ಅಮರಪ್ರೇಮದ ಅಮರುಕಶತಕ

This article is part 1 of 6 in the series ಅಮರುಶತಕ

ಹಿನ್ನೆಲೆ

ಭಾರತೀಯಸಂಸ್ಕೃತಿಯಲ್ಲಿ ಸಾಮಾನ್ಯಶಕ ಮುನ್ನೂರರಿಂದ ಸುಮಾರು ಎಂಟುನೂರರವರೆಗೆ ಐನೂರು ವರ್ಷಗಳ ಅವಧಿಯಲ್ಲಿ ಅದೊಂದು ಅತಿಲೋಕಮನೋಹರನಾಗರಕತೆಯು ನಿರ್ಮಿತವಾಯಿತು. ಇದು ದಕ್ಷಿಣದ ಸಂಘಂ ಸಾಹಿತ್ಯಯುಗ ಮತ್ತು ಬಾದಾಮಿ ಚಾಲುಕ್ಯರ ಶಿಲ್ಪವಿಕ್ರಮಯುಗ ಹಾಗೂ ಉತ್ತರದ ಗುಪ್ತ-ಮೌಖರೀ-ಪ್ರತಿಹಾರಯುಗಗಳ ಸಮಗ್ರಾಭ್ಯುದಯವನ್ನು ಒಳಗೊಳ್ಳುವಂತೆ ಬೆಳೆಯಿತು. ಇಲ್ಲಿ ಯಾವುದೇ ಪ್ರಾಂತೀಯಸಂಸ್ಕೃತಿವೈಷಮ್ಯಗಳಿರಲಿಲ್ಲ; ಸರ್ವತ್ರ ಸನಾತನಧರ್ಮದ ಸರ್ವಾಂಗೀಣಸ್ವಾರಸ್ಯವೇ ತುಂಬಿ ತುಳುಕಿತ್ತು. ಭೌತಿಕ-ಬೌದ್ಧಿಕ-ಭಾವುಕಸಮೃದ್ಧಿಗಳ ಸಾಮರಸ್ಯವನ್ನು ನಾವಿಲ್ಲಿ ಕಾಣಬಹುದು. ಯಾವುದನ್ನು ವೇದವಾಙ್ಮಯವು ಅಧಿಭೂತ-ಅಧಿದೈವ-ಅಧ್ಯಾತ್ಮಗಳ ಸಂಗಮವೆಂದಿದೆಯೋ ಅದು ಈ ಯುಗದ ಮಹಾಸಾಧನೆ. ಈ ಮೇಲ್ಮೆಯ ಮಹತ್ತ್ವ ಯಾವ ಮಟ್ಟದ್ದೆಂದರೆ ಇಂದಿನವರೆಗೂ ಮತ್ತೊಮ್ಮೆ ನಮ್ಮ ದೇಶದಲ್ಲಿ ಇಂಥ ಸಮಗ್ರಾಭ್ಯುದಯವು ಕಂಡುಬಂದಿಲ್ಲ. ಇಲ್ಲಿ ಸಮಾಜದ ಎಲ್ಲ ಮುಖಗಳ ಸಹಕಾರವನ್ನು ಕಾಣುವುದಲ್ಲದೆ ಆರ್ಥಿಕಶ್ರೀಮಂತಿಕೆಯ ಉಚ್ಛ್ರಾಯವನ್ನೂ ನೋಡುತ್ತೇವೆ. ಜೊತೆಗೆ ದಕ್ಷವಾದರೂ ಹೃದಯವೈಶಾಲ್ಯವುಳ್ಳ ಆಳ್ವಿಕೆ, ಅಂತರ್ಮುಖವಾದ ಅಧ್ಯಾತ್ಮಸಿದ್ಧಿಯಿದ್ದರೂ ಅದಕ್ಕೆ ಪೂರಕವಾಗುವ ಸರ್ವತೋಮುಖವಾದ ಸೌಂದರ್ಯಸಮೃದ್ಧಿ ಮತ್ತು ಆ ಕಾಲದ ಎಲ್ಲ ದೇಶಗಳೊಂದಿಗೆ ಸ್ಥಾಪಿಸಿಕೊಂಡ ವಿಕ್ರಮಾರ್ಜಿತಸಖ್ಯವೇ ಮುಂತಾದ ಅನೇಕಸ್ವಾರಸ್ಯಗಳನ್ನು ಗಮನಿಸುತ್ತೇವೆ. ಇಂಥ ಮೇಲ್ಮೆಯನ್ನು ನಮ್ಮ ದೇಶವೇನು, ಜಗತ್ತಿನ ಮತ್ತಾವ ದೇಶಗಳೂ ಹೆಚ್ಚಾಗಿ ಕಂಡಿಲ್ಲ. ಈ ಯುಗವೊಂದು ಪರಸ್ಪರವಿರುದ್ಧವೆನಿಸುವ, ಸಾಮರಸ್ಯವೇ ಅಸಂಭವವೆನಿಸುವ—ಇಂತಾದರೂ ಈ ಬಗೆಯ ಹೊಂದಾಣಿಕೆ ಅಪೇಕ್ಷಣೀಯವೆನಿಸುವ—ಅನೇಕಮೌಲ್ಯಗಳ ಅಸೂಯಾಸ್ಪದಸಮನ್ವಯ. ಬರ್ಬರತೆಯತ್ತ ಜಾರದ ಪರಾಕ್ರಮ, ಲೋಭಕ್ಕೆ ಬಲಿಯಾಗದ ವಾಣಿಜ್ಯವೈಭವ, ಲೋಲುಪತೆಯತ್ತ ಹೊರಳದ ಜೀವನಾಸ್ವಾದ, ಸಂಕುಚಿತವೆನಿಸದ ಸಾಮಾಜಿಕವ್ಯವಸ್ಥೆ, ಕೃತಕವೆನಿಸದ ಸಂಕೀರ್ಣಸುಂದರಕಲಾನಿರ್ಮಿತಿ, ಅಭಾವವೈರಾಗ್ಯವೆನಿಸದ ಅಧ್ಯಾತ್ಮಸಂಪತ್ತಿಯೇ ಮುಂತಾದ ಅವೆಷ್ಟೋ ಸ್ವಪ್ನದುರ್ಲಭಸಂಗತಿಗಳ ವಾಸ್ತವಸಿದ್ಧಿಯನ್ನು ಈ ಕಾಲದಲ್ಲಿ ನಮ್ಮ ದೇಶ ಕಂಡಿತು. ಇಂಥ ಮಹಾಯುಗದ ಮರುಕಳಿಕೆಯ ಪ್ರಯತ್ನವನ್ನಷ್ಟೇ ಮುಂದಿನ ಚೋಳ-ಚಾಲುಕ್ಯ-ರಾಷ್ಟ್ರಕೂಟ-ಪಾಲ-ಸೇನ-ವಿಜಯನಗರಸಾಮ್ರಾಜ್ಯಗಳು ಮಾಡಿದವೆಂದರೆ ಇದರ ಎತ್ತರ-ಬಿತ್ತರಗಳು ಅರಿವಾದಾವು.

ಯಾವುದನ್ನು ಸಾಧಿಸಿದರೂ ಸಮಗ್ರತೆಯು ತುಂಬಿತುಳುಕುವ ಈ ಯುಗದಲ್ಲಿ ಯಾವೊಬ್ಬ ಪ್ರಾತಿನಿಧಿಕವ್ಯಕ್ತಿಯನ್ನು ಗಮನಿಸಿದರೂ ಆತನ ಸಾಧನೆಯಲ್ಲಿ ಇದರ ಸಂಕ್ಷಿಪ್ತವಾದರೂ ಸಮಗ್ರವೆನಿಸಬಹುದಾದ ಸತ್ತ್ವವನ್ನು ಕಾಣಬಹುದು. ಇಂಥ ಪ್ರಾತಿನಿಧಿಕವ್ಯಕ್ತಿಗಳ ಪೈಕಿ ಅಗ್ರಗಣ್ಯನೆಂದರೆ ಕವಿಕುಲಗುರು ಕಾಳಿದಾಸ. ಇವನಂತೆ ಸಾಹಿತ್ಯದಲ್ಲಿ ಸಿದ್ಧಿಗಳಿಸಿದ ಗಣ್ಯರ ಪೈಕಿ ಎದ್ದುತೋರುವವರು ತಮಿಳಿನ ಸಂಘಂ ಕವಿಗಳು ಹಲವರು, ಗಾಥಾಸಪ್ತಶತಿಯ ಪ್ರಕ್ಷಿಪ್ತಭಾಗಗಳಿಗೆ ಸೇರಿಕೊಳ್ಳುವ ಕೆಲವರು ಪ್ರಾಕೃತಭಾಷಾಕವಿಗಳು, ಸಂಸ್ಕೃತದ ಬಾಣ, ದಂಡಿ, ಭರ್ತೃಹರಿ, ವಿಶಾಖದತ್ತರಂಥವರು. ಆಯುರ್ವೇದದಲ್ಲಿ ವಾಗ್ಭಟ, ಖಗೋಲಶಾಸ್ತ್ರವೂ ಸೇರಿದಂತೆ ಅನೇಕಲೌಕಿಕವಿದ್ಯೆಗಳಲ್ಲಿ ಆರ್ಯಭಟ-ವರಾಹಮಿಹಿರರು, ದರ್ಶನಶಾಸ್ತ್ರಗಳಲ್ಲಿ ಪಕ್ಷಿಲಸ್ವಾಮಿ, ಕುಮಾರಿಲಭಟ್ಟ, ಶಂಕರ ಮುಂತಾದವರು, ಸಂಗೀತ-ನೃತ್ಯಾದಿಗಳ ಕ್ಷೇತ್ರದಲ್ಲಿ ಮತಂಗ, ಕೋಹಲ, ನಂದಿಕೇಶ್ವರಾದಿಗಳು ಸ್ಮರಣೀಯರು.

ಮಹಾಕವಿ ಅಮರುಕ

ಇಂಥ ಮಹಾಮಹಿಮರ ಕಾಲದಲ್ಲಿದ್ದವನು ಅಮರುಕ. ಕೇವಲ ಶತಕವೊಂದರಿಂದಲೇ ವಿಶ್ವಸಾಹಿತ್ಯದಲ್ಲಿ ಅಜರಾಮರವಾದ ಸ್ಥಾನವನ್ನು ಗಳಿಸಿದ್ದಾನೆ. ಸಂಸ್ಕೃತಸಾಹಿತ್ಯದಲ್ಲಿ ಶತಕಗಳಿಗೇನೂ ಕೊರತೆಯಿಲ್ಲ. ಭರ್ತೃಹರಿ, ಭಲ್ಲಟ, ನೀಲಕಂಠದೀಕ್ಷಿತ ಮುಂತಾದ ಅನೇಕರ ಅಗ್ರಮಾನ್ಯಕೃತಿಗಳು ಈ ಪ್ರಭೇದದಲ್ಲಿವೆ. ಆದರೆ ಶೃಂಗಾರದಂಥ ಬಹುಕವಿಪ್ರಯುಕ್ತವೂ ಬಹುಸಂಕೀರ್ಣವೂ ಆದ ರಸವನ್ನು ಆಧರಿಸಿ ನಿರುಪಮವಾದ ಮುಕ್ತಕಕಾವ್ಯವನ್ನು ಶತಕದ ರೂಪದಲ್ಲಿ ಹವಣಿಸಿದ ಕವಿಯಾಗಿ ಅಮರುಕನ ಸಾಧನೆ ಅದ್ವಿತೀಯ. ಭಾರತೀಯಶೃಂಗಾರಶತಕಸಾಹಿತ್ಯದಲ್ಲಿ ಅದೆಷ್ಟೇ ಕೃತಿಗಳು ಉಪಲಬ್ಧವಿದ್ದರೂ ಅವೆಲ್ಲ ಅಮರುಕನ ಮಂಡಿಯ ಮಟ್ಟವನ್ನೂ ಮುಟ್ಟುವುದಿಲ್ಲ. ಇದಕ್ಕೆ ಭರ್ತೃಹರಿಗೂ ವಿನಾಯಿತಿಯಿಲ್ಲ.

ಹೆಸರೊಂದು ಬಿಟ್ಟು ಈ ಕವಿಯ ಬಗೆಗೆ ನಮಗೆ ಮತ್ತೇನೂ ಗೊತ್ತಿಲ್ಲ. ಕೆಲವರು ಇವನನ್ನು ಕಾಶ್ಮೀರದ ರಾಜನೆಂದು ಹೇಳಿದ್ದಾರೆ, ಮತ್ತೆ ಕೆಲವರು ಉತ್ತರಭಾರತದ ಯಾವುದೋ ಪ್ರಾಂತದ ನೃಪತಿಯಿರಬಹುದೆಂದು ಊಹಿಸಿದ್ದಾರೆ. ಆದರೆ ಇದಕ್ಕೆ ಇತಿಹಾಸದ ಯಾವ ಸಾಕ್ಷ್ಯವೂ ಒದಗಿಬರುವುದಿಲ್ಲ. ಅಷ್ಟೇಕೆ, ಈ ಕವಿಯ ಕಾಲವನ್ನೂ ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಅದು ಎರಡು-ಮೂರು ಶತಮಾನಗಳ ನಡುವೆ ಹೊಯ್ದಾಡಿದೆ. ಇಂದಿಗೂ ಈ ವಿಷಯದಲ್ಲಿ ಕೊನೆಯ ಮಾತಿಲ್ಲ. ಇಷ್ಟಂತೂ ಊಹಿಸಬಹುದು: ಅಮರುಕನು ಗುಪ್ತರ ಕಾಲದ ಅಂತ್ಯ ಮತ್ತು ಪ್ರತೀಹಾರರ ಕಾಲದ ಆದಿಯ ನಡುವಿನಲ್ಲಿ ಇದ್ದಿರಬಹುದಾದ ಸುಸಂಸ್ಕೃತನೂ ಅನುಕೂಲವಂತನೂ ಆದ ಕವಿ. ನಾಗರಕಜೀವನದ ಒಳ-ಹೊರಗನ್ನೂ ಹೆಣ್ಣು-ಗಂಡುಗಳ ಹೃದಯವನ್ನೂ ಚೆನ್ನಾಗಿ ಬಲ್ಲ ವಶ್ಯವಾಕ್ ಎನಿಸುವ ಮಹಾಕವಿ.   

ಹೇಳಿ ಕೇಳಿ ಶೃಂಗಾರವು ಸರ್ವಜನಮನೋಹರವಾದ ರಸವಾದರೂ ಅನೌಚಿತ್ಯದ ಹುಳಿಯ ಹೆಸರೆತ್ತಿದೊಡನೆಯೂ ಹದಗೆಡುವಂಥ ಬಹುಸೂಕ್ಷ್ಮವಾದ ಕ್ಷೀರಪಾಕ. ಇದನ್ನು ಹೃದಯಂಗಮವಾಗಿ ನಿರ್ವಹಿಸಿದ ಶ್ರೇಯಸ್ಸು ಅಮರುಕನಿಗೇ ಸಲ್ಲುತ್ತದೆ. ಕಾಳಿದಾಸನಂಥವನೂ ಹಲವು ಬಾರಿ ದೇಹರಂಗದಲ್ಲಿ ಶೃಂಗಾರವನ್ನು ಚಿತ್ರಿಸುವ ಅನಿವಾರ್ಯತೆಗೆ ತುತ್ತಾಗಿದ್ದಾನೆ. ಆದರೆ ಅಮರುಕನು ಇದನ್ನು ಸರ್ವಾತ್ಮನಾ ಚಿತ್ತರಂಗದಲ್ಲಿಯೇ ಚಿತ್ರಿಸಿ, ಶೃಂಗಾರಕ್ಕಿರುವ ಮತ್ತೊಂದು ಹೆಸರು “ಶುಚಿ”ಯನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾನೆ. ಅಲ್ಲದೆ ಇವನ ರಸನಿರ್ವಾಹವು ಸುಕುಮಾರವಾದರೂ ತೀವ್ರ, ಪ್ರಸನ್ನವಾದರೂ ಉಜ್ಜ್ವಲ. ಗಂಡು-ಹೆಣ್ಣುಗಳ ಮನೋವಿಲಾಸಗಳನ್ನು, ಅಲ್ಲಿಯ ರಾಗ-ರೋಷಗಳನ್ನು, ನೋವು-ನಲಿವುಗಳನ್ನು, ಸ್ನಿಗ್ಧತೆ-ಉಗ್ರತೆಗಳನ್ನು ಬಗೆಬಗೆಯಾಗಿ, ಬೇಸರಕ್ಕೆ ಅವಕಾಶವಿರದಂತೆ ಬಣ್ಣಿಸಿದ್ದಾನೆ. ಇವನ ದಾರಿಯನ್ನೇ ಮುಂದಿನ ಎಷ್ಟೋ ಕವಿಗಳು ಅನುಸರಿಸಿದ್ದಾರೆಂಬುದಕ್ಕೆ ಭಾರತೀಯಸಾಹಿತ್ಯದ ಇತಿಹಾಸವೇ ಸಾಕ್ಷಿ. ವಿಶೇಷತಃ ಸಂಸ್ಕೃತದ ಹತ್ತಾರು ಸುಭಾಷಿತಸಂಗ್ರಹಗಳಲ್ಲಿ ಅಮರುಕನ ಅನುಕರಣೆಗಳೆಷ್ಟೋ ಇಡಿಕಿರಿದಿವೆ. ಅಲ್ಲದೆ ಮತ್ತೆಷ್ಟೋ ಕವಿಗಳು ಅಮರುಕನ ಹೆಸರಿನಲ್ಲಾದರೂ ತಮ್ಮ ರಚನೆಗಳು ಬಾಳಿ ಬೆಳಗಲೆಂದು ಪ್ರಕ್ಷೇಪಗಳನ್ನು ಕೂಡ ಅವನ ಶತಕದಲ್ಲಿ ಮಾಡಿದ್ದಾರೆ. ಇದನ್ನು ಕುರಿತು ಅರ್ಜುನವರ್ಮನಂಥ ವ್ಯಾಖ್ಯಾನಕಾರರು ತೀವ್ರವಾಗಿ ಆಕ್ಷೇಪಿಸಿಯೂ ಇದ್ದಾರೆ. ದೇಶಭಾಷೆಗಳ ಕವಿಗಳು, ಗೀತಕರ್ತರು, ನರ್ತಕರು, ಚಿತ್ರಶಿಲ್ಪಿಗಳೇ ಮುಂತಾದ ಅನೇಕಕಲಾವಿದರು ಅಮರುಕನಿಗೆ ಉಪಜೀವಿಗಳಾಗುವುದರಲ್ಲಿಯೇ ತಮ್ಮ ಸಾರ್ಥಕ್ಯವನ್ನು ಕಂಡಿದ್ದಾರೆ.

ಅಮರುಕಶತಕದ ಶೃಂಗಾರಜೀವನ

ಅಮರುಕನ ಕಾವ್ಯಲೋಕದಲ್ಲಿ ಧ್ವನಿತವಾಗುವ ಜೀವನವು ತುಂಬ ವಿಶಾಲವಾದ ಅಂದಿನ ಭಾರತೀಯಸಮಾಜದ ಸಮಗ್ರಪ್ರತಿನಿಧಿಯೆನ್ನುವಂತಿಲ್ಲ. ಆದರೂ ಇಲ್ಲಿಯ ನಲ್ಲ-ನಲ್ಲೆಯರ ರೀತಿ-ನೀತಿಗಳು ಆ ಕಾಲದ ಅನುಕೂಲವಂತರ ಸಹಜಚಿತ್ರಣವೆನ್ನಬಹುದು. ಮಾತ್ರವಲ್ಲ, ಈ ಕೃತಿಯ ಶೃಂಗಾರವು ಎಲ್ಲ ಕಾಲದ, ಎಲ್ಲ ದೇಶಗಳ, ಎಲ್ಲ ಸ್ತರಗಳ ಜನರಿಗೂ ಅನ್ವಯಿಸಬಲ್ಲ ವ್ಯಾಪ್ತಿಯನ್ನು ಹೊಂದಿದೆಯೆಂಬುದು ಅವಿಸ್ಮರಣೀಯ. ಅಮರುಕನ ನಾಯಕರೆಲ್ಲ ಪ್ರಾಯಿಕವಾಗಿ ಸಾಹಸಿಗಳು, ವಿಕ್ರಮಿಗಳು, ಮಹತ್ತ್ವಾಕಾಂಕ್ಷಿಗಳು, ವಾಣಿಜ್ಯ-ವ್ಯವಹಾರನಿಪುಣರು, ಸ್ವದೇಶ-ಪರದೇಶಗಳಲ್ಲಿ ನೆಲದ ಮೇಲೆಯೂ ನೀರಿನ ಮೇಲೆಯೂ ಸಂಚರಿಸಿ ಕೀರ್ತಿ-ಸಂಪತ್ತಿಗಳನ್ನು ಗಳಿಸುತ್ತಿರುವಂಥವರು. ಇವರು ಕೆಲಮಟ್ಟಿಗೆ ಆದರ್ಶೀಕೃತರೂ ಹೌದು. ಆದುದರಿಂದಲೇ ಅಂದ-ಚಂದಗಳಲ್ಲಿ, ವಿದ್ಯಾ-ವಿನಯಗಳಲ್ಲಿ, ಭೋಗ-ಭಾಗ್ಯಗಳಲ್ಲಿ ಎದ್ದುತೋರಬಲ್ಲ ಬಲ್ಲಿದರು. ಇನ್ನು ಚೆಂದುಳ್ಳಿ ಚೆಲುವೆಯರನ್ನು ಒಲಿಸಿಕೊಳ್ಳುವಲ್ಲಿ, ಉಳಿಸಿಕೊಳ್ಳುವಲ್ಲಿ, ವರಿಸಿ ವಿಹರಿಸುವಲ್ಲಿ ಎಣೆಮೀರಿದ ಬಲ್ಮೆಯುಳ್ಳ ಬೇಟಿಗರು. ಅಮರುಕನ ನಾಯಿಕೆಯರಾದರೂ ಅಷ್ಟೇ. ನಿರಪವಾದವಾಗಿ ಎಲ್ಲರೂ ಚೆಲುವೆಯರು, ಚದುರೆಯರು; ಮುಗ್ಧೆಯರು, ವಿದಗ್ಧೆಯರು; ಮದವತಿಯರು, ಮಾನವತಿಯರು. ಬೆಡಗು-ಬಿನ್ನಾಣಗಳಲ್ಲಿ, ಬಿಂಕ-ಕೊಂಕುಗಳಲ್ಲಿ, ಕೆಣಕು-ತಿಣುಕುಗಳಲ್ಲಿ ನಿಸ್ಸೀಮೆಯರು. ಅದೆಷ್ಟು ತೀವ್ರವಾಗಿ ಪ್ರೀತಿಸಿ, ತಮ್ಮ ಪ್ರಣಯಿಗಳಿಗಾಗಿ ಪ್ರಾಣವನ್ನೇ ಧಾರೆಯೆರೆಯಬಲ್ಲರೋ ಅಷ್ಟೇ ತೀವ್ರವಾಗಿ ಅವರನ್ನು ಆಕ್ಷೇಪಿಸಿ ಅಗಲಿಸಲೂಬಲ್ಲರು, ಹಾಗೆ ಮಾಡಿ ಪಶ್ಚಾತ್ತಪಿಸಿ ತತ್ತರಿಸಲೂಬಲ್ಲರು. ಬಗೆಬಗೆಯ ಕಲೆಗಳಲ್ಲಿ, ಕ್ರೀಡೆಗಳಲ್ಲಿ ನಿಪುಣೆಯರಾದ ಈ ಪ್ರಮದೆಯರು ತಮಗೆ ಅನುರೂಪರಾದ ಗೆಳತಿಯರೊಡನೆ, ದೂತಿಯರೊಡನೆ, ಚೇಟಿಯರೊಡನೆ, ಶುಕ-ಸಾರಿಕೆಗಳೊಡನೆ, ಹಂಸ-ಹರಿಣಗಳೊಡನೆ ತಮ್ಮದೇ ಆದ ಜಗತ್ತಿನಲ್ಲಿ ಬಾಳುವ ಅತಿಲೋಕಮೋಹಿನಿಯರೂ ಹೌದು.

ಅಮರುಕಶತಕದ ಸಾಹಿತ್ಯಮಹತ್ತ್ವ

ಭರತಮುನಿಯ ನಾಟ್ಯಶಾಸ್ತ್ರದಲ್ಲಿ, ವಾತ್ಸ್ಯಾಯನಮಹರ್ಷಿಯ ಕಾಮಸೂತ್ರಗಳಲ್ಲಿ ಬರುವ ಎಲ್ಲ ಬಗೆಯ ನಾಯಕ-ನಾಯಕೆಯರಿಗೆ, ಅವರ ಪರಿವಾರದವರಿಗೆ ಹಾಗೂ ಇವರಿಗೆಲ್ಲ ಒದಗಿಬರಬಲ್ಲ ಉದ್ದೀಪನವಿಭಾವಗಳೆನಿಸಿದ ನಿಸರ್ಗದ ಅಸಂಖ್ಯಮುಖಗಳಿಗೆ, ಸಂಸ್ಕೃತಿಯ ಅಶೇಷವೈವಿಧ್ಯಗಳಿಗೆ ನಿದರ್ಶನವಾಗುವಂತೆ ಅಮರುಕನ ಕಾವ್ಯವೂ ಅಲ್ಲಿಯ ಕಾಂತ-ಕಾಂತೆಯರೂ ಹವಣುಗೊಂಡಿದ್ದಾರೆ. ವಿಶೇಷತಃ ಭರತಮುನಿಯ ಕೃತಿಯಲ್ಲಿ ಬರುವ ಶೃಂಗಾರಪ್ರಪಂಚಕ್ಕೂ ವಾತ್ಸ್ಯಾಯನಮಹರ್ಷಿಯ ಸೂತ್ರಗಳಲ್ಲಿ ತೋರಿಕೊಳ್ಳುವ ನಾಗರಕವೃತ್ತಾಂತವೂ ಸೇರಿದಂತೆ ಅಲ್ಲಿಯ ಅನೇಕಪ್ರಕರಣಗಳಿಗೂ ಈ ಶತಕವು ಪ್ರಾಯೋಗಿಕಪ್ರಸ್ತಾರ, ರಸರಾಜನ ವಿಸ್ತಾರ.

ಅಮರುಕಶತಕವು ಶೃಂಗಾರಮಯಮುಕ್ತಕಗಳ ಸಂಗ್ರಹವೆಂಬುದನ್ನು ಈಗಾಗಲೇ ಬಲ್ಲೆವಷ್ಟೆ. ಇಲ್ಲಿರುವ ಪದ್ಯಗಳೆಲ್ಲ ಪೂರ್ವಾಪರವಿವರಣನಿರಪೇಕ್ಷವಾದ ಸ್ವತಂತ್ರಪದ್ಯಗಳೇ ಆದರೂ ಇವುಗಳೊಳಗಿನ ಕಥೆಗಳಿಗೆ, ವ್ಯಥೆಗಳಿಗೆ, ನಲವಿಗೆ, ನಿರೂಪಣಕ್ಕೆ ಪೂರ್ವೋಕ್ತವಾದ ಸಾಂಸ್ಕೃತಿಕನೇಪಥ್ಯವಿದ್ದೇ ಇದೆ. ಕವಿಯು ಪ್ರಯತ್ನಪೂರ್ವಕವಾಗಿ ಯಾವುದೇ ಅಲಂಕಾರವನ್ನು ಹೇರಲು ಹೊರಟಿಲ್ಲ. ಅವನ ಸೂಕ್ಷ್ಮಪರಿಶೀಲನೆ ಮತ್ತು ಸಮರ್ಥನಿರೂಪಣೆಗಳೇ ಅನೇಕಸಹಜಾಲಂಕಾರಗಳಿಗೆ ಆಶ್ರಯವನ್ನಿತ್ತಿವೆ. ಮುಖ್ಯವಾಗಿ ಇಲ್ಲಿರುವುದು ನಲ್ಲ-ನಲ್ಲೆಯರ ಬಗೆಬಗೆಯ ಚಿತ್ತವೃತ್ತಿಗಳ ವರ್ಣನೆ. ಭರತನ ಭಾಷೆಯಲ್ಲಿ ಹೇಳುವುದಾದರೆ, ವಿಭಾವಾನುಭಾವಸಾಮಗ್ರಿಯ ಪರಿಪುಷ್ಟನಿರೂಪಣೆ. ಇದಕ್ಕೆ ಕವಿಯು ಬಳಸಿಕೊಂಡ ಛಂದಸ್ಸುಗಳು ಕೆಲವೇ: ಶಾರ್ದೂಲವಿಕ್ರೀಡಿತ, ಹರಿಣೀ, ಶಿಖರಿಣೀ, ಮಂದಾಕ್ರಾಂತಾ, ವಸಂತತಿಲಕ ಇತ್ಯಾದಿ. ಪ್ರಧಾನವಾಗಿ ಶಾರ್ದೂಲವಿಕ್ರೀಡಿತವೇ ಇಲ್ಲಿ ಸಾಮ್ರಾಜ್ಯವನ್ನಾಳಿದೆ. ಆದುದರಿಂದಲೇ ಈ ಶತಕಕವು ಮೂಲತಃ ಇದೊಂದೇ ವೃತ್ತದಲ್ಲಿ ನಿಬದ್ಧವಾದ ಪದ್ಯಗಳ ಗುಚ್ಛವೆಂದೂ ಕಾಲಕ್ರಮೇಣ ಮಿಕ್ಕ ಛಂದಸ್ಸುಗಳ ಪದ್ಯೋಪನದಿಗಳು ಸೇರಿಕೊಂಡು ಶತಕಸ್ರವಂತಿಯು ಹರಿಯಿತೆಂದೂ ಅಭಿಪ್ರಾಯವುಂಟು. ಹರಿಣೀವೃತ್ತದಂಥ ಕಠಿನವಿಕಟಚ್ಛಂದಸ್ಸನ್ನು ಅಮರುಕನಂತೆ ರಸಪೇಶಲವಾಗಿ ಬಳಸಿಕೊಂಡವರು ಹಲವರಿಲ್ಲ. ಇಲ್ಲಿಯ ಭಾಷೆ ಸಂಸ್ಕೃತದ ಸಹಜಸಮರ್ಥವಾಗ್ರೂಢಿಗೆ ಸುಂದರವಾದ ನಿದರ್ಶನ. ಅದೆಷ್ಟೋ ಬಾರಿ ಸಂಕೀರ್ಣವಾದ ಸಂಭಾಷಣೆಯನ್ನೋ ವಿವರವಾದ ಕಥೆಯನ್ನೋ ನಾಲ್ಕು ಸಾಲುಗಳೊಳಗೆ ಅಮರುಕನು ಅಳವಡಿಸಿರುತ್ತಾನೆಂದರೆ ಅವನ ವಾಣಿಯ ಬಿಗಿ-ಬೆಡಗುಗಳನ್ನು ಬಗೆಗಾಣಬಹುದು. ವ್ಯರ್ಥಪದಗಳಿಗಿಲ್ಲಿ ಪ್ರವೇಶವೇ ಇಲ್ಲ. ಶುಷ್ಕವಿಶೇಷಣಗಳಿಗೂ ಗತಾನುಗತಿಕಪದಗುಂಫನಗಳಿಗೂ ಇಲ್ಲಿ ಆಸ್ಪದವೇ ಇಲ್ಲ. ಅದೇ ರೀತಿ ಕಣ್ಣುಕೋರೈಸುವ ಪ್ರಾಸಾನುಪ್ರಾಸಗಳಿಗೂ ಎಡೆಯಿಲ್ಲ. ಹೀಗೆ ಪ್ರಸ್ಫುಟವಾದ ಶಬ್ದಾರ್ಥಾಲಂಕಾರಗಳಿಗೆ ಪ್ರಜ್ಞಾಪೂರ್ವಕವಾದ ಅವಕಾಶವನ್ನೇ ಕವಿ ಕೊಡದಿದ್ದರೂ ಅವನ ಅಮೇಯಪ್ರತಿಭೆ, ಅದ್ಭುತಪರಿಶೀಲನಶಕ್ತಿ ಮತ್ತು ಮಾನವಹೃದಯಪರಿಜ್ಞಾನದ ಪರಮೋಚ್ಚಕೌಶಲಗಳು ಇಲ್ಲಿಯ ಪದ್ಯಗಳ ಸ್ವಯಂಪೂರ್ಣತೆಯನ್ನು ಭಾಷಿಕವಾಗಿ ಕೈಗೂಡಿಸಿವೆ. ಈ ದೃಷ್ಟಿಯಿಂದ ಕಂಡಾಗ ಜೀವಂತವಾದ ಅಭಿಜಾತಸಂಸ್ಕೃತಕ್ಕೆ ಅಮರುಕನೊಬ್ಬನೇ ಸಾಕೆನ್ನಬಹುದು. ಅರ್ಥಪಾರಮ್ಯವನ್ನೇ ಮಿಗಿಲಾಗಿ ಎತ್ತಿಹಿಡಿದಿದ್ದರೂ ಅಮರುಕನ ಕವಿತೆಯನ್ನು ಮತ್ತೊಂದು ಭಾಷೆಗೆ ಅನುವಾದಿಸುವುದು ಅತ್ಯಂತಕಠಿನವೆಂದರೆ ಈತನ ನುಡಿಯೋಜತನವನ್ನು ಊಹಿಸಬಹುದು.  

ಅಮರುಕಶತಕವು ಹೆಚ್ಚುಕಡಮೆ ತನ್ನ ಹುಟ್ಟಿನಿಂದ ಮೊದಲ್ಗೊಂಡು ಇಂದಿನವರೆಗೂ ಕವಿ-ಕಲಾವಿದರನ್ನೂ ಸಹೃದಯ-ವಿಮರ್ಶಕರನ್ನೂ ಅವಿಚ್ಛಿನ್ನವಾಗಿ ಆಕರ್ಷಿಸಿಕೊಂಡು ಬಂದಿದೆಯೆಂಬುದಕ್ಕೆ ಭಾರತೀಯಕಾವ್ಯಮೀಮಾಂಸೆಯ ಇತಿಹಾಸವೇ ಸಾಕ್ಷಿ. ಆನಂದವರ್ಧನ, ಅಭಿನವಗುಪ್ತ, ಕುಂತಕ, ಮಮ್ಮಟ, ವಿಶ್ವನಾಥ, ಅಪ್ಪಯ್ಯದೀಕ್ಷಿತ, ಜಗನ್ನಾಥ ಮುಂತಾದ ಆಲಂಕಾರಿಕತಲ್ಲಜರ ಗ್ರಂಥಗಳಲ್ಲಿ ಅಮರುಕನ ಕವಿತೆಗಳ ಮೌಲ್ಯಮಾಪನ ಸಾಗಿದೆ; ಎಲ್ಲೆಲ್ಲಿಯೂ ಅದು ಉಜ್ಜ್ವಲವಾಗಿ ತೇರ್ಗಡೆಯಾಗಿದೆ. ಹೀಗೆ ಸಾವಿರ ವರ್ಷಗಳಿಗೂ ಮಿಗಿಲಾದ ವಿದ್ವದ್ರಸಿಕಪರಂಪರೆಯು ಅಮರುಕಶತಕಸಮ್ರಾಟನಿಗೆ ಕಪ್ಪ-ಕಾಣಿಕೆಗಳನ್ನು ಸಲ್ಲಿಸಿಕೊಂಡು ಬಂದು ತನ್ನ ಯೋಗ್ಯತೆಯನ್ನೇ ಹೆಚ್ಚಿಸಿಕೊಂಡಿದೆ. ಇದು ಅಲ್ಪಸ್ವಲ್ಪದ ಸಿದ್ಧಿಯಲ್ಲ.

To be continued.

   Next>>

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.