿಷಯದಲ್ಲಿಯೂ ಶೇಷಣ್ಣನವರ ಚಿಕಿತ್ಸಕದೃಷ್ಟಿ ಹಾಯ್ದಿತ್ತು. ದೇವತೆಗಳಿಗೆ ಒಂದು ತರ್ಪಣ, ಋಷಿಗಳಿಗೆ ಎರಡು ತರ್ಪಣ ಮತ್ತು ಪಿತೃಗಳಿಗೆ ಮೂರು ತರ್ಪಣ ಎಂಬ ವಿಧಿ ಪ್ರಸಿದ್ಧವಷ್ಟೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಯೋಗಪುಸ್ತಕಗಳು ಮುದ್ರಣದ ಸ್ಥಳವನ್ನು ಉಳಿಸಲೆಂದೋ ಅಚ್ಚಿನ ಮೊಳೆಗಳನ್ನು ಮಿಗಿಸಲೆಂದೋ ಅಥವಾ ಮತ್ತಾವ ಆಲಸ್ಯದಿಂದಲೋ ಪ್ರತಿಯೊಂದು ಬಾರಿಯೂ ತರ್ಪಣವನ್ನು ಅಚ್ಚಿಡುವಾಗ ಪೂರ್ಣಪಾಠವನ್ನು ಕೊಡದೆ (ಉದಾಹರಣೆಗೆ: ಸೋಮಂ ಕಾಂಡರ್ಷಿಂ ತರ್ಪಯಾಮಿ, ಸೋಮಂ ಕಾಂಡರ್ಷಿಂ ತರ್ಪಯಾಮಿ; ಅಗ್ನಿಂ ಕವ್ಯವಾಹನಂ ತರ್ಪಯಾಮಿ, ಅಗ್ನಿಂ ಕವ್ಯವಾಹನಂ ತರ್ಪಯಾಮಿ, ಅಗ್ನಿಂ ಕವ್ಯವಾಹನಂ ತರ್ಪಯಾಮಿ) ಸಂಕ್ಷೇಪಿಸುವುದುಂಟು (ಉದಾಹರಣೆಗೆ: ಸೋಮಂ ಕಾಂಡರ್ಷಿಂ ತರ್ಪಯಾಮಿ ತರ್ಪಯಾಮಿ ... ಅಗ್ನಿಂ ಕವ್ಯವಾಹನಂ ತರ್ಪಯಾಮಿ ತರ್ಪಯಾಮಿ ತರ್ಪಯಾಮಿ). ಇದನ್ನೇ ನಚ್ಚಿಕೊಂಡು ಅದೆಷ್ಟೋ ಮಂದಿ ಲೌಕಿಕರೂ ವೈದಿಕರೂ ತಮ್ಮ ನಿತ್ಯಕರ್ಮಗಳನ್ನು ಸಾಗಿಸುವುದುಂಟು. ಇದು ಕರ್ತರಿಗೂ ಅನುಕೂಲಕರವಷ್ಟೆ—ಸೂಕ್ಷ್ಮದಲ್ಲಿ ಮೋಕ್ಷ! ಆದರೆ ಶೇಷಣ್ಣನವರು ಇಂಥ ಅಶಾಸ್ತ್ರೀಯಸಂಕ್ಷೇಪಗಳನ್ನು ಒಪ್ಪುತ್ತಿರಲಿಲ್ಲ. ಅವರು ಇದನ್ನೆಲ್ಲ ಪೂರ್ತಿಯಾಗಿ ಹೇಳಬೇಕಲ್ಲದೆ ಅರೆಬರೆಯಾಗಿ ಹೇಳುವ ಮೈಗಳ್ಳತನ ಕೂಡದೆಂದು ಮತ್ತೆಮತ್ತೆ ಎಚ್ಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಭಾವಪೂರ್ಣವಾದ ಅನುವಚನವೂ ಸ್ಮರಣೀಯ: “ನಮಗಿಷ್ಟೆಲ್ಲ ತಿಳಿವನ್ನು ಕೊಟ್ಟಿರುವ ಋಷಿಗಳಿಗೂ ನಮ್ಮ ಅಸ್ತಿತ್ವಕ್ಕೇ ಕಾರಣರಾದ ಪಿತೃಗಳಿಗೂ ಬಾಯ್ತುಂಬ ಹೆಸರು ಹೇಳಿ ತರ್ಪಣ ಕೊಡುವುದಕ್ಕೂ ಸೋಮಾರಿತನವಾದರೆ ಹೇಗಪ್ಪ!” ಇಲ್ಲೆಲ್ಲ ಅವರ ಶುಷ್ಕಸಂಪ್ರದಾಯಶ್ರದ್ಧೆಗಿಂತ ಮಿಗಿಲಾದದ್ದು ಭಾವಾರ್ದ್ರವಾದ ಕೃತಜ್ಞತೆಯೆಂದು ನನ್ನ ಅನಿಸಿಕೆ.

ಶೇಷಣ್ಣನವರಿಗೆ ಸಾವನ್ನು ಕುರಿತು ಭೀತಿಯಿರಲಿಲ್ಲ, ಬದುಕಿನ ಬಗೆಗೆ ಮೋಹವಿರಲಿಲ್ಲ. ಆದರೆ ನೆಮ್ಮದಿಯಾದ ಸಾವನ್ನು ಸ್ವಾಗತಿಸುವಲ್ಲಿ ತುಂಬ ಕುತೂಹಲವಿದ್ದಿತು. ಪ್ರಾಯಶಃ ಈ ಕಾರಣದಿಂದಲೇ ಇರಬೇಕು, ಅವರು ತಮಗೆ ಎಪ್ಪತ್ತೈದು ವರ್ಷಗಳಾದ ಬಳಿಕ ಆರೇಳು ಬಾರಿ ದೈವಜ್ಞರನ್ನು ತಮ್ಮ ಸಾವಿನ ಹೊತ್ತು ಏನಿರಬಹುದೆಂದು ಪ್ರಶ್ನಿಸಿದ್ದರಂತೆ. ದುರ್ದೈವದಿಂದ (ಸುದೈವವೆಂದೇ ಹೇಳಬೇಕು!) ಒಮ್ಮೆಯೂ ಆ ಸಾವಿನ ಗಳಿಗೆ ಬರಲಿಲ್ಲ. ಪಾಪ, ಅವರು ಕಾಲನ ಕರೆಯನ್ನು ಕಾದದ್ದೇ ಬಂತು. ಈ ಸಂಗತಿ ಶ್ರೌತಿಗಳ ಆತ್ಮೀಯಶಿಷ್ಯರ ವಲಯದಲ್ಲಿ ಒಂದು ಲಘುವಿನೋದದ ವಸ್ತುವಾಗಿತ್ತು. “ಅಂತೂ ನಮ್ಮ ಗುರುಗಳು ಮೃತ್ಯುವಿಗೇ ಆರು ಬಾರಿ ಚಳ್ಳೇಹಣ್ಣು ತಿನ್ನಿಸಿದರು!” ಎಂದು ಆಗೀಗ ಶ್ರೀವತ್ಸ ಮೊದಲಾದವರು ಹೇಳಿ ಹಿಗ್ಗುತ್ತಿದ್ದರು. ಫಲಜ್ಯೊÃತಿಷದ ಸಾಫಲ್ಯ-ವೈಫಲ್ಯಗಳ ಬಗೆಗೆ ಇದೂ ಒಂದು ದಿಕ್ಸೂಚಿಯಾದೀತು. 

*       *       *

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.