ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ--ಸಾಮವೇದಸೇವೆ

This article is part 2 of 4 in the series Vedamurti Sri Sheshanna Shrauti

ನಾನು ಊಹಿಸುವಂತೆ ಅವರ ಮನಃಸಿದ್ಧತೆ ಬಹುಕಾಲದ ಮುನ್ನವೇ ಆಗಿತ್ತಾದರೂ ವ್ಯಾಸಂಗಸಿದ್ಧತೆಗೆ ಹೆಚ್ಚಿನ ಅನುಕೂಲ ಬಂದದ್ದು ನಿವೃತ್ತಿಯ ಬಳಿಕ. ದಿಟವೇ, ಅವರು ನಿವೃತ್ತರಾದಾಗ ಮಗಳ ಮದುವೆಯ ಬಾಧ್ಯತೆ ಉಳಿದಿತ್ತು, ಮಗನ ವಿದ್ಯಾಭ್ಯಾಸ ಪೂರ್ಣವಾಗಬೇಕಿತ್ತು. ಇದಕ್ಕಾಗಿಯೇ ಶೇಷಣ್ಣನವರು ನಿವೃತ್ತಿಯ ಬಳಿಕವೂ ಕೆಲವು ಕಾಲ ದುಡಿಯಬೇಕಾಗಿ ಬಂತು. ಈ ಎಲ್ಲ ಬಾಧ್ಯತೆಗಳು ತೀರಿದ ಬಳಿಕ ಹೆಂಡತಿ-ಮಕ್ಕಳನ್ನು ಕೂಡಿಸಿಕೊಂಡು ಕೇಳಿದರಂತೆ:

“ನಾನು ತಿಳಿದ ಮಟ್ಟಿಗೆ ಮನೆಯ ಬಾಧ್ಯತೆಯನ್ನು ನೆರವೇರಿಸಿದ್ದೇನೆ. ಕೈಗೆ ಬರುವ ನಿವೃತ್ತಿವೇತನ ಮನೆವಾರ್ತೆಗೆ ಸಾಕು. ಪಾರ್ಥನೂ ಅವನ ಕಾಲಿನ ಮೇಲೆ ನಿಂತಿದ್ದಾನೆ. ನಿಮಗೆಲ್ಲರಿಗೂ ಒಪ್ಪಿಗೆಯಿದ್ದರೆ ನಾನು ಇನ್ನುಮೇಲಾದರೂ ನನ್ನಿಷ್ಟದ ಕೆಲಸಗಳಿಗೆ ಬದುಕನ್ನು ಮೀಸಲಿಡುತ್ತೇನೆ. ಇದರಿಂದ ನಿಮಗಾರಿಗೂ ತೊಂದರೆ ಇಲ್ಲ ತಾನೆ? ಅಥವಾ ಮನೆಯನ್ನು ನಡಸಲು ನನ್ನ ದುಡಿಮೆ ಇನ್ನೂ ಬೇಕಾಗಿದ್ದಲ್ಲಿ ನಿಸ್ಸಂಕೋಚವಾಗಿ ತಿಳಿಸಿ” ಎಂದು.

ಇದನ್ನು ಕೇಳಿದೊಡನೆ, “ನೀವು ಈವರೆಗೆ ದುಡಿದದ್ದೇ ಸಾಕು, ಇನ್ನುಮುಂದೆ ನಿಮ್ಮ ಇಷ್ಟದ ಹಾದಿಯಲ್ಲಿ ನೀವು ನಿರಾತಂಕವಾಗಿ ಸಾಗಿ” ಎಂದು ಮನೆಯವರೆಲ್ಲ ಏಕಕಂಠದಿಂದ ಒತ್ತಾಸೆ ನೀಡಿದರಂತೆ. ಈ ಕೆಲವು ವಿವರಗಳನ್ನು ನನಗೆ ಶೇಷಣ್ಣನವರೇ ತಿಳಿಸಿದ್ದರು.

ಅಲ್ಲವೇ ಮತ್ತೆ, ಸರ್ವೇಷಾಮ್ ಅವಿರೋಧೇನ ಬ್ರಹ್ಮಕರ್ಮ.” ಬ್ರಹ್ಮಕ್ಕೆ ಸಂಬಂಧಿಸಿದ ಕೆಲಸವನ್ನು ವ್ಯಕ್ತಿ, ಕುಟುಂಬ, ಸಮಾಜಗಳ ಸಹಮತದಿಂದ ಸಾಮರಸ್ಯದೊಡನೆ ಸಾಗಿಸಬೇಕು; ಇಲ್ಲಿ ವಿರೋಧ-ಅತಿವಾದಗಳು ಸಲ್ಲವು. ಹೀಗೆ ಅವರ ವ್ಯಾಸಂಗವ್ರತÀ ಏಕದೀಕ್ಷೆಯಿಂದ ಸಾಗಿತು. ನಾನು ಶೇಷಣ್ಣನವರನ್ನು ಕಂಡದ್ದು ಇಂಥ ಪರಿಪಾಕದ ಹಂತದಲ್ಲಿ.

*       *       *

‘ಸಂಧ್ಯಾದರ್ಶನ’ದ ರಚನೆಯ ಬಳಿಕ ನಾನು ಶೇಷಣ್ಣಶ್ರೌತಿಗಳ ಬಳಿ ಕೆಲವು ಕಾಲ ಸಾಮವೇದಪಾಠಕ್ಕಾಗಿ ಹೋಗುತ್ತಿದ್ದೆ. ಪ್ರತಿದಿನ ಮುಂಜಾನೆ ಸುಮಾರು ಹತ್ತು ಘಂಟೆಯ ಹೊತ್ತಿಗೆ ಅವರ ಮನೆಗೆ ನಡೆದುಕೊಂಡೇ ಹೋಗಿ ಅರ್ಧ-ಮುಕ್ಕಾಲು ಘಂಟೆಗಳ ಕಾಲ ಪಾಠ ಹೇಳಿಸಿಕೊಂಡು ಮರಳುತ್ತಿದ್ದೆ. ಅವರು ನನಗಾಗಿ ತುಂಬ ಉದಾರತೆಯಿಂದ ಪಾಠ ಹೇಳಿದರು. ವಿಶೇಷವಿಷ್ಟೆ: ನಾನು ಮೊದಲೇ ಅವರಿಗೆ ನಿವೇದಿಸಿಕೊಂಡಿದ್ದೆ, “ನನ್ನ ಸಾಮವೇದಾಸಕ್ತಿ ಇಡಿಯ ವೇದವನ್ನು ಕಲಿಯುವಷ್ಟು ದೃಢವಲ್ಲ, ಅಷ್ಟು ತಾಳ್ಮೆಯದೂ ಅಲ್ಲ. ಕೇವಲ ಕೆಲವೊಂದು ಕಾಲೋಚಿತಸಾಮಗಳ ಕಲಿಕೆ ಹಾಗೂ ಸಾಮಗಾನದ ಸಾಮಾನ್ಯಕ್ರಮವೇನುಂಟು, ಅದರ ಸ್ವಾರಸ್ಯಗಳನ್ನು ಚಿಕಿತ್ಸಕವಾದ—ಆದರೆ ವೇದಭಾವಕ್ಕೆ ಧಕ್ಕೆಯಾಗದ—ರೀತಿಯಲ್ಲಿ ತಿಳಿಯುವ ಮಾತ್ರದ್ದು. ಮುಖ್ಯವಾಗಿ ಸಾಮವೇದಕ್ಕೂ ಸಂಗೀತಕ್ಕೂ ಇರುವ ಸಂಬಂಧ ಎಂಥದ್ದೆಂಬುದನ್ನು ತಿಳಿಯಲು ಸಾಧ್ಯವಾಗುವ ಮಟ್ಟಿಗೆ ಸಾಮಗಾನದ ವೈವಿಧ್ಯಗಳನ್ನು ಕಲಿಯುವ ಆಶೆ ನನ್ನದು” ಎಂದು.

ಹೀಗಿದ್ದರೂ ಅವರು ಬೇಸರಪಡದೆ ನನ್ನ ಕುತೂಹಲ ತಣಿಯುವಂತೆ, ಪ್ರಶ್ನೆಗಳಿಗೆ ಸಮಾಧಾನವಾಗುವಂತೆ ಪಾಠ ಹೇಳಿದರು. ಅಷ್ಟೇ ಅಲ್ಲ, ನನ್ನ ಮೂಲಕ ಅವರಿಗೂ ಸಾಮ ಮತ್ತು ಸಂಗೀತಗಳ ಹುಚ್ಚು ಹತ್ತಿತು! ಈ ನಿಟ್ಟಿನಲ್ಲಿ ಅವರ ಅಣ್ಣನ ಮಗ ಕಡಬ ಸುಬ್ರಹ್ಮಣ್ಯ ಅವರನ್ನೂ ಮತ್ತೊಬ್ಬ ಬಂಧುಗಳಾದ ವಿದುಷಿ ನಳಿನಾ ಮೋಹನ್ ಅವರನ್ನೂ ಸಾಕಷ್ಟು ಅಭ್ಯರ್ಥಿಸಿದ್ದರು ಕೂಡ. ಇವರಿಬ್ಬರೂ ಸಂಗೀತವನ್ನು ಬಲ್ಲವರು. ಸುಬ್ರಹ್ಮಣ್ಯ ಅವರು ಸಾಮವೇದವನ್ನು ಕಲಿತವರಲ್ಲದೆ ಗಮಕವನ್ನೂ ಬಲ್ಲವರು. ನಳಿನಾ ಮೋಹನ್ ಅವರಾದರೋ ಸಾಮವೇದಿಗಳ ಕುಟುಂಬಕ್ಕೆ ಸೇರಿದವರು; ವಿಖ್ಯಾತ ವಯೋಲಿನ್ ವಾದಕಿ. ಆದರೂ ಅಂದುಕೊಂಡಂತೆ ಮುಂದುವರಿಯಲು ಸಾಧ್ಯವಾಗÀಲಿಲ್ಲ. ಶೇಷಣ್ಣನವರೇನೋ ಪುಣೆ, ಚೆನ್ನೈ ಮುಂತಾದ ವಿಶ್ವವಿದ್ಯಾಲಯಗಳಿಂದ ಈ ದಿಕ್ಕಿನಲ್ಲಿ ಹೊರಬಂದ ಸಂಶೋಧನಲೇಖನಗಳನ್ನೂ ಪ್ರಬಂಧಗಳನ್ನೂ ಆಸ್ಥೆಯಿಂದ ಸಂಗ್ರಹಿಸಿಟ್ಟರು. ಏನು ಮಾಡುವುದು, ಎಲ್ಲರ ಅನ್ಯಾನ್ಯವ್ಯಾಪೃತಿಗಳ ಕಾರಣ ಪರಿಶ್ರಮವು ಒಂದೆಡೆ ಕೇಂದ್ರೀಕೃತವಾಗಲಿಲ್ಲ.

ಈ ವಿಷಯ ಹಾಗಿರಲಿ. ಶೇಷಣ್ಣನವರ ಪಾಠಕ್ರಮಕ್ಕೇ ಮತ್ತೆ ಮರಳುವುದಾದರೆ, ಅವರು ಪಾಠಕ್ಕೆ ಬಂದ ಪ್ರತಿಯೊಬ್ಬರನ್ನೂ “ಸಂಧ್ಯಾವಂದನೆ ಮಾಡಿಕೊಂಡು ಬಂದಿರಾ?” “ಬ್ರಹ್ಮಯಜ್ಞವಾಯಿತೇ?” ಎಂದು ಪ್ರಶ್ನಿಸಿಯೇ ಮುಂದುವರಿಯುತ್ತಿದ್ದರು. ಗೃಹಸ್ಥರಿಗೆ “ದೇವತಾರ್ಚನೆ ಇಟ್ಟುಕೊಂಡಿದ್ದೀರಾ?” ಎಂಬ ವಿಶೇಷಪ್ರಶ್ನೆಯಾದರೆ, ಬ್ರಹ್ಮಚಾರಿಗಳಿಗೆ “ಸಮಿದಾಧಾನವನ್ನೋ ಕನಿಷ್ಠಪಕ್ಷ ಆ ಮಂತ್ರಗಳ ಪಾರಾಯಣ ವನ್ನೋ ಮಾಡುತ್ತಿದ್ದೀರಾ?” ಎಂಬ ವಿಚಾರಣೆ ಸಲ್ಲುತ್ತಿತ್ತು. ವಿದ್ಯಾರ್ಥಿಗಳು ಅವರವರ ಮತಲಾಂಛನ ಗಳನ್ನು ಧರಿಸಿ ಬರಬೇಕಿತ್ತು. ಆದರೆ ಶೇಷಣ್ಣನವರಿಗೆ ಇವಾವುದರಲ್ಲಿಯೂ ಆಗ್ರಹವಿರಲಿಲ್ಲ. ಅವರಾದರೂ ಅಷ್ಟೆ, ಮೊಹರಮ್ಮಿನ ಹುಲಿವೇಷದಂಥ ಆಡಂಬರದ ಭಸ್ಮಧಾರಣವನ್ನು ಒಪ್ಪುತ್ತಿರಲಿಲ್ಲ. ಅದೇನಿದ್ದರೂ ಅವರ ಸರಳವಾದ ಖಾದಿಯ ಬಟ್ಟೆಯಷ್ಟೇ ನಮ್ರ, ಅಂತರಂಗನಿಷ್ಠ. ವಿದ್ಯಾರ್ಥಿಗಳು ಪ್ರತಿಯೊಂದು ಪಾಠವನ್ನೂ ಆವರ್ತಿಸಿಕೊಂಡು ಬರಬೇಕಿತ್ತು. ಆದರೆ ನನಗೆಂದೂ ಬಾಯಿಪಾಠದ ಕಟ್ಟಲೆ ಮಾಡಿರಲಿಲ್ಲ. ಇದು ಅವರ ದೊಡ್ಡತನ. ಶಿಷ್ಯರು ಪಾಠಕ್ಕೆ ಬರುವ ಮುನ್ನವೇ ತಮಗೂ ಅವರಿಗೂ ಚಾಪೆ ಹಾಸಿ, ಕುಡಿಯುವ ನೀರಿಟ್ಟು ವ್ಯವಸ್ಥೆ ಮಾಡಿರುತ್ತಿದ್ದರು. ಯಾವುದೇ ಕಾರಣಕ್ಕಾಗಲಿ ಪಾಠಕ್ಕಾಗಿ ಬಂದ ಶಿಷ್ಯರು ಕಾಯಬಾರದೆಂಬುದು ಅವರ ವ್ರತವಾಗಿತ್ತು. ಅಕಸ್ಮಾತ್ ಕೈಮೀರಿ ಹೀಗಾದಲ್ಲಿ ಅವರ ಪೇಚಾಟ ಹೇಳತೀರದು.

ವೇದಾಭ್ಯಾಸಕ್ಕೆಂದು ಬಂದ ಯಾರನ್ನೂ ಅವರು ನಿರಾಕರಿಸಿದಂತಿಲ್ಲ. ಎಷ್ಟೋ ಜನರಿಗೆ ಇಳಿವಯಸ್ಸಿನಲ್ಲಿ ವೇದಾಭ್ಯಾಸದ ಆಶೆ ಕೆರಳುತ್ತದೆ. ಅಂಥವರಿಗೆ ಸ್ವರ ನಿಲ್ಲುವುದು ಹೋಗಲಿ, ಉಚ್ಚಾರಣೆ ಕೂಡ ಕಷ್ಟವಾಗಿರುತ್ತದೆ. ಇಂಥವರನ್ನೂ ಶೇಷಣ್ಣನವರು ತುಂಬ ಸಹಾನುಭೂತಿಯಿಂದ ಕಾಣುತ್ತಿದ್ದರು. “ಈಗಲಾದರೂ ಅವರಿಗೆ ವೇದಾಸಕ್ತಿ ಬಂದಿತಲ್ಲಾ, ಅದು ದೊಡ್ಡದು. ಏನೋ ಪಾಪ ನಾಲ್ಕು ವೇದಾಕ್ಷರ ಕಲಿತರೆ ಅವರಿಗೊಂದು ಸಮಾಧಾನ ಸಿಗುತ್ತದೆ. ನಾವೇಕೆ ಅವರಿಗೆ ಆ ನೆಮ್ಮದಿಯನ್ನು ಕೊಡಬಾರದು?” ಎಂಬುದು ಅವರ ನಿಲವು. ವೇದಪಾಠದಲ್ಲಿ ಸ್ತ್ರೀ-ಪುರುಷಭೇದವನ್ನವರು ಇಟ್ಟುಕೊಂಡಿರಲಿಲ್ಲ; ಉಪನೀತ-ಅನುಪನೀತ ಎಂಬ ಆಗ್ರಹವೂ ಅವರಿಗೆ ಇದ್ದಂತೆ ತೋರದು. ತಮ್ಮ ಸೊಸೆಯೂ ಸೇರಿದಂತೆ ಹಲವರು ಹೆಣ್ಣುಮಕ್ಕಳಿಗೆ ಸಾಮವೇದವನ್ನು ಕಲಿಸಿದ್ದರು. ಆದರೆ ಪಾಠಪರಿಷ್ಕಾರದಲ್ಲಿ ಯಾವುದೇ ವಿನಾಯಿತಿ ಇರಲಿಲ್ಲ. ಎಲ್ಲ ಶಿಸ್ತಿನಂತೆಯೇ ಸಾಗಬೇಕು. ಶೇಷಣ್ಣನವರದೇನಿದ್ದರೂ ಅಬ್ಬರವಿಲ್ಲದ ಕ್ರಾಂತಿ. ಹೀಗಾಗಿಯೇ ಇಂದು ಅವರ ಬಂಧುವರ್ಗದಲ್ಲಿ, ಪರಿಚಿತರಲ್ಲಿ ಅನೇಕರು ಸಾಮಗರಾಗಿದ್ದಾರೆ. ಅದೆಷ್ಟೋ ಮಂದಿ ಅನ್ಯಶಾಖೆಗಳವರು ಕೂಡ ಇವರ ವ್ಯಕ್ತಿಮಾಹಾತ್ಮ್ಯದ ಕಾರಣ ಸ್ವಲ್ಪವಾದರೂ ಸಾಮವೇದವನ್ನು ಅಧ್ಯಯನ ಮಾಡಿದ್ದಾರೆ.

ಶೇಷಣ್ಣನವರು ಸುಮಾರು ಹನ್ನೆರಡು ವಿದ್ಯಾರ್ಥಿಗಳಿಗೆ ಋಕ್-ಪದ-ಗಾನ-ಭಾಷ್ಯಗಳ ಸಮೇತ ಸಂಪೂರ್ಣಸಂಹಿತೆಯ ಪಾಠ ಹೇಳಿದ್ದಾರೆ. ಮೂವತ್ತಾರು ಮಂದಿಗೆ ಸಂಕ್ಷಿಪ್ತವಾದ ಅಧ್ಯಯನ ಮಾಡಿಸಿದ್ದಾರೆ. ಆದರೆ ವೇದಾರ್ಥವನ್ನು ತಿಳಿಸದೆ, ಸದಾಚಾರವನ್ನು ಬೋಧಿಸದೆ ಯಾರಿಗೂ ಪಾಠ ಹೇಳಿದವರಲ್ಲ. ಇದು ಅವರ ವೇದಾಧ್ಯಾಪನದ ವೈಶಿಷ್ಟ್ಯವೂ ಹೌದು.

*       *       *

ಹೀಗೆ ಆರಂಭವಾದ ಸಾಮವೇದಪ್ರಸಾರಯಾಗ ಮುಂದೆ ಗ್ರಂಥರಚನೆಯ ಮೂಲಕವೂ ಬೆಳೆಯಿತು. ಇದಕ್ಕಾಗಿ ತಮ್ಮ ಮನೆಯಲ್ಲಿಯೇ ‘ದ್ರಾಹ್ಯಾಯಣಪ್ರತಿಷ್ಠಾನ’ ಎಂಬ ಸಂಸ್ಥೆಯನ್ನೂ ಕಟ್ಟಿಕೊಂಡರು. ಈ ವಿಷಯದಲ್ಲಿ ಅವರಿಗೆ ನೆರವಾದ ಸರ್ವಶ್ರೀ ಗೌರೀಪತಿ, ವೆಂಕಟರಾಮ ಪುರಾಣಿಕ, ನರಸಿಂಹಸ್ವಾಮಿ, ರಾಮಸ್ವಾಮಿ, ನಾರಾಯಣಶಾಸ್ತ್ರಿ ಮುಂತಾದ ಹಲವರು ಸ್ಮರಣೀಯರು. ರಾಮಸ್ವಾಮಿಯವರು ಇವರಿಗೆ ಸ್ವತಃ ಅಣ್ಣನ ಮಗ. ಪ್ರಯೋಗವೂ ಸೇರಿದಂತೆ ಎಲ್ಲವನ್ನೂ ಬಲ್ಲವರು. ನಾರಾಯಣಶಾಸ್ತ್ರಿಗಳು ಇವರ ಭಾವಮೈದುನ. ಅವರು ಸ್ವತಃ ಸಾಮವೇದಿಗಳಲ್ಲವಾದರೂ ಪೂರ್ವಾಪರಕರ್ಮಗಳಲ್ಲಿ ನುರಿತು ಅಸಂಖ್ಯ ಜನರಿಗೆ ವೇದಪಾಠ ಮಾಡಿದವರು. ಗೌರೀಪತಿಗಳ ಗಾನಕ್ರಮದ ಗಟ್ಟಿತನವನ್ನು ಶೇಷಣ್ಣನವರು ಮೆಚ್ಚಿಕೊಂಡಿದ್ದರು.

ಅವರು ತಮ್ಮ ಸಮವಯಸ್ಕರನ್ನೂ ನಿಕಟಸಮವಯಸ್ಕರನ್ನೂ ಅವರವರ ಗುಣವಿಶೇಷಗಳಿಗಾಗಿ ಮೆಚ್ಚಿಕೊಂಡದ್ದಲ್ಲದೆ ತಮಗಿಂತ ಎಷ್ಟೋ ವರ್ಷ ಕಿರಿಯರಾದ ವಿದ್ಯಾರ್ಥಿಗಳನ್ನೂ ಆದರಿಸಿದ್ದರು. ನನಗೆ ತತ್ಕ್ಷಣ ನೆನಪಾಗುವುದು ಬಿ. ಶ್ರೀವತ್ಸ ಮತ್ತು ಕೇದಾರನಾಥ ಪಾಂಡೇಯ. ಏಕೆಂದರೆ, ಇವರಿಬ್ಬರು ನನ್ನ ಬಳಕೆಯಲ್ಲಿಯೂ ಇರುವವರು. ಶ್ರೀವತ್ಸನ ಶ್ರದ್ಧೆ, ಬುದ್ಧಿನೈಶಿತ್ಯಗಳನ್ನು ಮತ್ತೆ ಮತ್ತೆ ಹೊಗಳುತ್ತಿದ್ದುದಲ್ಲದೆ ಅವನು ಶೀಘ್ರವಾಗಿ ಎಲ್ಲವನ್ನೂ ಕಲಿತ ಕೌಶಲವನ್ನು ಅಭಿನಂದಿಸಿದ್ದರು. ಕೇದಾರನಾಥನ ಸೌಮ್ಯತೆ, ಆರ್ಜವ ಮತ್ತು ವಿನಯೋನ್ನತಿಗಳನ್ನು ಗಾಢವಾಗಿ ಮನಸ್ಸಿಗೆ ತಂದುಕೊಂಡಿದ್ದರು. ಇಷ್ಟು ಮಾತ್ರವಲ್ಲ, ಯಾವ ಶಿಷ್ಯನನ್ನೂ ಅವರು ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ತೀರಾ ಬಳಕೆಯಾಗಿದ್ದ ಬಂಧು ವರ್ಗದ ಬಾಲಕರನ್ನು, ಒಬ್ಬಿಬ್ಬರು ಚಿಕ್ಕವಯಸ್ಸಿನ ಪ್ರಿಯಶಿಷ್ಯರನ್ನು ಬಿಟ್ಟರೆ ನನ್ನನ್ನೂ ಸೇರಿದಂತೆ ಯಾರನ್ನೂ ಏಕವಚನದಲ್ಲಿ ಸಂಬೋಧಿಸುತ್ತಿರಲಿಲ್ಲ. ಹಾಗೆಂದು ಸಲುಗೆ-ಸ್ನೇಹಗಳಿಗೆ ಯಾವುದೇ ಕೊರತೆ ಇರಲಿಲ್ಲ.

ಈ ಸಂದರ್ಭದಲ್ಲಿ ನನಗೆ ಮತ್ತೊಬ್ಬ ಗೆಳೆಯ ಅಮರನಾರಾಯಣನ ನೆನಪಾಗುತ್ತದೆ. ವಸ್ತುತಃ ‘ಸಂಧ್ಯಾದರ್ಶನ’ದ ರಚನಾವಧಿಯಲ್ಲಿ ಇವನೂ ಕ್ಯಾಲನೂರು ರವೀಂದ್ರನೂ ನನ್ನೊಡನೆ ವಿದ್ವಾಂಸರ ಸಂಘಟನೆಗಾಗಿ ಹೆಚ್ಚು ದುಡಿದವರು. ಅಮರನಾರಾಯಣನಿಂದಲೇ ಶೇಷಣ್ಣನವರ ಹೆಚ್ಚಿನ ಪರಿಚಯವೂ ನನಗೆ ದೊರಕಿತು. ನನಗಿಂತ ಸಾಕಷ್ಟು ಚಿಕ್ಕವನಾದ ಅಮರ ಶೇಷಣ್ಣನವರಲ್ಲಿ ತುಂಬ ಸಲುಗೆಯಿಂದ ವಿನೋದ ಮಾಡುತ್ತಿದ್ದ. ಇದು ನನಗೆ ಅವರ ಹೃದಯವೈಶಾಲ್ಯವನ್ನು ಸ್ಪಷ್ಟಪಡಿಸಿತ್ತಲ್ಲದೆ ಹೆಚ್ಚಿನ ಬಳಕೆಗೆ ಒದಗಿಬಂತು. ಅಮರನ ವೇದಶ್ರದ್ಧೆ, ಸಂಪ್ರದಾಯಪ್ರೀತಿ ಮತ್ತು ವ್ರತನಿಷ್ಠೆಗಳನ್ನು ಮನಸಾರೆ ಮೆಚ್ಚಿದ ಕಾರಣ ಶೇಷಣ್ಣನವರಿಗೆ ಆತನ ಅಕ್ಕರೆಯ ಜಬರದಸ್ತು ಕೂಡ ಇಷ್ಟವಾಗಿದ್ದುದರಲ್ಲಿ ಅಚ್ಚರಿಯಿಲ್ಲ.  

‘ಸಾಮವೇದ ಪರಿಚಯ’ ಎಂಬ ಕೃತಿ ಪ್ರತಿಷ್ಠಾನದ ಮೊದಲ ಪ್ರಕಾಶನವಾಗಿ ಹೊರಬಂದಿತು. ಹೆಸರಿಗೆ ಇದು ಸಂಸ್ಥೆಯ ಸದಸ್ಯರ ಸಮಷ್ಟಿಫಲವಾದರೂ ಇದಕ್ಕೆ ಬೇಕಾದ ಸಮಸ್ತವನ್ನೂ ಶೇಷಣ್ಣನವರೊಬ್ಬರೇ ಮಾಡಿದ್ದರು. ಆದರೆ ಎಲ್ಲಿಯೂ ತಮ್ಮ ಹೆಸರನ್ನು ಪ್ರಚುರಪಡಿಸಲಿಲ್ಲ. ಇದು ಪ್ರಾಯಶಃ ಪ್ರತಿಷ್ಠಾನದ ಎಲ್ಲ ಪ್ರಕಟನೆಗಳ ವಿಷಯದಲ್ಲಿಯೂ ಸಲ್ಲುವ ಮಾತು. ಇದನ್ನು ಕುರಿತು ನಾನು ಆಗೀಗ ಪ್ರಸ್ತಾವಿಸಿದಾಗ ಅವರು ಹಸನ್ಮುಖದಿಂದ ಹೇಳುತ್ತಿದ್ದುದು ಹೀಗೆ: “ಹತ್ತಾರು ಮಂದಿ ಸೇರಿ ಮಾಡಿದ ಸಂಸ್ಥೆಯ ಮೂಲಕ ಕೃತಿಯೊಂದು ಹೊರಬಂದಾಗ ಅದರಲ್ಲಿ ನನ್ನಂಥ ಯಾವೊಬ್ಬನ ಹೆಸರೂ ಮುಂದಾಗಬಾರದು. ಹೇಗೂ ಸಮಿತಿಯವರ ಹೆಸರುಗಳು ಒಳಗಿದ್ದೇ ಇರುತ್ತವೆ. ಇನ್ನು ನನ್ನದೇಕೆ? ಮುಖ್ಯವಾಗಿ ಒಳ್ಳೆಯ ವಿಷಯ ಜನಕ್ಕೆ ತಿಳಿಯಬೇಕು, ಸಾಮವೇದದ ಪ್ರಸಾರವಾಗಬೇಕು.”

ಇತ್ತೀಚೆಗೆ, ಅಂದರೆ ಶೇಷಣ್ಣಶ್ರೌತಿಗಳು ತೀರಿಕೊಳ್ಳುವ ಮುನ್ನ, ಅವರ ಬಂಧು-ಮಿತ್ರರಲ್ಲಿ ಒಬ್ಬಿಬ್ಬರು ಕೆಲವೊಂದು ಪ್ರಕಟನೆಗಳಿಗಾದರೂ ಅವರ ಹೆಸರನ್ನು ಛಾಪಿಸುವುದು ಉಚಿತವೆಂದಾಗ ಶ್ರೌತಿಗಳು ಖಂಡತುಂಡವಾಗಿ ಪ್ರತಿಭಟಿಸಿದ್ದರಂತೆ: “ಎಲ್ಲಾದರೂ ಉಂಟೇ! ಇದೆಲ್ಲ ತುಂಬ ತಪ್ಪು. ನಮ್ಮ ಋಷಿಗಳು, ಶಾಸ್ತ್ರಪ್ರವರ್ತಕರು ಹೀಗೆಲ್ಲ ತಮ್ಮ ತಮ್ಮ ಗ್ರಂಥಗಳ ಮೇಲೆ ಹೆಸರುಗಳನ್ನು ಛಾಪಿಸಿಕೊಂಡವರೇ? ಇದಾವುದೂ ಬೇಡ, ಇಂಥದ್ದೆಲ್ಲ ಅವೈದಿಕ.”

ಈ ಬಗೆಯ ಪ್ರತಿಷ್ಠಾವಿಮುಖತೆ ಅದೆಷ್ಟರ ಮಟ್ಟಿಗಿತ್ತೆಂದರೆ, ಇವರ ವೇದವ್ಯಾಸಂಗ ಮತ್ತು ಸೇವೆಗಳನ್ನು ಮೆಚ್ಚಿದ ಹಲವು ಮಠಗಳೂ ಸಂಸ್ಥೆಗಳೂ ಸಮ್ಮಾನಿಸಲು ಮುಂದೆಬಂದಾಗ ತಾನು ಅದಕ್ಕೆ ಅರ್ಹನಲ್ಲವೆಂದು ದೂರ ಸರಿದಿದ್ದರು. ತುಂಬ ಒತ್ತಾಯದ ಮೇರೆಗೆ ಸ್ವರ್ಣವಲ್ಲೀಮಠದ ಸಮ್ಮಾನವನ್ನೂ ಭಾರತೀಯವಿದ್ಯಾಭವನದ ಗೌರವವನ್ನೂ ಒಪ್ಪಿಕೊಂಡಿದ್ದರು. ಇದರಲ್ಲಿ ನನ್ನ ಆಗ್ರಹವೇ ಫಲಕಾರಿ ಆದದ್ದು ನನಗೆ ಸಂತಸದ ಸಂಗತಿ.

*       *       *

ಪ್ರತಿಷ್ಠಾನದ ಕೆಲಸ ಆರಂಭವಾದ ಬಳಿಕ ಶೇಷಣ್ಣನವರು ಹೊರಗಿನ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳಲಿಲ್ಲ. ಹಗಲು-ರಾತ್ರಿ ಇದರದೇ ಕೆಲಸ, ಇದರದೇ ಧ್ಯಾನ. ಅವರೊಂದು ರೀತಿಯಲ್ಲಿ ಏಕವ್ಯಕ್ತಿ ಸಂಸ್ಥೆ ಎನ್ನಬೇಕು. ಸಂಶೋಧನೆ, ಆಲೋಚನೆ, ಬರೆಹ—ಇವೆಲ್ಲವನ್ನೂ ಏಕಾಂಗಿಯಾಗಿ ಮಾಡಿದರು. ಹಲಕೆಲವರ ಅಷ್ಟೋ ಇಷ್ಟೋ ನೆರವಿತ್ತು, ಆದರೆ ಅದೆಲ್ಲ ಗೌಣ. ಜೊತೆಗೆ, ಪ್ರತಿಷ್ಠಾನದ ಹಣಕಾಸಿನ ಬೆಂಬಲಕ್ಕೆ ಹೆಚ್ಚಾಗಿ ಅವರ ಮನೆಯವರೂ ಬಂಧುಗಳೂ ಒತ್ತಾಸೆಯಾಗಿ ನಿಂತರಲ್ಲದೆ ಸಾರ್ವಜನಿಕರ ನೆರವು ಸಿಕ್ಕಲಿಲ್ಲವೆಂಬಷ್ಟು ಕಡಮೆ.

ಅದೊಮ್ಮೆ ಬೆಂಗಳೂರಿನ ಆರ್ಯಸಮಾಜದವರು ತಮ್ಮ ವೇದಾನುವಾದದ ಪ್ರಕಟನೆಗಳೊಳಗೆ ಶೇಷಣ್ಣನವರ ಸಾಮಸಂಹಿತೆಯ ಅನುವಾದ-ವಿವರಣೆಗಳನ್ನು ಸೇರಿಸಿಕೊಳ್ಳಲು ಮುಂದೆಬಂದಿದ್ದರು. ಆದರೆ ಸುಧಾಕರಚತುರ್ವೇದಿಯವರೂ ಸೇರಿದಂತೆ ಅಲ್ಲಿಯ ಹಲವರು ಸದಸ್ಯರು ಸಾಯಣಭಾಷ್ಯವನ್ನು ಸೇರಿಸಿಕೊಳ್ಳಲು ಒಪ್ಪದ ಕಾರಣ ಶೇಷಣ್ಣನವರು ಈ ಯೋಜನೆಯಿಂದ ಹಿಂದೆ ಸರಿದರು. ಅವರಿಗೆ ಸಾಯಣಭಾಷ್ಯದಲ್ಲಿ ನಿರತಿಶಯವಾದ ಗೌರವ. ಇದು ಅರ್ಹವಾದುದರಲ್ಲಿ ಸಂದ ಆರಾಧನೆಯಲ್ಲದೆ ಅಭಿನಿವೇಶವಲ್ಲ. ಇಷ್ಟಾದರೂ ಆರ್ಯಸಮಾಜದ ಸಾಮವೇದಪ್ರಕಟನೆಯ ಕೆಲಸದಲ್ಲಿ ತಮ್ಮ ಕೈಲಾದ ನೆರವನ್ನೆಲ್ಲ ನಿರ್ವಂಚನೆಯಾಗಿ ನೀಡಿದರು. ಎಂದಿನಂತೆ ಹೆಸರಿಲ್ಲದೆ ದುಡಿದರು. ಇದು ನನಗೆ ಸ್ವಲ್ಪ ಬೇಸರ ತಂದಿತು. ಆಗೀಗ ಈ ಕುರಿತು ಪ್ರಸ್ತಾವಿಸಿದಾಗಲೆಲ್ಲ ಶೇಷಣ್ಣನವರು, “ಅವರದೂ ಒಂದು ಕ್ರಮ. ಅದೂ ವೇದಪುರುಷನ ಸೇವೆ. ನಾವು ಯಾಕೆ ಬೇಸರಗೊಳ್ಳಬೇಕು? ನೀವು ಹೇಳುವುದು ಸತ್ಯ, ಆದರೆ ಸತ್ಯಕ್ಕಿಂತ ಕೆಲವೊಮ್ಮೆ ಸೌಜನ್ಯ ದೊಡ್ಡದಾಗುತ್ತದೆ” ಎನ್ನುತ್ತಿದ್ದರು. ಶೇಷಣ್ಣನವರ ಸತ್ತ್ವ ನನ್ನದಾಗಲಿಲ್ಲ.  

ಪ್ರತಿಷ್ಠಾನದ ಕೆಲಸ ಮೊದಲಾಗುತ್ತಿದ್ದಂತೆಯೇ ಅಲ್ಲಿಂದ ಸಾಮವೇದಕ್ಕೆ ಸಂಬಂಧಿಸಿದ ಎಲ್ಲ ಪೂರ್ವಾಪರ ಕರ್ಮಗಳ ಪ್ರಯೋಗಪುಸ್ತಕಗಳು ಪುಂಖಾನುಪುಂಖವಾಗಿ ಪ್ರಕಟಿತವಾದವು. ಪ್ರತಿಯೊಂದು ಗ್ರಂಥವೂ ಸಸ್ವರವಾದ ಮಂತ್ರಭಾಗ, ಭಾಷ್ಯಾನುಸಾರಿಯಾದ ಅರ್ಥ, ಆಯಾ ಪ್ರಯೋಗಗಳ ನೆಲೆ-ಹಿನ್ನೆಲೆ, ದೇಶಾಚಾರಗಳ ವೈವಿಧ್ಯವೇ ಮುಂತಾದ ಎಷ್ಟೋ ಅಂಶಗಳನ್ನು ಒಳಗೊಂಡಿದ್ದಲ್ಲದೆ ವ್ಯಾಪಕವಾದ ಅಧ್ಯಯನಸಾಮಗ್ರಿಯನ್ನು ಕೂಡ ಮೈದುಂಬಿಸಿಕೊಂಡಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ, ಆ ಪ್ರಕಟನೆಗಳೆಲ್ಲ ಹೆಸರಿಗೆ ಪ್ರಯೋಗಪುಸ್ತಕಗಳು, ಆದರೆ ತತ್ತ್ವತಃ ಆಯಾ ಕರ್ಮಕಾಂಡಕ್ಕೆ ಸಂಬಂಧಿಸಿದ ಸಂಕ್ಷಿಪ್ತವಿಶ್ವಕೋಶಗಳು. ಇದಕ್ಕೆ ಸಣ್ಣ ಉದಾಹರಣೆಯೊಂದನ್ನು ಕೊಡಬಹುದು: ಎಲ್ಲರೂ ಬಲ್ಲಂತೆ ಸಂಧ್ಯಾವಂದನೆಯಲ್ಲಿ ದಿಕ್ಕುಗಳಿಗೆ ನಮಸ್ಕಾರ ಸಲ್ಲಿಸುವ ಒಂದು ಅಂಗ ವಾಡಿಕೆಯಲ್ಲಿ ಉಂಟಷ್ಟೆ. ಅದಕ್ಕೆ ಸಂಬಂಧಿಸಿದಂತೆ ಹತ್ತಾರು ಪುಟಗಳ ಟಿಪ್ಪಣಿಯನ್ನು ನಾನಾಮೂಲಗಳಿಂದ ಸಂಗ್ರಹಿಸಿ ಶೇಷಣ್ಣನವರು ಕೊಟ್ಟಿದ್ದಾರೆ. ಹೀಗೆ ಪ್ರತಿಯೊಂದು ಅಂಶವನ್ನೂ ಗಮನಿಸಬಹುದು. ಹೀಗಾಗಿ ಆ ಗ್ರಂಥಗಳು ಕೇವಲ ಸಾಮವೇದಿಗಳಿಗೆ ಮಾತ್ರವಲ್ಲದೆ ಎಲ್ಲ ವೇದಗಳವರಿಗೂ ಉಪಾದೇಯವಾಗಿವೆ; ಭಾರತೀಯ ಸಂಸ್ಕೃತಿಯನ್ನು ತಿಳಿಯಲೆಳಸುವ ಆಸಕ್ತರಿಗೂ ಆಪ್ತವೆನಿಸಿವೆ.

ಸಮಗ್ರವಾದ ಸಾಮವೇದವನ್ನು ಸಭಾಷ್ಯವಾಗಿ ಕನ್ನಡಕ್ಕೆ ತರುವಲ್ಲಿಯೂ ಇದೇ ರೀತಿಯ ಅಚ್ಚುಕಟ್ಟು, ಪರಿಪೂರ್ಣತೆಗಳನ್ನು ಅನುಸರಿಸಿದ್ದಾರೆ. ಸುಮಾರು ಮುನ್ನೂರು ಪುಟಗಳಷ್ಟು ವಿಸ್ತೃತವಾದ ಪೀಠಿಕೆಯಲ್ಲಿ ಅನೇಕ ಮೌಲಿಕವಿಚಾರಗಳನ್ನು ಕ್ರೋಡೀಕರಿಸಿಕೊಟ್ಟಿದ್ದಾರೆ. ಪ್ರತಿಯೊಂದು ಅಂಶಕ್ಕೂ ಆಧಾರಗಳನ್ನು ಅಲ್ಲಲ್ಲಿಯೇ ಕೊಟ್ಟಿರುವುದಲ್ಲದೆ ಮಂತ್ರಗಳೂ ಸೇರಿದಂತೆ ಅನೇಕಾಂಶಗಳಿಗೆ ಅಕಾರಾದಿಪಟ್ಟಿಯನ್ನು ಕೂಡ ನೀಡಿದ್ದಾರೆ. ಋಕ್ಕು, ಪದಪಾಠ, ಗಾನಪ್ರಭೇದಗಳು, ಸಾಯಣಭಾಷ್ಯ, ಪ್ರತಿಪದಾರ್ಥ, ಮಹಾತಾತ್ಪರ್ಯ ಮತ್ತು ಪದ್ಯರೂಪದ ಅನುವಾದ ಎಂಬ ಏಳು ಹಂತಗಳಲ್ಲಿ ಪ್ರತಿಯೊಂದು ಮಂತ್ರವೂ ವಿವೃತವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಕೆಲಸವನ್ನು ಕೈಗೊಂಡಾಗ ಅವರ ಮಗ, ಸೊಸೆ ಹಾಗೂ ಮತ್ತಿತರ ಬಂಧು-ಮಿತ್ರರು ಕಣ್ಣಲ್ಲಿ ಕಣ್ಣಿಟ್ಟು ಸಾವಿರಾರು ಪುಟಗಳನ್ನು ಟಂಕಿಸಿ ಕರಡಚ್ಚು ತಿದ್ದಿದ ಸೇವೆ ಸದಾ ಸ್ಮರಣೀಯ. ತಪ್ಪಿಲ್ಲದ ಮುದ್ರಣ, ಸರಳವೂ ಅರ್ಥಪೂರ್ಣವೂ ಆದ ಮುಖಪುಟ, ಯಾರಿಗೂ ಕೈಗೆಟುಕಬಲ್ಲ ಸುಲಭದ ಬೆಲೆ ಮುಂತಾದ ಮಹತ್ತ್ವಗಳೂ ಈ ಕೃತಿಶ್ರೇಣಿಗುಂಟು. ಇದು ಮೈಸೂರು ಮಹಾರಾಜರು ಪ್ರಾಯೋಜಿಸಿದ ಲೋಕಪ್ರಸಿದ್ಧವಾದ ಋಗ್ವೇದದ ಕನ್ನಡಾನುವಾದವನ್ನು ಹೋಲುವ ಅನನ್ಯಸಾಹಸ. ಇಂಥ ಸಾರಸ್ವತಸವನ ಹೆಚ್ಚಿನ ವಿದ್ಯಾಜಗತ್ತಿಗೆ ತಿಳಿಯದೆ ಹೋದದ್ದು ತುಂಬ ವಿಷಾದನೀಯ. ಏನು ಮಾಡುವುದು, ಯಾವುದಕ್ಕೂ ನಮ್ಮ ನಾಡು-ನುಡಿಗಳು ಕೇಳಿಕೊಂಡು ಬಂದಿರಬೇಕಲ್ಲ?

*       *       *

To be continued,

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.