ಸೂಚನೆ, ಸಾರಾಂಶ, ಸಂಗ್ರಹ
ಡಿ.ವಿ.ಜಿ. ಅವರ ಮನಸ್ಸು ಸದಾ ಸಾರಗ್ರಹಣದತ್ತ ಲಗ್ನವಾಗಿರುವಂಥದ್ದು. ಹೀಗೆ ಗ್ರಹಿಸಿದ ಸಾರವನ್ನು ಸ್ಪಷ್ಟವಾಗಿ, ಸ್ಮರಣೀಯವಾಗಿ, ಸುಂದರವಾಗಿ ಹೇಳುವಲ್ಲಿ ಅವರ ಕಾವ್ಯ-ಶಾಸ್ತ್ರಗಳ ಅಧ್ಯಯನ ಸಹಕರಿಸಿದೆ. ಅವರ ಈ ದೃಷ್ಟಿ ಗದ್ಯ-ಪದ್ಯಗಳಾಗಿ ಮೂಡಿ ಓದುಗರಿಗೆ ಮಹೋಪಕಾರ ಮಾಡಿದೆ. ಪ್ರತಿ ಅಧ್ಯಾಯದ ಆರಂಭದಲ್ಲಿಯೂ ಕೊನೆಯಲ್ಲಿಯೂ ಕಂಡುಬರುವ ಈ ಸಂಕ್ಷಿಪ್ತ ರಚನೆಗಳು ನಿರ್ದಿಷ್ಟ ಗ್ರಂಥಭಾಗವು ಮನಸ್ಸಿಗೆ ನಾಟುವಂತೆ ಮಾಡುತ್ತವೆ; ಇಡಿಯ ವಿವರಣೆಯನ್ನು ಒಂದೇ ದೃಕ್‌ಪ್ರಸಾರದಲ್ಲಿ ಗ್ರಹಿಸುವಂತೆ ಮಾಡುತ್ತವೆ. ಇಂಥ ಕೆಲವು ಮಾದರಿಗಳನ್ನು ಈಗ ಪರಿಶೀಲಿಸಬಹುದು. ಮೊದಲಿಗೆ ಗದ್ಯದ ಸಾರಾಂಶಗಳನ್ನು ನೋಡೋಣ. ಇವು ಅಧ್ಯಾಯಗಳ ತಾತ್ಪರ್ಯವನ್ನು ಸಂಗ್ರಹವಾಗಿ ನಿರೂಪಿಸುವುದು ಮಾತ್ರವಲ್ಲದೆ ಸೂಕ್ಷ್ಮ ವಿಷಯಗಳತ್ತ ನಮ್ಮ ಗಮನಸೆಳೆದು ಅಮೂಲ್ಯವಾದ ಒಳನೋಟಗಳನ್ನೂ ಒದಗಿಸಿಕೊಡುತ್ತವೆ.
ಆರನೆಯ ಅಧ್ಯಾಯದ ಸಾರಾಂಶವನ್ನು ಉದಾಹರಣೆಯಾಗಿ ನೋಡಬಹುದು:
“ಕರ್ಮ ಮಾಡಿ ಅದರ ಫಲವನ್ನು ಬಿಟ್ಟಿರುತ್ತಾನೆ ಜ್ಞಾನಿ ... ಪಾಪಬೀಜ ಹೇಗೆ ಸ್ವಭಾವದಲ್ಲಿದೆಯೋ ಪುಣ್ಯದ ಬೀಜವೂ ಹಾಗೆಯೇ ಸ್ವಭಾವದಲ್ಲಿದೆ. ಈ ಸದಂಶವನ್ನು ಪ್ರವರ್ಧಮಾನ ಮಾಡಬೇಕೆಂಬುದೇ ಗೀತೆಯ ತಾತ್ಪರ್ಯ. ಅಂತಸ್ಸಮತೆ, ಬಹಿಸ್ತಾರತಮ್ಯ - ಇವು ಲೋಕಹಿತಸೂತ್ರದ ಎರಡು ಭಾಗಗಳು ... ಸಮತ್ವ ಸಮತ್ವ ಎಂದು ಕೂಗಾಡುವ ರಾಜಕೀಯಸ್ಥರು ತಾರತಮ್ಯತತ್ತ್ವಕ್ಕೂ ನಮ್ಮ ಜೀವನದಲ್ಲಿ ಒಂದು ಜಾಗವುಂಟೆಂಬುದನ್ನು ಚೆನ್ನಾಗಿ ಮನಸ್ಸಿಗೆ ತಂದುಕೊಳ್ಳಬೇಕು”. (ಪು. ೨೨೬)
ಇಲ್ಲಿಯ ಮೊದಲ ವಾಕ್ಯ ಅಧ್ಯಾಯದ ತಾತ್ಪರ್ಯವನ್ನು ಚೊಕ್ಕವಾಗಿ ಸಂಗ್ರಹಿಸಿದೆ. ಅನಂತರ ಡಿ.ವಿ.ಜಿ. ಅವರ ಅಂತರ್ದೃಷ್ಟಿ ಗೀತೆಯ ಉಪದೇಶವನ್ನು ಪಾಪ-ಪುಣ್ಯಗಳ ಹಿನ್ನೆಲೆಯಲ್ಲಿ ನಮಗೆ ಮನಗಾಣಿಸಿದೆ. ಕಡೆಯ ಭಾಗವು ದಾರ್ಶನಿಕ ಸತ್ಯವೊಂದರ ಸಾಂಪ್ರತ ಅನ್ವಯವಿಧಾನವನ್ನು ತೋರಿಸಿಕೊಟ್ಟಿದೆ.
ಇನ್ನೊಂದು ಉದಾಹರಣೆಯಾಗಿ ಭಗವಂತನ ವಿಭೂತಿಗಳನ್ನು ಕುರಿತ ಸಾರಾಂಶವನ್ನು ಗಮನಿಸಬಹುದು:
“ನಮಗಿರುವ ವಿವೇಕಸ್ವಾತಂತ್ರ್ಯದ ಸದುಪಯೋಗವು ಭಗವಂತನ ಸ್ವರೂಪದ, ಅಸಂಗಿತ್ವದ, ಸರ್ವಶಕ್ತಿಮತ್ತ್ವದ ಅರಿವನ್ನು ಸಂಪಾದಿಸುವುದರಲ್ಲಿರುತ್ತದೆ. ಇದಕ್ಕಾಗಿ ಕೆಲವು ಮಾರ್ಗಜ್ಯೋತಿಗಳನ್ನೂ ಧ್ವಜತೋರಣಗಳನ್ನೂ ನಿರ್ದೇಶಿಸಿದ್ದಾನೆ ಭಗವಂತ. ಲೋಕದಲ್ಲಿ ಉತ್ಕೃಷ್ಟವಾದದ್ದೇನುಂಟೋ ಅದನ್ನೆಲ್ಲ ಭಗವತ್ಸಂಕೇತವೆಂದು ತಿಳಿದು ಆ ಮೂಲಕ ಉಪಾಸನೆ ಮಾಡುವುದರಿಂದ ಭಗವದನುಗ್ರಹಸಂಪಾದನೆಯು ಶಕ್ಯವಾಗುತ್ತದೆ”. (ಪು. ೩೪೮)
ಇಲ್ಲಿ ಮೊದಲಿಗೆ ಒಂದು ವಿಷಯಪ್ರತಿಜ್ಞೆಯ ಮಾತು ಬಂದಿದೆ. ಅದು ನಮ್ಮ ವಿವೇಕಸ್ವಾತಂತ್ರ್ಯದ ಸದುಪಯೋಗವನ್ನು ಕುರಿತಿದೆ. ಮುಂದಿನ ವಾಕ್ಯ ಈ ವಿಷಯವನ್ನು ಸದ್ಯದ ಗೀತಾಧ್ಯಾಯ ಹೇಗೆ ಪ್ರತಿಪಾದಿಸಿದೆ ಎಂದು ತಿಳಿಸಿಕೊಡುತ್ತದೆ. ಅನಂತರದ ವಾಕ್ಯ ಗೀತೋಪದೇಶವನ್ನು ಸಾಧಕರಾದ ನಾವು ಹೇಗೆ ಅನುಸಂಧಾನಿಸಿ ಚರಿತಾರ್ಥವಾಗಬಹುದೆಂದು ತೋರ್ಪಡಿಸಿದೆ. ಇಲ್ಲಿಯ ಭಾಷೆ ಶಾಸ್ತ್ರ-ಕಾವ್ಯಗಳ ಹಿತವಾದ ಹದವನ್ನು ಮುಟ್ಟಿದೆ.
ಆದ್ಯಂತ ಡಿ.ವಿ.ಜಿ. ಅವರ ದಾರ್ಶನಿಕದೀಪ್ತಿಯ ಒಳನೋಟವೇ ಕೂಡಿರುವ ಸಾರಾಂಶಕ್ಕೆ ಉದಾಹರಣೆಯಾಗಿ ಹದಿನಾಲ್ಕನೆಯ ಅಧ್ಯಾಯದ ಆರಂಭದ ಮಾತುಗಳನ್ನು ಗಮನಿಸಬಹುದು:
“ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ಅಶಾಂತಿ ಅಲ್ಲೋಲಕಲ್ಲೋಲಗಳ ಕಾರಣಸ್ಥಾನವಿರುವುದು ಜಗತ್ತನ್ನಾಗಿಸಿರುವ ಸತ್ತ್ವರಜಸ್ತಮೋಗುಣಗಳ ಅಸಮಸಂಮಿಶ್ರಣದಲ್ಲಿ ಎಂಬ ಸಂಗತಿಯನ್ನು ಲೋಕಶಾಂತಿ, ಸರ್ವೋದಯ ಎಂದು ಹಂಬಲಿಸುವ, ಅದಕ್ಕಾಗಿ ಸಮ್ಮೇಳನಗಳನ್ನು ನಡಸುವ ರಾಜಕೀಯಸ್ಥರು ಗಮನಕ್ಕೆ ತಂದುಕೊಳ್ಳಬೇಕು. ಸತ್ತ್ವೋತ್ಕರ್ಷಕ್ಕೆ ಗಮನವನ್ನು ತಿರುಗಿಸಿದರೆ ಶಾಂತಿ ತಾನಾಗಿ ಲಭಿಸೀತು. ಕಜ್ಜಿಯಿಂದ ನರಳುತ್ತಿರುವವನಿಗೆ ಪುನುಗಿನಿಂದ ಗುಣವಾಗದು”. (ಪು. ೪೨೮)
ಸಾಂಪ್ರತದಲ್ಲಿ ನಮ್ಮನ್ನು ಕಾಡುತ್ತಿರುವ ಸಮಸ್ಯೆಯೊಂದಕ್ಕೆ ಡಿ.ವಿ.ಜಿ. ಇಲ್ಲಿ ಚಿರಂತನ ಪರಿಹಾರವನ್ನು ಸೂಚಿಸಿದ್ದಾರೆ. ಸಮಸ್ಯೆಯನ್ನು ಮಾತ್ರ ಎತ್ತಿ ಆಡಿ ಪರಿಹಾರವನ್ನು ಸೂಚಿಸದಿರುವುದು ಅವರ ಜಾಯಮಾನವಲ್ಲ. ಕಡೆಗೆ ಅವರು ಕೊಟ್ಟಿರುವ ದೃಷ್ಟಾಂತ ಎಂದೂ ಮರೆಯಲಾಗದ ಪರಿಣಾಮವನ್ನುಂಟುಮಾಡುತ್ತದೆ. ‘ಜೀವನಧರ್ಮಯೋಗ’ದ ಉಪಯೋಗವಿರುವುದು ಇಂಥ ವಾಕ್ಯಗಳಲ್ಲಿ.
ಇನ್ನು ಸೂಚನಪದ್ಯ, ಸಂಗ್ರಹಪದ್ಯ ಮತ್ತು ಸ್ತುತಿಪದ್ಯಗಳನ್ನು ಪರಿಶೀಲಿಸುವುದಾದರೆ, ಡಿ.ವಿ.ಜಿ. ಬಗೆಬಗೆಯ ಛಂದಸ್ಸುಗಳನ್ನು ಬಳಸಿರುವುದು ಸ್ಪಷ್ಟವಾಗುತ್ತದೆ. ಅನುಷ್ಟುಪ್‌ಶ್ಲೋಕ, ಕಂದ, ದ್ವಿಪದಿ, ಸಾಂಗತ್ಯ, ಚೌಪದಿ, ಭುಜಂಗಪ್ರಯಾತ, ಮಾಲಿನೀ, ಪಂಚಚಾಮರ, ಮಂದಾಕ್ರಾಂತಾ, ಮಲ್ಲಿಕಾಮಾಲಾ, ಮತ್ತೇಭವಿಕ್ರೀಡಿತ, ಉತ್ಪಲಮಾಲಾ, ಸ್ರಗ್ಧರಾ, ಸೀಸ ಎಂಬ ವರ್ಣವೃತ್ತಗಳೂ ಮಾತ್ರಾಜಾತಿಗಳೂ ಕರ್ಷಣಚ್ಛಂದಸ್ಸುಗಳೂ ಇಲ್ಲಿ ಬಳಕೆಯಾಗಿವೆ. ಹೆಚ್ಚಾಗಿರುವುದು ಕಂದಗಳು ಮತ್ತು ಮಾಲಿನಿಯಲ್ಲಿ ನಿಬದ್ಧವಾದ ವೃತ್ತಗಳು. ಈ ಪದ್ಯಗಳನ್ನು ಬರೆಯುವಲ್ಲಿ ಡಿ.ವಿ.ಜಿ. ಅವರ ಆಶಯ ‘ಕವನ ನೆನಪಿಗೆ ಸುಲಭ’ ಎಂಬುದೇ. ಎಲ್ಲೆಡೆ ಅವರೊಳಗಿನ ಕವಿ ಎದ್ದುತೋರುತ್ತಾನೆ; ಅವರ ಸರಸಪದ್ಯರಚನಾಸಾಮರ್ಥ್ಯ ವಿಶದವಾಗುತ್ತದೆ. ಕೆಲವು ಮಾದರಿಗಳನ್ನು ಆಸ್ವಾದಿಸಬಹುದು:
ಕಂದ-
ಹಯದಿಂದಿಳಿಯದೆ ತೋತ್ರ-
ಪ್ರಯುಕ್ತಿಯಿಂ ಸುಗಮಗೊಳಿಪ ಪಟುಸಾದಿಯವೋಲ್ |
ಜಯಿಪುದು ಕೊಲ್ಲದೆ ನಾಮಿಂ-
ದ್ರಿಯಗಳನೊಡೆತನದಿನಿಳಿಯದೂಳಿಗಕೆಂದಂ || (ಪು. ೧೫೧)
ಸಾಂಗತ್ಯ-
ಸಾತ್ತ್ವಿಕಶ್ರದ್ಧೆಯಿನಹುದು ಜೀವೋದ್ಧೃತಿ
ರಾಜಸತಾಮಸಮಧಮಂ |
ಶ್ರದ್ಧೆ ಬುದ್ಧಿಗೆ ಸ್ಫೂರ್ತಿ ಬುದ್ಧಿ ಶ್ರದ್ಧೆಗೆ ಶಕ್ತಿ
ಶ್ರದ್ಧಾಬುದ್ಧ್ಯೈಕ್ಯದೆ ಸಿದ್ಧಿ || (ಪು. ೫೦೩)
ಮಾಲಿನೀ-
ಭುವನಘಟಕುಲಾಲಂ ವಿಸ್ಮಯಾಶ್ಚರ್ಯಜಾಲಂ
ಭವರಥಗತಿಕೀಲಂ ಸರ್ವಜೀವಾನುಕೂಲಂ |
ಸಧನಕೃತಕುಚೇಲಂ ದುಷ್ಟಸಂಹಾರಕಾಲಂ
ಪ್ರಕೃತಿಪುರುಷಖೇಲಂ ನಿತ್ಯಧರ್ಮಾದಿಮೂಲಂ || (ಪು. ೩೧೬)
ಮಂದಾಕ್ರಾಂತಾ-
ವೇಣುಸ್ವಾನಸ್ಫುರದಧರದಿಂ ಶಂಖನಿರ್ಘೋಷರೌದ್ರಂ
ಗೋಪೀವಸ್ತ್ರಾಹರಣಕರದಿಂ ಚಂಡಚಕ್ರಪ್ರಹಾರಂ |
ದ್ವಂದ್ವೈಶ್ವರ್ಯಂಗಳೊಳಮವನಿಂತಿರ್ದುಮದ್ವಂದ್ವಸತ್ತ್ವಂ
ಚಾಲಿಕ್ಕೆಮ್ಮಂ ನಿಜಚರಣಕಾ ವಾಸುದೇವಾಖ್ಯತೇಜಂ || (ಪು. ೫೯೩)
ತತ್ತ್ವಸಂಗ್ರಹ
ಗೀತೆಯ ವಿಷಯಗಳನ್ನು ಡಿ.ವಿ.ಜಿ. ಗದ್ಯವಾಕ್ಯಗಳಾಗಿಯೂ ಕಂದ-ವೃತ್ತಗಳಾಗಿಯೂ ಮಾತ್ರವಲ್ಲದೆ ಕೆಲವೇ ಶಬ್ದಗಳ ಮೂಲಕ ಬಿಂದುರೂಪವಾಗಿಯೂ ಸಂಗ್ರಹಿಸಿದ್ದಾರೆ. ಅನೇಕ ಮುಖಗಳುಳ್ಳ ತತ್ತ್ವವೊಂದನ್ನು ಆನುಕ್ರಮಿಕ ಸೋಪಾನದಲ್ಲಿ ಕಂಡರಿಸಿ ಅದರ ಸಾರವನ್ನು ಕೆಲವೇ ಬಿಂದುಗಳ ಅಡಿಯಲ್ಲಿ ಹಿಡಿದಿಡುವುದು ವಿಶಿಷ್ಟವಾದ ಸಮಾಸಸಿದ್ಧಿ. ಡಿ.ವಿ.ಜಿ. ಈ ಕಲೆಯಲ್ಲಿ ನುರಿತವರು. ಈ ಬಗೆಯ ಪ್ರಸ್ತುತಿಯ ಮೂಲಕ ವಿಷಯವೊಂದರ ಎಲ್ಲ ಆಯಾಮಗಳೂ ಒಮ್ಮೆಲೆ ಮನಸ್ಸಿಗೆ ಬಂದು ಪಾರಿಪೂರ್ಣ್ಯ ಒದಗುತ್ತದೆ; ಇದರೊಟ್ಟಿಗೆ ವಿಷಯದ ಸಾರವೂ ದೊರಕುವುದರಿಂದ ಅವಗಮನ ಭಾರವೆನಿಸುವುದಿಲ್ಲ. ಇದಕ್ಕೆ ಒಂದೆರಡು ಉದಾಹರಣೆಗಳನ್ನು ಕಾಣಬಹುದು:
ಮೂರನೆಯ ಅಧ್ಯಾಯದ ವಿಷಯಗಳು: (೧) ಕರ್ಮದ ಅನಿವಾರ್ಯತೆ, (೨) ಸಕಲಭೂತಸಹಕಾರ, (೩) ಅಸಕ್ತಕರ್ಮ, (೪) ಜ್ಞಾನಿಯ ಕರ್ಮ - ಸಾಮಾನ್ಯನ ಕರ್ಮ, (೫) ಜ್ಞಾನಕರ್ಮಗಳ ಸಂಬಂಧ, (೬) ಸ್ವಧರ್ಮಕರ್ತವ್ಯತೆ. (ಪು. ೧೫೯)
ಸ್ವಧರ್ಮದ ಪ್ರಯೋಜನಗಳು: (೧) ಕಾರ್ಯಸೌಲಭ್ಯ, (೨) ಪ್ರತಿಫಲಬಾಹುಳ್ಯ, (೩) ಲೋಕೋಪಯೋಗಾಧಿಕ್ಯ, (೪) ಸಾಂಕರ್ಯಶಂಕೆಯಿಲ್ಲದ ಸ್ವಬಲಪುಷ್ಟಿ. (ಪು. ೧೮೩)
ಗೀತಾಶಾಸ್ತ್ರದ ಮೇರೆಗೆ ರೂಪಿಸಬಹುದಾದ ವಿಶ್ವಮಾನವಧರ್ಮ: (೧) ಆತ್ಮಪಾರಮ್ಯದ ಅಂಗೀಕಾರ, (೨) ಈಶ್ವರಾಧಿಕಾರದ ಅಂಗೀಕಾರ, (೩) ಧರ್ಮಾಂಗೀಕಾರ, (೪) ಭೋಗೇಚ್ಛಾಪರಿಮಿತಿ, (೫) ಲೋಕಸಂಸ್ಥಿತಿಕರ್ತವ್ಯತೆ, (೬) ಅತ್ಮೌಪಮ್ಯನೀತಿ - ದಾನ, (೭) ನಿತ್ಯಜೀವನಸಂಸ್ಕಾರ - ಯಜ್ಞ, (೮) ತತ್ತ್ವಚಿಂತನಾಭ್ಯಾಸ - ತಪಸ್ಸು, (೯) ಶರಣಾಗತಿ, (೧೦) ಭೋಗಕ್ಕಿಂತ ಶಾಂತಿಯ ಉತ್ಕೃಷ್ಟತೆ. (ಪು. ೬೦೪-೫)
ಭಗವದ್ವಿಷಯದಲ್ಲಿ ಅಂತಃಕರಣಭಾವಗಳು ಮೂರು ತೆರನಾಗಿರಬಹುದು - ಹೀಗೆ: (೧) ಸ್ವತಾಸಮರ್ಪಣೆ - ಇದರದು ಶುಶ್ರೂಷಾಸಂತೋಷ, (೨) ಸ್ವತಾಸಹಭಾಗ - ಇದರದು ಸಾಹಚರ್ಯಸಂತೋಷ, (೩) ಸ್ವತಾವಿಲಯನ - ಇದರದು ತಾದಾತ್ಮ್ಯಸಂತೋಷ. (ಪು. ೬೬೪)
ಅಧ್ಯಾಯಗಳಿಗೆ ಹೊಸ ಹೆಸರುಗಳು
ಡಿ.ವಿ.ಜಿ. ಅವರು ಪಾರಂಪರಿಕವಾಗಿ ಬಂದಿರುವ ಗೀತೆಯ ಅಧ್ಯಾಯಗಳಿಗೆ ನೂತನ ಅಭಿಧಾನಗಳನ್ನು ನೀಡಿದ್ದಾರೆ. ಅವುಗಳ ವಿವರ ಹೀಗಿದೆ:
೧. ಅರ್ಜುನವಿಷಾದಯೋಗ - ಪ್ರಾಕೃತಕಾರುಣ್ಯಯೋಗ
೨. ಸಾಂಖ್ಯಯೋಗ - ತತ್ತ್ವವಿವೇಕಯೋಗ
೩. ಕರ್ಮಯೋಗ - ಸ್ವಧರ್ಮಯೋಗ
೪. ಜ್ಞಾನಕರ್ಮಸಂನ್ಯಾಸಯೋಗ - ನಿರ್ಲೇಪಕರ್ಮಯೋಗ
೫. ಸಂನ್ಯಾಸಯೋಗ - ಕರ್ಮಜ್ಞಾನಸಾಮರಸ್ಯಯೋಗ
೬. ಧ್ಯಾನಯೋಗ - ಧ್ಯಾನಾಭ್ಯಾಸಯೋಗ
೭. ಜ್ಞಾನವಿಜ್ಞಾನಯೋಗ - ಜಗಜ್ಜೀವೇಶ್ವರಯೋಗ
೮. ಅಕ್ಷರಬ್ರಹ್ಮಯೋಗ - ಪ್ರಣವಾರ್ಥಯೋಗ
೯. ರಾಜವಿದ್ಯಾರಾಜಗುಹ್ಯಯೋಗ - ಬ್ರಹ್ಮಜಗತ್ಸಂಬಂಧಯೋಗ
೧೦. ವಿಭೂತಿಯೋಗ - ಈಶ್ವರವೈಭವಯೋಗ
೧೧. ವಿಶ್ವರೂಪದರ್ಶನಯೋಗ - ವಿಶ್ವರೂಪಸಂದರ್ಶನಯೋಗ
೧೨. ಭಕ್ತಿಯೋಗ - ಭಕ್ತಿಸೋಪಾನಯೋಗ
೧೩. ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ - ಪ್ರಕೃತಿಪುರುಷವಿವೇಕಯೋಗ
೧೪. ಗುಣತ್ರಯವಿಭಾಗಯೋಗ - ತ್ರಿಗುಣತಂತ್ರಜಾಗರೂಕಯೋಗ
೧೫. ಪುರುಷೋತ್ತಮಯೋಗ - ಅಶ್ವತ್ಥಮೂಲೋಪಾಸನಯೋಗ
೧೬. ದೈವಾಸುರಸಂಪದ್ವಿಭಾಗಯೋಗ - ದೈವಾಸುರಭೇದವಿವೇಕಯೋಗ
೧೭. ಶ್ರದ್ಧಾತ್ರಯವಿಭಾಗಯೋಗ - ಶ್ರದ್ಧಾತ್ರಯವಿವೇಕಯೋಗ
೧೮. ಮೋಕ್ಷಸಂನ್ಯಾಸಯೋಗ - ತದೇಕಶರಣತಾಯೋಗ
ಪ್ರತಿಯೊಂದು ಹೊಸ ಹೆಸರಿನಲ್ಲಿಯೂ ಒಂದು ಬಗೆಯ ಔಚಿತ್ಯವಿದೆ. ಮೊದಲ ಎರಡು ಮಾದರಿಗಳನ್ನು ಮಾತ್ರ ಗಮನಿಸಿದರೂ ಸಾಕು, ಈ ಔಚಿತ್ಯ ವೇದ್ಯವಾಗುತ್ತದೆ. ಮೊದಲ ಅಧ್ಯಾಯದ ಸಾರವಿರುವುದು ಅರ್ಜುನವಿಷಾದದಲ್ಲಿ ಎಂಬುದು ನಿಜವಾದರೂ ಆ ವಿಷಾದದ ಮೂಲ ಪ್ರಾಕೃತ ಕಾರುಣ್ಯ. ಇದನ್ನು ಯಾಮುನಮುನಿಗಳ ವಿವರಣೆಯಿಂದ ಗ್ರಹಿಸಿದ ಡಿ.ವಿ.ಜಿ. ಈ ಅಧ್ಯಾಯಕ್ಕೆ ಪ್ರಾಕೃತಕಾರುಣ್ಯಯೋಗ ಎಂಬ ಹೆಸರನ್ನಿರಿಸಿದ್ದಾರೆ. ಇನ್ನು ಗೀತೆಯ ತತ್ತ್ವಭಾಗ ಪ್ರಾರಂಭವಾಗುವುದು ಎರಡನೆಯ ಅಧ್ಯಾಯದಲ್ಲಿ. ಹೀಗಾಗಿಯೇ ಇದಕ್ಕೆ ತತ್ತ್ವವಿವೇಕಯೋಗ ಎಂಬ ಹೆಸರನ್ನಿರಿಸಿದ್ದಾರೆ. ಹಿಂದೆ ಇದ್ದ ಹೆಸರು ಈ ಅಧ್ಯಾಯವು ಸಾಂಖ್ಯದರ್ಶನವನ್ನು ಕುರಿತದ್ದಿರಬಹುದೇ ಎಂಬ ಸಂಶಯವನ್ನು ಉಂಟುಮಾಡುವಂತೆ ಇತ್ತೆಂಬುದೂ ಈಗಣ ಹೊಸ ಹೆಸರು ಇಂಥ ಸಂಶಯಕ್ಕೆ ಆಸ್ಪದ ಕೊಡುವುದಿಲ್ಲವೆಂಬುದೂ ಸ್ಪಷ್ಟ. ಇನ್ನು ಹಲವೆಡೆ ‘ವಿಭಾಗ’ ಎಂಬ ಶಬ್ದದ ಬದಲಾಗಿ ‘ವಿವೇಕ’ ಎಂಬ ಶಬ್ದವನ್ನು ಡಿ.ವಿ.ಜಿ. ಉಪಯೋಗಿಸಿದ್ದಾರೆ. ವಿಭಾಗವು ತಥ್ಯಮಾತ್ರಕ್ಕೆ ಸೀಮಿತವಾದರೆ ವಿವೇಕವು ಮೌಲ್ಯಕ್ಕೂ ವಿಸ್ತರಿಸುತ್ತದೆ. ಹೀಗಾಗಿ ಈ ಮಾರ್ಪಾಟು ಸಮುಚಿತವೆನಿಸುತ್ತದೆ. ಇನ್ನು ಭಗವಂತನ ವಿಭೂತಿಗಳನ್ನು ನಿರೂಪಿಸುವ ಅಧ್ಯಾಯಕ್ಕೆ ‘ಈಶ್ವರವೈಭವಯೋಗ’ ಎಂಬ ಹೆಸರು ಎಷ್ಟು ಸಮುಚಿತವಾಗಿದೆಯೆಂದು ಬೇರೆಯಾಗಿ ಹೇಳಬೇಕಿಲ್ಲ. ಹೀಗೆ ಡಿ.ವಿ.ಜಿ. ಮಾಡಿರುವ ಮಾರ್ಪಾಡುಗಳ ಪೈಕಿ ಒಂದೆಡೆ ‘ದರ್ಶನ’ವು ‘ಸಂದರ್ಶನ’ವಾಗಿದ್ದರೆ ಮತ್ತೊಂದೆಡೆ ‘ಸೋಪಾನ’ಶಬ್ದವೂ ಇನ್ನೊಂದೆಡೆ ‘ಜಾಗರೂಕ’ಶಬ್ದವೂ ಹೊಸತಾಗಿ ಸೇರಿವೆ. ಪ್ರಣವಾರ್ಥ, ಅಶ್ವತ್ಥಮೂಲೋಪಾಸನೆ, ತದೇಕಶರಣತೆ ಎಂಬ ಮಾರ್ಪಾಡುಗಳು ಆಯಾ ಅಧ್ಯಾಯದ ಪ್ರಮುಖ ಪ್ರಮೇಯವನ್ನು ಲಕ್ಷಿಸಿ ಮೂಡಿವೆ; ಈ ಕಾರಣಕ್ಕೆ ಯುಕ್ತವೂ ಆಗಿವೆ. ಕ್ಷೇತ್ರ-ಕ್ಷೇತ್ರಜ್ಞ ಎಂಬ ಶಬ್ದಗಳಿಗೆ ಬದಲಾಗಿ ಪ್ರಕೃತಿ-ಪುರುಷ ಎಂಬ ಶಬ್ದಗಳನ್ನು ಬಳಸಿರುವುದು ಮಾತ್ರ ಯುಕ್ತವಾಗಿ ತೋರದು.
To be continued.