ಅಮರಪ್ರೇಮದ ಅಮರುಕಶತಕ--ರಸಚಿತ್ರಗಳು

This article is part 3 of 6 in the series ಅಮರುಶತಕ

ಇಲ್ಲೊಬನಿದ್ದಾನೆ ಪ್ರಣಯಮರ್ಮಜ್ಞನಾದ ಹದಿನಾರಾಣೆಯ ಅನುಭವರಸಿಕ. ಅವನಿಗೆ ಕೊಸರಿ ಕೊಸರಿ ಪಡೆದ ಪ್ರಣಯದ ಸವಿ ಎಷ್ಟೆಂದು ಗೊತ್ತು. ಪಾಪ, ಅವನ ಕಾದಲೆಗೀಗ ಮುನಿಸು. ಹೀಗಾಗಿ ನಿರೀಕ್ಷಿತನರ್ಮವು ಸಾಧ್ಯವಾಗುತ್ತಿಲ್ಲ. ಅವನ ತಕರಾರು ಕೇಳುವಂತಿದೆ. ಅಲ್ಲದೆ ಅದರಲ್ಲೊಂದು ಮೆಚ್ಚುಗೆಯ ಧ್ವನಿಯೂ ಉಂಟೆನ್ನಿ. ಹೀಗಲ್ಲವಾದರೆ ಹಲಬುವಿಕೆಯು ಅಪ್ಪಟ ಕವಿತೆಯಾಗುವುದು ಹೇಗೆ? ಅವನ ಪರಿಶೀಲನೆ ಹೀಗಿದೆ: “ಮೊದಲಿನಂತೆ ಅವಳೀಗ ಬಟ್ಟೆಯನ್ನು ಸಡಿಲಿಸಳು ಮುಜುಗರಗೊಳ್ಳುತ್ತಿಲ್ಲ; ಚೆಂದುಟಿಗಳನ್ನು ಚುಂಬಿಸಲೆಂದು ಮುಂಗುರಳನ್ನು ಸವರಿ ಹಿಂಗತ್ತನ್ನು ಬಾಗಿಸುವಾಗ ಹುಬ್ಬೇರಿಸಿ ಮೊಗ ತಿರುಗಿಸುತ್ತಿಲ್ಲ; ಬಿಗಿಯಪ್ಪುಗೆಯನ್ನು ತಾನಾಗಿ ಸ್ವೀಕರಿಸುವುಳಲ್ಲದೆ ಮೈಸೆಟೆದುಕೊಳ್ಳುತ್ತಿಲ್ಲ. ಅಬ್ಬಾ, ಈ ಸುಂದರಿಗೆ ಮುನಿಸಿನ ಮತ್ತೊಂದು ಬಗೆಯೇ ಒಲಿದುಬಂದಂತಿದೆ!” ಅಲ್ಲವೇ ಮತ್ತೆ, ಮುಳ್ಳಿನ ಬೇಲಿಯನ್ನು ಹರಿದು, ಎತ್ತರದ ಮರವನ್ನೇರಿ, ಜಾರಿ ಬಿದ್ದೆದ್ದು, ತನಿವಣ್ಣನ್ನು ಕದ್ದು ಕಿತ್ತು ತಿಂದಾಗಲೇ ಸವಿ! ಸುಮ್ಮನೆ ಹೊನ್ನ ಹರಿವಾಣದಲ್ಲಿ ಸ್ವರ್ಗದ ರಸಫಲಗಳನ್ನು ಮುಂದಿರಿಸಿದರೂ ಅವು ಸಪ್ಪೆ.

ಇದೋ ಈ ತರುಣನ ಅಹವಾಲು ಆಲಿಸುವಂತಿದೆ. ಅವನು ಇಡಿಯ ನಾಯಕರನ್ನೂ ನಾಯಿಕೆಯರನ್ನೂ ಹೋಲಿಸಿಕೊಂಡು ಒಂದು ಸಿದ್ಧಾಂತಕ್ಕೇ ಬಂದಂತಿದೆ. ಅವನ ಪ್ರಕಾರ : “ಆಕೆಯು ಬಾಲೆ, ಆದರೆ ನಾವು ಎಳೆನಿಂಬೆಗಳು; ಅವಳೋ ಹೆಣ್ಣು, ಆದರೆ ಕಾತರ ನಮಗೆ; ತುಂಬಿದೆದೆಯ ಭಾರದ ಬಾಗು ಅವಳಿಗಾದರೆ ಏದುಸಿರು ನಮಗೆ: ಜಘನಭರದ ಮಂದಗಮನ ಅವಳದಾದರೆ ಹೆಜ್ಜೆಯನ್ನೇ ಕದಲಿಸಿದ ಹತಾಶೆ ನಮಗೆ. ಹೀಗೆ ಲೋಪ-ದೋಷಗಳು ಒಂದೆಡೆಯಿದ್ದರೆ ಅವುಗಳ ದಿಟವಾದ ಪ್ರಭಾವ ಮತ್ತೊಂದೆಡೆ. ಏನೀ ವಿಚಿತ್ರ?” ಇದು ನಿಜಕ್ಕೂ ಅಸಂಗತಿ! ಹೌದು, ಇದು ಅಸಂಗತ್ಯಲಂಕಾರವೇ ಆಗಿದೆ. ಬದುಕಿನ ಅಸಾಂಗತ್ಯಗಳು ಕಾವ್ಯವಾದಾಗ ಅಸಂಗತ್ಯಲಂಕಾರಗಳಾಗದೆ ಹೇಗೆ?

ಎಲ್ಲೆಡೆ ಬ್ರಹ್ಮವೊಂದನ್ನೇ ಕಾಣಬಲ್ಲವರು ಬ್ರಹ್ಮವಾದಿಗಳಾದ ವೇದಾಂತಿಗಳು. ಇದು ಯಾವ ಶುಕಮಹರ್ಷಿಗೋ ಶಂಕರಭಗವತ್ಪಾದರಿಗೋ ಸಾಧ್ಯವೆಂದು ಸಂಪ್ರದಾಯದ ಶ್ರದ್ಧೆ. ಆದರೆ ಪ್ರಣಯಿಗಳೇನೂ ಕಡಮೆಯಲ್ಲ. ಅವರು ಕೂಡ ಸರ್ವತ್ರ ತಾವೊಲಿದವರನ್ನೇ ಕಾಣಬಲ್ಲರು. ಇಂಥ ಪ್ರೇಮಾದ್ವೈತವನ್ನು ನಾಯಕನೊಬ್ಬನು ಹೀಗೆ ಸಾರಿದ್ದಾನೆ: “ಮನೆಯೊಳಗೂ ಅವಳೇ, ಮನೆಯ ಹೊರಗೆ ದಿಕ್ಕುದಿಕ್ಕಿನಲ್ಲಿಯೂ ಅವಳೇ. ಮುಂದೆಯೂ ಅವಳೇ ಹಿಂದೆಯೂ ಅವಳೇ. ಹಾಸಿನಲ್ಲಿಯೂ ಅವಳೇ ಹಾದಿಯಲ್ಲಿಯೂ ಅವಳೇ. ಅಯ್ಯೋ, ಆಕೆಯ ವಿಯೋಗದ ಕಾರಣ ನನಗೆ ಅವಳಿಲ್ಲದ ಎಡೆಯೇ ಇಲ್ಲ; ಅವಳು ಕಾಣದ ಕಡೆಯೇ ಇಲ್ಲ. ಇದೇನಿದು ಹೊಸಬಗೆಯ ಅದ್ವೈತವಾದ!”

ಈ ಮುನ್ನವೇ ಕಂಡಂತೆ ಅಮರುಕಶತಕದಲ್ಲಿ ಎಲ್ಲ ಪಾತ್ರಗಳಿಗಿಂತ ಹೆಚ್ಚಾಗಿ ಮಾತನಾಡುವುದು ಮಹಿಳೆಯೇ. ವಿಶೇಷತಃ ತಮ್ಮ ಆಂತರಂಗಿಕಸಖಿಯರಿಗೆ ಇಲ್ಲಿ ನಾಯಿಕೆಯರು ಎಲ್ಲ ನೋವು-ನಲಿವುಗಳನ್ನು ಹೇಳಿಕೊಳ್ಳುವ ಬಗೆ ಅನ್ಯಾದೃಶ. ಈ ಮಾತುಗಳಲ್ಲಿ ಕಂಡುಬರುವ ಭಾವಗಳ ವೈವಿಧ್ಯ-ವೈಪುಲ್ಯಗಳು ಯಾವ ಕಾಲಕ್ಕೂ ಮಾಸದ ಮನೋಲಹರಿಗಳು.

ಪ್ರೀತಿಯ ಪರಿಯೇ ವಿಚಿತ್ರ. ಅದಕ್ಕೆ ಮಾನವಿಲ್ಲ, ಮರ್ಯಾದೆಯಿಲ್ಲ; ಅಂಕೆಯಿಲ್ಲ, ಶಂಕೆಯಿಲ್ಲ; ಅರಿವಿಲ್ಲ, ಔದಾರ್ಯವೂ ಇಲ್ಲ. ಇಂತಾದರೂ ಅದೊಂದು ದಿವ್ಯಾನುಭೂತಿ. ಇಲ್ಲೊಬ್ಬಳು ಪಾಪದ ನಾಯಿಕೆ ತನಗೆರಡು ಬಗೆದ ನಲ್ಲನಿಗೆ ಹೊಲ್ಲಮೆಯನ್ನು ತೋರಬೇಕೆಂದು ಅದೆಷ್ಟು ಯತ್ನಿಸಿದರೂ ತನ್ನ ಹಾಳು ಹೃದಯವು ಇದಕ್ಕೆ ಸಹಕಾರ ನೀಡದಿರುವುದನ್ನು ಮಾರ್ಮಿಕವಾಗಿ ಸಖಿಯೊಡನೆ ಹೇಳಿಕೊಳ್ಳುತ್ತಾಳೆ: “ಗೆಳತಿ, ಅವನ ಮುಖವನ್ನು ಕಾಣಲು ಹಾತೊರೆಯುವ ನನ್ನೀ ಗತಿಗೇಡಿ ನೋಟವನ್ನೇ ನೆಲಕ್ಕೆ ತಳ್ಳಿದೆ. ಅವನ ಲಲ್ಲೆಮಾತುಗಳನ್ನು ಆಲಿಸಲು ಹಾತೊರೆಯುವ ಲಜ್ಜೆಗೇಡಿ ಕಿವಿಗಳನ್ನು ನಾನೇ ಕೈಯಾರ ಮುಚ್ಚಿಕೊಂಡೆ. ಅವನ ಸ್ಪರ್ಶಕ್ಕೆ ಬಾಯಿಬಿಡುವ ನಿರ್ಲಜ್ಜಕಪೋಲಗಳು ಬೆವತು ನವಿರೆದ್ದಾಗಲೂ ಅದುಮಿರಿಸಿಕೊಂಡೆ. ಆದರೇನು ಮಾಡಲಿ? ನನ್ನೀ ರವಿಕೆಯೊಳಗೇ ಎದೆಯೊಲ್ಮೆಯು ಸಾವಿರ ಸೀಳಾಗಿ ಸಿಡಿಯುತ್ತಿದೆಯಲ್ಲಾ!” ಈ ಉತ್ಕಟತೆಗೆ ವ್ಯಾಖ್ಯಾನ ಬೇಕಿಲ್ಲ.

ಇಲ್ಲೊಬ್ಬಳು ಚೆಲ್ಲುತನದ ಚೆಲುವೆ ಯಾವುದೋ ಅವಿವೇಕದಿಂದ ಪ್ರೇಮಗಾನದಲ್ಲಿ ಅಪಸ್ವರವನ್ನು ಹುಟ್ಟಿಸಿಕೊಂಡಿದ್ದಾಳೆ. ಅವಳ ಅಹವಾಲನ್ನು ತಾಳ್ಮೆಯಿಂದ ಗೆಳತಿಯು ಆಲಿಸಿದ್ದಾಳೆ: “ನೋಡೆ, ಹುಸಿಗೋಪದಿಂದ ವಿನೋದಕ್ಕಾಗಿ ಅವನನ್ನು ’ಹೋಗು’ ಎಂದೊಡನೆಯೇ ಆ ಮಹರಾಯನು ಹಾಸಿಗೆಯಿಂದೆದ್ದು ಹೊರಟೇಬಿಡುವುದೇ? ಅದೆಷ್ಟು ಕೈಕಾಲು ಹಿಡಿದು ಗೋಳಿಟ್ಟರೂ ತಿರುಗಿಯೇ ನೋಡದೆ ತೆರಳಿದ ಆ ನಿರ್ದಯನಿಗಾಗಿಯೇ ನಿಸ್ನೇಹನಿಗಾಗಿಯೇ ನನ್ನೀ ನಾಣ್ಗೇಡಿಯಾದ ಹಾಳು ಹೃದಯವು ಹಂಬಲಿಸುತ್ತಲೇ ಇದೆ. ಈಗ ನಾನೇನು ಮಾಡಲಿ!” ಇದಕ್ಕೆ ಮನ್ಮಥನೂ ಚಿಕಿತ್ಸೆ ಮಾಡಲಾರ.

ಇದೇ ಬಗೆಯಾದದ್ದು ಮತ್ತೊಬ್ಬ ನಾಯಿಕೆಯ ಪರಿಪಾಟಲು. ಅವಳೆನ್ನುತ್ತಾಳೆ: “ಇಲ್ಲಿ ನೋಡೇ ನನ್ನ ವಿಚಿತ್ರಗತಿಯನ್ನು. ಅವನಲ್ಲಿ ಮುನಿಯಬೇಕೆಂದು ಹುಬ್ಬು ಗಂಟುಹಾಕಿದೆನಾದರೂ ಆ ಹುಬ್ಬುಗಳ ಕೆಳಗಿರುವ ನೋಟವು ಆತನನ್ನೇ ಬೇಟಕ್ಕಾಗಿ ಹಂಬಲಿಸಿ ನೋಡುತ್ತದೆ. ಮಾತನ್ನು ಬಲವಂತವಾಗಿ ಗಂಟಲೊಳಗೇ ಅದುಮಿಟ್ಟುಕೊಂಡೆನಾದರೂ ಹಾಳಾದ ತುಟಿಗಳು ಅವನ ಸನ್ನಿಧಿಯಲ್ಲಿ ಅರಳುತ್ತವೆ. ನನ್ನೀ ಹೃದಯವನ್ನೇ ಕಲ್ಲಾಗಿಸಿಕೊಂಡೆನಾದರೂ ಈ ಹೊಲೆಮೈಯೆಲ್ಲ ರೋಮಾಂಚಿತವಾಗುತ್ತದೆ. ಅಂತೂ ಅವನ್ನು ಕಂಡೊಡನೆಯೇ ಸಿಟ್ಟು-ಸೆಡವುಗಳ ಬಗೆ ಬೀತುಹೋಗುತ್ತದೆ!” ಇದಕ್ಕಿಂತಲೂ ಉತ್ಕಟವಾದ ಪ್ರಣಯಾವೇಶ ಮತ್ತೆಲಿಯದು? ಆದರೆ ತನ್ನೀ ಸೋಲನ್ನು ಇಷ್ಟು ಪ್ರಾಮಾಣಿಕವಾಗಿ ತೆರೆದಿಡುವ ಹೆಣ್ಣಾದರೂ ಇನ್ನೆಲ್ಲಿ?

ಇಲ್ಲೊಬ್ಬಳು ಆತ್ಯಂತಿಕವಿಯೋಗಿನಿ ಕಾಣುತ್ತಿದ್ದಾಳೆ. ಅವಳ ಸಂಕಟವು ಶೋಕದೇವತೆಯ ಬಣ್ಣನೆಗೂ ಸಿಗದು. ಹತಾಶೆಯೂ ಹುತಾಶೆಯೂ ಆದ ಈ ಹೆಣ್ಣು ಹೀಗೆ ಹಲಬುತ್ತಿದ್ದಾಳೆ: “ಬಳೆಗಳು ಬಡವಾದ ಕೈಗಳಿಗೆ ವಿದಾಯ ಹೇಳಿದವು. ಇವುಗಳನ್ನು ಕಣ್ಣೀರ ಧಾರೆಯು ಪ್ರವಾಹವಾಗಿ ಹಿಂಬಾಲಿಸಿತು. ಧೈರ್ಯವು ಕ್ಷಣಕಾಲವೂ ನಿಲ್ಲದಂತಾಗಿ ಮನಸ್ಸಿನೊಡನೆಯೇ ಕಣ್ಮರೆಯಾಯಿತು. ನನ್ನ ಪ್ರಿಯತಮನು ತೆರಳುತ್ತಿದ್ದಂತೆಯೇ ಇವೆಲ್ಲ ತಾನಾಗಿ ಆಗಿಹೋದವು. ಅಯ್ಯೋ, ಈ ನನ್ನ ಜೀವಗಳ್ಳ ಬಾಳೇ! ತನ್ನೆಲ್ಲ ಗೆಳೆಯರು ಸುದೂರಯಾನಕ್ಕೆ ಸಿದ್ಧವಾಗಿ ಹೊರಟಾಗ ತಾನೇಕೆ ತೊಲಗುತ್ತಿಲ್ಲ?” ಪ್ರೋಷಿತಪತಿಕೆಯ ಸ್ಥಿತಿಯು ವಿರಹೋತ್ಕಂಠಿತೆಯ ಗತಿಯಾದಾಗ ಇಂಥ ಸಂದರ್ಭವಲ್ಲದೆ ಮತ್ತಾವುದು ಸಾಧ್ಯ?

ಅಬ್ಬಾ, ಈ ನೋವು-ನುಲಿವುಗಳ, ಆವೇಗ-ವಿಯೋಗಗಳ ಸಂಕಟದ ನಡುವೆ ಇಲ್ಲೊಂದು ಸೊಂಪಾದ ಸಂತಸದ ಮಲಯಾನಿಲ ಸುಳಿದಿದೆ. ಇದೊ ನೋಡಿ ಇಲ್ಲೊಬ್ಬ ನಾಯಿಕೆ ತನ್ನ ಪ್ರಣಯಸೌಖ್ಯವನ್ನು ವಯಸ್ಯೆಗೆ ಹೆಮ್ಮೆಯಿಂದ ಹೀಗೆ ಹೇಳಿಕೊಳ್ಳುತ್ತಿದ್ದಾಳೆ: “ನಲ್ಲನಿನ್ನು ಮಲಗಿದ್ದಾನೆ, ನೀನೂ ಇನ್ನು ಮಲಗು ಎಂದುಸಿರಿ ನನ್ನ ಗೆಳತಿಯರೆಲ್ಲ ಹೊರಗೆ ತೆರಳಿದರು. ಆಗ ಬಂದೊದಗಿದ ಏಕಾಂತವನ್ನು ಸಾರ್ಥಕಗೊಳಿಸಬೇಕೆಂಬ ಆಸೆಯಿಂದ ಅವನ ಮುಖದಲ್ಲಿ ನಾನು ಮುಖವಿರಿಸಿದೆನೋ ಇಲ್ಲವೋ, ಅಷ್ಟರಲ್ಲಿ ಹುಸಿನಿದ್ದೆಯ ಹೊದಿಕೆಯನ್ನು ಕೊಡವಿಕೊಂಡೆದ್ದ ಆ ನನ್ನ ಕಾದಲನು ನನ್ನನ್ನು ಪುಳಕಗೊಳಿಸಿ, ಇದ್ದಬದ್ದ ನಾಚಿಕೆಯನ್ನೆಲ್ಲ ಕಳಚಿ ಕಿತ್ತೆಸೆದು, ಆ ಹೊತ್ತಿಗೆ ಸಲ್ಲಬೇಕಿರುವ ಸಮ್ಮಾನಗಳನ್ನೆಲ್ಲ ಮಾಡಿ ... ಬಿಡು, ಮತ್ತೇನು ಹೇಳುವುದಿದೆ?” ಇದಲ್ಲವೇ ಸಫಲಪ್ರಣಯದ ಸ್ವಾರಸ್ಯ?

ಇಲ್ಲೊಂದು ಅನರ್ಘಭಾಸ್ವರಸಂದರ್ಭ. ಸಂದರ್ಭವೆಂದನೇ? ಅಲ್ಲ, ಸಾಮಾನ್ಯಸಂದರ್ಭವು ಶಾಶ್ವತಕವಿತೆಯಾದ ಕಾರಣದಿಂದಲೇ ಅದಕ್ಕೆ ಅನರ್ಘತೆ-ಭಾಸ್ವರತೆಗಳು ಸಂದಿರುವುದು. ಹತಾಶೆಯಾದ ಹೆಣ್ಣೊಬ್ಬಳು ಪ್ರೇಮಜೀವನದಲ್ಲಿ ತನಗೆ ದಕ್ಕಿದ ಕ್ರೂರತಿರಸ್ಕಾರವನ್ನು ಗೆಳತಿಗೆ ಹೇಳಿಕೊಳ್ಳುತ್ತಿದ್ದಾಳೆ: “ಉತ್ತಾನಪ್ರಣಯದ ಆವೇಶವೂ ನಿರ್ಭರಪ್ರೀತಿಯ ಸ್ನಿಗ್ಧಬಹುಮಾನವೂ ಜಾರಿಹೋದ ಬಳಿಕ ಪರಸ್ಪರಸೌಮನಸ್ಯವೇ ಸತ್ತುಹೋಯಿತು. ಈಗ ನಾನು ಅಕಸ್ಮಾತ್ ಅವನ ಎದುರಾದಾಗ ಅವನು ನನ್ನ ಮುಂದೆ ಉಳಿದೆಲ್ಲ ಮತ್ತೊಬ್ಬರಂತೆ ಸಾಗುತ್ತಿರುತ್ತಾನೆ. ಆ ಕಳೆದುಹೋದ, ಕಳೆಯಬಾರದ ದಿವಸಗಳನ್ನು ನೆನೆದು ನೆನೆದು, ಚಿಂತಿಸಿ ಚಿಂತಿಸಿ ಬವಳಿಬಂದಾಗಲೂ ಅದೇಕೆ ಈ ಹಾಳು ಹೃದಯ ನೂರು ಹೋಳಾಗಿ ಹೋಗದು!”

ಒಲುಮೆಯ ಸೆಣೆಸಿನಲ್ಲಿ ಸೋಲೂ ಸೊಗಸಲ್ಲ, ಸೋಲೇ ಸೊಗಸು. ಇದರ ಕೆಣಕು-ತಿಣುಕುಗಳಲ್ಲಿ ಮುನಿಸನ್ನು ಅದೆಷ್ಟು ದೂರ ತಳ್ಳಿದರೂ ಸಾಲದು. ಪ್ರಣಯಿಗಳು ಪರಸ್ಪರ ತಪ್ಪುಗಳನ್ನು ಗಣಿಸತೊಡಗಿದರೆ, ಎಣಿಸತೊಡಗಿದರೆ ಪ್ರಣಯವು  ಮುಂಜಾನೆಯ ಹಿಮಮಣಿಗಳ ಹಾಗೆ ನೋಡುನೋಡುತ್ತಿದ್ದಂತೆಯೇ ಬಾಡಿಹೋಗುತ್ತದೆ. ಇದನ್ನು ಬಲ್ಲ ಬಲ್ಲಿದೆಯೊಬ್ಬಳು ಹೀಗೆ ಹೇಳುತ್ತಾಳೆ: “ಗೆಳತಿ, ನಾನೊಮ್ಮೆ ಮುನಿದು ನಲ್ಲನನ್ನು ಹೊರದೂಡಿದೆ. ಆ ಧೂರ್ತನೋ ನನ್ನೊಬ್ಬಳು ಸಖಿಯ ವೇಷವನ್ನು ಹಾಕಿಕೊಂಡು ನನ್ನೆಡೆಗೆ ಬಂದ. ಭ್ರಾಂತಿಗೊಂಡ ನಾನು ಅವಳ ರೂಪದ ಅವನನ್ನಪ್ಪಿಕೊಂಡು ’ಸಖಿ, ಆತನನ್ನು ಮತ್ತೆ ಬರಹೇಳೇ’ ಎಂದೆ. ಅವನಾದರೋ ಕೀಟಲೆಯ ದನಿಯಲ್ಲಿ ’ಅದು ಸಾಧ್ಯವಿಲ್ಲ’ ಎನ್ನುತ್ತ ಗೆಲವಿನ ನಗೆಬೀರಿ ಬಿಗಿದಪ್ಪಿದಾಗಲೇ ನನಗೆ ತಿಳಿದದ್ದು, ಅವನಾರೆಂದು. ಆ ಹೊತ್ತಿಗೆ ಮುಸ್ಸಂಜೆಯಾಗಿತ್ತು. ಮತ್ತೆ ನನ್ನ ಮೈತಿಳಿದಾಗ ಬೆಳಗೇ ಆಗಿತ್ತು”. ಇಂಥ ಸಂತೋಷವು ಹೆಚ್ಚಿನ ಪ್ರಣಯಿಗಳ ಕೈಗೆಟುಕದ ಬಾನ್ಮಲರು.

ಪಾಪ, ಇಲ್ಲಿ ಬಾಡಿ ಬಸವಳಿದೆ ಮುಗುದೆಯೊಬ್ಬಳನ್ನು ಕಂಡರೆ ಮನಸ್ಸೇ ಹಿಂಡಿಹೋಗುತ್ತದೆ. ಅವಳ ಗೋಳನ್ನು ಪ್ರಣಯದೇವತೆ ರತಿಯೇ ಕೇಳಿ ಕನಿಕರಿಸಬೇಕು. ಅಯ್ಯೋ, ಆಕೆಗೆ ಹೇಳಿಕೊಳ್ಳುವುದಕ್ಕೆ ಸವಯಸ್ಕರಾದ ಸ್ನೇಹಿತೆಯರೂ ಇಲ್ಲ! ಈಕೆ ತುಂಬ ಮರ್ಯಾದಸ್ಥರ ಮನೆಯ ಹುಡುಗಿಯಿರಬೇಕು. ಮೈಯೆಲ್ಲಾ ಭೀತಿ, ಮನವೆಲ್ಲಾ ಲಜ್ಜೆ, ಮಾತೆಲ್ಲಾ ಮೌನ. ಹೀಗಾಗಿ ಅಕಸ್ಮಾತ್ ಪರಿಚಿತಳಾದ, ಸಹೃದಯತೆಯ ಕೆನೆಯೆನ್ನಬಲ್ಲ ಮನವುಳ್ಳ ಹಿರಿಯಳೊಬ್ಬಳಿಗೆ ಹೇಳಿಕೊಳ್ಳುತ್ತಿದ್ದಾಳೆ: “ನನ್ನ ಇಂಗಿತವನ್ನು ಚೆನ್ನಾಗಿ ಬಲ್ಲ ಓರಗೆಯವರಿಗೆ ಹೇಳಿಕೊಳ್ಳುವುದಕ್ಕೂ ನನ್ನಲ್ಲಿ ಧೈರ್ಯವಿಲ್ಲ. ನಾನೊಲಿದವನನ್ನು ದಿಟ್ಟಿಸಿ ನೋಡುವುದಕ್ಕೂ ನನಗೆ ಎಣೆಮೀರಿದ ನಾಚಿಕೆ. ಈ ಸುತ್ತಲಿನ ಜಗತ್ತೋ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲಿಯೇ ಆನಂದಿಸುತ್ತದೆ. ಅಲ್ಲದೆ ಊಹಾಪೋಹವೈಶಾರದ್ಯವೂ ಅದಕ್ಕುಂಟು. ಅಮ್ಮಾ, ಯಾರಲ್ಲಿ ಹೇಳಿಕೊಳ್ಳಲಿ, ಏನೆಂದು ಹೇಳಿಕೊಳ್ಳಲಿ? ನನ್ನೀ ಹೃದಯದ ಹೊಗೆಯಲ್ಲಿಯೇ ಒಲುಮೆಯ ಬೆಂಕಿ ಮುಪ್ಪಾಗಿಹೋಗಿದೆ!”

ದೂತ-ದೂತಿಯರಿಲ್ಲದೆ ಪ್ರಣಯವೇ ಕೈಗೂಡದಿರುವ ಸಂದರ್ಭಗಳು ಅಸಂಖ್ಯ. ಬಹಳಷ್ಟು ಬಾರಿ ದೌತ್ಯವು ಪ್ರಣಯಿಗಳಿಗೆ ಸಹಕಾರಿ. ಆದರೆ ಕೆಲವೊಮ್ಮೆ ದೂತಿಯೇ ನಾಯಿಕೆಯ ಸವತಿಯಾಗುವಂತೆ ವೈಪರೀತ್ಯಗಳೂ ತಲೆದೋರುವುದುಂಟು. ಅಂಥ ಸಂದರ್ಭದಲ್ಲಿ ಸೋಗಲಾಡಿಯರಾದ ದೂತಿಯರ ಮುಖದ ನೀರನ್ನಿಳಿಸುವಲ್ಲಿ ಅಮರುಕನ ನಾಯಿಕೆಯರೂ ಹಿಂದೆಬಿದ್ದಿಲ್ಲ. ಇಂಥ ಒಂದು ಸಂದರ್ಭವನ್ನೀಗ ಪರಿಶೀಲಿಸೋಣ. ಇಲ್ಲೊಬ್ಬಳು ದೂತಿಯು ತನ್ನ ಒಡತಿಯ ಸಂದೇಶವನ್ನು ಆಕೆಯ ನಲ್ಲನುಗೆ ಸಲ್ಲಿಸುವಷ್ಟು ಮಾತ್ರ ಕೆಲಸ ಮಾಡದೆ ಸ್ವಾಮಿಕಾರ್ಯದೊಡನೆ ಸ್ವಕಾರ್ಯವೆಂಬಂತೆ ಆ ಧೂರ್ತಪ್ರಿಯತಮನ ಜೊತೆ ಮದನಕದನವನ್ನೇ ಎಸಗಿ ಬಂದಿದ್ದಾಳೆ. ಆದರೆ ಅವಳ ಬಾಯಿ ಸುಳ್ಳಾಡಿದರೂ ಮೈ ಸುಳ್ಳಾಡದಲ್ಲ! ಜೊತೆಗೆ ನಮ್ಮ ನಾಯಿಕೆ ಎಣೆಮೀರಿದ ಜಾಣೆ. ತಾನು ಸ್ನಾನಕ್ಕೆ ಹೋಗಿದ್ದೆನಲ್ಲದೆ ದೌತ್ಯಕ್ಕಿನ್ನೂ ತೆರಳಿರಲಿಲ್ಲವೆಂಬ ದೂತಿಯ ಹುಸಿಯನ್ನು ಬಯಲಾಗಿಸುವ ಭಾಮಿನಿಯ ಬಗೆ ನೋಡಿ: “ಎಲೆ ದೂತಿ, ನಿನ್ನೆದೆಯ ಚಂದನಲೇಪವೆಲ್ಲ ತೊಳೆದುಹೋಗಿದೆ; ತುಟಿಯ ಕೆಂಪೆಲ್ಲ ಅಳಸಿಹೋಗಿದೆ; ಕಣ್ಣ ಕಾಡಿಗೆ ಕರಗಿಹೋಗಿದೆ; ಮೈಯೆಲ್ಲ ರೋಮಾಂಚನದ ಜೊಂಪಿನಿಂದ ಪ್ರಫುಲ್ಲವಾಗಿದೆ. ಸರಿ ಸರಿ, ನೀನು ಮೀಯಲೆಂದು ಕೆರೆಗೆ ಹೋದೆಯಲ್ಲದೆ ಆ ಅಯೋಗ್ಯನ ಬಳಿಗಲ್ಲವೆಂದು ಚೆನ್ನಾಗಿ ತಿಳಿಯುತ್ತಿದೆ. ಅಂತೂ ನಿನ್ನ ಈ ಕಾತರಿಸುವ ಒಡತಿಗೆ ಕೊಡತೆಯ ಪೆಟ್ಟನ್ನೇ ಕೊಟ್ಟೆಯಲ್ಲೇ!” ಈ ಸಂದರ್ಭದಲ್ಲಿ ಆ ದೂತಿಯು ಕಳೆದುಕೊಂಡ ಅಲಂಕಾರದ ಹಿನ್ನೆಲೆಯೇನೆಂಬುದು ಊಹಾಪೋಹವಿಶಾರದರಾದ ಕಾವ್ಯರಸಿಕರಿಗೆ ಪರೋಕ್ಷವೇ?

ಸರಸಕ್ಕಾಗಿ ತಾವು ಒಲಿದವರ ಕೈಯಲ್ಲಿ ವಂಚಿತರಾಗುವುದು ಯಾವ ಪ್ರಣಯಿಗಳಿಗೂ ಪರಮಾನಂದ. ಅಂಥ ಒಂದು ರಸಮಯಸಂದರ್ಭವನ್ನು ನಾವಿಲ್ಲಿ ಕಾಣಲಿದ್ದೇವೆ. ತುಂಟನಾದ ಕಾದಲನೋರ್ವ ತನ್ನ ಕಾದಲೆಯನ್ನು ಏಕಾಂತದಲ್ಲಿ ನಡಸಿಕೊಂಡ ಬಗೆಯನ್ನು ಅವಳು ಗೆಳತಿಗೆ ಲವಲವಿಕೆಯಿಂದ ಉಸುರುತ್ತಿದ್ದಾಳೆ: “ನೋಡೆ, ಒಂಟಿಯಾಗಿದ್ದ ನನ್ನನ್ನು ಅವನು ತಾನೇನೋ ಗುಟ್ಟು ಹೇಳುವುದಾಗಿ ಹತ್ತಿರ ಕರೆದ. ಮರೆಮೋಸಗಳನ್ನು ಎಳ್ಳಷ್ಟೂ ತಿಳಿಯದ ನಾನು ಅವನ ಬಳಿ ಸಾರಿದೆ. ಅವನೋ ಅದಾವುದೋ ಪರಮರಹಸ್ಯವನ್ನು ಕಿವಿಯಲ್ಲಿ ಪಿಸುಗುಟ್ಟುವನಂತೆ ಮತ್ತೂ ನಿಕಟವಾಗಿ, ಕೌತುಕದಿಂದಿದ್ದ ನನ್ನ ಬಿಸಿಯುಸಿರನ್ನು ಹೀರುತ್ತ, ಸೋರ್ಮುಡಿಯನ್ನು ಹಿಡಿದು ತುಟಿಗೆ ತುಟಿ ಸೇರಿಸಿಯೇಬಿಟ್ಟನಲ್ಲ! ಹೀರುತ್ತಲೇ ಹೊತ್ತನ್ನು ಮರೆಸಿಬಿಟ್ಟನಲ್ಲ!”

ಮುನಿಸಿಕೊಂಡು ನಲ್ಲರನ್ನು ಓಲೈಕೆಯ ಕಾಯಕಕ್ಕೆ ಹಚ್ಚುವುದು ಹೆಂಗಳೆಯರ ಹದಮೀರಿದ ಹವ್ಯಾಸ. ಕನಿಷ್ಠಪಕ್ಷ ಮುನಿದಂತೆ ನಟಿಸಿ ರಮಣರಿಂದ ಅನುನಯದ ಕಪ್ಪಕಾಣಿಕೆಯನ್ನು ಒಪ್ಪಿಸಿಕೊಳ್ಳುವುದು ಮತ್ತೂ ಹೆಚ್ಚಿನ ಸುಮ್ಮಾನ. ಆದರೆ ಇಂಥ ಪ್ರಣಯಸಾಮಾನ್ಯವರ್ತನೆಯನ್ನೂ ಅಪ್ಪಟ ಪ್ರೀತಿಗಾಗಿ ಮೀರಬಲ್ಲ ಬಲ್ಮೆ ಇಲ್ಲೊಬ್ಬ ಕಾಮಿನಿಯದು. ಆಹಾ, ಈಕೆಯ ಮಾರ್ದವ ಅತಿಲೋಕಮನೋಹರ. ಬಹುಶಃ ಹೀಗೆಲ್ಲ ಮುನಿದಂತೆ ನಟಿಸಬೇಕೆಂದು ಪ್ರಣಯಕೋಪದ ಪಾಠವನ್ನು ಹೇಳುವ ಪ್ರಮದೆಯರಿಗೆ ಅವಳು ಈ ಮಾತು ಹೇಳುತ್ತಿರಬೇಕು: “ಕಾಲಿಗೆ ಬೀಳಿಸಿಕೊಳ್ಳುವುದು, ಕಣ್ಣೀರಿಡಿಸುವುದು, ಲಲ್ಲೆಗೆರೆಸುವುದು, ಹೊಗಳಿಸಿಕೊಳ್ಳುವುದು, ಮೇಲೆ ಬೀಳಿಸಿಕೊಂಡು ಆಲಿಂಗನ-ಚುಂಬನಗಳನ್ನು ಅಹಮಹಮಿಕೆಯಿಂದ ಗಳಿಸಿಕೊಳ್ಳುವುದು—ಇವಿಷ್ಟನ್ನೂ ತನೊಲ್ಲದೆಯೇ ತನಗೆ ಬಂತೆಂಬಂತೆ ನಟಿಸುವುದೇ ಮುಂತಾದ ವಿಪುಲಸತ್ಫಲಗಳೆಷ್ಟೇ ಮುನಿಸಿನ ಉದ್ಯಮದಲ್ಲಿದ್ದರೂ ನನಗದು ಬೇಡ. ನನ್ನ ನಲ್ಲ ನನ್ನೆಲ್ಲ ಜೀವ. ಹೀಗಾಗಿ ನಾನು ಬೇರೇನು ಮಾಡಲಿ?”

ಇಂಥದ್ದೇ ಜಾತಿಗೆ ಸೇರಿದ ಮತ್ತೊಬ್ಬಳು ಸುಂದರಿ ಇಲ್ಲಿ ನಲಿದಿದ್ದಾಳೆ. ಅವಳು ಹಿಗ್ಗಿನಿಂದ ತನ್ನ ಪಾರವಶ್ಯವನ್ನು ಹೇಳಿಕೊಳ್ಳುತ್ತಿದ್ದಾಳೆ. ನೆನಪೇ ಜೀವಿಗೆ ಎಂದೂ ಸಲ್ಲುವ ಸಂಗಾತಿಯೆನ್ನುತ್ತಾರೆ. ವಿಶೇಷತಃ ಸವಿಯಾದ ನೆನಪುಗಳು ಮತ್ತೂ ಹೀಗೆ. ತತ್ರಾಪಿ ಉತ್ತಾನಪ್ರಣಯದ ಸುಮಧುರಸ್ಮೃತಿಗಳು: ಬಾಳ ಬುತ್ತಿಯ ಅಮೃತಾನ್ನಗಳು. ಇಂತಿದ್ದರೂ ಈ ಚೆಲುವೆಗೆ ತನ್ನ ಮೈಮರವೆಯೇ ಮಿಗಿಲೆಂಬ ಭಾವನೆ. ಅವಳ ಈ ಅನುಭವವನ್ನು ಆಕೆಯ ಮಾತಿನಲ್ಲಿಯೇ ಆಲಿಸಿರಿ: “ಗೆಳತಿ, ನಲ್ಲನು ಹಾಸುಗೆಯ ಬಳಿ ಬಂದಾಗ ಉಡಿಗಂಟು ತಾನಾಗಿ ಸಡಿಲಿತು. ಸೀರೆಯಂತೂ ಸ್ವಲ್ಪ ಮಾತ್ರ ಸೊಂಟದ ಮೇಲೆ ನಿಂತೂ ನಿಲ್ಲದಂತೆ ಹೊಯ್ದಾಡಿತು. ಇದೊ, ಆಣೆಮಾಡಿ ಹೇಳುತ್ತಿದ್ದೇನೆ ಸಖಿ, ಅವನ ಸಂಗದಲ್ಲಿ ನಾನು ಸೇರಿಹೋದ ಬಳಿಕ ಅವನಾರು, ನಾನಾರು, ರತಿಯೇನು, ಕಥೆಯೇನು ಮತ್ತೇನೂ ನನ್ನ ನೆನಪಿನಲ್ಲಿ ನಿಂತಿಲ್ಲ!” ಮರೆವು ಶಿವಕೃಪೆಯೆಂಬ ಮಾತಾದರೂ ಮತ್ತಾವುದಕ್ಕೆ ಸಂದೀತು?

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.