ಗೆಳತಿಯರಿಂದ ಬಾವಿಗೆ ತಳ್ಳಲ್ಪಟ್ಟ ದೇವಯಾನಿಯನ್ನು ಯಯಾತಿ ಕೈಹಿಡಿದು ಎತ್ತಿದ ಬಳಿಕ ಅವಳು ಅವನನ್ನೇ ಮದುವೆಯಾಗಲು ಬಯಸುತ್ತಾಳೆ. ಅವನು “ಬ್ರಾಹ್ಮಣಕನ್ಯೆಯನ್ನು ಕ್ಷತ್ರಿಯ ಪರಿಣಯಿಸುವುದು ವರ್ಣಧರ್ಮಕ್ಕೆ ವಿರುದ್ಧ” ಎಂದರೆ ಇವಳು, “ಪಾಣಿಧರ್ಮದ ಪ್ರಕಾರ ಸರಿಯಾಗುತ್ತದೆ” ಎಂದು ಪ್ರತಿವಾದಿಸುತ್ತಾಳೆ. “ಪಾಣಿಧರ್ಮ”ವೆಂದರೆ ಕೈಹಿಡಿದೊಡನೆಯೇ ವಿವಾಹವಾಯಿತೆಂದು ಒಪ್ಪುವುದು ಹಾಗೂ ಕೈಹಿಡಿದವಳನ್ನು ಕಡೆಯ ತನಕ ಉಳಿಸಿಕೊಳ್ಳುವುದು.
ಪಾಣಿಧರ್ಮಃ (೧.೭೬.೨೦)
ನಾವು ಸಾಮಾನ್ಯವಾಗಿ ಯಾವುದನ್ನಾದರೂ ನಿರ್ದುಷ್ಟವೆಂದು ಹೇಳಬೇಕಾದರೆ “ಬೆರಳಿಟ್ಟು ತೋರಿಸೋಕೆ ಕೂಡ ಯಾವುದೇ ಕುಂದಿಲ್ಲ” ಎಂದು ಹೇಳುವುದುಂಟು. ಯಯಾತಿಗೆ ಶರ್ಮಿಷ್ಠೆಯ ಸೌಂದರ್ಯದಲ್ಲಿ ಸೂಜಿಯ ತುದಿಯಿಂದಲೂ ಸೂಚಿಸುವಂಥ ಕೊರತೆ ಕಾಣಲಿಲ್ಲವೆಂದು ವ್ಯಾಸರ ವರ್ಣನೆ!
ರೂಪೇ ಚ ತೇ ನ ಪಶ್ಯಾಮಿ ಸೂಚ್ಯಗ್ರಮಪಿ ನಿಂದಿತುಮ್ (೧.೭೭.೧೪)
ಪಾಂಡುವು ಸದಾ ಬೇಟೆಯಾಡುತ್ತಿದ್ದುದನ್ನು ವರ್ಣಿಸುವಾಗ ವೇದವ್ಯಾಸರು ಅವನನ್ನು “ಅರಣ್ಯನಿತ್ಯ”ನೆಂದಿದ್ದಾರೆ. ಇದು ಶಾಶ್ವತವಾಗಿ ಕಾಡಿನಲ್ಲಿ ಉಳಿದವನಂತೆ ವರ್ತಿಸುವವನನ್ನು ಪರಿಣಾಮಕಾರಿಯಾಗಿ ನಿರ್ದೇಶಿಸುವ ಶಬ್ದ.
ಅರಣ್ಯನಿತ್ಯಃ ಸತತಂ ಬಭೂವ ಮೃಗಯಾಪರಃ (೧.೧೦೬.೭)
ಶಾಪಗ್ರಸ್ತನಾದ ಪಾಂಡುವಿನೊಡನೆ ಕಾಡಿಗೆ ಬಂದಿದ್ದ ಕುಂತಿ ದುರ್ವಾಸರ ಮಂತ್ರದಿಂದ ಮೂವರು ಮಕ್ಕಳನ್ನು ಪಡೆದಾಗ ತನಗೆ ಸಂತಾನಭಾಗ್ಯವಿನ್ನೂ ಇಲ್ಲದ ಮಾದ್ರಿ ಹೇಳುವ ಮಾತಿದು: “ಗಾಂಧಾರಿಗೆ ಮಕ್ಕಳಾದರೆಂದು ಅಸೂಯೆಯಿಲ್ಲ; ಆದರೆ ತನ್ನ ಸಾಕ್ಷಾತ್ ಸವತಿಯಾದ ಕುಂತಿಗೆ ಮಕ್ಕಳಾದರೂ ತನಗಿನ್ನೂ ಇಲ್ಲವೆಂಬುದು ದುಃಖಕಾರಿ.” ಇಲ್ಲಿ “ತುಲ್ಯತಾಯಾಮ್ ಅಪುತ್ರತಾ” ಎಂದರೆ “ಸಮಾನರಲ್ಲಿ ಸಂತಾನಹೀನತೆ” ಉಂಟಾಯಿತೆಂದು ತಾತ್ಪರ್ಯ.
ತುಲ್ಯತಾಯಾಮಪುತ್ರತಾ (೧.೧೧೫.೪)
ಕುರು-ಪಾಂಡವರು ಬಾಲ್ಯದಲ್ಲಿ ಆಡಿದ ಆಟಗಳ ಪೈಕಿ “ಕಾಕನಿಲೀಯನಮ್” ಕೂಡ ಒಂದು. ಸಾಮಾನ್ಯವಾಗಿ ಆಟಗಳ ಹೆಸರುಗಳು ನುಡಿಗಟ್ಟಿನ ಸ್ಪರ್ಶದಿಂದ ಕೂಡಿರುತ್ತವೆ. ಇದು ಅಂಥ ಒಂದು ಶಬ್ದ; ನಮ್ಮಲ್ಲಿ ಪ್ರಚಲಿತವಾಗಿರುವ ಕಣ್ಣಾಮುಚ್ಚಾಲೆಯನ್ನು ಹೋಲುವಂಥದ್ದು. “ಪಕ್ಷಿಗಳಂತೆ ಬಚ್ಚಿಟ್ಟುಕೊಳ್ಳುವುದು” ಎಂಬುದಿದರ ತಾತ್ಪರ್ಯ. ಕಾಗೆಯು ಅಂದೂ ಇಂದೂ ಜನವಸತಿಗೆ ನಿಕಟವಾದ ಪಕ್ಷಿಯೆನಿಸಿದ ಕಾರಣ ಪರಿಚಯದ ಸೌಲಭ್ಯವೇ ಇಲ್ಲಿಯ “ಕಾಕ”ಶಬ್ದಕ್ಕೆ ಮೂಲ.
ಕಾಕನಿಲೀಯನಮ್ (೧.೧೧೯.೧೬)
ಕರ್ಣನು ಅಂಗರಾಜ್ಯಕ್ಕೆ ಒಡೆಯನಾದಾಗ ಅದನ್ನು ದೂರದಿಂದ ಕಾಣುತ್ತಿದ್ದ ಅವನ ಸಾಕುತಂದೆ ಅಧಿರಥನ ವರ್ಣನೆಯ ಸಂದರ್ಭದಲ್ಲಿ ಈ ನುಡಿಗಟ್ಟು ಬರುತ್ತದೆ. ಮುದುಕನಾದ ಅವನು ಊರೆಗೋಲನ್ನು ಹಿಡಿದ ಕ್ರಮವನ್ನಿಲ್ಲಿ ತುಂಬ ಹೃದಯಸ್ಪರ್ಶಿಯಾಗಿ ಪರಿಭಾವಿಸಲಾಗಿದೆ. ಅವನ ಮುಪ್ಪು ಅದೆಷ್ಟು ಆವರಿಸಿಕೊಂಡಿದೆಯೆಂದರೆ ಊರೆಗೋಲೇ ಅವನಿಗೆ ಪ್ರಾಣವಾಗಿದೆ!
ಯಷ್ಟಿಪ್ರಾಣಃ (೧.೧೨೭.೧)
ಪಾಂಡವರನ್ನು ಹಸ್ತಿನಾವತಿಯಿಂದ ಹೊರಗೆ ಸಾಗಹಾಕುವ ಹುನ್ನಾರ ಕೌರವರದು. ಅದಕ್ಕಾಗಿ ಕೆಲವರಿಗೆ ಲಂಚ ಕೊಟ್ಟು ವಾರಣಾವತದ ಸೊಗಸನ್ನು ಅವರಿಗೆ ತಿಳಿಸಬೇಕೆಂದು ದುರ್ಯೋಧನ ಸಂಚುಮಾಡುತ್ತಾನೆ. ಹಾಗೆ ಕೊಟ್ಟ ಲಂಚದಲ್ಲಿ ಹಣ, ಹೆಸರು, ಪದವಿ ಮುಂತಾದುವೆಲ್ಲ ಸೇರಿದ್ದವು. ಇವುಗಳ ಸಮಷ್ಟಿರೂಪವೇ “ಅರ್ಥಮಾನಯೋಜನೆ.”
ಅರ್ಥಮಾನೇನ ಯೋಜಿತಾಃ (೧.೧೩೦.೮)
ಹಿಡಿಂಬನು ಕಾಡಿನಲ್ಲಿ ನರವಾಸನೆಯನ್ನು ಗ್ರಹಿಸಿದೊಡನೆಯೇ ಅವರನ್ನು ಕೊಂದು ತರುವಂತೆ ತಂಗಿ ಹಿಡಿಂಬೆಗೆ ಆದೇಶ ನೀಡುತ್ತಾನೆ. ಆಗವನು ತಲೆ ಕೆರೆದುಕೊಳ್ಳುತ್ತ ಬೆರಳನ್ನು ಮೇಲೆತ್ತಿ ಅಲ್ಲಾಡಿಸುವನು. ಇಂದಿಗೂ ಆದೇಶಗಳನ್ನು ಕೊಡುವವರ ಕ್ರಮ ಹೀಗೆಯೇ ಅಲ್ಲವೇ?
ಊರ್ಧ್ವಾಂಗುಲಿಃ (೧.೧೩೯.೩)
ಭೀಮನು ಹಿಡಿಂಬನನ್ನು ಸಂಹರಿಸಿದಾಗ ವ್ಯಾಸರು ಬಳಸುವ ನುಡಿಗಟ್ಟಿದು. ನಮ್ಮಲ್ಲಿ ಬಳಕೆಯಿರುವ “ದನ ಬಡಿದಹಾಗೆ ಬಡಿದು ಕೊಂದ” ಎನ್ನುವ ಮಾತಿಗಿದು ನೇರವಾದ ಸಂವಾದಿ. ವ್ಯಾಕರಣದೃಷ್ಟ್ಯಾ ಇಲ್ಲಿರುವುದು “ಣಮುಲ್”ಪ್ರತ್ಯಯದ ವಿನಿಯೋಗ. ಇದು ಸಂಸ್ಕೃತದ ಅದೆಷ್ಟೋ ನುಡಿಗಟ್ಟುಗಳಿಗೆ ಮಾತೃಭೂತವಾಗಿದೆ.
ಪಶುಮಾರಮಮಾರಯತ್ (೧.೧೪೨.೨೮; ೧೦.೮.೧೮)
ಪಾಂಡವರು ಏಕಚಕ್ರದಲ್ಲಿ ಇರುವಾಗ ಬಕಾಸುರನ ಬಾಧೆಯಿಂದ ಬಳಲಿದ ಬ್ರಾಹ್ಮಣಕುಟುಂಬವನ್ನು ಕುಂತಿ ವಿಚಾರಿಸುವಾಗ ಈ ನುಡಿಗಟ್ಟಿನ ಬಳಕೆಯಾಗಿದೆ. ಇದರ ಸರಳಾರ್ಥ “ದುಃಖದ ಮೂಲ ಎಲ್ಲಿಯದು?” ಎಂದು.
ಕುತೋಮೂಲಮಿದಂ ದುಃಖಮ್ (೧.೧೪೮.೧)
ದ್ರೌಪದಿಯ ಸ್ವಯಂವರದಲ್ಲಿ ಬ್ರಾಹ್ಮಣರೂ ಪಾಲ್ಗೊಳ್ಳಬಹುದೆಂದು ತಿಳಿದಾಗ ಮೇಲೆದ್ದ ವಟುವೇಷಧಾರಿ ಅರ್ಜುನನನ್ನು ಹತ್ತಿರದಲ್ಲಿದ್ದ ವಿಪ್ರವೃಂದ ಆಕ್ಷೇಪಿಸುವಾಗ ಈ ನುಡಿಗಟ್ಟು ಬಳಕೆಯಾಗಿದೆ. “ಬ್ರಹ್ಮಚಾಪಲಕ್ಕೆ” “ಬ್ರಾಹ್ಮಣರ ಚಾಪಲ್ಯ,” “ಬ್ರಹ್ಮಚಾರಿಯ ಚಾಪಲ್ಯ,” “ವೇದಾಭ್ಯಾಸಜಡನ ಚಾಪಲ್ಯ” ಎಂಬೆಲ್ಲ ಧ್ವನಿಗಳಿರುವುದು ಸ್ವಾರಸ್ಯಕಾರಿ.
“ಬ್ರಹ್ಮಚಾಪಲಾತ್ (೧.೧೭೯.೭)
ಸುಂದ-ಉಪಸುಂದರೆಂಬ ರಕ್ಕಸರು ತಿಲೋತ್ತಮೆಗಾಗಿ ಸೆಣಸುವಾಗ ನಾನು ಮೊದಲು ತಾನು ಮೊದಲೆಂದು ಮುನ್ನುಗ್ಗಿದ ಪರಿಯನ್ನಿದು ವಿವರಿಸಿದೆ. ಸಂಸ್ಕೃತದಲ್ಲಿದು ತುಂಬ ಪ್ರಸಿದ್ಧವಾದ ನುಡಿಗಟ್ಟು. “ಅಹಂಪೂರ್ವಿಕಯಾ” ಅಥವಾ “ಅಹಮಹಮಿಕಯಾ” ಎಂದು ಕೂಡ ಇದು ಬಳಕೆಯಲ್ಲಿದೆ.
ಅಹಂಪೂರ್ವಮಹಂಪೂರ್ವಮಿತ್ಯನ್ಯೋನ್ಯಂ ನಿಜಘ್ನತುಃ (೧.೨೦೪.೧೮)
ಸಂಸ್ಕೃತದಲ್ಲಿ ಸೋಮಾರಿತನಕ್ಕೆ “ದೀರ್ಘಸೂತ್ರತ್ವ” ಎಂಬ ನುಡಿಗಟ್ಟನ್ನು ವಿಪುಲವಾಗಿ ಬಳಸುವುದುಂಟು. ಉದ್ದವಾದ ಹಗ್ಗ ಸುರುಳಿಯಾಗಲ್ಲದೆ ನೇರವಾಗಿರುವುದಿಲ್ಲ, ಮತ್ತಿದು ಹೆಚ್ಚಿನ ಪಾಲು ಬಳಸಿ ಮಿಗುವುದರಿಂದ ವ್ಯರ್ಥವೂ ಆಗಿರುತ್ತದೆ. ಇವುಗಳೆಲ್ಲ ಈ ನುಡಿಗಟ್ಟಿನಲ್ಲಿ ಧ್ವನಿತವಾಗಿವೆ.
ದೀರ್ಘಸೂತ್ರತಾ (೨.೫.೯೬) [ದೀರ್ಘಸೂತ್ರಃ (೩.೪೯.೧೯)]
ವಿಕ್ಷಿಪ್ತಸ್ವಭಾವಕ್ಕೆ ಇದು ವಾಚಕ. ಆದರೆ ಮೂಲತಃ ಈ ಪದಪುಂಜಕ್ಕೆ “ಎಸೆಯಲ್ಪಟ್ಟ ಮನಸ್ಸು” ಎಂಬ ಅರ್ಥವಿರುವ ಕಾರಣ ಇದೊಂದು ನುಡಿಗಟ್ಟಾಗಿದೆ.
ಕ್ಷಿಪ್ತಚಿತ್ತತಾ (೨.೫.೯೬)
“ಅಪಾರವಾದ ಕಾಲ ಕಳೆದ ಬಳಿಕ” ಎಂಬ ತಾತ್ಪರ್ಯವುಳ್ಳ ಈ ನುಡಿಗಟ್ಟಿನಲ್ಲಿ “ಕಾಲಪೂಗ”ವೆಂಬ ಸಮಾಸಕ್ಕೆ ನೈಘಂಟುಕವಾದ ಯಾವ ಅರ್ಥವನ್ನೂ ಕೊಡಲು ಸಾಧ್ಯವಿಲ್ಲ.
ಕಾಲಪೂಗಸ್ಯ ಮಹತಃ (೨.೩೩.೨೪)
ಭೂಲಿಂಗವೆಂಬ ಪಕ್ಷಿ ಅಪಾಯಕಾರಿಯಾದ ಕೆಲಸಗಳನ್ನು ಮಾಡುತ್ತಲೇ “ಮಾ ಸಾಹಸಮ್” (ಸಾಹಸ ಬೇಡ) ಎಂದು ಕೂಗುವುದಂತೆ. ಇದು ಸಂಸ್ಕೃತದಲ್ಲೊಂದು ನುಡಿಗಟ್ಟಾಗಿ ಬಳಕೆಯಲ್ಲಿದೆ. ಹೇಳುವುದೊಂದು ಮಾಡುವುದೊಂದು ಆದಾಗ ಅಂಥ ಪರಿಸ್ಥಿತಿಯನ್ನು ನಿರ್ದೇಶಿಸಲು ಇದರ ಬಳಕೆಯಾಗುತ್ತದೆ.
ಮಾ ಸಾಹಸಮ್ (೨.೪೧.೨೦)
ದುರ್ಯೋಧನನು ಪಾಂಡವರ ಅಭಿವೃದ್ಧಿಯನ್ನು ಸಹಿಸದೆ ಧೃತರಾಷ್ಟ್ರನಲ್ಲಿ ದೂರಿಕೊಳ್ಳುತ್ತಾನೆ. ಅವನ ಪ್ರಕಾರ ಪಾಂಡವರು ಅನುದಿನವೂ ವರ್ಧಿಸುತ್ತಿರುವವರು. ತಾವಾದರೋ ಬೆಳೆವಣಿಗೆ ನಿಂತುಹೋದವರು. ಮೇಲ್ನೋಟಕ್ಕೆ ಈ ನುಡಿಗಟ್ಟಿನಲ್ಲಿ ಬೆಳೆವಣಿಗೆಯು ದೃಢವಾಗಿದೆಯೆಂಬ ಅರ್ಥ ಕಂಡರೂ ಅದು ನಿಂತುಹೋಗಿದೆಯೆಂಬ ಧ್ವನಿಯೂ ಇರುವುದು ಸ್ವಾರಸ್ಯಕರ:
ಸ್ಥಿರವೃದ್ಧಯಃ (೨.೫೦.೨೮)
ಪಾಂಡವರು ವನವಾಸಕ್ಕೆ ತೆರಳಿದಾಗ ಮೊದಲ ರಾತ್ರಿ ಆಹಾರ ಸಿಕ್ಕದೆ ನೀರು ಕುಡಿದುಕೊಂಡೇ ಹಸಿವೆ ಹಿಂಗಿಸಿಕೊಂಡರೆಂದು ಈ ನುಡಿಗಟ್ಟಿನ ಆಂತರ್ಯ. ಆದರೆ ಶಬ್ದಶಃ ಇದಕ್ಕಿರುವ ಅರ್ಥ, “ನೀರಿನೊಡನೆಯೇ ರಾತ್ರಿ ವಾಸಿಸಿದರು” ಎಂದು. ಇದು ತಾನಾಗಿ ಸ್ಪಷ್ಟಾರ್ಥಕವಲ್ಲ. ಹೀಗಾಗಿಯೇ ಇಲ್ಲಿ ಸೊಗಸಾದ ನುಡಿಗಟ್ಟಿದೆ.
ಉದಕೇನೈವ ತಾಂ ರಾತ್ರಿಮೂಷುಃ (೩.೧.೪೦)
ಮತ್ತೊಂದು ಪ್ರಸಂಗದಲ್ಲಿ ಇದೇ ಭಾವವು ಭಂಗ್ಯತರದಲ್ಲಿ ಹೀಗೆ ಮೂಡಿದೆ: ಜಲಮಾತ್ರೇಣ ವರ್ತಯನ್ (೩.೫೮.೧೦).
ನಮ್ಮಲ್ಲಿ “ರಾತ್ರಿ ಬೆಳಗಾದ ಬಳಿಕ” ಎಂದು ಹೇಳುವುದುಂಟು. ಇದಕ್ಕೆ ನೇರವಾದ ಸಂವಾದಿಯಿಲ್ಲಿದೆ. ಇದರ ತಾತ್ಪರ್ಯ “ಹಗಲಾಯಿತು” ಎಂದಷ್ಟೇ. ಸತಿಸಪ್ತಮಿಯ ಸ್ವಾರಸ್ಯವೂ ಇಲ್ಲಿ ಸೇರಿಕೊಂಡ ಕಾರಣ ಈ ಮಾತು ಮತ್ತೂ ಮನೋಹರವೆನಿಸಿದೆ.
ಪ್ರಭಾತಾಯಾಂ ತು ಶರ್ವರ್ಯಾಮ್ (೩.೨.೧)
ಶ್ರೀಕೃಷ್ಣನ ಎದುರು ದ್ರೌಪದಿ ದುಃಖಿಸುವಾಗ ತನ್ನ ಮುಡಿ ಕೌರವರ ಕೈಗೆ ಸಿಲುಕಿತೆಂದು ಹಲಬುತ್ತಾಳೆ. ಈ ಮಾತು ಲೋಕರೂಢಿಯಲ್ಲಿ ವಾಡಿಕೆಯಲ್ಲಿರುವ “ಅವರ ಕೈಲಿ ನನ್ನ ಜುಟ್ಟು ಸಿಕ್ಕಿತು!” ಎಂಬುದಕ್ಕೆ ನಿಕಟಸಂವಾದಿ.
ಕಚಗ್ರಹಮನುಪ್ರಾಪ್ತಾ (೩.೧೩.೧೦೮)
ವೇದಘೋಷವನ್ನು ಪರ್ಯಾಯವಾಗಿ ಬ್ರಹ್ಮಘೋಷವೆಂದೂ ಹೇಳುವುದುಂಟು. ಆದರೆ ಸದ್ಯದ ಪ್ರಸಂಗವನ್ನು ಗಮನಿಸಿದರೆ ಮತ್ತೂ ಹೆಚ್ಚಿನ ಸ್ವಾರಸ್ಯವಿರುವುದು ಸ್ಪಷ್ಟ. ಅದೆಂದರೆ, ಕಾಡಿನಲ್ಲಿ ಪಾಂಡವರ ಜ್ಯಾಘೋಷದೊಡನೆ ಅವರನ್ನು ಹಿಂಬಾಲಿಸಿ ಬಂದ ವಿಪ್ರರ ವೇದಘೋಷವೂ ಸೇರಿದ ಕಾರಣ ಬ್ರಾಹ್ಮ-ಕ್ಷಾತ್ರಸಮಾಯೋಗವಾಯಿತು.
ಬ್ರಹ್ಮಘೋಷಃ (೩.೨೭.೪)
ನಮ್ಮಲ್ಲಿ “ಸೆರೆಗು ಮುಚ್ಚಿಕೊಂಡು ನಾಚಿದರು,” “ಉತ್ತರೀಯದಲ್ಲಿ ಮುಖ ಮರೆಸಿಕೊಂಡರು” ಎಂದೆಲ್ಲ ನಾಚಿಕೆಯನ್ನು ವರ್ಣಿಸುವುದುಂಟು. ಅದರ ನೇರ ಸಂವಾದವನ್ನಿಲ್ಲಿ ಕಾಣಬಹುದು:
ವಿಲಜ್ಜಮಾನಾ ವಸ್ತ್ರಾಂತೇ (೩.೫೪.೨೬)
ವನಪರ್ವದ ಶಿಬಿಯ ಉಪಾಖ್ಯಾನದಲ್ಲಿ ಹದ್ದಿನ ರೂಪದಲ್ಲಿ ಬಂದ ಇಂದ್ರನು ತನ್ನ ಆಹಾರವಾದ ಪಾರಿವಾಳವನ್ನು ಉಳಿಸಿಕೊಳ್ಳಲು ಶಿಬಿಗೆ ಸಾಧ್ಯವಿಲ್ಲವೆಂದು ಹೇಳುತ್ತಾನೆ. ಆಗ “ನೀನು ಪ್ರಕೃತಿನಿಯಮವನ್ನು ಮೀರಿ ಆಹಾರಪದ್ಧತ್ತಿಯನ್ನು ಮಾರ್ಪಡಿಸಲು ಸಾಧ್ಯವಿಲ್ಲ. ತಿಳಿದೂ ತಿಳಿದೂ ಬಾಳೆಯ ಗಿಡವನ್ನು ಹತ್ತುವುದುಂಟೇ?” ಎಂಬ ತಾತ್ಪರ್ಯದ ಮಾತನ್ನೂ ಆಡುತ್ತಾನೆ. ತುಂಬ ಮೃದುವೂ ಜಾರಿಕೆಯದೂ ಆದ ಬಾಳೆಯ ಗಿಡ ಮನುಷ್ಯರ ಭಾರವನ್ನೆಂದೂ ತಾಳಲಾರದು. ಹೀಗೆಯೇ ಪ್ರಕೃತಿವಿರುದ್ಧವಾದ ಸಂಸ್ಕೃತಿ ಉಳಿಯಲಾರದು. ನಮ್ಮ ಹಳ್ಳಿಗಳ ಕಡೆ “ನುಗ್ಗೆಮರ ಹತ್ತಬಾರದು” ಎಂದು ನುಡಿಗಟ್ಟಿನಂತೆ ಹೇಳುವುದುಂಟು. ಈ ಮರವೂ ಬೇಗ ಮುರಿಯುವಂಥದ್ದು. ಇಲ್ಲಿರುವ ಆಶಯವೂ ವ್ಯಾಸವಾಣಿಯದೇ.
ಮಾ ರಾಜನ್ ಮಾರ್ಗಮಾಜ್ಞಾಯ ಕದಲೀಸ್ಕಂಧಮಾರುಹ (೩.೧೩೧.೧೯)
“ಅಶ್ವಬಂಧ”ವೆಂಬುದಕ್ಕೆ “ಕುದುರೆಯನ್ನು ಕಟ್ಟುವುದು” ಎಂಬ ಅರ್ಥವಷ್ಟೇ ಇದ್ದರೂ ಇಲ್ಲಿ ಒಂದು ನುಡಿಗಟ್ಟಾಗಿ ಕುದುರೆಗಳನ್ನು ನೋಡಿಕೊಳ್ಳುವ ಕಾಸ್ತಾರನನ್ನು ನಿರ್ದೇಶಿಸುವ ಧ್ವನಿಯಿದೆ.
ಅಶ್ವಬಂಧಃ (೪.೩.೨)
ಈ ಪದವು “ಹಸುಗಳನ್ನು ಎಣಿಸುವವನು” ಎಂಬ ಅರ್ಥವನ್ನಷ್ಟೇ ಕೊಡುತ್ತಿದ್ದರೂ ಅವುಗಳ ಯೋಗಕ್ಷೇಮವನ್ನೆಲ್ಲ ನೋಡಿಕೊಳ್ಳುವ ಗೋಪಾಲಕನನ್ನು ಸೂಚಿಸುತ್ತಿದೆ.
ಗೋಸಂಖ್ಯಾತಾ (೪.೩.೬)
ನಮ್ಮಲ್ಲಿ “ಹಾಯಾಗಿ,” “ಚೆನ್ನಾಗಿ” ಎಂಬಿತ್ಯಾಗಿ ಪದಗಳನ್ನು ಯಾವುದೇ ಚಟುವತಿಕೆಯ ಜೊತೆಗೆ ಸೇರಿಸಿ ಬಳಸಿದರೆ, ಆ ಕೆಲಸ ಸೊಗಸಾಗಿ ಸಾಗಿತೆಂಬ ಅರ್ಥ ಬರುವುದಷ್ಟೆ. ಇದೇ ತೆರನಾದುದು “ಯಥೋಪಜೋಷಂ” ಎಂಬ ಪದಪುಂಜ. ವ್ಯಾಕರಣದೃಷ್ಟ್ಯಾ ಅವ್ಯಯೀಭಾವಸಮಾಸವಾದ ಕಾರಣ ಇಲ್ಲಿ ನುಡಿಗಟ್ಟಿನ ಚೆಲುವು ಮತ್ತೂ ಮೈಗೂಡಿದೆ.
ಯಥಾಜೋಷಮ್ (೪.೫.೧೪)
ದ್ರೌಪದಿಯು ಕೀಚಕನ ಬಾಧೆಯಿಂದ ನೊಂದು ಭೀಮನಲ್ಲಿ ತನ್ನ ದುಃಖ ಹೇಳಿಕೊಳ್ಳುವಾಗ, ವಿರಾಟನ ಪತ್ನಿ ಸುದೇಷ್ಣೆಯ ಪರಿಚಾರಿಕೆಯಲ್ಲಿರುವ ಕಷ್ಟವನ್ನೂ ತಿಳಿಸುತ್ತಾಳೆ. ರಾಣಿಯ ಶೌಚಕಾರ್ಯಕ್ಕೂ ಅವಳೀಗ ನೆರವಾಗಬೇಕಿದೆ! “ಶೌಚದಾ” ಎಂಬ ಪದಕ್ಕೆ ಇಷ್ಟೆಲ್ಲ ಅರ್ಥಗಳು ಅದೊಂದು ನುಡಿಗಟ್ಟಾದ ಕಾರಣ ಬಂದಿದೆ.
ಶೌಚದಾ (೪.೧೯.೧)
ಸಂಸ್ಕೃತದಲ್ಲಿ “ಧೂರ್ತ” ಎಂಬ ಶಬ್ದಕ್ಕೆ “ಜೂಜುಗಾರ”ನೆಂದೂ ಅರ್ಥವಿದೆ. ಆದರೆ ಜೂಜಿನ ಚಟವುಳ್ಳವನಾಗಿ ಅಲ್ಲಿಯೂ ವಂಚನೆ ಮಾಡುವವನನ್ನು “ಅಕ್ಷಧೂರ್ತ”ನೆಂದು ಹೆಸರಿಸಿರುವುದು ಸುಪ್ರಸಿದ್ಧ. ಪ್ರಸ್ತುತದಲ್ಲಿ ದ್ರೌಪದಿ ಧರ್ಮರಾಜನನ್ನು ಹೀಗೆ ನಿಂದಿಸುತ್ತಾಳೆ:
ಅಕ್ಷಧೂರ್ತಃ (೪.೧೯.೧)
ಯಾವುದೇ ಅನರ್ಥಕಾರಿಯಾದ ಕೆಲಸ ಮಾಡಿದರೆ ಅದರ ಪರಿಣಾಮವಾಗಿ “ನಾವು ಮಣ್ಣು ತಿನ್ನಬೇಕಾಗುತ್ತದೆ” ಎಂದು ಲೋಕರೂಢಿಯಲ್ಲಿ ಹೇಳುವುದುಂಟು. ಇದರ ಸಾಕ್ಷಾತ್ ಸಂವಾದಿಯಿಲ್ಲಿದೆ:
ಭಕ್ಷಯಿಷ್ಯಾಮ ಪಾಂಸುಕಾನ್ (೫.೨೧.೧೭)
ಪಾಂಡವ-ಕೌರವರು ಹೊಂದಿಕೊಂಡಿರಬೇಕೆಂಬುದನ್ನು ಒತ್ತಿಹೇಳುವಾಗ ಈ ಮಾತು ಬಳಕೆಯಾಗಿದೆ. ಇದೊಂದು ದೃಷ್ಟಾಂತಪ್ರಾಯವಾದ ನುಡಿಗಟ್ಟು. “ದಟ್ಟವಾದ ಕಾಡಿನಲ್ಲಿದ್ದರೆ ಹುಲಿಗೆ ರಕ್ಷಣೆ; ಹುಲಿಯಿರುವ ಕಾರಣ ಕಾಡಿಗೆ ರಕ್ಷಣೆ.” ಹೀಗೆ ಅನ್ಯೋನ್ಯರಕ್ಷಣೆ ಇಲ್ಲಿ ವಿವಕ್ಷಿತ.
ಮಾ ವನಂ ಛಿಂಧಿ ಸವ್ಯಾಘ್ರಂ ಮಾ ವ್ಯಾಘ್ರಾನ್ನೀನಶೋ ವನಾತ್ (೫.೨೯.೪೮)