ಸ್ವೋಪಜ್ಞ ವ್ಯಾಖ್ಯೆ
ಡಿ.ವಿ.ಜಿ. ಅವರು ಸ್ವಯಂ ಒಬ್ಬ ಶ್ರೇಷ್ಠ ದಾರ್ಶನಿಕರಾದ ಕಾರಣ ಎಷ್ಟೋ ಪಾರಂಪರಿಕ ತತ್ತ್ವಗಳಿಗೆ ಅವರು ತಮ್ಮದೇ ಆದ ವಿಶಿಷ್ಟ ವ್ಯಾಖ್ಯೆಗಳನ್ನು ಒದಗಿಸಿದ್ದಾರೆ. ಸಂಸ್ಕೃತಭಾಷೆಯಲ್ಲಿ ರಚಿತವಾದ ಸಾಂಪ್ರದಾಯಿಕ ಭಾಷ್ಯಾದಿ ಗ್ರಂಥಗಳಲ್ಲಿಯೂ ಕಾಣದ ಒಳನೋಟ ಡಿ.ವಿ.ಜಿ. ಅವರ ವ್ಯಾಖ್ಯೆಗಳಲ್ಲಿ ಧಾರಾಳವಾಗಿ ಕಂಡುಬರುತ್ತದೆ. ಇವು ‘ಜೀವನಧರ್ಮಯೋಗ’ವನ್ನು ಸ್ವತಂತ್ರ ಶಾಸ್ತ್ರದ ಮಟ್ಟಕ್ಕೆ ಏರಿಸಿವೆಯೆಂದರೆ ತಪ್ಪಾಗದು. ಆಧುನಿಕ ಕಾಲದಲ್ಲಿ ಆರ್ಷವಾಙ್ಮಯದ ಬಗೆಗೆ ಬಂದ ವಿವರಣೆಗಳ ಪೈಕಿ ಈ ವ್ಯಾಖ್ಯೆಗಳಿಗೆ ಮಹತ್ತ್ವದ ಸ್ಥಾನವಿದೆ. ಪ್ರಾಚೀನ ಶಾಸ್ತ್ರಗಳನ್ನು ಅಭ್ಯಾಸ ಮಾಡುವ ಜಿಜ್ಞಾಸುಗಳು ಇವುಗಳನ್ನು ಮನನ ಮಾಡಿದರೆ ಪ್ರಭೂತವಾದ ಫಲ ದೊರೆಯುವುದರಲ್ಲಿ ಸಂಶಯವಿಲ್ಲ. ಅಂಥ ಕೆಲವು ಸ್ವೋಪಜ್ಞ ವ್ಯಾಖ್ಯೆಗಳನ್ನು ಈಗ ಪರಾಮರ್ಶಿಸಬಹುದು:
ಋತ: “ಜಗತ್ಪದಾರ್ಥಗಳಲ್ಲಿ ಪ್ರತಿಯೊಂದರಲ್ಲಿಯೂ ಕಾಣಬರುವ ವಿಶೇಷ ನೈಜಗುಣವು ಋತ. ಈ ಅರ್ಥದಲ್ಲಿ ಅದು ಧರ್ಮಬೀಜ. ಋತವೆಂದರೆ ಅಂತರಂಗದಲ್ಲಿ ಸ್ಫೂರ್ತಿಯಾದ ಸತ್ಯ ಅಥವಾ ಯಥಾರ್ಥ. ಕರ್ಮಕ್ಕೆ ನಿಯತ ಫಲವನ್ನು ದೊರಕಿಸುವ ಶಕ್ತಿಯು ಋತ”. (ಪು. ೧೧೩)
ದೇಶ-ಕಾಲ: “ಜಗತ್ತಿನ ವಸ್ತುಕ್ರಿಯಾಭೇದಗಳ ಅನುಭವದಿಂದ ನಮ್ಮ ಮನಸ್ಸಿನಲ್ಲುತ್ಪನ್ನವಾಗುವ ಗಾತ್ರಪರಿಮಾಣಕಲ್ಪನೆಗಳು. ದೇಶ, ಕಾಲ - ಇವೆರಡೂ ಜಗದಸ್ತಿತ್ವಾನುಭವವಾಚಕಗಳು. ಜಗತ್ತು ವಸ್ತುಗಳ ಮತ್ತು ಕ್ರಿಯೆಗಳ ಸಮುದಾಯ. ಜಗದ್ವಸ್ತುಗಳ ಗಾತ್ರವಿಸ್ತರಗಳನ್ನೂ ಅನ್ಯೋನ್ಯವ್ಯವಧಾನಗಳನ್ನೂ ದೇಶ (ಅಥವಾ ದಿಕ್ಕು) ಎಂಬ ಪದವು ಸೂಚಿಸುತ್ತದೆ. ಜಗತ್ಕ್ರಿಯೆಗಳ ವ್ಯಾಪ್ತಿವಿಸ್ತರಗಳನ್ನೂ ಅನ್ಯೋನ್ಯವ್ಯವಧಾನಗಳನ್ನೂ ಕಾಲಶಬ್ದವು ಸೂಚಿಸುತ್ತದೆ. ಎಲ್ಲಿ ಜಗತ್ತುಂಟೋ ಅಲ್ಲಿ ದೇಶಕಾಲಗಳ ಭಾವನೆಯುಂಟು. ಎಲ್ಲಿ ಜಗತ್ತಿಲ್ಲವೋ ಅಲ್ಲಿ ದೇಶಕಾಲಗಳ ಭಾವನೆ ಇಲ್ಲ: ಅದೇ ವಿಶ್ವಾತೀತ; ಅದೇ ಅನಂತಸತ್ತಾ; ಅದೇ ಕೇವಲಸತ್ತಾ. ದೇಶಕಾಲಗಳು ಜಗತ್ತಿನೊಳಗಿನ ತದನುಭವಪ್ರಕಾರಗಳ ಸಂಜ್ಞೆಗಳು”. (ಪು. ೧೧೪)
“ಜಗತ್ತೆಂದರೆ ಕ್ರಿಯೆ! ಕ್ರಿಯೆಗೆ ಕಾಲಭಾವನೆ ಅನಿವಾರ್ಯವಾದದ್ದು. ಇರುವಿಕೆಯ ಹರಹಿನ ಅರಿವೇ ಕಾಲಮಾನ. ಅಸ್ತಿತ್ವವಿಸ್ತರದ ಮಾನಸಿಕಾನುಭವಕ್ಕೆ ಕಾಲವೆಂದು ಹೆಸರು”. (ಪು. ೬೮೯)
“ಆಗೋಣವು ಇರೋಣದರ ಪರಿಣಾಮ. ವಸ್ತುವಿನ ಒಳಗೆ ಗೂಢವಾಗಿ ಅಡಗಿಕೊಂಡಿದ್ದ ಗುಣಶಕ್ತಿಗಳು ಕೊಂಚಕೊಂಚವಾಗಿ ಹೊರಕ್ಕೆ ಬಂದಾಗ ಅದರ ಆಗೋಣ. ಇದಕ್ಕೆ ಬೇಕಾದ ಅಸ್ತಿತ್ವಸಾಂತತ್ಯವೇ ಕಾಲ ... ಹೀಗೆ ಕಾಲವು ಜಗದಂತರ್ಗುಣದ ಬಹಿರ್ವಿಕಾಸಾವಕಾಶವೆಂದು ಹೇಳಬಹುದು. ಕಾಲವೇ ಎಲ್ಲವನ್ನೂ ಪರಿಪಾಕಗೊಳಿಸುತ್ತದೆ ... ಕಾಲಭಾವನೆಯು ಭೌತವಸ್ತು ಭೌತಕ್ರಿಯೆಗಳಿಗೆ ಅನ್ವಯಿಸಿದಾಗ ದೇಶ ಅಥವಾ ಸ್ಥಾನ ಎಂದೆನ್ನಿಸಿಕೊಳ್ಳುತ್ತದೆ. ಅದೃಶ್ಯವಾದ ಕಾಲತತ್ತ್ವದ ದೃಶ್ಯಾಶ್ರಯವೇ ದೇಶ. ಕಾಲವಿಲ್ಲದೆ ದೇಶವಿಲ್ಲ; ಹಾಗೆಯೇ ದೇಶವಿಲ್ಲದೆ ಕಾಲವಿಲ್ಲವೆಂದೂ ಹೇಳಬಹುದು”. (ಪು. ೬೯೦)
ತತ್ತ್ವ: “ತತ್ತ್ವ ಎಂದರೆ ‘ಅದು ಅದಾಗಿರುವುದು’ (ತತ್+ತ್ವ). ನಮ್ಮ ದೃಷ್ಟಿಯಲ್ಲಿರುವ ಪದಾರ್ಥದಿಂದ ಅದರ ವೇಷಬಣ್ಣಗಳನ್ನು ಕಳೆದು, ಗುಣಚೇಷ್ಟೆಗಳನ್ನು ಮರೆತು, ಅದು ತಾನೇ ತಾನಾಗಿ - ತಾನು ತಾನೇ ಆಗಿ - ತನ್ನಿಂದ ಬೇರೆ ಯಾವುದರ ಸಂಬಂಧವೂ ಇಲ್ಲದೆ - ಹೇಗಿದೆಯೋ ಹಾಗೆ - ನಿರುಪಾಧಿಕವಾಗಿ ಸ್ವಸ್ವಭಾವದಲ್ಲಿರುವ ಸ್ಥಿತಿಯೇ ತತ್+ತ್ವ (ತನ್ನತನ)”. (ಪು. ೫೦೦-೧)
ಸತ್-ಉಳ್: “ಸಂಸ್ಕೃತದ ‘ಸತ್’ ಎಂಬ ಪದಕ್ಕೂ ಕನ್ನಡದ ‘ಉಳ್’ ಎಂಬ ಪದಕ್ಕೂ ಇರುವ ಹೋಲಿಕೆಯನ್ನು ನೋಡತಕ್ಕದ್ದು. ಕನ್ನಡದಲ್ಲಿ ‘ಉಳ್’ ಎಂದರೆ ಇರುವುದು ಎಂದರ್ಥ ... ‘ಉಳ್’ ಎಂಬುದರಿಂದಲೇ ‘ಒಳ್’ - ‘ಒಳ್ಳೆಯದು’. ಯಾವುದು ಎಂದೆಂದಿಗೂ ಉಂಟಾಗಿರತಕ್ಕದ್ದೋ ಯಾವುದು ಬಹುಕಾಲ ಬಾಳತಕ್ಕದ್ದೋ ಅದಕ್ಕೆ ಸಂಬಂಧಪಟ್ಟದ್ದು - ಅದರ ಅಂಶವನ್ನು ನಮಗೆ ದೊರಕಿಸಬಲ್ಲದ್ದು - ಅದರ ಬಳಿಗೆ ನಮ್ಮನ್ನು ಕರೆದುಕೊಂಡುಹೋಗತಕ್ಕದ್ದು ‘ಒಳ್’ - ‘ಒಳ್ಳೆಯದು’”. (ಪು. ೫೦೧)
ಯಜ್ಞ-ದಾನ-ತಪಸ್ಸು: “ಭಗವಂತನ ಮಹಿಮೆಯನ್ನು ಅಂಗೀಕರಿಸಿ ಸ್ವಾಹಂಕಾರವನ್ನು ವರ್ಜಿಸುವುದೇ ತಪಸ್ಸು. ಜಗಚ್ಛಕ್ತಿಗಳನ್ನು ಉಪಯೋಗಿಸಿಕೊಂಡು ಲೋಕಕಾರ್ಯಗಳನ್ನು ನಡಸುವುದೇ ಯಜ್ಞ ... ಕಾರ್ಯಫಲಿತಾಂಶವನ್ನು ತನ್ನೊಬ್ಬನ ಊಟಕ್ಕಾಗಿರಿಸಿಕೊಳ್ಳದೆ ಸುತ್ತಮುತ್ತಣವರಿಗೆ ಹಂಚಿ ಅವರ ಸಂತೋಷದಲ್ಲಿ ತಾನು ಬೆರೆತು ಸಂತೋಷಿಸುವುದೇ ದಾನ”. (ಪು. ೧೬೮)
“ಫಲಾತುರವಿಲ್ಲದೆ, ವ್ಯಾಮೋಹ ಬಿಟ್ಟು, ತತ್ತ್ವಜ್ಞಾನನಿಷ್ಠನಾದವನು ಮಾಡುವ ಕರ್ಮವು ಯಜ್ಞ”. (ಪು. ೨೦೫)
“ಯಜ್ಞವೆಂದರೆ ದೇವಪೂಜೆ; ದಾನವೆಂದರೆ ಲೋಕಸಂತೋಷಣ; ತಪಸ್ಸೆಂದರೆ ಆತ್ಮಸಂಯಮ. ದೇವ, ಲೋಕ, ಜೀವ - ಈ ಮೂರು ಮನುಷ್ಯಜೀವನದ ಘಟಕಾಂಶಗಳು. ಅವುಗಳ ಸೇವೆ ಕರ್ತವ್ಯ”. (ಪು. ೫೨೦)
ವರ್ಣ-ಗುಣ: “ಸಮಷ್ಟಿಲೋಕದ ಅತ್ಯಂತ ಪ್ರಯೋಜನದಲ್ಲಿ ವ್ಯಷ್ಟಿಯ ಉತ್ಕರ್ಷವನ್ನು ಸಾಧಿಸಬೇಕೆಂಬುದು ವರ್ಣವ್ಯವಸ್ಥೆಯ ಆಧಾರತತ್ತ್ವ. ಆ ಅತ್ಯಂತ ಪ್ರಯೋಜನಕ್ಕೆ ಒದಗತಕ್ಕವು ವ್ಯಷ್ಟಿಯ ಸ್ವಾಭಾವಿಕವಾದ ಗುಣಕರ್ಮಶಕ್ತಿಗಳು”. (ಪು. ೧೯೯)
“ಒಂದು ವಸ್ತುವಿನಲ್ಲಿರುವ ಯಾವ ಸಹಜಶಕ್ತಿಯು, ಅಥವಾ ನೈಜಲಕ್ಷಣವು, ಆ ವಸ್ತುವಿಗೆ ಇನ್ನೊಂದು ವಸ್ತುವಿನೊಡನೆ ಸ್ನೇಹಸಂಬಂಧವನ್ನೋ ವೈರಸಂಬಂಧವನ್ನೋ ಉಂಟುಮಾಡಬಲ್ಲದ್ದಾಗಿರುತ್ತದೆಯೋ ಆ ಶಕ್ತಿಯು ಅಥವಾ ಆ ಲಕ್ಷಣವು ಆ ವಸ್ತುವಿನ ಗುಣವೆನಿಸುತ್ತದೆ. ಹೀಗೆ ಗುಣವು ಸ್ವಭಾವಸಿದ್ಧವಾದ ಅನ್ಯಾಕರ್ಷಕ ಶಕ್ತಿ ಅಥವಾ ಅನ್ಯಾಪಕರ್ಷಕ ಶಕ್ತಿ ... ಹೀಗೆ ಗುಣವು ಸದ್ವಿತೀಯವಾದದ್ದು”. (ಪು. ೪೩೨-೩೩)
ಕರ್ಮ-ಅಕರ್ಮ: “ಕರ್ಮಾಸಕ್ತಿ, ಫಲವಿರಕ್ತಿ: ಇದು ಉಪದೇಶ. ಕರ್ಮಾಚರಣೆಯಲ್ಲಿ ಫಲತ್ಯಾಗರೂಪವಾದ ಅಕರ್ಮ; ಫಲತ್ಯಾಗದಲ್ಲಿ ಔದಾಸೀನ್ಯವೆಂಬ ಕರ್ಮ”. (ಪು. ೨೨೦)
“ಕರ್ಮವೆಂದರೆ ಲೋಕವ್ಯವಹಾರ - ಲೋಕದಿಂದ ಒಂದಿಷ್ಟನ್ನು ತಾನು ತೆಗೆದುಕೊಳ್ಳುವುದು ಮತ್ತು ಲೋಕಕ್ಕೆ ಒಂದಿಷ್ಟನ್ನು ಕೊಡುವುದು. ಇದೇ ನಮ್ಮ ನಿತ್ಯಜೀವನ. ಈ ದಾನಾದಾನರೂಪವಲ್ಲದ ಜೀವಿತಕರ್ಮ ಯಾವುದೂ ಇಲ್ಲ”. (ಪು. ೫೧೮)
ಅಧಿಧರ್ಮ: “ಯಾವ ವೃತ್ತಿವರ್ತನೆಗಳು ವೇದಶಾಸ್ತ್ರಾದಿ ಅಧಿಕಾರೋಕ್ತಿಗಳಿಗೆ ವಿಧೇಯತೆಯಿಂದ ನಡೆದಾಗ ಧರ್ಮವೆನಿಸುತ್ತದೆಯೋ ಅದೇ ವೃತ್ತಿವರ್ತನೆಗಳು ಅಂಥಾ ಬಾಹ್ಯವಿಧಿ ನಿರ್ಬಂಧಭೀತಿಗಳಿಲ್ಲದೆ ಸ್ವತ ಏವ ನಡೆದಾಗ ಅಧಿಧರ್ಮ ಎನಿಸುತ್ತದೆ”. (ಪು. ೫೮೫) “ಶುದ್ಧಸತ್ತ್ವದ ಸ್ವತಂತ್ರಾಭಿವ್ಯಕ್ತಿಯೇ ಅಧಿಧರ್ಮ”. (ಪು. ೫೮೯)
ಜಗತ್ತು-ಜೀವ: “ಬ್ರಹ್ಮವಸ್ತುವಿನ ದೃಶ್ಯಾವಸ್ಥೆಗೆ ಜಗತ್ತು ಎಂದು ಹೆಸರು”. (ಪು. ೨೮೧) “ಪ್ರಪಂಚವ್ಯವಹಾರದಲ್ಲಿ ಪ್ರಯುಕ್ತವಾದ ವ್ಯಕ್ತಿಶಕ್ತಿಯ ಘನರೂಪವೇ - ಅದರ ಕೇಂದ್ರಾಕೃತಿಯೇ - ಜೀವ”. (ಪು. ೨೮೩)
ಭಕ್ತಿ-ಜ್ಞಾನ-ಕರ್ಮ: “ಭಕ್ತಿಯು ಮುಖ್ಯವಾಗಿ ಮನೋವೃತ್ತಿ. ಜ್ಞಾನವು ಮುಖ್ಯವಾಗಿ ಬುದ್ಧಿವೃತ್ತಿ. ಕರ್ಮವು ಮನೋಬುದ್ಧಿಪ್ರಚೋದಿತವಾದ ದೈಹಿಕ ವೃತ್ತಿ”. (ಪು. ೪೦೪)
(ಈ ವ್ಯಾಖ್ಯೆಗಳ ಪೈಕಿ ಅತ್ಯಂತ ಮುಖ್ಯವಾದುವು ಧರ್ಮಕ್ಕೆ ಸಂಬಂಧಿಸಿವೆ. ಇವನ್ನು ಈ ಲೇಖನದ ಕೊನೆಗೆ ಅನುಬಂಧದಲ್ಲಿ ಸಂಕಲಿಸಿ ಕೊಡಲಾಗಿದೆ.)
ಹೊಸ ಹೊಳಹುಗಳು
ಹೇಗೆ ಶ್ರೀಕೃಷ್ಣ ಅರ್ಜುನನನ್ನು ನಿಮಿತ್ತವಾಗಿರಿಸಿಕೊಂಡು ಸಕಲ ಜಗತ್ತಿನ ಜಿಜ್ಞಾಸುಗಳಿಗೂ ಉಪಕರಿಸುವಂತೆ ಗೀತೋಪದೇಶವನ್ನು ಮಾಡಿದನೋ ಹಾಗೆ ಡಿ.ವಿ.ಜಿ. ಅವರು ಗೀತಾವಿವೃತಿಯನ್ನು ನಿಮಿತ್ತವಾಗಿರಿಸಿಕೊಂಡು ಅನೇಕ ಗಹನ ವಿಚಾರಗಳನ್ನು ಕುರಿತು ಒಳನೋಟದ ಮಾತುಗಳನ್ನಾಡಿದ್ದಾರೆ. ಅವರ ವಿಶಾಲವಾದ ಜೀವನಾನುಭವ ಮತ್ತು ತತ್ತ್ವದೃಷ್ಟಿಗಳು ಬೆರೆತು ನಮ್ಮ ಪಾಲಿಗೆ ಎಷ್ಟೋ ತೊಡಕಿನ ಸಂಗತಿಗಳನ್ನು ಸುಗ್ರಹವಾಗಿಸಿವೆ. ಅಂಥ ಕೆಲವು ಹೊಳಹುಗಳನ್ನು ಈಗ ಪರಿಶೀಲಿಸಬಹುದು. ಈ ಸ್ವತಂತ್ರ ಪ್ರತಿಪಾದನೆಗಳು ಯಾವ ವಿವರಣೆಯ ಅಪೇಕ್ಷೆಯೂ ಇಲ್ಲದೆ ಮನಸ್ಸಿಗೆ ಮುಟ್ಟುತ್ತವೆ:
“ಮೊದಲು ಪರೀಕ್ಷೆ, ಆಮೇಲೆ ವಿಶ್ವಾಸ - ಎಂಬುದು ಲೋಕವ್ಯವಹಾರದಲ್ಲಿ ರೂಢಿಯಾದ ನೀತಿ. ಆತ್ಮ, ಜೀವ, ಧರ್ಮ - ಇವು ಅಲೌಕಿಕ ವಿಷಯಗಳು. ಆದದ್ದರಿಂದ ಅಲ್ಲಿ ಮೊದಲು ವಿಶ್ವಾಸ, ಆಮೇಲೆ ಅನುಭವಪೂರ್ವಕ ವಿಮರ್ಶೆ - ಇದು ನೀತಿ”. (ಪು. ೫೮)
“ಸಹಜವಾದದ್ದೆಲ್ಲ ಸಮೀಚೀನವಾದದ್ದೆಂದು ವಾದಿಸಲಾಗದು”. (ಪು. ೧೧೯)
“ಸ್ವಧರ್ಮದಿಂದ ಜಾರುವುದೇ ಪಾಪ”. (ಪು. ೧೩೦)
“ಜಿತೇಂದ್ರಿಯನು ಮೃತೇಂದ್ರಿಯನಲ್ಲ. ಇಂದ್ರಿಯಜಯವು ಇಂದ್ರಿಯಧ್ವಂಸನವಲ್ಲ. ಇಂದ್ರಿಯಗಳಿರಬೇಕು; ಅವು ಪಟುವಾಗಿರಬೇಕು, ಆದರೂ ನಾವು ದುಷ್ಟತನಕ್ಕೆ ಹೋಗದೆ ಇರಬೇಕು ... ಇಂದ್ರಿಯಗಳು ಸೌಂದರ್ಯಗ್ರಹಣಶಕ್ತಿಯನ್ನು ಕಳೆದುಕೊಳ್ಳಬಾರದು, ಅವು ಸೂಕ್ಷ್ಮವೇದಿಗಳಾಗಿದ್ದುಕೊಂಡು ನಾವು ಅವಕ್ಕೆ ವಶರಾಗದಂತಿರಬೇಕು”. (ಪು. ೧೪೫)
“ತತ್ತ್ವಜ್ಞಾನಿಗೆ ‘ಸ್ವ’ ಎಂಬುದಿಲ್ಲ. ಎಲ್ಲಿ ಸ್ವಾರ್ಥವಿಲ್ಲವೋ ಅಲ್ಲಿ ಪಾಪದ ಸೋಂಕಿಲ್ಲ”. (ಪು. ೧೪೬)
“ದಾನವೂ ಯಜ್ಞವೂ ಸತ್ತ್ವಗುಣದ ಕಾರ್ಯಗಳು. ಸತ್ತ್ವಾಂಶ ಕೊಂಚವಾದರೂ ಇಲ್ಲದ ಮನುಷ್ಯನಿಲ್ಲ. ಹೇಗೆ ಸತ್ತ್ವಪರಿಪೂರ್ಣನು ಲೋಕದಲ್ಲಿಲ್ಲವೋ ಹಾಗೆಯೇ ಸತ್ತ್ವಪರಿಶೂನ್ಯನೂ ಇಲ್ಲ. ಕೆಲವರಲ್ಲಿ ಸತ್ತ್ವಗುಣವೂ ಯಜ್ಞಪ್ರವೃತ್ತಿಯೂ ಬಹುಸ್ವಲ್ಪಾಂಶದಲ್ಲಿರುತ್ತವೆ; ಬಹುಮಂದವಾಗಿರುತ್ತವೆ. ಲೋಕಸಂಪರ್ಕದಿಂದ ಅವು ಕ್ರಮೇಣ ಅಭಿವರ್ಧಿಸಿ ತೀವ್ರವಾಗುತ್ತವೆ. ಕಾಮವು ಪ್ರೇಮವಾಗುತ್ತದೆ; ಪ್ರೇಮವು ಮಮತೆಯಾಗುತ್ತದೆ; ಮಮತೆಯು ಸಹಭಾಗಿತೆಯಾಗುತ್ತದೆ; ಸಹಭಾಗಿತೆಯು ಸ್ವಾರ್ಥವರ್ಜನೆಯನ್ನು ಯತ್ಕಿಂಚಿತ್ತಾದರೂ ಅಭ್ಯಾಸಕ್ಕೆ ತರುತ್ತದೆ. ಇದು ಲೋಕಸಂಸರ್ಗದಿಂದ ಆದ ನೀತಿಶಿಕ್ಷಣ”. (ಪು. ೧೬೯)
“ಪ್ರೇಮವೆಂದರೆ ಸ್ವತ್ಯಾಗಸಿದ್ಧತೆ”. (ಪು. ೧೭೦)
“ಯಾವುದಾದರೊಂದನ್ನು ದೃಢವಾಗಿ ನಂಬಬೇಕು: ಕರ್ಮವನ್ನೋ ಜ್ಞಾನವನ್ನೋ ಯಾವುದಾದರೊಂದನ್ನು. ಆಗಲೇ ಮನಸ್ಸಿಗೆ ಶಾಂತಿಯುಂಟಾಗುವುದು. ನಂಬಿಕೆಯೇ ಧೈರ್ಯ; ಧೈರ್ಯವೇ ಸಂತೋಷ ... ಈ ನಂಬಿಕೆ ಇಲ್ಲದಿರುವುದು ನಮ್ಮ ಕಾಲದ ದಾರಿದ್ರ್ಯ. ನಮ್ಮ ಬಡತನಗಳಲ್ಲೆಲ್ಲ ತುಂಬ ದೊಡ್ಡ ಬಡತನ ಈ ಶ್ರದ್ಧಾದಾರಿದ್ರ್ಯ”. (ಪು. ೨೧೨)
“ಸಮತೆ ಎಂದರೆ ಯಾವ ಯಾವ ಜೀವಕ್ಕೆ ಯಾವಯಾವುದು ಹಿತವೋ ಅದನ್ನು ಒದಗಿಸುವುದು ... ಸಮದರ್ಶನ ಇಬ್ಬರನ್ನು ಅಪೇಕ್ಷಿಸುತ್ತದೆ: ಒಬ್ಬ ದರ್ಶಕ, ಇನ್ನೊಬ್ಬ ದೃಷ್ಟ. ದರ್ಶಕನ ಸಮದರ್ಶಿತ್ವದಿಂದ ದೃಷ್ಟನಿಗೆ ಹಿತವಾಗಬೇಕು ... ಈ ಉಪದೇಶ ಅಂತರಂಗಪ್ರೀತಿಯ ಸರ್ವಸಮತೆಯನ್ನು ಕುರಿತದ್ದು. ಸರ್ವಸಮವಾದ ಪ್ರೀತಿಯು ತನ್ನ ಪಾತ್ರರ ಯೋಗ್ಯತಾಭೇದವನ್ನನುಸರಿಸಿ ವ್ಯಕ್ತವಾಗುತ್ತದೆ”. (ಪು. ೨೩೯) “ಅಂತರಂಗದಲ್ಲಿಯ ಸಮತೆಯು ಸಾರ್ಥಕವಾಗುವುದು ಬಹಿರಂಗದ ತಾರತಮ್ಯಜ್ಞಾನದಿಂದ. ಸಮಪ್ರೀತಿ, ಸಂದರ್ಭವಿವೇಕ - ಇದು ಸೂತ್ರ”. (ಪು. ೩೩೯)
“ಭಗವದ್ಭಕ್ತಿಯೆಂದರೆ ಮಮತಾಮೋಹವರ್ಜನೆ”. (ಪು. ೨೯೭)
“ಧ್ಯಾನದಲ್ಲಿ ಮುಖ್ಯವಾದದ್ದು ಅಕ್ಷರವಲ್ಲ, ಶಬ್ದವಲ್ಲ, ಧ್ವನಿಯಲ್ಲ. ಮುಖ್ಯವಾದದ್ದು ಭಾವನೆ”. (ಪು. ೩೧೨)
“ನಾವು ಗತಿ ತಪ್ಪುವುದು ಸಣ್ಣಸಣ್ಣವೆಂದು ತೋರುವ ದುರಭ್ಯಾಸಗಳಿಂದ. ಮಹಾಪಾತಕ ಮಾಡಿದವನಿಗೆ ಸದ್ಗತಿ ಬೇಗ ಬಂದೀತು ... ನಾವು ಮಹಾಪಾತಕಕ್ಕೆ ಹೆದರುತ್ತೇವೆ. ಸಣ್ಣ ಸಾಧನೆಯಲ್ಲಿ ಉಪೇಕ್ಷೆ ಮಾಡುತ್ತೇವೆ”. (ಪು. ೪೧೯)
“ಭಗವಂತನು ದೈವೀಗುಣಗಳನ್ನು ಪಟ್ಟಿಮಾಡಿ ಹೇಳಿದ; ಆಸುರೀಗುಣಗಳನ್ನು ಸೂಚಿಸಿದ ... ಮಾನುಷೀಗುಣಗಳನ್ನು ಮಾತ್ರ ಏಕೆ ಹೇಳಲಿಲ್ಲ? ಎಂದರೆ, ಹೇಳಿರುವ ಗುಣಗಳೆಲ್ಲವೂ ಮಾನುಷವೇ ... ದೈವಾಂಶ ಅಸುರಾಂಶಗಳ ಮಿಶ್ರಣವೇ ಮನುಷ್ಯ”. (ಪು. ೪೬೯)
“ಬ್ರಹ್ಮದರ್ಶನಯತ್ನಕ್ಕೆ ಮೊದಲು ಅವಶ್ಯವಾದದ್ದು ಮನಸ್ಸಮಾಧಾನ. ಮನಸ್ಸಿನ ಸಮಾಧಾನಕ್ಕೆ ಮೊದಲು ಅವಶ್ಯವಾದದ್ದು ದೇಹಸಮಾಧಾನ. ದೇಹದ ಸುಸ್ಥಿತಿಗೆ ಬೇಕಾದದ್ದು ಲೋಕಸಂಸ್ಥಿತಿ. ಹೀಗೆ ಪರಮಾತ್ಮೋಪಾಸನೆಯೂ ಲೋಕಜೀವನವೂ ಒಂದನ್ನೊಂದು ಬಿಟ್ಟಿರುವವಲ್ಲ; ಒಟ್ಟುಗೂಡಿಯೇ ಇರುತ್ತವೆ”. (ಪು. ೫೩೯)
“ಅಧ್ಯಾತ್ಮಪ್ರಪಂಚದಲ್ಲಿ ‘ಡೆಮಾಕ್ರಸಿ’ ಇಲ್ಲ!” (ಪು. ೫೭೯)
“ಪೌರುಷದ ಮೇಲ್ತುದಿ ಫಲವಿಚಾರತ್ಯಾಗ”. (ಪು. ೫೮೪)
“ಭಕ್ತಿಗೆ ತೃಪ್ತಿಯು ಅಭಿವ್ಯಕ್ತಿಯಿಂದ. ಅದು ಮತ್ತೇನನ್ನೂ ಬೇಡುವುದಿಲ್ಲ. ತಾನು ಹರಿದು ಇಷ್ಟಸ್ಥಾನವನ್ನು ಸೇರುತ್ತಿರಬೇಕು. ಅದು ಪ್ರೀತಿಯ ಸ್ವಭಾವ”. (ಪು. ೬೬೫)
“ಪ್ರಣಯವು ಪ್ರಾರಂಭದಲ್ಲಿ ದ್ವೈತ; ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ; ಪ್ರಣಯಶಿಖರದಲ್ಲಿ ದ್ವೈತತಾವಿಸ್ಮೃತಿ, ಅಭೇದವೃತ್ತಿ, ಅದ್ವೈತ”. (ಪು. ೬೬೯)
ದೃಷ್ಟಾಂತ, ಉದಾಹರಣೆಗಳು
‘ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ’ ಎಂದು ಗಟ್ಟಿಯಾಗಿ ನಂಬಿದ್ದವರು ಡಿ.ವಿ.ಜಿ. ಹೀಗಾಗಿಯೇ ಅವರ ಬರೆವಣಿಗೆಯಲ್ಲಿ ದೃಷ್ಟಾಂತಗಳು, ಉದಾಹರಣೆಗಳು, ಗಾದೆ-ಸಾಮತಿಗಳು, ಚಾಟುಶ್ಲೋಕಗಳು, ಉಪಕಥೆಗಳು, ಪ್ರಸ್ತಾವಾಂತರಗಳು, ಉಲ್ಲೇಖ-ಉದ್ಧೃತಿಗಳು, ಅಣಕುವಾಡುಗಳು ಹೇರಳವಾಗಿ ಕಾಣಸಿಗುತ್ತವೆ. ಎಂದೋ ಓದಿದ, ಯಾರೋ ಹೇಳಿದ ಸಂಗತಿಗಳನ್ನು ಭದ್ರವಾಗಿ ನೆನಪಿನಲ್ಲಿ ಉಳಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಅವನ್ನು ಪ್ರಸ್ತುತಪಡಿಸುವ ಡಿ.ವಿ.ಜಿ. ಅವರ ಪ್ರಸಂಗಾವಧಾನ ಮೇಲ್ಮಟ್ಟದ್ದು. ಅವರ ಈ ಬಗೆಯ ಪ್ರಸ್ತಾವಗಳು ಬಲುಪಾಲು ಕಚುಗುಳಿಯಿಡುವ ಹಾಸ್ಯಲೇಪವನ್ನು ಹೊಂದಿದ್ದು ಓದಿನ ಅನುಭವವನ್ನು ಸ್ಮರಣೀಯವಾಗಿಸುತ್ತವೆ, ಉಲ್ಲಿಸಿತವಾಗಿಸುತ್ತವೆ.
ಪ್ರಕೃತ ‘ಜೀವನಧರ್ಮಯೋಗ’ದಲ್ಲಿ ಶಂಕರಾಚಾರ್ಯ, ಸಾಯಣಾಚಾರ್ಯ, ವೇದಾಂತದೇಶಿಕ ಮೊದಲಾದ ಭಾರತೀಯ ದಾರ್ಶನಿಕರಿಂದ ಮೊದಲ್ಗೊಂಡು ಪ್ಲೇಟೋ, ಮಾರ್ಲೆ, ಬ್ರೌನಿಂಗ್ ಮುಂತಾದ ಪಾಶ್ಚಾತ್ತ್ಯ ಕವಿ-ವಿದ್ವಾಂಸರವರೆಗೆ ಅನೇಕರನ್ನು ಡಿ.ವಿ.ಜಿ. ಉಲ್ಲೇಖಿಸಿದ್ದಾರೆ. ಅಲ್ಲದೆ ವೇದವಾಙ್ಮಯದ ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು ಎಂಬೆಲ್ಲ ಭಾಗಗಳಿಂದಲೂ ಸಾಂಖ್ಯ, ಯೋಗಾದಿ ದರ್ಶನಗಳಿಂದಲೂ ಪ್ರಮಾಣವಾಕ್ಯಗಳನ್ನು ಉದ್ಧರಿಸಿದ್ದಾರೆ. ಅವರಿಗೆ ಭೇದ, ಅಭೇದ, ಭೇದಾಭೇದ ಮೊದಲಾದ ಎಲ್ಲ ದರ್ಶನಪ್ರಕಾರಗಳ ಚೆನ್ನಾದ ತಿಳಿವಿತ್ತು. ಕ್ರೈಸ್ತ, ಇಸ್ಲಾಂ ಮುಂತಾದ ಮತಗಳ ಪರಿಚಯವೂ ಇತ್ತು. ತಮ್ಮ ತಾತ್ಪರ್ಯ ಪ್ರಧಾನವಾಗಿ ಅದ್ವೈತದಲ್ಲಿದ್ದರೂ ಯಾವ ಮತೀಯ ಅಥವಾ ದಾರ್ಶನಿಕ ತತ್ತ್ವಕ್ಕೆ ವಿರುದ್ಧವಾಗದಂತೆ ತಮ್ಮ ವಿಚಾರಗಳನ್ನು ಬಿತ್ತರಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದರು. ಇನ್ನು ಸದ್ಯದ ಗ್ರಂಥದಲ್ಲಿ ‘ಮಂತ್ರವಿಲ್ಲದ ಸಂಧ್ಯಾವಂದನೆಗೆ ಮತ್ತೊಂದು ತಂಬಿಗೆ ನೀರು’ ಎಂಬ ಗಾದೆಯಿಂದ ಹಿಡಿದು ರಂಕರಾಟಣೆಯ ಆಟದವರೆಗೆ ಅನೇಕ ಸಂಗತಿಗಳನ್ನು ವಿವರಣೆಗಾಗಿ ಬಳಸಿಕೊಂಡಿದ್ದಾರೆ. ಅವರು ಹೇಳಿರುವ ಉಪಕಥೆಗಳ ಪೈಕಿ ಅಜ್ಞಾತಚರಿತರ ಅವಾಂತರಗಳಿಂದ ಉಷಸ್ತಿ ಚಾಕ್ರಾಯಣನಂಥ ಉಪನಿಷದುಕ್ತ ವ್ಯಕ್ತಿಯ ವರ್ತನೆಯವರೆಗೆ ಹಲವು ತೆರದ ಸ್ವಾರಸ್ಯಗಳಿವೆ.
ಇನ್ನು ಅವರ ಉದಾಹರಣೆಗಳನ್ನು ಗಮನಿಸುವುದಾದರೆ, ಇವುಗಳಲ್ಲಿಯ ಹಾಸ್ಯವೂ ಅನುಪ್ರಾಸವೇ ಮೊದಲಾದ ಶಬ್ದಶೋಭೆಗಳೂ ಗಮನವನ್ನು ಸೆಳೆಯುತ್ತವೆ. ಇಂಥ ಕೆಲವು ಮಾದರಿಗಳ ರುಚಿ ನೋಡಬಹುದು:
“ಕಸ್ತೂರಿ ಮಾರುವವನ ಪಕ್ಕದಲ್ಲಿ ಗೊಬ್ಬರದವನು ಅಂಗಡಿ ಇಡಲಿ. ಅದೇ ಸಮಾನತ್ವ. ನಿತ್ಯಸ್ನಾನಿಯ ಮೈಯನ್ನು ನೀರು ಸೋಕದವನು ತಿಕ್ಕಲಿ. ಅದೇ ಅಲ್ಲವೆ ಸೋದರತ್ವ?” (ಪು. ೯೫)
“ಬಹುಮಂದಿಗೆ ಧರ್ಮವೆಂದರೆ ಲಾಡು ಚಿರೋಟಿಗಳ ಸಮಾರಾಧನೆ ಎಂದು ತೋರುತ್ತದೆ; ಮೆಣಸಿನ ಚಟ್ನಿಯೂ ಶುಂಠಿಯ ಪಚ್ಚಡಿಯೂ ಧರ್ಮವೆನಿಸುವುದಿಲ್ಲ. ಅರ್ಜುನನು ಅಂಥವನು”. (ಪು. ೯೯)
“ಎಳೆಯ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿರುವ ತಂದೆ ಅದಕ್ಕೆ ಚೆನ್ನಾಗಿ ನಡಿಗೆ ಕಲಿಸಬೇಕೆಂದು ತಾನು ಹೋಗುವ ವೇಗದಲ್ಲಿ ಅದನ್ನು ಸೆಳೆದುಕೊಂಡುಹೋದರೆ ಅದಕ್ಕೆ ಇರುವ ಶಕ್ತಿಯೂ ಹೊರಟುಹೋಗುತ್ತದೆ; ಉಸಿರೇ ಹೋದರೂ ಹೋಗಬಹುದು. ಅಧ್ಯಾತ್ಮವಿದ್ಯೆಯಲ್ಲಿಯೂ ಹಾಗೆಯೇ. ಪರಮಾರ್ಥಬೋಧನೆಯ ವಿಷಯದಲ್ಲಿ ಅತಿ ಹೆಚ್ಚಿನ ಅವಸರ ತಕ್ಕದ್ದಲ್ಲ”. (ಪು. ೧೮೧)
“ದೊಡ್ಡ ಹೊಟೇಲೊಂದರಲ್ಲಿ ಭೋಜನಕೂಟಕ್ಕೆ ಆಹ್ವಾನ ಬಂದಿದೆಯೆಂದಿಟ್ಟುಕೊಳ್ಳೋಣ. ಆಮೇಲೆ ಆಹೊತ್ತು ಏಕಾದಶಿಯೆಂದು ತಿಳಿದುಬಂದರೆ ಸಂಪ್ರದಾಯಸ್ಥನ ಮನಸ್ಸಿಗುಂಟಾಗುವ ದ್ವೈಧೀಭಾವವನ್ನು ಊಹಿಸಬಹುದು. ಹೋಗದೆ ಮನೆಯಲ್ಲಿ ಕುಳಿತವನು ಹೊಟೇಲಿನಲ್ಲಿ ತನ್ನ ಸ್ನೇಹಿತರು ಪಡುತ್ತಿರುವ ಸಂಭ್ರಮಗಳನ್ನು ಕುರಿತು ಯೋಚನೆಮಾಡುತ್ತಿರುತ್ತಾನೆ. ಭೋಜನಕ್ಕೆ ಹೋದವನು “ಎಲಾ, ಈಹೊತ್ತು ಏಕಾದಶಿ, ಇಲ್ಲಿ ಬಂದು ತಿನ್ನುತ್ತಿದ್ದೇನಲ್ಲಾ!” ಎಂದು ಮನಃಕಷಾಯಕ್ಕೆ ಒಳಗಾಗುತ್ತಾನೆ. ಇಬ್ಬರೂ ಸಂಶಯಾತ್ಮರೇ. ಇವನು ಊಟವನ್ನು ಚೆನ್ನಾಗಿ ಮಾಡಲಿಲ್ಲ; ಅವನು ಏಕಾದಶಿಯೆಂದು ಭಗವದ್ಧ್ಯಾನವನ್ನೂ ಮಾಡಲಿಲ್ಲ”. (ಪು. ೨೧೨)
“ದೇಹವು ಐದು ಕೋಶಗಳುಳ್ಳದ್ದು. ಈ ಕೋಶಗಳು ಅಡಕುಪಾತ್ರೆಯಂತೆ - ಒಂದರೊಳಗಿನ್ನೊಂದು, ಅದರೊಳಗೆ ಮತ್ತೊಂದು - ಹೀಗೆ ಇರುತ್ತವೆ. ಈ ಕಾಲದ ಕೆಲವರು ದೊಡ್ಡಮನುಷ್ಯರುಗಳು ಮೇಲೆ ಓವರ್‌ಕೋಟು, ಅದರೊಳಗೆ ಷಾರ್ಟ್ಕೋಟು, ಅದರೊಳಗೆ ವೇಸ್ಟ್ಕೋಟು, ಅದರೊಳಗೆ ಷರಟು, ಅದರೊಳಗೆ ಬನಿಯನ್ನು, ಇನ್ನೂ ಒಳಗೆ ಜುಬ್ಬಾ - ಹೀಗೆ ಐದಾರು ಕವಚ ಧರಿಸಿಕೊಂಡಿರುತ್ತಾರೆ. ಹಾಗೆ ಮನುಷ್ಯದೇಹದಲ್ಲಿ ಐದು ಪದರ”. (ಪು. ೩೦೯)
ಚಿತ್ರ-ಕೋಷ್ಠಕಗಳ ಮೂಲಕ ವಿಷಯನಿರೂಪಣೆ
ಡಿ.ವಿ.ಜಿ. ವ್ಯವಸ್ಥಿತವಾದ ವಿಷಯನಿರೂಪಣೆಗೆ ಹೆಚ್ಚಿನ ಬೆಲೆ ಕೊಟ್ಟವರು. ಎಷ್ಟೋ ಬಾರಿ ಪ್ರತಿಪಾದ್ಯ ವಿಷಯವು ಜಟಿಲವಾದ ಕಾರ್ಯಕಾರಣಸಂಬಂಧವನ್ನು ಹೊಂದಿದ್ದು ನಾನಾ ಅಂತಸ್ತುಗಳಿಂದ ಕೂಡಿದ್ದರೆ, ಅದನ್ನು ವಾಕ್ಯಗಳ ಮೂಲಕ ವಿವರಿಸುವುದಕ್ಕಿಂತ ಚಿತ್ರ-ಕೋಷ್ಠಕಗಳ ಮೂಲಕ ತೋರ್ಪಡಿಸುವುದೇ ಸುಲಭವೆನಿಸುತ್ತದೆ. ಈ ಬಗೆಯ ಆಧುನಿಕ ಪ್ರತಿಪಾದನಪ್ರಕಾರಗಳನ್ನು ಡಿ.ವಿ.ಜಿ. ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಕರ್ಮದ ವಿವಿಧ ಪ್ರಕಾರಗಳನ್ನೂ (ಪು. ೧೬೧) ಗುಣತ್ರಯದ ಲಕ್ಷಣ-ಪರಿಣಾಮಗಳನ್ನೂ (ಪು. ೪೩೫) ಕಾಣಿಸುವ ಕೋಷ್ಠಕಗಳನ್ನು ಪರಿಶೀಲಿಸಬಹುದು.
ಕರ್ಮಪ್ರಕಾರಗಳು-
ಗುಣತ್ರಯದ ಲಕ್ಷಣ-ಪರಿಣಾಮಗಳು:
ಗುಣ |
ಸ್ವಭಾವ |
ಲಕ್ಷಣ |
ಕಾರ್ಯ |
ಫಲ |
ಗತಿ |
ಪರಿಣಾಮ |
ಸತ್ತ್ವ |
ನಿರ್ಮಲ |
ಪ್ರಕಾಶ |
ಜ್ಞಾನ |
ಸುಖ |
ಊರ್ಧ್ವಲೋಕ-ಸ್ವರ್ಗಾದಿ |
ಶಾಂತಿ |
ರಜಸ್ಸು |
ಕಾಮ-ಕ್ರೋಧಗಳು |
ಅತಿರೇಕ, ಆವೇಶ |
ಕರ್ಮಪ್ರವೃತ್ತಿ |
ತೃಷ್ಣೆ |
ಮಧ್ಯಮಲೋಕ-ಭೂಮಿ |
ಪರಿಭ್ರಮಣೆ |
ತಮಸ್ಸು |
ಮೋಹ |
ಅಪ್ರವೃತ್ತಿ, ಅಜ್ಞಾನ |
ಪ್ರಮಾದ |
ಆಲಸ್ಯ, ನಿದ್ರೆ |
ಅಧೋಲೋಕ=ನರಕಾದಿ |
ದುಃಖ |
* * *