ಅಮರಪ್ರೇಮದ ಅಮರುಕಶತಕ--ರಸಚಿತ್ರಗಳು
ಇಲ್ಲೊಬನಿದ್ದಾನೆ ಪ್ರಣಯಮರ್ಮಜ್ಞನಾದ ಹದಿನಾರಾಣೆಯ ಅನುಭವರಸಿಕ. ಅವನಿಗೆ ಕೊಸರಿ ಕೊಸರಿ ಪಡೆದ ಪ್ರಣಯದ ಸವಿ ಎಷ್ಟೆಂದು ಗೊತ್ತು. ಪಾಪ, ಅವನ ಕಾದಲೆಗೀಗ ಮುನಿಸು. ಹೀಗಾಗಿ ನಿರೀಕ್ಷಿತನರ್ಮವು ಸಾಧ್ಯವಾಗುತ್ತಿಲ್ಲ. ಅವನ ತಕರಾರು ಕೇಳುವಂತಿದೆ. ಅಲ್ಲದೆ ಅದರಲ್ಲೊಂದು ಮೆಚ್ಚುಗೆಯ ಧ್ವನಿಯೂ ಉಂಟೆನ್ನಿ. ಹೀಗಲ್ಲವಾದರೆ ಹಲಬುವಿಕೆಯು ಅಪ್ಪಟ ಕವಿತೆಯಾಗುವುದು ಹೇಗೆ? ಅವನ ಪರಿಶೀಲನೆ ಹೀಗಿದೆ: “ಮೊದಲಿನಂತೆ ಅವಳೀಗ ಬಟ್ಟೆಯನ್ನು ಸಡಿಲಿಸಳು ಮುಜುಗರಗೊಳ್ಳುತ್ತಿಲ್ಲ; ಚೆಂದುಟಿಗಳನ್ನು ಚುಂಬಿಸಲೆಂದು ಮುಂಗುರಳನ್ನು ಸವರಿ ಹಿಂಗತ್ತನ್ನು ಬಾಗಿಸುವಾಗ ಹುಬ್ಬೇರಿಸಿ ಮೊಗ ತಿರುಗಿಸುತ್ತಿಲ್ಲ; ಬಿಗಿಯಪ್ಪುಗೆಯನ್ನು ತಾನಾಗಿ ಸ್ವೀಕರಿಸುವುಳಲ್ಲದೆ ಮೈಸೆಟೆದುಕೊಳ್ಳುತ್ತಿಲ್ಲ.
