ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ—ಅನುಮಾನ, ಸಾರ, ಉಲ್ಲೇಖ, ಉಪಮಾನೋಪಮೇಯ, ಅನನ್ವಯ, ಸ್ವಭಾವೋಕ್ತಿ
ಅನುಮಾನಾಲಂಕಾರವು “ಅನುಮಾನ”ವೆಂಬ ತಾರ್ಕಿಕಪ್ರಮಾಣವನ್ನೇ ಆಧರಿಸಿದೆ. ಇದನ್ನು ಕೆಲವರು ಅಲಂಕಾರವಾಗಿಯೇ ಅಂಗೀಕರಿಸರು. ಬಲುಮಟ್ಟಿಗೆ ಕಾವ್ಯಲಿಂಗದಲ್ಲಿಯೇ ಇದು ಅಡಕವಾದೀತು. ಆದರೆ ಇಂಥ ಅಲಂಕಾರದಲ್ಲಿಯೂ ಆದಿಕವಿಗಳ ಕೌಶಲ ಪ್ರಸ್ಫುಟ.
ಮಳೆಗಾಲದಲ್ಲಿ ಮೋಡ ಕವಿದು ಸೂರ್ಯನ ಸುಳಿವೇ ಇಲ್ಲದಿದ್ದಾಗ ಸಂಜೆಯಾಗುವುದನ್ನು ತಾವರೆಗಳ ಮುದುಡುವಿಕೆಯಿಂದ, ಹಕ್ಕಿಗಳ ಗೂಡುಸೇರುವಿಕೆಯಿಂದ, ಜಾಜಿಹೂಗಳ ಅರಳುಗಳಿಂದ ಅನುಮಾನಿಸಬೇಕಿದೆ:
ನಿಲೀಯಮಾನೈರ್ವಿಹಗೈರ್ನಿಮೀಲದ್ಭಿಶ್ಚ ಪಂಕಜೈಃ |
ವಿಕಸಂತ್ಯಾ ಚ ಮಾಲತ್ಯಾ ಗತೋऽಸ್ತಂ ಜ್ಞಾಯತೇ ರವಿಃ || (೪.೨೮.೫೨)