ಡಿ.ವಿ.ಜಿ. ಅವರ ಭಾಷಾಶಿಲ್ಪ

This article is part 1 of 5 in the series DVG avara Bhasha-shilpa

ಪ್ರವೇಶಿಕೆ

ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ. ವಿ. ಗುಂಡಪ್ಪನವರು ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್ವ-ವಿದ್ವತ್ತೆಗಳ ಬಗೆಗೆ, ಪ್ರತಿಭೆ-ಪ್ರಾಜ್ಞತೆಗಳ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿದೆ; ಇದು ಕನ್ನಡಿಗರ ಭಾಗ್ಯ. ಆದರೆ ಡಿ.ವಿ.ಜಿ.ಯವರದು ಮಹಾಕಾವ್ಯೋಪಮವಾದ ಜೀವನ. ಧ್ವನನಶೀಲತೆಯೇ ಶ್ರೇಷ್ಠಸಾಹಿತ್ಯದ ಹೆಗ್ಗುರುತಲ್ಲವೇ? ಪ್ರತಿಕ್ಷಣವೂ ಬಗೆಬಗೆಯ ಹೂವು-ಹಣ್ಣುಗಳಿಂದ ನವೋನವವಾಗಿ ಕಂಗೊಳಿಸುವ ವಸಂತದ ವನರಾಜಿಯಂತೆ, ಮಹಾಕಾವ್ಯವು ಸವಿದಷ್ಟೂ ಸೊಗಯಿಸುತ್ತದೆ. ಹೀಗೆ ಬುದ್ಧಿಗೆ ಆಕರ್ಷಕವೂ ಭಾವಕ್ಕೆ ಆರೋಗ್ಯಕರವೂ ಆದ ಡಿ.ವಿ.ಜಿ.ಯವರ ಬದುಕು-ಬರೆಹಗಳನ್ನು ಇನ್ನಷ್ಟು ವಿಶದವಾಗಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವುದು ಪ್ರಕೃತಪ್ರಬಂಧ.

ಭಾಷೆಯೆಂಬುದು ನಮ್ಮ ಜಗತ್ತಿನ ಚಿರವಿಸ್ಮಯಗಳಲ್ಲೊಂದು. ಅಂತರಂಗದ ಅಭಿವ್ಯಕ್ತಿಗೆ ಇದಕ್ಕಿಂತ ಮಿಗಿಲಾದ ಮಾಧ್ಯಮವು ಮತ್ತೊಂದಿಲ್ಲ. ಆಲೋಚನೆಯ ನೆಲೆಯಾಗಿ, ಸಂವಹನದ ಹಿನ್ನೆಲೆಯಾಗಿ ನಿಲ್ಲುವ ಭಾಷೆ ಅದೆಷ್ಟು ಪೂರ್ಣವಾದರೂ “ಒರಟು ಯಾನ”ವೇ ಸರಿ! ಆದರೆ ನಮ್ಮೆಲ್ಲರ ಒಳ-ಹೊರಗಿನ ಪ್ರಪಂಚಗಳನ್ನು ಬೆಸೆಯುವಲ್ಲಿ ಸೇತುವೆಯಾಗಿ ಭಾಷೆಯು ನೀಡಿರುವ ಕೊಡುಗೆ ಅಪಾರ. ಹೀಗೆ ಒಬ್ಬ ವ್ಯಕ್ತಿಯ ಗುಣ-ದೋಷಗಳನ್ನೂ ಇಷ್ಟ-ಅನಿಷ್ಟಗಳನ್ನೂ ಅರಿಯಲು ಭಾಷೆಯು ಚೆನ್ನಾಗಿ ಒದಗಿಬರುತ್ತದೆ. ಸದ್ಯದಲ್ಲಿ ಗುಂಡಪ್ಪನವರು ಭಾಷೆಯನ್ನು ಬಳಸಿದ ಬಗೆಗಳನ್ನು ವಿಶ್ಲೇಷಿಸುತ್ತ ಅವರ ಮನೋಧರ್ಮವನ್ನು ತಿಳಿಯಲು ಪ್ರಯತ್ನಿಸೋಣ.

“ಡಿ.ವಿ.ಜಿ. ಅವರ ಭಾಷಾಶಿಲ್ಪ” ಎಂಬುದು ಪ್ರಬಂಧದ ಶೀರ್ಷಿಕೆ. ಭಾಷೆಯೆಂಬ ಸುಂದರಶಿಲ್ಪವನ್ನು ಗುಂಡಪ್ಪನವರು ಕಟ್ಟಿಕೊಟ್ಟ ವಿಧಾನವನ್ನು ವಿವೇಚಿಸುವುದು ಈ ಲೇಖನದ ಉದ್ದೇಶ; ಇದನ್ನೇ ಶೀರ್ಷಿಕೆಯು ಸೂಚಿಸುತ್ತದೆ. ಇದಕ್ಕೆ ಮತ್ತೂ ಒಂದು ಆಯಾಮವಿದೆ—“ಶಿಲ್ಪ”ಶಬ್ದವು “ಶೀಲ್-ಸಮಾಧೌ” ಎಂಬ ಧಾತುವಿನಿಂದ ನಿಷ್ಪನ್ನವಾಗಿದ್ದು ಸಮತ್ವ ಮತ್ತು ಸಮಾಧಾನಗಳನ್ನು ಬೋಧಿಸುತ್ತದೆ. ಹೀಗೆ ಆಕೃತಿಯ ದೃಷ್ಟಿಯಿಂದ ಸೌಷ್ಠವವನ್ನೂ ಆಶಯದ ದೃಷ್ಟಿಯಿಂದ ಸಂಸ್ಕಾರವನ್ನೂ ಈ ಶಬ್ದವು ತಿಳಿಸುತ್ತದೆ. ಈ ಎಲ್ಲ ನೆಲೆಗಳಲ್ಲಿ ಡಿ.ವಿ.ಜಿ.ಯವರ ವಾಗ್ವಿಲಾಸವನ್ನು ಗಮನಿಸಬಹುದು.

ಕನ್ನಡಸಾಹಿತ್ಯದ ನವೋದಯಕಾಲದಲ್ಲಿ ಎಲ್ಲ ಬಗೆಯ ಆಲೋಚನೆಗಳಿಗೂ ಹೊಂದುವಂತೆ ಭಾಷೆಯನ್ನು ರೂಪಿಸಲು ಯತ್ನಗಳಾದವು. ಆ ಸಮಯಕ್ಕೆ ಮುಂಚೆ ಬಳಕೆಯಿದ್ದ ಕನ್ನಡವನ್ನು ಡಿ.ವಿ.ಜಿ.ಯವರೇ ಉದಾಹರಿಸಿದ್ದಾರೆ: “ಈ ಹುಕ್ಕೂಮಿಗೆ ಲಗತ್ತಿರುವ ತಃಖ್ತೆಯ ಕಲಂಗಳಲ್ಲಿ ಸವಾಲಿಗೆ ಜವಾಬನ್ನು ಹುಷ್ಯಾರಿಯಿಂದ ನಮೂದಿಸತಕ್ಕದ್ದಿದೆ”. ಹೀಗೆ ಎರವಲುಪಡೆದ ವಿಚಾರಗಳನ್ನು ಹಳಸಿದ ಶೈಲಿಯಲ್ಲಿ ನಿರೂಪಿಸುವುದನ್ನು ನಿಲ್ಲಿಸಿ, ಸ್ವತಂತ್ರವಿಚಾರಗಳಿಗೆ ಒತ್ತುಕೊಟ್ಟು ರಮಣೀಯರೀತಿಯನ್ನು ಬರೆವಣಿಗೆಯಲ್ಲಿ ಕಾಣಿಸಲು ಹಲವರು ಶ್ರಮಿಸಿದರು. ಒಂದು ಕಡೆ ಪ್ರಾಚೀನಪರಂಪರೆಯ ಪಂಡಿತರಾದ ಬಸವಪ್ಪಶಾಸ್ತ್ರಿಗಳು, ಗರಲಪುರಿಶಾಸ್ತ್ರಿಗಳು, ಸೋಸಲೆ ಅಯ್ಯಾಶಾಸ್ತ್ರಿಗಳು, ಕಡಬದ ನಂಜುಂಡಶಾಸ್ತ್ರಿಗಳು, ಕರಿಬಸವಶಾಸ್ತ್ರಿಗಳು ಮುಂತಾದವರಿದ್ದರೆ, ಮತ್ತೊಂದೆಡೆ ಆಲೂರು ವೆಂಕಟರಾಯರು, ಚ. ವಾಸುದೇವಯ್ಯನವರು, ಎಂ. ಎಸ್. ಪುಟ್ಟಣ್ಣನವರು, ಬಿ. ಎಂ. ಶ್ರೀಕಂಠಯ್ಯನವರು, ಮುಳಿಯ ತಿಮ್ಮಪ್ಪಯ್ಯನವರು, ಪಂಜೆ ಮಂಗೇಶರಾಯರು, ಮ. ಪ್ರ. ಪೂಜಾರರು, ಬಸವನಾಳರು, ಡಿ. ವಿ. ಗುಂಡಪ್ಪನವರು, ಮಾಸ್ತಿ ವೆಂಕಟೇಶ ಅಯ್ಯಂಗಾರರು, ಎ. ಆರ್. ಕೃಷ್ಣಶಾಸ್ತ್ರಿಗಳು, ಟಿ. ಎಸ್. ವೆಂಕಣ್ಣಯ್ಯನವರು, ಎಂ. ಗೋವಿಂದ ಪೈಗಳೇ ಮೊದಲಾದವರಿದ್ದರು. ಆಗ ಕಥೆ, ಕವಿತೆ, ನಾಟಕ, ಕಾದಂಬರಿ, ಲಲಿತಪ್ರಬಂಧ, ಜೀವನಚರಿತ್ರೆ, ವಿಚಾರಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಸ್ವತಂತ್ರ ಮತ್ತು ಅನುವಾದಕೃತಿಗಳ ಮೂಲಕ ಹೊಸದೊಂದು ಸಂಚಲನವೇ ಪ್ರಾರಂಭವಾಯಿತು.

ಈ ಅಭಿಯಾನವನ್ನು ಮುಂದಿನ ಪೀಳಿಗೆಯು ಸಮರ್ಥವಾಗಿ ಮುನ್ನಡೆಸಿ ಕನ್ನಡವನ್ನು ಪರಿಪುಷ್ಟವಾಗಿಸಿತು. ಸರ್ವಶ್ರೀ ವಿ. ಸೀತಾರಾಮಯ್ಯ, ಸೇಡಿಯಾಪು ಕೃಷ್ಣಭಟ್ಟ, ಪು. ತಿ. ನರಸಿಂಹಾಚಾರ್, ಎಸ್. ವಿ. ರಂಗಣ್ಣ, ಸಿ. ಕೆ. ವೆಂಕಟರಾಮಯ್ಯ, ಕುವೆಂಪು, ತೀ. ನಂ. ಶ್ರೀಕಂಠಯ್ಯ, ಡಿ. ಎಲ್. ನರಸಿಂಹಾಚಾರ್, ಕೆ. ಕೃಷ್ಣಮೂರ್ತಿ, ಎ. ಎನ್. ಮೂರ್ತಿರಾವ್, ಶಿವರಾಮ ಕಾರಂತ, ಗೋರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದ ಅಸಂಖ್ಯಲೇಖಕರು ತಮ್ಮದೇ ಆದ ವಿಶಿಷ್ಟರೀತಿಯಲ್ಲಿ ಅಮೂಲ್ಯವಾದ ಶಾಸ್ತ್ರ-ಕಾವ್ಯಗಳನ್ನು ರಚಿಸಿದರು.

ಈ ಕಾರ್ಯದಲ್ಲಿ ಕನ್ನಡಧ್ವಜವನ್ನು ಹಿಡಿದು ವೀರಾಲಾಪಗಳನ್ನು ಮಾಡುತ್ತ ಯೋಧರಂತೆ ಮುನ್ನುಗ್ಗಿದವರು ಕೆಲವರಾದರೆ, ಧೀರವಾದರೂ ಶಾಂತವಾದ ಹೆಜ್ಜೆ ಹಾಕುತ್ತ ಸಾಗಿದವರು ಹಲವರು. ಲೇಖಕರು ಆರಂಭದ ದಶೆಯಲ್ಲಿಯೇ ಬರೆವಣಿಗೆಯಲ್ಲಿ ತಮ್ಮ ತಮ್ಮ ವ್ಯಕ್ತಿತ್ವದ ವಿಶಿಷ್ಟಮುದ್ರಿಕೆಗಳನ್ನು ಒತ್ತಿದುದು ಅಚ್ಚರಿಯ ಸಂಗತಿ. ಕೆಲವು ಪುಟಗಳನ್ನಿರಲಿ, ಒಂದೆರಡು ಪಂಕ್ತಿಗಳನ್ನು ಓದುವುದರಲ್ಲಿಯೇ ಈ ಲೇಖನ ಇಂಥವರದ್ದೆಂದು ತಿಳಿಯುವಷ್ಟರ ಮಟ್ಟಿಗೆ ಸ್ಫುಟವಾಗಿತ್ತು ಅಂದಿನ ಲೇಖಕರ ಶೈಲಿ. ಉದಾಹರಣೆಗೆ: ಬಿ. ಎಂ. ಶ್ರೀ. ಅವರಲ್ಲಿ ಕೆಚ್ಚು ಹೆಚ್ಚಾದರೆ ಮಾಸ್ತಿಯವರದು ನಿರಾಡಂಬರಶೈಲಿ; ಪು. ತಿ. ನ. ಅವರ ಜಾಡು ಕಲ್ಪನಾಶೀಲವಾದರೆ, ಪೈಗಳದು ಶಾಸ್ತ್ರಕರ್ಕಶ; ಕೃಷ್ಣಶಾಸ್ತ್ರಿ-ಕೃಷ್ಣಭಟ್ಟರಲ್ಲಿಯ ನಾಮಸಾಮ್ಯದಂತೆ ಅವರ ಶೈಲಿಯಲ್ಲಿ ನಿರ್ದಿಷ್ಟತೆ-ನಿರ್ದುಷ್ಟತೆಗಳು ಸಮಾನವಾಗಿವೆ, ಆದರೆ ಶಾಸ್ತ್ರಿಗಳ ಮೊನಚುತನ ಭಟ್ಟರಲ್ಲಿಲ್ಲ, ಸೇಡಿಯಾಪು ಅವರ ಸರ್ವಂಕಷತೆ ಕೃಷ್ಣಶಾಸ್ತ್ರಿಗಳಲ್ಲಿಲ್ಲ (ಇವು ಆಯಾ ಲೇಖಕರ ಶೈಲಿಗಳ ಬಗೆಗೆ ಕೊನೆಯ ಮಾತುಗಳಲ್ಲ. ಕೃತಿಕಾರರಲ್ಲಿ ನನಗೆ ತೋರಿದ ಗುಣವಿಶೇಷಗಳನ್ನು ಗುರುತುಮಾಡಿದ್ದೇನೆ, ಅಷ್ಟೇ).

ಇಂಥ ಹಿನ್ನೆಲೆಯಲ್ಲಿ ಗುಂಡಪ್ಪನವರ ಸಾಹಿತ್ಯಕೃಷಿಯನ್ನು ಗಮನಿಸಿದಾಗ ಅದೆಷ್ಟು ಸ್ವೋಪಜ್ಞವೂ ಮೌಲ್ಯನಿಷ್ಠವೂ ಎಂದು ತಿಳಿಯುತ್ತದೆ.

ಭಾಷೆ-ವ್ಯಕ್ತಿತ್ವಗಳ ಸಂಬಂಧ

ಭಾಷೆಯ ಬಗೆಗಳು ಮುಖ್ಯವಾಗಿ ಮೂರು: ಗದ್ಯ, ಪದ್ಯ ಮತ್ತು ಗೀತ. ಈ ಮೂರರಲ್ಲಿಯೂ ಗುಂಡಪ್ಪನವರು ಗಣನೀಯವಾದ ಪ್ರಮಾಣದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಹಿತ್ಯಸಿಂಧುವು ಪದ್ಯಕಾವ್ಯ, ಗೀತಕಾವ್ಯ, ಮನನಕಾವ್ಯ, ನಾಟಕ, ನೆನಪಿನ ಚಿತ್ರ, ಜೀವನಚರಿತ್ರೆ, ವೈಚಾರಿಕಪ್ರಬಂಧ, ಮಕ್ಕಳ ಸಾಹಿತ್ಯ ಮೊದಲಾದ ಪ್ರಣಾಲಿಗಳಲ್ಲಿ ಹರಿದಿದೆ. ಅದರ ಆಳ-ಅಗಲಗಳು ಸಾಧಾರಣವಲ್ಲ. ಆಳಿನಿಂದ ಅರಸನವರೆಗೆ ಎಲ್ಲರೂ ಇದರಲ್ಲಿ ಮಿಂದೇಳುವವರೇ. ಅಧ್ಯಾತ್ಮ, ರಾಜಕೀಯ, ಕಾವ್ಯಮೀಮಾಂಸೆ ಮೊದಲಾದ ಕ್ಷೇತ್ರಗಳಲ್ಲಿ ಈ ನದಿಯು ಹದವರಿತು ಹರಿದು ವಿಪುಲವಾದ ಕೃಷಿಯನ್ನು ಕರುಣಿಸಿದೆ. ಇಲ್ಲಿ ಸ್ವತಂತ್ರಗ್ರಂಥಗಳದ್ದೇ ಸಿಂಹಪಾಲಾದರೆ, ಅನುವಾದಕೃತಿಗಳೂ ಹಲವಿವೆ.

ಡಿ.ವಿ.ಜಿ.ಯವರ ಗದ್ಯ ವಿಶಿಷ್ಟವಾದೊಂದು ಪ್ರವಚನಶೈಲಿಯಲ್ಲಿ ಸಾಗುತ್ತದೆ. ಅವರೇ ನಮ್ಮೆದುರು ಹಾಯಾಗಿ ಕುಳಿತು ವಿಚಾರಗಳನ್ನು ನಯವಾಗಿ ವಿವಿರಿಸುತ್ತಿರುವರೋ ಎಂದು ಭಾಸವಾಗುವ ಮಟ್ಟಿಗೆ ಆಪ್ತವಾದ ಬರೆವಣಿಗೆಯದು. ಅದರಲ್ಲಿ ಸಮನ್ವಯದ ಹದವಿದೆ, ಆದರೆ ವಾಚಕರನ್ನು ಒಪ್ಪಿಸಲೇಬೇಕೆಂಬ ಹಠವಿಲ್ಲ; ಇನ್ನೆಲ್ಲಿಯೂ ಕಾಣಸಿಗದ ಕಾಂತಿಯಿದೆ, ಆದರೆ ಅದು ಕಣ್ಣುಕೋರೈಸುವಂಥದ್ದಲ್ಲ; ಅಧಿಕೃತತೆಗೆ ಕೊರತೆಯಿಲ್ಲ, ಆದರೆ ಅಧಿಕಾರದ ಧೋರಣೆಯಿಲ್ಲ; ಪಾಂಡಿತ್ಯದ ಪುಷ್ಟಿಯಿದೆ, ಆದರೆ ಅದನ್ನು ಮೆರೆಸಬೇಕೆಂಬ ಪೈತ್ಯವಿಲ್ಲ; ಭಾವತೀವ್ರತೆಯಿದೆ, ಆದರೆ ಅದೆಂದೂ ಭಾರವೆನಿಸುವುದಿಲ್ಲ. ಒಟ್ಟಿನಲ್ಲಿ ಅದೊಂದು “ಪಾಕ”; ಶುಚಿ-ರುಚಿಗಳ ರಸಪಾಕ. ಇದನ್ನು ಅ. ನ. ಕೃಷ್ಣರಾಯರು “Epic Prose” ಎಂದು ಬಣ್ಣಿಸಿದ್ದು ಅದೆಷ್ಟು ಉಚಿತ!

ಗುಂಡಪ್ಪನವರ ಶೈಲಿ ಹೀಗೆ ರೂಪುಗೊಳ್ಳಲು ಅವರ ಚಿಂತನವಿಧಾನವೇ ಮುಖ್ಯಕಾರಣ. ರಸಾಸ್ವಾದದಿಂದಲೂ ತತ್ತ್ವಚಿಂತನೆಯಿಂದಲೂ ಬದುಕಿನ ವಿಕಟಸುಂದರಸಂದರ್ಭಗಳ ಅನುಭವದಿಂದಲೂ ಸಂಸ್ಕಾರಗೊಂಡಿದ್ದ ಅವರ ಮನಸ್ಸು ಪ್ರಧಾನವಾಗಿ ಎರಡು ಗುಣಗಳನ್ನು ಹೊಂದಿತ್ತು: ಪ್ರಸನ್ನತೆ (ಅಥವಾ ವೈಶದ್ಯ) ಮತ್ತು ಸುವ್ಯವಸ್ಥಿತತೆ. ಈ ಗುಣಗಳೇ ಅವರ ವಚನ-ರಚನೆಗಳಲ್ಲಿಯೂ ಪ್ರತಿಫಲಿಸಿರುವುದನ್ನು ಎಲ್ಲರೂ ಗುರುತಿಸಬಹುದು. ಅವರ ಶೈಲಿಯ ಮತ್ತೊಂದು ಗುಣ ಧಾರಾಳತೆ. ಊಟದಲ್ಲಾಗಲಿ, ನೋಟದಲ್ಲಾಗಲಿ ಎಲ್ಲವೂ ಅವರಿಗೆ ಪೊಗದಸ್ತಾಗಿರಬೇಕು. ಹೀಗಾಗಿ ಯಾವುದೇ ಬಗೆಯ ಸಂಕುಚಿತತೆ ಅವರ ಬಳಿ ಸುಳಿಯಲು ಸಾಧ್ಯವಿಲ್ಲ. ಈ ಗುಣದಿಂದ ವಾಚಕರಿಗಾದ ಉಪಯೋಗ ಸ್ವಲ್ಪದ್ದಲ್ಲ. ಏಕೆಂದರೆ ಒಂದು ವಿಚಾರವನ್ನು—ಅದರ ಸಮಸ್ತವಿವರಗಳೊಡನೆ—ಒಮ್ಮೆಲೇ ಧಾರಾಕಾರವಾಗಿ ಕುಮ್ಮರಿಸಿದರೆ, ಎಂಥ ವ್ಯುತ್ಪನ್ನನಿಗಾದರೂ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಹಗ್ಗದ ಮೇಲಿನ ನಡಿಗೆಯಂತೆ ಹೆಚ್ಚಿನ ಅವಧಾರಣೆಯನ್ನು ಅಪೇಕ್ಷಿಸುತ್ತದೆ. ಡಿ.ವಿ.ಜಿ.ಯವರನ್ನು ಓದುವುದಾದರೋ ಪರ್ವತದಲ್ಲಿಯ ವಿಶಾಲಶಾದ್ವಲಗಳಲ್ಲಿ ಓಡಾಡುವಂತೆ ಸುಖಮಯವಾಗಿರುತ್ತದೆ. ಆ ಎತ್ತರದಿಂದ ನೋಡಿದರೆ ಗುಹೆ, ಗುಡಿ, ಕೆರೆ, ಕಂದರ ಮುಂತಾದವುಗಳೆಲ್ಲವೂ ತಮ್ಮ ತಮ್ಮ ಸ್ಥಾನಗಳಲ್ಲಿ ಸ್ಫುಟವಾಗಿ, ಸಹಜವಾಗಿ ಕಾಣುತ್ತವೆ. ಇದೇ ರೀತಿ ಗುಂಡಪ್ಪನವರ ಬರೆಹದ ಮೂಲಕ ಅವರು ಪ್ರತಿಪಾದಿಸುವ ವಿಷಯವನ್ನು ಗಮನಿಸಿದರೆ, ಅದರಲ್ಲಿಯ ಎಲ್ಲ ವಿವರಗಳೂ ಸ್ಪಷ್ಟವಾಗಿ ತಿಳಿಯುತ್ತವೆ.

ಗುಂಡಪ್ಪನವರ ವಿದ್ಯಾಭ್ಯಾಸ ಮುಳುಬಾಗಿಲಿನಲ್ಲಿ ಪ್ರಾರಂಭವಾದಾಗ ಅವರ ಚಿಕ್ಕತಾತಂದಿರೂ ಅಲ್ಲಿಯ ಸ್ಥಳೀಯರಾದ ರಾಮದಾಸಪ್ಪನವರೂ ಯಾವುದೇ ಗ್ರಂಥವನ್ನು ಓದುವಾಗ ಅದರ ತಿರುಳನ್ನು ಗ್ರಹಿಸುವ ವಿಧಾನವನ್ನು ಮನದಟ್ಟುಮಾಡಿಕೊಟ್ಟರು. ಮುಂದೆ ಬೆಂಗಳೂರಿನಲ್ಲಿ ಕೆ. ಎ. ಕೃಷ್ಣಸ್ವಾಮಿ ಅಯ್ಯರ್, ಎನ್. ನರಸಿಂಹಮೂರ್ತಿ ಮತ್ತಿತರರು ಭಾಷೆಯ ಸೌಂದರ್ಯದತ್ತಲೂ ವಿಚಾರದ ತರ್ಕಸಾಂಗತ್ಯದತ್ತಲೂ ಗಮನಹರಿಸುವಂತೆ ಮಾಡಿದರು. ಈ ಎಲ್ಲರ ನೆರವಿನಿಂದಲೂ ಸಂತತವಾದ ಸ್ವಪರಿಶ್ರಮದಿಂದಲೂ ಡಿ.ವಿ.ಜಿ. ಸಾರಾಸಾರವಿವೇಕವನ್ನು ಹೃದ್ಗತಮಾಡಿಕೊಂಡರು. ಮುಂದೆ ಅವರು ಆಯ್ದುಕೊಂಡ ಪತ್ರಿಕಾವೃತ್ತಿಯಲ್ಲಿ ಯಶಸ್ಸು ಕಾಣಲು ಈ ಗುಣವು ನೆರವಾಯಿತು. ಪತ್ರಿಕೆಯಲ್ಲಿಯ ವರದಿಗಳು ಗೊಂದಲಕ್ಕೆ ಅವಕಾಶವಿಲ್ಲದಂತೆ ಕೆಲವೇ ಸಾರೋಕ್ತಿಗಳಲ್ಲಿ ವಿಷಯವನ್ನು ಓದುಗರ ಮುಂದಿಡಬೇಕೆಂಬುದು ಡಿ.ವಿ.ಜಿ.ಯವರ ಆದರ್ಶ. ಹೀಗಾಗಿ ಅಡಕವಾದರೂ ಅಳ್ಳಕವಾಗದಂತೆ ಬರೆಯುವುದನ್ನು ಅವರು ಅಭ್ಯಾಸಮಾಡಿಕೊಂಡರು. ಈ ಕಾರ್ಯದಲ್ಲಿ ಹೆಜ್ಜೆಹೆಜ್ಜೆಗೂ ಉಪಯೋಗವಾಗಿದ್ದು ಅವರ ಅಗಾಧವಾದ ಸ್ಮೃತಿಶಕ್ತಿ. ನಾಲ್ಕಾರು ದಶಕಗಳ ಹಿಂದೆ ನಡೆದುಹೋದ ಸಂಗತಿಗಳನ್ನವರು ವರ್ತಮಾನವೆಂಬಂತೆ ವಿವರಸಿಬಲ್ಲವರಾಗಿದ್ದರು!

ಹುಣಸೆಹಣ್ಣಿನಿಂದ ಹಿಮಾಲಯದವರೆಗೆ, ದಿವಾನರಿಂದ ಜವಾನನವರೆಗೆ ಡಿ.ವಿ.ಜಿ.ಯವರಿಗೆ ಎಲ್ಲವೂ ಬೇಕು, ಎಲ್ಲರೂ ಬೇಕು. ಅವರು ಲೋಕದ ಎಲ್ಲ ಹಂತಗಳ ಎಲ್ಲ ಆಯಾಮಗಳಲ್ಲಿಯೂ ತಾದಾತ್ಮ್ಯವನ್ನು ಹೊಂದಿದ್ದರು. ಜನಮನೋಭಾವವನ್ನು ಇಷ್ಟು ವಿಶಾಲವಾಗಿ ಗಮನಿಸಿ, ಗೌರವಿಸಿದುದರಿಂದ ತಮ್ಮ ಗ್ರಂಥಗಳಲ್ಲಿ ಎಲ್ಲರೂ ಅರ್ಥಮಾಡಿಕೊಂಡು ಆಸ್ವಾದಿಸಬಲ್ಲ ಉದಾಹರಣೆಗಳನ್ನು ಅವರು ನೀಡಲು ಸಾಧ್ಯವಾಯಿತು. ಸಮಾಜದ ಸಾಹಚರ್ಯವನ್ನು ಈ ಮಟ್ಟದಲ್ಲಿ ರೂಢಿಸಿಕೊಂಡವರಿಗೆ ತಮ್ಮ ಖಾಸಗಿ ಕೆಲಸಗಳಿಗೆ ಸಮಯ ಸಿಕ್ಕೀತೇ? ಹೀಗಾಗಿ ಲೋಕಾಂತದಲ್ಲಿಯೇ ಏಕಾಂತವನ್ನು ಜಾಗೃತಗೊಳಿಸುವ ಪರಿಸ್ಥಿತಿ ಅನಿವಾರ್ಯವಾಗಿ, ಅವರ ಬರೆಹ ವ್ಯಕ್ತಸ್ವಗತದ ರೀತಿಯಲ್ಲಿ ವ್ಯವಸ್ಥಿತವಾಯಿತು. ಜ್ಞಾಪಕಚಿತ್ರಶಾಲೆಯ ಸಂಪುಟಗಳನ್ನೂ ಹಲವಾರು ಲೇಖನಗಳನ್ನೂ ಡಿ.ವಿ.ಜಿ.ಯವರು ಉಕ್ತಲೇಖನದ ರೀತಿಯಲ್ಲಿ ಬರೆಯಿಸಿದರೆಂಬುದನ್ನು ಗಮನಿಸಿದರೆ ಈ ಅಂಶವು ಇನ್ನಷ್ಟು ಸ್ಫುಟವಾದೀತು.

ಕೆಲವು ವೈಶಿಷ್ಟ್ಯಗಳು

ಕಾದಂಬರಿ, ಪ್ರವಾಸಕಥನ, ಮಹಾಕಾವ್ಯ ಮುಂತಾದ ಪ್ರಕಾರಗಳನ್ನು ಹೊರತುಪಡಿಸಿದರೆ, ಪ್ರಾಯಶಃ ಬೇರೆಲ್ಲ ವಿಧಾನಗಳಲ್ಲಿಯೂ ಡಿ.ವಿ.ಜಿ.ಯವರ ಸರಸಾಗ್ರವಾದ ಲೇಖನಿ ದುಡಿದಿದೆ. ಇಲ್ಲಿ ಗಮನಾರ್ಹವಾದ ವಿಷಯವೊಂದಿದೆ: ಗುಂಡಪ್ಪನವರು ರಚಿಸಿದ “ಜ್ಞಾಪಕಚಿತ್ರಶಾಲೆ”ಯ ಸಂಪುಟಗಳನ್ನು ಒಂದೇ ಸಾಹಿತ್ಯಪ್ರಕಾರದ ಅಡಿಯಲ್ಲಿ ಗುರುತಿಸಲಾಗುವುದಿಲ್ಲ. ಅದು ಕಾವ್ಯವೂ ಹೌದು, ಇತಿಹಾಸವೂ ಹೌದು. ಅದರಲ್ಲಿ ಲಲಿತಪ್ರಬಂಧದ ಸೊಗಸಿದೆ, ಪ್ರವಾಸಕಥನದಂಥ ಸಂಗತಿಗಳಿವೆ, ಆತ್ಮಕಥೆಯ ವಿವರಗಳೂ ಸಾಕಷ್ಟಿವೆ. ಹೀಗಾಗಿ, ಅದು ಮಾತೆಂಬ ಮರದ ಹಲವು ರೀತಿಯ ಬಣ್ಣ-ಬೆಡಗುಗಳುಳ್ಳ ಸುಮಗಳನ್ನು ಸ್ಮೃತಿಯೆಂಬ ಏಕಸೂತ್ರದಲ್ಲಿ ಪೋಣಿಸಿರುವ ಸಂಕೀರ್ಣವಾದ ಸಾಹಿತ್ಯ.

ಅವರ ಅನುವಾದಕೃತಿಗಳು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಮೂಲದ ಕೃತಿಕಾರನ ಆಶಯಕ್ಕೆ ಧಕ್ಕೆಬಾರದಂತೆ, ಕನ್ನಡದ ಮರ್ಯಾದೆಯನ್ನು ಮೀರದೆ ಗುಂಡಪ್ಪನವರು ಅನುವಾದಗಳಲ್ಲಿ ಕಂಡುಕೊಂಡ, ಕಾಣಿಸಿದ ಹದ ಸಾಧಾರಣವಲ್ಲ. ಅವರು ಅನುವಾದ ಮಾಡಿದ ಕೃತಿಗಳಲ್ಲಿ ಮೂರು ಬಗೆಗಳನ್ನು ಗುರುತಿಸಬಹುದು: ಯಥಾವತ್ ಅನುವಾದ (“ಕನ್ನಡ ಮ್ಯಾಕ್ ಬೆತ್”, “ಉಮರನ ಒಸಗೆ”), ರೂಪಾಂತರ (“ಕನಕಾಲುಕಾ”), ಸಂಗ್ರಹಾನುವಾದ (“ರಾಜ್ಯಶಾಸ್ತ್ರ”, “ವಿದ್ಯಾರಣ್ಯರ ಸಮಕಾಲೀನರು” ಮುಂತಾದ ಗ್ರಂಥಗಳ ಹಲವು ಕಂಡಿಕೆಗಳು).

ಭಾಷೆಯ ಬಳಕೆಯಲ್ಲಿ ಅನವಶ್ಯವಾದ ಸೀಮಿತತೆಗೆ ಗುಂಡಪ್ಪನವರು ಎಂದೂ ಒಳಪಟ್ಟವರಲ್ಲ. ಅವರು ಸಂಪ್ರದಾಯದ ಪಕ್ಷಪಾತಿಗಳಾದರೂ ಆಧುನಿಕತೆಗೆ ವಿಮುಖರಲ್ಲ. ರಾಚನಿಕದೃಷ್ಟಿಯಿಂದ ಗಮನಿಸಿದರೆ, ಹಳಗನ್ನಡ-ನಡುಗನ್ನಡ-ಹೊಸಗನ್ನಡವೆಂಬ ಕನ್ನಡಭಾಷೆಯ ಮುಖ್ಯ ಮಜಲುಗಳಲ್ಲಿದ್ದ ಎಲ್ಲ ಗುಣಾಂಶಗಳನ್ನೂ ಅವರು ಸಮುಚಿತವಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ. ಇದನ್ನು ಅವರ ಛಂದೋವಿಚಿತಿಯಿಂದಲೇ ಅರಿಯಬಹುದು: ಹಳಗನ್ನಡದ ಪ್ರತಿನಿಧಿಗಳಾಗಿ ಕಂದ-ವೃತ್ತಗಳು, ನಡುಗನ್ನಡದ ಮಾದರಿಗಳಾಗಿ ದ್ವಿಪದಿ-ಚೌಪದಿ-ಷಟ್ಪದಿ-ರಗಳೆಗಳು, ಹೊಸಗನ್ನಡದ ಜಾಡಿನಲ್ಲಿ ನವೋದಯದ ಕಾಲದಲ್ಲಿ ಬಳಕೆಗೆ ಬಂದ ಬಗೆಬಗೆಯ ಬಂಧಗಳು (ಇದನ್ನು “ಕೇತಕೀವನ” ಕೃತಿಯಲ್ಲಿ ವಿಶೇಷವಾಗಿ ಗಮನಿಸಬಹುದು) ಅವರ ಬರೆಹಗಳಲ್ಲಿ ಕಾಣಸಿಗುತ್ತವೆ. ಇಷ್ಟೇ ಅಲ್ಲದೆ ಗುಂಡಪ್ಪನವರ ಕೃತಿಗಳಲ್ಲಿ ಆಡುಮಾತಿನ ಅಂದವನ್ನೂ ಕಾಣಬಹುದು (ಉದಾ: “ಪ್ರಹಸನತ್ರಯಿ” ಗ್ರಂಥದಲ್ಲಿ; ಅದರಲ್ಲಿಯೂ “ಗರ್ದಭವಿಜಯ”ದಲ್ಲಿ).

To be continued.

   Next>>

Author(s)

About:

Shashi Kiran B N holds a bachelor’s degree in Mechanical Engineering and a master's degree in Sanskrit. His interests include Indian aesthetics, Hindu scriptures, Sanskrit and Kannada literature, and philosophy. A literary aficionado, Shashi enjoys composing poetry set to classical meters in Sanskrit. He co-wrote a translation of Śatāvadhāni Dr. R Ganesh’s Kannada work Kavitegondu Kathe.