ಸ್ವಧರ್ಮಯೋಗ: ವೇದ-ಪುರಾಣಬಾಲಕರ ಮೌಲ್ಯನಿಶ್ಚಯ

ಉಪಕ್ರಮ

ನಮ್ಮ ಪರಂಪರೆಯ ವೇದ-ಪುರಾಣಕಥೆಗಳಲ್ಲಿ ಬರುವ ಅನೇಕಪಾತ್ರಗಳನ್ನೂ ಸಂಗತಿಗಳನ್ನೂ ಆಧುನಿಕರು ಬಗೆಬಗೆಯಾಗಿ ವಿಶ್ಲೇಷಿಸುವುದುಂಟು. ಹೀಗೆ ಮಾಡುವಲ್ಲಿ ಅದೆಷ್ಟೋ ಬಾರಿ ಮೂಲದ ತತ್ತ್ವದೃಷ್ಟಿಗೆ ಅಪಚಾರವಾಗುವ ಸಂದರ್ಭಗಳು ಅಪಾರ. ಇಂಥ ಒಂದು ಅಂಶವನ್ನು ನಮ್ಮ ಪುರಾಣಬಾಲಪಾತ್ರಗಳಲ್ಲಿ ಪ್ರಸಿದ್ಧನಾದ ಪ್ರಹ್ಲಾದನನ್ನು ಕುರಿತು ಮಾಡುವ ವಿಶ್ಲೇಷಣೆಯಲ್ಲಿ ಗಮನಿಸಬಹುದು. ಈ ಪ್ರಕಾರ ಪ್ರಹ್ಲಾದನು ಪಿತೃಹತ್ಯಾಪ್ರವೃತ್ತಿಯ (Parricide) ಸಂಕೇತವಾಗಿದ್ದಾನೆ. ಇದರ ತಾತ್ಪರ್ಯವಿಷ್ಟೆ: ಮಕ್ಕಳಿಗೆ ತಮ್ಮ ತಂದೆ-ತಾಯಿಗಳು ಮಾಡಿದ ಎಷ್ಟೋ ಕೆಲಸಗಳು ಸರಿಬರುವುದಿಲ್ಲ. ಮಾತ್ರವಲ್ಲ, ಅವರ ಸ್ವಾಭಿಪ್ರಾಯಗಳ ಹೇರುವಿಕೆಯೂ ಸಮ್ಮತವಾಗುವುದಿಲ್ಲ. ಈ ಕಾರಣದಿಂದ ಅವರಿಗೆ ಅನಿವಾರ್ಯವಾಗಿ ಮಾತಾ-ಪಿತೃಗಳಲ್ಲಿ ವೈರ-ವಿರೋಧಗಳೂ ತನ್ಮೂಲಕ ಅವರನ್ನು ಕೊಲ್ಲುವುದರಲ್ಲಿ ಪರ್ಯವಸಿಸುವ ಮಟ್ಟಿನ ದ್ವೇಷವೂ ಉಂಟಾಗುತ್ತವೆ. ಇದರ ಧ್ವನಿಯನ್ನು ಹೀಗೆ ಸಂಗ್ರಹಿಸಬಹುದು: ನಮ್ಮನ್ನು ನಮ್ಮ ಪೂರ್ವಪರಂಪರೆ ನಿರಂತರವಾಗಿ ತನ್ನೊಳಗೆ ಸೆಳೆದುಕೊಳ್ಳಲು ಹಾಗೂ ತನ್ನಂತೆ ಸಾಗಲು ಒತ್ತಾಯಿಸಿರುತ್ತದೆ. ಆದರೆ ನಮ್ಮೊಳಗಿನ ಸ್ವತಂತ್ರಚಿಂತನೆಯು ಅದರ ವಿರುದ್ಧ ಸಿಡಿದೆದ್ದು ಪ್ರತಿಭಟಿಸಲು ಉತ್ಸುಕವಾಗಿರುತ್ತದೆ. ಜೊತೆಗೆ ಆ ಪೂರ್ವಪರಂಪರೆಯನ್ನು ಮಾರ್ಪಡಿಸಿ ಮತ್ತೊಂದನ್ನು ಸ್ಥಾಪಿಸಲು ಹೆಣಗುತ್ತಿರುತ್ತದೆ. ಒಟ್ಟಿನಲ್ಲಿ ನಮಗೂ ನಮ್ಮ ಪ್ರಾಕ್ತನಕ್ಕೂ ನಿರಂತರಸಂಘರ್ಷ ಅನಿವಾರ್ಯ. ಮಾತ್ರವಲ್ಲ, ಎಲ್ಲ ಪರಂಪರೆಯೂ ಸ್ಥಾಪಿತಹಿತಾಸಕ್ತಿಗಳ ಷಡ್ಯಂತ್ರವ್ಯವಸ್ಥೆ. ಅದರ ವಿರುದ್ಧ ಬಂಡಾಯವೇ ಆಧುನಿಕತೆಯ ಹಾಗೂ ಸ್ವಂತಿಕೆಯ ಸಾರ್ಥಕ್ಯ.

ಆದರೆ ನಮ್ಮ ವೇದ-ಪುರಾಣಕಥೆಗಳ ಪಾತ್ರಚರ್ಯೆಗಳಾಗಲಿ, ಮಾನವಸಾಮಾನ್ಯದ ಆತ್ಯಂತಿಕಭಾವನೆಗಳಾಗಲಿ ಈ ಬಗೆಯ ತಲೆಮಾರುಗಳ ತಾಕಲಾಟವನ್ನೋ ಪಿತೃಹತ್ಯಾಪ್ರವೃತ್ತಿಯನ್ನೋ ವ್ಯವಸ್ಥೆ-ವಿಪ್ಲವಗಳ ವಿಷವರ್ತುಲವನ್ನೋ ಸಮರ್ಥಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಏಕೆಂದರೆ ಇಂಥ ಸಿದ್ಧಾಂತಾಭಾಸಗಳಲ್ಲಿ ಇರುವುದು ಪಾರಮಾರ್ಥಿಕತತ್ತ್ವದೃಷ್ಟಿಗಿಂತ ಮುಖ್ಯವಾಗಿ ಹಸಿ-ಬಿಸಿಯಾದ ಸ್ವೈರಾಚಾರದ ಉನ್ಮಾದನ. ಇದಕ್ಕೆ ಕಾರಣವಿಷ್ಟೆ: ತನ್ನ ಹಿಂದಿನವರನ್ನು ಹಳಿದು, ಹೊಸಕಿಹಾಕಿ ಮುಂದೆ ಬರುವವನು ತನ್ನ ಮುಂದಿನವರಿಂದಲೂ ತನಗೆ ಇಂಥದ್ದೇ ಪ್ರತಿಕ್ರಿಯೆ ದಕ್ಕೀತೆಂದು ಒಂದು ಕ್ಷಣವಾದರೂ ಗಂಭೀರವಾಗಿ ಆಲೋಚಿಸಿದರೆ ಈ ತೆರನಾದ ಪೂರ್ವಪೂರ್ವಪ್ರಧ್ವಂಸನಪ್ರವೃತ್ತಿಗೆ ಪ್ರೋತ್ಸಾಹವೀಯಲಾರ. ವಿಶೇಷತಃ ಈ ಬಗೆಯ ಪ್ರವೃತ್ತಿಗಳನ್ನು ಕುರಿತು ವಿಶ್ಲೇಷಿಸುವ ವಿವೇಕವುಳ್ಳವರು ಇಂಥ ಚಿತ್ತವೃತ್ತಿಗಳನ್ನೇ ದರ್ಶನದ ಮಟ್ಟಕ್ಕೆ ಮೇಲೆತ್ತಿ ಮನ್ನಣೆಯೀವುದಿಲ್ಲ. ಏಕೆಂದರೆ ಜೀವದ ಪಾರಮಾರ್ಥಿಕವಿಕಾಸವಿರುವುದು ಈ ಪರಿಯ ಅನ್ಯವ್ಯಕ್ತಿ-ವಿಷಯಸಂಬದ್ಧರಾಗ-ದ್ವೇಷಗಳಿಗಿಂತ ಮಿಗಿಲಾಗಿ ತನ್ನದೇ ಆತ್ಯಂತಿಕಸ್ವಭಾವನಿಶ್ಚಯದಲ್ಲಿ ಮತ್ತು ಈ ಪ್ರತ್ಯಭಿಜ್ಞೆಯಿಂದ ತಾನು ತನಗೆ ಸರ್ವಾತ್ಮನಾ ಯುಕ್ತವೆಂಬಂತೆ ಬಾಳುವುದರಲ್ಲಿ. ಇಲ್ಲಿ ಮತ್ತೊಂದಂಶವೂ ಗಮನಾರ್ಹ: “ತಾನು ತನಗೆ ಸರ್ವಾತ್ಮನಾ ಯುಕ್ತವೆಂಬಂತೆ ಬಾಳುವುದು” ಎನ್ನುವಾಗ ಇದೇ ರೀತಿ ಪ್ರತಿಯೊಬ್ಬರೂ ಭಾವಿಸುತ್ತಾರೆಂಬ ಅವಿಸ್ಮರಣೀಯವಾದ ಅರಿವನ್ನೂ ಹೊಂದಿರುವುದು. ಮಾತ್ರವಲ್ಲ, ತಾನು ಎಂಬಲ್ಲಿ ಇಡಿಯಾದ ವಿಶ್ವಸಾಮಾನ್ಯವನ್ನೂ ಗಮನದಲ್ಲಿರಿಸಿಕೊಂಡಿರುವುದು ಕೂಡ ಇಲ್ಲಿ ಅಭಿಪ್ರೇತವಾಗಿದೆ. ಒಟ್ಟಿನಲ್ಲಿ ಇಂಥ ಮಜಲಿನಿಂದ ಕಂಡಾಗ ನಮ್ಮ ವೇದ-ಪುರಾಣಗಳ ಅವೆಷ್ಟೋ ಪಾತ್ರ-ಸಂಗತಿಗಳು ಹಾಗೂ ಸಂಕೇತಗಳು ವೈಶ್ವಿಕವಾಗಿ ಸಂಮತವಾಗಬಲ್ಲುವಲ್ಲದೆ ಅನ್ಯಥಾ ಅಲ್ಲ. ಯಾವುದೇ ಸಾಮುದಾಯಿಕಸುಪ್ತಮನಸ್ಸಿನ ಚಿರಂತನಸಂಕೇತಗಳನ್ನು ನಮ್ಮ ನಮ್ಮ ತತ್ತತ್ಕಾಲೀನರಾಗ-ದ್ವೇಷಗಳ ಪೋಷಣೆಗೆಂದು ದುರುಪಯೋಗಿಸಿಕೊಳ್ಳುವುದು ಅಶ್ರೇಯಸ್ಕರ.

ಪ್ರಸ್ತುತ ಇಂಥ ಹಿನ್ನೆಲೆಯಲ್ಲಿ ನಮ್ಮ ವೇದ-ಪುರಾಣಗಳ ಕೆಲವು ಬಾಲಕರ ಬಗೆಯನ್ನು ಗಮನಿಸೋಣ.

ನಾಲ್ವರು ಬಾಲಕರು

ನಮ್ಮ ಪರಂಪರೆಯಲ್ಲಿ ಹತ್ತಾರು ಮಂದಿ ನಿಸ್ಸಾಮಾನ್ಯಮಹತ್ತ್ವದ ಬಾಲಕರು ಬೆಳಗುತ್ತಿದ್ದಾರೆ. ಅವರ ಪೈಕಿ ನಚಿಕೇತ, ಅಷ್ಟಾವಕ್ರ, ಧ್ರುವ ಮತ್ತು ಪ್ರಹ್ಲಾದರೆಂಬ ನಾಲ್ವರು ಪ್ರಸ್ತುತ ಪರಿಶೀಲ್ಯರು. ಇವರೆಲ್ಲ ಮೇಲ್ನೋಟಕ್ಕೆ ತಮ್ಮ ತಮ್ಮ ತಂದೆಯರಿಂದ ತಿರಸ್ಕೃತರೆಂಬಂತೆ, ಅಭಿಶಪ್ತರೆಂಬಂತೆ, ಹಿಂಸಿತರೆಂಬಂತೆ ತೋರಿದರೂ ವಸ್ತುತಃ ಇವರಾರಿಗೂ ನಿಜಜನಕರ ಬಗೆಗೆ ದ್ವೇಷಬುದ್ಧಿಯಾಗಲಿ, ತಿರಸ್ಕಾರವಾಗಲಿ ಇರಲಿಲ್ಲವೆಂಬುದು ಆಯಾ ಕಥಾನಕಗಳಿಂದಲೇ ಸ್ಪಷ್ಟವಾಗಿದೆ. ಮಾತ್ರವಲ್ಲ, ಅವರು ತಮ್ಮ ತಂದೆಯರನ್ನು ನಿರಾಗ್ರಹಬುದ್ಧಿಯಿಂದಲೇ ತಿದ್ದುವ ಹಾಗೂ ನಮ್ರತೆಯಿಂದಲೇ ಅನುನಯಿಸುವ ಹಾಗೆ ಕೂಡ ತೊರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ತಂದೆಯರಿಗಿಂತ ಮೌಲ್ಯದೃಷ್ಟಿಯಿಂದ ಮಿಗಿಲಾದ ಇವರೆಲ್ಲ ಅವರಲ್ಲಿ ಶಾಶ್ವತವಾದ ವೈರವನ್ನೋ ವೈರಸ್ಯವನ್ನೋ ತೋರುವುದು ಸರ್ವಥಾ ಅಸಂಭಾವ್ಯ. ಮುಖ್ಯವಾಗಿ ಇವರೆಲ್ಲ ತಮ್ಮ ಅಂತರ್ವಾಣಿಗೆ ಬೆಲೆ ಕೊಟ್ಟವರು. ಯಾದೃಚ್ಛಿಕವಾಗಿ ಇವರು ಮಕ್ಕಳ ಸ್ಥಾನದಲ್ಲಿ ನಿಂತು ತಮ್ಮ ನಿಲವನ್ನು ಸಾರಿಕೊಂಡಂತೆ ತೋರುವುದಲ್ಲದೆ ಅವರ ಪುತ್ರತ್ವವೆಂಬುದೇನೂ ಪಾರಮಾರ್ಥಿಕವಾಗಿ ವಿಶೇಷಸಂಗತಿಯಲ್ಲ. ಇವರಿಗೊದಗಿದ ಸಂದರ್ಭದ ಒತ್ತಡಗಳು ಸಮಾಜದ ಯಾರಿಗಾಗಲಿ, ಎಂತಾಗಲಿ ಬರಬಹುದಾದುವೇ ಆಗಿವೆ. ಈ ಕಾರಣದಿಂದ ಮೇಲೆ ಕಾಣಿಸಿದ ಬಾಲಕರೆಲ್ಲ ಜೀವಸಾಮಾನ್ಯದ ಮೂಲಭೂತಸಂವೇದನೆಗಳ ಪ್ರತೀಕಗಳೇ ಹೊರತು ಬರಿಯ ಕೌಟುಂಬಿಕಕಲಹಗಳ ಉತ್ಪನ್ನಗಳಲ್ಲ. ಇವರ ತತ್ತ್ವಸ್ವಾರಸ್ಯನ್ನು ಕ್ರಮವಾಗಿ ಪರಿಶೀಲಿಸೋಣ.

ನಚಿಕೇತ

ಕಠೋಪನಿಷತ್ತಿನಲ್ಲಿ ಕಾಣಿಸಿಕೊಳ್ಳುವ ಈ ಧೀರಬಾಲಕನು ಮೃತ್ಯುಂಜಯತೆಗೇ ಒಂದು ಮಹಾಸಂಕೇತವೆನಿಸಿದ್ದಾನೆ. ಕರ್ಮ-ಬ್ರಹ್ಮಗಳ ಸ್ಥಾನೌಚಿತ್ಯ ಮತ್ತು ಅನುಸಂಧಾನಗಳ ಸಂಕೇತವಾದ ಅಗ್ನಿವಿದ್ಯೆ ಮತ್ತು ಬ್ರಹ್ಮವಿದ್ಯೆಗಳ ಸಂಪ್ರದಾಯಪ್ರವರ್ತಕನೂ ಆಗಿದ್ದಾನೆ. ತಂದೆ ವಾಜಶ್ರವಸನು ಅಹಂಕಾರತ್ಯಾಗವೇ ಪರಮಾರ್ಥವಾಗಿ ಉಳ್ಳ ವಿಶ್ವಜಿದ್ಯಾಗದ ಆಂತರ್ಯವನ್ನು ಅರಿಯದೆ ಕೇವಲ ಬಾಹ್ಯಾಡಂಬರದ ಸಂಕೇತವಾಗಿ ಸರ್ವಸ್ವದಾನವೆಂಬ ಧರ್ಮಧ್ವಜತ್ವವನ್ನು ಅವಲಂಬಿಸತೊಡಗುತ್ತಾನೆ. ಮಾತ್ರವಲ್ಲ, ದಾನಶೌಂಡತೆಯ ಲಾಲಸೆಯೊಡನೆ ಲೋಭಲಾಂಪಟ್ಯದ ಧೂರ್ತತೆಯನ್ನೂ ಮೇಳವಿಸಿಕೊಂಡು ವಿತರಣಶೀಲತೆಯ ಹೆಸರಿನಲ್ಲಿ ಗೊಡ್ಡುದನಗಳನ್ನು ಗೋದಾನಕ್ಕಾಗಿ ಮೀಸಲಿರಿಸಿ ಶಾಸ್ತ್ರಾಚರಣೆಗೆ ಅಪಹಾಸ್ಯಾಸ್ಪದನಾಗುತ್ತಾನೆ. ಆಗ ನಚಿಕೇತನು ತನ್ನ ತಂದೆಗೆ ಸೇರಿದವನಾದ ಕಾರಣ ತಾನೂ ಒಂದು ದಾನಾರ್ಹವಸ್ತುವೆಂದು ಹೇಳುವ ಮೂಲಕ “ಆತ್ಮಾ ವೈ ಪುತ್ರನಾಮಾಸಿ” ಎಂಬ ಸೂಕ್ತಿಯಂತೆ ಜನಕನ ಅಸ್ತಿತ್ವಾಹಂಕಾರಕ್ಕೇ ಸವಾಲೆನಿಸುತ್ತಾನೆ. ಅನಿತ್ಯವಾದ ಜೀವಿಗಳು ತಮ್ಮ ತಮ್ಮ ನಿತ್ಯತ್ವಕ್ಕೆಂದು ನಡಸುವ ಹೆಣಗಾಟದಲ್ಲಿ ಸಂತತಿಪರಂಪರೆಯೆಂಬ ಪ್ರವಾಹನಿತ್ಯತ್ವರೂಪದ ಪ್ರತ್ಯಾಮ್ನಾಯಸಿದ್ಧಿ ಸರ್ವವಿದಿತ. ಈ ಕಾರಣದಿಂದಲೇ ತಂದೆ-ತಾಯಿಗಳಿಗೆ ತಮ್ಮ ಮಕ್ಕಳ ಮೇಲೆ ಅಪಾರಮೋಹಾಭಿಮಾನಗಳಿರುತ್ತವೆ; ಅವರಲ್ಲಿ ತಮ್ಮ ಮುಂದಿನ ಬದುಕನ್ನೂ ಅಪೂರ್ಣಕಾಮನೆಗಳ ಸಾಫಲ್ಯಸಾಧ್ಯತೆಯನ್ನೂ ಕಾಣುತ್ತಿರುತ್ತಾರೆ. ಈ ಕಾರಣದಿಂದಲೇ ವಾಜಶ್ರವಸನ ಭಾವಿಜೀವನಸಂಕೇತವೂ ಭವಿತವ್ಯಭೋಗದ ಪ್ರತೀಕವೂ ಆದ ನಚಿಕೇತನ ಸವಾಲು ತಾಳಲಾಗದ ಆಘಾತವಾಗುತ್ತದೆ. ಪೆಟ್ಟು ತಿಂದ ಕಾಮವು ಕ್ರೋಧದಲ್ಲಿ ಪರ್ಯವಸಿಸುವುದು ಕೂಡ ಒಂದು ಮಾರ್ಗಾಂತರವಷ್ಟೆ. ಹೀಗೆ ವಾಜಶ್ರವಸನ ಮುನಿಸಿಗೆ ಸಿಲುಕಿದ ನಚಿಕೇತನು ಮೃತ್ಯುವಿಗೇ ದಾನವಸ್ತುವಾಗಿ ಸೇರಿಹೋಗುತ್ತಾನೆ. ಆ ಬಳಿಕ ಭೀಕರವಾಸ್ತವವೆಂದು ವಿಶ್ರುತವಾದ ಮೃತ್ಯುವಿನ ಮೌಲ್ಯಮನೋಹರವಾದ ಮತ್ತೊಂದು ಮುಖವೆಂದು ವಿವೇಕಿಗಳಷ್ಟೇ ಬಲ್ಲ ಸಮವರ್ತಿಯಾದ ಯಮಧರ್ಮನ ದರ್ಶನ ನಚಿಕೇತನಿಗಾಗುವುದೂ ಅವನಿಂದ ಅನುಗೃಹೀತನಾಗಿ ಮರ್ತ್ಯಲೋಕಕ್ಕೆ ಮರಳುವುದೂ ಸದ್ಯದ ವಿವೇಚನೆಗೆ ಅಪ್ರಕೃತ. ಆದರೆ ಧರ್ಮದೇವತೆಯಿತ್ತ ಮೂರು ವರಗಳ ಪೈಕಿ ಮೊದಲ ವರದಿಂದಲೇ ತನ್ನ ತಂದೆಗೆ ವಿವೇಕೋದಯವಾಗಬೇಕೆಂದು ಕೋರಿದ ನಚಿಕೇತನ ವರ್ತನೆಯನ್ನು ಗಮನಿಸಿದಾಗ ಆತನ ಇಂಗಿತವು ತಂದೆಯನ್ನು ತಿದ್ದುವುದಲ್ಲದೆ ಅವನನ್ನು ತಳ್ಳಿಹಾಕುವುದಲ್ಲವೆಂದೂ ಮತ್ತಿದು ಸಹಾನುಭೂತಿಯಿಂದ ಸಾಗಬೇಕಾದ ಸಂಗತಿಯೆಂದೂ ತಿಳಿಯುತ್ತದೆ. ಈ ಪ್ರಕ್ರಿಯೆಯಲ್ಲಿ ನಚಿಕೇತನು ಯಶಸ್ವಿಯಾದನೆಂಬುದು ನಮ್ಮ ಪ್ರಧಾನದೃಷ್ಟಿಕೋನವನ್ನೇ ಬಲಪಡಿಸುವಂತಿದೆ.

ಅಷ್ಟಾವಕ್ರ

ಮಹಾಭಾರತದ ವನಪರ್ವದಲ್ಲಿ ಬರುವ ಅಷ್ಟಾವಕ್ರನ ಕಥೆಯು ಆತನ ತಂದೆ ಕಹೋಡನ ಆಗ್ರಹವನ್ನು ಸ್ಪಷ್ಟವಾಗಿ ತಿಳಿಸಿದೆ. ಭ್ರೂಣಾವಸ್ಥೆಯಲ್ಲಿದ್ದ ತನ್ನನ್ನೇ ಶಪಿಸಿ, ತನ್ನ ತಾಯಿ ಸುಜಾತೆಯನ್ನು ಗರ್ಭಿಣಿಯಾಗಿರುವಾಗಲೇ ಜೀವಿಕೋದ್ದೇಶದಿಂದ ಬಿಟ್ಟು ಹೋದ ಕಹೋಡನ ಬಗೆಗೆ ಅಷ್ಟಾವಕ್ರನಿಗೇನೂ ಕಹಿಯಿರಲಿಲ್ಲವೆಂಬುದು ನಿಜಕ್ಕೂ ದೊಡ್ಡ ಸಂಗತಿ. ಇಲ್ಲಿಯೇ ಪಿತೃಹತ್ಯಾಪ್ರವೃತ್ತಿಯಂಥ ವಿಕಾರಗಳಾವುದೂ ಅಷ್ಟಾವಕ್ರನಿಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಮುಂದೆ ವಂದಿಯೆಂಬ ವಿದ್ವಾಂಸನೆದುರು ವಾದದಲ್ಲಿ ಸೋತು ಸಮುದ್ರಕ್ಕೆ ತಳ್ಳಿಸಲ್ಪಟ್ಟ ತನ್ನ ತಂದೆಯ ವಿನಾಶದ ವಿರುದ್ಧ ಪ್ರತೀಕಾರಕ್ಕೆಂದೇ ಅಷ್ಟಾವಕ್ರನು ಅದೇ ಪಂಡಿತನೊಡನೆ ವಾದಕ್ಕಾಗಿ ತೆರಳಿದನೆಂಬ ಕಥಾಭಾಗವನ್ನು ಗಮನಿಸಿದಾಗ ಈ ತಥ್ಯವು ಮತ್ತಷ್ಟು ಸ್ಫುಟವಾಗುತ್ತದೆ. ಒಟ್ಟಿನಲ್ಲಿ ಕಹೋಡನಲ್ಲಿದ್ದದ್ದು ಅಹಂಕಾರ ಮತ್ತು ದುಡುಕುತನಗಳಲ್ಲದೆ ಶಾಶ್ವತವಾದ ಪುತ್ರವೈರವಾಗಲಿ, ಪತ್ನೀಪ್ರೇಮರಾಹಿತ್ಯವಾಗಲಿ ಅಲ್ಲ. ಹೆಚ್ಚೆಂದರೆ ಅವನ್ನು ಅವಿವೇಕಿಯೆನ್ನಬಹುದು. ಇಂಥ ತಂದೆಯ ಅವಿವೇಕವನ್ನು ಮನ್ನಿಸಿ ಆತನಿಗೂ ಮತ್ತೆ ಬದುಕನ್ನಿತ್ತು ಪ್ರೀತಿಯನ್ನೂ ವಿತರಿಸಿದ ಮಹಿಮೆ ಅಷ್ಟಾವಕ್ರನದು. ಹೀಗಾಗಿ ಈ ಕಥೆಯಲ್ಲಿಯೂ ಕಾಣುವುದು ಪಿತೃಹತ್ಯಾಪ್ರವೃತ್ತಿಯಲ್ಲ. ಪ್ರತ್ಯುತ ಇಡಿಯ ಕಥಾನಕದ ಆದ್ಯಂತ ತೋರುವುದು ಅಷ್ಟಾವಕ್ರನ ಆತ್ಮವಿಶ್ವಾಸ ಮತ್ತು ಧೀರಗಾಂಭೀರ್ಯ. ಆತನ ಈ ಮನೋವೃತ್ತಿಯಾದರೋ ದೃಢವಾದದ್ದು ತನ್ನತನದ ಅರಿವಿನಿಂದಲೇ. ದೈಹಿಕಮಿತಿ-ಕ್ಲೇಶಗಳನ್ನೂ ಮೀರಿ ಮನೋಬುದ್ಧಿಗಳ ಬಲದಿಂದಲೇ ಗುರಿ ಸೇರಿದ ಅಷ್ಟಾವಕ್ರನ ಆತ್ಮವಂತಿಕೆಯನ್ನು ಕಂಡಾಗ ಆತನ ವ್ಯಕ್ತಿತ್ವದಾರ್ಢ್ಯವು ನಮಗೊಪ್ಪದಿರದು.

ಧ್ರುವ

ಭಾಗವತಮಹಾಪುರಾಣದಲ್ಲಿ ಬರುವ ಧ್ರುವನ ಕಥೆಯು ಅಬೋಧಮುಗ್ಧಬಾಲಕರ ಧೀರೋದಾರಮನೋನಿಶ್ಚಯಕ್ಕೂ ಸರ್ವೌನ್ನತ್ಯದ ಅಭೀಪ್ಸೆಗೂ ಮಹಾಪ್ರತೀಕವೆನಿಸಿದೆ. ಕಿರಿಯ ಹೆಂಡತಿಯ ಕೈಗೊಂಬೆಯಾಗಿ ಹಿರಿಯ ಹೆಂಡತಿಯನ್ನೂ ಆಕೆಯ ಮಗನನ್ನೂ ಉಪೇಕ್ಷಿಸಿದ ಉತ್ತಾನಪಾದನ ವರ್ತನೆಗೆ ಧ್ರುವನು ಮನನೊಂದರೂ ತಂದೆಯ ವಿರುದ್ಧ ಬಂಡೇಳದ ಭಾವ ಅವನದು. ತನಗೆ ನಿರಾಕೃತವಾದ ಅರ್ಹಸ್ಥಾನವನ್ನು ತಾನು ಪಡೆಯಲೆಂದು ಕುಟುಂಬಕಲಹದಲ್ಲಿ ತೊಡಗುವುದಕ್ಕಿಂತ ಮಿಗಿಲಾಗಿ ಜಗದೇಕಸಮುನ್ನತಸ್ಥಾನವನ್ನು ಸ್ಪರ್ಧಾತೀತವಾಗಿ ಅಲಂಕರಿಸುವ ಹಂಬಲದಿಂದ ತಪಶ್ಚರ್ಯೆಗೆ ತೊಡಗುವ ಬಾಲಕ ಧ್ರುವನ ಆತ್ಮಸ್ಥೈರ್ಯ ಅಸಾಧಾರಣ. ಇಲ್ಲಿ ತನ್ನ ತಂದೆಯ ಬಗೆಗಾಗಲಿ, ಸವತಿತಾಯಿಯ ಬಗೆಗಾಗಲಿ, ಮಲತಮ್ಮನನ್ನು ಕುರಿತಾಗಲಿ ಕ್ರೋಧ-ಕಷಾಯಗಳಿಲ್ಲದೆ—ಹಾಗೆಂದು ಅವರ ಅಹಂಕಾರ-ಅನಾಚಾರಗಳನ್ನು ಅಸಹಾಯವಾಗಿ ಅಂಗೀಕರಿಸದೆ—ತನ್ನ ಯೋಗ್ಯತೆಯಿಂದಲೇ ಅನೂಹ್ಯಪದವಿಯನ್ನು ಗಳಿಸುವ ಧ್ರುವನ ವರ್ತನೆಯಲ್ಲಿರುವುದು ಅಗ್ಗದ ಬಂಡಾಯವಲ್ಲ; ಪ್ರಬುದ್ಧಪ್ರಶಿಕ್ಷಣ. ಮತ್ತಿದು ಮಾತಿನ ಮಲ್ಲತನವಾಗದೆ ಕ್ರಿಯಾಮಾತ್ರದಿಂದಲೇ ಧ್ವನಿತವಾಗಬೇಕಾದ ಮಹಾಸಂಸ್ಕಾರ. ಇಂಥ ಪಾಠವನ್ನಾದರೂ ಆತನು ತನ್ನನ್ನು ನೋಯಿಸಿದವರಿಗೆ ಕಲಿಸುವಲ್ಲಿ ಯಾವುದೇ ಕಹಿ-ಕೆಚ್ಚುಗಳನ್ನು ತಾಳಿರಲಿಲ್ಲವೆಂಬುದಕ್ಕೆ ನಿದರ್ಶನವಾಗಿ ಮುಂದೆ ಇದೇ ಕಥಾನಕದಲ್ಲಿ ಬರುವ ಮತ್ತೊಂದು ಘಟನೆ ಸಾಕ್ಷಿ. ಆ ಪ್ರಕಾರ ಉತ್ತಾನಪಾದನ ಬಳಿಕ ಆತನ ಉತ್ತರಾಧಿಕಾರಿಯಾದ ಧ್ರುವನು ತನ್ನ ಮಲತಮ್ಮ ಉತ್ತಮನ ಹತ್ಯೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಕ್ಷಸಕುಲೋನ್ಮೂಲನಕ್ಕೇ ಸಿದ್ಧನಾಗುತ್ತಾನೆ. ಹೀಗೆ ಧ್ರುವನ ಕಥೆಯಲ್ಲಿ ಕೂಡ ಪಿತೃಹತ್ಯಾಪ್ರವೃತ್ತಿಯ ಯಾವುದೇ ಸೋಂಕಿಲ್ಲ. ಪ್ರತ್ಯುತ ಆತನ ಅಂತರ್ನಿಶ್ಚಯವೇ ಪ್ರಧಾನವಾಗಿದೆ ಹಾಗೂ ಸಮುನ್ನತಸ್ಥಾನಕ್ಕೆ ತಕ್ಕ ಹೃದ್ವೈಶಾಲ್ಯವೂ ಪ್ರತಿಫಲಿಸಿದೆ.

ಪ್ರಹ್ಲಾದ

ಮತ್ತದೇ ಭಾಗವತಮಹಾಪುರಾಣದಲ್ಲಿ ಬರುವ ಪ್ರಹ್ಲಾದನ ಕಥೆ ಲೋಕವಿಖ್ಯಾತ, ಭಕ್ತಭಾವುಕಮನೋವಿಶ್ರುತ. ಇಲ್ಲಿಯೂ ತಂದೆಯ ಇಚ್ಛೆಗೆ ವ್ಯತಿರಿಕ್ತವಾದ ಮಗನ ವರ್ತನೆ ಉಂಟು. ಆದರೆ ತಂದೆಯ ನೈರ್ಘೃಣ್ಯ ಅವನಿಗೆ ಎಳ್ಳಷ್ಟೂ ಇಲ್ಲ. ಹಿರಣ್ಯಕಶಿಪು ಎಂಬ ಹೆಸರೇ ಧ್ವನಿಸುವಂತೆ ಅರ್ಥ-ಕಾಮಪರಾಯಣತೆಯ ಪ್ರತೀಕವಾದ ತಂದೆಯ ಮುಂದೆ ಮಗನದು ಸಂಪೂರ್ಣವಾಗಿ ಧರ್ಮ-ಮೋಕ್ಷಗಳ ಪರಮಫಲಿತವನ್ನು ಸಂಕೇತಿಸುವಂಥ ಸಂಜ್ಞೆ. ಲೋಕಭೀಕರನಾದರೂ ಹಿರಣ್ಯಕಶಿಪುವು ಪುತ್ರಮೋಹಕ್ಕೆ ಸಂಪೂರ್ಣವಾಗಿ ವಿಮುಖನೇನೂ ಅಲ್ಲ. ಎಲ್ಲ ತಂದೆಯರಂತೆ ಅವನಿಗೂ ತನ್ನ ಮಗ ತನ್ನ ಜಾಡಿನಲ್ಲಿ ನಡೆದು ಮಿಗಿಲಾದ ಪದವಿಯನ್ನು ಪಡೆಯಬೇಕೆಂದು ಬಯಕೆ. ಆದರೆ ಪ್ರಹ್ಲಾದನ ಜೀವಧರ್ಮ ಬೇರೆಯದೇ ಆಗಿದೆ. ಯಾವುದು ಹಿರಣ್ಯಕಶಿಪುವಿಗೆ ಪೂಜ್ಯವೋ ಅದು ಪ್ರಹ್ಲಾದನಿಗೆ ತ್ಯಾಜ್ಯ. ಹಿರಣ್ಯಕಶಿಪುವಿನ “ಮೌಲ್ಯಪ್ರಜ್ಞೆ”ಯು ಪುತ್ರವಾತ್ಸಲ್ಯವನ್ನೂ ಧಿಕ್ಕರಿಸಿ ಕ್ರೌರ್ಯ-ಕಾಠೋರ್ಯಗಳಿಗೆ ಆತನನ್ನು ತಳ್ಳುವುದಾದರೂ ಪ್ರಹ್ಲಾದನ ಮೌಲ್ಯಸಂವೇದನೆಯು ತಂದೆಯ ಮೇಲಣ ಗೌರವವನ್ನು ತೃಣೀಕರಿಸುವುದಿಲ್ಲ. ಇದಕ್ಕೆ ಕಾರಣ ತಂದೆಯ ಅಸ್ತಿತ್ವವು ಅಹಂಕಾರದಲ್ಲಿದೆ; ಮಗನ ಅಸ್ತಿತ್ವವು ಆತ್ಮವಂತಿಕೆಯಲ್ಲಿದೆ.

ಪ್ರಹ್ಲಾದನೂ ಸೇರಿದಂತೆ ಈ ಎಲ್ಲ ಪುರಾಣಬಾಲಕರ ಪಿತಾ-ಪುತ್ರಸಂಘರ್ಷದಲ್ಲಿ ತಾಯಂದಿರ ಪರಿಸ್ಥಿತಿ ತುಂಬ ಸೂಕ್ಷ್ಮವಾದದ್ದು. ಆದರೆ ಅವರೆಲ್ಲ ಮಕ್ಕಳ ಕಡೆಗೇ ನಿಂತದ್ದು ನಿಜಕ್ಕೂ ಗಮನಾರ್ಹಸಂಗತಿ. ಇದು ಬರಿಯ ಬಂಡಾಯದ ಮಾತಲ್ಲ, ತಥಾಕಥಿತಪ್ರಗತಿಮೋಹದಲ್ಲಿ ಪರಂಪರೆಯನ್ನು ಧಿಕ್ಕರಿಸುವ ನಡೆಯೂ ಅಲ್ಲ. ಇಲ್ಲಿರುವುದು ಆ ತಾಯಂದಿರು ಕಂಡುಕೊಂಡ ಸತ್ಯಸಂವೇದನೆ. ತಮ್ಮ ತಮ್ಮ ಪತಿಗಳಿಗೆ ಪ್ರತಿಕೂಲವಾಗದೆಯೇ ಪುತ್ರರಲ್ಲಿ ಪರಮಾರ್ಥವನ್ನು ಕಂಡುಕೊಳ್ಳುವ ಅಸಿಧಾರಾವ್ರತವಿವೇಕ. ಇದನ್ನು ಮೂಲಕಥೆಗಳು ವಿಸ್ತರಿಸಿ ಹೇಳುವುದಿಲ್ಲವಾದರೂ ರಸಪೇಶಲರಾದ ಕವಿಗಳು ಇಂಥ ವಿಕಟಮನೋಹರಜೀವನಸಂದರ್ಭಗಳನ್ನು ಗಮನಿಸಿಕೊಂಡರೆ ಇವೆಲ್ಲ ಶಾಶ್ವತಸಾರಸ್ವತಸಿದ್ಧಿಯ ಕಲಾಕೃತಿಗಳಾಗಬಲ್ಲುವು. ಅಂಥ ನಾಟ್ಯಾಯಮಾನತೆ ಇಲ್ಲಿ ಘನೀಭವಿಸಿದೆ.

ತಂದೆಯಿಂದ ನಯ-ಭಯಗಳ ಮೂಲಕವಾಗಿ ಅದೆಷ್ಟು ಮನಃ-ಕಾಯಕರ್ಷಿತನಾದರೂ ಪ್ರಹ್ಲಾದನು ತನ್ನತನವನ್ನು ಬಿಡಲಿಲ್ಲ. ಮಾತ್ರವಲ್ಲ, ಸ್ವೀಯನಿಶ್ಚಯದಲ್ಲಿ ವಜ್ರಸ್ಥೈರ್ಯವನ್ನು ಹೊಂದಿದ್ದರೂ ವರ್ತನೆಯಲ್ಲಿ ಶಿರೀಷಪೈಶಲ್ಯವನ್ನು ನೀಗಲಿಲ್ಲ. ಇದೇ ಆತನ ಮೌಲ್ಯವಿಜಯದ ಉಪನಿಷತ್ತೆನ್ನಬಹುದು. ಸಾಮಾನ್ಯವಾಗಿ ಯಾರೇ ಆಗಲಿ, ತಮ್ಮ ಅಸ್ತಿತ್ವಕ್ಕೇ ಸಂಚಕಾರವೊದಗುವ ಮಟ್ಟಿಗೆ ಪ್ರತಿರೋಧ ಬಂದಾಗ “ಹೊಂದಾಣಿಕೆ”ಗೆ ಬರುವುದುಂಟು. ಆದರೆ ಅಬೋಧಮುಗ್ಧವಯಸ್ಸಿನ ಬಾಲಕನಾಗಿದ್ದರೂ ಪ್ರಹ್ಲಾದನು ಇಂಥ ಆಲೋಚನೆಗಳಿಗೆ ಅವಕಾಶವನ್ನೂ ಕೊಡಲಿಲ್ಲ. ಅಷ್ಟೇ ಅಲ್ಲ, ಆತನಿಗೆ ಒದಗಿಬಂದ ಪ್ರೇರಣೆಯು ಯಾವುದೇ ಬಹಿರಂಗಮೂಲದ್ದಾಗಿರದೆ ಕೇವಲ ನಿಜಾಂತರಂಗನಿಷ್ಠವಾಗಿದ್ದ ಕಾರಣ ಅವನಿಗವನೇ ಆಲಂಬನವಾಗಬೇಕಾಗಿತ್ತು. ಇದು ಧ್ರುವ, ನಚಿಕೇತ, ಅಷ್ಟಾವಕ್ರಾದಿಗಳಿಗೂ ಸಲ್ಲುವ ಸಮಾನಸತ್ಯ. ಇಂಥ ಅಂತಃಸ್ಥೈರ್ಯವು ಇವರಿಗೆಲ್ಲ ಹೇಗೆ ಸಿದ್ಧಿಸಿತೆಂಬುದೇ ನಮಗಿನ್ನುಳಿದ ವಿವೇಚನೀಯಾಂಶ. ಅದನ್ನಿಷ್ಟು ಮಾಡಿ ಪ್ರಕೃತಪ್ರಕಲ್ಪವನ್ನು ಸಂಪನ್ನಗೊಳಿಸಬಹುದು.

ಉಪಸಂಹಾರ

ಇಲ್ಲಿಯವರೆಗೆ ನಾವು ಗಮನಿಸಿದ ನಾಲ್ವರು ಪುರಾಣಬಾಲಕರ ಚಿರಂತನಹೃದಯಸಾಮರ್ಥ್ಯವನ್ನು ಕಂಡಾಗ ನಮಗೆ ಎದ್ದುತೋರುವುದು ಅವರ ಆತ್ಮನಿಷ್ಠೆ. ಇದನ್ನೇ “ಸ್ವಧರ್ಮ”ವೆಂದೂ ಹೇಳಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಆತನ ಸಾಪೇಕ್ಷವಾದ ಸ್ಥಿತಿಗಳೆನಿಸಿದ ಪಿತೃತ್ವ, ಮಾತೃತ್ವ, ಪುತ್ರತ್ವ, ಪುತ್ರೀತ್ವ, ಪತಿತ್ವ, ಪತ್ನೀತ್ವಗಳೇ ಮುಂತಾದ ಸಾಮಾಜಿಕಸ್ತರದ ಅಸ್ತಿತ್ವಗಳಿಗಿಂತ ಮಿಗಿಲಾಗಿ ಜೀವಸಾಮಾನ್ಯವೆಂಬ ಅಂಶವನ್ನು ಒಳಗೊಂಡಿರುತ್ತಾನೆ. ಇದನ್ನು ಸಾಮಾಜಿಕಸ್ಥಿತೀತರವಾದ ಆರ್ಥಿಕ-ರಾಜಕೀಯ-ಜನಾಂಗೀಯ-ಸಾಂಸ್ಕೃತಿಕಸ್ತರಗಳಿಗೂ ಮತ್ತಿತರ ದೇಶ-ಕಾಲಾಶ್ರಿತವಾದ ಉಪಾಧಿಗಳಿಗೂ ಅನ್ವಯಿಸಬಹುದು. ಇಂಥ ಎಲ್ಲ ಅಧ್ಯಾರೋಪಗಳಿಗಿಂತ ಮಿಗಿಲಾದದ್ದು ಸ್ವಧರ್ಮ. ದುರ್ದೈವದಿಂದ ಅದನ್ನು ಅರ್ಥ-ಕಾಮಗಳ ಹೊಯ್ಲಿನಲ್ಲಿ ಕಂಡುಕೊಳ್ಳುವುದು ಸಾಮಾನ್ಯವ್ಯಕ್ತಿಗೆ ಕಷ್ಟಸಾಧ್ಯ. ಅಷ್ಟೇಕೆ, ಅಸಾಮಾನ್ಯರು ಕೂಡ ಅದೆಷ್ಟೋ ಬಾರಿ ಇಂಥ ಪ್ರತ್ಯಭಿಜ್ಞಾನದಲ್ಲಿ ಸೋಲುವುದುಂಟು. ವಿಡಂಬನೆಯ ಸಂಗತಿಯೆಂದರೆ ಈ ಬಗೆಯ ಸೋಲಿಗೆ ಹೆಚ್ಚಿನ ಸಂದರ್ಭಗಳಲ್ಲಿ ಆಯಾ ವ್ಯಕ್ತಿಗಳ ಅಸಾಮಾನ್ಯತೆಯೇ ಕಾರಣವಾಗಿರುವುದುಂಟು! ಆದುದರಿಂದ ಪ್ರತಿಯೊಬ್ಬರೂ ಪ್ರಯತ್ನಪೂರ್ವಕವಾಗಿ ಸ್ವಧರ್ಮವನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಮೇಲ್ಕಾಣಿಸಿದ ಪುರಾಣಬಾಲಕರು ಅದು ಹೇಗೆ ತಮ್ಮ ಸ್ವಧರ್ಮವನ್ನು ಕಂಡುಕೊಂಡರೆಂಬ ವಿವರಗಳು ಆಯಾ ಕಥಾನಕಗಳಲ್ಲಿ ನಿರೂಪಿತವಾಗಿಲ್ಲ. ಕೇವಲ ಅವರಿಗೆ ಒದಗಿಬಂದ ಸ್ವಧರ್ಮ-ಪರಧರ್ಮಸಂಘರ್ಷವೇ ವರ್ಣಿತವಾಗಿದೆ. ಆದರೆ ಈ ವರ್ಣನೆ ಅಸಮಾನವಾಗಿ ಸಾಗಿದೆಯೆಂಬುದು ಸ್ಮರಣೀಯ. ಮೌಲ್ಯಪ್ರಜ್ಞೆಯುಳ್ಳ ಕವಿಗಳು ಇಂಥ ವ್ಯಕ್ತಿಗಳ ಸ್ವಧರ್ಮಸಾಕ್ಷಾತ್ಕಾರದ ಪ್ರಕ್ರಿಯೆಯನ್ನು ಸಮುಚಿತವಿಭಾವಾನುಭಾವಸಾಮಗ್ರಿಯೊಡನೆ ರೂಪಿಸಿದರೆ ಈ ಕಥೆಗಳು ಮಹಾಕಾವ್ಯಗಳ ರೂಪದಲ್ಲಿ ಮೈದಾಳಿಯಾವು. ಆದರೆ ನಾವು ಪ್ರಕೃತಕ್ಕೆ ಇಷ್ಟನ್ನು ಗಮನಿಸಿಕೊಳ್ಳುವುದು ಯುಕ್ತ.

ಯಾವುದೇ ವ್ಯಕ್ತಿಯ ಸ್ವಧರ್ಮನಿಷ್ಠೆಗೆ ತುಂಬ ದೊಡ್ಡ ಪ್ರತಿಬಂಧಕವೆಂದರೆ ಯೋಗ-ಕ್ಷೇಮಕಾತರತೆ. ಜೀವಸಾಮಾನ್ಯದ ಜನ್ಮಕ್ಕಂಟಿಕೊಂಡು ಬಂದ ಬವಣೆಯೇ ಈ ಯೋಗ-ಕ್ಷೇಮಕಾತರ್ಯ. ಇದನ್ನು ಮೀರಲು ನಮಗಿರುವ ದೊಡ್ಡ ಆಲಂಬನ ತತ್ತ್ವಚಿಂತನೆ. ಇದಕ್ಕೆ ಪೂರಕವಾದದ್ದು ಲೋಕಸಹಾನುಭೂತಿ. ವಿಭೂತಿಪೂಜೆಯು ಸ್ವಧರ್ಮಯೋಗಶ್ರದ್ಧಾಲುಗಳಿಗೆ ತುಂಬ ಉಪಾದೇಯಮೌಲ್ಯ. ನಮ್ಮೆಟುಕಿನ ಜಗತ್ತಿನಲ್ಲಿ ಸ್ವಧರ್ಮಯೋಗದಿಂದ ಸೌಖ್ಯವನ್ನು ಕಂಡು ಕಾಣಿಸಿದವರ ಜೀವನ-ಸಾಧನೆಗಳ ಅರಿವು ಮತ್ತದನ್ನು ಕುರಿತ ಅನುಸಂಧಾನಪುರಸ್ಸರಪ್ರೀತಿಯೇ ವಿಭೂತಿಯೋಗವೆಂದರೆ ತಪ್ಪಲ್ಲ. ಜೊತೆಗೆ ಸಾಧಿಸಿದೆವೆಂಬ ಹೆಮ್ಮೆಗಿಂತ ಸಾಧನೆಯ ಸೊಗಸೇ ಸಂತೋಷಕಾರಿಯೆಂಬ ನಮ್ರತೆಯ ನೆಮ್ಮದಿಯೇ ಸ್ವಧರ್ಮಯೋಗಕ್ಕೆ ಸೊಗಸಾದ ಬುನಾದಿ. ಇದು ಸರ್ವದಾ ನಮ್ಮನ್ನು ಬೇರೆಯವರಿಗೆ ಸ್ಥಾನ-ಸಂಪತ್ತಿಗಳ ಮಾನದಿಂದ ಹೋಲಿಸಿಕೊಂಡು ಮೇಲರಿಮೆ-ಕೀಳರಿಮೆಗಳಿಗೆ ತುತ್ತಾಗುವ ಅಪಾಯದಿಂದ ತಪ್ಪಿಸುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ, ನಮ್ಮನ್ನು ನಮ್ಮ ಮಟ್ಟಿಗೆ ನಿರುಪಮರನ್ನಾಗಿಸುತ್ತದೆ; ಫಲಕಾರ್ಪಣ್ಯರಹಿತರನ್ನಾಗಿಸುತ್ತದೆ. ಇದೇ ಭಗವದ್ಗೀತೆಯ ಕರ್ಮಯೋಗ. ಒಮ್ಮೆ ಸ್ವಧರ್ಮಸಿದ್ಧಿಯಾಯಿತೆಂದರೆ ಆತ್ಮವಿಶ್ವಾಸ ಅದಮ್ಯವಾಗುತ್ತದೆ; ಅಹಂಕಾರ ಅಸ್ತಮಿಸುತ್ತದೆ. ಇದು ಜೀವನ್ಮುಕ್ತಿಯ ಹತ್ತಿರದ ಸ್ಥಿತಿಯಲ್ಲದೆ ಮತ್ತೇನು? ಇಂಥ ನೆಲೆಯನ್ನು ಕಂಡವರು ಪಿತೃಹತ್ಯಾಪ್ರವೃತ್ತಿಗೋ ಪರಂಪರಾವೈರಕ್ಕೋ ರಜೋಗುಣೈಕಮೂಲದ ಬಂಡಾಯಕ್ಕೋ ತಮ್ಮನ್ನು ಮಾರಿಕೊಳ್ಳುವುದಾದರೂ ಹೇಗೆ? ಇಲ್ಲಿರುವುದು ಸತ್ತ್ವಪಾರಮ್ಯ. ಇದೊಂದೇ ಆಬಾಲವೃದ್ಧರಿಗೂ ಜೀವನಸಂಜೀವನಪಾಥೇಯ. ಇದನ್ನು ಮಕ್ಕಳ ಮೂಲಕ ನಮಗೆ ಮುಟ್ಟಿಸಿರುವುದು ವೇದ-ಪುರಾಣಾಖ್ಯಾನಗಳ ಹೆಚ್ಚುಗಾರಿಕೆ. ಸಾಮಾನ್ಯವಾಗಿ ನಾವು ನಮಗಿಂತ “ಕಿರಿಯ”ರಿಂದ ಕಲಿಯಲು ಸಿದ್ಧವಿರುವುದಿಲ್ಲ. ಕಲಿತರೂ ಅದನ್ನು ಸದಸ್ಯವಾಗಿ ಅಂಗೀಕರಿಸಲು ಹಿಂಜರಿಯುತ್ತೇವೆ. ಆದರೆ ನಮ್ಮ ಆರ್ಷಪರಂಪರೆಯು ಇಂಥ ಅಹಂಕಾರವನ್ನು ರಸಪೂರ್ಣಪದ್ಧತಿಯಿಂದ ಉನ್ಮೂಲಿಸಲೆಂದೇ ಈ ಪರಿಯ ಅಸಾಮಾನ್ಯಬಾಲಕರ ಬದುಕನ್ನು ತೆರೆದಿರಿಸಿದೆ.

“ನಮೋ ಅರ್ಭಕೇಭ್ಯಃ”

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.