ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ

ವಿವಿಧಘನಾಲಂಕಾರಂ ವಿಚಿತ್ರವರ್ಣಾವಲೀಮಯಸ್ಫುರಣಮ್ |

ಶಕ್ರಾಯುಧಮಿವ ವಕ್ರಂ ವಲ್ಮೀಕಭುವಂ ಕವಿಂ ನೌಮಿ ||

(ಆರ್ಯಾಸಪ್ತಶತೀ, ೧.೩೦)

ಭಗವಾನ್ ವಾಲ್ಮೀಕಿಮಹರ್ಷಿಗಳ ಆದಿಕಾವ್ಯ ರಾಮಾಯಣವು ಕಾಳಿದಾಸನ ಮಾತಿನಲ್ಲಿ “ಕವಿಪ್ರಥಮಪದ್ಧತಿ” – ಕವಿಗಳ ಪಾಲಿಗೆ ಮೊದಲ ಹೆದ್ದಾರಿ. ಇದು ಬಹ್ವರ್ಥಗ್ರಾಸಿಯಾದ ಯಥಾರ್ಥವರ್ಣನೆ. ರಾಮಾಯಣವು ರಸಿಕರಂಜನೆಯಾಗಿ ಮಾತ್ರವಲ್ಲದೆ ಕವಿ-ಕಲಾವಿದರ ಪಾಲಿಗೂ ನಿರಂಜನಪ್ರೇರಕಸಾಮಗ್ರಿಯಾಗಿ ರಾಜಿಸಿದೆ. ಹೀಗೆ ಭಾವಯಿತ್ರೀ ಮತ್ತು ಕಾರಯಿತ್ರೀ ಪ್ರತಿಭೆಗಳೆರಡಕ್ಕೂ ವಾಲ್ಮೀಕಿಮುನಿಗಳ ಒತ್ತಾಸೆ ಮಿಗಿಲಾಗಿದೆ. ಪ್ರಸ್ತುತಲೇಖನವು ಕವಿಗಳ ಪಾಲಿಗೆ ನೆರವಾಗಬಲ್ಲ ರಾಮಾಯಣದ ಒಂದು ಮಹತ್ತ್ವದ ಮುಖವನ್ನು ವಿವೇಚಿಸಲಿರುವುದು ಶೀರ್ಷಿಕೆಯಿಂದಲೇ ಸುವೇದ್ಯ.

ಕವಿಲೋಕವು ಸರ್ವಕಾಲದಲ್ಲಿಯೂ ಉಕ್ತಿವೈಚಿತ್ರ್ಯಕ್ಕಾಗಿ ಹೆಣಗುತ್ತಿರುತ್ತದೆ. ಕಾವ್ಯಶಿಲ್ಪದ ಇಡಿ ಮತ್ತು ಬಿಡಿಗಳನ್ನು ರಸ ಮತ್ತು ವಕ್ರೋಕ್ತಿಗಳು ಕ್ರಮವಾಗಿ ಪ್ರತಿನಿಧಿಸುತ್ತವೆಂಬುದು ಪ್ರಾಯಿಕವಾಗಿ ಎಲ್ಲ ಕಾವ್ಯಮೀಮಾಂಸಕರ ನಿಗಮನ. ಇವೆರಡರಲ್ಲಿ ರಸವು ಕವಿ-ಸಹೃದಯರಿಬ್ಬರಿಗೂ ಸಲ್ಲುವ ಸತ್ತ್ವ. ಆದರೆ ವಕ್ರೋಕ್ತಿಯು ಮಿಗಿಲಾಗಿ ಕವಿಯಲ್ಲಿಯೇ ಸಾಕ್ಷಾತ್ಕರಿಸಬೇಕು. ಅಲ್ಲದೆ ಅವನ ಪಾಲಿಗೆ ಉಳಿಯುವ ಮೂರ್ತವಾದ ಸಾಧನವೆಂದರೆ ಇದೊಂದೇ. ಈ ದೃಷ್ಟಿಯಿಂದಲೇ ವಕ್ರತೆಯನ್ನು ಕವಿದೃಷ್ಟಿಯಿಂದ ಪ್ರಧಾನವೆಂದೂ ರಸಧ್ವನಿಯನ್ನು ಸಹೃದಯದೃಷ್ಟಿಯಿಂದ ಪ್ರಮುಖವೆಂದೂ ಬಗೆಯಲಾಗುತ್ತದೆ. ಕಾವ್ಯನಿರ್ಮಾಣದ ಸ್ವಾರಸ್ಯವನ್ನು ಮುಷ್ಟಿಮೇಯವಾಗಿ ತಿಳಿಸುವಲ್ಲಿ ವಕ್ರತಾವ್ಯಾಪಾರದ ಒಂದು ಮುಖ್ಯಾಂಗವೆನಿಸಿದ ಅಲಂಕಾರವು ಪ್ರಧಾನಪಾತ್ರವನ್ನು ವಹಿಸುತ್ತದೆ. ಇದನ್ನೇ “ವಾಕ್ಯವಕ್ರತೆ”ಯೆಂದು ಕುಂತಕನು ಗುರುತಿಸುತ್ತಾನೆ. ಅವನೇ ವಿಭಾಗೀಕರಿಸುವ ವಿವಿಧಸ್ತರದ ವಕ್ರತೆಗಳ ಪೈಕಿ ವಾಕ್ಯವಕ್ರತೆಯು ಮಧ್ಯಮಣಿ. ಏಕೆಂದರೆ ಪದಪೂರ್ವಾರ್ಧವಕ್ರತೆ ಮತ್ತು ಪ್ರತ್ಯಯವಕ್ರತೆಗಳು ವಾಕ್ಯವೊಂದರ ಘಟಕವಾದ ಪದದಲ್ಲಿಯೇ ಅಡಗುವ ಕಾರಣ ಇವೆರಡೂ ಒಂದು ಮಗ್ಗುಲಿಗೆ ಬಂದರೆ, ಪ್ರಕರಣವಕ್ರತೆ ಮತ್ತು ಪ್ರಬಂಧವಕ್ರತೆಗಳು ಅನೇಕವಾಕ್ಯಗಳ ಸಮುಚ್ಚಯವಾದ ಸಂದರ್ಭಗಳಲ್ಲಿ ಸೇರುವ ಕಾರಣ ಮತ್ತೊಂದು ಮಗ್ಗುಲಿಗೆ ಬರುತ್ತವೆ. ಹೀಗೆ ವಾಕ್ಯವಕ್ರತೆಯ ಸ್ಥಾನ ಕೀಲಕಪ್ರಾಯವಾದುದು. ಅಷ್ಟೇ ಅಲ್ಲ, ಪ್ರಾಯೋಗಿಕವಿಮರ್ಶೆಯಲ್ಲಿಯೂ ಚೆನ್ನಾಗಿ ಒದಗಿಬರುವಂಥದ್ದು. ಏಕೆಂದರೆ ಬಿಡಿಯಾದ ಉದಾಹರಣೆಗಳ ಮೂಲಕ ಕಾವ್ಯಸೌಂದರ್ಯವನ್ನು ವಿವೇಚಿಸಲು ಪದ ಮತ್ತು ಪದಾಂಶಗಳು ತುಂಬ ಚಿಕ್ಕವು; ಪ್ರಕರಣ ಮತ್ತು ಪ್ರಬಂಧಗಳು ತುಂಬ ದೊಡ್ಡವು. ಹೀಗಾಗಿ ಇವುಗಳನ್ನು ಯಥಾವತ್ತಾಗಿ ಉದ್ಧರಿಸಿಕೊಂಡು ವಿವೇಚಿಸುವಲ್ಲಿ ಸ್ವಲ್ಪ ತೊಡಕಾದೀತು. ಅಲ್ಲದೆ ಮುಕ್ತಕಕಾವ್ಯದಂಥ—ಅಥವಾ ಭಾವಗೀತದಂಥ—ಏಕಘನರಚನೆಗಳಲ್ಲಿಯೂ ವಾಕ್ಯವಕ್ರತೆಯ ವಲಯಕ್ಕೆ ಬರುವ ಅಲಂಕಾರಗಳ ಯೋಗದಾನ ಅಪಾರ. ಈ ಕಾರಣದಿಂದಲೇ ನಮ್ಮ ಹೆಚ್ಚಿನ ಕಾವ್ಯಮೀಮಾಂಸಕರು ತಮ್ಮ ಗ್ರಂಥಗಳಲ್ಲಿ ಅಲಂಕಾರಗಳ ವಿವೇಚನೆಗೇ ಬಹಳಷ್ಟು ಭಾಗವನ್ನು ಮೀಸಲಿರಿಸಿದ್ದಾರೆ. ಇದನ್ನರಿಯದೆ ಅವರನ್ನೆಲ್ಲ ಧ್ವನಿವಿರೋಧಿಗಳೆಂದೋ ಸಮಗ್ರತೆಯ ಕಲ್ಪನೆಯೇ ಇಲ್ಲದವರೆಂದೋ ಹಣೆಪಟ್ಟಿ ಹಚ್ಚಿ ಸಾರಾಸಗಟಾಗಿ ತಿರಸ್ಕರಿಸುವುದು ಅಯುಕ್ತ.

ಸಾಮಾನ್ಯವಾಗಿ ಅಲಂಕಾರಗಳ ಹೆಸರನ್ನೆತ್ತಿದೊಡನೆಯೇ ಆಧುನಿಕವಿಮರ್ಶಕರು ಹುಬ್ಬೇರಿಸುವುದುಂಟು. ಅವರ ಪ್ರಕಾರ ಇವು ಯಾತಯಾಮ, ಗತರಸ; ಅಲ್ಲದೆ ಇವು ಕ್ಲಿಷ್ಟ ಮತ್ತು ಕೃತಕ. ಆದರೆ ಅಲಂಕಾರಗಳ ಸ್ವರೂಪವನ್ನು ಬಲ್ಲವರಿಗೆ ಯಾವುದೇ ದೇಶ-ಕಾಲವಲಯದಲ್ಲಿಯೂ ಉಕ್ತಿಯೊಂದರ ಚೆಲುವು ಅಲಂಕಾರವನ್ನು ಮಿಗಿಲಾಗಿ ಆಶ್ರಯಿಸಿರುತ್ತದೆಂಬುದು ಸ್ಪಷ್ಟವಾಗಿ ತಿಳಿದಿರುತ್ತದೆ. ಕೇವಲ ನಮ್ಮ ಪ್ರಾಚೀನಾಲಂಕಾರಿಕರ ಪರಿಭಾಷೆಯಲ್ಲಿ ಅವುಗಳ ಹೆಸರುಗಳನ್ನು ಗಮನಿಸಿಕೊಳ್ಳುವುದೊಂದೇ ಅಪರಿಚಿತವೂ ಕಷ್ಟಕರವೂ ಆದ ಸಂಗತಿಯಾಗಿ ತೋರಬಹುದು. ಇದಾದರೂ ಬಲುಮಟ್ಟಿಗೆ ಅಪ್ರಸಿದ್ಧವೂ ದುರೂಹ್ಯವೂ ಆದ ಅಲಂಕಾರಗಳ ಬಗೆಗೆ ಸಲ್ಲುವ ಮಾತು. ಆದರೆ ಸಹಜವೂ ಚಿರಂತನವೂ ಆದ ಸುಪ್ರಸಿದ್ಧ-ಸ್ಫುಟಾಲಂಕಾರಗಳಿಗೆ ಇಂಥ ಆಕ್ಷೇಪ ಸಲ್ಲದು. ಸಂಜ್ಞೆ-ಪರಿಭಾಷೆಗಳು, ಲಕ್ಷ್ಯ-ಲಕ್ಷಣಸಮನ್ವಯಗಳು ಯಾವುದೇ ಶಾಸ್ತ್ರದ ಅನಿವಾರ್ಯಧರ್ಮ; ಇದು ಎಲ್ಲ ಜಿಜ್ಞಾಸುಗಳು ಪ್ರಾಮಾಣಿಕವಾಗಿ ಅರಿತು ಅನುಸಂಧಾನಿಸಬೇಕಾದ ಸಾತ್ತ್ವಿಕಕರ್ಮ.

ಈ ತಿಳಿಬೆಳಕಿನಲ್ಲಿ ಆದಿಕವಿಗಳ ಅನ್ಯಾದೃಶವಾಗ್ವಿಲಾಸವನ್ನು ಪರಿಕಿಸೋಣ. ಅವರು ಇತಿವೃತ್ತ-ಪಾತ್ರನಿರ್ಮಾಣಗಳಲ್ಲಿ ಹೇಗೆ ದಕ್ಷರೋ ಹಾಗೆಯೇ ಅಲಂಕಾರವಿನ್ಯಾಸ-ವಾಚೋಯುಕ್ತಿವಿಲಾಸಗಳಲ್ಲಿಯೂ ಅಸಮಾನರು. ಹೆಚ್ಚಿನ ಜನತೆಗೆ ಆದಿಕವಿಗಳ ಕಥನತಂತ್ರ ಮತ್ತು ರಸಸೃಷ್ಟಿಗಳ ಬಗೆಗೆ ಸ್ಥೂಲವಾದರೂ ಸ್ಪಷ್ಟವಾದ ಅರಿವಿರುವಂತೆ ವಾಕ್ಯವಕ್ರತೆಯ ಸೊಗಸನ್ನು ಕುರಿತು ತಿಳಿವಿಲ್ಲ. ಈ ಕಾರಣದಿಂದಲೂ ಸದ್ಯದ ಪ್ರಯತ್ನ ಉಪಾದೇಯವಾಗಬಹುದು. ಅಲ್ಲದೆ ಸುಸಂಸ್ಕೃತಜಗತ್ತಿನ ಮೊತ್ತಮೊದಲ ಸುಂದರಕಾವ್ಯವೆನಿಸಿದ ರಾಮಾಯಣದಲ್ಲಿ ಅದರ ಅಂದ-ಚಂದಗಳಿಗೆ ಅಲಂಕಾರಗಳ ಯೋಗದಾನ ಅದೆಷ್ಟು ಮುಖ್ಯ ಮತ್ತು ಅನಿವಾರ್ಯವೆಂಬುದೂ ಈ ಮೂಲಕ ತಿಳಿಯದಿರದು.

ಸಾಮಾನ್ಯವಾಗಿ ಲಕ್ಷಣೈಕವೇತ್ತರು ಅಲಂಕಾರಗಳೂ ಸೇರಿದಂತೆ ಅನೇಕಕಾವ್ಯತತ್ತ್ವಗಳ ವಿಕಾಸದಲ್ಲಿ ಅದೊಂದು ಬಗೆಯ ರೇಖಾತ್ಮಕಪ್ರಗತಿಯನ್ನು ಕಾಣಿಸುವುದುಂಟು. ಅವರ ಪ್ರಕಾರ ಭರತಮುನಿಯಲ್ಲಿದ್ದ ನಾಲ್ಕು ಅಲಂಕಾರಗಳು ದಂಡಿ-ಭಾಮಹ-ವಾಮನ-ರುದ್ರಟ-ಮಮ್ಮಟ-ಭೋಜ-ರುಯ್ಯಕ-ಜಯದೇವ-ಅಪ್ಪಯ್ಯದೀಕ್ಷಿತಾದಿಗಳ ಮೂಲಕ ಹಲವು ಹತ್ತಾಗಿ ನೂರ ಇಪ್ಪತ್ತನಾಲ್ಕರ ಗಡಿಯನ್ನು ಮುಟ್ಟಿತೆಂದು ತಿಳಿಯುತ್ತದೆ. ಆದರೆ ಇದು ಆಂಶಿಕಸತ್ಯ. ಏಕೆಂದರೆ ನ್ಯೂಟನ್ನನಿಗಿಂತ ಮುನ್ನವೇ ಗುರುತ್ವಾಕರ್ಷಣವಿದ್ದ ಹಾಗೆ ಆಲಂಕಾರಿಕರ ಅಸ್ತಿತ್ವಕ್ಕೂ ಮುನ್ನ ಅಲಂಕಾರಗಳಿದ್ದವು. ಕೇವಲ ಅವುಗಳ ಪ್ರತ್ಯಭಿಜ್ಞಾನ ಮತ್ತು ಲಕ್ಷಣೀಕರಣ ಮಾತ್ರ ಉತ್ತರೋತ್ತರ ಬೆಳೆದುಬಂದುವು. ಈ ಕಾರಣದಿಂದಲೇ ಆದಿಕವಿಗಳಲ್ಲಿ ಹತ್ತಾರು ಸ್ಮರಣೀಯಸುಂದರವಾದ ಸಹಜಾಲಂಕಾರಗಳ ಸಮೃದ್ಧಿಯುಂಟು. ಅನಂತರದ ವಿದ್ವತ್ಕವಿಗಳ ರಚನೆಗಳಲ್ಲಿ ಪ್ರಯತ್ನಸಿದ್ಧವೆಂಬಂತೆ ಕಾಣುವ ಉಕ್ತಿವೈಚಿತ್ರ್ಯಗಳು ವಾಲ್ಮೀಕಿಮುನಿಗಳಲ್ಲಿ ನಿಸರ್ಗರಮಣೀಯತೆಯಿಂದ, ಅಯತ್ನಸೌಂದರ್ಯದಿಂದ, ಸಂದರ್ಭಶುದ್ಧಿಯಿಂದ, ರಸಪೋಷಕತೆಯಿಂದ ಸೊಗಯಿಸುತ್ತವೆ. ಮಾತ್ರವಲ್ಲ, ನೂರಾರು ಅಲಂಕಾರಗಳ ಪೈಕಿ ಯಾವ ಕೆಲವು ಕವಿಲೋಕಕ್ಕೆಲ್ಲ ಎಟುಕಬಲ್ಲ ಸ್ಫುಟ-ಸಹಜ-ಸರಳ-ಸುಂದರವಾದ ವಾಕ್ಯವಿಲಾಸಗಳೆಂದೂ ಮನವರಿಕೆಯಾಗುತ್ತದೆ. ಇದು ನಿಜಕ್ಕೂ ಬೆಲೆಬಾಳುವ ಸಾಕ್ಷಾತ್ಕಾರ. ಹೀಗೆ ಕವಿಶಿಕ್ಷಾಗ್ರಂಥವಾಗಿಯೂ ವಾಲ್ಮೀಕಿವೇದವು ಧ್ವನಿಸುವ ಪರಿ ಮನನೀಯ.

ಅಲ್ಲದೆ ಅನಂತರದ ಆಸ್ಥಾನಕವಿಗಳ ವಿದ್ವತ್ತೆಯೆಲ್ಲ ಸುಂದರಿಯ ಮೊಗವೋ ಕಣ್ಣೋ ತಾವರೆಯಂತೆಯೋ ನೈದಿಲೆಯಂತೆಯೋ ತೋರುತ್ತದೆಂಬ ಸರಳವಾದ ಸಾದೃಶ್ಯವನ್ನು ಸಂಕೀರ್ಣವಾಗಿ ಹೇಳುವ ದುಷ್ಕರಾಲಂಕಾರಗಳ ಆವಿಷ್ಕಾರದಲ್ಲಿಯೋ ಅನುಸಂಧಾನದಲ್ಲಿಯೋ ಕಳೆದುಹೋದರೆ, ಆದಿಕವಿಗಳ ಅಲಂಕಾರವಿಲಾಸವು ವ್ಯಾಪಕವಾದ ಲೋಕಾನುಭವದಲ್ಲಿಯೂ ಆಳವಾದ ಜೀವನದರ್ಶನದಲ್ಲಿಯೂ ಮುಳುಗಿ ಹಚ್ಚಹೊಸತಾದ ವಾಕ್ಯವಕ್ರತೆಯ ಮುತ್ತಗಳನ್ನು ಮತ್ತೆ ಮತ್ತೆ ಮೇಲೆತ್ತಿ ತರುತ್ತದೆ. ಶಾಸ್ತ್ರೀಯವಾಗಿ ಹೇಳುವುದಾದರೆ, ಅವರ ಅಲಂಕಾರಪ್ರಜ್ಞೆಯು ಕೆಲವೇ ಉಪಮಾನಗಳ ಸುತ್ತ ಗಿರಕಿಹೊಡೆಯದೆ ವ್ಯಾಪಕವಾದ ಉಪಮಾನಸಾಮಗ್ರಿಯನ್ನು ಸೂರೆಗೊಳ್ಳುತ್ತದೆ. ಈ ಮೂಲಕ ವಸ್ತುವೈವಿಧ್ಯಕ್ಕೆ ಬಲುಮಟ್ಟಿಗೆ ಕುರುಡಾಗಿ, ಹೇಳುವ ರೀತಿಯೊಂದೇ ಅಲಂಕಾರದ ಜೀವಾಳವೆಂಬ ಏಕದೇಶೀಯವಾದ ವಾಕ್ಯವಕ್ರತಾತತ್ತ್ವಾಭಾಸಕ್ಕೆ ಸಮರ್ಥವಾದ ಪರಿಷ್ಕಾರವನ್ನೂ ಪರಿಪೂರ್ಣತೆಯನ್ನೂ ತಂದುಕೊಡುತ್ತದೆ. ಇದು ಪ್ರಾಯಿಕವಾಗಿ ಸಾದೃಶ್ಯಮೂಲಾಲಂಕಾರಗಳನ್ನು ಕುರಿತ ಅಭಿಪ್ರಾಯವಾದರೂ ಎಲ್ಲ ಬಗೆಯ ಅಲಂಕಾರಗಳಿಗೂ ಅನ್ವಯಿಸಬಲ್ಲ ತತ್ತ್ವ. ಅಲ್ಲದೆ ಮಹರ್ಷಿಗಳ ಮಾತು ಪ್ರವಾಹಧೋರಣೆಯದು. ಅವರು ಲೆಕ್ಕಾಚಾರದ ಮಾತುಗಳನ್ನಾಡುವ ಶಬ್ದಲೋಭಿಗಳಲ್ಲ. ಇದು ಅವರ ಅಲಂಕಾರವಿನ್ಯಾಸಕ್ಕೂ ಅನ್ವಯಿಸುವ ಸಂಗತಿ. ಆದುದರಿಂದ ಅದೆಷ್ಟೋ ಕಡೆ ಹಿತ-ಮಿತವಾದಿಗಳ ಪಾಲಿಗೆ ಹೆಚ್ಚೆನಿಸುವಂಥ ವಾಕ್ಯವಕ್ರತಾಪೂರವು ತೋರುವುದುಂಟು. ಆದರೆ ಇದೆಂದೂ ಕಥಾನಕತೀರವನ್ನಾಗಲಿ, ಪಾತ್ರಸಮೂಹದ್ವೀಪಗಳನ್ನಾಗಲಿ ಕೊಚ್ಚಿಹಾಕುವುದಿಲ್ಲ; ಬದಲಾಗಿ ಅವುಗಳ ಪರಿವೇಷವನ್ನು ಮತ್ತಷ್ಟು ಚೆಲುವುಗೊಳಿಸುತ್ತದೆ.

ಅಲಂಕಾರಗಳೇನೋ ಅಸಂಖ್ಯ. ಅವುಗಳ ಚೆಲುವೂ ಅಪಾರ. ಆದರೆ ಅವುಗಳ ನಿರ್ದಿಷ್ಟ-ನಿರ್ದುಷ್ಟಲಕ್ಷಣೀಕರಣವು ಬಲುಮಟ್ಟಿಗೆ ಅಸಾಧ್ಯ ಅಥವಾ ಕಷ್ಟಸಾಧ್ಯ. ಇದು ಲಕ್ಷಣನಿರ್ಮಾಣದಲ್ಲಿಯೇ ಇರುವ ಸಮಸ್ಯೆಯಾದರೆ, ಇನ್ನು ಲಕ್ಷ್ಯವೆನಿಸಿದ ಮಹಾಕವಿಗಳ ಪ್ರತಿಭಾಪ್ರಸೂನಗಳನ್ನು ಮುಂದಿರಿಸಿಕೊಂಡು ಅವು ಯಾವ ಅಲಂಕಾರಪ್ರಭೇದಕ್ಕೆ ಸಲ್ಲುತ್ತವೆಂದು ನಿಶ್ಚಯಿಸುವುದು ಮತ್ತೂ ಕಷ್ಟಕರ ಅಥವಾ ಕಷ್ಟತಮ. ಏಕೆಂದರೆ ಯಾವ ಸಹಜಕವಿಯೂ ಅಲಂಕಾರಗಳ ಲಕ್ಷಣಗಳನ್ನು ಕಣ್ಣೆದುರು ನಿಲ್ಲಿಸಿಕೊಂಡು ಕವನಿಸುವುದಿಲ್ಲ. ಆತನ ಕಲ್ಪನೆಯು ಸಂಕೀರ್ಣವಾಗಿಯೇ ರೂಪುಗೊಳ್ಳುತ್ತದೆ. ಕೇವಲ ಅಭ್ಯಾಸಿಗಳ ಅನುಕೂಲಕ್ಕಾಗಿ ಕರಾರುವಾಕ್ಕಾದ ಕೆಲವೊಂದು ಉದಾಹರಣೆಗಳ ಮೂಲಕ ಆಲಂಕಾರಿಕರು ಅಲಂಕಾರಗಳ ರೂಪ-ಸ್ವರೂಪಗಳನ್ನು ವಿವರಿಸುವರಲ್ಲದೆ ಎಲ್ಲ ಕವಿಗಳ ಅನನ್ಯಾಭಿರಾಮಕವಿತೆಗಳಿಗೂ ಹದಿನಾರಾಣೆ ಸಲ್ಲುವ ರೀತಿಯಲ್ಲಿ ನಿರ್ದೇಶನವೀಯಲು ಸಾಧ್ಯವಿಲ್ಲ.

ಈ ಕಾರಣದಿಂದಲೇ ಕುಂತಕನಂಥ ಪ್ರಾಜ್ಞರು ತಮ್ಮ ಕಾಲಕ್ಕೇ ಶತಧಾ ವಿಸ್ತರಿಸಿಕೊಳ್ಳುತ್ತಿದ್ದ ಅಲಂಕಾರಗಳನ್ನು ಕೆಲವೊಂದು ಮೂಲಭೂತವಾದ ಮಾದರಿಗಳಿಗೇ ಸೀಮಿತಗೊಳಿಸಿದರು. ಈ ನಿಟ್ಟಿನಲ್ಲಿ ರುದ್ರಟ, ರುಯ್ಯಕ ಮುಂತಾದ ಇನ್ನಿತರರ ಯೋಗದಾನವೂ ಸ್ಮರಣೀಯ. ಲಕ್ಷಣನಿರ್ದೇಶನಗಳೇನಿದ್ದರೂ ಲಕ್ಷ್ಯಗಳ ಸ್ಥೂಲಪ್ರತ್ಯಭಿಜ್ಞಾನಕ್ಕೆ ಮಾತ್ರ ಒದಗಿಬರುತ್ತವೆ. ಇದು ಸಂಗೀತದ ರಾಗಲಕ್ಷಣಗಳಿಗೂ ಮನೋಧರ್ಮದಿಂದ ಗಾಯಕವರೇಣ್ಯರು ಹಾಡುವಾಗ ಆಯಾ ರಾಗಗಳು ತಳೆಯುವ ಪ್ರತ್ಯಗ್ರನಾವೀನ್ಯಕ್ಕೂ ಸಂವಾದಿ. ಲಕ್ಷಣಪರಿಷ್ಕಾರದ ಪ್ರಯತ್ನವಷ್ಟೂ ವ್ಯರ್ಥವೆಂದು ಸರ್ವಥಾ ತಾತ್ಪರ್ಯವಲ್ಲ. ಆದರೆ ಲಕ್ಷ್ಯಗಳು ಸರ್ವದಾ ಲಕ್ಷಣಗಳನ್ನು ಮೀರಿ ನಿಲ್ಲುತ್ತವೆಂಬುದು ಸತ್ಯ. ಏನಿದ್ದರೂ ಲಕ್ಷಣವು ಕೈತೂಕ-ಬಾಯಿಬಣ್ಣಗಳ ಮಟ್ಟದ್ದು. ಅವುಗಳಿಲ್ಲದಿದ್ದಲ್ಲಿ ಅವ್ಯವಸ್ಥೆಯೇ ತಾಂಡವಿಸುತ್ತಿದ್ದ ಕಾರಣ ಅವುಗಳಿಗೊಂದು ಅರ್ಥವಿದೆ, ಆದರೆ ಪರಮಾರ್ಥವಿಲ್ಲ. ಇದು ಎಲ್ಲ ಮೃದುಶಾಸ್ತ್ರಗಳ (Soft Sciences) ಸಂಗತಿಯಾಗಿದೆ. ಇದನ್ನರಿಯದೆ ಲಕ್ಷಣೈಕಚಕ್ಷುಗಳಾಗಿ ಆಗ್ರಹಿಸುವುದು ಸರಿಯಲ್ಲ. ಅದೆಷ್ಟೋ ಬಾರಿ ಮೂಲಭೂತವಾದ ಅಲಂಕಾರಗಳೆನಿಸಿದ ಉಪಮೆ, ರೂಪಕ, ಉತ್ಪ್ರೇಕ್ಷೆ, ಅತಿಶಯ, ವಿರೋಧ ಮುಂತಾದುವುಗಳಲ್ಲಿಯೇ ನಮಗೆ ಸಂದೇಹ ಬರುವುದುಂಟು. ಚಿತ್ರದಲ್ಲಿ ಕಂಡ ಕಾಡನ್ನೋ ನಕ್ಷೆಯಲ್ಲಿ ಕಂಡ ನಾಡನ್ನೋ ಸಾಕ್ಷಾತ್ತಾಗಿ ನೋಡಿದಾಗ ಸಮನ್ವಯಿಸಿಕೊಳ್ಳುವುದು ಅದೆಷ್ಟು ಕಷ್ಟವೆಂಬ ಅರಿವಿದ್ದವರಿಗೆ ಅರ್ಥವಾದೀತು. ವಿಶೇಷತಃ ವಾಲ್ಮೀಕಿಮುನಿಗಳಂಥ ಸಹಜಾತಿಸಹಜಕವಿಗಳ ಪ್ರತಿಭೈಕವಿಶ್ರಾಂತವಾದ ಕಾವ್ಯದಲ್ಲಿ ಇಂಥ ಗೊಂದಲವು ಹೆಜ್ಜೆ-ಹೆಜ್ಜೆಗೂ ತೋರುತ್ತದೆ.

ಆದುದರಿಂದ ಪ್ರಕೃತಪ್ರಯತ್ನದಲ್ಲಿ ಲೇಖಕನ ಆಯಾ ಹೊತ್ತಿನ ಅರಿವು-ಅನುಭವಗಳನ್ನು ಅವಲಂಬಿಸಿ ಅಲಂಕಾರನಿಷ್ಕರ್ಷೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಆತನ ನಾಲ್ಕು ದಶಕಗಳ ಸಾಹಿತ್ಯಶಾಸ್ತ್ರಚಿಂತನೆಯೂ ಹಲವು ಹತ್ತು ಬಾರಿ ನಿರ್ಲಜ್ಜವಾಗಿ ಕೈಚೆಲ್ಲಿ ತನ್ನ ಅಸಹಾಯಕತೆಯನ್ನು ತೋರಿರುವುದುಂಟು. ಹೀಗಾಗಿ ಹಲವು ಅಲಂಕಾರಗಳು ಬೆರೆತುಕೊಂಡ ಅನೇಕಸಂದರ್ಭಗಳಲ್ಲಿ ಸಂಕರವೆಂದೋ ಸಂಸೃಷ್ಟಿಯೆಂದೋ ಒಂದು ಮಾತಿನಲ್ಲಿ ಹೇಳಿ ಕೈತೊಳೆದುಕೊಂಡು ಸಾಗುವ ಜಾಣ್ಮೆ ತೋರದೆ ಅಲ್ಲಿ ಎದ್ದುತೋರುವ ಪ್ರಧಾನಾಲಂಕಾರವನ್ನು ಗುರುತಿಸಿಕೊಂಡು ಮಿಕ್ಕವನ್ನು ಯಥಾಮತಿ ಗೌಣವಾಗಿಯೋ ನಗಣ್ಯವಾಗಿಯೋ ಕಂಡದ್ದಾಗಿದೆ. ಇಷ್ಟೇ ಅಲ್ಲದೆ, ತೀರ ನಿಕಟವಾಗಿರುವ ದೃಷ್ಟಾಂತ-ನಿದರ್ಶನ, ಐತಿಹ್ಯ-ಲೋಕೋಕ್ತಿ, ವಿರೋಧ-ವಿಷಮ, ದೀಪಕ-ಪ್ರತಿವಸ್ತೂಪಮೆ ಮುಂತಾದ ಅಲಂಕಾರಗಳ ನಿಷ್ಕರ್ಷೆಯಲ್ಲಿ ಆ ಹೊತ್ತಿಗೆ ಸ್ಫುರಿಸಿದ ಸಮನ್ವಯವನ್ನು ನೆಮ್ಮಲಾಗಿದೆ. ಈ ಬಗೆಯ ಸಮಸ್ಯೆ ಆಲಂಕಾರಿಕಲೋಕದಲ್ಲಿಯೇ ಉಂಟೆಂಬುದು ಒಂದು ಸಮಾಧಾನದ ಮಾತು. ಆದರೆ ಇದೇನೂ ಸಂತೋಷದ ಮಾತಲ್ಲ. ಒಂದೇ ಅಲಂಕಾರವನ್ನು ಹಲವರು ಆಲಂಕಾರಿಕರು ಬೇರೆ ಬೇರೆಯಾಗಿ ಲಕ್ಷಣೀಕರಿಸಿರುವುದೂ ಹಲವು ಅಲಂಕಾರಗಳನ್ನು ಒಂದೇ ಅಲಂಕಾರವೆಂಬಂತೆ ಭಾವಿಸಿರುವುದೂ ಇದಕ್ಕೆ ಸಾಕ್ಷಿ. ಒಂದೇ ಪ್ರಸಿದ್ಧಲಕ್ಷ್ಯಪದ್ಯದಲ್ಲಿ ಹಲವು ಬಗೆಯ ಅಲಂಕಾರಗಳನ್ನು ಗುರುತಿಸಿರುವುದೂ ಮತ್ತವು ಪರಸ್ಪರವಿರುದ್ಧವಾಗಿರುವುದೂ ದೃಷ್ಟಚರ. ಹೆಚ್ಚೇನು, ಅದೆಷ್ಟೋ ಸಂದರ್ಭಗಳಲ್ಲಿ ಯಾವುದೇ ಇಬ್ಬರು ಆಲಂಕಾರಿಕರು ಐಕಮತ್ಯಕ್ಕೆ ಬರದಿರುವುದೂ ಉಂಟು! ಆದುದರಿಂದ ಇಲ್ಲಿರುವುದು ಶೃಂಗಗ್ರಾಹಿಯಾದ ಪ್ರಧಾನವ್ಯಪದೇಶ.           

ಇರಲಿ; ಮತ್ತೂ ವಿಸ್ತರಿಸಿಕೊಳ್ಳಬಹುದಾದ ಸಾಹಿತ್ಯತತ್ತ್ವಮೀಮಾಂಸೆಯನ್ನು ಸದ್ಯಕ್ಕೆ ಬದಿಗಿರಿಸಿ ಪ್ರಕೃತೋದ್ದಿಷ್ಟವಾದ ಆನ್ವಯಿಕಮೀಮಾಂಸೆಯನ್ನು ಆರಂಭಿಸೋಣ. ಸ್ವನಾಮಧನ್ಯರಾದ ಅಲಂಕಾರಶಾಸ್ತ್ರವೇತ್ತ ಕೆ. ಕೃಷ್ಣಮೂರ್ತಿಯವರ ಪಥಪ್ರದರ್ಶಕಲೇಖನವೊಂದನ್ನಲ್ಲದೆ[1] ಈ ನಿಟ್ಟಿನಲ್ಲಿ ಮತ್ತಾವ ಬರೆವಣಿಗೆಯನ್ನೂ ಪ್ರಕೃತಲೇಖಕನು ಗಮನಿಸಿರದ ಕಾರಣ, ಈ ಬರೆಹದಲ್ಲಿ ಪ್ರತ್ಯೇಕ ಅಲಂಕಾರಗಳಿಗೂ ಹೆಚ್ಚಿನ ಉದಾಹರಣೆಗಳನ್ನು ಕೊಡುವ ಮೂಲಕ ಪ್ರಾಯಿಕವಾಗಿ ಇಡಿಯ ರಾಮಾಯಣದ ಉಕ್ತಿಸೌಂದರ್ಯವನ್ನೆಲ್ಲ ಒಂದೆಡೆ ಪರಿಶೀಲಿಸುವ ಪ್ರಯತ್ನ ಸಾಗಿದೆ. ಕೆಲವೊಂದು ಶ್ಲೋಕಗಳು ಲುಪ್ತವಾಗಿರಬಹುದಾದರೂ ಹೆಚ್ಚಿನ ಸ್ವಾರಸ್ಯವೆಲ್ಲ ಇಲ್ಲಿ ಅಡಕವಾಗಿದೆಯೆಂಬ ಭರವಸೆಯನ್ನಂತೂ ನೀಡಬಹುದು. ಆದರೆ ವಾಲ್ಮೀಕಿಮುನಿಗಳ ನುಡಿಬೆಡಗಿನಲ್ಲಿ ಮುಖ್ಯವಾದ ಹಾಗೂ ಅವಿಭಾಜ್ಯವೂ ಆದ ಮತ್ತೊಂದು ಸೊಗಸುಂಟು: ಅದು ನುಡಿಗಟ್ಟು ಅಥವಾ ವಾಚೋಯುಕ್ತಿಗೆ ಸಂಬಂಧಿಸಿದೆ. ಇದನ್ನು ಭಾಷೆಯೊಂದರ ಜೀವಾಳವೆಂದೂ ಹೇಳಬಹುದು. ವಾಕ್ಯಾಲಂಕಾರಗಳಿಗೆ ಈ ಅಂಶವು ಕೆಲಮಟ್ಟಿಗೆ ಹೊರತೇ ಆದ ಕಾರಣ ಸದ್ಯದ ಬರೆವಣಿಗೆಯಲ್ಲಿ ಇದರ ವಿವೇಚನೆ ಬಹಿರ್ಭೂತವಾಗಿದೆ. ಅದು ಪ್ರತ್ಯೇಕವಾಗಿಯೇ ಕೈಗೊಳ್ಳಬೇಕಿರುವ ಇಷ್ಟೇ ಮಹತ್ತ್ವದ ವಿದ್ವತ್ಕಾರ್ಯ.   

ಮೊದಲಿಗೆ ಮಹರ್ಷಿಗಳ ಉಪಮಾಪ್ರಪಂಚವನ್ನು ಪರಿಶೀಲಿಸೋಣ. ಹೇಳಿ ಕೇಳಿ ಉಪಮೆಯು ಸಕಲಾಲಂಕಾರಗಳಿಗೂ ಮಾತೃಭೂತವಾದ ಕಾರಣ ಇದರಿಂದಲೇ ನಮ್ಮ ವಿವೇಚನೆಯನ್ನು ಆರಂಭಿಸುವುದು ಸಮುಚಿತವೂ ಹೌದು[2].

ಆದಿಕವಿಗಳು ಲೋಕವನ್ನು ಚೆನ್ನಾಗಿ ಬಲ್ಲವರಾದ ಕಾರಣ, ಪ್ರಕೃತಿ ಮತ್ತು ಮಾನವಪ್ರಕೃತಿಗಳನ್ನು ಸಂಸ್ಕೃತಿಪುರಸ್ಸರವಾಗಿ ಅರಿತವರಾದ ಕಾರಣ, ಅವರಿಗೆ ಸಾದೃಶ್ಯಗಳೂ ಅವುಗಳ ಅಂತರಂಗದಲ್ಲಿರುವ ಸಾಧರ್ಮ್ಯಗಳೂ ಸಮೃದ್ಧವಾಗಿ ಹೊಳೆಯುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ರಸಪೇಶಲವಾದ ಮನಸ್ಸು ಅವರದಾದ ಕಾರಣ, ಭಾವುಕೋಪಮೆಗಳಿಗೇ ಅಗ್ರಪೂಜೆ ಸಂದಿದೆ. ಸಂಸ್ಕೃತದ ಮಟ್ಟಿಗಂತೂ ಅವರೇ ನುಡಿಯೊಡತಿಗೆ ಮೊದಲ ಬೆಡಗನ್ನು ತಂದುಕೊಟ್ಟವರಾದ ಕಾರಣ ಅವರ ಪ್ರತಿಯೊಂದು ಹೋಲಿಕೆಗಳಲ್ಲಿಯೂ ತೋರುವ ಹೊಸತನ ಅವಿಸ್ಮರಣೀಯ. ಪರವರ್ತಿಗಳಾದ ಭಾರತೀಯಭಾಷೆಗಳ ಸಕಲಕವಿಗಳೂ ಅವರ ಅಡಿಜಾಡಿನಲ್ಲಿಯೇ ನಡೆದವರು. ಆದುದರಿಂದ ಈ ಕಾಲದ ಅಂತರದಲ್ಲಿ ನಮಗೆ ಹಲವೊಮ್ಮೆ ಆದಿಕವಿಗಳ ವಾಕ್ಕಿನಲ್ಲಿ ನಾವೀನ್ಯ ತಗ್ಗಿದೆಯೆಂದು ತೋರಬಹುದು. ಆದರೆ ಇದು ಉತ್ತರಕಾಲೀನಕವಿಗಳ ಅನುಕರಣೆಗೆ ಒಗ್ಗಿದ ನಮ್ಮ ಮನಸ್ಸಿನ ಅಸಂವೇದನೆಯಲ್ಲದೆ ಮಹರ್ಷಿಗಳ ಪ್ರತಿಭಾಪ್ರಥಮಪ್ರಸೂನಗಳ ಬಣ್ಣವಾಗಲಿ, ಪರಿಮಳವಾಗಲಿ, ಮಕರಂದಬಂಧುರತೆಯಾಗಲಿ ಮಾಸಿದ ಕಾರಣದಿಂದಲ್ಲ. ಹೆಚ್ಚೇನು, ಇಲ್ಲಿರುವ ಅಲಂಕಾರಗಳ ಮೂಲಕ ಸಂವೇದನಶೀಲರಾದ ಸಹೃದಯರು ವಾಲ್ಮೀಕಿಮುನಿಗಳ ಮನಸ್ಸನ್ನೂ ಅವರ ಕಾವ್ಯದ ಸಮಾಜಸಂಸ್ಕೃತಿಯನ್ನೂ ಸೊಗಸಾಗಿ ಪುನರ್ನಿರ್ಮಿಸಬಹುದು.[1] Ref: “Alaṅkāra-s in Vālmīki-rāmāyaṇa,” Krishnamoorthy, K. Indian Literary Theories: A Reappraisal. New Delhi: Meharchand Lachhmandas Publishers, 1985. pp. 148-162

[2] ಉಪಮೆಯ ಬೀಜವಿರುವುದು ಸಾದೃಶ್ಯದಲ್ಲಿ. ಸಾದೃಶ್ಯವಾದರೋ ರಾಗ-ದ್ವೇಷಮೂಲವಾದ ಈ ಜಗತ್ತಿನಲ್ಲಿ ಹೊಳೆಯುವುದು ಪ್ರತಿಭಾಶಾಲಿಗೆ ಮಾತ್ರ. ತಾರ್ಕಿಕನಾದ ಪ್ರತಿಭಾಶಾಲಿಗೆ ಹೊಳೆಯುವ ಸಾದೃಶ್ಯವು ಶಾಸ್ತ್ರವನ್ನು ಬೆಳೆಸಿದರೆ, ಭಾವುಕನಾದ ಪ್ರತಿಭಾಶಾಲಿಗೆ ಸ್ಫುರಿಸುವ ಸಾದೃಶ್ಯವು ಕಾವ್ಯವನ್ನು ಬೆಳಗುತ್ತದೆ. ಹೆಚ್ಚಿನ ಸಹಜಾಲಂಕಾರಗಳೆಲ್ಲ ಸಾದೃಶ್ಯಮೂಲವಾದುವು. ಇನ್ನು ವಿರೋಧಮೂಲಾಲಂಕಾರಗಳಲ್ಲಿಯೂ ಸಾದೃಶ್ಯತತ್ತ್ವವೇ ಪ್ರತೀಪರೂಪದಿಂದ ಬರುತ್ತದೆ. ಇನ್ನುಳಿದ ನ್ಯಾಯಮೂಲ ಮತ್ತು ಶೃಂಖಲಾಮೂಲದ ಅಲಂಕಾರಗಳು ಮಿಗಿಲಾಗಿ ಬೌದ್ಧಿಕಪ್ರಾಬಲ್ಯದ ಫಲಗಳು. ವಾಸ್ತವಮೂಲವಾದ ಸ್ವಭಾವೋಕ್ತಿಯಂತೂ ಯಾವುದೇ ಬಗೆಯ ಸಾದೃಶ್ಯ-ವೈಸದೃಶ್ಯ-ತರ್ಕಸರಣಿ-ಶೃಂಖಲಾಸರಣಿಗಳನ್ನು ಅನುಸರಿಸದ ಕಾರಣ, ದಂಡಿಯು ಹೇಳುವಂತೆ ಅದೊಂದು ಆದ್ಯಾಲಂಕೃತಿಯೆನಿಸಿ ಪ್ರತ್ಯೇಕವಾಗಿಯೇ ನಿಲ್ಲುತ್ತದೆ. ವಸ್ತುತಃ ಇದೊಂದು ಬಗೆಯಲ್ಲಿ “ಗುಣಕಲ್ಪ”ವಾದ ಅಲಂಕಾರ. ಈ ಬಗೆಗೆ ಅನ್ಯತ್ರ ವಿಸ್ತರಿಸಿ ಚರ್ಚಿಸಿರುವ ಕಾರಣ ಪುನಃಪರಾಮರ್ಶೆ ಅನವಶ್ಯ. ಒಟ್ಟಿನಲ್ಲಿ ಸಾದೃಶ್ಯಮೂಲಾಲಂಕಾರಗಳೇ ಕಾವ್ಯಾಲಂಕಾರಗಳಲ್ಲಿ ಪ್ರಧಾನ. ಭೇದವೇ ಮೂಲಧರ್ಮವಾಗಿರುವ ಜಗತ್ತಿನಲ್ಲಿ ಅಭೇದವು ಸಾಧ್ಯತತ್ತ್ವವಲ್ಲದೆ ಸಿದ್ಧತತ್ತ್ವವಲ್ಲ. ಇಲ್ಲಿ ಪರಮಾರ್ಥರೂಪದ ಅಭೇದಜ್ಞಾನವನ್ನು ವೇದಾಂತವಿದ್ಯೆಯಲ್ಲದೆ ಸಾಹಿತ್ಯವಿದ್ಯೆಯು ಶಾಶ್ವತವಾಗಿ ತಂದೀಯಲಾರದು. ಅದರದೇನಿದ್ದರೂ “ಸದ್ಯಃಪರನಿರ್ವೃತಿ”. ಇಹದಲ್ಲಿ ಬೇರುಬಿಟ್ಟು ಪರದತ್ತ ಕೊಂಬೆಗಳನ್ನು ಚಾಚಬಲ್ಲ ಶಕ್ತಿ. ಆದರೆ ಇದೇನೂ ಅಲ್ಪ-ಸ್ವಲ್ಪದ್ದಲ್ಲ. ಸ್ವಾರ್ಥವು ತಾತ್ಕಾಲಿಕವಾಗಿಯಾದರೂ ಕರಗದೆ, ಅಹಂಕಾರವು ಆ ಹೊತ್ತಿಗಾದರೂ ಅಳಿಯದೆ ಜಗತ್ತಿನ ಅಸಂಖ್ಯಾಭಿವ್ಯಕ್ತಿಗಳ ನಡುವೆ ಸಾಧರ್ಮ್ಯದ ಪ್ರಜ್ಞೆ ಉದಿಸದು. ಮೇಲೆ ತೋರಿಕೊಳ್ಳುವ ಚೆಲ್ಲಾಪಿಲ್ಲಿಯಾದ ಮಣಿಗಳಂಥ ಲೋಕಸತ್ತೆಗಳಲ್ಲಿ ಸಮನ್ವಯಸೂತ್ರದ ಅದ್ವೈತಬೋಧೆ ರಸಸಿದ್ಧನಿಗೆ ಮಾತ್ರ ಸಾಧ್ಯ. ಈ ಕಾರಣದಿಂದಲೇ ಭಟ್ಟತೌತನು “ವಿಚಿತ್ರಭಾವಧರ್ಮಾಂಶತತ್ತ್ವಪ್ರಖ್ಯಾ” ಎಂಬುದಾಗಿ ಈ ತೆರನಾದ ಸಮನ್ವಯದರ್ಶನವನ್ನು ಒಕ್ಕಣಿಸಿದ್ದಾನೆ. ಹೀಗೆ ಸಾದೃಶ್ಯವು ಕಲಾಪ್ರಪಂಚದ ಬುನಾದಿ. ಇದರ ಪ್ರಧಾನಮುಖವಾದ ಉಪಮೆಯ ಕವಲುಗಳಾಗಿಯೇ ರೂಪಕ, ಉತ್ಪ್ರೇಕ್ಷೆ, ಅತಿಶಯೋಕ್ತಿ, ಅನನ್ವಯ, ಸಸಂದೇಹ, ಪ್ರತೀಪ, ಸ್ಮರಣ, ಭ್ರಾಂತಿಮತ್, ಉಲ್ಲೇಖ, ದೃಷ್ಟಾಂತ, ನಿದರ್ಶನಾ, ವ್ಯತಿರೇಕ, ವಿರೋಧ, ವಿಷಮಾ, ಸಹೋಕ್ತಿ, ಸಮಾಸೋಕ್ತಿ, ತುಲ್ಯಯೋಗಿತೆ, ಪ್ರತಿವಸ್ತೂಪಮೆ, ಉಪಮೇಯೋಪಮೆ, ಅಪ್ರಸ್ತುತಪ್ರಶಂಸಾ ಮೊದಲಾದ ಅಲಂಕಾರಗಳು ಹೊಮ್ಮುತ್ತವೆ. ಇಲ್ಲೆಲ್ಲ ಶ್ಲೇಷವು ಸೊಗಸನ್ನು ಹೆಚ್ಚಿಸಲು ಬರಬಹುದು. ವಸ್ತುತಃ ಶ್ಲೇಷವೂ ಕೂಡ ಅದೊಂದು ಬಗೆಯ ಶಾಬ್ದಿಕ-ಆರ್ಥಿಕಸಾದೃಶ್ಯದಿಂದಲೇ ಹೊಮ್ಮುವ ಉಕ್ತಿವೈಚಿತ್ರ್ಯ.  

ಆಲಂಕಾರಿಕರು ಉಪಮೆಯನ್ನು ಅನೇಕಪ್ರಕಾರಗಳಾಗಿ ವಿಭಾಗಿಸಿದ್ದಾರೆ. ಆದರೆ ಈ ವಿಭಾಗಗಳಲ್ಲಿ ಅಂಥ ಪರಮಾರ್ಥವಿಲ್ಲ. ನಾವು ಬೇರೊಂದು ಬಗೆಯಲ್ಲಿ ವಿಭಾಗಿಸಿಕೊಂಡಲ್ಲಿ ಒಳಿತಾದೀತು. ಆ ಪ್ರಕಾರ “ಲೋಕೋಪಮೆ” ಮತ್ತು “ಕಾವ್ಯೋಪಮೆ”ಗಳೆಂಬ ಪ್ರಧಾನವಾದ ವಿಭಾಗಗಳೆರಡು. ಮೊದಲನೆಯದು ತಾರ್ಕಿಕರ ಉಪಮಾನಪ್ರಮಾಣಕ್ಕೆ ಸಮೀಪವರ್ತಿ. ಇದರಲ್ಲಿ ವಿಚಾರವೊಂದನ್ನು ಸ್ಪಷ್ಟಪಡಿಸುವ ಹವಣಲ್ಲದೆ ಸೌಂದರ್ಯದೃಷ್ಟಿಯಿಲ್ಲ; ಅಥವಾ ಇದ್ದರೂ ಅದು ತೀರ ಗೌಣ. ಎರಡನೆಯದಾದ ಕಾವ್ಯೋಪಮೆಯೇ ನಮಗೆ ಪ್ರಸ್ತುತ. ಇಲ್ಲಿ ವಿಚಾರವಲ್ಲದೆ ಅನುಭೂತಿಗೇ ಅಗ್ರತಾಂಬೂಲ. ಇದನ್ನು ಮತ್ತೆ “ಬೌದ್ಧಿಕೋಪಮೆ” ಹಾಗೂ “ಭಾವುಕೋಪಮೆ” ಎಂದು ಎರಡಾಗಿ ವಿಂಗಡಿಸಬಹುದು. ಹೆಸರುಗಳೇ ತಿಳಿಸುವಂತೆ ಇವು ಕ್ರಮವಾಗಿ ಬುದ್ಧಿಚಮತ್ಕಾರಪ್ರಧಾನ ಮತ್ತು ಭಾವಸಂವೇದನಪ್ರಧಾನ. ಬೌದ್ಧಿಕೋಪಮೆಯು ಶುಷ್ಕತಾರ್ಕಿಕಸ್ತರದ್ದಲ್ಲವೆಂಬುದಂತೂ ಸ್ಪಷ್ಟ. ಆದರೆ ಇಲ್ಲಿ ಉಪಮಾನ-ಉಪಮೇಯಗಳ ನಡುವಿರುವ ವಿಚಿತ್ರರೂಪದ ಸಾಧರ್ಮ್ಯವೇ ಚಮತ್ಕಾರಸಾಧಕ. ಇದು ನಿರಪವಾದವೆಂಬಂತೆ ಹೃದಯಕ್ಕಿಂತ ಬುದ್ಧಿಗೇ ಹೆಚ್ಚಾಗಿ ಹೊಳೆಯುವ ಕಾರಣ ಬೌದ್ಧಿಕೋಪಮೆಯೆಂಬ ಹೆಸರನ್ನು ಹೊಂದಿದೆ. ಈ ಪ್ರಕಾರವು ಸಹಜವಾಗಿಯೇ ಕವಿಗಳ ಅಹಂಕಾರವನ್ನು ಕೆಣಕುವ ಕಾರಣ ಇಲ್ಲಿ ಗತಾನುಗತಿಕತೆಯ ಅಪಾಯ ಹೆಚ್ಚಿಲ್ಲದಿದ್ದರೂ ಸ್ವಂತಿಕೆಯ ಹೆಮ್ಮೆಯಲ್ಲಿ ರಸಪಾರಮ್ಯವನ್ನೇ ಮರೆಯುವ ಮತ್ತೂ ಮಿಗಿಲಾದ ಅಪಾಯ ಸಾಧ್ಯವಿದೆ. ಅಲ್ಲದೆ ಎಲ್ಲ “ಗುಣೀಭೂತವ್ಯಂಗ್ಯ”ರೂಪದ ಅರ್ಥಾಲಂಕಾರಗಳೂ “ಅರ್ಥಚಿತ್ರ”ಗಳ ಮಟ್ಟಕ್ಕೆ ಇಳಿಯುವ ಅನರ್ಥವೂ ಎದುರಾಗಬಹುದು. ಭಾವುಕೋಪಮೆಯಾದರೋ ಉಪಮಾನ-ಉಪಮೇಯಗಳ ನಡುವಿರುವ ಸ್ಫುಟ-ಸಮೃದ್ಧಸಾಧರ್ಮ್ಯದ ಮೇಲೆ ರೂಪುಗೊಂಡಿದೆ. ಹೀಗಾಗಿ ಇಲ್ಲಿಯ ಸಾಧರ್ಮ್ಯದ ಸೊಗಸು ಎಷ್ಟೇ ಮಿಗಿಲಾಗಿರಲಿ, ಅದರ ಸ್ಫುರಣೆಗೆ ಬುದ್ಧಿಕಾರ್ಯ ಬಲುಮಟ್ಟಿಗೆ ಅನವಶ್ಯ. ಆದುದರಿಂದಲೇ ಇಲ್ಲಿ ಭಾವಕ್ಕೆ ಮಿಗಿಲಾದ ಅವಕಾಶವಿದೆ. ಇಂಥ ಉಪಮೆಯನ್ನು ಬಳಸಿ ಗೆಲ್ಲುವುದು ಬಹುಕಷ್ಟ. ಕೇವಲ ರಸಸಿದ್ಧರಾದ ಮಹಾಕವಿಗಳಿಗೆ ಮಾತ್ರ ಇದು ಸಾಧ್ಯ. ಹಾಗಲ್ಲವಾದರೆ “ಸುಲಭಸೌಂದರ್ಯ”ದ ಜೌಗಿನಲ್ಲಿ ಜಾರಿಹೋಗುವ ಸಂಭವ ಅಪಾರ (ಪೂರ್ವಸೂರಿಗಳು ರಸಸಿದ್ಧರೇ ಆಗಿದ್ದರೂ ಅವರು ಸ್ವಯಂ ಕಂಡುಕೊಂಡ ಕಾವ್ಯಪದ್ಧತಿಯನ್ನು ಕುರುಡಾಗಿ ಅನುಕರಿಸುವ ಮೈಗಳ್ಳತನಕ್ಕೋ ಪ್ರತಿಭಾದಾರಿದ್ರ್ಯಕ್ಕೋ ಸಂಪ್ರದಾಯಶರಣತೆಗೋ ತುತ್ತಾದ ಮುಂದಿನ ಕವಿಗಳ ಕಾವ್ಯನಿರ್ಮಾಣಶೀಲತೆಯನ್ನು ಈ ಪದವು ಧ್ವನಿಸುತ್ತಿದೆ. ಇದರ ಮೂಲ ಡಿ. ಎಚ್. ಎಚ್. ಇಂಗಾಲ್ಸ್ ಅವರು ವಿದ್ಯಾಕರನ ಸುಭಾಷಿತರತ್ನಕೋಶಕ್ಕೆ ಬರೆದ ಪ್ರಸ್ತಾವನೆಯಲ್ಲಿದೆ. ಇದನ್ನವರು “Easy Beauty” ಎಂದು ಮಾರ್ಮಿಕವಾಗಿ ಹರಳುಗಟ್ಟಿಸಿದ್ದಾರೆ). ಆದುದರಿಂದ ಸುಕವಿಯಾದವನು ಬುದ್ಧಿ-ಭಾವಗಳ ಸಂತುಲನವನ್ನು ಮಾಡಿಕೊಂಡು ಸ್ವಂತಿಕೆಯನ್ನೂ ಸಂಪ್ರದಾಯವನ್ನೂ ಎಚ್ಚರದಿಂದ ಕಾಪಾಡಿಕೊಳ್ಳಬೇಕು. ಬೌದ್ಧಿಕೋಪಮೆಯಿಂದ ಅನನ್ಯತೆಯೂ ಭಾವುಕೋಪಮೆಯಿಂದ “ಸಾಧಾರಣೀಕರಣ”ವೂ ಹದವಾಗಿ ಸಿದ್ಧಿಸುತ್ತವೆ. ಇದೊಂದು ಬಗೆಯಲ್ಲಿ ಅಹಂ ಬ್ರಹ್ಮಾಸ್ಮಿ ಮತ್ತು ಸರ್ವಂ ಖಲ್ವಿದಂ ಬ್ರಹ್ಮಗಳ ಸಮನ್ವಯದಂತೆ. ಇವೆರಡೂ ವಿಭಾಗಗಳು ಪುನಃ “ಪೂರ್ಣೋಪಮೆ” ಮತ್ತು “ಲುಪ್ತೋಪಮೆ”ಗಳೆಂದು ಉಪಪ್ರಭೇದಗಳಾಗಿ ಒಡೆದುಕೊಳ್ಳುತ್ತವೆ. ಪೂರ್ಣೋಪಮೆಯಲ್ಲಿ ಎದ್ದುತೋರುವ ವಾಚ್ಯತಾಂಶವು ಲುಪ್ತೋಪಮೆಯಲ್ಲಿ ಸ್ವಲ್ಪ ತಗ್ಗುವ ಕಾರಣ ಇಲ್ಲಿ ವ್ಯಂಜನಾವ್ಯಾಪಾರಕ್ಕೆ ಅವಕಾಶ ಹೆಚ್ಚು. ವಿಶೇಷತಃ “ಧರ್ಮಲುಪ್ತೋಪಮೆ”ಯಾದಲ್ಲಿ ಸ್ವಾರಸ್ಯಕ್ಕೆ ಮಿಗಿಲಾದ ಸ್ಥಾನ. ಅದೇ “ಉಪಮಾನಲುಪ್ತ”ವೋ “ಉಪಮೇಯಲುಪ್ತ”ವೋ ಆದರೆ ಕೆಲಮಟ್ಟಿಗೆ ಸಂದಿಗ್ಧತೆಯೂ ಉದಿಸೀತು. ಇನ್ನು “ಉಪಮಾವಾಚಕಲುಪ್ತಿ”ಯು ಒಂದಿಷ್ಟು ನಷ್ಟವನ್ನೇ ಮಾಡುತ್ತದೆ. ಏಕೆಂದರೆ ದಂಡಿಯಂಥ ಆಲಂಕಾರಿಕರು ಉಪಮಾವಾಚಕಗಳನ್ನೇ ಅದ್ಭುತವಾಗಿ ಬೆಳೆಸಿದ್ದಾರೆ. ಇದಕ್ಕೆ ಮುಂದಿನ ಕವಿಗಳ ಯೋಗದಾನವೂ ಚೆನ್ನಾಗಿ ದಕ್ಕಿದೆ. ಹೀಗಾಗಿ ಬಗೆಬಗೆಯ ಉಪಮಾವಾಚಕಗಳ ಮೂಲಕ ಬಂದೊದಗುವ “ಲಕ್ಷಣಾಮೂಲಧ್ವನಿ”ಗಳೂ “ಉಪಚಾರವಕ್ರತೆ”ಗಳೂ ಉಪಮಾವಾಚಕಲುಪ್ತಪ್ರಕಾರಕ್ಕೆ ದಕ್ಕದೆ ಹೋಗುತ್ತವೆ. ಆದುದರಿಂದ ಧರ್ಮಲುಪ್ತೋಪಮೆಯೇ ಪ್ರಶಸ್ತತಮ.   

To be continued.

 

   Next>>

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.