ಡಿ.ವಿ.ಜಿ. ಅವರ ಭಾಷಾಶಿಲ್ಪ—ಸಿಂಹಾವಲೋಕನ

This article is part 2 of 5 in the series DVG avara Bhasha-shilpa

ಡಿ.ವಿ.ಜಿ. ಭಾಷೆಯ ಸಿಂಹಾವಲೋಕನ

ಈ ಲೇಖನದ ಮುಂದಿನ ಭಾಗದಲ್ಲಿ ಗುಂಡಪ್ಪನವರ ಗದ್ಯದ ಬರೆಹಗಳಲ್ಲಿ ಅವರ ಹಸ್ತಾಕ್ಷರದಂತೆ ವಿಶಿಷ್ಟವಾಗಿ ತೋರುವ ಕೆಲವು ವಾಕ್ಯವಿಧಾನಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ಸಂಗ್ರಹಿಸಿದ್ದೇನೆ. ಉದಾಹರಣೆಗಳು ಹೆಚ್ಚಿನ ವಿವರಣೆಯನ್ನು ಅಪೇಕ್ಷಿಸದ ಕಾರಣ ಅವುಗಳ ಪರಿಯನ್ನು ನಿರೂಪಿಸುವ ಒಂದೆರಡು ಮಾತುಗಳನ್ನಷ್ಟೇ ಬರೆಯಲಾಗಿದೆ. ಗುಂಡಪ್ಪನವರ ಸಾಹಿತ್ಯ ಬಹಳ ವಿಸ್ತೃತವೂ ಗಹನವೂ ಆದದ್ದು. ಅದರ ಎಲ್ಲ ಬಗೆಯ ಸ್ವಾರಸ್ಯವನ್ನೂ ಹಿಡಿದಿಡಲು ಯತ್ನಿಸುವುದು ಸಾಹಸವೇ ಸರಿ. ಹೀಗಾಗಿ ಪ್ರಸ್ತುತಲೇಖನದ ಮಿತಿಯ ಒಳಗೆ ದಿಕ್ಸೂಚಕವಾಗಿ ಕೆಲವೇ ಮಾದರಿಗಳನ್ನು ನೀಡಿದ್ದೇನೆ.

ವಿಷಯವೊಂದರ ಅಥವಾ ವ್ಯಕ್ತಿಯೊಬ್ಬರ ಗುಣಗಳನ್ನೋ ಚರ್ಯೆಗಳನ್ನೋ ವಿವರಿಸುವ ಮೂಲಕ ಅದ(ವ)ರ ಸ್ವಭಾವವನ್ನು ಗುಂಡಪ್ಪನವರು ಕೆಲವೇ ಮಾತುಗಳಲ್ಲಿ ಚಿತ್ರಿಸುತ್ತಾರೆ:

ಸುಸಂಸ್ಕೃತನ ಲಕ್ಷಣಗಳು: (೧) ಸ್ವಸ್ಥಾನಪರಿಜ್ಞಾನ, (೨) ಪರೇಂಗಿತಪರಿಗ್ರಹಣ, (೩) ಸ್ವಾರ್ಥನಿಯಮನ, (೪) ಸಮನ್ವಯದೃಷ್ಟಿ, (೫) ಸರಸತೆ.

(ಸಂಸ್ಕೃತಿ, ಸುಸಂಸ್ಕೃತನೆಂಥವನು)

(ವೈದಿಕರ) ಜೀವನವಿಧಾನದಲ್ಲಿ ಎದ್ದುಕಾಣುತ್ತಿದ್ದ ಲಕ್ಷಣಗಳು ಮುಖ್ಯವಾಗಿ ಮೂರು: (೧) ನಂಬಿಕೆ, (೨) ನೆಮ್ಮದಿ, (೩) ವಾತ್ಸಲ್ಯ.

(ಜ್ಞಾಪಕಚಿತ್ರಶಾಲೆ, ವೈದಿಕಧರ್ಮಸಂಪ್ರದಾಯಸ್ಥರು)

ಗುಂಡಣ್ಣನವರಲ್ಲಿ ಆಕರ್ಷಕವಾಗಿದ್ದ ಗುಣಗಳು ಮುಖ್ಯವಾಗಿ ನಾಲ್ಕು: (೧) ಸ್ನೇಹತತ್ಪರತೆ, (೨) ಹಾಸ್ಯನಯ, (೩) ಸಾಹಿತ್ಯಪ್ರೀತಿ, (೪) ಉಪಕಾರಶೀಲತೆ.

(ಜ್ಞಾಪಕಚಿತ್ರಶಾಲೆ, ಸಾಹಿತಿ-ಸಜ್ಜನ-ಸಾರ್ವಜನಿಕರು)

ಹಿರಿಯಣ್ಣನವರ ಗುಣವಿಶೇಷವನ್ನು ತಿಳಿಸುವುದಕ್ಕಾಗಿ ನಾನು ಮೂರು ಪದಗಳನ್ನು ಆರಿಸಿಟ್ಟುಕೊಂಡಿದ್ದೇನೆ—(೧) ಅವರು ಪ್ರಾಮಾಣಿಕರು, (೨) ಅವರು ಪರಿಶುದ್ಧರು, (೩) ಅವರು ಉಪಶಾಂತರು.

(ಜ್ಞಾಪಕಚಿತ್ರಶಾಲೆ, ಹೃದಯಸಂಪನ್ನರು)

ಪದವಿಗೆ ಮುಂಚೆ ಕರ್ತವ್ಯಚಿಂತೆ, ಹುದ್ದೆಗೆ ಮೊದಲು ಉದ್ದೇಶಚಿಂತೆ—ಇದು ವಿಶ್ವೇಶ್ವರಯ್ಯನವರ ಜೀವನದ ಮೂಲಸೂತ್ರವೆನ್ನಬಹುದು.

 (ಜ್ಞಾಪಕಚಿತ್ರಶಾಲೆ, ಮೈಸೂರಿನ ದಿವಾನರುಗಳು)

ವಿಷಯವೊಂದನ್ನು ಸರ್ವತೋಮುಖವಾಗಿ ಪರಿಶೀಲಿಸಿ ಅದನ್ನು ವಿಶದವಾಗಿ ವಿವಿರಸುವುದಕ್ಕೆ ಉದಾಹರಣೆ:

ತತ್ತ್ವ ಎಂದರೆ “ಅದು ಅದಾಗಿರುವುದು” (ತತ್+ತ್ವ). ನಮ್ಮ ದೃಷ್ಟಿಯಲ್ಲಿರುವ ಪದಾರ್ಥದಿಂದ ಅದರ ವೇಷ-ಬಣ್ಣಗಳನ್ನು ಕಳೆದು, ಗುಣ-ಚೇಷ್ಟೆಗಳನ್ನು ಮರೆತು, ಅದು ತಾನೇ ತಾನಾಗಿ—ತಾನು ತಾನೇ ಆಗಿ—ತನ್ನಿಂದ ಬೇರೆ ಯಾವುದರ ಸಂಬಂಧವೂ ಇಲ್ಲದೆ—ಹೇಗಿದೆಯೋ ಹಾಗೆ—ನಿರುಪಾಧಿಕವಾಗಿ ಸ್ವಸ್ವಭಾವದಲ್ಲಿರುವ ಸ್ಥಿತಿಯೇ ತತ್+ತ್ವ (ತನ್ನತನ).

(ಜೀವನಧರ್ಮಯೋಗ)

“ಒಳ್ಳೆಯದು” ಎಂಬುದು ಕನ್ನಡಮಾತು. ಅದರ ಬೇರು “ಒಳ್”. ಒಳ್ ಎಂದರೆ ಇರುವುದು. ಈ ಮಾತಿಗೆ ಒಡಹುಟ್ಟಿನಂತೆ ಇರುವ ಕನ್ನಡಮಾತು “ಉಳ್” ಎಂಬುದು. ಉಳ್ ಎಂದರೂ ಇರುವುದು ಎಂದರ್ಥ. ಉಳ್ಳ, ಉಂಟು—ಈ ಮಾತುಗಳಲ್ಲಿ ಉಳ್ ಎಂಬುದು ಕಾಣಬರುತ್ತದೆ. ಹೀಗೆ ಒಳ್ಳೆಯದು ಎಂದರೆ ಬಹುಕಾಲ ಇರುವುದು, ಕುಂದದೆ ಇರುವುದು ಎಂದರ್ಥ. ಯಾವುದು ಅಳಿಯದೆ ಉಳಿದುಕೊಂಡಿರುತ್ತದೆಯೋ ಅದೇ ಉಳ್; ಅದೇ ಒಳ್ಳೆಯದು.

(ಬಾಳಿಗೊಂದು ನಂಬಿಕೆ)

ಅಮೂರ್ತ-ಸಂಕೀರ್ಣವಿಚಾರಗಳನ್ನು ಸ್ಪಷ್ಟವಾಗಿ ನಿರೂಪಿಸುವ ಪರಿ; ಶಾಸ್ತ್ರಗದ್ಯಕ್ಕೆ ಮಾದರಿ:

ಕಾಲವೆಂದರೆ ನಾವು ಗುರುತಿಸಲಾಗದ ಯಾವುದೋ ಒಂದು ವಿಷಯವಲ್ಲ; ಕಾಲವೆಂದರೆ ವಸ್ತುವಿನ ನೈಜದ್ರವ್ಯದ ಸ್ವತಃಪರಿಣಾಮ—ವಸ್ತುವಿನ ಅಂತರ್ಧಾತುಗಳ ರಚನೆಯ ಸ್ವಯಂಭೂತವ್ಯತ್ಯಾಸ ... ಗುಣಾವಗುಣಪರಿಪಾಕದ ಕ್ಷಣಾನುಕ್ಷಣಪರಂಪರೆಯೇ ಕಾಲ.

(ಕಾವ್ಯಸ್ವಾರಸ್ಯ, ಮಹಾಭಾರತದ ಪಾತ್ರಗಳು)

ದೇಶ-ಕಾಲಗಳು ಜಗತ್ತಿನ ವಸ್ತು-ಕ್ರಿಯಾಭೇದಗಳ ಅನುಭವದಿಂದ ನಮ್ಮ ಮನಸ್ಸಿನಲ್ಲುತ್ಪನ್ನವಾಗುವ ಗಾತ್ರ-ಪರಿಮಾಣಕಲ್ಪನೆಗಳು. ದೇಶ, ಕಾಲ—ಇವೆರಡೂ ಜಗದಸ್ತಿತ್ವಾನುಭವವಾಚಕಗಳು. ಜಗತ್ತು ವಸ್ತುಗಳ ಮತ್ತು ಕ್ರಿಯೆಗಳ ಸಮುದಾಯ. ಜಗದ್ವಸ್ತುಗಳ ಗಾತ್ರವಿಸ್ತರಗಳನ್ನೂ ಅನ್ಯೋನ್ಯವ್ಯವಧಾನಗಳನ್ನೂ ದೇಶ (ಅಥವಾ ದಿಕ್ಕು) ಎಂಬ ಪದವು ಸೂಚಿಸುತ್ತದೆ. ಜಗತ್ಕ್ರಿಯೆಗಳ ವ್ಯಾಪ್ತಿವಿಸ್ತರಗಳನ್ನೂ ಅನ್ಯೋನ್ಯವ್ಯವಧಾನಗಳನ್ನೂ ಕಾಲಶಬ್ದವು ಸೂಚಿಸುತ್ತದೆ. ಎಲ್ಲಿ ಜಗತ್ತುಂಟೋ ಅಲ್ಲಿ ದೇಶ-ಕಾಲಗಳ ಭಾವನೆಯುಂಟು. ಎಲ್ಲಿ ಜಗತ್ತಿಲ್ಲವೋ ಅಲ್ಲಿ ದೇಶ-ಕಾಲಗಳ ಭಾವನೆ ಇಲ್ಲ: ಅದೇ ವಿಶ್ವಾತೀತ; ಅದೇ ಅನಂತಸತ್ತಾ; ಅದೆ ಕೇವಲಸತ್ತಾ. ದೇಶ-ಕಾಲಗಳು ಜಗತ್ತಿನೊಳಗಿನ ತದನುಭವಪ್ರಕಾರಗಳ ಸಂಜ್ಞೆಗಳು.

(ಜೀವನಧರ್ಮಯೋಗ, ಎರಡನೆಯ ಅಧ್ಯಾಯ)

ಉಜ್ಜ್ವಲವೂ ಪ್ರಚೋದಕವೂ ಆದ ಶೈಲಿಗೆ ಉದಾಹರಣೆ:

ಪ್ರಕೃತ, ಆರುನೂರು ವರ್ಷಗಳ ಹಿಂದೆ ಯಾವ ಮಹಾನುಭಾವರ ಬ್ರಾಹ್ಮಣ್ಯವು ದೀನವೃತ್ತಿಯಾಗಿರದೆ ಧೀರವೃತ್ತಿಯಾಗಿ ವೇದಶಾಸ್ತ್ರಾಭ್ಯುದಯಹೇತುವಾಯಿತೋ, ಯಾರ ವೈರಾಗ್ಯವು ತಾಟಸ್ಥ್ಯದಲ್ಲಿ ಪರ್ಯವಸಾನವಾಗದೆ ಪೌರುಷಪ್ರಕಾಶದಲ್ಲಿ ಪ್ರತಿಫಲಿಸಿತೋ, ಯಾರ ವೇದಾಂತವು ಶುಷ್ಕಾಲಾಪವೆನಿಸದೆ ದೇಶೋನ್ನತಿಕಾರಕವಾಯಿತೋ ಆ ವಿದ್ಯಾರಣ್ಯರ ಚರಿತ್ರೆಯು ಈ ವಿಷಮಕಾಲದಲ್ಲಿ ನಮಗೆ ಕಗ್ಗತ್ತಲೆಯಲ್ಲಿ ಕಾಣಬಂದ ಪಂಜಿನಂತೆಯೂ ಮರುಭೂಮಿಯಲ್ಲಿ ಸಿಕ್ಕಿದ ಸರೋವರದಂತೆಯೂ ಇದೆ. ಆ ಸರಸ್ಸಿನಲ್ಲಿ ನಮ್ಮ ಅಂತಃಕರಣವನ್ನು ತೊಳೆಯೋಣ. ಆ ದೀವಿಗೆಯ ಬೆಳಕಿನಲ್ಲಿ ನಮ್ಮ ಜೀವನಯಾತ್ರೆಯನ್ನು ನಡಸೋಣ.

(ಶ್ರೀವಿದ್ಯಾರಣ್ಯರು ಮತ್ತು ಅವರ ಕಾಲ)

ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತಪ್ರತಿಭಾಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು. ಅದು ಒಮ್ಮೆ ಲೀಲೆಯಿಂದ ಸಮುದ್ರತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ—ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ-ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸಮಾಡಿದ್ದರು. ಹಾಗೆಯೇ ಇಂಗ್ಲಿಷ್ ನಲ್ಲಿ ಕಾವ್ಯ-ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ-ತತ್ತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲಜನಮನೋಗ್ರಾಹಿಯಾದ ಹಾಸ್ಯವಿನೋದರಸಿಕತೆ, ಹೃದಯವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಳಿತವಾಗದ್ದುವು.

(ಕುವೆಂಪು ಅವರ “ಸ್ವಾಮಿ ವಿವೇಕಾನಂದ” ಗ್ರಂಥಕ್ಕೆ ಬರೆದ ಮುನ್ನುಡಿ)

ಉದಾಹರಣೆಗಳ ಮೂಲಕ ವಿಷಯವನ್ನು ಸುಲಭಗ್ರಾಹ್ಯವಾಗಿ ಮಾಡುವ ವಿಧಾನ:

ಕಾಲ ಎಂದರೆ ಸಮಯಸಂದರ್ಭ—ನಮ್ಮ ಸುತ್ತಮುತ್ತಲಿನ ವಸ್ತುಸ್ಥಿತಿಸನ್ನಿವೇಶ. ಪ್ರತಿಯೊಂದು ಮನುಷ್ಯಸಂದರ್ಭದ ಗರ್ಭದಲ್ಲಿಯೂ ಅದರ ಭವಿಷ್ಯತ್ತಿನ ಬೀಜಗಳು ಅಡಗಿಕೊಂಡಿರುತ್ತವೆ. ಹಸಿದ ಮನುಷ್ಯನಿರುವ ಕಡೆ ಯಾರೋ ಒಂದು ಘಮಘಮಿಸುವ ಭಕ್ಷ್ಯದ ತಟ್ಟೆಯನ್ನು ಇರಿಸಿ ಹೋಗುತ್ತಾರೆಂದು ಭಾವಿಸೋಣ. ಆ ತಟ್ಟೆಯನ್ನು ಕರಗಿಸುವ ಆತುರದ ಬೀಜ ಅವನ ಹೊಟ್ಟೆಯಲ್ಲಿಯೂ ತಟ್ಟೆಯ ಘಮಲಿನಲ್ಲಿಯೂ ಅಡಗಿಕೊಂಡಿರುತ್ತದೆ. ತಟ್ಟೆಯನ್ನಿಟ್ಟವನು ಮತ್ತೆ ಅಲ್ಲಿಗೆ ಬಂದು ನೋಡುವಾಗ ಅದು ಅರ್ಧ ಬರಿದಾಗಿರುತ್ತದೆ. ಇದು ಕಾಲದಿಂದ ಆದ ವ್ಯತ್ಯಾಸ: ಎಂದರೆ ಆ ಹಸಿವೂ ಈ ಘಮಲೂ ಕೆರಳಿ ಕೆಲಸಮಾಡಲು ಎಷ್ಟು ಹೊತ್ತು ಬೇಕಾಗಿತ್ತೋ ಆ ಹೊತ್ತಿನ ಕೆಲಸ ಅದು. ಬೇರೆ ಯಾವ ಒಂದು ಪ್ರೇರಣೆ, ಅಪ್ಪಣೆಗಳಿಗಾಗಿಯೂ ಆ ಹಸಿವೂ ಆ ಘಮಲೂ ಕಾಯದೆ ತಾವಾಗಿ ಕೆಲಸ ನಡಸಿದವು: ಎಂದರೆ, ನಿದ್ರಿಸಿದಂತಿದ್ದ ಆ ಹಸಿವನ್ನೂ ಘಮಲನ್ನೂ ಎಚ್ಚರಿಸಿದ್ದು ಕಾಲ. ಹಸಿವು ಸ್ವತಃ ಜಡವಸ್ತು; ವಾಸನೆಯೂ ಜಡವಸ್ತು. ಅವೆರಡಕ್ಕೂ ಸಂಯೋಗವಾದಾಗ ಎರಡೂ ಜಡತೆಯನ್ನು ಬಿಟ್ಟು ಚೇತನವಂತಗಳಾದವು. ಆ ಸಂಯೋಗದ ಕ್ಷಣವೇ ಈ ಸಂದರ್ಭದಲ್ಲಿ ಕಾಲ. ಹೀಗೆ ಕಾಲಕರ್ಮಸಂಯೋಗ. ಗಿಡದಲ್ಲಿ ಮೊಗ್ಗು ಹೂವಾಗುವುದೂ ಕಾಯಿ ಹಣ್ಣಾಗುವುದೂ ಋತುವಶದಿಂದ. ಹಾಗೆಯೇ ಮನುಷ್ಯರ ಮನೋಬುದ್ಧಿಗಳೂ ಪಕ್ವವಾಗುತ್ತವೆ—ಕೇವಲ ಲೋಕಾನುಭವಾತ್ಮಕವಾದ ಕಾಲಗತಿಯ ಕಾರಣದಿಂದ. ನೆಲದಲ್ಲಿ ನೆಟ್ಟ ಬೀಜ ಆ ಕ್ಷಣ ಮೊಳಕೆಯಾಗುವುದಿಲ್ಲ. ಬೀಜದ ಅಂತರ್ದ್ರವ್ಯವು ಪಕ್ವವಾಗಿ ಮೊಳಕೆತೋರಲು ಕೆಲವು ಘಂಟೆಗಳಷ್ಟಾದರೂ ಕಾಲ ಬೇಕು. ಹೀಗೆ ಅಂತಶ್ಶಕ್ತಿವಿಕಸನಕ್ಕೆ ಬೇಕಾದ ಕಾಲವೇ ನಾವು ಕಾಲವ್ಯತ್ಯಾಸವೆಂಬ ಪದವನ್ನುಪಯೋಗಿಸುವಾಗ ಉದ್ದೇಶದಲ್ಲಿರುವ ಸಂಗತಿ. ಕಾಲವು ವಸ್ತುಗಳನ್ನು ಹದಪಡಿಸುವ, ಅಥವಾ ಹದಗೆಡಿಸುವ, ಅಧಿಕಾರವುಳ್ಳ ಕ್ಷಣಾನುಕ್ರಮ.

(ಕಾವ್ಯಸ್ವಾರಸ್ಯ, ಮಹಾಭಾರತದ ಪಾತ್ರಗಳು)

ಇಂಗ್ಲಿಷ್ ಪದಗಳಿಗೆ ಕನ್ನಡದ ರೂಪಾಂತರಗಳು:

ರೇಜಿಗೆ (Drudgery), ವ್ಯಕ್ತಿವೈಶಿಷ್ಟ್ಯ (Idiosyncrasy), ಹೇತುವಿಚಾರಪ್ರವೃತ್ತಿ (Rationality), ಅಂತರ್ಬೋಧೆ (Intuition), ಸ್ವತಶ್ಚಲಿಯಾನ (Automobile), ಶೀಘ್ರಲಿಪಿ (Shorthand), ಸಂಪದ್ವಿಷಯಕಸಂಸತ್ (Economic Conference), ಜಲಬಲಶಾಸ್ತ್ರ (Hydraulics), ಮುಂಚಾಚು (Projection), ಹಿಡಿನುಡಿ (Catch word), ಲಂಘಕ (Spring), ಬದಲಾಬದಲಿ (Exchange), ಪಕ್ಷೈಕವಾದ (Dogmatism), ಅಸ್ತ್ಯರ್ಥಕ / ನಾಸ್ತ್ಯರ್ಥಕ (Positive / Negative), ಆಧಾರಪ್ರತಿಜ್ಞೆ / ಅರ್ಥಾಪತ್ತಿ (Hypothesis), ಪೂರ್ವಸೌಕರ್ಯ (Prerequisite), ಜಗಲಿಯ ಜಿಜ್ಞಾಸೆ (Armchair Philosophy), ನಯವರ್ತನೆ (Manners), ಕ್ಷಿಪ್ರವೇದನಶಕ್ತಿ / ತೀವ್ರವೇದಿತೆ (Sensitiveness), ಆಪಾತಜ್ಞಾನ (Superficial Knowledge), ರಾಷ್ಟ್ರಕ (Citizen), ವರಣ (Vote), ಸ್ಥಾನಾರ್ಥಿ (Candidate), ಸ್ನೇಹಸಮ್ಮತಿ (Consensus), ಬುದ್ಧಿಭೀರುತನ (Intellectual Cowardice), ರಾಜ್ಯವಿಚಕ್ಷಣ / ರಾಜ್ಯತಂತ್ರಧುರಂಧರ (Statesman).

ಡಿ.ವಿ.ಜಿ.ಯವರು ಬಳಸಿರುವ ಪರ್ಷಿಯನ್ / ಉರ್ದು / ಮರಾಠಿ / ಹಿಂದಿ ಶಬ್ದಗಳು:

ತರದೂದು (ಏರ್ಪಾಡು), ಮೊಬಲಗು (ಒಟ್ಟು ಹಣ), ತಸ್ತೀಕು (ಛತ್ರ ಮುಂತಾದವುಗಳನ್ನು ಸರಕಾರ ವಶಪಡಿಸಿಕೊಂಡರೆ ಅದಕ್ಕೆ ಪ್ರತಿಯಾಗಿ ಕೊಡುವ ಹಣ), ಮೆಹನತ್ತು (ಪರಿಶ್ರಮ; ಓಲೈಸುವುದು), ಮಸಲಾ (ಅಕಸ್ಮಾತ್), ಇಸಮು (ವಿಷಯ, ಅಂಶ), ಫೈಸಲ್ (ತೀರ್ಮಾನ), ಹುಕುಂ (ಆಜ್ಞೆ), ಮಾಫ್ (ಕ್ಷಮೆ), ವಾಯಿದೆ (ಒಡಂಬಡಿಕೆ; ಗಡುವು), ತಲಬು (ಸಂಬಳ; ಅವಧಿ), ಮಾಮೂಲಾತಿ (ದಿನನಿತ್ಯದ್ದು), ಬಿಲ್ಕುಲ್ (ಖಡಾಖಂಡಿತವಾಗಿ), ಉಡಾಫೆ (ಉದಾಸೀನತೆ), ಅಜಮಾಯಿಷಿ (ತನಿಖೆ), ಬಾಬತ್ತು (ವಾಡಿಕೆ, ತೆರಿಗೆ), ಆಖೈರು (ಕೊನೆ), ಖಾನೇಷುಮಾರಿ (ವಸ್ತುಗಳ, ಜನರ ಗಣನೆ; ಸೆನ್ಸಸ್), ಪರಿಠವಣೆ / ಪರುಠವಣೆ (ಏರ್ಪಾಟು; ಸಡಗರ; ಅಚ್ಚುಕಟ್ಟು), ರಕಮು (ಹಣ; ಬಗೆ).

To be continued.

Author(s)

About:

Shashi Kiran B N holds a bachelor’s degree in Mechanical Engineering and a master's degree in Sanskrit. His interests include Indian aesthetics, Hindu scriptures, Sanskrit and Kannada literature, and philosophy. A literary aficionado, Shashi enjoys composing poetry set to classical meters in Sanskrit. He co-wrote a translation of Śatāvadhāni Dr. R Ganesh’s Kannada work Kavitegondu Kathe.