ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ—ಉಪಮಾ (ಸಮಾಪ್ತಿ)

ಸುಂದರಕಾಂಡದ ಸಾರವತ್ತಾದ ಭಾಗಗಳಲ್ಲೊಂದು ಸೀತೆಯನ್ನು ಹನೂಮಂತನು ಕಂಡದ್ದು. ವಿಶೇಷತಃ ಆಕೆಯನ್ನು ಹತ್ತಾರು ಹೋಲಿಕೆಗಳ ಮೂಲಕ ಆದಿಕವಿಗಳು ವರ್ಣಿಸುವಲ್ಲಿ ಹೆಚ್ಚು-ಕಡಮೆ ಒಂದು ಸರ್ಗವನ್ನೇ ಮೀಸಲಿಟ್ಟಿದ್ದಾರೆ. ಅಲ್ಲಿಯ ಕೆಲವು ಸೂಕ್ತಿಗಳು ಸ್ಮರಣೀಯ:

ತಾಂ ಸ್ಮೃತೀಮಿವ ಸಂದಿಗ್ಧಾಮೃದ್ಧಿಂ ನಿಪತಿತಾಮಿವ |

ಸೋಪಸರ್ಗಾಂ ಯಥಾ ಸಿದ್ಧಿಂ ಬುದ್ಧಿಂ ಸಕಲುಷಾಮಿವ |

ಅಭೂತೇನಾಪವಾದೇನ ಕೀರ್ತಿಂ ನಿಪತಿತಾಮಿವ || (೫.೧೫.೩೩,೩೪)

ಆಮ್ನಾಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ |

ಸನ್ನಾಮಿವ ಮಹಾಕೀರ್ತಿಂ ಶ್ರದ್ಧಾಮಿವ ವಿಮಾನಿತಾಮ್ |

ಪ್ರಜ್ಞಾಮಿವ ಪರಿಕ್ಷೀಣಾಮಾಶಾಂ ಪ್ರತಿಹತಾಮಿವ ||

ಆಯತೀಮಿವ ವಿಧ್ವಸ್ತಾಮಾಜ್ಞಾಂ ಪ್ರತಿಹತಾಮಿವ |

ದೀಪ್ತಾಮಿವ ದಿಶಂ ಕಾಲೇ ಪೂಜಾಮಪಹೃತಾಮಿವ ||

ವೇದೀಮಿವ ಪರಾಮೃಷ್ಟಾಂ ಶಾಂತಾಮಗ್ನಿಶಿಖಾಮಿವ | (೫.೧೯.೧೧,೧೨,೧೩,೧೫)

ಪ್ರತಿಪತ್ಪಾಠಶೀಲಸ್ಯ ವಿದ್ಯೇವ ತನುತಾಂ ಗತಾ | (೫.೫೯.೩೫)

ರಾವಣನ ಸೆರೆಯಲ್ಲಿ ಸೀತೆಯು ಸಂದಿಗ್ಧಾರ್ಥವುಳ್ಳ ಸ್ಮೃತಿಯಂತೆ, ಕ್ಷೀಣವಾದ ಸಂಪತ್ತಿಯಂತೆ, ವಿಘ್ನಗಳಿಂದ ತತ್ತರಿಸಿದ ತಪಸ್ಸಿದ್ಧಿಯಂತೆ, ಮಲಿನವಾದ ಬುದ್ಧಿಯಂತೆ, ಮಿಥ್ಯಾಪವಾದಕ್ಕೆ ತುತ್ತಾದ ಕೀರ್ತಿಯಂತೆ, ಅಭ್ಯಾಸವಿಲ್ಲದೆ ಮರೆತುಹೋದ ವಿದ್ಯೆಯಂತೆ, ಉಪೇಕ್ಷೆಗೊಂಡ ಶ್ರದ್ಧೆಯಂತೆ, ಸೊರಗಿದ ಪ್ರಜ್ಞೆಯಂತೆ, ತಿರಸ್ಕೃತವಾದ ಆಶೆಯಂತೆ ಹಾಳಾದ ಅಭಿವೃದ್ಧಿಯಂತೆ, ಮನ್ನಣೆ ದಕ್ಕದ ಆಜ್ಞೆಯಂತೆ, ಪ್ರಳಯಕಾಲದಲ್ಲಿ ಬೆಂಕಿಬಿದ್ದ ದಿಕ್ಕಿನಂತೆ, ಕಸಿದೊಯ್ಯಲ್ಪಟ್ಟ ಪೂಜಾಪ್ರಕಲ್ಪದಂತೆ, ಮೈಲಿಗೆಯಾದ ಯಜ್ಞವೇದಿಯಂತೆ, ಆರಿಹೋಗುತ್ತಿರುವ ಶ್ರೌತಾಗ್ನಿಯಂತೆ, ಅನಧ್ಯಯನಕಾಲದಲ್ಲಿ ವೇದಾಭ್ಯಾಸಕ್ಕೆ ತೊಡಗಿದವನ ಶ್ರುತಿಶೀಲದಂತೆ ನವೆಯುತ್ತಿದ್ದಳೆಂಬುದು ಇಲ್ಲಿಯ ತಾತ್ಪರ್ಯ. ಈ ಉಪಮೆಗಳೊಂದೊಂದರ ಸೊಗಸೂ ಮನನೀಯ. ವಿಶೇಷತಃ ಉಪಮಾನೋಪಮೇಯಗಳ ಲಿಂಗಸಾಮ್ಯಕ್ಕಾಗಿ ಆದಿಕವಿಗಳು ವಹಿಸಿದ ಜಾಗರೂಕತೆ, ಉಪಮೆಗಳ ಹೊಸತನವನ್ನು ಸಾಧಿಸುವಲ್ಲಿ ಕಾಯ್ದುಕೊಂಡ ಪ್ರಜ್ಞಾಪಾಟವ ಮತ್ತು ವ್ಯುತ್ಪತ್ತಿಮೂಲದ ಹೋಲಿಕೆಗಳನ್ನು ಹೆಣೆಯುವಲ್ಲಿ ತೋರಿದ ಕೌಶಲಗಳು ಯಾರನ್ನೂ ಮಣಿಸದಿರವು.

ಅಶೋಕವನಧ್ವಂಸವನ್ನು ಕಾವಲಿನ ಪಡೆಯ ಮೂಲಕ ಅರಿತ ರಾವಣನ ಕಣ್ಣುಗಳಿಂದ ರಕ್ತಬಿಂದುಗಳೇ ಉದುರಿದವಂತೆ. ಅವು ದೀಪದ ಕುಡಿಯಿಂದ ಜ್ವಾಲಾಲಿಪ್ತವಾದ ತೈಲಬಿಂದುಗಳನ್ನು ಹೋಲುತ್ತಿದ್ದವೆಂದು ಆದಿಕವಿಗಳು ವರ್ಣಿಸುತ್ತಾರೆ:

ತಸ್ಯ ಕ್ರುದ್ಧಸ್ಯ ನೇತ್ರಾಭ್ಯಾಂ ಪ್ರಾಪತನ್ನಸ್ರಬಿಂದವಃ |

ದೀಪ್ತಾಭ್ಯಾಮಿವ ದೀಪಾಭ್ಯಾಂ ಸಾರ್ಚಿಷಃ ಸ್ನೇಹಬಿಂದವಃ || (೫.೪೨.೨೩)

ದೀಪದ ಕುಡಿಯಿಂದ ಹೊತ್ತಿಕೊಂಡ ಎಣ್ಣೆಯ ಹನಿಗಳು ಉರಿಯುವುದನ್ನು ಕೇವಲ ಸೂಕ್ಷ್ಮನಿರೀಕ್ಷಣೆ ಮಾತ್ರ ಅರಿಯಬಲ್ಲುದು. ಕಾಳಿದಾಸನೂ ತನ್ನ ರಘುವಂಶದ ಎಂಟನೆಯ ಸರ್ಗದಲ್ಲಿ ಇಂದುಮತಿಯ ಸಾವನ್ನು ವರ್ಣಿಸುವಾಗ ಇದೇ ಉಪಮೆಯನ್ನು ಪ್ರಕಾರಾಂತರವಾಗಿ ಬಳಸಿಕೊಳ್ಳುತ್ತಾನೆ. ಹೀಗೆ ಆದಿಕವಿಗಳಿಗೆ ಅವನ ಆಧಮರ್ಣ್ಯವು ಸಲ್ಲುವ ಪರಿ ಮತ್ತೆ ಮತ್ತೆ ಕಾಣಸಿಗುತ್ತದೆ.  

ಯುದ್ಧಕಾಂಡವು ಹೊಡೆದಾಟ-ಬಡಿದಾಟಗಳ ನೆಲೆಯಾದ ಕಾರಣ ಅಲ್ಲಿ ಅಲಂಕಾರಗಳಿಗೆ ಆಸ್ಪದವಿಲ್ಲವೆಂದು ಭಾವಿಸುವುದು ಪಾಮರಪ್ರಜ್ಞೆ. ಆದಿಕವಿಗಳಿಗೆ ಇಲ್ಲಿಯೂ ಅಸಂಖ್ಯಾವಕಾಶಗಳುಂಟು. ಇಂಥ ಕೆಲವು ಹೋಲಿಕೆಗಳನ್ನು ಗಮನಿಸೋಣ.

ಲಂಕಾಸಮರದಲ್ಲಿ ಉಭಯಪಕ್ಷಗಳೂ ಮೊದಲ ಬಾರಿಗೇ ರಾತ್ರಿಯುದ್ಧಕ್ಕೆ ಸನ್ನದ್ಧವಾಗುತ್ತವೆ. ನಿಶಾಚರರೆನಿಸಿದ ರಾಕ್ಷಸರಿಗೆ ಇದು ಅನುಕೂಲಕಾರಿಯೇ ಸರಿ. ಆದರೆ ಕಾಂಚನಕವಚಗಳನ್ನು ಧರಿಸಿದ ಅವರನ್ನು ಕಪಿವೀರರು ಸುಲಭವಾಗಿ ಗುರುತಿಸಿ ಘಾತಿಸುವಂತಾಯಿತು. ಆ ಹೊತ್ತಿನಲ್ಲಿ ಅಸುರಸೇನೆಯು ಜ್ಯೋತಿರ್ಲತೆಗಳಿಂದ ಮಿನುಗುವ ಪರ್ವತಪಂಕ್ತಿಯಂತ್ತಿತ್ತೆಂದು ಆದಿಕವಿಗಳು ಹೋಲಿಸುತ್ತಾರೆ:

ಸಂಪ್ರಾದೃಶ್ಯಂತ ಶೈಲೇಂದ್ರಾ ದೀಪ್ತೌಷಧಿವನಾ ಇವ | (೬.೪೪.೫)

ಚಪಲಸ್ಯೇಹ ಕೃತ್ಯಾನಿ ಸಹಸಾನುಪ್ರಧಾವತಃ |

ಛಿದ್ರಮನ್ಯೇ ಪ್ರಪಂದ್ಯಂತೇ ಕ್ರೌಂಚಸ್ಯ ಖಮಿವ ದ್ವಿಜಾಃ || (೬.೬೩.೧೯)

ನಿದ್ದೆಯಿಂದೆಬ್ಬಿಸಲ್ಪಟ್ಟ ಕುಂಭಕರ್ಣನು ರಾವಣನಿಗೆ ವ್ಯರ್ಥವಾದ ಹಿತೋಪದೇಶವನ್ನು ಮಾಡುವಾಗ ಹೇಳುವ ಮಾತಿದು. ದುಡುಕಿ ನಡೆಯುವ ಚಂಚಲಚಿತ್ತನೂ ಆದ ವ್ಯಕ್ತಿಯಲ್ಲಿ ಹುಳುಕನ್ನು ಹುಡುಕಲು ಸದಾ ವೈರಿಗಳು ಸಿದ್ಧರಿರುತ್ತಾರೆ. ಕ್ರೌಂಚಪರ್ವತದ ರಂಧ್ರವನ್ನು ವಲಸೆಯ ಹಕ್ಕಿಗಳು ಸದಾ ಅರಸುತ್ತಿರುವುವಷ್ಟೆ. ಇದು ಅಪ್ಪಟ ಲೋಕಜ್ಞತೆಯ ಹಾಗೂ ಪ್ರಕೃತಿಪರಿಶೀಲನೆಯ ಫಲ. ಇದರ ಸೊಗಸು ವ್ಯುತ್ಪನ್ನರಿಗಷ್ಟೇ ಆಸ್ವಾದ್ಯ. 

ಕುಂಭಕರ್ಣನು ರಾವಣನೊಡನೆ ಮಾತನಾಡಿ ಯುದ್ಧಕ್ಕೆ ತೆರಳುವಾಗ ನೀರಿಲ್ಲದ ಮೋಡಗಳಂತೆ ವೀರಯೋಧರು ವ್ಯರ್ಥವಾಗಿ ಗರ್ಜಿಸುವುದಿಲ್ಲವೆಂದು ಹೇಳುತ್ತಾನೆ:

ಗರ್ಜಂತಿ ನ ವೃಥಾ ಶೂರಾ ನಿರ್ಜಲಾ ಇವ ತೋಯದಾಃ | (೬.೬೫.೩)

ಈ ಹೋಲಿಕೆಯಲ್ಲಿ ಶೂರರಲ್ಲದವರ ಅಸ್ತಿತ್ವವು ಶರನ್ನೀರದಗಳ ಹಾಗೆ ಹಗುರ ಮತ್ತು ಅವರ ಮುಖಗಳು ನೆತ್ತರ ಪಸೆಯಿಲ್ಲದೆ ಬಿಳಿಚಿಕೊಂಡಿರುತ್ತವೆಂಬ ಧ್ವನಿಯು ಹೃದಯಂಗಮ.

ಶ್ರೋಣೀಸೂತ್ರೇಣ ಮಹತಾ ಮೇಚಕೇನ ವ್ಯರಾಜತ |

ಅಮೃತೋತ್ಪಾದನೇ ನದ್ಧೋ ಭುಜಂಗೇನೇವ ಮಂದರಃ || (೬.೬೫.೨೯)

ರಾವಣನ ಮಾತಿನಂತೆ ರಣಕೇಳಿಗೆ ಸಾಗುವ ಕುಂಭಕರ್ಣನನ್ನು ವರ್ಣಿಸುವ ಸಂದರ್ಭದಲ್ಲಿ ಆದಿಕವಿಗಳು ಆತನ ಗಾತ್ರವಿಸ್ತಾರವನ್ನು ಮನಗಾಣಿಸಲು ಕೇವಲ ಅವನ ನಡುಪಟ್ಟಿಯೊಂದನ್ನು ವರ್ಣಿಸಿ ಮಿಕ್ಕಂತೆ ನಮ್ಮ ಕಲ್ಪನೆಗೇ ಬಿಡುತ್ತಾರೆ. ಆ ಪ್ರಕಾರ ಕುಂಭಕರ್ಣನ ಕಟಿಪಟ್ಟಿಯು ಕಪ್ಪಗೆ ಹೊಳೆಹೊಳೆಯುತ್ತಿತ್ತು. ಇದು ಅಮೃತಮಥನಕಾಲದಲ್ಲಿ ಮಂದರವನ್ನು ಬಳಸಿ ಬಂದ ವಾಸುಕಿಸರ್ಪವನ್ನು ಹೋಲುತ್ತಿತ್ತು! ಈ ಮೂಲಕ ಅವನ ಪರ್ವತೋಪಮಗಾತ್ರವೂ ಮುಂದೆ ಅವನು ವಾನರಸೇನಾಸಮುದ್ರವನ್ನು ಪ್ರಮಥಿಸುವ ಕೋಲಾಹಲವೂ ಅದೆಷ್ಟು ಸಮರ್ಥವಾಗಿ ಧ್ವನಿತವಾಗಿದೆ!

ರಾಮಶರದಿಂದ ಕತ್ತರಿಸಲ್ಪಟ್ಟ ಕರ್ಣಕುಂಡಲಮಂಡಿತವಾದ ಕುಂಭಕರ್ಣನ ಶಿರಸ್ಸು ಪುನರ್ವಸುನಕ್ಷತ್ರೋದಯಕಾಲದಲ್ಲಿ ಆ ನಕ್ಷತ್ರಪುಂಜದ ನಡುವೆ ಉದಿಸಿದ ಚಂದ್ರಬಿಂಬದಂತಿತ್ತೆಂದು ವಾಲ್ಮೀಕಿಮುನಿಗಳು ವರ್ಣಿಸುತ್ತಾರೆ:

ಕುಂಭಕರ್ಣಶಿರೋ ಭಾತಿ ಕುಂಡಲಾಲಂಕೃತಂ ಮಹತ್ |

ಆದಿತ್ಯೇಪ್ಯುದಿತೇ ರಾತ್ರೌ ಮಧ್ಯಸ್ಥ ಇವ ಚಂದ್ರಮಾಃ || (೬.೬೭.೧೮೨)

ಇದೊಂದು ಖಗೋಲಶಾಸ್ತ್ರೀಯವಾದ ಉಪಮೆ. ಇಲ್ಲಿ ಪೌರಾಣಿಕಾಂಶವೂ ಸೇರಿದೆ. ಪುನರ್ವಸುನಕ್ಷತ್ರವು ದೇವಮಾತೆಯಾದ ಅದಿತಿಗೆ ಮಿಗಿಲಾಗಿ ಪ್ರಿಯ. ಹೀಗಾಗಿ ಅದು ಆದಿತ್ಯ. ಈ ನಕ್ಷತ್ರಪುಂಜವಾದರೋ ಎರಡು ಪ್ರಜ್ಜ್ವಲತಾರೆಗಳನ್ನು ಒಳಗೊಂಡ ಜ್ಯೋತಿಸ್ಸಮೂಹ. ಈ ಎರಡು ತಾರಾಸ್ತೋಮದ ನಡುವೆ ಚಂದ್ರಬಿಂಬವು ತೋರಿಕೊಳ್ಳುವುದು ಕೆಲಮಟ್ಟಿಗೆ ವಿರಳವಾದ ನೋಟವೇ ಹೌದು. ಇಂಥ ಖಗೋಲಶಾಸ್ತ್ರವೈಚಿತ್ರ್ಯವನ್ನು ಮಹರ್ಷಿಗಳು ಕಟಾಕ್ಷಿಸಿರುವುದಿಲ್ಲಿ ಪರಿಭಾವನೀಯ.

ಅಂಗದನು ಶೋಣಿತಾಕ್ಷನೆಂಬ ರಾಕ್ಷಸನನ್ನು ಕರವಾಲದಿಂದ ಕತ್ತರಿಸಿದ ಪರಿ ಹೇಗಿತ್ತೆಂದರೆ, ಅವನ ಕತ್ತಿಯ ಬೀಸಿನಿಂದ ವೈರಿಯ ಎದೆಯಲ್ಲಿ ಯಜ್ಞೋಪವೀತಾಕೃತಿಯ ಸೀಳು ಮೂಡಿತಂತೆ!

ಯಜ್ಞೋಪವೀತವಚ್ಚೈನಂ ಚಿಚ್ಛೇದ ಕಪಿಕುಂಜರಃ | (೬.೭೬.೧೦)

ಈ ಉಪಮೆಯ ಅಭಿನವತೆ ಮತ್ತು ಅಭಿರಾಮತೆಗಳು ನಿಜವಾಗಿ ಅವಿಸ್ಮರಣೀಯ. ಇಲ್ಲಿಯ ಶಬ್ದಾಲಂಕಾರವೂ ಶ್ರಾವ್ಯ.

ಲಕ್ಷ್ಮಣನೊಡನೆ ಸೆಣಸುವಾಗ ಕವಚವನ್ನು ಕಳೆದುಕೊಂಡು ಮೈಯೆಲ್ಲ ನಟ್ಟ ಬಾಣಗಳ ಮೂಲಕ ಇಂದ್ರಜಿತ್ತು ಮರಗಳಿಂದ ಕಿಕ್ಕಿರಿದ ಮಲೆಯಂತೆ ತೋರಿದನೆಂದು ಆದಿಕವಿಗಳು ಅದೊಂದೆಡೆ ಕಲ್ಪಿಸುತ್ತಾರೆ:

ವಿಧೂತವರ್ಮಾ ನಾರಾಚೈರ್ಬಭೂವ ಸ ಕೃತವ್ರಣಃ |

ಇಂದ್ರಜಿತ್ಸಮರೇ ವೀರಃ ಪ್ರರೂಢ ಇವ ಸಾನುಮಾನ್ || (೬.೮೯.೨೦)

ಇಲ್ಲಿ ತಾನಾಗಿ ಧ್ವನಿಸುವ ಇಂದ್ರಜಿತ್ತಿನ ಪರ್ವತೋಪಮಗಾತ್ರವೂ ಪರಿಭಾವನೀಯ.

ಇದೇ ಸಂದರ್ಭದಲ್ಲಿ ವೀರರಿಬ್ಬರೂ ಪರಸ್ಪರಶರಾಘಾತದಿಂದ ಗಾಯಗೊಂಡಿದ್ದ ಪರಿಯನ್ನು ಮಹರ್ಷಿಗಳು ಬಣ್ಣಿಸುತ್ತ ಅವರು ಎಲೆಯನ್ನುದುರಿಸಿಕೊಂಡು ಮೈಯೆಲ್ಲ ಹೂವೇ ಆಗಿ ಮಲೆತ ಬೂರುಗ ಮತ್ತು ಮುತ್ತುಗದ ಮರಗಳನ್ನು ಹೋಲುತ್ತಿದ್ದರೆನ್ನುತ್ತಾರೆ:

ತಯೋಃ ಕೃತವ್ರಣೌ ದೇಹೌ ಶುಶುಭಾತೇ ಮಹಾತ್ಮನೋಃ | (೬.೮೯.೩೬)

ಸಪುಷ್ಪಾವಿವ ನಿಷ್ಪತ್ರೌ ವನೇ ಶಾಲ್ಮಲಿಕಿಂಶುಕೌ | (೬.೮೯.೩೭)

ಈ ಉಪಮೆಯ ಸ್ವಾರಸ್ಯವಿರುವುದು ಆದಿಕವಿಗಳ ಪ್ರಕೃತಿಪರಿಶೀಲನಸೂಕ್ಷ್ಮತೆಯಲ್ಲಿ. ಬೂರುಗ ಮತ್ತು ಮುತ್ತುಗದ ಮರಗಳು ಶಿಶಿರಾಂತ್ಯದಲ್ಲಿಯೇ ಎಲೆಗಳನ್ನೆಲ್ಲ ಉದುರಿಸಿಕೊಂಡು ವಸಂತಾರಂಭದ ಹೊತ್ತಿಗೆ ಮೈಯೆಲ್ಲ ಕೆಂಪಗಿನ ಹೂಗಳಿಂದ ಕಂಗೊಳಿಸುತ್ತವೆ. ಬೂರುಗವು ಕೆನ್ನೀಲಿಯ ದೊಡ್ಡ ದೊಡ್ಡ ಹೂಗಳನ್ನು ತಳೆದರೆ ಮುತ್ತುಗವು ಕೆಂಗೇಸರಿಯ ಸುಮಗಳನ್ನು ತಳೆಯುತ್ತದೆ. ಇವೆರಡೂ ಒತ್ತಾದ ಹೂಗಳ ನಿಬಿಡತೆಯಿಂದ ಎಲ್ಲಿಯೂ ಎದ್ದುತೋರುವಂತಿರುತ್ತವೆ. ಇದನ್ನು ಕಂಡವರಿಗೆ ಪ್ರಕೃತೋಪಮೆಯ ಸ್ವಾರಸ್ಯ ಮತ್ತಷ್ಟು ಸ್ಫುರಿಸದಿರದು.

ಇಂದ್ರಜಿದ್ವಧೆಯ ಬಳಿಕ ಅವನ ಹಿಂಬಾಲಕರಾದ ಅಸಂಖ್ಯರಾಕ್ಷಸರು ನೋಡನೋಡುತ್ತಿದ್ದಂತೆಯೇ ಕಾಣೆಯಾದರು. ಇದನ್ನು ಅನುದಿನದ ಅನುಭವದ ಹಿನ್ನೆಲೆಯಲ್ಲಿ ಮಹರ್ಷಿಗಳು ಸೂರ್ಯನು ಮುಳುಗಿದ ಬಳಿಕ ಅವನ ಕಿರಣಗಳು ಕಣ್ಮರೆಯಾಗುವಂತಿತ್ತೆಂದು ಬಣ್ಣಿಸುತ್ತಾರೆ:

ರಾಕ್ಷಸಾನಾಂ ಸಹಸ್ರೇಷು ನ ಕಶ್ಚಿತ್ಪ್ರತ್ಯದೃಶ್ಯತ |

ಯಥಾಸ್ತಂ ಗತ ಆದಿತ್ಯೇ ನಾವತಿಷ್ಠಂತಿ ರಶ್ಮಯಃ || (೬.೯೧.೮೫)

ಎಲ್ಲರ ಅನುಭವದಲ್ಲಿಯೂ ಇರುವ ಈ ಹೋಲಿಕೆಯ ಸ್ವಾರಸ್ಯವೆಲ್ಲ ಅಸುರಸೇನೆಯನ್ನು ಸೂರ್ಯರಶ್ಮಿಗೆ ಹೋಲಿಸಿರುವಲ್ಲಿ. ಸಾಮಾನ್ಯವಾಗಿ ಸೂರ್ಯಾಸ್ತದ ಬಳಿಕ ಬೆಳಕು ಇಲ್ಲವಾಯಿತೆಂದು ಹೇಳುವುದುಂಟು. ಇದು ತೀರ ಯಾತಯಾಮೋಪಮೆ. ಆದರೆ ಕಿರಣಗಳು ಕಾಣೆಯಾಗುವುದನ್ನು ಗಮನಿಸುವುದು ಸೂಕ್ಷ್ಮತೆಗೆ ಸಾಕ್ಷಿ. ಅಲ್ಲದೆ “ರಶ್ಮಿ”ಯೆಂಬ ಪದವೂ ಇಲ್ಲಿ ಗಮನಾರ್ಹ. ಇದಕ್ಕೆ ಕಿರಣ ಮತ್ತು ಕಡಿವಾಣಗಳೆಂಬ ಅರ್ಥವುಂಟು. ಸೂರ್ಯನು ಮುಳುಗಿದ ಬಳಿಕ ಅವನ ಕಿರಣಗಳೂ ಇಲ್ಲ, ಅವನ ಕುದುರೆಗಳಿಗೆ ಕಡಿವಾಣವೂ ಇಲ್ಲವೆಂಬ ಧ್ವನಿ ಮೂಡರಿರದು. ಆದುದರಿಂದ ಕತ್ತಲೆಯ ದಾಳಿಗೆ ಕಡಿವಾಣವಿಲ್ಲವೆಂಬ ಅನುರಣನಶೀಲಸ್ವಾರಸ್ಯವು ಸ್ಫುರಿಸಿ, ಇಲ್ಲಿ ಕತ್ತಲೆಂದರೆ ಅಸುರರ ಪಾಲಿಗೆ ಶೋಕವೇ ಆಯಿತೆಂಬ ಸೂಚನೆಯೂ ಸಿಗದಿರದು. ಹೀಗೆ ತುಂಬ ಸರಳವಾದ ಒಂದು ಹೋಲಿಕೆಯು ಅದೆಷ್ಟು ದೂರಗಾಮಿಯಾದ ಪರಿಣಾಮವನ್ನು ಬೀರುವುದೆಂಬುದಕ್ಕೆ ಇದೊಂದು ಸಮರ್ಥೋದಾಹರಣೆ. ಆದುದರಿಂದಲೇ ಇಲ್ಲಿ “ರಶ್ಮಿ”ಶಬ್ದದ ಸ್ತ್ರೀಲಿಂಗವು ಉಪಮಾಶಾಸ್ತ್ರೀಯತೆಗೆ ಉದ್ವೇಜಕವಾಗಿಲ್ಲ.

ತುಮುಲಯುದ್ಧದಲ್ಲಿ ವಾನರವೀರರೆಲ್ಲ ಗುಂಪುಗುಂಪುಗಳಾಗಿ ಧಾವಿಸಿ ಬಂದು ಒಬ್ಬೊಬ್ಬ ರಕ್ಕಸನಿಗೂ ನೂರು ನೂರು ಕಪಿಗಳಂತೆ ಅಟಕಾಯಿಸಿದಾಗ ಹಣ್ಣುತುಂಬಿದ ಮರಕ್ಕೆ ಹಕ್ಕಿಗಳೆರಗಿದಂತಾಯಿತೆಂದು ಮಹರ್ಷಿಗಳು ಕಲ್ಪಿಸುತ್ತಾರೆ:

ಏಕೈಕಂ ರಾಕ್ಷಸಂ ಸಂಖ್ಯೇ ಶತಂ ವಾನರಪುಂಗವಾಃ |

ಅಭ್ಯಧಾವಂತ ಫಲಿನಂ ವೃಕ್ಷಂ ಶಕುನಯೋ ಯಥಾ || (೬.೯೪.೧೫)

ರಾಮನ ಅಮೋಘಶರಗಳು ರಾಕ್ಷಸರ ಮೈಗಳಲ್ಲಿ ಹೆದ್ದಾರಿಗಳನ್ನು ಮಾಡಿಕೊಳ್ಳುತ್ತಿದ್ದಾಗ ಅವರು ಬಾಣಗಳ ಏಟನ್ನಷ್ಟೇ ಅನುಭವಿಸಿ ಅರಿತರಲ್ಲದೆ ಆ ನಿಶಿತನಾರಾಚಗಳನ್ನು ಬಿಡುತ್ತಿರುವ ಧಾನುಷ್ಕನನ್ನು ಅರಿಯಲಿಲ್ಲ. ಇದು ಪಂಚೇಂದ್ರಿಯಗಳ ಮೂಲಕ ಪಂಚಭೂತಗಳನ್ನು ಅರಿಯುತ್ತಾ ಸ್ವಶರೀರದಲ್ಲಿಯೇ ಇರುವ ಜೀವರು ಶಾರೀರನಾದ ಪರಮಾತ್ಮನನ್ನರಿಯದಂತಾಗಿತ್ತೆಂದು ವಾಲ್ಮೀಕಿಮುನಿಗಳು ನೀಡುವ ವೇದಾಂತಮಯವಾದ ಹೋಲಿಕೆಯು ನಿಜಕ್ಕೂ ಅದ್ಭುತ. ಹೀಗೆ ಶಾಸ್ತ್ರೀಯಸಾದೃಶ್ಯಗಳನ್ನು ರಚಿಸುವಲ್ಲಿ ಪರವರ್ತಿಗಳಿಗೆಲ್ಲ ಆದಿಕವಿಗಳೇ ಪರಮಾಚಾರ್ಯರು:

ಪ್ರಹರಂತಂ ಶರೀರೇಷು ನ ತೇ ಪಶ್ಯಂತಿ ರಾಘವಮ್ |

ಇಂದ್ರಿಯಾರ್ಥೇಷು ತಿಷ್ಠಂತಂ ಭೂತಾತ್ಮಾನಮಿವ ಪ್ರಜಾಃ || (೬.೯೪.೨೩)

ಅಗ್ನಿಯನ್ನು ಪ್ರವೇಶಿಸುತ್ತಿರುವ ಸೀತೆಯು ಮಂತ್ರಪೂತವಾದ ಪೂರ್ಣಾಹುತಿಯು ಅಧ್ವರಾನಲದಲ್ಲಿ ಹೊಗುವಂತಿತ್ತೆಂದು ವರ್ಣಿಸುವಲ್ಲಿ ಮಹರ್ಷಿಗಳು ಮೈಥಿಲಿಯ ಪವಿತ್ರಪಾತಿವ್ರತ್ಯವನ್ನು ಧ್ವನಿಸಿರುವುದು ಅಸಮಾನ. ಇಲ್ಲಿಯ ಆರ್ಷೋಪಮೆಯೂ ಅನನ್ಯ:

ಪತಂತೀಂ ಸಂಸ್ಕೃತಾಂ ಮಂತ್ರೈರ್ವಸೋರ್ಧಾರಾಮಿವಾಧ್ವರೇ | (೬.೧೧೯.೩೩)

To be continued.