ಡಿ.ವಿ.ಜಿ. ಅವರ ಭಾಷಾಶಿಲ್ಪ—ಗೀತರಚನೆ

This article is part 5 of 5 in the series DVG avara Bhasha-shilpa

ಗೀತರಚನೆಯ ಪಾಟವ

ನವೋದಯದ ಕವಿಗಳ ಪೈಕಿ ಡಿ.ವಿ.ಜಿ.ಯವರಂತೆ ಲಕ್ಷಣಶುದ್ಧವಾದ ಗೀತಗಳನ್ನು ರಚಿಸಿದವರು ಹಲವರಿಲ್ಲ. ಅವರ ಗೀತಗಳಲ್ಲಿ ರಾಗ-ತಾಳಗಳ ಸುಂದರಾನ್ವಯಕ್ಕೆ ವಿಪುಲಾವಕಾಶವಿದೆ. ಜೊತೆಗೆ ಆದಿಪ್ರಾಸ, ಅನುಪ್ರಾಸ ಮತ್ತು ಅಂತ್ಯಪ್ರಾಸಗಳ ಅಂದವೂ ಸಮೃದ್ಧವಾಗಿದೆ. ಇಷ್ಟೇ ಅಲ್ಲದೆ ಅವರು ವಡಿ, ವರಣ, ಅತೀತ, ಅನಾಗತ, ಪದಗರ್ಭ, ಗಣಪರಿವೃತ್ತಿ ಮುಂತಾದ ಗೇಯಶಿಲ್ಪದ ತಾಂತ್ರಿಕಸೂಕ್ಷ್ಮತೆಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಮುಖ್ಯವಾಗಿ ಪಲ್ಲವಿ-ಅನುಪಲ್ಲವಿ-ಚರಣಗಳ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಗತಿಭೇದಗಳ ಹಾಗೂ ಕಾಲಭೇದಗಳ ಲಯವಿಲಾಸಗಳನ್ನು ಸಾಧಿಸಿರುವುದು ಡಿ.ವಿ.ಜಿ.ಯವರ ಭಾಷೆ-ಬಂಧಗಳ ಸೌಂದರ್ಯಕ್ಕೆ ಒಳ್ಳೆಯ ನಿದರ್ಶನ.

“ಶ್ರೀಚೆನ್ನಕೇಶವ ಅಂತಃಪುರಗೀತ”, “ಗೀತಶಾಕುಂತಲ” ಮತ್ತು “ಶ್ರೀಕೃಷ್ಣಪರೀಕ್ಷಣಂ” ಕೃತಿಗಳ ಹಾಡುಗಳು ಯಾವುದೇ ಭಾಷೆಗೆ ಭೂಷಣಗಳು. ಇದಕ್ಕೊಂದು ಮಾದರಿಯಾಗಿ “ಭಸ್ಮಮೋಹಿನಿ”ಗೀತವನ್ನು ಗಮನಿಸಬಹುದು: 

ರಾಗಮಾಲಿಕೆ: ಮೋಹನ,ತೋಡಿ ಇತ್ಯಾದಿ ]                                        [ ತಾಳ: ಆದಿ

ಹಿಮ್ಮೇಳ:

             ಆಹಾ!—ಮೋಹಾಭಿನಯದ ಸನ್ನಾಹಾ!

ಕೇಶವನುತ್ಸಾಹಾ || ಪ ||

ಮೋಹಿನಿವೇಷದೆ ಭಸ್ಮದಾನವನ

ದಾಹಿಸಿ ಧರ್ಮವ ಕಾಯ್ದ ಚರಿತೆಯಿದು || ಅ.ಪ. ||

ಪ್ರವೇಶಕ:

             ಬಂದಳ್—ಸುರಸುಂದರಿಯಿದೊ ತಾಂ ಬಂದಳ್

             ತ್ರಿಜಗನ್ಮೋಹಿನಿಯೈತಂದಳ್

             ಆನಂದವ ಲೋಕಕೆ ತಂದಳ್ |

             ಕಂಕಣಕಿಂಕಿಣಿರಣಿತಕೆ ಕುಣಿಯುತ

             ಕಣ್ಕಿವಿಮನಗಳಿಗಮೃತವನೆರೆಯುತ || ೧ ||

ಹಿಮ್ಮೇಳ:

             ಬಂದನ್—ಭಸ್ಮಾಸುರನಿದೊ ತಾಂ ಬಂದನ್

             ಬಂದಾ ಮೋಹಿನಿಯನು ಕಂಡನ್

             ಕಂಡಾಕೆಯ ಬೆಡಗಿಗೆ ನಿಂದನ್ |

             ನಿಂದು ನಿರುಕಿಸುತೆ ರೂಪವಿಲಾಸವ

ಸುಂದರಿಯೊಡನಾಡಿದನೀ ಚಾಟುವ || ೨ ||

ಭಸ್ಮಾಸುರ:

             ಬಾರೆ—ಬಾ ನೀರೆ ಸಕಲಸುಖಸಾರೆ

             ನೀನೆನ್ನಯ ಮನವನು ಸೂರೆ-

             ಗೈದಿಹೆಯೆಲೆ ನೀಂ ದಯತೋರೆ |

             ಆರೆ ತಕ್ಕವನು ನಾನಲ್ಲದೆ ಶೃಂ-

             ಗಾರವಾರಿನಿಧಿ ನಿನ್ನೊಯ್ಯಾರಕೆ || ೩ ||

ಮೋಹಿನಿ:

             ವೀರಾ—ನಿನಗೆನ್ನೊಡೆನೇನು ವಿಚಾರಾ

             ಶೂರರ ನೀನರಸೆಲೊ ಶೂರಾ

             ಹೋರಾಟವೆನಿನಗೆ ವಿಹಾರಾ |

             ನೀರೆಯರೆಡೆ ನೀನೆನ ಸಾಧಿಸುವೆ

             ಸಾರು ಶೂರರೆಡೆ ಸಾರೆಲೊ ದೂರಕೆ || ೮ ||

ಭಸ್ಮಾಸುರ:

             ರಾಣೀ—ಕಲಿಸಾ ನೃತ್ಯವ ಬಿನ್ನಾಣೀ

             ನೀಂ ಗುರುವಾಗೆಲೆ ಸುಶ್ರೋಣೀ

             ನಾಂ ಶಿಷ್ಯನಹೆನೆಶುಕವಾಣೀ |

             ಚಿತ್ತೇಶ್ವರಿ ನಿನ್ನೊಲುಮೆಯ ಗಳಿಸಲು

             ನೃತ್ಯವನಾಡುವೆ ನೀನಾಡುವವೊಲು || ೧೩ ||

ಹಿಮ್ಮೇಳ:

             ಹೋ ಹೋ!—ಹೋ! ಭಸ್ಮನೀಗ ತಾಂ ಭಸ್ಮ

             ಆ ಹರವರಕರಶಿಖಿಯೂಷ್ಮ-

             ಕ್ಕಾಹುತಿ ತಾನಾ ವಿಕೃತಾತ್ಮ |

             ಆಹಾ ಏನದ್ಭುತವೀ ನಾಟ್ಯ

             ಮೋಹನಕೇಶವಹಿತಕಾಪಟ್ಯ || ೨೨ ||

(ಶ್ರೀಚೆನ್ನಕೇಶವ ಅಂತಃಪುರಗೀತ, ಭಸ್ಮಮೋಹಿನಿ)

ಉಪಸಂಹಾರ

ಡಿ.ವಿ.ಜಿ.ಯವರನ್ನು ಕನ್ನಡಸಾಹಿತ್ಯವನದ ಅಶ್ವತ್ಥವೆಂದೇ ಅನ್ವರ್ಥವಾಗಿ ವಿದ್ವಾಂಸರು ಗುರುತಿಸಿದ್ದಾರೆ. ಅಶ್ವತ್ಥವೃಕ್ಷದ ಕೊಂಬೆಗಳ ಹರಹೂ ಅದರ ಎಲೆಗಳ ಸಮೃದ್ಧಿಯೂ ತುಂಬ ಆಕರ್ಷಕ. ವಸಂತಕಾಲದಲ್ಲಿ ಕೆಂಪುಚಿಗುರುಗಳಿಂದ ಕಂಗೊಳಿಸುವ ಅರಳಿಮರವು ಏಕಕಾಲದಲ್ಲಿ ಉಲ್ಲಾಸ ಮತ್ತು ಪಾವಿತ್ರ್ಯಗಳ ಸಂಕೇತವಾಗಿ ತೋರುತ್ತದೆ. ಇದೇ ರೀತಿ ಡಿ.ವಿ.ಜಿ.ಯವರ ಭಾಷಾಪಾಕವು ಸುಂದರ ಹಾಗೂ ಸರ್ವತೋಮುಖ.

ಕನ್ನಡವು ಓಜಸ್ಸನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ಭಾಷಾಶುದ್ಧಿಗೆ ಗಮನವೀಯದ ಈ ಹೊತ್ತಿನಲ್ಲಿ ಗುಂಡಪ್ಪನವರಂಥ ಧೀಮಂತರ ಮಾರ್ಗದರ್ಶನವು ನಮಗೆ ತುಂಬ ಉಪಾದೇಯ. ನಮ್ಮ ತಾಯ್ನುಡಿ ಅದೆಂತು ಅನೇಕರೀತಿಯ ಕಾರ್ಯಭಾರಗಳನ್ನು ಅವಲೀಲೆಯಿಂದ ಸಾಗಿಸಬಲ್ಲುದೆಂಬುದಕ್ಕೆ ನಿದರ್ಶನವಾದ ಈ ಮಹನೀಯರ ಬರೆಹಗಳು ಸಾಹಿತ್ಯಶರೀರಕ್ಕೆ ಹೊಸ ರಕ್ತವನ್ನು ತುಂಬಬಲ್ಲವು. ಈ ನಿಟ್ಟಿನಲ್ಲಿ ಸದ್ಯದ ಪ್ರಯತ್ನವು ದಿಕ್ಸೂಚಿಯಾದೀತು.

Concluded.

Author(s)

About:

Shashi Kiran B N holds a bachelor’s degree in Mechanical Engineering and a master's degree in Sanskrit. His interests include Indian aesthetics, Hindu scriptures, Sanskrit and Kannada literature, and philosophy. A literary aficionado, Shashi enjoys composing poetry set to classical meters in Sanskrit. He co-wrote a translation of Śatāvadhāni Dr. R Ganesh’s Kannada work Kavitegondu Kathe.