ಕೃತಿವೈಶಿಷ್ಟ್ಯ
ಹೀಗೆ ಡಿ.ವಿ.ಜಿ. ಅವರು ರಚಿಸಿದ ‘ಜೀವನಧರ್ಮಯೋಗ’ ಒಂದು ಅಪೂರ್ವ ಕೃತಿ. ಸಾಂಪ್ರದಾಯಿಕ ವಾಙ್ಮಯವನ್ನು ನಮ್ಮ ಕಾಲಕ್ಕೆ ತಕ್ಕಂತೆ ಅನ್ವಯಿಸಿ ವ್ಯಾಖ್ಯಾನಿಸುವುದು ಅವರ ಸಾಹಿತ್ಯಸೃಷ್ಟಿಯ ಪ್ರಮುಖ ಆಯಾಮಗಳಲ್ಲೊಂದು. ‘ಈಶೋಪನಿಷತ್ತು’, ‘ಪುರುಷಸೂಕ್ತ’, ‘ಮನುಸ್ಮೃತಿ’ (ಇಂಗ್ಲಿಷ್) ಮುಂತಾದ ಆರ್ಷಗ್ರಂಥಗಳ ಮೇಲಣ ಅವರ ಬರೆಹಗಳು ರೂಪುಗೊಂಡದ್ದು ಈ ಹಿನ್ನೆಲೆಯಲ್ಲಿ. ಡಿ.ವಿ.ಜಿ. ಅವರು ಈ ನಿಟ್ಟಿನಲ್ಲಿ ತೋರಿದ ನಿತಾಂತ ಶ್ರದ್ಧೆ, ಪರಿಶ್ರಮದ ಸಾತತ್ಯ, ಅಂತರ್ದೃಷ್ಟಿ - ಒಂದೊಂದೂ ಅನುಪಮವಾದುದು. ಹಳತೆಲ್ಲದರಲ್ಲಿಯೂ ಹುಳುಕನ್ನೇ ಹುಡುಕದೆ, ಹೊಸತೆಲ್ಲವನ್ನೂ ಹುರುಪಿನಿಂದ ಅಪ್ಪದೆ ಎರಡರಲ್ಲಿಯ ಸದಂಶಗಳನ್ನು ಸಂಕಲಿಸುವತ್ತ ಅವರ ದೃಷ್ಟಿ ಹರಿದಿತ್ತು. “ಪಿರಿಯರ್ ಕಟ್ಟಿದ ಮನೆಯಂ ಮುರಿಯದೆ ವಿಸ್ತರಿಪರಲ್ತೆ ತತ್ಕುಲಜಾತರ್” ಎಂಬುದು ಅವರ ಆದರ್ಶ.
‘ಜೀವನಧರ್ಮಯೋಗ’ ಎಂಬ ಹೆಸರೇ ಅನನ್ಯವಾಗಿದೆ. ಜೀವನದ ಬಗೆಗೆ ಡಿ.ವಿ.ಜಿ. ಅವರಿಗಿದ್ದ ಅಮಿತ ಶ್ರದ್ಧೋತ್ಸಾಹಗಳನ್ನು ‘ಜೀವನಸೌಂದರ್ಯ ಮತ್ತು ಸಾಹಿತ್ಯ’, ‘ಬಾಳಿಗೊಂದು ನಂಬಿಕೆ’ ಮುಂತಾದ ಶೀರ್ಷಿಕೆಗಳಲ್ಲಿ ಗಮನಿಸಬಹುದು. ಪ್ರಕೃತ ಕೃತಿಯ ಹೆಸರೂ ಇದಕ್ಕೆ ಒಳ್ಳೆಯ ನಿದರ್ಶನ. ಇನ್ನು ಶೀರ್ಷಿಕೆಯಲ್ಲಿರುವ ಇನ್ನೆರಡು ಪದಗಳು - ಧರ್ಮ ಮತ್ತು ಯೋಗ. ಇವು ಭಗವದ್ಗೀತೆಯಲ್ಲಿ ಮತ್ತೆ ಮತ್ತೆ ಬಳಕೆಯಾಗಿರುವ ಪದಗಳು; ಗೀತಾಭ್ಯಾಸಿಗಳ ಅವಧಾನವನ್ನು ಅಧಿಕವಾಗಿ ಅಪೇಕ್ಷಿಸುವ ಪದಗಳು. ಇವನ್ನು ಡಿ.ವಿ.ಜಿ. ಅವರ ವಿವರಣೆಯ ಮೂಲಕವೇ ಮನಗಂಡರೆ ಶೀರ್ಷಿಕೆಯ ಆಶಯ ಸ್ಫುಟವಾದೀತು. ಅವರ ಪ್ರಕಾರ, “ಲೋಕಜೀವನದ ಸಮ್ಯಗ್‌ವಿಧಾನವೇ ಧರ್ಮ” (ಪು. ೪೫). “ಮನುಷ್ಯಜೀವಿ ತನ್ನ ದೈವಿಕಾಂಶವನ್ನು ಜಗತ್ಸೇವೆಯಲ್ಲಿ ತೇದು ತೇದು ಸವೆಯಿಸಿ, ಅಂತರಾತ್ಮವನ್ನು ಪರಮಾತ್ಮನಲ್ಲಿ ಸೇರಿಸುವುದೇ ಯೋಗ ... ಜಗತ್ಕರ್ಮಗಳನ್ನು ಕರ್ಮಫಲಸಂಗವಿಲ್ಲದಂತೆ ಮಾಡುವುದು” (ಪು. ೨೭೨). ಹೀಗೆ ಕಂಡಾಗ, ಪ್ರತಿಯೊಬ್ಬರೂ ಒಳ್ಳೆಯ ಬದುಕನ್ನು ಬಾಳಿ ತಮಗೂ ಇತರರಿಗೂ ಒಳಿತಾಗುವಂತೆ ನಡೆದುಕೊಳ್ಳುವ ವಿಧಾನವೇ ಧರ್ಮವೆಂದೂ ಅದಕ್ಕಿರುವ ಸಾಧನೋಪಾಯ ಫಲಾಭಿಸಂಧಿಯಿಲ್ಲದೆ ನಡಸುವ ಕರ್ಮವೆಂದೂ ತಿಳಿಯುತ್ತದೆ. ಆದುದರಿಂದ ‘ಜೀವನಧರ್ಮಯೋಗ’ದ ತಾತ್ಪರ್ಯವಿರುವುದು ಅನಾಸಕ್ತಿಯೋಗ, ನಿರ್ಲೇಪಯೋಗ ಎಂದೆಲ್ಲ ಕೀರ್ತಿತವಾದ, ಗೀತೆಯ ಹೃದಯಭಾಗವಾದ ಕರ್ಮಯೋಗದಲ್ಲಿಯೇ ಎಂದು ನಿಶ್ಚಯವಾಗುತ್ತದೆ.
ಶೀರ್ಷಿಕೆಯನ್ನು ಮತ್ತೂ ಹಲವು ಭೂಮಿಕೆಗಳಲ್ಲಿ ಅರ್ಥೈಸಲು ಅವಕಾಶವಿದೆ. ಅವುಗಳಲ್ಲಿ ಒಂದನ್ನು ಈಗ ಕಾಣೋಣ. ಜೀವನ ನಡಸುವ ಜೀವಿಗಳು ಅನಂತವಾಗಿರುವುದರಿಂದ, ಪ್ರತಿಯೊಂದು ಜೀವಿಗೂ ಸಹಜವಾದ, ವಿಶಿಷ್ಟವಾದ ಧರ್ಮಚ್ಛಾಯೆಗಳು ಇರುವುದರಿಂದ, ಜೀವನಧರ್ಮ ಎಂಬುದು ಒಂದು ಏಕಾಂಡವಾದ, ಬದಲಿಸಲಸದಳವಾದ ಪದಾರ್ಥವಾಗಿರದೆ ಗತಿಶೀಲವಾದ ಪರಿಕಲ್ಪನೆಯಾಗಿದೆ. ಹೀಗೆ ಬಗೆಬಗೆಯ ಗೊತ್ತು-ಗುರಿಗಳನ್ನೂ ತೋರಿಕೆ-ಬಾಳಿಕೆಗಳನ್ನೂ ಹೊಂದಿರುವ ಜೀವನಧರ್ಮಗಳಲ್ಲಿ ಪರಸ್ಪರ ಸಮನ್ವಯವನ್ನು ಸಾಧಿಸಲು ನಮಗೆ ಲಭ್ಯವಿರುವ ಸೂತ್ರವೇ ಯೋಗ. ಈ ಹಿನ್ನೆಲೆಯಲ್ಲಿ ಜೀವನಧರ್ಮಯೋಗ ಎಂದರೆ ಆಪಾತತಃ ಭಿನ್ನಭಿನ್ನಗಳೆಂದು ತೋರುವ ವಸ್ತು-ವ್ಯಕ್ತಿಗಳ ಆಳದಲ್ಲಿ ಹುದುಗಿರುವ ಐಕ್ಯದ ಹುರುಳನ್ನು ಹುಡುಕವ ಹವಣೆಂದು ವಿಶದವಾಗುತ್ತದೆ.
ಡಿ.ವಿ.ಜಿ. ಅವರೇ ಹೇಳುವಂತೆ ಇಲ್ಲಿ ಮೂಲದ ಶಬ್ದಗಳನ್ನು ಹಿಗ್ಗಿಸಿ, ಜಗ್ಗಿಸಿ, ಎಳೆದಾಡದೆ ಋಜುವಾದ ಅರ್ಥವನ್ನು ಗ್ರಹಿಸಲಾಗಿದೆ. ಹೀಗಾಗಿಯೇ ಈ ಗ್ರಂಥಕ್ಕೆ ‘ಶ್ರೀಮದ್ಭಗವದ್ಗೀತಾತಾತ್ಪರ್ಯ’ ಎಂಬ ಮತ್ತೊಂದು ಹೆಸರೂ ಇದೆ. ತಾತ್ಪರ್ಯಗ್ರಹಣಕ್ಕೆ ಎಲ್ಲಕ್ಕಿಂತ ಮಿಗಿಲಾಗಿ ಬೇಕಾದುದು ಆರ್ಜವವಷ್ಟೆ.
ಗೀತೆಯು ಪ್ರಧಾನವಾಗಿ ಸಾಧನಶಾಸ್ತ್ರವೆಂದು ಡಿ.ವಿ.ಜಿ. ಮನಗಂಡಿದ್ದರೆಂದು ಹಿಂದೆಯೇ ಗಮನಿಸಿದ್ದೇವೆ. ಹೀಗಾಗಿ ಅವರ ಪಾಲಿಗೆ ಅದು ಬರಿಯ ಮೋಕ್ಷಶಾಸ್ತ್ರವಾಗದೆ ಜೀವನಶಾಸ್ತ್ರವೆನಿಸಿತು. ಅವರ ಮಾತುಗಳನ್ನೇ ಪರಿಶೀಲಿಸುವುದಾದರೆ, “ಭಗವದ್ಗೀತೆಯನ್ನು ಪೂರ್ವಿಕರು ಮೋಕ್ಷಶಾಸ್ತ್ರ ಎಂದು ಕರೆದಿದ್ದಾರೆ. ಅದು ಮೋಕ್ಷಶಾಸ್ತ್ರ ಹೌದು; ಅದರ ಜೊತೆಗೆ ಜೀವನಶಾಸ್ತ್ರವೂ ಹೌದು ... ಭಗವದ್ಗೀತೆಯ ಮೋಕ್ಷೋಪದೇಶದಿಂದ ಪ್ರಯೋಜನ ಪಡೆಯಬಲ್ಲವರು ಒಬ್ಬರಿದ್ದರೆ ಅದರ ಸಾಮಾನ್ಯ ಧರ್ಮೋಪದೇಶದಿಂದ ಪ್ರಯೋಜನ ಪಡೆಯಬಲ್ಲವರು ಒಂಭೈನೂರ ತೊಂಭತ್ತೊಂಭತ್ತು ಮಂದಿ ಇರುತ್ತಾರೆ ... ಪ್ರತಿಯೊಬ್ಬನಿಗೂ ಪ್ರತಿಯೊಬ್ಬಳಿಗೂ ಜೀವನದಲ್ಲಿ ಒಂದು ಗೌರವ, ಕರ್ತವ್ಯದ ವಿಷಯದಲ್ಲಿ ಒಂದು ಉತ್ಸಾಹ, ಆಪತ್ಕಾಲದಲ್ಲಿ ಧೈರ್ಯ, ಸಂಶಯ ಹುಟ್ಟಿದಾಗ ನೆಮ್ಮದಿಯನ್ನು ಉಂಟುಮಾಡುವ ನಂಬಿಕೆ - ಇವು ಗೀತೆಯಿಂದ ನಾವು ಸಂಪಾದಿಸಿಕೊಳ್ಳಬಹುದಾದ ಸಂಪತ್ತು” (ಪು. ೩೯-೪೦).
ಹೀಗೆ ಗೀತೆಯ ಉದ್ದೇಶವನ್ನು ವಿವರಿಸಿದ ಬಳಿಕ ಅದರ ಪ್ರಯೋಜನವನ್ನು ಡಿ.ವಿ.ಜಿ. ವಿವೇಕ, ಶ್ರದ್ಧೆ ಮತ್ತು ಸಮಾಧಾನ ಎಂಬ ಮಾತುಗಳಲ್ಲಿ ಸಂಗ್ರಹಿಸಿದ್ದಾರೆ (ಪು. ೪೫). ಬುದ್ಧಿ-ಭಾವಗಳ ಮೊತ್ತವಾದ ಮಾನವನಿಗೆ ಇವೆರಡು ನೆಲೆಗಳ ಉತ್ಕರ್ಷದಶೆಯನ್ನು ಕಾಣಲಾಗುವುದು ವಿವೇಕ ಮತ್ತು ಶ್ರದ್ಧೆಗಳಲ್ಲಿ. ವಿವೇಕವು ಬುದ್ಧಿಕಾರ್ಯವಾದರೆ, ಶ್ರದ್ಧೆಯು ಭಾವಕಾರ್ಯ. ಇವೆರಡರ ಅವಿಕಲ ಸಂಯೋಗದಿಂದ ದೊರೆಯಬೇಕಾದುದು ಸಮಾಧಾನ. ಹೀಗೆ ಡಿ.ವಿ.ಜಿ. ಅವರ ಸಾರಗ್ರಾಹಿತೆ ಮಹೋನ್ನತ ಪರಂಪರೆಯೊಂದರ ಸಾರವನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿಕೊಡುತ್ತದೆ.
ಆಧುನಿಕ ಕಾಲದಲ್ಲಿ ಗೀತೆಯನ್ನು ಕುರಿತು ಬಂದ ವಿವರಣೆಗಳ ಪೈಕಿ ಮಳೂರು ರಂಗಾಚಾರ್ಯರ ಗೀತೋಪನ್ಯಾಸಗಳು (೧೯೧೪), ಬಾಲಗಂಗಾಧರ ಟಿಳಕರ ‘ಗೀತಾರಹಸ್ಯ’ (೧೯೧೫) ಮತ್ತು ಅರವಿಂದರ ಗೀತಾಪ್ರಬಂಧಗಳು (೧೯೨೨) ಪ್ರಮುಖ. ಇವುಗಳೊಡನೆ ಹೋಲಿಸಿನೋಡಿದರೂ ‘ಜೀವನಧರ್ಮಯೋಗ’ದ ಅನನ್ಯತೆ ನಿಚ್ಚಳವಾಗುತ್ತದೆ. ‘ಗೀತಾರಹಸ್ಯ’ವು ಭಾರತದ ಸ್ವಾತಂತ್ರ್ಯಸಂಗ್ರಾಮಕ್ಕೆ ಕೊಟ್ಟ ಸ್ಫೂರ್ತಿ ಹಿರಿದಾದರೂ ಗೀತೆಯ ವಿವೃತಿಯಾಗಿ ಅದೊಂದು ಏಕದೇಶೀಯ ಗ್ರಂಥವೆಂದೇ ಹೇಳಬೇಕಾಗುತ್ತದೆ. ಅದರ ಗಮನವೆಲ್ಲ ಕರ್ಮ ಎಂಬ ಒಂದು ತತ್ತ್ವದತ್ತ ಹರಿದಿದೆ. ಅರವಿಂದರ ಪ್ರಬಂಧಗಳು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗದಂತಿದ್ದು ಮೂಲಗ್ರಂಥವನ್ನು ವಿವರಿಸುವುದಕ್ಕಿಂತ ಹೆಚ್ಚಾಗಿ ತನ್ನದಾದ ಆನುಭಾವಿಕ ಆಯಾಮವನ್ನೇ ಅನಾವರಣಗೊಳಿಸಹೊರಡುತ್ತದೆ. ಡಿ.ವಿ.ಜಿ. ಅವರ ಕೃತಿಗೆ ಹತ್ತಿರ ಬರುವಂಥದ್ದು ರಂಗಾಚಾರ್ಯರ ಉಪನ್ಯಾಸಗಳೇ. ಆದರೆ ಇವು ಅತಿವಿಸ್ತೃತವಾಗಿವೆ; ಅಭ್ಯಾಸಿಗಳಿಗೆ ಅನುಕೂಲಿಸದಂತೆ ವಿಭಾಗವರ್ಗೀಕರಣಗಳಿಲ್ಲದೆ ಸಾಗಿವೆ. ಜೊತೆಗೆ ಜೀವನಾನ್ವಯದೃಷ್ಟಿ ಇಲ್ಲಿರುವಷ್ಟು ಸ್ಫುಟವಾಗಿ ಅಲ್ಲಿಲ್ಲ. ಇವರಲ್ಲದೆ ಪರಮಹಂಸ ಯೋಗಾನಂದ, ಸ್ವಾಮಿ ಚಿನ್ಮಯಾನಂದ, ಸ್ವಾಮಿ ದಯಾನಂದಸರಸ್ವತೀ ಮೊದಲಾಗಿ ನೂರಾರು ಜನ ಗೀತಾವಿವೃತಿಗಳನ್ನು ರಚಿಸಿರುವರಾದರೂ ಆ ಯಾವ ಕೃತಿಯಲ್ಲಿಯೂ ‘ಜೀವನಧರ್ಮಯೋಗ’ದ ಸೌಲಭ್ಯವಾಗಲಿ, ಒಳನೋಟಗಳಾಗಲಿ ಇಲ್ಲ. ಜೊತೆಗೆ ಇಲ್ಲಿಯ ಭಾಷೆಗಿರುವ ಕಾವ್ಯಾತ್ಮಕತೆ, ಇಲ್ಲಿ ಡಿ.ವಿ.ಜಿ. ಅವರು ನಿತ್ಯಜೀವನದ ಸಂದರ್ಭಗಳಿಂದ ಆರಿಸಿಕೊಟ್ಟಿರುವ ಉದಾಹರಣೆಗಳು, ಇಲ್ಲಿಯ ತಿಳಿಯಾದ ಹಾಸ್ಯ - ಈ ಗುಣಗಳು ಅನ್ಯತ್ರ ದುರ್ಲಭ.
ಇಂಥ ಶ್ರೇಷ್ಠ ಗ್ರಂಥಕ್ಕೆ ೧೯೬೭ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದದ್ದು ಪ್ರಶಸ್ತಿಯ ಘನತೆಯನ್ನೇ ಹೆಚ್ಚಿಸಿದೆ.
(‘ಜೀವನಧರ್ಮಯೋಗ’ಕ್ಕೆ ಪೂರಕವಾದುದು ಡಿ.ವಿ.ಜಿ. ಅವರದ್ದೇ ‘ಕಾವ್ಯಸ್ವಾರಸ್ಯ’ ಕೃತಿಯಲ್ಲಿ ಸೇರಿರುವ ‘ಮಹಾಭಾರತದ ಪಾತ್ರಗಳು’ ಎಂಬ ಪ್ರಬಂಧ. ಇಲ್ಲಿಯ ಎಷ್ಟೋ ವಿಚಾರಗಳ ಸಂಗ್ರಹಣ-ವಿಸ್ತರಣಗಳು ಅಲ್ಲಿ ಕಂಡುಬರುತ್ತವೆ. ವಸ್ತುತಃ ಡಿ.ವಿ.ಜಿ. ಅವರು ಪ್ರಸ್ತುತ ಗ್ರಂಥಕ್ಕೆ ಅನುಬಂಧವಾಗಿ ಮಹಾಭಾರತದ ಪಾತ್ರಗಳನ್ನು ಕುರಿತು ಬರೆದಿದ್ದರು. ಆದರೆ ಕಾರಣಾಂತರಗಳಿಂದ ಆ ರಚನೆಯು ಇಲ್ಲಿ ಸೇರಲಾಗಲಿಲ್ಲ.)
ಆಕೃತಿ
‘ಜೀವನಧರ್ಮಯೋಗ’ವು ಭಗವದ್ಗೀತೆಯಂತೆಯೇ ಮೌಖಿಕವಾಗಿ ರೂಪುಗೊಂಡ ಕೃತಿ. ಡಿ.ವಿ.ಜಿ. ಅವರು ಇದನ್ನು ಒಂದು ಶಾಸ್ತ್ರಗ್ರಂಥವಾಗಿ ರೂಪಿಸಬೇಕೆಂಬ ಉದ್ದೇಶದಿಂದ ಜತನವಾಗಿ ಕುಳಿತು ಬರೆಯಲಿಲ್ಲ. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಅವರು ನಡಸುತ್ತಿದ್ದ ಅಧ್ಯಯನಗೋಷ್ಠಿಯಲ್ಲಿ ಆಸಕ್ತರಾದ ಕೇಳುಗರೊಡನೆ ಗೀತೆಯ ಬಗೆಗಿನ ತಮ್ಮ ಮನೋಗತವನ್ನು ಹಂಚಿಕೊಂಡರು. ಅದು ಕಾಲಾಂತರದಲ್ಲಿ ಈ ಗ್ರಂಥದ ರೂಪವನ್ನು ತಾಳಿತು. ಈ ಪ್ರಕ್ರಿಯೆಯನ್ನು ಅವರೇ ಹೀಗೆ ವಿವರಿಸಿದ್ದಾರೆ: “ಗೀತಾಗ್ರಂಥವನ್ನು ಮೊದಲ ಸಾರಿ ಶ್ಲೋಕಶ್ಲೋಕವಾಗಿ ತೆಗೆದುಕೊಂಡು ಅರ್ಥ ಗುರುತುಮಾಡಿಕೊಳ್ಳುತ್ತ ಕಡೆಯವರೆಗೂ ನೋಡಿದ್ದಾಯಿತು ... ಅದಾದಮೇಲೆ ಒಂದೊಂದು ಅಧ್ಯಾಯವನ್ನು, ಅಥವಾ ಅಧ್ಯಾಯಖಂಡವನ್ನು, ಒಂದೊಂದು ದಿವಸ (ಅಥವಾ ಒಂದೊಂದು ಸಂಜೆ) ವಿಚಾರಕ್ಕೆ ತೆಗೆದುಕೊಂಡು ಮುಖ್ಯಾಂಶಕ್ಕೆ ಹೆಚ್ಚು ಗಮನಕೊಟ್ಟು ಪುನರಾವರ್ತನೆ ಮಾಡಿದ್ದಾಯಿತು. ನಡುನಡುವೆ ಚರ್ಚೆಗಳೂ ಪ್ರಶ್ನೋತ್ತರಗಳೂ ನಡೆಯುತ್ತಿದ್ದವು ... ಬಳಿಕ ಅದನ್ನು ಮಿತ್ರರೊಬ್ಬರು ... ಕಾಗದಕ್ಕಿಳಿಸಿ ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಪ್ರಕಟಮಾಡಿಸಿದರು ... ಆ ಪ್ರಕಟನೆಯೇ ಈ ಗ್ರಂಥಕ್ಕೆ ಆಧಾರಪ್ರತಿ” (ಪು. ೧೦).
ಹೀಗೆ ಪ್ರಶ್ನೋತ್ತರಗಳನ್ನು ಒಳಗೊಂಡ ಸಂವಾದದಂತೆ ಆಕೃತಿಗೊಂಡ ‘ಜೀವನಧರ್ಮಯೋಗ’ ಮೌಖಿಕ ಅಭಿವ್ಯಕ್ತಿಗೆ ಸಹಜವಾದ ಅನೌಪಚಾರಿಕತೆಯನ್ನು ಉಳಿಸಿಕೊಂಡೇ ಶಾಸ್ತ್ರೀಯ ವಿಚಾರಗಳ ಪ್ರತಿಪಾದನೆಗೆ ಆವಶ್ಯಕವಾದ ನಿಷ್ಕೃಷ್ಟತೆಯನ್ನು ಸಾಧಿಸಿರುವುದು ಒಂದು ಅಚ್ಚರಿ. ಇದನ್ನು ಸಾಧ್ಯವಾಗಿಸುವುದರಲ್ಲಿ ಡಿ.ವಿ.ಜಿ. ಅವರ ವಿಶದವೂ ವ್ಯವಸ್ಥಿತವೂ ಆದ ಆಲೋಚನಕ್ರಮ ಮತ್ತು ಅಭಿವ್ಯಕ್ತಿ ಮಿಗಿಲಾಗಿ ಸಹಕರಿಸಿವೆ. ಈ ಗ್ರಂಥದ ನಿರ್ಮಿತಿಯಲ್ಲಿ ಆದ್ಯಂತ ಕೈಂಕರ್ಯವನ್ನು ಸಲ್ಲಿಸಿದ ನಾಡೋಜ ಎಸ್. ಆರ್. ರಾಮಸ್ವಾಮಿ ಅವರು ಹೇಳುವಂತೆ, ಡಿ.ವಿ.ಜಿ. ಅವರ ಬಾಯಿಂದ ಅಪ್ರಯತ್ನವಾಗಿ ಹೊಮ್ಮಿದ ಮಾತುಗಳೇ ತೊಂಬತ್ತಕ್ಕೂ ಹೆಚ್ಚು ಭಾಗ ಗ್ರಂಥಸ್ಥವಾಗಿ ಉಳಿದಿವೆ. ಇದನ್ನು ಪರಿವಿಭಾವಿಸಿದಾಗ ಡಿ.ವಿ.ಜಿ. ಅವರ ಅಪ್ರಕಂಪ್ಯಬಂಧುರವಾದ ನುಡಿನಡಿಗೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ‘ಜೀವನಧರ್ಮಯೋಗ’ ನಿಜವಾಗಿ ಕನ್ನಡದ ಶಾಸ್ತ್ರೀಯ ಗದ್ಯವನ್ನು ರೂಪಿಸಿರುವ ಕೃತಿಗಳಲ್ಲೊಂದು.
ಇನ್ನು ಗ್ರಂಥದ ವಿನ್ಯಾಸವಿಧಾನವನ್ನು ಗಮನಿಸುವುದಾದರೆ, ಇಲ್ಲಿ ಮೊದಲಿಗೆ ವಿವರವಾದ ವಿಷಯಸೂಚಿಕೆಯೂ ವಿಸ್ತಾರವಾದ ಭೂಮಿಕೆಯೂ ಇವೆ. ಅನಂತರ ಗೀತೆಯ ಹದಿನೆಂಟು ಅಧ್ಯಾಯಗಳು ಅನುಕ್ರಮದಲ್ಲಿ ಆಕೃತಿಗೊಂಡಿವೆ. ಇವು ಮೂಲಶ್ಲೋಕಗಳು, ಸೂಚನಪದ್ಯಗಳು, ಸಾರಾಂಶ (ಗದ್ಯ), ವ್ಯಾಖ್ಯಾನ ಮತ್ತು ಸಂಗ್ರಹಪದ್ಯಗಳು ಎಂಬ ವಿಭಾಗಗಳನ್ನು ಹೊಂದಿವೆ. ಗೀತೆಯ ಆರು-ಆರು ಅಧ್ಯಾಯಗಳು ಪ್ರತ್ಯೇಕವಾದ ‘ಷಟ್ಕ’ಗಳೆಂಬ ಸಾಂಪ್ರದಾಯಿಕ ಪರಿಗಣನೆಯನ್ನು ಆದರಿಸಿರುವ ಡಿ.ವಿ.ಜಿ. ಅಂಥ ಪ್ರತಿಷಟ್ಕದ ಕೊನೆಗೂ ಸಂಗ್ರಹಪದ್ಯಗಳನ್ನು ರಚಿಸಿದ್ದಾರೆ. ಗೀತಾಧ್ಯಯನಕ್ಕೆ ಉಪಸ್ತಂಭಕವಾದ ಹತ್ತು ಪರಿಶಿಷ್ಟಗಳು ಗ್ರಂಥದ ಕೊನೆಗೆ ಸೇರಿದ್ದು, ಇವು ಮತತ್ರಯವಿಚಾರ, ಅಧ್ಯಾರೋಪ-ಅಪವಾದ, ಭಕ್ತಿ-ಕರ್ಮ-ಜ್ಞಾನ, ಮೋಕ್ಷಸುಖ, ಮತಧರ್ಮ, ಕಾಲಸ್ವರೂಪ, ಗೀತೆಯ ಗೇಯತ್ವ, ಸಂಕೀರ್ಣ ಟಿಪ್ಪಣಿಗಳು, ಭಗವದ್ಗೀತಾ-ರಾಮಕಥಾಸಮನ್ವಯ (ಪದ್ಯಗಳು), ಶ್ರೀಪಾರ್ಥಸಾರಥಿಕೀರ್ತನಂ (ಗೇಯ) ಎಂಬ ವಿವರಣಾಂಶಗಳನ್ನು ಒಳಗೊಂಡಿವೆ. ಮುಖ್ಯ ವಿಷಯಗಳ ಮತ್ತು ಉದಾಹೃತಗಳ ಅಕಾರಾದಿ ಸೂಚಿಗಳಿಂದ ಗ್ರಂಥವು ಸಂಪನ್ನವಾಗಿದೆ. ಮಧ್ಯೆ ಮಧ್ಯೆ ಸೇರಿರುವ ಹತ್ತು ಚಿತ್ರಗಳು ಕೃತಿಯ ಸೊಬಗನ್ನು ಹೆಚ್ಚಿಸಿವೆ.
ಪ್ರತಿಯೊಂದು ಗ್ರಂಥಭಾಗಕ್ಕೂ ತನ್ನದೇ ಆದ ಸ್ವಾರಸ್ಯವಿದೆ, ಸಾರ್ಥಕ್ಯವಿದೆ. ಇವನ್ನು ಕ್ರಮವಾಗಿ ಪರಿಶೀಲಿಸಬಹುದು.
ಭೂಮಿಕೆ
ಡಿ.ವಿ.ಜಿ. ಅವರು ಈ ಗ್ರಂಥವನ್ನು ಸಾಮಾನ್ಯಜನರಿಗಾಗಿ ರಚಿಸಿರುವ ಕಾರಣ ಗೀತಾಧ್ಯಯನಕ್ಕೆ ಮುನ್ನ ತಿಳಿದಿರಬೇಕಾದ ಕೆಲವು ಶಾಸ್ತ್ರೀಯ ಪ್ರಮೇಯಗಳನ್ನು ಮೊದಲಿಗೆ ಸರಳವಾಗಿ, ಸಾಕಲ್ಯದಿಂದ ನಿರೂಪಿಸಿದ್ದಾರೆ. ಈ ಭಾಗವು ಸ್ವಯಂಪೂರ್ಣವಾಗಿದ್ದು ಯಾವುದೇ ವೇದಾಂತಗ್ರಂಥವನ್ನು ಅರಿತುಕೊಳ್ಳಲು ಒಳ್ಳೆಯ ಪ್ರವೇಶವನ್ನು ಒದಗಿಸುತ್ತದೆ. ಆರಂಭದಲ್ಲಿ ಸಂಸ್ಕೃತ ಮತ್ತು ಕನ್ನಡದಲ್ಲಿ ರಚಿತವಾದ ಮೂವತ್ತು ಪದ್ಯಗಳಲ್ಲಿ ಮಂಗಳಾಚರಣೆಯನ್ನೂ ವಿಷಯೋಪಸ್ಥಾಪನೆಯನ್ನೂ ಮಾಡಿ ಅಧ್ಯಯನಾರಂಭಕ್ಕೆ ಬೇಕಾದ ಪರಿವೇಷವನ್ನು ಕಲ್ಪಿಸಿದ್ದಾರೆ, ಡಿ.ವಿ.ಜಿ. ಇಲ್ಲಿ ಅವರು ಶ್ರೀಕೃಷ್ಣನನ್ನು ‘ಪೃಥಗ್ಜೀವಸ್ವಬಂಧು’ವೆಂದೂ (ಸಂ., ೨) ಜಗದ್ರಣಾಂಗಣದಲ್ಲಿ ಜಯದ ಕಾರಣವೆಂದೂ (ಸಂ., ೬) ‘ಮಾನವಹೃನ್ಮರ್ಮದ ವಿಜ್ಞಾನಿ’ ಎಂದೂ (ಕ., ೭) ಕೀರ್ತಿಸಿರುವುದು ಬರಿಯ ಸ್ತುತಿಯಾಗದೆ ತತ್ತ್ವಸ್ಫೋರಕವೂ ಆಗಿದೆ.
ತಾಯಿಯಲ್ಲಿ ಮಗುವಿಗೂ ವೈದ್ಯನಲ್ಲಿ ರೋಗಿಗೂ ಯಾವ ಬಗೆಯ ನಂಬಿಕೆಯಿರುತ್ತದೋ ಅದೇ ಬಗೆಯ ವಿಶ್ವಾಸ ಗೀತೆಯ ಬಗೆಗೆ ಓದುಗರಲ್ಲಿ ಇರಬೇಕು ಎಂದು ಒಕ್ಕಣಿಸುವ ಡಿ.ವಿ.ಜಿ., “ಮನಸ್ಸಮಾಧಾನ, ಸಾವಧಾನ - ಈ ಎರಡೂ ಗೀತಾಭ್ಯಾಸಿಗಳಿಗೆ ಮೊದಲು ಇರಬೇಕಾದ ಗುಣಗಳು” ಎಂದು ಸ್ಪಷ್ಟಪಡಿಸಿದ್ದಾರೆ (ಪು. ೪೧). ಅನಂತರ ದ್ವೈತಾದ್ವೈತಾದಿ ವಿಚಾರಗಳಲ್ಲಿ ಜಿಜ್ಞಾಸುವಿನ ಸ್ವಾನುಭವವೇ ಮುಖ್ಯವೆಂದು ಹೇಳಿ, ಸತ್ಯವು ಒಂದು ಆದರೆ ಸತ್ಯದರ್ಶನ ಸಾವಿರವಾದುದರಿಂದ ಎಲ್ಲ ಮತಗಳಿಗೂ ಅವಿರೋಧವಾಗಿ ಗ್ರಂಥವನ್ನು ಗ್ರಹಿಸಲು ಸಾಧ್ಯವೆಂದು ನಿರೂಪಿಸಿದ್ದಾರೆ. ಆ ಬಳಿಕ ಗೀತೆಯು ಮಿತ್ರಸಂವಾದದಂತೆ ಆಕೃತಿಗೊಂಡ ಕಾರಣ, ಅಲ್ಲಿ ಪುನರುಕ್ತಿಗಳೂ ಅಧ್ಯಾಹಾರಗಳೂ ಸಹಜವೆಂದು ಅರುಹಿ ಇಂಥ ಗ್ರಂಥಗಳನ್ನು ಓದಬೇಕಾದ ಕ್ರಮವನ್ನು ವಿಶದಪಡಿಸಿದ್ದಾರೆ. ಗೀತೆಯು ಶಾಸ್ತ್ರವೂ ಹೌದು, ಕಾವ್ಯವೂ ಹೌದು ಎನ್ನುತ್ತ ಪೂರ್ವವ್ಯಾಖ್ಯಾನಗಳಿಗಿಂತ ತಮ್ಮ ವಿವರಣೆ ಹೇಗೆ ಬೇರೆಯಾಗಿದೆ ಎಂಬುದನ್ನು ತೋರ್ಪಡಿಸಿದ್ದಾರೆ.
ಸಾಮಾನ್ಯವಾಗಿ ಗೀತಾಧ್ಯೇತೃಗಳ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಈ ಭಾಗವು ಸಮಾಧಾನವನ್ನು ಒದಗಿಸುತ್ತದೆ. ಯಜ್ಞದಿಂದ ಮಳೆ, ಬೆಳೆ ಆಗುತ್ತವೆ ಎಂಬುದನ್ನೂ ದೇವಯಾನ-ಪಿತೃಯಾಣಗಳ ವಿಷಯವನ್ನೂ ನಂಬದಿದ್ದ ಪಕ್ಷದಲ್ಲಿಯೂ ಗೀತೆಯ ಪ್ರಧಾನ ತತ್ತ್ವಕ್ಕೆ ಯಾವ ಚ್ಯುತಿಯೂ ಉಂಟಾಗುವುದಿಲ್ಲ ಎಂಬುದು ಡಿ.ವಿ.ಜಿ. ಅವರ ಸ್ಪಷ್ಟವಾದ ಅಭಿಪ್ರಾಯ (ಪು. ೪೯). ಅಂತೆಯೇ ರಣರಂಗದಲ್ಲಿ ಸಂವಾದಕ್ಕೆ ಅವಕಾಶವಿತ್ತೆ? ಈ ಮಾತುಗಳನ್ನು ಇದೇ ರೂಪದಲ್ಲಿ ಕೃಷ್ಣಾರ್ಜುನರು ಆಡಿದರೆ? ಎಂಬ ಪ್ರಶ್ನೆಗಳನ್ನು ಎತ್ತಿಕೊಂಡು ಇವೆಲ್ಲ ಅಸಂಗತವೆಂದು ಸ್ಪಷ್ಟಪಡಿಸಿ ಸಾಮಾನ್ಯಪ್ರಜ್ಞೆಗೆ ನಿಲುಕುವ ಸೂಕ್ತ ಉತ್ತರಗಳನ್ನು ನೀಡಿದ್ದಾರೆ. ಅನಂತರ ಅಧಿಕಾರಿಭೇದ, ಅನುಬಂಧಚತುಷ್ಟಯ, ಪುರುಷಾರ್ಥಚತುಷ್ಟಯ, ಧರ್ಮ, ತರ್ಕ ಎಂಬೆಲ್ಲ ಮೂಲಭೂತ ಶಾಸ್ತ್ರಸಂಗತಿಗಳನ್ನು ವಿವರಿಸಿ ಬರಿಯ ಪಾರಾಯಣ ಸಾಲದೆಂದೂ ಗೀತಾತತ್ತ್ವವು ದೀರ್ಘಕಾಲದ ಮನನವನ್ನು ಬೇಡುತ್ತದೆಯೆಂದೂ ಒತ್ತಿಹೇಳಿದ್ದಾರೆ.
ಇಲ್ಲಿ ಡಿ.ವಿ.ಜಿ. ಅವರು ಕಾಣಿಸಿರುವ ಕೆಲವು ಹೊಳಹುಗಳು ವಿಶಿಷ್ಟವಾಗಿವೆ:
“ಆಶಾಪರಿಮಿತಿ, ಸಂಯಮ, ತತ್ತ್ವಜ್ಞಾನೇಚ್ಛೆ - ಇವು ಗೀತಾವ್ಯಾಸಂಗಿಗೆ ಇರಬೇಕಾದ ಅಂತರಂಗಸಿದ್ಧತೆ”. (ಪು. ೫೩)
“ಮಿತಿಯೆಂಬುದು ವಸ್ತುಸತ್ಯಕ್ಕೆ ಸಲ್ಲುವ ಗೌರವ”. (ಪು. ೫೬)
“... ಜ್ಞಾನವೆಂಬ ವಸ್ತು ಒಂದು ಸಂಕಲ್ಪಬಿಂದುವಲ್ಲ, ಒಂದು ಕಾರ್ಯವಿಧಾನ; ಒಂದು ಚುಕ್ಕೆಯಲ್ಲ, ಒಂದು ಗೆರೆ. ಅದರಲ್ಲಿ ಅನೆಕ ಸ್ಥಾನಮಟ್ಟಗಳುಂಟು. ಅದರ ಶಿಖರ ಅನುಭವ ... ಅನುಭವವೆಂದರೆ ಯಾವ ವಸ್ತುವನ್ನು ನಾವು ದೃಷ್ಟಿಯಲ್ಲಿರಿಸಿಕೊಂಡಿದ್ದೇವೋ ಆ ವಸ್ತುವೇ ನಾವಾಗುವುದು”. (ಪು. ೬೯)
To be continued.