ಅಮರಪ್ರೇಮದ ಅಮರುಕಶತಕ--ನಾಯಿಕೆಯರ ವರ್ಣನೆಗಳು
ಇಲ್ಲೊಬ್ಬಳು ಕಲಹಾಂತರಿತೆಯು ತನ್ನ ಮುನಿಸಿನ ಕೆಡುಕನ್ನು ತಾನೇ ವಿಮರ್ಶಿಸಿಕೊಳ್ಳುತ್ತಿದ್ದಾಳೆ. ಅದನ್ನು ಏಕಾಂತವಾಗಿ ಮಾಡದೆ ಎಲ್ಲ ಗೆಳತಿಯರ ನಡುವೆ ಲೋಕಾಂತದಲಿ ನಡಸಿದ್ದಾಳೆಂದರೆ ಆಕೆಯ ಪಶ್ಚಾತ್ತಾಪದ ತೀವ್ರತೆ ತಿಳಿಯದಿರದು. ಹಲುಬುವ ಆಕೆಯ ಮಾತುಗಳು ಕರುಳು ಕುಯ್ಯುವಂತಿವೆ: “ಅಯ್ಯೋ, ನಿಟ್ಟುಸಿರು ಈ ಮೊಗವನ್ನೇ ಬಾಡಿಸಿದೆ. ಹೃದಯವು ಧಮನಿಗಳ ಸಮೇತ ಕಿತ್ತುಬರುವಂತಿದೆ. ನಿದ್ರೆಯು ಅಪ್ಪಿತಪ್ಪಿ ಕೂಡ ಸುಳಿಯುತ್ತಿಲ್ಲ. ನಲ್ಲನ ಮೊಗ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹಗಲೂ ಇರುಳೂ ಅಳುವುದೊಂದೇ ಪಾಳಿಯಾಯಿತು. ಈ ಕಾಯವು ಕರಗುತ್ತಿದೆ. ಎಂಥ ಕೆಲಸ ಮಾಡಿದೆ, ಕಾಲಿಗೆ ಬಿದ್ದವನನ್ನು ದೂರ ದೂಡಿದೆನಲ್ಲ!