ಪಾತ್ರ-ಘಟನೆಗಳಿಗೆ ತಕ್ಕಂತೆ ಭಾಷೆ ಬಳಕೆಗೊಂಡಿದೆ. ಅಭಿಜಾತ ಇತಿವೃತ್ತಗಳ ಬಣ್ಣನೆಯೇ ಆದ್ಯಂತ ಇರುವುದರಿಂದ ಅದಕ್ಕೆ ತಕ್ಕಂತೆ ಇಲ್ಲಿಯ ಭಾಷೆ ಶಿಷ್ಟ, ಸುಭಗ ಮತ್ತು ಕಾವ್ಯಾತ್ಮಕವಾಗಿದೆ. ಇನ್ನು ಸನ್ನಿವೇಶ ಅಪೇಕ್ಷಿಸುವಂತೆ ಬೇರೆ ಬಗೆಯ ಮಾತುಗಳೂ ಬಳಕೆಗೆ ಬಂದಿವೆ. ಉದಾಹರಣೆಗೆ ಪಾಂಡುವಿನ ಕಥೆ ಚಿತ್ರಿಸುವ ಅತ್ಯುತ್ಕಟ ಪ್ರಸಂಗದಲ್ಲಿ ಮನಸ್ಸಿನೊಳಗೆ ಅವನಾಡಿಕೊಳ್ಳುವ ಮಾತುಗಳು ಶಿಷ್ಟಾಚಾರದ ಸೋಗು ಕಳಚಿದಾಗ ಎಷ್ಟೋ ಬಾರಿ ಎಲ್ಲರೂ ಆಡಿಕೊಳ್ಳುವ ಮಾತುಗಳೇ ಆಗಿವೆ. ಪ್ರಾಣಿಮಾತ್ರದ ಚೋದನೆಯ ಒತ್ತಡದಲ್ಲಿದ್ದಾಗ ಮಾತು ಕೂಡ ಹಾಗೆಯೇ ಹೊರಬರುವುದಷ್ಟೆ. ಇನ್ನು ಕಾಳಿದಾಸನನ್ನು ಕುರಿತ ಕಥೆಯಲ್ಲಿ ನಮ್ಮ ಕಾಲದ ದೈನಂದಿನ ಭಾಷೆಯೂ ಬಳಕೆಗೊಂಡಿದೆ; ಸಂಭಾಷಣೆಗೊಂದು ಅನೌಪಚಾರಿಕ ಸೊಗಸನ್ನು ನೀಡಿದೆ.
ಭಾಷಾವಧು ಸಿಂಗರಗೊಂಡು ಅಂದಣವೇರಿ ಪರದೆಯ ಒಳಗೆ ಕಂಡೂ ಕಾಣದಂತಿದ್ದು ಆ ಬಳಿಕ ಎಲ್ಲರ ಕಣ್ಣುಗಳಿಗೂ ಕೃತಾರ್ಥತೆಯನ್ನು ತಂದುಕೊಡುವಂತೆ ಆಗುವುದು ವರ್ಣನೆಗಳಲ್ಲಿ. ಸದ್ಯದ ಸಂಕಲನದಲ್ಲಿ ಅಂಥ ಹಲವಾರು ಸೊಗಸಾದ ವರ್ಣನೆಗಳಿವೆ. ಕೆಲವನ್ನೀಗ ಆಸ್ವಾದಿಸೋಣ:
ಮೇನಕೆಯು ವಿಶ್ವಾಮಿತ್ರನ ತಪೋಭಂಗ ಮಾಡಲು ಹೊರಟಾಗ ದೇವಕಾರ್ಯಸಿದ್ಧಿಯಲ್ಲಿ ಗಣಿಕೆಯರ ಪಾತ್ರವನ್ನು ಹೀಗೆ ವರ್ಣಿಸುತ್ತಾಳೆ: “ಗಣಿಕೆಯರ ಸೆರಗಿನ ಹಾಸಂಗಿಯ ಮೇಲೆ ದೇವತೆಗಳ ಅಸ್ತಿತ್ವಕ್ಕಾಗಿ ಅಕ್ಷಕ್ರೀಡೆ. ಇಲ್ಲಿಯ ದಾಳಗಳು ನಾವೇ. ನಮ್ಮ ಹಾವ-ಭಾವಗಳೇ ಆ ಉರುಳು-ಹೊರಳುಗಳು. ನಮ್ಮ ಕುಡಿನೋಟದ ಬಗೆ-ಬಿನ್ನಾಣಗಳೇ ಪರಿಪರಿಯ ಗರಗಳು. ಒಟ್ಟಿನಲ್ಲಿ ಗೆಲವು ನಮ್ಮ ಗೆಜ್ಜೆಯ ಒಲವು”. ಇಲ್ಲಿಯ ಅಕ್ಷಕ್ರೀಡೆಯ ರೂಪಕ ಸಶಕ್ತವಾಗಿದೆ, ಸಮುಚಿತವಾಗಿದೆ.
ಇಲ್ಲಿಯೇ ಬರುವ ಮತ್ತೊಂದು ಮಾತು ಶಾರದ್ವತನ ಸ್ವಭಾವಕ್ಕೆ ಕನ್ನಡಿ ಹಿಡಿದಂತಿದೆ: “ಶಾರದ್ವತ ಒರಟಾಡದಿದ್ದರೂ ನಿಷ್ಕ್ರಿಯ, ಮೊಂಡುಕತ್ತಿಯಂತೆ; ಕುಯ್ಯುವುದೂ ಇಲ್ಲ, ಹಾಗೆಂದು ನೋಯಿಸದೆಯೂ ಇಲ್ಲ”. ಪರಿಶ್ರಮವಿದ್ದೂ ಪರಿಣಾಮವಿರದ ವ್ಯಕ್ತಿ-ಸಂಗತಿಗಳನ್ನು ಇದಕ್ಕಿಂತಲೂ ಚೆನ್ನಾಗಿ ವರ್ಣಿಸುವುದು ಸಾಧ್ಯವಿಲ್ಲ.
ಗೋಪಿಕೆ ಕೃಷ್ಣನಿಗೆ ಬರೆದ ಪತ್ರದಲ್ಲಿ ತಮ್ಮಿಬ್ಬರ ವ್ಯಕ್ತಿತ್ವಗಳ ಭಿನ್ನತೆಯನ್ನು ಸ್ಫುಟವಾಗಿ ಬಣ್ಣಿಸುತ್ತಾಳೆ: “ನಾವೇನು ಹುಟ್ಟುವಾಗಲೇ ಸೆರೆ ಸೇರಿದವರಲ್ಲ; ಹುಟ್ಟಿದ ಬಳಿಕ ನಮ್ಮ ಮನದ ಸುತ್ತ ಸೆರೆಮನೆ ಕಟ್ಟಿಕೊಂಡವರು. ನಮಗಾವ ಸೋದರಮಾವನೂ ಮತ್ತವನ ಮಾವನೂ ತ್ರಾಸ ಕೊಟ್ಟವರಲ್ಲ; ನಮಗೆ ನಾವೇ ತ್ರಾಸವಾದವರು. ಹುಟ್ಟುತ್ತಿದ್ದಂತೆಯೇ ಹೆತ್ತವರಿಗೆ ದೂರವಾದವರಲ್ಲ, ನಾವಾಗಿಯೇ ಹೆತ್ತವರನ್ನು ದೂರ ಮಾಡಿಕೊಂಡವರು. ಕಣ್ಣು-ಕಿವಿಗಳು ಸಾಗುವಲ್ಲೆಲ್ಲ, ಮನೋಬುದ್ಧಿಗಳು ಮಾಗುವಲ್ಲೆಲ್ಲ ಕಲಿಕೆಯ ಕ್ರೀಡೆಯುಂಟೆಂದು ಅರಿತು ನಡೆದವರು ನಾವಲ್ಲ, ಕಲಿಕೆಯನ್ನೇ ಕುಬ್ಜೀಕರಿಸಿಕೊಂಡವರು. ಯಾಚಕನಾಗಲು ಬಂದ ಬಾಲ್ಯದ ಗೆಳೆಯನಿಗೆ ಗೆಳೆತನದ ಗೌರವ-ಸಲುಗೆಗಳನ್ನೇ ಕೊಡುಗೆಯಾಗಿ ಕೊಟ್ಟವರಲ್ಲ, ಸಲುಗೆ-ಸರಳತೆಗಳ ಸಹಜ ಸ್ವಾರಸ್ಯವನ್ನೇ ಕಳೆದುಕೊಂಡವರು”. ಪರಸ್ಪರ ವಿಸದೃಶವಾದ ವಿವರಗಳು ಒಂದರ ಹಿಂದೆ ಒಂದು ಶಬ್ದಾಲಂಕಾರಗಳೊಡನೆ ಬರುತ್ತ ಕಥನಕ್ಕೊಂದು ವಿಲಕ್ಷಣತೆಯನ್ನು ತಂದಿವೆ. ಈ ಮೂಲಕ ಕೃಷ್ಣನ ಬಾಲ್ಯದ ಮುಖ್ಯ ಘಟ್ಟಗಳೂ ಬಿತ್ತರಗೊಂಡಿರುವುದು ಗಮನಾರ್ಹ.
‘ಬೆಳಕಿನ ಕತ್ತಲೆ’ಯಲ್ಲಿ ಸತ್ಯಭಾಮೆಯು ರುಕ್ಮಿಣೀ-ಜಾಂಬವತಿಯರೊಡನೆ ಹೊಂದಿಕೊಂಡು ಹೋಗುವ ಪ್ರಸಂಗದಲ್ಲಿ ಅವರಿರ್ವರ ಬಣ್ಣನೆ ಹೀಗಿದೆ: “ಸತ್ಯಭಾಮೆಗೆ ಎಲ್ಲರ ಜೊತೆ ಹಿತವಾದ ಸಂಬಂಧಗಳಿದ್ದುವಾದರೂ ಜಾಂಬವತಿಯೊಡನೆ ಸಲುಗೆ ಹೆಚ್ಚು. ಕಾಡಿನ ಆ ಹೆಣ್ಣುಮಗಳ ನಿಸರ್ಗಸಹಜ ರೀತಿಯಲ್ಲಿ, ಆಗೀಗ ಸುಳಿಯುವ ಆರಣ್ಯಕರೂಕ್ಷ ವರ್ತನೆಯಲ್ಲಿ ಕೂಡ ಸತ್ಯಭಾಮೆಗೆ ಅದೊಂದು ಬಗೆಯ ನಿರ್ಮಲ ಸ್ನೇಹದ, ಅನೌಪಚಾರಿಕ ಸೌಲಭ್ಯದ ಎಣೆಮೀರಿದ ಸೊಗಸೇ ಕಂಡಿತ್ತು. ಅಕ್ಕ ರುಕ್ಮಿಣಿಯೂ ಪರಮಾತ್ಮೀಯಳೇ. ಆದರೆ ಅವಳೊಡನೆ ಇರುವಾಗ ಭಾಮೆಗೆ ಪ್ರಶಾಂತಸುಂದರ ದೇವಾಲಯದಲ್ಲಿರುವಂತೆ ಆನಂದವಿದ್ದರೂ ಸಂಭ್ರಮವಿರದ ನೆಮ್ಮದಿ. ಜಾಂಬವತಿ ಹಾಗಲ್ಲ. ಅವಳೊಂದು ಜಲಪಾತದ ಹಾಗೆ. ಅವಳಿದ್ದಲ್ಲಿ ಹಬ್ಬ. ಅಬ್ಬಾ! ಆ ವಿನೋದವೇನು! ಅಬ್ಬರಿಸಿಬರುವ ನಗೆಯೇನು! ಎಗ್ಗಿಲ್ಲದೆ ನುಗ್ಗಿಬರುವ ಕಾಡಾಡಿ ಮಾತುಗಳ, ಹಳ್ಳಿಗುಲ್ಲುಗಳ ಹೊಯ್ಲು-ಹೊಗರೇನು! ಹಾಗೆಂದು ಅವಳು ಅಸಭ್ಯಳೇನಲ್ಲ. ಅಹಿತಳಂತೂ ಅಲ್ಲವೇ ಅಲ್ಲ”. ರುಕ್ಮಿಣಿಯನ್ನು ದೇವಾಲಯಕ್ಕೂ ಜಾಂಬವತಿಯನ್ನು ಜಲಪಾತಕ್ಕೂ ಒಪ್ಪವಿಡುವ ಮೂಲಕ ಅವರ ಹುಟ್ಟು, ಹಿನ್ನೆಲೆ, ಸ್ವಭಾವ, ವರ್ತನೆ ಎಲ್ಲವನ್ನೂ ಸೆರೆಹಿಡಿದಿರುವುದು ಮೆಚ್ಚುವಂತಿದೆ. ಸಾರ್ಥಕವಾದ ವರ್ಣನೆ ಪಾತ್ರಚಿತ್ರಣಕ್ಕೂ ಒದಗಿಬರುತ್ತದೆ ಎಂಬುದಕ್ಕೆ ಈ ಭಾಗ ಚೆನ್ನಾದ ಉದಾಹರಣೆ.
ಪ್ರೀತಿಯ ಪರಿ ಸ್ತ್ರೀ-ಪುರುಷರಿಗೆ ಅರಿವಾಗುವ ರೀತಿಯನ್ನು, ಅದಕ್ಕವರು ಸ್ಪಂದಿಸುವ ಬಗೆಯನ್ನು ‘ಶ್ಯಾಮಲ ಶಾರದೆ’ಯಲ್ಲಿ ಹೀಗೆ ಬಣ್ಣಿಸಲಾಗಿದೆ: “ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಪ್ರೀತಿ-ಪ್ರಣಯಗಳ ಒಳಸುಳಿಗಳು ಬೇಗ ತಿಳಿದುಬಿಡುತ್ತವೆ. ಹಲಸಿನ ಹಾಗೆ ಅವು ಹೂವಾಗಿ ತೋರಿಕೊಳ್ಳದಿದ್ದರೂ ಹಣ್ಣಾಗಿ ಒಮ್ಮೆಲೇ ಕಾಣಿಸಿಕೊಳ್ಳುತ್ತವೆ. ಪುರುಷರ ಪರಿ ಹಾಗಲ್ಲ. ಅದು ಮಾವಿನ ಹೂವಿನ ಹಾಗೆ ಮರವೆಲ್ಲ ಆವರಿಸಿಕೊಂಡು ಊರೆಲ್ಲ ತೋರಿಕೊಳ್ಳುತ್ತದೆ. ಆದರೆ ಮಿಡಿಯಾಗಿ, ಕಾಯಾಗಿ, ಹಣ್ಣಾಗಿ ಕಡೆಯ ತನಕ ಉಳಿಯಬಲ್ಲ ಹೂವುಗಳು ಬೆರಳೆಣಿಕೆಯಷ್ಟೇ”. ಹಲಸು-ಮಾವುಗಳ ಉಪಮಾನ ತನ್ನ ಅಕೃತ್ರಿಮ ಶೋಭೆಯಿಂದ ಮೆಚ್ಚಾಗುತ್ತದೆ. ಸಹಜ ಅಲಂಕಾರಗಳ ಪರಿಣಾಮಕರ ವಿನಿಯೋಗಕ್ಕಿದು ಒಳ್ಳೆಯ ನಿದರ್ಶನ.
‘ವಾರಾಣಸಿಯ ವಾರಾಂಗನೆ’ಯಲ್ಲಿ ಬರುವ ಕಾಶ್ಮೀರದ ವರ್ಣನೆ ಹೀಗಿದೆ: “ಭಾರತಮಾತೆಗೆ ನಿಸರ್ಗದೇವತೆಯೇ ಸಲ್ಲಿಸಿದ ಮುತ್ತು, ಮರಕತ ಮತ್ತು ಮಾಣಿಕ್ಯಗಳ ಮಣಿಮಕುಟ ಕಾಶ್ಮೀರ. ಈ ಕಿರೀಟದ ಮುತ್ತುಗಳನ್ನು ಅಲ್ಲಿಯ ಹಿಮದಲ್ಲಿ, ಮರಕತವನ್ನು ಹಸುರಿನಲ್ಲಿ, ಮಾಣಿಕ್ಯವನ್ನು ಕುಂಕುಮಕೇಸರದಲ್ಲಿ ಕಾಣಬಹುದು”. ಕಾಶ್ಮೀರವನ್ನು ಭಾರತಮಾತೆಯ ಮಕುಟವೆಂದು ಭಾವಿಸಿ ಅಲ್ಲಿರುವ ರತ್ನಗಳಿಗೆ ಪ್ರಾಕೃತಿಕ ಕಾರಣಗಳನ್ನು ನೀಡುವ ಈ ಬಣ್ಣನೆ ಅತಿಶಯೋಕ್ತಿ ಮತ್ತು ಕಾವ್ಯಲಿಂಗ ಅಲಂಕಾರಗಳಿಂದ ಕಂಗೊಳಿಸಿದೆ.
* * *
ಕೃತಿಯ ಹಲವೆಡೆ ಸಾರೋಕ್ತಿಗಳು ಹರಳುಗಟ್ಟಿದ್ದು ಕಥೆಯನ್ನು ಓದಿ ಮುಗಿಸಿದ ಬಳಿಕವೂ ನಮ್ಮನ್ನು ಕಾಡುತ್ತವೆ, ಆಲೋಚನೆಗೆ ತೊಡಗಿಸುತ್ತವೆ. ಆಭಾಣಕಸದೃಶವಾದ ಈ ವಾಕ್ಯಗಳು ಲೇಖಕರ ಜೀವಪ್ರೀತಿಯನ್ನೂ ಜೀವನಶ್ರದ್ಧೆಯನ್ನೂ ಎತ್ತಿಹೇಳುತ್ತವೆ. ಗಾಢ ಅನುಭವದ ಫಲಗಳಾದ ಇಲ್ಲಿಯ ಮಾತುಗಳು ಮನನಕ್ಕೆ ಸಾಕಷ್ಟು ಸಾಮಗ್ರಿಯನ್ನು ಒದಗಿಸುತ್ತವೆ; ಕಥೆಗಳನ್ನು ಮತ್ತೆ ಮತ್ತೆ ಓದುವಂತೆಯೂ ಮಾಡುತ್ತವೆ. ಸ್ವತಃಪರ್ಯಾಪ್ತವಾದ ಈ ಹೇಳಿಕೆಗಳು ಕಥೆಯ ಹಿನ್ನೆಲೆಯಲ್ಲಿ ಇನ್ನಷ್ಟು ಅರ್ಥಪೂರ್ಣವೆನಿಸುತ್ತವೆ. ಪ್ರತ್ಯೇಕ ವಿವರಣೆಯನ್ನು ಬೇಡದ ಕೆಲವು ಸಾರೋಕ್ತಿಗಳನ್ನು ಹೀಗೆ ಸಂಗ್ರಹಿಸಬಹುದು:
“ಪ್ರೀತಿಯ ಬಂಧನಕ್ಕಿಂತ ಮಿಗಿಲಾದ ಮುಕ್ತಿ ಬ್ರಹ್ಮವಸ್ತುವಿಗೂ ಅಶಕ್ಯ”. (‘ಆತ್ಮಾನಂ ಮಾನುಷಂ ಮನ್ಯೇ’)
“ಗಣಿಕೆಗೂ ಒಂಟಿತನ ತಪ್ಪಿದ್ದಲ್ಲ. ಅಲ್ಲಲ್ಲ, ಗಣಿಕೆಗೇ ಒಂಟಿತನ ತಪ್ಪಿದ್ದಲ್ಲ”. (‘ಬಾನು-ಬುವಿಗಳ ಸ್ವಗತ’)
“ಹುಟ್ಟಿಗೆ ಕಾರಣ ಕಾಮವಿಕಾರ. ವಾತ್ಸಲ್ಯಕ್ಕೆ ಕಾರಣ ಪ್ರೇಮವಿಕಾಸ”. (‘ಬಾನು-ಬುವಿಗಳ ಸ್ವಗತ’)
“...ರಾಣಿಯೆಂದರೆ ಸಾಲಂಕೃತ ವಿಧವೆ”. (‘ಬಾನು-ಬುವಿಗಳ ಸ್ವಗತ’)
“ಕಾರಣಾತೀತವಾಗಿ ಕಾರ್ಯ ನಡೆದಾಗ ಅದು ಲೀಲೆಯೆನಿಸುತ್ತದೆ”. (‘ಶ್ಯಾಮಲ ಶಾರದೆ’)
“ಪ್ರೀತಿ ಬರೋದು ಸ್ವಾರ್ಥದಿಂದ, ಪ್ರಜ್ಞೆ ಬರೋದು ನಿಃಸ್ವಾರ್ಥದಿಂದ. ಇವೆರಡೂ ಸೇರಿದಾಗ ಸರ್ವಾರ್ಥ”. (‘ಭವದ ಬಸುರಿನ ಭಾವ’)
* * *
ಕಡೆಗೆ ಇಲ್ಲಿಯ ಕಥೆಗಳ ರಚನಾರೀತಿಯನ್ನೂ ಕೆಲವು ಧ್ವನಿಗಳನ್ನೂ ಕ್ರಮವಾಗಿ ಪರಾಮರ್ಶಿಸೋಣ.
‘ಸೀತಾಸಂದೇಹ’ದಲ್ಲಿ ವಾಲ್ಮೀಕಿದರ್ಶನಕ್ಕೆ ಅಪಚಾರವಾಗದಂತೆ ಸೀತೆಯನ್ನು ಪರಿತ್ಯಜಿಸಿದ ರಾಮನಲ್ಲಿ ಸಹಾನುಭೂತಿ ಮೂಡಿಸುವ ಆಶಯವಿದೆ. ಇದಕ್ಕಾಗಿ ಹೊಸತಾದ ಕ್ರಮ-ಕಾರಣಗಳನ್ನು ಲೇಖಕರು ಕಂಡುಕೊಂಡಿರುವುದು ವಿಶೇಷ. ರಾಮಾಯಣವನ್ನು ಕುರಿತು ಸಾವಿರಾರು ಗ್ರಂಥಗಳು ಹೊರಬಂದಿರುವಾಗ ಹೀಗೆ ಹೊಸ ಹಾದಿಯಲ್ಲಿ ಸಾಗುವುದು ಸಾಹಸವೇ ಸರಿ. ಇಲ್ಲಿ ಸೀತೆಯೇ ರಾಮಾಯಣವನ್ನು ಲಿಪಿಬದ್ಧಗೊಳಿಸುವ ಸ್ವಾರಸ್ಯವೂ ಇದೆ. ಹಿಂದೆಯೇ ಗಮನಿಸಿದಂತೆ ಅನೇಕ ಸಂಸ್ಕೃತಪದ್ಯಗಳ ಛಾಯೆಯೂ ಇಲ್ಲಿ ಕಂಡುಬರುತ್ತದೆ. ತಾವು ಸ್ಫೂರ್ತಿ ಪಡೆದ ಆಕರಗಳನ್ನು ಲೇಖಕರೇ ಕಥೆಯ ಕೊನೆಗೆ ಕಾಣಿಸಿದ್ದಾರೆ. (ಈ ಕ್ರಮವನ್ನು ಇನ್ನೂ ಕೆಲವು ಕಥೆಗಳಲ್ಲಿಯೂ ಕಾಣಬಹುದು.)
‘ಆತ್ಮಾನಂ ಮಾನುಷಂ ಮನ್ಯೇ’ ಎಂಬ ರಚನೆಯಲ್ಲಿ ಹಲವು ಸಣ್ಣ-ಪುಟ್ಟ ವಿವರಗಳು ಮುಖ್ಯ ಘಟನೆಗಳ ಜೊತೆಗೂಡಿ ಬಂದಿವೆ. ಸೀತೆಯು ಭೂಮಿಯೊಳಗೆ ಸೇರಿಹೋದ ಬಳಿಕ ಆ ತಾಣ ಕಾರಣಿಕಕ್ಷೇತ್ರವೆಂದು ಪ್ರಸಿದ್ಧಿಗೆ ಬರುತ್ತದೆ; ಅವಳ ಅವಳಿಮಕ್ಕಳಾದ ಲವ-ಕುಶರಿಗೆ ಬಳಕೆಯಿದ್ದ ತಾಯಿ ಇಲ್ಲವಾಗಿ ಬಳಕೆಯಿಲ್ಲದ ತಂದೆ ಹತ್ತಿರವಿದ್ದರೂ ದೂರನೇ ಆದ ಪರಿಸ್ಥಿತಿ ಒದಗುತ್ತದೆ. ತನ್ನನ್ನು ಕುರಿತ ಅಣ್ಣನ ಅವಿಶ್ವಾಸ ಭರತನಿಗೆ ತಿಳಿಯುವುದು ಕಥೆಯ ಕೇಂದ್ರ. ಈ ಘಟ್ಟದಲ್ಲಿ ಬರುವ ಭರತನ ವ್ಯಕ್ತಸ್ವಗತ ಉಲ್ಲೋಲ-ಕಲ್ಲೋಲಗಳಿಂದ ಪ್ರಕ್ಷುಬ್ಧವಾದ ಸಾಗರವನ್ನು ನೆನಪಿಸುತ್ತದೆ. ಕಾಲಪುರುಷನ ಆಗಮನದಿಂದ ಕಥೆ ಕೊನೆಯಾಗುವುದು ರಾಮನಿರ್ಯಾಣವನ್ನೂ ತ್ರೇತಾಯುಗದ ಅವಸಾನವನ್ನೂ ಧ್ವನಿಸುತ್ತದೆ. ಈ ಎರಡೂ ಕಥೆಗಳಲ್ಲಿ ರಾಮಾಯಣಪ್ರಸಂಗಗಳ ಹಾಗೂ ಶ್ರೌತಯಾಗಗಳ ಅಧಿಕೃತ ವಿವರಗಳು ಸೇರಿವೆ.
ಕನ್ನಡದ ಚಿರಕೃತಿಗಳಲ್ಲೊಂದು ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ’. ಮೇನಕೆ-ವಿಶ್ವಾಮಿತ್ರರ ವೃತ್ತಾಂತವಿಲ್ಲಿ ಉದಾತ್ತರಮಣೀಯವಾಗಿ ರೂಪುಗೊಂಡಿದೆ. ದೇವುಡು ಅವರೂ ಕಾಣಿಸದ ಕೆಲವು ಹೊಳಹುಗಳನ್ನು ‘ಬಾನು-ಬುವಿಗಳ ಸ್ವಗತ’ ಕಾಣಿಸುತ್ತದೆ. ಶಕುಂತಲೆಯ ಮನೋಗತವನ್ನೂ ಒಳಗೊಂಡ ಈ ಕಥಾನಕಕ್ಕೆ ಸಹಜವಾಗಿಯೇ ಇನ್ನಷ್ಟು ಪುಷ್ಟಿ ಒದಗಿದೆ. ತಾಯಿ-ಮಕ್ಕಳಿಬ್ಬರೂ ತಮ್ಮೊಳಗೆ ಮಾತನಾಡಿಕೊಂಡರೂ ಅದು ನಮಗೆ ಪರಸ್ಪರ ಸಂವಾದದಂತೆ ತೋರುತ್ತದೆ; ಇಬ್ಬರೂ ಮತ್ತಷ್ಟು ಆಪ್ತವಾಗಿ ಅರ್ಥವಾಗುತ್ತಾರೆ. ಇಲ್ಲಿಯ ಕೆಲವು ವೈಸಾದೃಶ್ಯಗಳು ಅನನ್ಯವಾಗಿವೆ: ಮೇನಕೆಗೆ ಭವಿಷ್ಯದ ಆಲೋಚನೆಯಾದರೆ, ಶಕುಂತಲೆಗೆ ಭೂತಕಾಲದ ಚಿಂತೆ. ಕಥೆಯ ಕೊನೆಗೆ ಇಬ್ಬರಿಗೂ ನಾಯಕರೊಡನೆ ಸಮಾಗಮವಾಗುತ್ತದೆ; ಅದು ಒಬ್ಬಳಿಗೆ ಹೊಸತು, ಮತ್ತೊಬ್ಬಳಿಗೆ ಹಳತು. ತಾಯಿ ಹೊಸತಾಗಿ ಪ್ರೀತಿಸಲು ಮುಂದಾಗುತ್ತಿದ್ದರೆ ಮಗಳು ಹಳೆಯ ಬಾಂಧವ್ಯವು ಏನಾದರೂ ಮತ್ತೆ ಬೆಸುಗೆ ಕಂಡೀತೇ ಎಂಬ ಭರವಸೆಯನ್ನು ಎದುರುನೋಡುತ್ತಿದ್ದಾಳೆ! ಶಕುಂತಲೆಯ ವೃತ್ತಾಂತದಲ್ಲಿ ಎಲ್ಲಿಯೂ ದುಷ್ಯಂತನನ್ನು ಹೆಸರಿಸದೆ ‘ಅವನು’ ಎಂದೇ ವ್ಯವಹರಿಸಿರುವುದು ಮಾರ್ಮಿಕವಾಗಿದೆ.
ಎಲ್ಲ ಜೀವರಾಶಿಗಳನ್ನೂ ಕಾಡುವ ಜಿಜೀವಿಷೆ (ಬದುಕುವ ಬಯಕೆ) ಮತ್ತು ಸಿಸೃಕ್ಷೆ (ಸೃಷ್ಟಿಸುವ ಬಯಕೆ) ಎಂಬ ಮೂಲಭೂತ ಕಾಮನೆಗಳಿಗೆ ತಿಕ್ಕಾಟ ಬಂದ ಸಂದರ್ಭವನ್ನು ‘ಶತಶೃಂಗಪರ್ವತ’ ಒಳಗೊಂಡಿದೆ. ವ್ಯಾಸ-ಗಣಪತಿಯರ ಸಂವಾದ ಈ ವೃತ್ತಾಂತಕ್ಕೆ ಭಿತ್ತಿಯನ್ನೊದಗಿಸಿದೆ. ವ್ಯಾಸರು ಹೇಳಿದ ಮಾತುಗಳ ಆಶಯ ಗಣಪತಿಗೆ ಅರಿವಾದ ಹೊರತು ಆತ ಅದನ್ನು ಬರೆಯುವುದಿಲ್ಲ ಎಂಬ ಸಾಂಪ್ರದಾಯಿಕ ಕಲ್ಪನೆಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಜೀವ-ಜೀವನಗಳ ಸೂಕ್ಷ್ಮಗಳನ್ನು ಒಳಗೊಂಡ ಇಂಥ ಮೌಲ್ಯಸಂಘರ್ಷದ ಸಂದರ್ಭಗಳೇ ಮೇಲ್ನೋಟಕ್ಕೆ ಗಣಪತಿಗೆ ಅರ್ಥವಾಗದವು; ಹೀಗಲ್ಲದೆ ‘ವ್ಯಾಸಕೂಟ’ಗಳೆಂದು ಹೆಸರಾದ ಕೆಲವೊಂದು ತೊಡಕಿನ ಶ್ಲೋಕಗಳಲ್ಲ ಎಂಬ ಸೂಚನೆ ಮೂಡಿದೆ. ಧರ್ಮಜನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂತಾನ-ಸಂರಕ್ಷಣೆಗಳ ಬಗೆಗೆ ಆಲೋಚಿಸುವ ಕುಂತಿ ಪ್ರಕೃತಿಗೆ ಸಂಕೇತವಾಗಿ ಸಂದು ಸದ್ಯದ ಸನ್ನಿವೇಶದ ವಿಕಟತೆಯನ್ನು ಹೆಚ್ಚಿಸುತ್ತಾಳೆ.
‘ಗೋಪಿಕೆಯ ಪತ್ರ’ದಲ್ಲಿ ಕೃಷ್ಣನ ಜನ್ಮದಿನದಂದು ಅನಾಮಧೇಯ ಗೋಪಿಕೆಯೊಬ್ಬಳು ಅವನಿಗೆ ಪತ್ರ ಬರೆದ ವೃತ್ತಾಂತವಿದೆ. ಕೃಷ್ಣ ಗೋಕುಲವನ್ನು ಬಿಟ್ಟು ಹೋಗಿ ಹಲವು ವರ್ಷಗಳೇ ಆಗಿರುವುದರಿಂದ ಶೃಂಗಾರನಿವೇದನೆಯಲ್ಲಿ ಕಸಿವಿಸಿಯಿಲ್ಲ; ಪಾಕವಿದೆ. ಸ್ತ್ರೀಯರ ಚಿತ್ತಚರಿತವನ್ನು ಸೂಚಿಸಲು ಕೆಲವು ಆಲೋಚನೆಗಳನ್ನು ಆವರಣಚಿಹ್ನೆಗಳಲ್ಲಿ ಕಾಣಿಸಲಾಗಿದೆ. ಮಹಾಭಾರತ ಹಾಗೂ ಭಾಗವತಪುರಾಣಗಳ ಎಷ್ಟೋ ಸ್ವರಸ ಸಂದರ್ಭಗಳು ಇಲ್ಲಿ ಚುಟುಕಾಗಿ ಕಂಡರಣೆಗೊಂಡಿವೆ. ಬಾಲಕ ಕೃಷ್ಣ ತನ್ನ ವಯಸ್ಸಿನ ಕೆಲವರು ಹುಡುಗರಿಗೆ ಮರವೊಂದನ್ನು ತೋರಿಸಿ ಅದರಿಂದ ಕಲಿಯಬಹುದಾದ ಪಾಠಗಳನ್ನು ತಿಳಿಹೇಳುವ ‘ಪ್ರಥಮಗೀತ’, ಪರಶುರಾಮ ಇಪ್ಪತ್ತೊಂದು ಬಾರಿ ಭೂಮಿಯನ್ನೆಲ್ಲ ಸುತ್ತಿ ಕ್ಷತ್ತ್ರಿಯರನ್ನು ಇಲ್ಲವಾಗಿಸಿದ ಬಳಿಕ ತನ್ನ ಕೊಡಲಿಯನ್ನು ತೊಳೆದ ಸ್ಥಳ ಸ್ಯಮಂತಪAಚಕವೆಂಬ ಹೆಸರಿನಿಂದ ತೀರ್ಥಕ್ಷೇತ್ರವಾದ ಪ್ರತೀತಿ ಮುಂತಾದವು ಇದಕ್ಕೆ ಉದಾಹರಣೆಗಳು.
‘ಬೆಳಕಿನ ಕತ್ತಲೆ’ಯಲ್ಲಿ ದೀಪಾವಳಿ ಹಬ್ಬದ ಅಷ್ಟೂ ದಿನಗಳ ಸಾಂಸ್ಕೃತಿಕ ಸ್ವಾರಸ್ಯ ಅಡಕವಾಗಿದೆ. ಸತ್ಯಭಾಮೆಯ ಪಾತ್ರದ ವಿಕಾಸ ಸ್ಪಷ್ಟವಾಗಿ ಚಿತ್ರಿತವಾಗಿದೆ. ಪುಣ್ಯಕವ್ರತದ ಪ್ರಭಾವದಿಂದ ಆಕೆಯಲ್ಲಿ ಹಿಂದಿನ ಅಧಟು ತೀರಿದ್ದರೂ ಬದುಕಿನ ಎಲ್ಲ ಘಟನೆಗಳನ್ನೂ ಚಿತ್ತವಿಕಾರವಿಲ್ಲದೆ ಸ್ವೀಕರಿಸುವ ಪರಿಪಾಕವಿನ್ನೂ ಬಂದಿಲ್ಲ. ಈ ನಿಟ್ಟಿನಿಂದ ಅವಳು ರುಕ್ಮಿಣಿ-ಜಾಂಬವತಿಯರ ಅಂತರಾಳಸ್ಥಿತಿಯಲ್ಲಿ ಇರುವವಳು; ಆಕೆಗೆ ರುಕ್ಮಿಣಿಯ ನೆಮ್ಮದಿಯೂ ದಕ್ಕಿಲ್ಲ, ಜಾಂಬವತಿಯ ಉಲ್ಲಾಸವೂ ಒಲಿದಿಲ್ಲ. ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಮಗನ ಸಾವಿನ ಗುಟ್ಟಿನ ಬಗೆಗೆ ತಾಯಿ ಆಲೋಚಿಸುವ ವಿಕಟ ಸನ್ನಿವೇಶ ಇಲ್ಲಿದೆ.
ಕಾಳಿದಾಸನನ್ನು ಕುರಿತ ‘ಪ್ರಣಯಪತ್ರದ ಪದರಗಳಲ್ಲಿ’ ಎಂಬ ರಚನೆ ಹಲವು ಸ್ವಾರಸ್ಯಗಳನ್ನು ಒಳಗೊಂಡಿದೆ. ಸಂಶೋಧನೆಯೇ ಮಿಗಿಲೆಂಬ ಕಾಣೆಯವರ ನಿಲವಿಗೆ ಸೃಷ್ಟಿಶೀಲ ಕಥೆಯಿಂದಲೇ ಪ್ರತ್ಯುತ್ತರ ನೀಡುವ ಫಡ್ಕೆಯವರು ನಿಜವಾದ ಕಲಾವಿದನೊಬ್ಬನು ಬದುಕಿನ ಪ್ರಶ್ನೆಗೆ ಹೇಗೆ ಪ್ರತಿಕ್ರಿಯಿಸುವನೆಂದು ತೋರ್ಪಡಿಸಿದ್ದಾರೆ. ಕಥಾಸಾಹಿತ್ಯದ ಬಗೆಗಿನ ಶಿಬಿರವೊಂದರ ಸಮಾರೋಪಭಾಷಣ ಕಥಾವಾಚನದಿಂದಲೇ ಒಡಮೂಡುವ ಸ್ವಾರಸ್ಯವೂ ಇಲ್ಲಿದೆ. ಕ್ಷೇಮೇಂದ್ರನ ರಚನೆಯೆಂದು ತಿಳಿಯುವ ‘ಕವಿಕರ್ಣಿಕೆ’ ಎಂಬ ಅನುಪಲಬ್ಧ ಕೃತಿಯನ್ನು ಲೇಖಕರು ಸೊಗಸಾಗಿ ದುಡಿಸಿಕೊಂಡಿದ್ದಾರೆ. ಕವಿಯಿಂದಲೇ ಆತನ ಕಾವ್ಯಸ್ವಾರಸ್ಯಗಳನ್ನು ಸಹೃದಯರು ಕೇಳಿ ತಿಳಿಯಬೇಕೆಂಬ ಒಕ್ಕಣೆ ಆ ಗ್ರಂಥದಲ್ಲಿರುವಂತೆಯೂ ಹೀಗೆ ಚಂದ್ರಗುಪ್ತನು ತನ್ನ ರಾಣಿಯರೊಡನೆ ಶಾಕುಂತಲನಾಟಕವನ್ನು ಕುರಿತು ಕಾಳಿದಾಸನಿಂದಲೇ ತಿಳಿದುಕೊಂಡನೆಂದೂ ಕಲ್ಪಿಸಲಾಗಿದೆ. ಇದರಿಂದ ಕಾಳಿದಾಸ ಯಾವ ಕಾಲದವನೆಂಬ ಅತ್ಯಂತ ಮಹತ್ತ್ವವುಳ್ಳ ತೊಡಕಿನ ಪ್ರಶ್ನೆಗೆ ಉತ್ತರ ಸಿಗುತ್ತದೆಂದೂ ಬಣ್ಣಿಸಲಾಗಿದೆ. ಇವೆಲ್ಲ ಕಥೆಯ ರೋಚಕತೆಯನ್ನು ಹೆಚ್ಚಿಸಿವೆ. ಇನ್ನು ಕುಟುಂಬದ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಇಲ್ಲಿಯ ರಾಜತಾಂತ್ರಿಕ ಸಂಗತಿಗಳು ಮಾಲವಿಕಾಗ್ನಿಮಿತ್ರ, ಮೃಚ್ಛಕಟಿಕ ಮುಂತಾದ ರೂಪಕಗಳನ್ನು ನೆನಪಿಸುವಂತಿವೆ. ಪ್ರಣಯಪತ್ರ ಏನಾಯಿತೆಂಬ ಸಣ್ಣದಾದ ಒಂದು ಎಳೆಯನ್ನು ಬಳಸಿಕೊಂಡು ಮಹಾಕೃತಿಯ ಭಾಗವಾಗಬಲ್ಲ ಖಂಡವೊಂದನ್ನು ಸೃಜಿಸಿರುವ ಲೇಖಕರ ಪ್ರತಿಭೆ ಮೆಚ್ಚುವಂತಿದೆ.
‘ಶ್ಯಾಮಲ ಶಾರದೆ’ಯಲ್ಲಿ ಒಂದೆರಡು ಚಾಟುಶ್ಲೋಕಗಳ ಬಲದಿಂದ ಸರ್ವಾಂಗಸುಂದರವಾದ ಇಡಿಯ ಕಥೆಯನ್ನು ಹೆಣೆದಿರುವ ಜಾಣ್ಮೆಯನ್ನು ಕಾಣುತ್ತೇವೆ. ಬಾಣ, ದಂಡಿ, ಶಂಕರಾಚಾರ್ಯ - ಇವರೆಲ್ಲರೂ ಕಥೆಯ ನಾಯಿಕೆಯಾದ ವಿಜ್ಜಿಕೆಯ ಕಾಲದವರೇ ಆದರೂ ಅವರೆಲ್ಲರೂ ಒಂದೆಡೆ ಸೇರಿದ ಪುರಾವೆಗಳು ಇತಿಹಾಸದಲ್ಲಿ ಸಿಗುವುದಿಲ್ಲ. ಇಂಥ ಮೇಳನವನ್ನು ವಿರಸವಾಗದಂತೆ ಚಿತ್ರಿಸಿರುವುದು ಕವಿಕೌಶಲಕ್ಕೆ ಒಳ್ಳೆಯ ನಿದರ್ಶನ. ಈ ಕಥೆಯಲ್ಲಿ ಹಲವಾರು ರಸಗ್ರಂಥಿಗಳಿವೆ: ತನ್ನ ಕಪ್ಪುಬಣ್ಣದ ಬಗೆಗೆ ವಿಶ್ವಾಸದ ಸೋಗಿನಲ್ಲಿ ಸುಪ್ತವಾದ ಹಿಂಜರಿಕೆಯನ್ನು ಹೊಂದಿದ್ದ ವಿಜ್ಜಿಕೆಗೆ ಬಾಣಭಟ್ಟ ‘ನಿನ್ನನ್ನು ಮುನ್ನವೇ ನೋಡಿದ್ದರೆ ಮಹಾಶ್ವೇತೆಯನ್ನು ನಾನು ಬೇರೆಯಾಗಿಯೇ ಕಲ್ಪಿಸುತ್ತಿದ್ದೆ’ ಎಂದು ಹೇಳಿ ಉತ್ತೇಜಿಸುವುದಾಗಲಿ, ಹೊಸತಾಗಿ ಮದುವೆಯಾದ ಪಡೆವಳತಿ ಸೋವಲೆಗೆ ವಿಜ್ಜಿಕೆಯು ಸೀರೆ-ಬಳೆ-ತಾಂಬೂಲಗಳನ್ನು ನೀಡುವ ಮೂಲಕ ತನಗಿಲ್ಲದ ಸೌಭಾಗ್ಯ ಆಕೆಗೆ ಸಲ್ಲಲಿ ಎಂದು ಹೃದಯವಂತಿಕೆಯನ್ನು ತೋರುವುದಾಗಲಿ, ವಿಜ್ಜಿಕೆ ಆಶುಕವಿತೆಯನ್ನು ರಚಿಸಿದಾಗ ಅದರ ಅರ್ಥ ಆಕೆಯ ಬೋಯಿಗಳಿಗೂ ತಿಳಿಯಲೆಂದು ಭಗವತ್ಪಾದ ಶಂಕರರು ತಮಗೆ ತಿಳಿದಷ್ಟು ಕನ್ನಡದಲ್ಲಿಯೇ ಅದನ್ನು ವಿವರಿಸಿ ಔದಾರ್ಯವನ್ನು ಮೆರೆಯುವುದಾಗಲಿ - ಮರೆಯಲಾಗದ ಪ್ರಸಂಗಗಳು. ಕಥೆಯ ಮೊದಲಿಗೆ ರಘುವಂಶವನ್ನು ಓದುತ್ತಿದ್ದ ವಿಜ್ಜಿಕೆ ಬಳಿಕ ವಾತಾಪಿಗಾದ ದುರ್ಗತಿಯನ್ನು ನೆನಪಿಸಿಕೊಂಡು ಅಲ್ಲಿಂದ ಬಾಣಭಟ್ಟನತ್ತ ಸಾಗುವುದು ಆಲೋಚನೆಗಳ ವಿಪ್ರಕೀರ್ಣವಾದರೂ ಅದೊಂದು ಬಗೆಯಲ್ಲಿ ತರ್ಕಬದ್ಧ ಗತಿಗೆ ಕಲಾತ್ಮಕ ಉದಾಹರಣೆಯಾಗಿದೆ. ಹಲವು ಪದ್ಯಗಳ ಹೆಣಿಗೆ ಇಲ್ಲಿ ಕಂಡುಬಂದರೂ ಯಾವ ಪದ್ಯವನ್ನು ಯಾರ ಮುಂದೆ ಹೇಳಿಸಬೇಕೆಂಬ ಔಚಿತ್ಯ ಸ್ತುತ್ಯವಾಗಿದೆ: ಹಳ್ಳಿಯ ಹೆಣ್ಣಿನ ಮುಂದೆ ಆಕೆಗೆ ಅರ್ಥವಾಗುವ ಬತ್ತ ಕುಟ್ಟುವುದರ ಬಗೆಗಿನ ಪದ್ಯ, ಶಂಕರರ ಮುಂದೆ ಕಾಲದ ದುರ್ನಿವಾರ ಪ್ರಭಾವದ ಬಗೆಗಿನ ಅನ್ಯೋಕ್ತಿ, ದಂಡಿಯ ಮುಂದೆ ಕಲ್ಪನಾಪ್ರವಣತೆಯುಳ್ಳ ಸಮಸ್ಯಾಪೂರಣ, ಇತ್ಯಾದಿ. ನೃಸಿಂಹವರ್ಮನ ಕ್ರೋಧಕ್ಕೆ ಭಗ್ನಪ್ರೇಮವೂ ಕಾರಣವಿರಬಹುದು ಎಂಬ ಧ್ವನಿಯೂ ‘ಏಕೋಽಭೂನ್ನಲಿನಾತ್’ ಎಂಬ ಪ್ರಸಿದ್ಧ ಪದ್ಯದ ಕೊನೆಯ ಪಾದಕ್ಕೆ ಬಾಣಭಟ್ಟನ ಹೆಸರಿನಲ್ಲಿ ಲೇಖಕರು ಕಾಣಿಸಿರುವ ಹೊಸ ಅರ್ಥವೂ ಸೊಗಸಾಗಿವೆ.
‘ವಾರಾಣಸಿಯ ವಾರಾಂಗನೆ’ ಎಂಬ ಕಥೆ ಮೋಕ್ಷದ ನೆಲೆವೀಡಾದ ಕಾಶಿಯಲ್ಲಿ ಬ್ರಾಹ್ಮಣಸ್ತ್ರೀಯೊಬ್ಬಳು ವಾರಾಂಗನೆಯಾಗಿ ಬಂದು ನೆಲಸುವ ವಿಕಟ ಸನ್ನಿವೇಶವನ್ನು ಒಳಗೊಂಡಿದೆ. ಇದೂ ಕೂಡ ಒಂದೆರಡು ಚಾಟುಪದ್ಯಗಳ ಆಧಾರದ ಮೇಲೆ ರಚಿತವಾಗಿದೆ. ಸರಸ್ವತಿಯೆಂಬ ತನ್ನ ಜನ್ಮನಾಮವನ್ನು ವಿಕಟನಿತಂಬಾ ಎಂದು ಬದಲಿಸಿಕೊಳ್ಳುವ ಹೆಣ್ಣು ಈ ಮಾರ್ಪಾಟಿನ ಮೂಲಕ ತನ್ನ ಜೀವನವೇ ಮುಂದೆ ಕಾಣುವ ದಿಶಾಪರಿವರ್ತನೆಯನ್ನು ಸೂಚಿಸಿದಂತಾದಳು ಎಂಬುದು ಮಾರ್ಮಿಕ ಧ್ವನಿ. ವಿಕಟನಿತಂಬೆಯ ತಂದೆ ಬಾಹಟನಿಗೆ ಹಿಂದೆ ವೇಶ್ಯೆಯಾಗಿದ್ದು ಈಗ ಪರಿವ್ರಾಜಿಕೆಯಾದ ವೃದ್ಧೆಯೊಬ್ಬಳಿಂದ ಮಗಳು ಎಲ್ಲಿರಬಹುದೆಂಬ ಸುಳಿವು ಸಿಕ್ಕಿತು ಎಂಬುದು ಔಚಿತ್ಯಪೂರ್ಣವಾದ ಕಲ್ಪನೆ. ಈ ವೃತ್ತಾಂತದಲ್ಲಿ ಪ್ರಾಚೀನ ಭಾರತದಲ್ಲಿ ಗಣಿಕೆಯರಿಗಿದ್ದ ಉನ್ನತ ಸ್ಥಾನ-ಮಾನಗಳು ಚೆನ್ನಾಗಿ ಬಣ್ಣನೆಗೊಂಡಿವೆ; ಪ್ರತಿಮಾಲೆ ಮುಂತಾದ ಅಭಿಜಾತ ಕ್ರೀಡೆಗಳೂ ಸಮುಚಿತವಾಗಿ ಬಿತ್ತರಗೊಂಡಿವೆ.
‘ಭವದ ಬಸುರಿನ ಭಾರ’ ಎಂಬ ಕಥೆಯಲ್ಲಿ ಭವಭೂತಿಯ ಜೀವನವೃತ್ತಾಂತವಿದೆ. ತನ್ನ ರೂಪಕಗಳಲ್ಲಿ ಅವನೇ ಒದಗಿಸುವ ಕೆಲವೊಂದು ವಿವರಗಳನ್ನು ಕಲ್ಪನೆಗಳ ಜೊತೆಗೆ ಬೆಸೆಯುವ ಮೂಲಕ ಲೇಖಕರು ನೀಳ್ಗತೆಯನ್ನೇ ರಚಿಸಿದ್ದಾರೆ. ನಡುವೆ ಸಾಹಿತ್ಯದ ಬಗೆಗೆ ಒಳನೋಟದ ಮಾತುಗಳಿವೆ. ಉದಾಹರಣೆಗೆ ಕೆಲವು ಸಂಸ್ಕೃತಕವಿಗಳನ್ನು ಕುರಿತು ಭವಭೂತಿಯೇ ಆಡುವ ಮಾತುಗಳನ್ನು ಗಮನಿಸಬಹುದು: “ಭಕಾರದ ಕವಿಗಳಾದ ನಾವು ಕೆಲವರು - ಭಾರವಿ, ಭರ್ತೃಹರಿ, ಭಟ್ಟಬಾಣ - ವಿಚಿತ್ರ ಪ್ರಾಣಿಗಳು. ನಮಗೆ ಕೋಪವೂ ಹೆಚ್ಚು, ಕಾಠಿನ್ಯವೂ ಹೆಚ್ಚು; ಹಾಗೇ ಕರುಣೆ, ಕೋಮಲತೆ ಕೂಡ ... ಭಾರವಿಗೆ ಪಾಂಡಿತ್ಯ ಹೆಚ್ಚು, ಆದರೂ ಆತನ ಸ್ವೋಪಜ್ಞತೆ ಗಮನಾರ್ಹ; ಬಿಗಿಯಾದ ಭಾಷೆಯಲ್ಲಿಯೂ ತಿಳಿಯಾದ ಕೆಚ್ಚಿದೆ ... ಭರ್ತೃಹರಿಯ ಭಾಷೆ ತಿಳಿಯಾಗಿದ್ದರೂ ಅಲ್ಲಿ ಪೆಡಸಾಗದ ಓಜಸ್ಸು ಉದಾತ್ತವಾಗಿ ಮೆರೆದಿದೆ; ಎಲ್ಲಕ್ಕಿಂತ ಆತನ ಭಾವತೀವ್ರತೆಯ ಪ್ರಾಮಾಣಿಕತೆಗೆ ಹೋಲಿಕೆಯೇ ಇಲ್ಲ ... ಭಟ್ಟಬಾಣನಲ್ಲಿ ಪ್ರತಿಭೆ-ಪಾಂಡಿತ್ಯಗಳ ಸಂಗಮ ಚೆನ್ನಾಗಿದೆ; ಉದ್ದಾಮತೆ-ಕಲ್ಪಕಶಕ್ತಿಗಳೂ ಅತ್ಯದ್ಭುತ”. ಸಂಸ್ಕೃತಸಾಹಿತ್ಯರಸಿಕರೆಲ್ಲರ ಅನುಮೋದನೆಯನ್ನು ಪಡೆಯಬಲ್ಲ ಈ ವಾಕ್ಯಗಳು ಲೇಖಕರ ಸೂಕ್ಷ್ಮ ಸಂವೇದನೆಯನ್ನು ಸಾರುತ್ತವೆ. ಅಂತೆಯೇ ಪ್ರಾಚೀನ ಭಾರತದಲ್ಲಿ ನಾಟಕಮಂಡಳಿಗಳ ನಿರ್ವಾಹ, ನಟರ ತರಪೇತಿ, ಅವರಿಗೂ ಕರ್ಮಠರಾದ ಸಾಂಪ್ರದಾಯಿಕರಿಗೂ ಬರುತ್ತಿದ್ದ ತಿಕ್ಕಾಟ, ಮಾತು ಮತ್ತು ಹೆಣ್ಣುಮಕ್ಕಳ ಬಗೆಗೆ ಆ ಕಾಲದಲ್ಲಿ ಸಡಿಲವಾದಂತಿದ್ದ ಆದರ ಮತ್ತು ಇದರ ಬಗೆಗೆ ಭವಭೂತಿಯ ಆಕ್ರೋಶ - ಇಂಥ ಹತ್ತಾರು ವಿವರಗಳು ಸ್ವೋಪಜ್ಞತೆಯಿಂದ ನಿರೂಪಿತವಾಗಿವೆ. ಮೇಲಣ ಮೂರೂ ಕಥೆಗಳಲ್ಲಿ ಭಗವತ್ಪಾದ ಶಂಕರರ ಪ್ರಸ್ತಾವ ವ್ಯಕ್ತವಾಗಿಯೋ ಆನುಷಂಗಿಕವಾಗಿಯೋ ಬಂದಿದ್ದು ಅವರ ಬಗೆಗಿನ ಲೇಖಕರ ಭಕ್ತಿ-ಕೃತಜ್ಞತೆಗಳನ್ನು ತೋರ್ಪಡಿಸಿವೆ.
* * *
ಒಟ್ಟಿನಲ್ಲಿ ‘ಪುಟಗಳ ನಡುವಣ ನವಿಲುಗರಿ’ ಕನ್ನಡದ ಸಣ್ಣಕತೆಗಳ ವಲಯಕ್ಕೆ ಒಂದು ವಿನೂತನವಾದ ಸೇರ್ಪಡೆ. ಇಲ್ಲಿಯ ಕಥೆಗಳ ವಿಶ್ವರೂಪವನ್ನು ಗಣೇಶರದ್ದೇ ಮಹಾಕಾದಂಬರಿ ‘ಮಣ್ಣಿನ ಕನಸು’ ಅನಾವರಣಗೊಳಿಸುತ್ತದೆ. ಅದರಂತೆ ಈ ಕೃತಿಯೂ ಜನರ ಮೆಚ್ಚುಗೆಯನ್ನು ಗಳಿಸಿ ಅಭಿಜಾತ ಸಂಸ್ಕೃತಿ-ಸಾಹಿತ್ಯಗಳ ಬಗೆಗೆ ಲೋಕದಲ್ಲಿ ಆದರವನ್ನು ಮೂಡಿಸುವ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.
ಪ್ರಕೃತ ಲೇಖನ ಬೆಂಗಳೂರಿನ ವಸಂತ ಪ್ರಕಾಶನವು ಪ್ರಕಟಿಸಿರುವ “ಪುಟಗಳ ನಡುವಣ ನವಿಲುಗರಿ”ಯ ಕಡೆಯಲ್ಲಿ ಸೇರಿದೆ.
Concluded.