ಈ ಲೇಖನವನ್ನು ಸಮಾಪ್ತಿಗೊಳಿಸುವ ಮುನ್ನ ಪ್ರಕೃತ ಗ್ರಂಥದ ಕಡೆಗೆ ಬಂದಿರುವ ವರ್ಣ ಹಾಗೂ ಮತತ್ರಯಸಮನ್ವಯಗಳ ಬಗೆಗೆ ಒಂದೆರಡು ಮಾತು ಹೇಳಬೇಕು. ಡಿ.ವಿ.ಜಿ. ಅವರ ವಿಚಾರ ಇಲ್ಲಿ ಕೊಂಚ ಕುಂಠಿತವಾದಂತಿದೆ. ಜನ್ಮದಿಂದಲೇ ವರ್ಣವು ನಿರ್ಧಾರಿತವಾಗುತ್ತದೆ ಎಂಬುದು ಅವರ ನಿಲುಮೆ. ವರ್ಣನಿರ್ಣಯವು ಜನ್ಮದಿಂದಲೂ ಸಾಧ್ಯವೆಂದರೆ ಯಾವ ವಿಪ್ರತಿಪತ್ತಿಯೂ ಇಲ್ಲ; ಜನ್ಮದಿಂದ ಮಾತ್ರ ವರ್ಣನಿರ್ಣಯ ಸಾಧ್ಯವೆಂದು ಹೇಳುವುದು ಯುಕ್ತವಾಗಿ ತೋರದು. ಶ್ರೀಕೃಷ್ಣನೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ” (೪.೧೩) ಎಂದು ಹೇಳಿದ್ದಾನಷ್ಟೆ. ಜೊತೆಗೆ ‘ವರ್ಣ’ ಎಂಬ ಶಬ್ದದ ಧಾತುಮೂಲದ ಅರ್ಥವೇ ‘ಆಯ್ಕೆ’ಯ ಸ್ವಾತಂತ್ರ್ಯವನ್ನು ಸೂಚಿಸುತ್ತಿದೆ. ವಿಶಾಲವಾಗಿ ಪರಿಭಾವಿಸಿದಾಗ ವರ್ಣನಿರ್ಣಯದಲ್ಲಿ ಹುಟ್ಟು, ಸುತ್ತಲಿನ ಪರಿಸರ, ಜೀವನಸಂದರ್ಭಗಳೇ ಮುಂತಾದ ಸಕಲ ಸಂಗತಿಗಳೂ ಪ್ರಭಾವ ಬೀರುವುದು ವಿಶದವಾಗುತ್ತದೆ. ಹೀಗಿದ್ದರೂ ಅಲ್ಲಿ ಹೆಚ್ಚಿನ ಬೆಲೆ ಸಲ್ಲತಕ್ಕದ್ದು ವರ್ಣಿಯ ಪ್ರತ್ಯಭಿಜ್ಞಾನಕ್ಕೆ. ಸತ್ತ್ವರಜಸ್ತಮೋಗುಣಗಳ ಪೈಕಿ ನನ್ನ ಸ್ವಭಾವ ಯಾವ ಕಡೆಗೆ ವಾಲುತ್ತದೆ? ಗುಣಗಳ ಕ್ರಿಯಾನ್ವಯವಾಗುವ ಕರ್ಮರಂಗದಲ್ಲಿ ನಾನು ಯಾವ ಭೂಮಿಕೆಯನ್ನು ಸಹಜವಾಗಿ, ಸಮರ್ಥವಾಗಿ ನಿರ್ವಹಿಸಬಲ್ಲೆ? ಎಂಬ ಪ್ರಶ್ನೆಗಳನ್ನು ವರ್ಣಿಯು ಕೇಳಿಕೊಂಡು ಅದಕ್ಕನುಗುಣವಾದ ವರ್ಣನಿರ್ಣಯವನ್ನು ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಹೀಗೆ ಬುದ್ಧಿಪೂರ್ವಕವಾದ ನಿಶ್ಚಯಕ್ಕೆ ಬರಲು ಸಾಧ್ಯವಾಗದ ಕಾರಣ, ಎಲ್ಲರೂ ಒಂದು ಮಟ್ಟಿನ ಸತ್ಯವಾಗಿ ಒಪ್ಪಿಕೊಳ್ಳಬಹುದಾದ ಜನ್ಮಮೂಲವನ್ನು ವರ್ಣಹೇತುವಾಗಿ ನಮ್ಮ ಪೂರ್ವಿಕರು ನಿಶ್ಚಯಿಸಿದಂತೆ ತೋರುತ್ತದೆ. ಹೀಗಲ್ಲವಾದಲ್ಲಿ ಜನ್ಮಮಾತ್ರನಿಷ್ಠವಾದ ವರ್ಣವ್ಯವಸ್ಥೆ ಕೇವಲ ಪುಸ್ತಕದಲ್ಲಿ ಕಂಡುಬಂದು ಜೀವನಾನ್ವಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಜನ್ಮದಿಂದ ಯಾವುದೋ ಒಂದು ವರ್ಣಕ್ಕೆ ಸೇರುವ ವ್ಯಕ್ತಿಗಳು ತಮ್ಮ ಸ್ವಗುಣಸಂಪತ್ತಿನ ಹಾಗೂ ತಜ್ಜನ್ಯ ಸ್ವಕರ್ಮ-ಸ್ವಧರ್ಮಗಳ ಪ್ರತ್ಯಭಿಜ್ಞಾನ ಮಾಡಿಕೊಂಡು ಮತ್ತೊಂದು ವರ್ಣಕ್ಕೆ ಸಹಜವಾಗಿ ವರ್ತಿಸುವ ಸಾವಿರಾರು ಉದಾಹರಣೆಗಳು ನಮ್ಮ ಮುಂದೆ ಇವೆಯಷ್ಟೆ. ಇವನ್ನೆಲ್ಲ ಅಶಾಸ್ತ್ರೀಯವೆಂದು ತಳ್ಳಿಹಾಕದೆ ಅವುಗಳ ಆಳದಲ್ಲಿರುವ ‘ಆಯ್ಕೆ’ಯ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವುದೊಳಿತು.
ಇನ್ನು ಮತತ್ರಯಸಮನ್ವಯದ ವಿಚಾರ. ಡಿ.ವಿ.ಜಿ. ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತಗಳನ್ನು ಪರತತ್ತ್ವಾವಗಮಕ್ಕಿರುವ ಮೂರು ಸಾಧನಗಳೆಂದು ಪರಿಗ್ರಹಿಸಿ ಇವುಗಳ ಪೈಕಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ ಎಂದು ಬಗೆಗಿದ್ದಾರೆ. ಭಗವದ್ಗೀತೆಯು ಮುಖ್ಯವಾಗಿ ಸಾಧನಶಾಸ್ತ್ರ; ಇದಕ್ಕನುಗುಣವಾಗಿ ನಡಸುವ ದಾರ್ಶನಿಕ ಚರ್ಚೆಯೂ ಸಾಧನದ ಹಿನ್ನೆಲೆಯಲ್ಲಿಯೇ ಮೂಡುವುದು ಸಹಜ - ಎಂದು ತರ್ಕಿಸಿದರೆ ಈ ನಿಲವು ಯುಕ್ತವೆಂದು ಒಪ್ಪಬಹುದು. ಆದರೆ ದಾರ್ಶನಿಕ ವಿಚಾರವು ಯಾವ ಒಂದು ಗ್ರಂಥಕ್ಕೂ ಸೀಮಿತವಲ್ಲ; ಅಲ್ಲಿ ಯಾವುದೋ ಒಂದು ದೃಷ್ಟಿಕೋನದ ಸೀಮಾರೇಖೆ ಸಲ್ಲತಕ್ಕದ್ದಲ್ಲ. ಶಾಸ್ತ್ರ, ಯುಕ್ತಿ ಮತ್ತು ಅನುಭವ - ಇವು ಮೂರೂ ಒಂದೇ ದಿಕ್ಕಿನಲ್ಲಿ ಮುಖಮಾಡಿ ಸಾಲುಗೂಡಿದಾಗ ತತ್ತ್ವದ ಬಗೆಗೆ ನಾವು ನಡಸಿದ ವಿಚಾರ ಸಮರ್ಪಕವಾಗಿದೆಯೆಂದು ಹೇಳಬಹುದು. ಶಾಸ್ತ್ರ-ಯುಕ್ತಿಗಳನ್ನು ದುಡಿಸಿಕೊಳ್ಳುವುದರಲ್ಲಿ ಎಷ್ಟೋ ಬಾರಿ ಆರ್ಜವಕ್ಕಿಂತ ಅಭಿನಿವೇಶಗಳೇ ಮೇಲೆದ್ದುಬರುವ ಕಾರಣ ತತ್ತ್ವನಿಶ್ಚಯದಲ್ಲಿ ಅನುಭವಕ್ಕೆ ಪರಮಪ್ರಾಶಸ್ತ್ಯವಿದೆ. ಈ ಅನುಭವವಾದರೋ ಪ್ರತಿಜೀವಪ್ರತ್ಯೇಕವಾದ ಸಾಪೇಕ್ಷಸ್ತರದ್ದಲ್ಲದೆ ಸರ್ವಜೀವಸಮಾನವಾದ ನಿರಪೇಕ್ಷಸ್ತರದ್ದಾಗಿದೆ. ಇದೇ ಪೂರ್ಣಾನುಭವ. ಇಂಥ ಅನುಭವದ ಸ್ವರೂಪವು ಸ್ಫುಟವಾಗುವುದು ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಅವಸ್ಥಾತ್ರಯದ ಯಥಾರ್ಥ ಅವಗಮದಿಂದ; ಅಧ್ಯಾರೋಪ-ಅಪವಾದ ಎಂಬ ಶ್ರೌತಪ್ರಕ್ರಿಯೆಯ ಮೂಲಕ. ಡಿ.ವಿ.ಜಿ. ಈ ಪ್ರಕ್ರಿಯೆಯ ಮೂಲಕ ಪೂರ್ಣಾನುಭವವನ್ನು ಶೋಧಿಸಬೇಕೆಂದು ಒತ್ತುಕೊಟ್ಟು ಪ್ರತಿಪಾದಿಸದಿರುವುದೇ ಅವರ ಈ ನಿಟ್ಟಿನ ಅಸಮರ್ಪಕತೆಗೆ ಕಾರಣ. ಸಾಧನೆಗೆ ಭೇದ, ಭೇದಾಭೇದ, ಅಭೇದ ಎಂಬ ಎಲ್ಲ ಮಾರ್ಗಗಳೂ ಸಲ್ಲುತ್ತವೆ; ಆದರೆ ಸಿದ್ಧಿ ಅಭೇದದಲ್ಲಿ ಮಾತ್ರ ನೆಲಸಿದೆ. ಇದರೊಟ್ಟಿಗೆ ಮತ್ತೊಂದು ಸ್ಪಷ್ಟೀಕರಣವೂ ಬೇಕಿದೆ. ದಾರ್ಶನಿಕ ವಿಚಾರಗಳಲ್ಲಿ ಸಮನ್ವಯವನ್ನು ಸಾಧಿಸಬಹುದಾದುದು ಅದ್ವೈತದೃಷ್ಟಿಯಿಂದ ಮಾತ್ರ; ಆತ್ಯಂತಿಕ ಭೇದವನ್ನೊಪ್ಪುವ ಯಾವ ದೃಷ್ಟಿಯಿಂದಲೂ ಅಲ್ಲ. ದ್ವೈತದೃಷ್ಟಿ ಪ್ರತ್ಯೇಕತೆಯನ್ನೇ ಮುಂದುಮಾಡುತ್ತದೆ; ಭೇದವನ್ನೇ ಉತ್ತೇಜಿಸುತ್ತದೆ; ನಾಮ-ರೂಪಗಳನ್ನು ಪರಮಾರ್ಥವಾಗಿ ಗ್ರಹಿಸುತ್ತದೆ. ಇಂಥ ನಿಲವಿಗೆ ಸಮನ್ವಯ ಹೇಗೆ ಸಾಧ್ಯವಾದೀತು? ಇನ್ನೂ ಮುಂದುವರಿದು ಹೇಳುವುದಾದರೆ, ಸಾಧನೆಯ ಮಟ್ಟದಲ್ಲಿ ಎಲ್ಲ ದೃಷ್ಟಿಕೋನಗಳೂ ಉಪಾದೇಯವೆಂದು ಹೇಳುವುದು ಕೂಡ ಅದ್ವೈತ ಮಾತ್ರ; ದ್ವೈತಮೂಲದ ದರ್ಶನಗಳಲ್ಲ. ಹೀಗಾಗಿ ಸರ್ವಮತಸಮನ್ವಯವನ್ನು ಸಾಧಿಸಬೇಕಾದರೆ ಅದ್ವೈತವನ್ನು ಆದರಿಸಲೇಬೇಕು. ಭೇದಮೂಲದ ಇನ್ನಾವ ದರ್ಶನದ ದೃಷ್ಟಿಯಿಂದಲೂ ಸಮನ್ವಯ ಸಾಧ್ಯವಿಲ್ಲ. ಡಿ.ವಿ.ಜಿ. ಅವರ ದೃಷ್ಟಿಯಾದರೋ ಸಾಮಾಜಿಕ ಸಾಮರಸ್ಯವನ್ನು ಗಮನಿಸಿಕೊಂಡು, ಗೀತಾವ್ಯಾಸಂಗಕ್ಕೆ ಎಲ್ಲರನ್ನೂ ಸೆಳೆಯಬೇಕು, ಅದರಿಂದ ಯಾರನ್ನೂ ಹೊರಗಿಡಬಾರದು ಎಂಬ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ಇದು ಸರ್ವಥಾ ಒಳ್ಳೆಯದು. ಆದರೆ ಸಾಮಾಜಿಕ ಸಾಮರಸ್ಯವೇ ಆಧ್ಯಾತ್ಮಿಕ ಸಮನ್ವಯವಲ್ಲ ಎಂಬುದನ್ನು ನಾವು ಗಮನಿಸಬೇಕು. ಪರತತ್ತ್ವದ ಪರಿಸ್ಫುಟ ಪರಿಜ್ಞಾನ, ಅದರ ನೆಲೆಯಲ್ಲಿ ಸಾಧನೆಗಳ ನಾನಾತ್ವದ ಬಗೆಗೆ ಸಹಾನುಭೂತಿ, ಈ ಮನೋಭಾವದಿಂದ ಸಮನ್ವಯ. ಇದು ಕ್ರಮ.
* * *
ಉಪಸಂಹಾರ
ಒಟ್ಟಿನಲ್ಲಿ ‘ಜೀವನಧರ್ಮಯೋಗ’ವು ಸರ್ವಾನುಕೂಲಿಯಾದ, ಸರ್ವೋಪಾದೇಯವಾದ ಗೀತಾವಿವೃತಿ. ಮತ್ತಾವ ವಿವರಣೆಯನ್ನು ಓದಿದರೂ ಸಿಗದ ಪರಿಪಕ್ವ ಪರಿಪ್ರೇಕ್ಷೆ ನಮಗೆ ಡಿ.ವಿ.ಜಿ. ಅವರ ಕೃತಿಯ ವ್ಯಾಸಂಗದಿಂದ ದೊರೆಯುತ್ತದೆ. ಜೀವನವನ್ನು ಹಸನುಮಾಡಿಕೊಳ್ಳಬೇಕು ಎಂಬ ಸದುದ್ದೇಶದಿಂದ ತುಡಿಯುತ್ತಿರುವ ಎಲ್ಲರೂ ನಚ್ಚಬಹುದಾದ ಅನುಷ್ಠಾನಪರ ಮಾರ್ಗದರ್ಶನ ಈ ಮೂಲಕ ಲಭಿಸುತ್ತದೆ. ಇದರಿಂದ ‘ನನ್ನ ಉತ್ತರವಾದಿ ನಾನೇ’ ಎಂಬ ಭಾವನೆ ಋಣಾತ್ಮಕವಾಗಿ ಅಲ್ಲದೆ ಧನಾತ್ಮಕವಾಗಿ ಮೂಡಿ ಸ್ವಧರ್ಮದ ಅಭಿಜ್ಞಾನಕ್ಕೂ ಅದರಿಂದ ವೇದ್ಯವಾದ ಸ್ವಕರ್ಮದ ಆಚರಣೆಗೂ ಪ್ರೇರಣೆಯೊದಗುತ್ತದೆ. ಪ್ರತಿಯೊಬ್ಬರೂ ಹೀಗೆ ಶಾಸ್ತ್ರವಿಹಿತವೂ ಸ್ವಪರಹಿತವೂ ಆದ ವಿಧಾನದಲ್ಲಿ ಜೀವನವನ್ನು ನಡಸಿದರೆ ಲೋಕಸಂಸ್ಥಿತಿ ತಾನೇತಾನಾಗಿ ಸಿದ್ಧಿಸುತ್ತದೆ. ‘ಜೀವನಧರ್ಮಯೋಗ’ಕ್ಕೆ ಈ ಬಗೆಯ ಲೋಕಸಂಸ್ಥಿತಿಸಾಧಕ ಶಕ್ತಿಯಿದೆ. ಈ ಸದ್ಗ್ರಂಥದ ಅಧ್ಯಯನದ ಮೂಲಕ ನಾವು ಗೀತೆಯು ವಿಧಿಸುವ ಯಜ್ಞದೃಷ್ಟಿಯನ್ನು ಕೊಂಚವಾದರೂ ಮೈಗೂಡಿಸಿಕೊಂಡು ತಪೋದಾನಗಳ ದಾರಿಯಲ್ಲಿ ಸಾಗಿ ಜೀವನವನ್ನು ಸಾರ್ಥಕ ಮಾಡಿಕೊಳ್ಳೋಣ.
“ಜಗದ್ರಣಾಂಗಣೇ ಯಸ್ಯ ಸ್ಮರಣಂ ಜಯಕಾರಣಮ್ |
ಪಾರ್ಥಸಾರಥಯೇ ತಸ್ಮೈ ಶ್ರೀಕೃಷ್ಣಬ್ರಹ್ಮಣೇ ನಮಃ ||”
ಅನುಬಂಧ — ಧರ್ಮಜಿಜ್ಞಾಸೆ
ಡಿ.ವಿ.ಜಿ. ಅವರು ಪ್ರಕೃತ ಗ್ರಂಥದಲ್ಲಿ ಧರ್ಮತತ್ತ್ವವನ್ನು ಹಲವಾರು ನೆಲೆಗಳಿಂದ ವಿವೇಚಿಸಿದ್ದಾರೆ. ಧರ್ಮದ ಸ್ಥಿತಿಯ ಆಯಾಮವನ್ನು ಮಾತ್ರವಲ್ಲದೆ ಗತಿಯ ಆಯಾಮವನ್ನೂ ಪ್ರತಿಜೀವಪ್ರತ್ಯಗ್ರವಾದ ಸ್ವರೂಪವನ್ನೂ ಗಮನದಲ್ಲಿರಿಸಿಕೊಂಡು ಡಿ.ವಿ.ಜಿ. ಅದನ್ನು ಶೋಧಿಸಿದ್ದಾರೆ. ಅವರು ಪ್ರತಿ ಬಾರಿ ಈ ತತ್ತ್ವವನ್ನು ಕುರಿತು ಹೇಳುವಾಗಲೂ ಹಿಂದೆ ಹೇಳಿದ ವಿಚಾರಕ್ಕೆ ವಿಸ್ತರಣ ಒದಗುವುದನ್ನು, ಅದು ಮುಂದಿನ ವಿಚಾರಕ್ಕೆ ಎಡೆಮಾಡಿಕೊಡುವುದನ್ನು, ಇಷ್ಟಾದರೂ ತನ್ನಂತೆಯೇ ಸಂಪೂರ್ಣವೆಂಬಂತೆ ತೋರುವುದನ್ನು ಲಕ್ಷಿಸಬಹುದು. ಪ್ರತಿಪಾದ್ಯ ವಿಷಯವು ಒಂದೇ ಆದರೂ ಅದನ್ನು ಡಿ.ವಿ.ಜಿ. ವಿವರಿಸಿರುವ ಬಗೆಗಳು ಹತ್ತಾರು. ಎಲ್ಲಿಯೂ ಪುನರುಕ್ತಿಯಿಲ್ಲ, ಗತಾನುಗತಿಕತೆಯಿಲ್ಲ. ಇದು ಅಲ್ಪಸ್ವಲ್ಪದ ಸಾಧನೆಯಲ್ಲ. ಈ ಹೇಳಿಕೆಗಳೊಡನೆ ಡಿ.ವಿ.ಜಿ. ತಮ್ಮ ಇತರ ಕೃತಿಗಳಲ್ಲಿಯೂ ಧರ್ಮವನ್ನು ಕುರಿತು ಆಡಿರುವ ಮಾತುಗಳನ್ನು ಕೂಡಿಸಿ ಅಭ್ಯಾಸಮಾಡಿದರೆ ಭಾರತೀಯ ಪರಂಪರೆಯು ಜಗತ್ತಿಗೆ ನೀಡಿರುವ ಕೊಡುಗೆಗಳಲ್ಲಿ ಪ್ರಮುಖವಾದ ಧರ್ಮದ ಪರಿಕಲ್ಪನೆಯನ್ನು ಸಾಮಗ್ರ್ಯದಿಂದ ಅರಿಯಲು ಸಾಧ್ಯವಾಗುತ್ತದೆ. ಇಂಥ ಅಧ್ಯಯನಕ್ಕೆ ಅನುಕೂಲಿಸುವಂತೆ ಪ್ರಕೃತದಲ್ಲಿ ಧರ್ಮವಿಷಯಕವಾದ ವಿಚಾರಗಳನ್ನು ಸಂಕಲಿಸಿಕೊಡಲಾಗಿದೆ:
“ಲೋಕಜೀವನದ ಸಮ್ಯಗ್‌ವಿಧಾನವೇ ಧರ್ಮ ... ಮೋಕ್ಷಕ್ಕೆ ಬೇಕಾದ ಪೂರ್ವಸಿದ್ಧತೆ ಧರ್ಮ; ಧರ್ಮದ ಫಲಪರಿಪೂರ್ಣತೆ ಮೋಕ್ಷ”. (ಪು. ೪೫)
“ಮನುಷ್ಯಜೀವನದ ಒಂದು ಕೊನೆ ಕಾಮ - ಪ್ರಕೃತ್ಯಧೀನ. ಇನ್ನೊಂದು ಕೊನೆ ಮೋಕ್ಷ - ಪ್ರಕೃತ್ಯತೀತ. ಬುಡದಿಂದ ತುದಿಗೇರುವ ಪುರುಷಪ್ರಯತ್ನವೇ ಧರ್ಮ”. (ಪು. ೭೫)
“... ಧರ್ಮಸಾಧನೆಯಲ್ಲಿ ದಯೆಗೊಂದು ಸ್ಥಾನವಿದ್ದರೆ ದಂಡಕ್ಕೂ ಒಂದು ಸ್ಥಾನವಿರುತ್ತದೆ. ಧರ್ಮವನ್ನು ಉಳಿಸಹೊರಟವನಿಗೆ ಮೊದಲು ಬೇಕಾದ ಗುಣ ಎದೆಗಾರಿಕೆ. ಅನ್ಯಾಯವನ್ನೂ ಅಧರ್ಮವನ್ನೂ ಕಂಡಾಗ ಎದುರಿಸಿ ಹೋರದೆ ಓಡಿಹೋಗುವೆನೆಂಬವನು ತೋರುವುದು ದಯೆಯನ್ನಲ್ಲ; ಅಧರ್ಮಪ್ರೋತ್ಸಾಹವನ್ನು”. (ಪು. ೯೭)
“ಧರ್ಮದ ಜೀವಾಳ ಜೀವೋತ್ಕರ್ಷೆ. ಅದರಿಂದ ಜೀವಕ್ಕೆ ಒಂದು ಸಂಸ್ಕಾರವಾಗಿ ಅದು ಕೊಂಚವಾದರೂ ಉತ್ತಮ ದಶೆಗೆ ಹತ್ತಬೇಕು”. (ಪು. ೯೯)
“ಪಿತಾಮಹಬ್ರಹ್ಮನಂತೆ ಧರ್ಮವನ್ನು ಚತುರ್ಮುಖಿಯೆನ್ನಬಹುದು. ಬ್ರಹ್ಮದೇವನು ನಾಲ್ಕು ಬಾಯಿಗಳಿಂದ ನಾಲ್ಕು ವೇದಗಳನ್ನು ಹೇಳುತ್ತಾನಂತೆ. ಧರ್ಮವು ತನ್ನ ನಾಲ್ಕು ಮುಖಗಳಿಂದ (೧) ಜೀವಪೋಷಣೆ, (೨) ಜೀವಶೋಧನೆ, (೩) ತತ್ತ್ವವಿಜ್ಞಾನ, (೪) ಲೋಕಮೈತ್ರಿ - ಈ ನಾಲ್ಕು ಕರ್ತವ್ಯಗಳನ್ನು ಬೋಧಿಸುತ್ತದೆ”. (ಪು. ೧೦೦)
“ಧರ್ಮ: ವಿಹಿತವೂ ಸ್ವಹಿತ ಪರಹಿತಸಾಧಕವೂ ಆದ ಲೌಕಿಕ ವೈದಿಕ ಕರ್ತವ್ಯವ್ಯವಹಾರ ನೀತಿಮರ್ಯಾದೆಗಳ ಸಮುದಾಯ”. (ಪು. ೧೧೧)
“ಜೀವೋದ್ಧಾರಕವಾದ ಜೀವಜಗದ್ವ್ಯವಸ್ಥೆಯೇ ಧರ್ಮ”. (ಪು. ೧೧೪)
“ಯಾವ ಕಟ್ಟುಪಾಡು ಎಲ್ಲವನ್ನೂ ತಕ್ಕಂತೆ ಕಾಪಾಡಬಲ್ಲುದೋ ಅದು ಧರ್ಮ. ‘ಧರ್ಮೋ ರಕ್ಷತಿ ರಕ್ಷಿತಃ.’ ಯಾವುದನ್ನು ನಾವು ಪಾಲಿಸಿದರೆ ಅದು ನಮ್ಮನ್ನು ಪಾಲಿಸುವುದೋ ಆ ವಿಧದ ನೀತಿನಿಯಮಗಳು ಧರ್ಮ. ಪ್ರಯೋಗದಲ್ಲಿ ಧರ್ಮವು ಮುಖ್ಯವಾಗಿ ಮೂರು ವಿಧಗಳಾಗಿದೆ: (೧) ನೈಜ, (೨) ನ್ಯಾಯ, (೩) ಮೈತ್ರಿ”. (ಪು. ೧೨೬)
“ಧರ್ಮದಿಂದ ಆಗುವ ಪ್ರಯೋಜನಗಳು ಮುಖ್ಯವಾಗಿ ಮೂರು: (೧) ಲೋಕಸಂಸ್ಥಿತಿ, (೨) ಜೀವಕ್ಕೆ ಸುಖಸಂಪಾದನೆ, (೩) ಜೀವಕ್ಕೆ ಹಿತಸಾಧನೆ”. (ಪು. ೧೨೮)
“ಧರ್ಮದ ಸ್ವರೂಪರಚನೆಯ ದೃಷ್ಟಿಯಿಂದ ಧರ್ಮವು ವಸ್ತುಸತ್ಯದ ಪ್ರಯೋಗಾಚರಣೆಯೆನ್ನಬಹುದು ... ನಮಗಿರುವ ಸಂದರ್ಭದ ತತ್ತ್ವವನ್ನು - ಯಥಾರ್ಥವನ್ನು - ಗ್ರಹಿಸಿ ಅದಕ್ಕೆ ನಮ್ಮ ನಡವಳಿಕೆಯನ್ನು ಹೊಂದಿಸಿಕೊಳ್ಳುವುದು ಧರ್ಮ ... ಪರಮಾತ್ಮಸಾಕ್ಷಿಕವಾದ ವರ್ತನೆ ಧರ್ಮ. ಮನುಷ್ಯ ತಾನು ಮಾಡಿದ್ದಕ್ಕೂ ಮಾಡದೆ ಬಿಟ್ಟದ್ದಕ್ಕೂ ಪರಮೇಶ್ವರನಿಗೆ ಪ್ರತ್ಯುತ್ತರಬಾಧ್ಯ - ಎಂದರೆ ಜವಾಬ್ದಾರ - ಎಂಬ ಭಾವನೆಯನ್ನು ಮನಸ್ಸಿನಲ್ಲಿ ಸರ್ವದಾ ಧರಿಸಿ ನಡೆಯುವ ನಡವಳಿಕೆ ಧರ್ಮ”. (ಪು. ೧೨೮)
“... ಮನುಷ್ಯನು ಸ್ವಸುಖವನ್ನು ಸಾಧಿಸಿಕೊಳ್ಳುವಲ್ಲಿ ಜೀವದ ಸದ್ಗತಿಯನ್ನು ಮರೆಯದೆಯೂ ಇತರ ಜನದ ಸುಖಸಾಧನೆಗೆ ಅಡ್ಡಿ ತಾರದೆಯೂ ಇತರ ಜನಕ್ಕೆ ತನ್ನ ನೈಜದಿಂದ ಸಹಾಯವಾಗುವಂತೆಯೂ ನಡೆದುಕೊಳ್ಳಬೇಕೆಂಬ ನಿಬಂಧನೆಯೇ ಧರ್ಮ”. (ಪು. ೧೩೦)
“ಧರ್ಮವು ಫಲಾಶ್ರಿತವಲ್ಲ. ಧರ್ಮವು ಸ್ವತಂತ್ರ. ಅದರ ಮೂಲಸ್ಥಾನ ಆತ್ಮಚೈತನ್ಯದ ಚಿಚ್ಛಕ್ತಿಯಲ್ಲಿರುತ್ತದೆ; ಚಿಚ್ಛಕ್ತಿಯಿಂದ ನಡೆಯುವ ಆತ್ಮಾನಾತ್ಮವಿವೇಕದಲ್ಲಿರುತ್ತದೆ; ಆತ್ಮೋತ್ಕರ್ಷದ ಪರಮಾಪೇಕ್ಷಣೀಯತೆಯಲ್ಲಿರುತ್ತದೆ. ಧರ್ಮವು ಜೀವೋದ್ಧಾರಕ್ಕಾಗಿ, ಬಾಹ್ಯಲಾಭಗಳಿಗಲ್ಲ”. (ಪು. ೧೩೩-೩೪)
“ಒಂದಾನೊಂದು ಕಾರ್ಯವು ಧರ್ಮವೋ ಅಲ್ಲವೋ ಎಂದು ಪ್ರಶ್ನೆ ಬಂದರೆ ಅದು ಮೋಕ್ಷಕ್ಕೆ ಸಾಧಕವೋ ಬಾಧಕವೋ ನೋಡಿರಿ ಎಂದು ಉತ್ತರ”. (ಪು. ೧೪೦)
“ಜಗತ್ತು ಈಶ್ವರಕಾರ್ಯ. ಈ ಸಂತತವಾದ ಮಹಾಕಾರ್ಯದಲ್ಲಿ ಅನಂತಶಕ್ತಿಗಳು ಸೇರಿವೆ. ಆ ಭಗವಚ್ಛಕ್ತಿಗಳೊಡನೆ ತಾನೂ ಅವುಗಳಲ್ಲೊಂದು ಎಂದು ಸೇರಿಕೊಂಡು ಸಹಕರಿಸುವ ಅವಕಾಶವನ್ನು ಮನುಷ್ಯನಿಗೆ ಈಶ್ವರವ್ಯವಸ್ಥೆ ದೊರಕಿಸಿದೆ. ಅದೇ ಧರ್ಮ”. (ಪು. ೧೭೨)
“ಮನುಷ್ಯನಿಗೆ ಯಾವ ಯಾವ ಗುಣಗಳು, ಯಾವ ಯಾವ ಶಕ್ತಿಗಳು, ಎಂತೆಂಥ ಒಲವುಗಳು, ಎಂತೆಂಥ ಹುಮ್ಮಸ್ಸುಗಳು ಸ್ವಾಭಾವಿಕವಾಗಿ ಬಂದಿರುತ್ತವೋ ಆ ಗುಣಶಕ್ತಿಗಳನ್ನೂ ಆ ಮನಃಪ್ರವಣತೆ ಆ ಅಂತಃಪ್ರವೃತ್ತಿಗಳನ್ನೂ ಲೋಕಪ್ರಯೋಜನಕ್ಕಾಗಿ ವಿನಿಯೋಗಿಸುವುದು ಧರ್ಮ”. (ಪು. ೧೮೩)
“ಯಾರುಯಾರಿಗೆ ಯಾವ ಯಾವ ದಾರಿಯಲ್ಲಿ ಒಳ್ಳೆಯದನ್ನು ಹುಡುಕಬೇಕೆಂದು ಅಂತರಂಗದಲ್ಲಿ ಪ್ರೇರಣೆಯಾಗುತ್ತದೆಯೋ ಅವರವರಿಗೆ ಅದದು ಧರ್ಮದ್ವಾರ ... ಧರ್ಮಾನುಸಂಧಾನವು ವಿವೇಕದಿಂದ ಆಗತಕ್ಕದ್ದೇ ಹೊರತು ಅಂಧಶ್ರದ್ಧೆಯಿಂದ ಸಾಧ್ಯವಿಲ್ಲ ... ಧರ್ಮವು ಮೂಲತತ್ತ್ವಭಾಗದಲ್ಲಿ ಎಲ್ಲರಿಗೂ ಒಂದೇ; ಪ್ರಯೋಗಭಾಗದಲ್ಲಿ ಬೇರೆ ಬೇರೆ”. (ಪು. ೧೯೮-೯೯)
“ಋತವು ಸೃಷ್ಟಿಯೊಳಗಿರುವ ನಿಯಮ ... ಋತದ ಜೀವನಾನ್ವಯವೇ ಧರ್ಮ. ಧರ್ಮಾಧರ್ಮಗಳೇ ಪುಣ್ಯಪಾಪಗಳು”. (ಪು. ೩೩೩)
“ಜೀವಕ್ಕೂ ಜಗತ್ತಿಗೂ ನಡುವೆ ಇರಬೇಕಾದ ಅನ್ಯೋನ್ಯಹಿತಸಂಬಂಧವೇ ಧರ್ಮ”. (ಪು. ೫೩೮)
“ಪ್ರಕೃತಿಯನ್ನು ಮೀರುವುದು ಹೇಗೆ? ಅದಕ್ಕೆ ಒಂದು ಉಪಾಯ ಏರ್ಪಟ್ಟಿದೆ. ಆ ಉಪಾಯವೇ ಧರ್ಮ. ಪ್ರಕೃತಿಯು ಬೀಸುತ್ತಿರುವ ಮೋಹದ ಬಲೆಯಿಂದ ಹೊರಕ್ಕೆ ಬರಬೇಕಾದರೆ ಆಕೆಯ ವಿಷಯದಲ್ಲಿ ಯಾವ ನಯೋಪಾಯಗಳನ್ನನುಸರಿಸಬೇಕೋ ಅದು ಧರ್ಮ. ಜೀವಜಗತ್ಸಂಬಂಧದಲ್ಲಿ ಉಭಯಪ್ರಯೋಜಕವಾಗಿ, ಆತ್ಮೋತ್ಕರ್ಷಸಾಧಕವಾಗುವ ಕ್ರಮನಿಯಮಗಳೇ ಧರ್ಮ”. (ಪು. ೫೩೯)
“ಸತ್ಯವೆಂದರೆ ಯಥಾರ್ಥಸ್ಥಿತಿ. ಧರ್ಮವೆಂದರೆ ಆ ಯಥಾರ್ಥವನ್ನನುಸರಿಸಿದ ನಡವಳಿಕೆ”. (ಪು. ೫೪೧)
* * *
ಆಧಾರಗ್ರಂಥಗಳು
೧. ಡಿ.ವಿ.ಜಿ. ಕೃತಿಶ್ರೇಣಿ (ಸಂ. ೧ - ವಿಚಾರ, ವಿಮರ್ಶೆ; ಸಂ. ಹಾ. ಮಾ. ನಾಯಕ). ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೨೦೧೩
೨. ವಿರಕ್ತ ರಾಷ್ಟ್ರಕ ಡಿವಿಜಿ. ಡಿ. ಆರ್. ವೆಂಕಟರಮಣನ್. ನವಕರ್ನಾಟಕ ಪ್ರಕಾಶನ, ಬೆಂಗಳೂರು, ೨೦೧೪
೩. ಶ್ರೀಮದ್ಭಗವದ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೋಗ. ಡಿ.ವಿ.ಜಿ. ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ೨೦೧೮