ಡಿ.ವಿ.ಜಿ. ಅವರ ಭಾಷಾಶಿಲ್ಪ—ಪದ್ಯಶೈಲಿಗೆ ಉದಾಹರಣೆಗಳು

This article is part 4 of 5 in the series DVG avara Bhasha-shilpa

ಪ್ರೀತಿ-ರಸಿಕತೆ-ಕಾವ್ಯ:

ಪ್ರಣಯವು ಪ್ರಾರಂಭದಲ್ಲಿ ದ್ವೈತ, ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ; ಪ್ರಣಯಶಿಖರದಲ್ಲಿ ದ್ವೈತತಾವಿಸ್ಮೃತಿ, ಅಭೇದವೃತ್ತಿ, ಅದ್ವೈತ.

(ಜೀವನಧರ್ಮಯೋಗ)

ಪ್ರೇಮ-ವಾತ್ಸಲ್ಯರಸಗಳು ಧರ್ಮಪ್ರಣಾಲಿಯಲ್ಲಿ ಹರಿದಾಗ ವ್ಯಾಮೋಹಪಂಕಗಳಾಗದೆ ಪಾವನತೀರ್ಥಗಳಾದಾವು.

(ಗೀತಶಾಕುಂತಲ)

ಶ್ರೀರಾಮನಿಗೆ ಶೃಂಗಾರಪರೀಕ್ಷೆಯು ವಿಯೋಗರೂಪದಲ್ಲಿ ಬಂದರೆ ಶ್ರೀಕೃಷ್ಣನಿಗದು ಅತಿಯೋಗರೂಪದಲ್ಲಿ ಬಂದಿತು.

(ಶ್ರೀಕೃಷ್ಣಪರೀಕ್ಷಣಂ)

ರಸಿಕತೆ ಎಂದರೆ ಜೀವನದ ಎಲ್ಲ ರಂಗಗಳಲ್ಲಿಯೂ ಸೊಗಸನ್ನು ಹುಡುಕುವ ಪ್ರವೃತ್ತಿ, ಮತ್ತು ಇರುವ ಸೊಗಸನ್ನು ಕಂಡು ಸವಿಯುವ ಶಕ್ತಿ.

(ಜ್ಞಾಪಕಚಿತ್ರಶಾಲೆ, ಸಾಹಿತಿ-ಸಜ್ಜನ-ಸಾರ್ವಜನಿಕರು)

ಕಾವ್ಯದ ನೀತಿಪ್ರಭಾವವು ಪ್ರತ್ಯಕ್ಷಬೋಧನೆಯಿಂದಲ್ಲ, ಅಪ್ರತ್ಯಕ್ಷಹೃದಯಪರಿವರ್ತನೆಯಿಂದ.

ಕಾವ್ಯಕ್ಕೆ ಬೇಕಾದದ್ದು ಬಹಿರಂಗಪ್ರಮಾಣವಲ್ಲ, ಅಂತರಂಗಪ್ರಮಾಣ.

ಅಂತಃಕರಣದ ಸ್ವತಃಪ್ರವರ್ತಿತಸದ್ಭಾವಪ್ರವಾಹವೇ ಮಹಾಕಾವ್ಯದ ಪರಮೋಪಕಾರ.

ಮಹಾಕಾವ್ಯದ ಬಳಿ ಹೋಗುವವರು ತಾಯ ಬಳಿ ಹೋಗುವ ಎಳೆಮಕ್ಕಳಂತೆ ಮನಸ್ಸು ಮಾಡಿಕೊಂಡು ಹೋಗಬೇಕು. ಅಂಥ ಅಕೃತ್ರಿಮ, ಅಂಥ ಸರಳತೆ, ಅಂಥ ಅವಿಶಂಕೆ, ಅಂಥ ಅವಿತರ್ಕ, ಅಂಥ ಸಿದ್ಧವಿಶ್ವಾಸ—ಇವು ಇಲ್ಲದವರಿಗೆ ಕಾವ್ಯಮಾತೆ ಒಲಿಯಳು.

ಕಾವ್ಯಲಕ್ಷಣಗಳು ವೇದದಲ್ಲಿ ಯಥೇಷ್ಟವಾಗಿವೆ ... ಆದರೂ ವೇದವು ಕಾವ್ಯವಾಗದು. ಏಕೆಂದರೆ ಕಾವ್ಯದಲ್ಲಿ ಕೇಂದ್ರಸ್ಥಾನ ಮನುಷ್ಯನದು, ವೇದದಲ್ಲಿ ಕೇಂದ್ರಸ್ಥಾನ ದೇವತೆಯದು.

(ಶ್ರೀಮದ್ವಾಲ್ಮೀಕಿರಾಮಾಯಣಂ, ಬಾಲಕಾಂಡ: ಮುನ್ನುಡಿ)

ಉತ್ತಮಕಾವ್ಯವು ಮೂರು ಬಗೆಯ ದ್ರವ್ಯಗಳ ಸಮ್ಮೇಳನ. ಒಂದು ಶ್ರವಣಮೋಹಕದ್ರವ್ಯ; ಇನ್ನೊಂದು ಮನೋವೇಧಕದ್ರವ್ಯ; ಮತ್ತೊಂದು ಬುದ್ಧಿಚೋದಕದ್ರವ್ಯ.

(ಸಾಹಿತ್ಯಶಕ್ತಿ)

ಬಹುತೆರದ ಸೌಂದರ್ಯಾನುಭವಗಳಲ್ಲಿ ಒಂದು ಬಗೆಯ ಸ್ಪರ್ಧೆ, ಅಥವಾ ಎರಡು ವಿಷಮಗುಣಗಳ ಸಂಘರ್ಷಣೆ ನಡೆಯುತ್ತಿರುತ್ತದೆ—ನಮಗೆ ಪರಿಚಿತವಾಗಿರುವುದಕ್ಕೂ ನವೀನವಾದುದಕ್ಕೂ ಸ್ಪರ್ಧೆ, ಸಾಮಾನ್ಯವಾದುದಕ್ಕೂ ಅಪರೂಪವಾದುದಕ್ಕೂ ಸ್ಪರ್ಧೆ. ಈ ಹೋರಾಟವಿರುವುದರಿಂದಲೇ ಅದನ್ನು ನೋಡುವುದರಲ್ಲಿ ನಮಗೆ ಕುತೂಹಲ.

(ಜೀವನಸೌಂದರ್ಯ ಮತ್ತು ಸಾಹಿತ್ಯ)

ಒಳ್ಳೆಯ ಕಾವ್ಯವು ಮತತತ್ತ್ವಗ್ರಂಥವಾಗಿರಬೇಕೆಂಬ ನಿಯಮ ಕಾವ್ಯಶಾಸ್ತ್ರದಲ್ಲಿಯೂ ಇಲ್ಲ, ಧರ್ಮಶಾಸ್ತ್ರದಲ್ಲಿಯೂ ಇಲ್ಲ.

(ಉಮರನ ಒಸಗೆ)

ರಾಜ್ಯಶಾಸ್ತ್ರ-ವೃತ್ತಪತ್ರಿಕೆ:

ನ್ಯಾಯವೆಂಬುದು ಅನೇಕಸ್ವಾರ್ಥಗಳ ಪರಸ್ಪರಸಮಾಧಾನ, ಪರಸ್ಪರಸಂಯೋಜನೆಗಳ ಮರ್ಯಾದೆ ... ಶಾಸನಸಮ್ಮತವಾದ ಸ್ವಾರ್ಥವೇ ನ್ಯಾಯ.

(ರಾಜ್ಯಶಾಸ್ತ್ರ)

ನಿರ್ಬಂಧದ ಒಳ್ಳೆಯತನದ ಅಭ್ಯಾಸ ನಮಗೆ ಹೆಚ್ಚಿದಷ್ಟೂ ನೈಜದ ಒಳ್ಳೆಯತನದ ಅಭ್ಯಾಸ ಮರೆತುಹೋಗುತ್ತದೆ.

(ರಾಜ್ಯಶಾಸ್ತ್ರ)

ಸಾಮಾನ್ಯಜನದ ನೆಮ್ಮದಿಗೆ ಬೇಕಾದದ್ದು ಸಾಮಾನ್ಯ ಆಡಳಿತದ ದಕ್ಷತೆ. ನೂತನಸಮಾರಂಭಗಳ ಆಡಂಬರದಲ್ಲಿ ಸಾಮಾನ್ಯ “ರೊಟೀನ್” ಭಾಗ ಅಲಕ್ಷ್ಯಕ್ಕೆ ಬೀಳಬಾರದು.

(ರಾಜ್ಯಶಾಸ್ತ್ರ)

ಪ್ರಜೆಯ ನೈಜಶಕ್ತಿಯ ಸ್ವಾಭಾವಿಕವಿಕಾಸಕ್ಕೆ ದೊರೆಯುವ ಅವಕಾಶವೇ ನಿಜವಾದ ಸ್ವಾತಂತ್ರ್ಯ. ಪ್ರಜಾಜನದ ನೈಜಶಕ್ತಿಗಳ ಸ್ವತೋವಿಕಾಸಕ್ಕೆ—ಅವರ ಅನಿರ್ಬಂಧದ ಸ್ವಪ್ರಯತ್ನಾಭಿವೃದ್ಧಿಗೆ—ಸರಕಾರವು ಬಿಟ್ಟುಕೊಡುವ ಅವಕಾಶಸೌಲಭ್ಯವೇ ನಿಜವಾದ ಪ್ರಜಾಸ್ವಾತಂತ್ರ್ಯ.

(ಜ್ಞಾಪಕಚಿತ್ರಶಾಲೆ, ಮೈಸೂರಿನ ದಿವಾನರುಗಳು)

ಪತ್ರಿಕಾಲೇಖಕರು ಮುಖ್ಯವಾಗಿ ಬೋಧಿಸಬೇಕಾದದ್ದು ಸಿದ್ಧಾಂತವನ್ನಲ್ಲ—ಸಿದ್ಧಾಂತ ಮಾಡುವ ಕ್ರಮವನ್ನ.

(ವೃತ್ತಪತ್ರಿಕೆ)

ಪದ್ಯಶೈಲಿಗೆ ಉದಾಹರಣೆಗಳು

ಈ ಲೇಖನದಲ್ಲಿ ಮೊದಲೇ ನಿವೇದಿಸಿದಂತೆ ಡಿ.ವಿ.ಜಿ.ಯವರು ಬಗೆಬಗೆಯ ಛಂದೋಬಂಧಗಳಲ್ಲಿ ಬರೆದಿದ್ದಾರೆ: ಅವುಗಳಲ್ಲಿ ಒಂದು ಸಾಲಿಗೆ ನಾಲ್ಕಕ್ಷರದ ಪ್ರಮಾಣವುಳ್ಳ “ದೇವರಮ್ಯ”ದಂಥ ಚಿಕ್ಕ ಛಂದಸ್ಸಿನಿಂದ ಮೊದಲ್ಗೊಂಡು ಇಪ್ಪತ್ತೆರಡು ಅಕ್ಷರಗಳಷ್ಟು ನಿಡಿದಾದ “ಮಹಾಸ್ರಗ್ಧರೆ”ಯವರೆಗೆ ಸಾಹಿತ್ಯದ ಸ್ವೈರವಿಹಾರವು ಸಾಗಿದೆ. ಅವುಗಳಲ್ಲೆಲ್ಲ ಎದ್ದುತೋರುವ ಗುಣ ಓಜಸ್ಸು; ಅದು ಶಬ್ದಗತವಾದದ್ದೂ ಹೌದು, ಅರ್ಥಗತವಾದದ್ದೂ ಹೌದು. ಪದ್ಯರಚನೆಯಲ್ಲಿ ಗುಂಡಪ್ಪನವರ ಗಮನವು ಪದಮೈತ್ರಿ, ಪ್ರಾಸಸುಭಗತೆ, ಬಂಧಗುಣ, ಭಣಿತಿವಕ್ರತೆ, ಛಂದೋಘೋಷ, ನಾದಮಾಧುರ್ಯ ಮುಂತಾದ ಸೂಕ್ಷ್ಮವಿಷಯಗಳನ್ನು ಕುರಿತಾಗಿ ಇದ್ದದ್ದು ನೂರಾರು ಉದಾಹರಣೆಗಳ ಮೂಲಕ ಸ್ಪಷ್ಟವಾಗುತ್ತದೆ. ನವೋದಯದ ಅಗ್ರಮಾನ್ಯಲೇಖಕರ ಪೈಕಿ ಇವರಷ್ಟು ಸಮೃದ್ಧಸಂಖ್ಯೆಯ ಕಂದವನ್ನಾಗಲಿ, ಚೌಪದಿಯನ್ನಾಗಲಿ ಬರೆದವರೇ ಇಲ್ಲವೆನ್ನಬಹುದು. ಅವರು ಚೌಪದಿಯ ಪದ್ಯಶಿಲ್ಪದಲ್ಲಿ ಅಸಂಖ್ಯವೈವಿಧ್ಯಗಳನ್ನು ತೋರಿದ್ದಾರೆ. ಈ ನಿಟ್ಟಿನಲ್ಲಿ ಮಂಕುತಿಮ್ಮನ ಕಗ್ಗದ ನಾಲ್ಕನೆಯ ಸಾಲುಗಳ ವೈಶಿಷ್ಟ್ಯ ಮನನೀಯ. ಎಷ್ಟೋ ಬಾರಿ ಅವು ಅರ್ಥಾಂತರನ್ಯಾಸದ ಸೊಗಸಿನಿಂದ ಕೂಡಿರುತ್ತವೆ; ಜೀವನಸಾಗರದ ಆಳದಲ್ಲಿರುವ ರತ್ನಗಳನ್ನು ನಮ್ಮ ಕೈಗಳಿಗೆ ಎಟುಕಿಸುತ್ತವೆ. ಅವುಗಳಲ್ಲಿ ಮತ್ತೊಂದು ಸ್ವಾರಸ್ಯವಿದೆ: ಮೊದಲ ಮೂರು ಸಾಲುಗಳು ಒಂದು ಬಗೆಯಲ್ಲಿ ಸಾಗುತ್ತಿದ್ದರೆ, ನಾಲ್ಕನೆಯದು ನೂತನ ತಿರುವೊಂದನ್ನು ಪಡೆದು ಆ ಮೂಲಕ ಇನ್ನಷ್ಟು ಆಕರ್ಷಕವಾಗುತ್ತದೆ. ಇದರಿಂದ ಪದ್ಯದ ಚೌಕಟ್ಟಿನಲ್ಲಿ ಪರಿಚಿತ ಮತ್ತು ಅಪರಿಚಿತ ಅಂಶಗಳ ಮಿಶ್ರಣ ಸಾಧಿತವಾಗಿ ವಾಚಕರಿಗೆ ಅನನ್ಯಾನುಭೂತಿ ದೊರೆಯುತ್ತದೆ.

ಮನಕೆ ತೋರ್ಪ ಸೊಬಗನೆಲ್ಲ

ತನಗೆ ತುಷ್ಟಿಯಪ್ಪ ತೆರದಿ

ಜನಕೆ ನುಡಿಯಲರಿತ ಸುಕವಿ

ತಿಲಕನಾತನು

ಅನುವಿನಿಂದ ಬರೆವ ಕಲೆಯ

ಕಲಿತನಾತನು ||

(ನಿವೇದನ)

ಜೀವಿಯಂ ಪ್ರಾಕ್ತನಾದ್ಯತನಕರಯುಗಲಸಂ-

ಪುಟದಿ ಸಿಲುಕಿಸಿ ಮೃದಿಸುತಿಹುದು ದೈವಂ |

ಪೂರ್ವಜನ್ಮದ ವಾಸನಾಭಿರುಚಿ-ಋಣಮತ್ತ,

ಸದ್ಯದ ನಿಸರ್ಗಸುಂದರಗಳಿತ್ತ ||

ಹಸಿವತ್ತಲುಣಿಸಿತ್ತಲೊಂದನೊಂದೆಳೆಯುತ್ತ

ಕೆಣಕಿಸುತ ಕೆರಳಿಸುತ ದಿಕ್ಕುಗೆಡಿಸಿ |

ಪರಿಶೋಧವಾಗಿಪುದು ಪರಿಪಾಕವಾಗಿಪುದು  

ಗುರುವದುವೆ ಬಿಡಿಸಲಿಕ್ಕಟ್ಟಿನಿಂದೆ ||

ಸೌಂದರ್ಯದನುಭೂತಿ ಜೀವಿಗೊಂದುಚಿತಶಿಕ್ಷೆ

ಗೃಹ್ಯತಾಪತಿತಿಕ್ಷೆ, ಆತ್ಮಸಂಯಮಪರೀಕ್ಷೆ |

ಪ್ರಣಯರಾಗೋದ್ವೀಕ್ಷೆ, ವಿಶ್ವಸಾಂತತ್ಯರಕ್ಷೆ

ವಿಧಿದತ್ತಮಧುಭಿಕ್ಷೆ, ವಿಶ್ವಪತಿಹಸಿತವೀಕ್ಷೆ ||

(ಶೃಂಗಾರಮಂಗಳಂ)

ಧೂರ್ಜಟಿಕಿರೀಟದಿಂದಾ

ಸ್ಫೂರ್ಜದ್ಗಂಗಾವರೋಹಮಾದ ಕ್ರಮಮಂ|

ಗರ್ಜಿತದಿಂ ಗಹನತೆಯಿಂ-

ದೂರ್ಜಸ್ವತಿ ತೋರುತೀ ಶರಾವತಿಯಿಳಿವಳ್ ||

(ನಿವೇದನ, ಜೋಗದ ಜಲಪಾತ)

ನೂತ್ನತೆಯ ಪೂರ್ಣತೆಯನನ್ಯೂನತೆಯ ಗಳಿಪ

ಯತ್ನಮೇ ಪೌರುಷಪ್ರಗತಿ; ಅದೆ ಪ್ರಕೃತಿ|

ವಿಜ್ಞಾನ-ಶಾಸ್ತ್ರ-ಕಲೆ-ಕಾವ್ಯ-ವಿದ್ಯೆಗಳೆಲ್ಲ

ಧನ್ಯತೆಯ ಬೆದಕಾಟ—ಮಂಕುತಿಮ್ಮ ||

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು

ಅಸಮಂಜಸದಿ ಸಮನ್ವಯಸೂತ್ರನಯವ |

ವ್ಯಸನಮಯಸಂಸಾರದಲಿ ವಿನೋದವ ಕಾಣ್ಬ

ರಸಿಕತೆಯೆ ಯೋಗವೆಲೊ—ಮಂಕುತಿಮ್ಮ ||

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ

ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ |

ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ

ಬಿಡಿಗಾಸು ಹೂವಳಗೆ—ಮಂಕುತಿಮ್ಮ ||

ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು

ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ |

ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ

ನಶ್ಯದಿಂದವಿನಶ್ಯ—ಮಂಕುತಿಮ್ಮ ||

(ಮಂಕುತಿಮ್ಮನ ಕಗ್ಗ)

ವೇಣುಸ್ವಾನಮೊ ಪಾಂಚಜನ್ಯರವಮೋ ಗೀತೋಕ್ತಗಾಂಭೀರ್ಯಮೋ

ಮೌನಿಸ್ನೇಹಮೊ ಗೋಪಿಕಾ ಪ್ರಣಯಮೋ ಕೌಂತೇಯವಾತ್ಸಲ್ಯಮೋ |

ಸೇನಾನಿತ್ವಮೊ ರಾಜ್ಯತಂತ್ರನಯಮೋ ಚಕ್ರಾಸ್ತ್ರಸಂಧಾನಮೋ

ನಾನಾಜೀವನ ಧರ್ಮರಂಗಗಳೊಳಾದರ್ಶಂ ಯಶೋದಾಸುತಂ ||

(ಶ್ರೀಕೃಷ್ಣಪರೀಕ್ಷಣಂ)

ಸೌಂದರ್ಯಂ ಪರವಸ್ತುಸಾಗರಚಿದಾನಂದೋಮರ್ಮಿಮಾಲಾಪೃಷ-

ದ್ಬಿಂದೂತ್ಸೇಕಮಕಾಂಡಪುಣ್ಯಪವನಾವಾತಂ ನರಂಗುರ್ವಿಯೊಳ್ |

ಅಂಧೀಕಾರಕಮಾ ಪೃಷನ್ಮಯಪಟಂ ಭೋಗಾಶಯಂಗಾದೊಡಂ

ಸಂಧ್ಯಾತಾತ್ಮವಿಚಾರಿಗಾ ರಸಭರಂ ತಾಂ ಬ್ರಹ್ಮಸಂಜ್ಞಾಪಕಂ ||

(ಶ್ರೀಚೆನ್ನಕೇಶವ ಅಂತಃಪುರಗೀತ)

ಭುವನಕುಲಾಲನೀ ಗಿರಿಯ ನಾಭಿಯನಾಗಿಸಿ ತನ್ನ ಚಕ್ರಮಂ

ಜವದಿ ಪರಿಭ್ರಮಂಗೊಳಿಸೆ ಪುಟ್ಟಿದ ವರ್ತುಲಜಾಲಮೇನೆನಿ-

ಪ್ಪವೊಲೆಸೆಯಿತ್ತುಮಿರ್ಪುದಿದರೆಣ್ದೆಸೆಯೊಳ್ ವನಶೋಭಿಪರ್ವತ-

ಪ್ರವಲಯಪಂಕ್ತಿಯಚ್ಚರಿಯ ಬೀರುತೆ ಲೋಚನಮೋಡುವನ್ನೆಗಂ ||

(ನಿವೇದನ, ಕೊಡಗಿನ ಬೆಡಗು)

ಭಾರತಮೆಂಬುದೇಂ ಬರಿಯ ಮೃತ್ಸ್ನೆಯೆ? ಭೌತಮೆ? ಭಾವಸೃಷ್ಟಿಯೇನ್?

ಆರಯಲೊಂದು ತೇಜಮದು; ಪೂಜ್ಯಹಿಮಾಚಲರಾಮಸೇತುವಿ-

ಸ್ತಾರನಿಕೇತವಾಸಿ ಜನತಾವಯವೋಲ್ಲಸದಾತ್ಮತತ್ತ್ವಮಾ

ಕಾರಣದಿಂದಲೀ ನೆಲದ ಧೂಳಿಯುಮೆಮ್ಮ ಶಿರಕ್ಕೆ ಸೇಸೆಯಯ್ ||

(ಸ್ವತಂತ್ರಭಾರತಾಭಿನಂದನಸ್ತವ)

ಸಾಂದ್ರಾಮೋದಪ್ರಭಾಕರ್ಷಣಗಳಿನೆಳೆದಿಟ್ಟಿಂದ್ರಿಯಗ್ರಾಮಮಂ ತ-

ತ್ಕೇಂದ್ರಾಧಿಷ್ಠಾನದೊಳ್ ಜೀವವ ಸುಖರಸತಲ್ಲೀನಮಂ ಗೆಯ್ದು ವಾಂಛಾ-

ಬಂಧಂ ವಾಂಛಾಕರಂ ವಾಂಛಕನಿವು ಕರಗಲ್ ಮೂರನೈಕ್ಯಂಗೊಳಿಪ್ಪಾ

ಸೌಂದರ್ಯಾದ್ವೈತಯೋಗಂ ಜಯಿಸುಗೆ ಜಗದೊಳ್ ಕೇಶವಾಮ್ನಾಯರಾಗಂ ||

(ಶ್ರೀಚೆನ್ನಕೇಶವ ಅಂತಃಪುರಗೀತ)

 

Author(s)

About:

Shashi Kiran B N holds a bachelor’s degree in Mechanical Engineering and a master's degree in Sanskrit. His interests include Indian aesthetics, Hindu scriptures, Sanskrit and Kannada literature, and philosophy. A literary aficionado, Shashi enjoys composing poetry set to classical meters in Sanskrit. He co-wrote a translation of Śatāvadhāni Dr. R Ganesh’s Kannada work Kavitegondu Kathe.