ಅಮರಪ್ರೇಮದ ಅಮರುಕಶತಕ--ಅಮರುಕನೊಡನೆ ರಸಯಾತ್ರೆ

This article is part 2 of 6 in the series ಅಮರುಶತಕ

ಅಮರುಕನೊಡನೆ ರಸಯಾತ್ರೆ

ಪ್ರಕೃತಕೃತಿಯ ಪದ್ಯಗಳನ್ನು ಪ್ರಧಾನವಾಗಿ ಮುನಿದ ನಾಯಿಕೆಗೆ ಸಖಿಯ ಹಿತಬೋಧೆ, ಭಾವಶಬಲಿತೆಯಾದ ನಾಯಿಕೆಯು ಸಖಿಯರಿಗೆ ಹೇಳುವ ಮಾತುಗಳು, ನಾಯಕ-ನಾಯಿಕೆಯರ ಸಂವಾದ, ನಾಯಕ-ಸಖಿಯರ ಸಂವಾದ, ಕವಿಯದೇ ಆದ ನಿರೂಪಣೆ ಎಂಬಿವೇ ಕೆಲವು ವಿಭಾಗಗಳಲ್ಲಿ ಅಡಕಮಾಡಬಹುದು. ಇವುಗಳಲ್ಲಿ ಕವಿಯು ಯಾವುದೇ ವ್ಯಕ್ತಿಗೂ ಪಕ್ಷಪಾತವಿಲ್ಲದೆ—ತನ್ನದೇ ಆದ ಪೂರ್ವಗ್ರಹಗಳೂ ಇಲ್ಲದೆ—ಅಪ್ಪಟವಾದ ಪ್ರಣಯವನ್ನು ಮಡಿ-ಮೈಲಿಗೆಗಳ ಗೋಜಿಲ್ಲದೆ ಸಾಕ್ಷಾತ್ಕರಿಸುತ್ತಾನೆ. ಈ ಕಾರಣದಿಂದಲೇ ಅಮರುಕನನ್ನು ಚಿತ್ತವೃತ್ತಿಸಾರ್ವಭೌಮನೆಂದೂ ಪದ್ಯರೂಪದಲ್ಲಿ ನೃತ್ಯವನ್ನು ಕಂಡರಿಸಿದ ರಸಶಿಲ್ಪಿಯೆಂದೂ ಶಂಕೆಯಿಲ್ಲದೆ ಹೇಳಬಹುದು. ಪ್ರಕೃತಲೇಖನದಲ್ಲಿ ಇಂಥ ಶೃಂಗಾರಸಂದರ್ಭಗಳ ಪರಿಚಯ ಮಾಡಿಕೊಳ್ಳೋಣ.  

ನಲ್ಲನೆಡೆ ಸಕಾರಣವಾಗಿಯೋ ಅಕಾರಣವಾಗಿಯೋ ಮುನಿದ ನಲ್ಲೆಯನ್ನು ಆಕೆಯ ಗೆಳತಿಯರು ನಲ್ನುಡಿಗಳಿಂದ ಪ್ರಬೋಧಿಸುವ ಕೆಲವು ಚಿತ್ರಗಳನ್ನು ಮೊದಲಿಗೆ ಕಾಣಬಹುದು.

ಒಬ್ಬ ಸಖಿ ನಾಯಿಕೆಗೆ ನಿಷ್ಠುರವಾದರೂ ವಿವೇಕಯುತವಾದ ಹಿತವನ್ನು ಹೀಗೆ ಹೇಳುತ್ತಾಳೆ: “ಗೆಳತಿ, ನಿನ್ನ ಚಿಗುರುಬೆರಳುಗಳ ತುದಿಗಳಿಂದ ಕಂಬನಿಯ ತಂತಿಗಳನ್ನು ಮೀಟಿದ್ದು ಸಾಕು. ಸುಮ್ಮನೆ ಬಿಕ್ಕಿಬಿಕ್ಕಿ ಅತ್ತೇನು ಪ್ರಯೋಜನ? ಪಾಪದ ನಿನ್ನ ನಲ್ಲನು ಅಂಗಲಾಚಿದಾಗಲೂ ಚಾಡಿಮಾತುಗಳಿಗೆ ಬಗೆದೆತ್ತ ನೀನು ಬಿಗಿದುಕೊಂಡೇ ಮೇರೆ ಮೀರಿದೆಯಲ್ಲ! ಆ ಬಡಪಾಯಿ ತಾನೇ ಏನು ಮಾಡಿಯಾನು? ನಿನ್ನನ್ನೆಷ್ಟು ತಾನೇ ಓಲೈಸಿಯಾನು? ಅವನಿಗೂ ಬೇಸರ-ಬಳಲಿಕೆಗಳಾಗಿ ಇದೀಗ ಸುಮ್ಮನಿದ್ದುಬಿಟ್ಟಿದ್ದಾನೆ.”

ಇನ್ನೊಬ್ಬ ಸಖಿ ಮತ್ತೂ ಮುಂದುವರಿದು ಹಠಮಾರಿಯಾದ ಸ್ನೇಹಿತೆಗೆ ಹೀಗೆ ಎಚ್ಚರ ಹೇಳುತ್ತಾಳೆ: “ಬಿಂಕವಿನ್ನು ಸಾಕುಮಾಡೇ. ಅವನು ಪಾಪ ಬಾಗಿಲಾಚೆ ನಿಂತು ತಲೆದಗ್ಗಿಸಿ ನೆಲ ನೋಡುತ್ತಿದ್ದಾನೆ. ನಿನ್ನನ್ನು ನಚ್ಚಿಕ್ಕೊಂಡ ಗೆಳತಿಯರೆಲ್ಲ ಅತ್ತು ಅತ್ತು ಕಣ್ಣುಗಳು ಬಾತುಹೋಗಿವೆ. ಮನುಷ್ಯರ ಮಾತಿರಲಿ, ಮುದ್ದಿನ ಅರಗಿಳಿಗಳೂ ಮಾತು-ಕತೆ ಬಿಟ್ಟು ತೆಪ್ಪಗಿವೆ. ಇನ್ನೂ ಅದೆಷ್ಟು ಬಿಗಿದುಕೊಂಡಿದ್ದೀಯೇ!”

ಮತ್ತೊಬ್ಬ ಜಾಣೆಯು ತನ್ನೊಡತಿಗೆ ವ್ಯಾವಹಾರಿಕವಾದ ಕಿವಿಮಾತೊಂದನ್ನು ಉಸುರುತ್ತಿದ್ದಾಳೆ: “ಅಯ್ಯೋ, ಈ ಹೆಂಗಸರು ಮುಗ್ಧವಾಗಿ ತೋರುತ್ತಲೇ ಮರಳುಮಾಡುವ ತಂತ್ರಗಾರ್ತಿಯರು. ನೀನು ಸುಮ್ಮನೆ ಮುನಿಸುಗೊಂಡು ನಲ್ಲನಿಗೆ ಎರವಾಗಿ ಆ ಎಲ್ಲ ಚೆಲ್ಲಗಾರ್ತಿಯರಿಗೆ ಸಂತಸವನ್ನುಂಟುಮಾಡಬೇಡ. ನಿನ್ನ ನಲ್ಲನೋ ತರುಣ, ರಸಿಕ, ಸಹೃದಯ. ಅಂಥವನನ್ನು ನಿನ್ನ ಕರ್ಕಶಕೋಮಲಚಮತ್ಕೃತಿಗಳಿಂದ, ಮುಗ್ಧವಿದಗ್ಧವಚನಗಳಿಂದ ಆಕ್ರಮಿಸಿಕೊಂಡು ಅನುನಯಿಸಬೇಕಲ್ಲದೆ ಸುಮ್ಮನೆ ಕಂಗೆಡಿಸಿ ಕಂಗೆಡುವುದು ಸಲ್ಲ”.

ಇಲ್ಲೊಬ್ಬ ಅಭಿಸಾರಿಕೆಗೆ ವಿನೋದಶೀಲೆಯಾದ ಗೆಳತಿ ನವುರಾದ ಗೇಲಿಯನ್ನೇ ಮಾಡಿದ್ದಾಳೆ: “ಅಬ್ಬ! ಎದೆಯ ಮೇಲೆ ತೊನೆಯುವ ಹಾರ, ನಡುವಿನಲ್ಲಿ ಗಲಗಲಿಸುವ ಮೇಖಲೆ, ಹೆಜ್ಜೆಗಳಿಗೆ ಹೊಗರಿಯುವ ಗೆಜ್ಜೆಗಳ ಗುಂಫನ—ನಲ್ಲನನ್ನರಸಿ ಹೊರಡುವ ನಿನ್ನ ಸಿಂಗಾರವೆಲ್ಲ ಸೊಗಸಾಗಿದೆ; ಸದ್ದು-ಗದ್ದಲದಿಂದಲೂ ಕೂಡಿದೆ. ಆದರೆ ಎದೆಯಲ್ಲೇನು ತಮಟೆಯ ಸದ್ದು? ನಗಾರಿಯ ಗುದ್ದು? ಹೀಗೆಲ್ಲ ದಿಕ್ಕುದಿಕ್ಕುಗಳನ್ನು ಬಿಟ್ಟಗಣ್ಣುಗಳಲ್ಲಿ ನೋಡುತ್ತ ಸಾಗುವರೇನೇ ಮುಗುದೆ?”

ಇಲ್ಲೊಬ್ಬಳು ಕೋಪದಿಂದ ಕೆಂಡವಾದ ಕಾಂತೆ. ಅವಳನ್ನು ಸಖಿ ಹೀಗೆ ತಿವಿಯುತ್ತಿದ್ದಾಳೆ: “ಸಾಕು ನಿನ್ನ ಬಡಿವಾರ. ಇಂದೇ ಮನೆಮನೆಗಳಿಗೂ ಹೋಗಿ ಅಲ್ಲಿಯ ಹೆಣ್ಣುಹೆಣ್ಣುಗಳನ್ನೂ ಕೇಳು. ಅದೆಷ್ಟು ಜನ ಪ್ರಿಯತಮರು ಪ್ರೇಯಸಿಯರ ಕಾಲಿಗೆ ಬಿದ್ದು ದಾಸಾನುದಾಸರೆಂದು ಸಾರಿಕೊಳ್ಳುತ್ತಾರೆ? ಅಯ್ಯೋ ತಿಳಿಗೇಡಿ, ಅವರಿವರ ಚಾಡಿಮಾತನ್ನು ಕಿವಿಗೆ ತುಂಬಿಸಿಕೊಂಡು ನಿನ್ನೊಲವಿಗೇ ನೀನು ಕೇಡೆಸೆಗಿದೆಯಲ್ಲೇ! ಇಂಥ ವಿರಸಗಳು ಮತ್ತೆ ಮರುಕಳಿಸಿದಲ್ಲಿ ಯಾವ ಗಂಡಸೂ ತಾನೊಲಿದ ಹೆಣ್ಣಿಗೆ ಹಸಾದ ಹೇಳುವುದಿಲ್ಲ”.

ಇವಳೊಬ್ಬಳು ಕಲಹಾಂತರಿತೆ. ಪ್ರಿಯನೊಡನೆ ಸಲ್ಲದ ಬಗೆಯಲ್ಲಿ ಸೆಣೆಸಿ ಇದೀಗ ತಲ್ಲಣಿಸಿದ್ದಾಳೆ. ಇವಳಿಗೆ ಸಖಿಯೊಬ್ಬಳ ಸಾಂತ್ವನ ಹೀಗಿದೆ: “ಇಂದಿನವರೆಗೂ ಪರಿಪಕ್ವವಾಗಿ ಬೆಳೆದ ಪ್ರೀತಿಯನ್ನು ಇದೀಗ ಹಿಂದು-ಮುಂದು ನೋಡದೆ ಉಪೇಕ್ಷಿಸಿ, ನಿರಪರಾಧಿಯಾದ ರಮಣನನ್ನು ನಿಷ್ಕಾರಣವಾಗಿ ನೋಯಿಸಿ, ನಿನ್ನೊಂದು ಹೆಮ್ಮೆಯನ್ನೇ ಹೆಚ್ಚುಮಾಡಿಕೊಂಡೆಯಲ್ಲ! ಅಂತೂ ನಿನ್ನ ತಲೆಯ ಮೇಲೇ ನೀನು ನಿಗಿನಿಗಿ ಕೆಂಡ ಸುರಿದುಕೊಂಡೆ. ಇದೀಗ ಸುಮ್ಮನೆ ಅತ್ತೂ ಕರೆದೂ ಏನು ಪ್ರಯೋಜನ? ಇದೆಲ್ಲ ಬರಿಯ ಅರಣ್ಯರೋದನ”.

ಇದೊ ನೋಡಿ ಇಲ್ಲಿದ್ದಾಳೆ ಹಾಸ್ಯರಸಿಕೆಯಾದ ಗೆಳತಿ. ಈಕೆಯು ಮುನಿಸನ್ನು ಬಲವಾಗಿ ಮಾಡಲರಿಯದ ನಾಯಿಕೆಯ ವ್ಯರ್ಥಪ್ರಯತ್ನಗಳನ್ನು ವಿಡಂಬಿಸುವ ಪರಿ ಸೊಗಸಾಗಿದೆ: “ಅಬ್ಬ, ಹುಬ್ಬು ಗಂಟಿಕ್ಕುವುದನ್ನು ಕಲಿತದ್ದಾಯಿತು; ಕಣ್ಣು ಕೆರಳಿಸುವುದನ್ನು ಅಭ್ಯಸಿಸಿದ್ದಾಯಿತು; ಮುಗುಳ್ನಗೆಯನ್ನು ಪ್ರಯತ್ನಪೂರ್ವಕವಾಗಿ ತಡೆಯುವುದನ್ನೂ ತಿಳಿದಿದ್ದಾಯಿತು; ಮೌನವನ್ನಂತೂ ಕ್ರಮಬದ್ಧವಾಗಿ ಪಾಠಹೇಳಿಸಿಕೊಂಡದ್ದಾಯಿತು. ಹೆಚ್ಚೇನು, ಹಠದಿಂದ ಇರಲು ಸಿದ್ಧವಾಗಿ ಸೆರಗು ಬಿಗಿದು ಎದೆಗಟ್ಟಿ ಮಾಡಿಕೊಂಡದ್ದಾಯಿತು. ಎಲ್ಲ ಸರಿಯಾಗಿದೆ. ಇನ್ನು ಈ ಮುನಿಸಿಗೆ ವಿಧಿಯೇ ಜಯವನ್ನು ಕೊಡಬೇಕು”.

ಅಮರುಕಶತಕದ ಸಖಿಯರು ನಾಯಕರಿಗೂ ಆಗೀಗ ಕಿವಿಮಾತುಗಳನ್ನೂ ಚುಚ್ಚುಮಾತುಗಳನ್ನೂ ಹೇಳುವುದುಂಟು.

ಇಲ್ಲಿ ನೋಡಿ, ನಾಯಿಕೆಯ ಸನ್ನಿಧಿಯಲ್ಲಿಯೇ ಪ್ರಮದೆಯೊಬ್ಬಳು ನಾಯಕನನ್ನು ದಬಾಯಿಸುತ್ತಿದ್ದಾಳೆ: “ಅಯ್ಯಾ, ನೀನಾಗಿಯೇ ಇವಳನ್ನು ಪ್ರೀತಿಸಿದೆ. ನೀನೇ ಮೇಲೆ ಬಿದ್ದು ಇವಳನ್ನು ರಮಿಸಿದೆ. ಇಂದು ನೀನೇ ಅವಳಿಗೆ ಹೊಸತೊಂದು ನೋವನ್ನು ಉಡುಗೊರೆಯಾಗಿ ನೀಡಿದ್ದೀಯೆ. ಈಗ ನೀನು ಅವಳನ್ನೆಷ್ಟು ಅನುನಯಿಸಿ ಬೇಡಿದರೂ ಈ ನೊಂದ ಜೀವಕ್ಕೆ ಸಾಂತ್ವನ ಸಿಗದು. ಅಯ್ಯೋ ನಿರ್ದಯಿ, ನನ್ನೀ ಗೆಳತಿಯನ್ನು ಅವಳ ಪಾಡಿಗೆ ಹೊಟ್ಟೆ ತುಂಬ ಅಳುವುದಕ್ಕಾದರೂ ಬಿಟ್ಟು ತೊಲಗು”.

ಮತ್ತೊಬ್ಬ ಸಖಿಯಂತೂ ಬಲುದಿಟ್ಟತನದಿಂದ ಸ್ವಯಂ ದೌತ್ಯವನ್ನು ವಹಿಸಿ, ತನ್ನೊಡತಿಗೆ ಅನ್ಯಾಯ ಮಾಡಿದ ನಾಯಕನತ್ತ ತೆರಳಿ, ಅವನನ್ನು ವ್ಯಂಗ್ಯವಾಗಿ ತಿವಿಯುತ್ತಿದ್ದಾಳೆ: “ಇದೀಗ ನನ್ನ ಗೆಳತಿಯ ಕಣ್ಣೀರು ಬಂಧುವರ್ಗದಲ್ಲಿ ಹಂಚಿಹೋಗಿದೆ. ಚಿಂತೆಯನ್ನು ಗುರು-ಹಿರಿಯರು ವಹಿಸಿಕೊಂಡಿದ್ದಾರೆ; ಅವಮಾನವನ್ನು ಸೇವಕವರ್ಗವು ತಾಳಿಕೊಂಡಿದೆ; ಸಂಕಟವನ್ನಂತೂ ಸಖಿಯರು ಹೊತ್ತಿದ್ದಾರೆ. ಇಂದೋ ನಾಳೆಯೋ ಅವಳು ಕೊನೆಯುಸಿರನ್ನು ಬಿಡುತ್ತಾಳೆ. ಅಯ್ಯಾ ಮಹಾನುಭಾವ, ನಿನ್ನ ವಿಯೋಗದ ಸಂತಾಪವನ್ನು ನನ್ನ ಗೆಳತಿ ಎಲ್ಲರಿಗೆ ಹಂಚಿ ಹೋಗುತ್ತಿರುವ ಕಾರಣ ನಿನಗೆ ಅವಳನ್ನು ಕುರಿತು ಚಿಂತೆ ಬೇಡ. ನೆಮ್ಮದಿಯಾಗಿರು!”

ಈ ಕಾವ್ಯದ ನಾಯಕ-ನಾಯಿಕೆಯರ ಪರಸ್ಪರಸಂವಾದಕ್ಕೆ ಆದ್ಯಂತಗಳೇ ಇಲ್ಲ. ಇಂಥ ಸಂದರ್ಭಗಳ ಕೆಲವೊಂದು ಪ್ರಕಾರಗಳನ್ನು ಗಮನಿಸೋಣ. ಮೊದಲಿಗೆ ನಾಯಿಕೆಯರು ನಾಯಕರನ್ನು ಮಾತನಾಡಿಸುವ ಪರಿ ಪರಿಶೀಲನೀಯ.

ಇತ್ತ ನೋಡಿ. ಇವಳೊಬ್ಬಳು ನಲ್ಲೆ ತನ್ನ ಕಾದಲನನ್ನು ಮಿದುವಾದ ಮಾತಿನಲ್ಲಿಯೇ ಬಲವಾಗಿ ತಿವಿಯುತ್ತಿದ್ದಾಳೆ: “ಒಳ್ಳೆಯದು, ಎಲ್ಲ ತಿಳಿಯಿತು. ರಮಣ, ಸುಮ್ಮನೆ ಪೊಳ್ಳುಮಾತುಗಳ ಪ್ರವಾಹವೇಕೆ? ನಿನ್ನಲ್ಲಿ ಎಳ್ಳಷ್ಟೂ ದೋಷವಿಲ್ಲ. ಇರುವುದೆಲ್ಲ ನನ್ನಲ್ಲಿಯೇ. ವಿಧಿ ವಕ್ರಿಸಿದ ಮೇಲೆ ಮತ್ತೇನು ಮಾಡುವುದು? ನಿನ್ನಂಥವನ ಆ ಮಟ್ಟದ ಪ್ರೇಮವೇ ಈ ಮಟ್ಟಕ್ಕಿಳಿದ ಬಳಿಕ ಸ್ವಭಾವದಿಂದಲೇ ಅಶಾಶ್ವತವಾದ ನನ್ನ ಈ ಹಾಳುಬಾಳು ಹೋದರೆಷ್ಟು, ಬಿಟ್ಟರೆಷ್ಟು!”

ಮತ್ತೊಬ್ಬಳು ಜಾಣೆ ತನ್ನ ಮುನಿಸನ್ನು ಮಖಮಲ್ಲಿನಲ್ಲಿ ಮುಚ್ಚಿ ಕಾಂತನನ್ನು ಸದೆಯುವ ಪರಿ ಸ್ಪೃಹಣೀಯ: “ಯಾವಾಗ  ಕೋಪವೆಂದರೆ ಬರಿಯ ಹುಬ್ಬುಗಂಟೋ, ಸೆಣೆಸಾಟವೆಂದರೆ ಸುಮ್ಮನಿರುವುದೋ, ಅನುನಯವೆಂದರೆ ಪರಸ್ಪರ ಮುಗುಳ್ನಗೆಯೋ, ಅನುಗ್ರಹವೆಂದರೆ ಕಟಾಕ್ಷವೀಕ್ಷಣೆಯೋ ಆಗಿದ್ದುದೋ, ಅಂಥ ನಮ್ಮ ಪ್ರೇಮವಿಂದು ಎಂಥ ಸ್ಥಿತಿಗೆ ಬಂದಿದೆಯೆಂದರೆ ನೀನೀಗ ನನ್ನ ಕಾಲ್ಗಳ ಮೇಲೆ ಬಿದ್ದು ಹೊರಳಾಡುತ್ತಿದ್ದರೂ ನನ್ನೀ ಕೆಟ್ಟ ಕೋಪವು ಕರುಗುತ್ತಿಲ್ಲವಲ್ಲ, ಏನಿದು ವಿಪರ್ಯಾಸ!” 

ಇಲ್ಲೊಬ್ಬಳು ಮಾನಿನಿಯಂತೂ ಮತ್ತಾವ ಮುಚ್ಚುಮರೆಯೂ ಇಲ್ಲದೆ ನೇರವಾಗಿ ತನ್ನ ಪತಿಗೆ ಕಠೋರವಾಸ್ತವವನ್ನು ಕನ್ನಡಿಯಂತೆ ಹಿಡಿದಿಟ್ಟಿದ್ದಾಳೆ. ಅವಳ ಮಾತೇ ಕಾವ್ಯ, ಮುನಿಸೇ ರಸ: “ಹಾಗಿದ್ದ ನಮ್ಮಿಬ್ಬರ ನಲ್ಮೆ ಪರಸ್ಪರ ಅವಿಭಕ್ತಕಾಯಗಳಂತೆ ನಮ್ಮನ್ನು ನಡಸಿಕೊಂಡಿತ್ತು. ಆ ಬಳಿಕ ನೀನು ಕಾದಲನೆಂದೂ ನಾನು ಬಡಪಾಯಿ ಕಾದಲೆಯೆಂದೂ ಸಲ್ಲದ ಬೆಳೆವಣಿಗೆಗೆ ತುತ್ತಾದೆವು. ಇದೀಗ ನೀನು ಗಂಡ, ನಾನು ಹೆಂಡತಿ ಎಂಬಲ್ಲಿಗೆ ಈ ಸಂಬಂಧವು ಬಂದು ನಿಂತಿದೆ. ಸಿಡಿಲಿಗಿಂತ ಪೆಡಸಾದ ಈ ಹಾಳುಬಾಳನ್ನು ನಾನು ತಾಳಿಕೊಂಡುದಕ್ಕೆ ತಕ್ಕ ಫಲವೇ ದಕ್ಕಿತು”. ಇಲ್ಲವಳು “ಹಾಗಿದ್ದ ನಲ್ಮೆ” ಎನ್ನುವ ಮಾತಿನಲ್ಲಿಯೇ ಅವರಿಬ್ಬರ ಪ್ರೇಮದ ಪರಿಪಾಕವೆಷ್ಟು ಅನಿರ್ವಚನೀಯವೆಂಬ ಧ್ವನಿಯಿದೆ. ಇದು ಅಮರುಕನ ಸೂಕ್ಷ್ಮತೆ.

ಮತ್ತೊಬಳು ಭಾಮಿನಿ ಕಡ್ಡಿಮುರಿದಂತೆ ಪ್ರಿಯತಮನಿಗೆ ಶಾಸನ ಮಾಡಿದ್ದಾಳೆ. ಅವಳ ಮಾತಿನಲ್ಲಿ ಪೌಗಂಡವಯಸ್ಸಿನ ಮುಗ್ಧತೆಯು ತುಂಬು ಜವನ್ನದ ವಿದಗ್ಧತೆಯಾಗಿ ಬೆಳೆದುಬಂದ ತಿಕ್ತಪಥದ ಹೆಜ್ಜೆಗಳು ದಟ್ಟವಾಗಿವೆ: “ಅಯ್ಯೋ, ನನ್ನೆದೆಯಲ್ಲಿ ಕುಚಮುಕುಲಗಳು ಅರಳಿದ್ದೇ ನಿನ್ನ ಆಲಿಂಗನದಲ್ಲಿ, ನನ್ನ ತೋಳುಗಳು ದಾದಿಯರ ಕೊರಳಿಂದ ಬೇರ್ಪಟ್ಟು ನಿನ್ನ ಭುಜವನ್ನು ಬಳಸಿದ್ದೇ ಈ ಬೆಳೆವಣಿಗೆಯಲ್ಲಿ. ನಿನ್ನ ಸಲ್ಲಾಪದ ಸರೋವರದಲ್ಲಿಯೇ ನನ್ನ ಮುಗ್ಧತೆಯ ಮೈಚಳಿ ಬಿಟ್ಟುಹೋಗಿದ್ದು. ಆದರೆ ಇದೀಗ ಎಂಥ ಕೇಡು ಮಾಡಿದೆಯೋ ನಿರ್ದಯ! ಇನ್ನು ಮುಂದೆ ನನ್ನೀ ಮನೆಯ ಹಾದಿಯಿರಲಿ, ಈ ಕೇರಿಗೇ ನೀನು ಕಾಲಿಡಬೇಡ”.

ನಾಯಿಕೆಯರಂತೆಯೇ ನಾಯಕರೂ ನುಡಿಜಾಣರು. ಅವರ ಕೆಲವು ಮಾತುಗಳನ್ನು ಕದ್ದಾದರೂ ಆಲಿಸೋಣ. ಪಾಪ, ಅಮರುಕನೂ ಕೂಡ ನಾಯಕರು ನೇರವಾಗಿ ನಾಯಿಕೆಯರನ್ನು ಪ್ರಶ್ನಿಸುವ—ಅಥವಾ ಜಂಕಿಸುವ—ಮಾತುಗಳನ್ನು ಹೆಚ್ಚಾಗಿ ಚಿತ್ರಿಸಿಲ್ಲ! ಮುನಿದ ಮಾನಿನಿಯ ಮುಂದೆ ಮಾತು ಹೊರಡಿಸಬಲ್ಲ ಗಂಡುನಾಲಗೆಯಾದರೂ ಎಲ್ಲಿ? ಅಯ್ಯೋ ಈ ಬಡಪಾಯಿ ಪ್ರಿಯತಮರ ಮಾತುಗಳೇನಿದ್ದರೂ ಮುನಿದ ನಲ್ಲೆಯರನ್ನು ನಮ್ರವೂ ನರ್ಮವೂ ಆದ ಚಮತ್ಕಾರಗಳಿಂದ ಒಲಿಸಿಕೊಳ್ಳುವುದರಲ್ಲಿಯೇ ತಮ್ಮ ಸಾರ್ಥಕ್ಯವನ್ನು ಕಾಣುತ್ತವೆ.

ಇಲ್ಲೊಬ್ಬನ ನುಡಿಜಾಣ್ಮೆ ಕೇಳುವಂತಿದೆ: “ಎಲೆ ಚದುರೆ, ಕೆನ್ನೆಯ ಮೇಲೆ ಚಿತ್ರಿಸಿಕೊಂಡ ಮುತ್ತರಿಗಳ ಚಿತ್ತಾರವನ್ನು ಕೈಯಾರ ಅಳಿಸಿಕೊಂಡಿದ್ದೀಯೆ. ಮುನಿಸಿನ ಬಿಸಿಯುಸಿರಿನ ಬೇಗೆಯಲ್ಲಿ ಚೆಂದುಟಿಯ ರಸವೆಲ್ಲ ಹೀರಿಹೋಗಿದೆ. ಕೊರಳ ಸೆರೆ ಬಿಗಿದು ಎದೆಕಟ್ಟನ್ನು ತೋಯಿಸುವಂತೆ ಕಂಬನಿಯ ಧಾರೆ ಸುರಿದುಹೋಗಿದೆ. ಅಯ್ಯೋ, ಕೋಪವೇ ನಿನ್ನ ಪಾಲಿಗೆ ನಲ್ಲನಂತಾಯಿತಲ್ಲ! ಇನ್ನೀ ಬಡಪಾಯಿಯ ಬದುಕಾದರೂ ಏನು!” ಇಲ್ಲಿ ಕೋಪವು ಆಕೆಯಲ್ಲಿ ಕಾಮೋನ್ಮತ್ತನಾದ ಪ್ರಿಯತಮನಂತೆ ಆಕ್ರಮಿಸಿಕೊಂಡ ಧ್ವನಿ ರಸಿಕರೆಲ್ಲರಿಗೆ ಸುವೇದ್ಯ.

ಆಹಾ, ಈ ತರುಣನ ಚಮತ್ಕಾರವೇ ಚಮತ್ಕಾರ. ಕುಪಿತಕಾಮಿನಿಯನ್ನು ಒಲಿಸಿಕೊಳ್ಳಲು ಇವನ ಮಟ್ಟಿಗೆ ಕವಿತೆಯನ್ನು ಬಳಸಿಕೊಳ್ಳಬಲ್ಲವರು ಕಾಮನಿಂದ ಮೊದಲ್ಗೊಂಡು ಕೃಷ್ಣನವರೆಗೂ ಬೇರೆಯವರಿಲ್ಲ. ಅವನ ದಿಟ್ಟತನದ ಹಿಂದಿರುವ ಚೆಲ್ಲುತನವನ್ನಿಷ್ಟು ಕೇಳಿ: “ನನ್ನಲ್ಲಿ ನೀನು ಮುನಿದರೆ ನಾನೇನು ಮಾಡುವುದು? ನನಗಿಂತ ಮಿಗಿಲಾಗಿ ನಿನಗೆ ನಿನ್ನ ಮುನಿಸೇ ಪ್ರಿಯವೆನಿಸಿದರೆ, ಅದೇ ನಿನ್ನ ನಲ್ಲ; ನಾನಿನ್ನು ಇಲ್ಲ. ಆದರೆ ಯಾವುದೇ ವ್ಯವಹಾರವು ಮುಗಿಯುವ ಮುನ್ನ ಹಳೆಯ ಬಾಕಿ ತೀರಬೇಕಷ್ಟೆ. ಈ ಮುನ್ನ ನಾನಿತ್ತ ಎಣಿಕೆಗೆ ಸಿಗದಷ್ಟು ಅಪ್ಪುಗೆ-ಚುಂಬನಗಳನ್ನು ಮತ್ತೆ ಬಡ್ಡಿಯೊಡನೆ ನನಗೆ ಸಲ್ಲಿಸು!” ಇದು ತೀರಬಲ್ಲ ಸಾಲವೇ? ನಿಲ್ಲಬಲ್ಲ ಮುನಿಸೇ?

ಪ್ರಾಯಶಃ ಗೆಳೆಯನೊಬ್ಬನೊಡನೆ ನಾಯಕನೋರ್ವನು ಹೇಳಿಕೊಳ್ಳುತ್ತಿದ್ದಾನೆ. ಗೆಳೆಯರಿಬ್ಬರ ಮಾತನ್ನು ಕದ್ದು ಕೇಳುವುದೇನೂ ಅಪರಾಧವಲ್ಲ. ಹೇಗೂ ನಾವು ಕೂಡ ಪ್ರಣಯಿಗಳಿಗೆ ನೇಹಿಗರಷ್ಟೆ. ಬನ್ನಿ, ಆಲಿಸೋಣ. ಅವನೆನ್ನುತ್ತಿದ್ದಾನೆ: “ವಯಸ್ಯ, ನೋಡೋಣ, ಏನಾಗುವುದೋ ಆಗಲಿ ಎಂದು ನಾನು ಸ್ವಲ್ಪ ಬಿಗಿದುಕೊಂಡೆ. ಎಲಾ, ಈ ಗಡಸುಗಾರನು ನನ್ನೊಡನೆ ಮಾತನಾಡುವುದಿಲ್ಲವೋ, ನಾನೂ ಒಂದು ಕೈ ನೋಡುವೆನೆಂದು ಅವಳೂ ಮುನಿಸನ್ನು ಆವಾಹಿಸಿಕೊಂಡಳು. ಹೀಗೆ ನಾವಿಬ್ಬರೂ ಒಬ್ಬರಿಗೊಬ್ಬರು ಸಿಲುಕಿಕೊಳ್ಳದಂತೆ ಕಪಟಕೋಪದ ನೋಟಗಳನ್ನು ತೂರಿಕೊಳ್ಳುತ್ತಲೇ ಇದ್ದೆವು. ಆಗ ನಾನೇ ಮೈಮರೆತು ನಕ್ಕುಬಿಟ್ಟೆ. ಬಿಗುಮಾನ ಬಿಟ್ಟ ಅವಳು ಅತ್ತುಬಿಟ್ಟಳು“. ಈ ಬಗೆಯ ನಗು-ಅಳುಗಳ ಗಂಗಾ-ಯಮುನಾಸಂಗಮವೇ ಅಮರುಕನ ಸರಸ್ವತಿಯಲ್ಲಿ ಸೇರಿ ತೀರ್ಥರಾಜವಾಗಿದೆ; ಕಾವ್ಯಪ್ರಯಾಗವೇ ಎನಿಸಿದೆ.

ಇಲ್ಲೊಬ್ಬ ನಲ್ಲನಿಗೆ ತನ್ನ ಮನದನ್ನೆಯ ಮುನಿಸನ್ನೂ ಮೆಚ್ಚಿಕೊಳ್ಳುವ ಮನಸ್ಸು. ಅಲ್ಲವೇ ಮತ್ತೆ, ಒಲಿದವರು ಮಾಡಿದ್ದೆಲ್ಲ ಸರಿ; ಅವರು ಸರಿಯನ್ನೇ ಮಾಡಬೇಕೆಂದು ಶಾಸನವೇನಿಲ್ಲ. ಅವನು ಹೇಳಿಕೊಳ್ಳುತ್ತಿದ್ದಾನೆ: “ಆ ಪ್ರಮದೆಯು ನಾನು ಕಾಲಿಗೆ ಬಿದ್ದೇನೆಂದು ಪಾದಗಳನ್ನೇ ಸೆರಗಿನಿಂದ ಮುಚ್ಚಿಕೊಳ್ಳುತ್ತಾಳೆ. ಅಕಸ್ಮಾತ್ ಸುಳಿಯಬಹುದಾದ ಮುಗುಳ್ನಗೆಯನ್ನೂ ಮರೆಸಿಕೊಳ್ಳುತ್ತಾಳೆ. ಎಲ್ಲಿ ನೋಟವು ಬೆರೆತರೆ ಬೇಟವು ಮೂಡುವುದೋ ಎಂದು ದಿಟ್ಟಿಯನ್ನೇ ಚಟ್ಟನೆ ಬದಲಿಸುತ್ತಾಳೆ. ಅನುನಯದ ಮಾತಿಗೆ ನಾನು ಮುಂದಾಗಲು ಅದರ ಹವಣನ್ನು ಮೊದಲೇ ಬಲ್ಲವಳಂತೆ ಸುತ್ತಲಿದ್ದ ಗೆಳತಿಯರೊಡನೆ ಎಡಬಿಡದೆ ಹರಟತೊಡಗುತ್ತಾಳೆ. ಗೆಳೆಯಾ ಏನೆನ್ನಲಿ, ಅವಳ ಸುಮ್ಮಾನವಿರಲಿ, ದುಮ್ಮಾನವೂ ಪರಮರಮ್ಯ!”

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.