ಶೃಂಗಾರಶಯ್ಯೆ

ನಿದ್ರೆಯು ಪ್ರಕೃತಿಯಾದರೆ ಹಾಸಿಗೆಯು ಸಂಸ್ಕೃತಿ. ಮಂಚ-ಮಧುಮಂಚಗಳು ಮತ್ತೂ ಮಿಗಿಲಾದ ಸಂಸ್ಕೃತಿ. ಅಷ್ಟೇಕೆ, ಭೋಗಲೋಕದ ಸ್ವೀಕೃತಿ, ನಾಗರಕಜಗತ್ತಿನ ಸತ್ಕೃತಿ. ಸಂಸ್ಕೃತಸಾಹಿತ್ಯದಲ್ಲಿ ಈ ಎಲ್ಲ ಸ್ತರಗಳೂ ಸೇರಿ ಶೃಂಗಾರಶಯ್ಯೆಯು ಪದರುಪದರಾದ ಸುಪ್ಪತ್ತಿಗೆಯೇ ಆಗಿದೆ. ಅಲ್ಲಿಯ ಕೆಲವೊಂದು ಶಯ್ಯಾಸ್ವಾರಸ್ಯಗಳನ್ನು ವಾಚಿಕವಾಗಿ ಮಾತ್ರ ಸಹೃದಯರೊಡನೆ ಹಂಚಿಕೊಳ್ಳುವ ಹವಣು ಇಲ್ಲಿದೆ.

ಸಂಸ್ಕೃತದ ಶಾಸ್ತ್ರಜಗತ್ತು ಹಾಸುಗೆ-ಮಂಚಗಳನ್ನು ಕುರಿತು ವಿಪುಲವಾದ ವ್ಯಾಸಂಗವನ್ನೇ ಮಾಡಿದೆ. ಮಂಚ, ಪರ್ಯಂಕ, ಪಲ್ಯಂಕ, ಶಯ್ಯಾ, ಖಟ್ವಾ, ತಲ್ಪ ಮುಂತಾದ ಮೂಲಭೂತವಾದ ಹೆಸರುಗಳೂ ಮಾದರಿಗಳೂ ಅಲ್ಲದೆ ವಿಶಿಷ್ಟವಾದ ಸುಪ್ತಿಸಾಮಗ್ರಿಗಳು ಈ ನಿಟ್ಟಿನಲ್ಲಿ ರೂಪುಗೊಂಡಿವೆ. ಇವುಗಳ ನಿರ್ಮಾಣದ್ರವ್ಯವಾಗಿ ದಾರು (ಮರ), ವೇತ್ರ (ಬೆತ್ತ), ಚರ್ಮ, ಕಾರ್ಪಾಸ (ಹತ್ತಿ), ಲೋಹ, ರತ್ನ, ದಂತ ಮುಂತಾದ ಶಾಶ್ವತಸಾಮಗ್ರಿಗಳಲ್ಲದೆ ಹೂವು-ಚಿಗುರುಗಳಂಥ ತಾತ್ಕಾಲಿಕಸಾಮಗ್ರಿಗಳೂ ಬಳಕೆಯಾಗಿವೆ. ಬಳಸುವವರ ಅನುಕೂಲಕ್ಕೆ ತಕ್ಕಂತೆ, ರಚನಾಶಿಲ್ಪದ ವೈಶಿಷ್ಟ್ಯಕ್ಕೆ ಅನುಸಾರವಾಗಿ ಬಾಲಪರ್ಯಂಕ, ಮಿಥುನಪರ್ಯಂಕ, ಲಘುಪರ್ಯಂಕ, ದೋಲಾಪರ್ಯಂಕ, ಪ್ರಾಂಶುಪರ್ಯಂಕ, ಕುಬ್ಜಪರ್ಯಂಕ, ಪಟ್ಟಿಕಾಪರ್ಯಂಕ, ತೂಲಿಕಾಪರ್ಯಂಕ, ಭಸ್ತ್ರಿಪರ್ಯಂಕ ಮುಂತಾದ ಪ್ರಕಾರಗಳು ಆವಿಷ್ಕೃತವಾಗಿವೆ. ಇಂದಿನ Children Bed, Double Bed, Light Cot, Swing Cot, Tall Bed, Dwarf Bed, Spring Mattress, Soft Bed, Water / Air Bed ಮುಂತಾದ ಪ್ರಕಾರಗಳಿಗಿವು ನೇರವಾದ ಸಂವಾದಿಗಳಾಗಿವೆ.

ಲೋಹಪರ್ಯಂಕದಲ್ಲಿ ಚಿನ್ನ-ಬೆಳ್ಳಿಗಳಂಥವನ್ನೂ ಬಳಸಿದ ಉಲ್ಲೇಖಗಳುಂಟು. ರತ್ನಪರ್ಯಂಕದಲ್ಲಿ ಬಗೆಬಗೆಯಾದ ಅಮೂಲ್ಯಮಣಿಗಳ ಸಂಯೋಜನೆಯನ್ನೇ ಕಾಣಬಹುದು. ಸಾಲ, ಚಂದನ, ಹಾರಿದ್ರ, ತಿಂದುಕ, ಕಾಶ್ಮೀರ, ಅರ್ಜುನ, ವರ್ತ್ಮಕ, ಶಿಂಶಪಾ, ದೇವದಾರು ಮುಂತಾದ ಮರಗಳನ್ನು ಬಳಸಿ ಮಾಡಿದ ಮಂಚಗಳಿಗೆ ಕೊರತೆಯಿಲ್ಲ. ಬೂರುಗದ ಹತ್ತಿಯನ್ನು ತುಂಬಿ ಸಜ್ಜುಗೊಳಿಸಿದ ಶಾಲ್ಮಲೀತೂಲಶಯ್ಯೆಯಾಗಲಿ, ಹಂಸದಂಥ ಹಕ್ಕಿಗಳ ತಿಪ್ಪುಳವನ್ನು ತುಂಬಿ ಅಣಿಮಾಡಿದ ಹಂಸತೂಲಿಕಾತಲ್ಪವಾಗಲಿ ಕಾವ್ಯ-ಲೋಕಪ್ರಸಿದ್ಧವಾಗಿವೆ. ರಸಿಕಭೋಗಿಗಳ ಹಾಗೂ ವಿರಹವಿಕ್ಲವರ ಹಿತಕ್ಕಾಗಿ ಹೂವಿನ ಚಿಗುರಿನ ಹಾಸುಗೆಗಳು ಕಾವ್ಯಜಗತ್ತಿನಲ್ಲಿ ತುಂಬಿತುಳುಕಿವೆ. ತೂಗುಯ್ಯಾಲೆಯಂಥ ಮಂಚಗಳಲ್ಲದೆ ಪ್ಲುತಕಗಳನ್ನು (Spring) ಹೊಂದಿಸಿದ ಮಂಚಗಳನ್ನೂ ನಮ್ಮ ಶಾಸ್ತ್ರಗಳು ಹೇಳಿವೆ. ಅಷ್ಟೇಕೆ, ಸಂಗೀತಮಂಚಗಳೂ ಉಂಟು; ಚಕ್ರಮಂಚದಂಥವೂ (ವರ್ತುಲಾಕಾರದ ಮಂಚ) ಉಂಟು. ಬೇರೆಬೇರೆ ಋತುಗಳಿಗೆ ತಕ್ಕಂತೆ ಸಜ್ಜುಗೊಂಡ ಹಾಸುಗೆ-ಮಂಚಗಳು ಅನೇಕ. ಇವೆಲ್ಲವನ್ನು ಕುರಿತು ಮಾನಸಾರ, ಮಾನಸೋಲ್ಲಾಸ, ಶಿವತತ್ತ್ವರತ್ನಾಕರ, ಸಮರಾಂಗಣಸೂತ್ರಧಾರವೇ ಮುಂತಾದ ಶಾಸ್ತ್ರಗ್ರಂಥಗಳು ಸಾಕಷ್ಟು ವಿವರಗಳನ್ನು ಕೊಟ್ಟಿರುವುದು ಮುದಾವಹ. ಕನ್ನಡದಲ್ಲಿ ಕೂಡ ಚಪ್ಪರಮಂಚ, ಮೇಲುಚಪ್ಪರಮಂಚ, ಗುಜ್ಜಾರಿಮಂಚ, ಸೆರೆಮಂಚ, ಶಕುನಿಮಂಚ, ತೂಗುಮಂಚವೇ ಮೊದಲಾದ ಪ್ರಕಾರಗಳ ಉಲ್ಲೇಖಗಳಿವೆ. ಭರತೇಶವೈಭವಕಾವ್ಯದ ಶಯ್ಯಾಗೃಹಸಂಧಿಯು ಹಲವು ಬಗೆಯ ಹಾಸುಗೆಗಳ ವರ್ಣನೆ ಮಾಡಿದೆ.

ಸದ್ಯಕ್ಕೆ ನಾವು ಈ ಬಗೆಯ ಶಯನಸಾಮಗ್ರಿಯ ಸಂಶೋಧನೆಗೆ ತೊಡಗಿಲ್ಲ. ಕೇವಲ ಭೌತದ್ರವ್ಯವಾದ ಹಾಸುಗೆಯು ಭಾವದ್ರವ್ಯವಾಗಿ ಹೇಗೆ ಬಿಚ್ಚಿಕೊಳ್ಳುವುದೆಂಬುದನ್ನು ಸಂಸ್ಕೃತಸಾಹಿತ್ಯದ ಕೆಲವೊಂದು ಉಲ್ಲೇಖಗಳಿಂದ ಅರಿಯೋಣ. ವಾಸ್ತವವು ಕಲೆಯಾಗುವುದೆಂದರೆ ಭವವು ಭಾವವಾದಂತೆ, ತಥ್ಯವು ಮೌಲ್ಯವಾದಂತೆ. ಈ ಕಾರಣದಿಂದಲೇ ಮಾನವಚಿತ್ತವೃತ್ತಿಗಳ ಸೋಂಕಿಲ್ಲದ ಯಾವುದೇ ಪದಾರ್ಥಕ್ಕೆ ಕಲಾಪ್ರಪಂಚದಲ್ಲಿ ಕಿಮ್ಮತ್ತಿಲ್ಲ. ಹೀಗೆ ಬದುಕಿನ ಭಾವನೆಗಳೊಡನೆ ಬೆಸೆದುಕೊಂಡ ಶಯ್ಯೆಗಳನ್ನು ಮಹಾಕವಿಗಳು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ದಿಟವೇ, ರಾಮಾಯಣದಲ್ಲಿ ಪಟ್ಟಾಭಿಷೇಕಕ್ಕೆ ಮುನ್ನ ವಸಿಷ್ಠರ ಆಜ್ಞೆಯಂತೆ ಶ್ರೀರಾಮ-ಸೀತೆಯರು ಮಲಗಿದ ಸ್ಥಂಡಿಲಶಯ್ಯೆಯಾಗಲಿ, ಗುಹಾತಿಥ್ಯದ ಕಾಲದಲ್ಲಿ ಲಕ್ಷ್ಮಣನು ಅವರಿಗೆ ಅಣಿಮಾಡಿಕೊಟ್ಟ ಚಿಗುರೆಲೆಯ ಹಾಸಾಗಲಿ, ಸಮುದ್ರನನ್ನು ಒಲಿಸಿಕೊಳ್ಳಲು ವ್ರತನಿಷ್ಠನಾಗಿ ರಾಮನು ಮಲಗಿದ ದರ್ಭಶಯ್ಯೆಯಾಗಲಿ, ಮಹಾಭಾರತದಲ್ಲಿ ಭೀಷ್ಮನು ಮಲಗಿದ ಶರಶಯ್ಯೆಯಾಗಲಿ ಮಹಾಕವಿಗಳು ರೂಪಿಸಿದ ತಲ್ಪಗಳೇ ಆದರೂ ಅವು ನಮ್ಮ ಪ್ರಕೃತೋಪಯೋಗಕ್ಕೆ ಬರುವಂತಿಲ್ಲ. ಏಕೆಂದರೆ ಇವುಗಳಲ್ಲಿ ಶೃಂಗಾರದ ಸೋಂಕಿಲ್ಲ.  

ಹೇಳಿ ಕೇಳಿ ಸಾಹಿತ್ಯವು ಮಾನವಜಗತ್ತಿನ ಚಿತ್ತವೃತ್ತಿಗಳ ಸತ್ತ್ವೋದ್ರಿಕ್ತವರ್ಣನೆ. ಇನ್ನು ಈ ಚಿತ್ತವೃತ್ತಿಗಳ ಪರಾಕಾಷ್ಠೆಯಿರುವುದು ಶೃಂಗಾರದಲ್ಲಿಯೇ. ಶೃಂಗಾರದ ಪರ್ಯಂತಭೂಮಿಯು ಶಯ್ಯೆಯಲ್ಲದೆ ಮತ್ತೇನು? ಹೀಗಾಗಿ ಇವುಗಳನ್ನು ಸತ್ಕವಿಗಳು ಚೆನ್ನಾಗಿ ಬಳಸಿಕೊಂಡಿರುವುದು ಆಶ್ಚರ್ಯವಲ್ಲ. ತಾಂತ್ರಿಕವಾಗಿ ಇಂಥ ಹಾಸುಗೆಗಳನ್ನು ಶೃಂಗಾರರಸಕ್ಕೆ ಅನುಕೂಲಿಸುವ ಉದ್ದೀಪನವಿಭಾವಗಳಲ್ಲಿ ಒಂದೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಈ ಪರಿಯ ತಲ್ಪಗಳಲ್ಲಿ ಅವೆಷ್ಟು ವಿರಹಾಶ್ರುಗಳು ಸುರಿದು ಅಲ್ಲಿಯ ತಲೆದಿಂಬುಗಳನ್ನು ಒದ್ದೆಮಾಡಿವೆಯೋ, ಸಂಭೋಗಸೌರಭಗಳು ಸೊಕ್ಕು ಅದೆಷ್ಟು ಹೂಗಳ ಪರಿಮಳಗಳನ್ನು ಗೇಲಿಗರೆದಿವೆಯೋ, ಹಮ್ಮು-ಬಿಮ್ಮುಗಳ ಉರುಳು-ಹೊರಳುಗಳು ಅದೆಷ್ಟು ಸುಕ್ಕುಗಳನ್ನು ತಂದುಕೊಟ್ಟಿವೆಯೋ ಲೆಕ್ಕವಿರಿಸಲಾದೀತೇ!

ಇಂಥ ಒಂದು ಸೂಕ್ಷ್ಮಸುಂದರಸನ್ನಿವೇಶವನ್ನು ಭಾಸಮಹಾಕವಿಯ ಮೇರುಕೃತಿ ಸ್ವಪ್ನವಾಸವದತ್ತದಲ್ಲಿ ಕಾಣಬಹುದು. ಕೃತಿಯಿಂದ ಧ್ವನಿತವಾಗುವಂತೆ ಉದಯನಮಹಾರಾಜನು ಅಗ್ನಿಪ್ರಮಾದದಲ್ಲಿ ಅಳಿದ ವಾಸವದತ್ತೆಯಲ್ಲಿಯೇ ಅನುರಕ್ತನಾಗಿರುವನೆಂಬ ಸಂಗತಿಯನ್ನು ಅರಿತ ಅವನ ನವವಧು ಪದ್ಮಾವತಿಯು ಮೇಲ್ನೋಟಕ್ಕೆ ನೆಮ್ಮದಿಯಿಂದಿದ್ದರೂ ಅಂತರಂಗದಲ್ಲಿ ಪ್ರಕ್ಷುಬ್ಧಳಾಗಿದ್ದಾಳೆ; ಅವಳ ಈ ಕ್ಷೋಭೆಯೇ ತಲೆನೋವನ್ನು ತಂದಿತ್ತಿದೆ. ಹೀಗೆ ಶಿರೋವೇದನೆಯಿಂದ ಕಂಗೆಟ್ಟ ಸತಿಯನ್ನು ಸಂತವಿಡಲೆಂದು ಸ್ವಭಾವದಾಕ್ಷಿಣ್ಯವುಳ್ಳ ಉದಯನನು ಅವಳಿರುವ ಅಂತಃಪುರಕ್ಕೆ ಬಂದಿದ್ದಾನೆ. ಅದು ತಲೆಯ ನೋವಿನ ಉಪಶಾಂತಿಗೆ ಅನುಕೂಲಿಸುವಂತೆ ತಂಪಾಗಿ ರೂಪುಗೊಂಡ ಸಮುದ್ರಗೃಹ. ಅಲ್ಲಿಗೆ ದೊರೆಯು ಬಂದಾಗ ಹಾಸುಗೆಯಲ್ಲಿ ಪದ್ಮಾವತಿಯು ಕಾಣಲಿಲ್ಲ. ಅವನೊಡನಿದ್ದ ವಿದೂಷಕ ವಸಂತಕನು ಆಕೆಯು ಅಲ್ಲಿ ಮಲಗಿದ್ದು ಇದೀಗ ಎದ್ದುಹೋಗಿರಬಹುದೆಂದು ಹೇಳುತ್ತಾನೆ. ಆಗ ಉದಯನನು ಆಂಗ್ಲಸಾಹಿತ್ಯದ ಸುಪ್ರಸಿದ್ಧ ಪತ್ತೇದಾರ ಶೆರ್ಲಾಕ್ ಹೋಮ್ಸಿನಂತೆ ಸೂಕ್ಷ್ಮೇಕ್ಷಿಕೆಯಿಂದ ಪರಿಶೀಲಿಸಿ ಆಕೆಯು ಅಲ್ಲಿ ಮಲಗಿಯೇ ಇರಲಿಲ್ಲವೆಂಬ ನಿಗಮನವನ್ನು ಮಾಡುತ್ತಾನೆ. ಆಗ ಅವನು ವರ್ಣಿಸುವ ಹಾಸುಗೆಯ ರೀತಿ ಅನ್ಯಾದೃಶವಾಗಿದೆ:

ಶಯ್ಯಾ ನಾವನತಾ ತಥಾಸ್ತೃತಸಮಾ ನ ವ್ಯಾಕುಲಪ್ರಚ್ಛದಾ

ನ ಕ್ಲಿಷ್ಟಂ ಹಿ ಶಿರೋಪಧಾನಮಮಲಂ ಶೀರ್ಷಾಭಿಘಾತೌಷಧೈಃ |

ರೋಗೇ ದೃಷ್ಟಿವಿಲೋಭನಂ ಜನಯಿತುಂ ಶೋಭಾ ನ ಕಾಚಿತ್ಕೃತಾ

ಪ್ರಾಣೀ ಪ್ರಾಪ್ಯ ರುಜಾ ಪುನರ್ನ ಶಯನಂ ಶೀಘ್ರಂ ಸ್ವಯಂ ಮುಂಚತಿ || (೫.೪)

(ಮಲಗಿದ ಭಾರದಿಂದ ಹಾಸುಗೆಯು ಹಳ್ಳವಾಗಿಲ್ಲ. ಹಾಸಿದ ಹಚ್ಚಡವು ಸುಕ್ಕಾಗದೆ ಹಾಗೆಯೇ ಒಪ್ಪವಾಗಿದೆ. ತಲೆನೋವಿನ ಪರಿಹಾರಕ್ಕೆಂದು ಹಚ್ಚಿಕೊಂಡ ಔಷಧಗಳಿಂದ ತಲೆದಿಂಬು ಮಾಸಿಹೋಗಿಲ್ಲ. ಮಲಗಿದ ರೋಗಿಯ ಸಾಂತ್ವನಕ್ಕೆಂದು ಹತ್ತಿರದಲ್ಲಿ ಯಾವುದೇ ಸಿಂಗಾರವು ಸಂದಿಲ್ಲ. ಅಸ್ವಸ್ಥರಾದ ಜೀವಿಗಳು ಒಮ್ಮೆ ಹಿಡಿದ ಹಾಸುಗೆಯನ್ನು ಬೇಗ ಬಿಟ್ಟು ಮೇಲೇಳುವುದಿಲ್ಲ).

ಮೇಲ್ನೋಟಕ್ಕೆ ಒಪ್ಪವಾಗಿ ಹಾಸಿದ ಈ ಹಾಸುಗೆಯೂ ಅದರ ಅಚ್ಚುಕಟ್ಟುತನದ ಬಗೆಗೆ ಉದಯನಮಹಾರಾಜನು ನಡಸಿದ ಪರಿಶೀಲನೆಯೂ ಇದೊಂದು ಶೃಂಗಾರೇತರಶಯ್ಯೆಯೆಂದು ಹೇಳಿದರೂ ಈ ಹಾಸುಗೆಯ ಹೊದಿಕೆಯನ್ನು ಸ್ವಲ್ಪ ಸರಿಸಿ ಬಗೆದುನೋಡಿದರೆ ವಾಸವದತ್ತೆಯ ಚಿರಾನುರಾಗದಲ್ಲಿ ಮುಳುಗಿಹೋದ ಉದಯನನು ಮುಗ್ಧೆಯೆಂಬಂತೆ ತೋರಿದರೂ ಜ್ಞಾತಯೌವನೆಯಾದ ಪದ್ಮಾವತಿಗೆ ಯಾವುದೇ ಬಗೆಯ ಶಯ್ಯಾಸುಖವನ್ನು ನೀಡಿಲ್ಲದ ಸೂಕ್ಷ್ಮ ಧ್ವನಿಸದಿರದು. ಹಗಲೂ ಇರುಳೂ ಹಾಸಿದ ಹಾಗೆಯೇ ಒಪ್ಪವಾಗಿರುವ ತಲ್ಪವು ನವದಂಪತಿಗಳ ದಾಂಪತ್ಯದ ವೈಫಲ್ಯವನ್ನು ಅದೆಷ್ಟು ಸುಕುಮಾರವಾಗಿ ಹೇಳುತ್ತದೆಯೋ! ಇದನ್ನು ಮಹಾಕವಿಯಲ್ಲದೆ ಮತ್ತಾರು ತಾನೆ ಇಷ್ಟು ನವುರಾಗಿ ನಿವೇದಿಸಬಲ್ಲರು? ಸ್ವಪ್ನವಾಸವದತ್ತವು ಶಿರೀಷಪೇಶಲವಾದ ಮಹಾಕೃತಿ. ಇಲ್ಲಿಯ ಪ್ರತಿಯೊಂದು ಮುಖ್ಯಪಾತ್ರವೂ ಪ್ರತಿಯೊಂದು ಘಟನೆಯೂ ನಯ-ವಿನಯಗಳಿಗೆ, ಸೂಕ್ಷ್ಮತೆ-ಸಂವೇದನೆಗಳಿಗೆ ತವರುಮನೆ. ಕೆಡುಕಿನ ಸೋಂಕೂ ತೋರದ, ಒರಟುತನದ ನೆರಳೂ ಕಾಣದ ಈ ಕೃತಿಯ ಆಳದಲ್ಲಿ ಅದೆಷ್ಟು ಕಠೋರಸತ್ಯಗಳ, ಮಾರ್ಮಿಕವೇದನೆಗಳ ಹೆಣಿಗೆಯಿದೆ! ಇದಿಷ್ಟನ್ನೂ ಒಂದು ಹಾಸುಗೆಯ ಸ್ವಭಾವೋಕ್ತಿಸುಂದರವಾದ ವರ್ಣನೆಯಿಂದಲೇ ಕವಿಯು ಸಾಧಿಸಿದ್ದಾನೆ.

ಇದೇ ನಾಟಕದ ಮೂರನೆಯ ಅಂಕದಲ್ಲಿ ತಾನು ಬದುಕಿರುವಾಗಲೇ ತನ್ನ ಗಂಡನಿಗಾಗಲಿರುವ ಮರುಮದುವೆಯ ಹೊತ್ತಿನಲ್ಲಿ, ತನಗೆ ಬರಲಿರುವ ಸವತಿಗೆ ವರಣಮಾಲಿಕೆಯನ್ನು ಕಟ್ಟುವ ದುರ್ಭರಪ್ರಸಂಗ ವಾಸವದತ್ತೆಗೆ ಬರುವುದಷ್ಟೆ. ಆಗ ಅವಳು ಈ ವಿಕಟಸಂದರ್ಭವನ್ನು ಅದು ಹೇಗೋ ನಿರ್ವಹಿಸಿ ಕಡೆಗೆ ತನ್ನ ಹಾಸುಗೆಯಲ್ಲಿ ತಾನಿನ್ನು ಸ್ವಕೀಯಸಂಕಟವನ್ನು ವಿನೋದಿಸುವೆನೆಂದು ಹೊರಡುತ್ತಾಳೆ (ಅಪಿ ತಾವತ್ ಶಯ್ಯಾಯಾಂ ಮಮ ದುಃಖಂ ವಿನೋದಯಾಮಿ; ಯದಿ ನಿದ್ರಾಂ ಲಭೇ). ಅರಮನೆಯೆಲ್ಲ ಉದಯನ-ಪದ್ಮಾವತಿಯರ ವಿವಾಹವೈಭವದಲ್ಲಿ ಮುಳುಗಿರಲು ಚಿರವಿರಹಿಣಿ ವಾಸವದತ್ತೆಯ ಅಳಲನ್ನು ಹಂಚಿಕೊಳ್ಳಲು ಅದಾರು ತಾನೇ ತೋಳನ್ನಿತ್ತಾರು? ಕೇವಲ ಆಕೆಯ ವಿರಹವ್ರತಶಯ್ಯೆಯಲ್ಲದೆ ಮತ್ತಾರಿಗೂ ಅವಳ ಕಣ್ಣೀರನ್ನು ಹಿಂಗಿಸಿಕೊಳ್ಳುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ; ಅಷ್ಟೇಕೆ, ಅರಿವೇ ಇಲ್ಲ. 

ನಾವಿನ್ನು ಕಾಳಿದಾಸನತ್ತ ಹೋಗೋಣ. ಕಾಳಿದಾಸನಿಲ್ಲದೆ ಶೃಂಗಾರಶಯ್ಯೆಯ ಉಲ್ಲೇಖವಾದರೂ ಹೇಗೆ ಸಾರ್ಥಕವಾದೀತು? ಅವನ ಶಾಕುಂತಲನಾಟಕದಲ್ಲಿ ಶಕುಂತಲೆಯ ವಿರಹಶಯ್ಯೆಯ ಪ್ರಸ್ತಾವವಿದೆ. ಅದು ಉದ್ದುದ್ದವಾದ ತೊಟ್ಟುಗಳಿಂದ ಕೂಡಿದ ತಾವರೆಯೆಲೆಗಳ ಹಾಸುಗೆ (ಮೃಣಾಲವಂತಿ ಚ ನಲಿನೀಪತ್ರಾಣಿ). ಶಕುಂತಲೆ-ದುಷ್ಯಂತರ ನಡುವೆ ಚಕ್ಷೂರಾಗವು (ಮೊದಲ ನೋಟದ ಬೇಟ) ಸಿದ್ಧಿಸಿದೆ. ನಲ್ಲನ ವಿರಹದಲ್ಲಿ ಶಕುಂತಲೆ ತತ್ತರಿಸಿದ್ದಾಳೆ. ನಿರುಪಾಯರಾದ ಗೆಳತಿಯರು ಅವಳಿಗೆ ಹೂ-ಚಿಗುರುಗಳ ಹಾಸುಗೆಯನ್ನು ಅಣಿಮಾಡಿದ್ದಾರೆ. ಅದರ ಮೇಲೆ ಮಲಗಿ ತಂಪಾದ ಕಮಲಪತ್ರಗಳಿಂದ ಬೀಸಿಸಿಕೊಂಡರೂ ಆಕೆಗೆ ಉಪಶಾಂತಿ ಸಿಗುತ್ತಿಲ್ಲ. ಗತ್ಯಂತರವಿಲ್ಲದೆ ಅವಧೀರಣ(ಪ್ರಣಯನಿರಾಕರಣ)ಭಯವನ್ನೂ ಬಿಟ್ಟು ಮದನಲೇಖವನ್ನು ಬರೆಯಲೂ ಅವಳು ಸಿದ್ಧಳಾದಳು. ಸುದೈವದಿಂದ ಆ ಹೊತ್ತಿಗೆ ದುಷ್ಯಂತನೇ ಬಂದ; ಕಥೆಯು ಆ ಹೊತ್ತಿಗೆ ಸುಖಾಂತವೇ ಆಯಿತು. ಅನಂತರ ಆಕಸ್ಮಿಕವಾಗಿ ಬಂದ ಗೌತಮಿಯ ಜೊತೆ ಶಕುಂತಲೆಯು ಆ ಹಾಸುಗೆಯನ್ನಳಿದು ತೆರಳಬೇಕಾಯಿತು. ಆಗ ದುಷ್ಯಂತನು ಅವಳು ಬಿಟ್ಟೆದ್ದ ವಿರಹಶಯ್ಯೆಯನ್ನೂ ಅಲ್ಲಿಯೇ ಉಳಿಸಿಹೋದ ಪ್ರಣಯಪತ್ರವನ್ನೂ ಅಲ್ಲಲ್ಲಿಯೇ ಜಾರಿಸಿಕೊಂಡಿದ್ದ ತಂಪಿನ ತಾವರೆಬಳ್ಳಿಗಳನ್ನೂ ಕಂಡು ತನಗೊದಗಿದ ಹೃದಯಪಾರವಶ್ಯವನ್ನು ಹೀಗೆ ಹೇಳಿಕೊಳ್ಳುತ್ತಾನೆ:

ತಸ್ಯಾಃ ಪುಷ್ಪಮಯೀ ಶರೀರಲುಲಿತಾ ಶಯ್ಯಾ ಶಿಲಾಯಾಮಿಯಂ

ಕ್ಲಾಂತೋ ಮನ್ಮಥಲೇಖ ಏಷ ನಲಿನೀಪತ್ರೇ ನಖೈರರ್ಪಿತಃ |

ಹಸ್ತಾದ್ಭ್ರಷ್ಟಮಿದಂ ಬಿಸಾಭರಣಮಿತ್ಯಾಸಜ್ಯಮಾನೇಕ್ಷಣೋ

ನಿರ್ಗಂತುಂ ಸಹಸಾ ನ ವೇತಸಗೃಹಾಚ್ಛಕ್ನೋಮಿ ಶೂನ್ಯಾದಪಿ || (೩.೨೩)

(ಅವಳ ಮೈಹೊರಳಿನಿಂ ಕಂದಿರ್ಪ ಸುಮಶಯ್ಯೆ ಈ ಶಿಲಾಫಲಕದೊಳೆ ಬಾಡುತಿಹುದು

ಅವಳ ಸೆಳ್ಳುಗುರುನಿಂ ಕಮಲದಳದೊಡಲಿನೊಳ್ ಬರೆದೊಲವಿನೀ ಓಲೆ ಕಮರುತಿಹುದು

ಅವಳ ಮುಂಗೈಯ ತಾವರೆಬಳ್ಳಿ ಜಗುಳಿಹುದು; ನೋಟವೆನ್ನದು ಇಲ್ಲಿ ಕೀಲಿಸಿಹುದು

ಇಂತು ಬರಿದಿರ್ದೊಡಂ ಈ ಬಳ್ಳಿಮಾಡದಿಂ ತೆರಳಲೆನಗಿನ್ನೇಕೊ ಕಾಲೆಳಸದು)

ಇಲ್ಲಿಯ ವಿರಹಶಯ್ಯೆ ಮತ್ತದರ ಪರಿಸರಗಳೆಲ್ಲ ವಿರಹಿಣಿಯ ಅನುಪಸ್ಥಿತಿಯಲ್ಲಿಯೂ ನಾಯಕನಿಗೆ ಹೇಗೆ ಉದ್ದೀಪಕವೆನಿಸಿವೆಯೆಂಬುದನ್ನು ಪರಿಭಾವಿಸಿದಾಗ ಕವಿಯ ಕೌಶಲ ಮನಮುಟ್ಟದಿರದು. ಜೊತೆಗೆ, ಕಾಳಿದಾಸನಿಲ್ಲಿ ಕಲ್ಪಿಸಿದ ವಿವರಗಳು ಆತನ ಪರಿಶೀಲನಶಕ್ತಿಗೂ ಸಾಕ್ಷಿಯಾಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಶಕುಂತಲೆಯು ಅಲ್ಲಿಯೇ ಬಿಟ್ಟುಹೋಗಿದ್ದ ಒಲವಿನ ಓಲೆಯನ್ನು ದುಷ್ಯಂತನು ಕೊಂಡೊಯ್ದನೇ ಇಲ್ಲವೇ? ಎಂಬ ಸುಂದರಸಂದೇಹವನ್ನೂ ಕವಿಯಿಲ್ಲಿ ಬಿತ್ತಿರುವುದು ಅನ್ಯಾದೃಶವಾದ ಕಾವ್ಯಶಿಲ್ಪ.

ಪದ್ಮಾವತಿಯ ಶಯ್ಯೆಗೆ ಆಕೆಯ ವಿರಹವನ್ನು ಒಪ್ಪಿಸಿಕೊಳ್ಳುವಷ್ಟು ಕೂಡ ಸೌಭಾಗ್ಯವಿಲ್ಲ. ಆ ವಿಷಯದಲ್ಲಿ ವಾಸವದತ್ತೆಯ ಹಾಸುಗೆಯೇ ಹೆಚ್ಚು ಪುಣ್ಯ ಮಾಡಿದೆಯೆನ್ನಬೇಕು! ಶಕುಂತಲೆಯ ವಿರಹಶಯ್ಯೆಗೆ ಸಹಜವಾಗಿಯೇ ಮಿಗಿಲಾದ ಸೌಂದರ್ಯವಿದೆ. ಕಾಳಿದಾಸನ ಕಾವ್ಯವಲ್ಲವೇ, ಅವನ ನುಡಿಜಾಣ್ಮೆಯ ನುಣ್ಪು-ಗುಣ್ಪುಗಳು ಎಂದಿಗೂ ಅಚಿಂತ್ಯಮನೋಹರ. ಆದುದರಿಂದ ಅವನ ಅಡಿಜಾಡಿನಲ್ಲಿಯೇ ಮುಂದಿನ ಕವಿಗಳು ನಡೆದುದರಲ್ಲಿ ಅಚ್ಚರಿಯಿಲ್ಲ.

ಶೀಲಾದಿತ್ಯ ಹರ್ಷವರ್ಧನನು ಇಂಥ ಕವಿಗಳಲ್ಲೊಬ್ಬ. ಈತನ ರತ್ನಾವಳೀನಾಟಿಕೆಯಲ್ಲಿ ವಿರಹವಿದೀರ್ಣೆಯಾದ ಸಾಗರಿಕೆಯನ್ನು ಕಾಣಲಾಗದೆಹೋದ ದೊರೆ ವತ್ಸರಾಜನು ಅವಳ “ಮದನಾವಸ್ಥಾಸೂಚಕ”ವೂ “ಕಮಲಿನೀದಳಮೃಣಾಲವಿರಚಿತ”ವೂ ಆದ ಶಯನೀಯವನ್ನು ಕಂಡು ಸುನಿಪುಣವಾದ ನಿಗಮನಗಳನ್ನು ಮಾಡುತ್ತಾನೆ. ಅವು ವತ್ಸರಾಜನ ರಸಿಕತೆಗೂ ಕವಿಯ ಚಮತ್ಕಾರಪ್ರವಣತೆಗೂ ಸಾಗರಿಕೆಯ ಕಾಯಸೌಂದರ್ಯಕ್ಕೂ ಏಕಕಾಲದಲ್ಲಿ ಒಳ್ಳೆಯ ನಿದರ್ಶನಗಳಾಗಿವೆ:

ಪರಿಮ್ಲಾನಂ ಪೀನಸ್ತನಜಘನಸಂಗಾದುಭಯತಃ

ಸ್ತನೋರ್ಮಧ್ಯಸ್ಯಾಂತಃ ಪರಿಮಿಲನಮಪ್ರಾಪ್ಯ ಹರಿತಮ್ |

ಇದಂ ವ್ಯಸ್ತನ್ಯಾಸಂ ಶ್ಲಥಭುಜಲತಾಕ್ಷೇಪವಲನೈಃ

ಕೃಶಾಂಗ್ಯಾಃ ಸಂತಾಪಂ ವದತಿ ಬಿಸಿನೀಪತ್ರಶಯನಮ್ || (೨.೧೩)

(ತುಂಬಿದೆದೆಯ ಮತ್ತು ಕಿಬ್ಬೊಟ್ಟೆಗಳ ಒತ್ತಡದಲ್ಲಿ ತಾವರೆಯ ದಳಗಳ ಈ ಹಾಸುಗೆ ಎರಡು ಕಡೆಯೂ ನಲುಗಿಹೋಗಿದೆ. ಇವೆರಡರ ನಡುವಿನ ಭಾಗದಲ್ಲಿ ಆಕೆಯ ಒಡಲಿನ ಸಂಪರ್ಕವೇ ಇಲ್ಲದ ಕಾರಣ, ಕಮಲಪತ್ರಗಳು ಸುಕ್ಕಾಗದೆ ಮುಕ್ಕಾಗದೆ ಹಸುರಾಗಿ ನಳನಳಿಸಿವೆ. ಈ ಶಯ್ಯೆಯ ಇರ್ಕೆಲಗಳು ಅವಳ ತೆರಪಿಲ್ಲದ ಬಳ್ಳಿದೋಳಿನ ಹೊಯ್ದಾಟದ ಕಾರಣ ಚೆಲ್ಲಾಪಿಲ್ಲಿಯಾಗಿವೆ. ಅಂತೂ ಆ ತನ್ವಿಯ ವಿರಹತಾಪವನ್ನು ಈ ತಲ್ಪವು ಚೆನ್ನಾಗಿ ತಿಳಿಸಿದೆ).

ಸಂಸ್ಕೃತಕವಿಗಳು ತಮ್ಮ ನಾಯಿಕೆಯರ ಸೌಂದರ್ಯವನ್ನು ಹೇಗೆಲ್ಲಾ ವ್ಯಂಜಿಸಬಲ್ಲರೆಂಬುದಕ್ಕೆ ಸಾಕ್ಷಿಯಾಗಿ ಇದಕ್ಕಿಂತ ಸುಂದರವಾದ ಹಾಸುಗೆಯ ಚಿತ್ರ ಮತ್ತೊಂದಿಲ್ಲ.

ಇವೆಲ್ಲ ವಿರಹಶಯ್ಯೆಗಳ ಕಥೆಯಾಯಿತು, ಅಥವಾ ವ್ಯಥೆಯೇ ಆಯಿತು. ಈಗ ನಾವು ಸಂಭೋಗಶಯ್ಯೆಯ ಚಿತ್ರವೊಂದನ್ನು ಗಮನಿಸೋಣ. ಇದು ಅಮರುಕನ ಅಮರಕೃತಿ ಅಮರುಕಶತಕದ ಒಂದು ಪದ್ಯ:

ಕ್ವಚಿತ್ತಾಂಬೂಲಾಕ್ತಃ ಕ್ವಚಿದಗುರುಪಂಕಾಂಕಮಲಿನಃ

ಕ್ವಚಿಚ್ಚೂರ್ಣೋದ್ಗಾರೀ ಕ್ವಚಿದಪಿ ಚ ಸಾಲಕ್ತಕಪದಃ |

ವಲೀಭಂಗಾಭೋಗೈರಲಕಪತಿತೈಃ ಶೀರ್ಣಕುಸುಮೈಃ

ಸ್ತ್ರಿಯಾ ನಾನಾವಸ್ಥಂ ಪ್ರಥಯತಿ ರತಂ ಪ್ರಚ್ಛದಪಟಃ || (೬೫)

(ಕೆಲವೆಡೆ ತಾಂಬೂಲದ ಗುರುತುಗಳು, ಮತ್ತೆ ಕೆಲವೆಡೆ ಅಗುರು-ಚಂದನಗಳ ಅಂಕನಗಳು, ಮತ್ತೆ ಕೆಲವೆಡೆ ಕರ್ಪೂರಧೂಳಿಯ ಪರಿಮಳ, ಮತ್ತು ಹಲವೆಡೆ ಅಲತಿಗೆ ಹಚ್ಚಿದ ಕಾಲುಗಳ ಮುದ್ರೆ. ಉಳಿದಂತೆ ಸುಕ್ಕುಸುಕ್ಕಾದ ಹೊದಿಕೆ, ಚೆಲ್ಲಾಪಿಲ್ಲಿಯಾದ ಬಾಡಿದ ಹೂಗಳ ಪಕಳೆಗಳ ಪ್ರಸ್ತಾರ—ಅಂತೂ ಈ ಹಾಸುಗೆಯು ಅಲ್ಲಿ ಸಾಗಿದ ಮೈಥುನದ ಅಸಂಖ್ಯಾವಸ್ಥೆಗಳನ್ನು ಮೌನವಾಗಿ ಸಾರುತ್ತಿದೆ).

ಈ ಅನರ್ಘಭಾಸ್ವರಪದ್ಯಕ್ಕೆ ಪ್ರತ್ಯೇಕವ್ಯಾಖ್ಯಾನ ಬೇಕಿಲ್ಲ. ರತಾಂತಚಿತ್ರಣವನ್ನು ಇದಕ್ಕಿಂತ ಚೆಲುವಾಗಿ ಕೊಡಲು ಸಾಧ್ಯವೂ ಇಲ್ಲ. ಮಾನಿನಿಯನ್ನು ಅವಳ ಮನದನ್ನನು ಒಲಿಸಿಕೊಂಡ ಬಗೆ, ಖಂಡಿತೆಯು ಪ್ರಸನ್ನವಾದ ಕ್ರಮ, ಉನ್ಮತ್ತಪ್ರಣಯದ ರೂಕ್ಷರಮಣೀಯತೆ, ಭೋಗಸಾಮಗ್ರಿಗಳ ವಿಪುಲೋದ್ದೀಪನವೇ ಮುಂತಾದ ಅನೇಕಾಂಶಗಳ ಧ್ವನಿಗಳಿಲ್ಲಿ ಸಹೃದಯರಿಗೆ ಸುಗೋಚರ.

ಬಾಣಭಟ್ಟನಿಲ್ಲದೆ ಶೃಂಗಾರವೆಲ್ಲಿ? ಆದರೆ ಅಮಿತಭಾಷಿಯಾದ ಆ ಮಹಾಕವಿ ಏಕೋ ತನ್ನ ಕೃತಿಯಲ್ಲಿ ಯಾವ ಪಾತ್ರದ ಶೃಂಗಾರಶಯ್ಯೆಯನ್ನೂ—ಅದು ವಿಪ್ರಲಂಭವಿರಲಿ, ಸಂಭೋಗವಿರಲಿ—ವಿಸ್ತರಿಸಿ ವರ್ಣಿಸಿಲ್ಲ. ಆದರೂ ಇಲ್ಲವೆನ್ನಲಾಗದಂತೆ ಒಂದೆರಡು ಸೊಲ್ಲುಗಳು ಆತನ ಈ ಕುರಿತ ಅವಧಾನಕ್ಕೆ ನಿದರ್ಶನವಾಗಿ ಉಳಿದಿವೆ. ಇವೆಲ್ಲ ಕಾದಂಬರೀಕಾವ್ಯಕಂಜದ ಕೇಸರಗಳು. ಮಹಾಶ್ವೇತೆಯ ವಿರಹದಲ್ಲಿ ವ್ಯಗ್ರನಾದ ಪುಂಡರೀಕನಿಗೆ ಕಪಿಂಜಲನು ಬಗೆಬಗೆಯ ವಿರಹೋಪಶಾಂತಿಯನ್ನು ಹವಣಿಸುತ್ತಾನೆ. ಅದರಲ್ಲೊಂದು ಕಮಲದಳಗಳ ತಲ್ಪ. ಆತನ ವಿರಹದ ಬೇಗೆಗೆ ಈ ಹಾಸುಗೆಯನ್ನೂ ಮತ್ತೆ ಮತ್ತೆ ಬದಲಿಸಬೇಕಾಗಿ ಬಂತೆಂದು ಕವಿಯು ಒಕ್ಕಣಿಸುತ್ತಾನೆ (ಮುಹುರ್ಮುಹುರನ್ಯದನ್ಯನ್ನಲಿನೀದಲಶಯನಮುಪಕಲ್ಪಯತಃ, ಪು. ೩೩೩). ಇದು ಪುಂಡರೀಕನ ಶೃಂಗಾರಶಯ್ಯೆಯ ಪರಿಯಾದರೆ, ಆತನ ಮೃತಿಯ ಬಳಿಕ ವಿಯೋಗಯೋಗವನ್ನು ವ್ರತವಾಗಿ ತಳೆದ ಮಹಾಶ್ವೇತೆಯ ವಲ್ಕಲತಲ್ಪವು ಯಾರ ಹೃದಯವನ್ನೂ ಕಲಕದಿರದು. ವಿಶೇಷತಃ ಪಾಶುಪತವ್ರತವನ್ನು ಮೈಗೂಡಿಸಿಕೊಂಡ ಅವಳ ಮೈಯಿಂದುದುರಿದ ಭಸ್ಮಚೂರ್ಣವು ಮೆತ್ತಿಕೊಂಡಿದ್ದ ಆ ನಾರುಮಡಿಯ ಮಡಿಯಾದ ಹಾಸು ಆಕೆಯ ಜೀವನದಷ್ಟೇ ಪವಿತ್ರ (ಅವಶೀರ್ಣಾಂಗಭಸ್ಮಧೂಸರವಲ್ಕಲಶಯನೀಯಸನಾಥೈಕದೇಶಾಮ್, ಪು. ೨೮೯).

ಸಂಸ್ಕೃತಸಾಹಿತ್ಯಸೌರಭಕ್ಕೆ ಸಂಗೀತದ ಸುಂದರಾಕೃತಿಯನ್ನಿತ್ತ ಜಯದೇವನ ಗೀತಗೋವಿಂದವೂ ಶೃಂಗಾರಶಯ್ಯೆಯನ್ನು ಕುರಿತು ಅಲ್ಲಲ್ಲಿ ಒಂದೆರಡು ಸೊಲ್ಲುಗಳನ್ನಾಡಿದೆ. ವಿರಹಿಣಿ ರಾಧೆಯ ವ್ಯಥೆಯನ್ನು ಸಖಿಯು ಕೃಷ್ಣನಲ್ಲಿ ನಿವೇದಿಸುವಾಗ ಆಕೆಯ ಪಾಲಿಗೆ ಹೂವಿನ ಹಾಸುಗೆಯೂ ನಿನ್ನನ್ನು ಸೇರಲೆಂದು ಮಾಡುತ್ತಿರುವ ವ್ರತದ ಸ್ಥಂಡಿಲಶಯನವಾಗಿದೆಯೆಂದು ಒಕ್ಕಣಿಸುತ್ತಾಳೆ (ಕುಸುಮವಿಶಿಖಶರತಲ್ಪಮನಲ್ಪವಿಲಾಸಕಲಾಕಮನೀಯಂ ವ್ರತಮಿವ ತವ ಪರಿರಂಭಸುಖಾಯ ಕರೋತಿ ಕುಸುಮಶಯನೀಯಮ್, ಅಷ್ಟಪದಿ ೮). ಇಲ್ಲಿ ಕವಿಯು ಹೂವಿನ ಹಾಸುಗೆಯೆಂಬ ಪದವನ್ನು ನೇರವಾಗಿ ಬಳಸದೆ ಸುಮಬಾಣನ ಬಾಣಗಳ ಹಾಸುಗೆಯೆಂದು ಹೇಳುವ ಮೂಲಕ ರಾಧೆಯ ವಿರಹತಲ್ಪವು ಶರತಲ್ಪವೇ ಆಗಿದೆಯೆಂದು ಸೂಚಿಸಿರುವುದು ಅಸಾಮಾನ್ಯವಾದ ಕಾವ್ಯಶಿಲ್ಪ.

ಹೀಗೆಯೇ ಮತ್ತೊಂದು ಕಡೆ ರಾಧೆಯ ವಿರಹಶಯನವು ಚಿಗುರುಗಳಿಂದ ನಿರ್ಮಿತವಾಗಿದ್ದರೂ ಬೆಂಕಿಯ ಕೊಂಡದಂತೆ ತೋರಿದೆಯೆಂದು ಸಖಿಯು ಹೇಳುವುದು ಗಮನಾರ್ಹ (ನಯನವಿಷಯಮಪಿ ಕಿಸಲಯತಲ್ಪಂ ಗಣಯತಿ ವಿಹಿತಹುತಾಶವಿಕಲ್ಪಮ್, ಅಷ್ಟಪದಿ ೯). ಇಲ್ಲಿಯಾದರೂ ಅಷ್ಟೆ, ಕೆಂಪಾದ ಕಿಸಲಯಗಳು ಅಗ್ನಿಜ್ವಾಲೆಗಳಂತೆ ತೋರುವ ಧ್ವನಿ ಹೃದಯಂಗಮವೆನಿಸಿದೆ.

ಮತ್ತೊಂದೆಡೆ ಸಖಿಯು ರಾಧೆಗೆ, ನೀನು ಹರಿಯೊಡನೆ ಇಬ್ಬನಿಗಳಿಂದ ತಂಪಾದ ಹೂಗಳ ಹಾಸುಗೆಯಲ್ಲಿ ರಮಿಸೆಂದು ಕಿವಿಮಾತನ್ನು ಹೇಳುತ್ತಾಳೆ (ಸಜಲನಲಿನಿದಲಶೀತಲಶಯನೇ, ಅಷ್ಟಪದಿ ೧೮). ಇನ್ನೊಂದೆಡೆ ಸಖಿಯು ಮತ್ತೆ ರಾಧೆಗೆ, ನೀನು ಅಸುಗೆಯ ಹೊಸ ಹೂಗಳ ಹಾಸಿನ ಮೇಲೆ ಹರಿಯೊಡನೆ ರಮಿಸೆಂದು ಪುಸಲಾಯಿಸುತ್ತಾಳೆ (ನವಭವದಶೋಕತಲಶಯನಸಾರೇ ವಿಲಸ, ಅಷ್ಟಪದಿ ೨೧). ಕಟ್ಟಕಡೆಗೆ ಕೃಷ್ಣನೇ ಬಂದು ರಾಧೆಯನ್ನು ಅನುನಯಿಸುತ್ತ ಚಿಗುರಿನ ಹಾಸುಗೆಯತ್ತ ಅವಳನ್ನು ಸೆಳೆಯುತ್ತಾನೆ (ಕಿಸಲಯಶಯನತಲೇ ಕುರು ಭಾಮಿನಿ ಚರಣನಲಿನವಿನಿವೇಶಮ್, ಅಷ್ಟಪದಿ ೨೩). ಒಟ್ಟಿನಲ್ಲಿ ಜಯದೇವನ ಶೃಂಗಾರಶಯ್ಯೆಗಳಲ್ಲಿ ಹೆಚ್ಚಿನ ವಿವರಗಳು ಕಾಣದಿದ್ದರೂ ಪ್ರಸ್ತಾವಗಳು ಮಾತ್ರ ವಿಪುಲವಾಗಿವೆ. ಅರ್ಥಕ್ಕಿಂತ ಶಬ್ದವೇ ಇಲ್ಲಿ ಮುಂದಾಗಿದೆ. ಇದು ಗೀತಕಾವ್ಯಕ್ಕೆ ಯುಕ್ತವೂ ಹೌದು.

ಹೀಗೆ ಸಂಸ್ಕೃತಸಾಹಿತ್ಯಸರಸ್ವತಿಯು ರೂಪಿಸಿದ ಶೃಂಗಾರಶಯ್ಯೆಯು ಕವಿ-ಸಹೃದಯರೆಂಬ ರತಿ-ಮನ್ಮಥರಿಗೆ ಸರ್ವದಾ ಸಂತೋಷದಾಯಕವಾಗಿದೆ. ಇಂಥ ಮತ್ತೂ ಹತ್ತಾರು ಚಿತ್ರಣಗಳು ಸಂಸ್ಕೃತವಾಙ್ಮಯದಲ್ಲಿ ಚೆದುರಿಹೋಗಿವೆ. ಅವುಗಳನ್ನೆಲ್ಲ ವ್ಯುತ್ಪನ್ನರಾದ ರಸಜ್ಞರು ಹುಡುಕಿ, ಹೆಕ್ಕಿ, ಹಂಚಿಕೊಳ್ಳಲಿ; ಈ ಏಕಾಂತಶಯ್ಯೆಯು ವಾಗರ್ಥಕುತುಕಿಗಳಿಗೆ ಲೋಕಾಂತವಾಗಿ ಮುದವನ್ನೀಯಲಿ.

ಪ್ರಮಾಣಗ್ರಂಥಗಳು

  1. A Few Aspects of Chara-vastu. Ganesh, R. Sanskrit: A Source of Science. Mangalore: Canara High School Association, 1997. pp. 44-46
  2. Banabhatta’s Kadambari. New Delhi: Nag Publishers, 1985
  3. Amaru’s Amarushatakam (Ed. Devadhar, C R). New Delhi: MLBD, 1984

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.