ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ—ದೃಷ್ಟಾಂತ, ನಿದರ್ಶನ, ವಿಷಮ, ವಿರೋಧ

ದೃಷ್ಟಾಂತವು ಔಪಮ್ಯಪ್ರಕಾರದ ಅಲಂಕಾರಗಳಲ್ಲೊಂದು. ಹೋಲಿಸುವ ಮತ್ತು ಹೋಲಿಸಲ್ಪಡುವ ವಸ್ತುಗಳ ನಡುವೆ ಬಿಂಬ-ಪ್ರತಿಬಿಂಬಭಾವವು ರೂಪುಗೊಂಡಲ್ಲಿ ಈ ಅಲಂಕಾರವು ಸಿದ್ಧ. ಇದು ಬಲುಮಟ್ಟಿಗೆ ಉಪಮೆಯಂತೆಯೇ ಹೌದು. ಆದರೆ ಪ್ರಸ್ಫುಟವಾದ ಎರಡು ಸದೃಶಚಿತ್ರಗಳನ್ನು ನಮ್ಮೆದುರು ನೀಡುವ ಕಾರಣ ಇದಕ್ಕೊಂದು ಬಗೆಯ ವ್ಯಕ್ತಿತ್ವವುಂಟು. ಆದರೆ ಇಂಥ ಪ್ರಸ್ಫುಟೀಕರಣಪ್ರಯತ್ನವು ಕೆಲಮಟ್ಟಿಗೆ ವಾಚ್ಯತೆಯನ್ನುಂಟುಮಾಡುವ ಕಾರಣ ಉಪಮೆಯಲ್ಲಿರುವ ಗಮ್ಯಾರ್ಥಗಳಿಗಿಲ್ಲಿ ಅವಕಾಶವಿಲ್ಲ. ಆದುದರಿಂದಲೇ ಈ ಅಲಂಕಾರವನ್ನು ನೀತಿ-ತತ್ತ್ವ-ಉಪದೇಶಾದಿಗಳಿಗೆ ಹೆಚ್ಚಾಗಿ ವಿನಿಯೋಗಿಸುವುದುಂಟು. ಅಪ್ಪಟ ಕಾವ್ಯವಾದ ರಾಮಾಯಣದಲ್ಲಿ ದೃಷ್ಟಾಂತಾಲಂಕಾರದ ಪ್ರಾಚುರ್ಯ ನಿರೀಕ್ಷಿತರೀತಿಯಲ್ಲಿಯೇ ಅತ್ಯಲ್ಪ. ಇಂಥ ಕೆಲವೊಂದು ಸುಂದರಸೂಕ್ತಿಗಳನ್ನು ಪರಾಂಬರಿಸೋಣ:

ತ್ಯಕ್ತಭೋಗಸ್ಯ ಮೇ ರಾಜನ್ ವನೇ ವನ್ಯೇನ ಜೀವತಃ |

ಕಿಂ ಕಾರ್ಯಮನುಯಾತ್ರೇಣ ತ್ಯಕ್ತಸಂಗಸ್ಯ ಸರ್ವತಃ ||

ಯೋ ಹಿ ದತ್ವಾ ಗಜಶ್ರೇಷ್ಠಂ ಕಕ್ಷ್ಯಾಯಾಂ ಕುರುತೇ ಮನಃ |

ರಜ್ಜುಸ್ನೇಹೇನ ಕಿಂ ತಸ್ಯ ತ್ಯಜತಃ ಕುಂಜರೋತ್ತಮಮ್ || (೨.೩೭.೨-೩)

ಕಾಡಿಗೆ ಹೊರಟ ರಾಮನ್ ಹಿಂದೆ ಸೈನ್ಯವೂ ಸೇವಕವರ್ಗವೂ ಸಾಗಲೆಂಬ ದಶರಥನ ಮಾತಿಗೆ ರಾಮನು ಒಪ್ಪದೆ ಹೀಗೆನ್ನುತ್ತಾನೆ: ರಾಜ್ಯಭೋಗವನ್ನೇ ವರ್ಜಿಸಿ ವಾನಪ್ರಸ್ಥವ್ರತವನ್ನು ಕೈಗೊಂಡು ಕಾಡಿಗೆ ಸಾಗಲಿರುವ ನನಗೆ ಈ ಹಿಂಬಾಲಕರ ಕೋಲಾಹಲವೇಕೆ? ಆನೆಯನ್ನೇ ಬಿಟ್ಟುಕೊಟ್ಟಮೇಲೆ ಅದನ್ನು ಕಟ್ಟುವ ಹಗ್ಗವನ್ನು ಹಿಡಿತಿಟ್ಟುಕೊಳ್ಳುವ ಹೊಲಬೇ?

ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ |

ಸಮೇತ್ಯ ಚ ವ್ಯಪೇಯಾತಾಂ ತದ್ವದ್ಭೂತಸಮಾಗಮಃ || (೨.೧೦೫.೨೬)

ಹೇಗೆ ಮಹಾಸಾಗರದಲ್ಲಿ ಬಿದ್ದ ಮರದ ತುಂಡುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಆಕಸ್ಮಿಕವಾಗಿ ಹತ್ತಿರ ಬಂದು ಅಷ್ಟೇ ಆಕಸ್ಮಿಕವಾಗಿ ದೂರವೂ ಸಾಗುತ್ತವೆಯೋ ಹಾಗೆಯೇ ಜೀವ-ಜೀವಗಳ ಸಂಗಮ-ವಿಗಮಗಳೂ ಜಗತ್ತಿನಲ್ಲಿ ಯಾದೃಚ್ಛಿಕ. ಈ ಒಂದು ದೃಷ್ಟಾಂತದ ಭಯಾನಕವಾಸ್ತವ ನಿಜಕ್ಕೂ ನಮ್ಮನ್ನು ತಲ್ಲಣಗೊಳಿಸುತ್ತದೆ. ಇಲ್ಲಿ ಅಲಂಕಾರವೊಂದು ಜೀವನದ ವಿಕಟರಹಸ್ಯವನ್ನೇ ಬಯಲುಮಾಡುವ ದಾರ್ಶನಿಕಸೂಕ್ತಿಯ ಮಟ್ಟಕ್ಕೇರಿರುವುದು ಗಮನಾರ್ಹ.

* * *

ನಿದರ್ಶನಾಲಂಕಾರವು ದೃಷ್ಟಾಂತಕ್ಕೆ ನಿಕಟಬಂಧು. ಇದು ಪ್ರಕೃತಾಪ್ರಕೃತಗಳನ್ನು ನಿರೂಪಿಸುವ ವಾಕ್ಯವಿನ್ಯಾಸದಲ್ಲಿ ಸಾಮ್ಯವನ್ನು ಹೊಂದಿರುವಂಥದ್ದು. ಇಲ್ಲಿಯೂ ವಾಚ್ಯತಾಂಶದ ಹೆಚ್ಚಳವುಂಟು. ಆದುದರಿಂದಲೇ ಉಪದೇಶಪರವಾದ ಸಂದರ್ಭಗಳಲ್ಲಿ ಇದಕ್ಕೆ ಮಿಗಿಲಾದ ಅವಕಾಶ. ಅಂಥ ಒಂದು ಹಿತಕಥನದ ಸಂನಿವೇಶವನ್ನು ಅರಣ್ಯಕಾಂಡದಲ್ಲಿ ಗಮನಿಸಬಹುದು. ರಾವಣನು ಸೀತೆಯನ್ನು ಕದ್ದೊಯ್ಯಲು ಮುಂದಾದಾಗ ಆಕೆಯು ಅವನಿಗೆ ಈ ದುಷ್ಕಾರ್ಯದ ಪರಿಣಮರೌದ್ರತೆಯನ್ನು ನಿದರ್ಶನಮಾಲೆಯ ಮೂಲಕ ಮನಮುಟ್ಟಿಸಿ ಎಚ್ಚರಿಸುವ ಪರಿ ಪರಿಶೀಲನೀಯ:

ಆಶೀವಿಷಸ್ಯ ವದನಾದ್ದಂಷ್ಟ್ರಾಮಾದಾತುಮಿಚ್ಛಸಿ | (3.47.39)

ಮಂದರಂ ಪರ್ವತಶ್ರೇಷ್ಠಂ ಪಾಣಿನಾ ಹರ್ತುಮಿಚ್ಛಸಿ |

ಕಾಲಕೂಟಂ ವಿಷಂ ಪೀತ್ವಾ ಸ್ವಸ್ತಿಮಾನ್ ಗಂತುಮಿಚ್ಛಸಿ || (3.47.40)

ಅಕ್ಷಿ ಸೂಚ್ಯಾ ಪರಿಮೃಜಸಿ ಜಿಹ್ವಯಾ ಲೇಢಿ ಚ ಕ್ಷುರಮ್ | (3.47.41)

ಅವಸಜ್ಯ ಶಿಲಾಂ ಕಂಠೇ ಸಮುದ್ರಂ ತರ್ತುಮಿಚ್ಛಸಿ |

ಸೂರ್ಯಾಚಂದ್ರಮಸೌ ಚೋಭೌ ಪಾಣಿಭ್ಯಾಂ ಹರ್ತುಮಿಚ್ಛಸಿ || (3.47.42)

ಅಗ್ನಿಂ ಪ್ರಜ್ವಲಿತಂ ದೃಷ್ಟ್ವಾ ವಸ್ತ್ರೇಣಾಹರ್ತುಮಿಚ್ಛಸಿ | (3.47.43)

ರಾಮನ ಪ್ರಿಯಪತ್ನಿಯಾದ ಸೀತೆಯನ್ನು ಅಪಹರಿಸಲೆಳಸುವುದೆಂದರೆ ಘೋರಸರ್ಪದ ಕೋರೆಗಳನ್ನು ಕೀಳಲೆಳಸಿದಂತೆ, ಮಂದರಪರ್ವತವನ್ನು ಕೈಯಿಂದ ಕಸಿಯಲು ಬಯಸಿದಂತೆ, ಕಾಲಕೂಟವವಿಷವನ್ನೂ ಕುಡಿದು ಸ್ವಸ್ಥವಾಗಿ ಬದುಕಲು ಬಯಸಿದಂತೆ, ಸೂಜಿಯಿಂದ ಕಣ್ಣನ್ನು ಸವರಿಕೊಂಡಂತೆ, ಕತ್ತಿಯಲಗನ್ನು ನೆಕ್ಕಿ ನಲಿದಂತೆ, ಕೊರಳಿಗೆ ಬಂಡೆಯನ್ನು ಕಟ್ಟಿಕೊಂಡು ಕಡಲಿಗೆ ಬಿದ್ದು ಈಜಲೆಳಸಿದಂತೆ, ರವಿ-ಶಶಿಗಳನ್ನು ಇರ್ಕೈಗಳಿಂದಲೂ ಕವರಿಕೊಳ್ಳಲು ಬಯಸಿದಂತೆ, ಧಗಧಗಿಸುವ ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡೊಯ್ಯಲು ಯತ್ನಿಸಿದಂತೆ ...

ಈ ಮಾಲಾನಿದರ್ಶನದಲ್ಲಿ ಸೀತೆಯ ಕೋಪ, ಕಳವಳ, ಧಾವಂತ, ಆತ್ಮವಿಶ್ವಾಸಗಳೆಲ್ಲ ಅಹಮಹಮಿಕೆಯಾಗಿ ಹೊಮ್ಮುತ್ತಿರುವುದನ್ನು ಕಾಣಬಹುದು. ಹೀಗೆ ಪುಂಖಾನುಪುಂಖವಾಗಿ ನಿದರ್ಶನಗಳ ಮೂಲಕ ಎಚ್ಚರ ನೀಡುವುದು ಸಂದರ್ಭಸಹಜವೂ ಹೌದು. ಇದು ಯಾವುದೇ ರೀತಿಯಲ್ಲಿ ಅಲಂಕಾರಾಧಿಕ್ಯವೆಂದು ತೋರುವುದಿಲ್ಲ. ಅಲ್ಲದೆ ನಿದರ್ಶನಗಳ ನೈಜತೆಯೂ ಪದ್ಯಫಣಿತಿಯ ಧಾರಾಶುದ್ಧಿಯೂ ಇಲ್ಲಿ ಮತ್ತಷ್ಟು ಸಹಕಾರಿಗಳಾಗಿವೆ.

ಇಂದ್ರಜಿತ್ತು ಮತ್ತು ಲಕ್ಷ್ಮಣರ ನಡುವಣ ಘೋರಸಂಗ್ರಾಮಕಾಲದಲ್ಲಿ ವಿಭೀಷಣನು ಕಪಿಸೈನ್ಯವನ್ನು ಪ್ರೋತ್ಸಾಹಗೊಳಿಸುತ್ತಾ ಈವರೆಗೆ ಎಂಥೆಂಥ ರಾಕ್ಷಸರನ್ನೆಲ್ಲ ಕೊಂದು ವಿಜೃಂಭಿಸಿದ ನಿಮಗೆ ಈ ಒಂದು ಯುದ್ಧವು ಲೆಕ್ಕವೇ? ಸಾಗರವನ್ನೇ ಈಜಿ ದಾಟಿದವರಿಗೆ ಇದೊಂದು ಗೋಷ್ಪಾದಮಾತ್ರದ ತಾಣವು ಹಿರಿದೇ? ಎಂದು ಹೇಳುವಲ್ಲಿ ಗಾದೆಮಾತಿನಂಥ ನಿದರ್ಶನಾಲಂಕಾರವು ಸೊಗಯಿಸಿದೆ:

ಬಾಹುಭ್ಯಾಂ ಸಾಗರಂ ತೀರ್ತ್ವಾ ಲಂಘ್ಯತಾಂ ಗೋಷ್ಪದಂ ಲಘು | (೬.೯೦.೧೫)

ವಿಷಮಾಲಂಕಾರವು ವಿರೋಧಮೂಲದ ವಾಗ್ವಿಚ್ಛಿತ್ತಿಗಳಲ್ಲೊಂದು. ಇದು ತನ್ನೊಳಗಿನ ವೈಷಮ್ಯಚಿತ್ರಣದ ಕಾರಣದಿಂದಲೇ ಸುಲಭವಾಗಿ ಎದ್ದುತೋರುತ್ತದೆ. ಇದೊಂದು ಬಗೆಯಲ್ಲಿ ಪ್ರತೀಪರೂಪದ ಉಪಮಾಲಂಕಾರವೆನ್ನಬೇಕು. ಏಕೆಂದರೆ ಉಪಮೆಯ ಮೂಲ ಸಾಮ್ಯದಲ್ಲಿದ್ದರೆ, ವಿಷಮದ ಮೂಲ ವೈಷಮ್ಯದಲ್ಲಿದೆ. ಆದಿಕವಿಗಳು ಇಂಥ ಅಲಂಕಾರವನ್ನೂ ಚೆನ್ನಾಗಿ ನಿರ್ವಹಿಸಿದ್ದಾರೆ. ಜಗತ್ತಿನಲ್ಲಿ ಸಾಮ್ಯವನ್ನರಸುವ ಆದರ್ಶೋನ್ಮುಖವಾದ ಮನಸ್ಸು ಇಹದಲ್ಲಿರುವ ವೈಷಮ್ಯವನ್ನು ಉಪೇಕ್ಷಿಸದ ವಾಸ್ತವಪ್ರಜ್ಞೆಯನ್ನೂ ಹೊಂದಿರಬೇಕಷ್ಟೆ. ಇದು ಕವಿಯಾಗಬಯಸುವವರಿಗೆ ಬೇಕಾದ ಪ್ರಥಮಾರ್ಹತೆಗಳಲ್ಲೊಂದು.

ವಿಷಮ ಮತ್ತು ವಿರೋಧಾಲಂಕಾರಗಳನ್ನು ನಿರ್ವಹಿಸುವಾಗ ಶಬ್ದಮೈತ್ರಿಗೆ ಎಲ್ಲಿಲ್ಲದ ಮಹತ್ತ್ವವುಂಟು. ಏಕೆಂದರೆ ಶಾಬ್ದಿಕವಾಗಿ ಸಾಮ್ಯವಿರುವಲ್ಲಿಯೂ ಆರ್ಥಿಕವಾಗಿ ಎಂಥ ವೈಷಮ್ಯವುಂಟೆಂದು ಧ್ವನಿಸುವಾಗಲೇ ಈ ಅಲಂಕಾರಗಳ ಚೆಲುವು ಇಮ್ಮಡಿಸುತ್ತದೆ. ಇದು ಆದಿಕವಿಗಳಿಂದಲೇ ಪ್ರವರ್ತಿತವಾದ ಕವಿಮಾರ್ಗದರ್ಶಿ.

ರಾಮನು ಕಾಡಿಗೆ ಹೊರಟಾಗ ಅಯೋಧ್ಯಾಪ್ರಜೆಗಳು ಆತನ ನಿಷ್ಪರಿಚ್ಛದನಿರ್ಗಮನವನ್ನು ಹೀಗೆ ಬಣ್ಣಿಸುತ್ತಾರೆ:

ಯಂ ಯಾಂತಮನುಯಾತಿ ಸ್ಮ ಚತುರಂಗಬಲಂ ಮಹತ್ |

ತಮೇಕಂ ಸೀತಯಾ ಸಾರ್ಥಮನುಯಾಸ್ಯತಿ ಲಕ್ಷ್ಮಣಃ || (೨.೩೩.೬)

ಯಾವನು ಹೊರಟುನಿಂತಾಗ ಸಮಗ್ರಚತುರಂಗಬಲವೇ ಹಿಂಬಾಲಿಸುತ್ತಿತ್ತೋ ಅಂಥವನಿಂದು ಕಾಡಿಗೆ ತೆರಳುವಾಗ ಬರಿಯ ಸೀತಾ-ಲಕ್ಷ್ಮಣರು ಮಾತ್ರ ಅನುಸರಿಸುತ್ತಿದ್ದಾರೆ. ಎಂಥ ವಿಪರ್ಯಾಸ! ಇಲ್ಲಿಯ ಅಯತ್ನಸಾಮಾನ್ಯಕಥನವೇ ಅದ್ಭುತಕಾವ್ಯವಾಗಿರುವುದು ಗಮನಾರ್ಹ. ಲೋಕರೂಢಿಯ ಸವಕಲುಮಾತೂ ಮಹಾಕವಿಯ ಮೂಸೆಯಿಂದ ಹೊರಬಿದ್ದಾಗ ಸ್ವರ್ಗದಲ್ಲಿಯೂ ಸಲ್ಲಬಲ್ಲ ಸುವರ್ಣನಾಣ್ಯವಾಗಿರುತ್ತದೆ.

ಶೂರ್ಪಣಖೆಯನ್ನು ಆದಿಕವಿಗಳು ನಮಗೆ ಪರಿಚಯಿಸುವಾಗ ಆಕೆಯನ್ನು ರಾಮನೊಡನೆ ಜೊತೆಜೊತೆಯಾಗಿ ಹೋಲಿಸಿ ಅಲ್ಲಿಯ ವೈಷಮ್ಯವನ್ನು ಮನಮುಟ್ಟಿಸುವ ಪರಿ ಅನ್ಯಾದೃಶ:

ಸುಮುಖಂ ದುರ್ಮುಖೀ ರಾಮಂ ವೃತ್ತಮಧ್ಯಂ ಮಹೋದರೀ |

ವಿಶಾಲಾಕ್ಷಂ ವಿರೂಪಾಕ್ಷೀ ಸುಕೇಶಂ ತಾಮ್ರಮೂರ್ಧಜಾ ||

ಪ್ರೀತಿರೂಪಂ ವಿರೂಪಾ ಸಾ ಸುಸ್ವರಂ ಭೈರವಸ್ವರಾ |

ತರುಣಂ ದಾರುಣಾ ವೃದ್ಧಾ ದಕ್ಷಿಣಂ ವಾಮಭಾಷಿಣೀ ||

ನ್ಯಾಯವೃತ್ತಂ ಸುದುರ್ವೃತ್ತಾ ಪ್ರಿಯಮಪ್ರಿಯದರ್ಶನಾ |

ಶರೀರಜಸಮಾವಿಷ್ಟಾ ರಾಕ್ಷಸೀ ವಾಕ್ಯಮಬ್ರವೀತ್ || (3.೧೭.೧೦-೧೨)

ಅವನು ಸುಮುಖ ಇವಳು ದುರ್ಮುಖಿ, ಅವನು ಬಡನಡುವಿನವನು ಇವಳು ಹೆಬ್ಬೊಟ್ಟೆಯವಳು, ಅವನು ಚೆಲುಗಣ್ಣಿನವನು ಇವಳು ಕೆಡುಗಣ್ಣಿನವಳು, ಅವನು ಸೊಗಸುಗುರುಳವನು ಇವಳು ಕೆಂಗೂದಲ ಕಾಳಿ, ಅವನು ಸುರೂಪ ಇವಳು ಕುರೂಪಿ, ಅವನು ಇನಿದನಿಯವನು ಇವಳು ಬಿರುದನಿಯವಳು, ಅವನು ಸಹಜತರುಣ ಇವಳು ವಿಕೃತವೃದ್ಧೆ, ಅವನು ನೇರನುಡಿಯವನು ಇವಳು ಕೊಂಕುನುಡಿಯವಳು, ಅವನು ಸರಿದಾರಿಯವನು ಇವಳು ಹಾದಿಬಿಟ್ಟವಳು. ಇಂಥ ಶೂರ್ಪಣಖೆಯು ಕಾಡುವ ಕಾಮದ ಕಾಟದಿಂದ ಅವನನ್ನು ಕಾಡಿ-ಬೇಡಿದಳು.

ಇಲ್ಲಿಯ ಸೊಗಸು ಸ್ವಯಂವೇದ್ಯ. ವಿಶೇಷತಃ ಕಾಮವನ್ನು “ಶರೀರಜ”ವೆಂಬ ಶಬ್ದದಿಂದ ನಿರ್ದೇಶಿಸಿರುವುದು ಅತ್ಯಂತಧ್ವನಿಪೂರ್ಣ. ಅಳಿಯುವಿಕೆಯೇ ಲಕ್ಷಣವಾಗಿ ಉಳ್ಳದ್ದು ಶರೀರ. ಅಂಥ ಶರೀರದಿಂದ ಹುಟ್ಟುವ ಕಾಮವು ಶರೀರ ಸುಟ್ಟರೂ ಬಿಡದಲ್ಲ! ಕಾಮನ ಬಿರುಬೇಗೆಯನ್ನು ಇದಕ್ಕಿಂತ ಸೊಗಸಾಗಿ ವ್ಯಂಜಿಸಲು ಯಾರಿಗೆ ಸಾಧ್ಯ? ಇದು ವಿಷಮಾಲಂಕಾರಗಳ ಮಾಲಿಕೆಯ ನಡುವೆ ಅನಿರೀಕ್ಷಿತವಾಗಿ ತಲೆದೋರುವ ಅಗೋಚರಪರಿಮಳ.

ಸೀತೆಯನ್ನು ತುಡುಕಲು ಮುಂದಾದ ರಾವಣನನ್ನು ಎಚ್ಚರಿಸುತ್ತ ಆಕೆ ರಾಮನಿಗೂ ರಾವಣನಿಗೂ ಇರುವ ಅಂತರವನ್ನು ಹಲವು ಮಾತುಗಳಲ್ಲಿ ಹವಣಿಸುತ್ತಾಳೆ. ಆ ಪದ್ಯಗಳು ಪರಿಭಾವನೀಯ:

ಯದಂತರಂ ಸಿಂಹಶೃಗಾಲಯೋರ್ವನೇ

ಯದಂತರಂ ಸ್ಯಂದನಿಕಾಸಮುದ್ರಯೋಃ |

ಸುರಾಗ್ರ್ಯಸೌವೀರಕಯೋರ್ಯದಂತರಂ

ತದಂತರಂ ವೈ ತವ ರಾಘವಸ್ಯ ಚ ||

ಯದಂತರಂ ಕಾಂಚನಸೀಸಲೋಹಯೋ-

ರ್ಯದಂತರಂ ಚಂದನವಾರಿಪಂಕಯೋಃ |

ಯದಂತರಂ ಹಸ್ತಿಬಿಡಾಲಯೋರ್ವನೇ

ತದಂತರಂ ದಾಶರಥೇಸ್ತವೈವ ಚ ||

ಯದಂತರಂ ವಾಯಸವೈನತೇಯಯೋ-

ರ್ಯದಂತರಂ ಮದ್ಗುಮಯೂರಯೋರಪಿ |

ಯದಂತರಂ ಸಾರಸಗೃಧ್ರಯೋರ್ವನೇ

ತದಂತರಂ ದಾಶರಥೇಸ್ತವೈವ ಚ || (೩.೪೭.೪೫-೪೭)

ನರಿ-ಸಿಂಹಗಳ ನಡುವೆ, ಹಳ್ಳ-ಕಡಲುಗಳ ನಡುವೆ, ಗಂಜಿ-ಸುಧೆಗಳ ನಡುವೆ, ಸೀಸ-ಸ್ವರ್ಣಗಳ ನಡುವೆ, ಕೆಸರು-ಚಂದನಗಳ ನಡುವೆ ಬೆಕ್ಕು-ಆನೆಗಳ ನಡುವೆ, ಕಾಗೆ-ಗರುಡಗಳ ನಡುವೆ, ನೀರುಕಾಗೆ-ವನಮಯೂರಗಳ ನಡುವೆ, ಹದ್ದು-ಹಂಸಗಳ ನಡುವೆ ಎಷ್ಟು ಅಂತರವುಂಟೋ ಅಷ್ಟು ಅಂತರ ನಿನಗೂ ರಾಮನಿಗೂ ಉಂಟು!

ಈ ತೆರನಾಗಿ ಸೀತೆಯು ಗದರುವಾಗ ಆದಿಕವಿಗಳು ಬಳಸಿದ ವೃತ್ತವಾಗಲಿ, ಪದಗಳಾಗಲಿ, ಕಲ್ಪನೆಗಳಾಗಲಿ ಅಪ್ರತಿದ್ವಂದ್ವ. ಧಿಕ್ಕಾರಕ್ಕೆ ಇದಕ್ಕಿಂತ ಸುಂದರವೂ ಸಮರ್ಥವೂ ಆದ ಅಭಿವ್ಯಕ್ತಿ ಮತ್ತೆಲ್ಲಿ?

ಯುದ್ಧಕಾಂಡದಲ್ಲೊಂದು ಮಹೋನ್ನತವಾದ ವಿಷಮಾಲಂಕಾರಪ್ರಯೋಗವಿದೆ. ಗತಿಸಿದ ಗಂಡನನ್ನು ಕುರಿತು ಶೋಕಿಸುವ ಮಂದೋದರಿಯು “ವಸ್ತ್ರಾಭರಣಗಳ ಅಲಂಕಾರದಿಂದ ಸರಸದಲ್ಲಿಯೂ ಸಮರದಲ್ಲಿಯೂ ಲೀಲಾಜಾಲವಾಗಿ ವಿಹರಿಸುತ್ತಿದ್ದ ನಿನ್ನ ಶ್ಯಾಮಲಕಾಯವು ಮಿಂಚಿನ ಬಳ್ಳಿಗಳಿಂದೊಡಗೂಡಿದ ಮಳೆಮುಗಿಲಿನಂತಿತ್ತು. ಅದೀಗ ಸಾವಿರಾರು ಶರಗಳಿಂದ ಕ್ಷತವಿಕ್ಷತವಾಗಿ, ರಕ್ತಸಿಕ್ತವಾಗಿ ತೋರಿದೆ. ಮತ್ತೆಂದೂ ಸಿಗದ ನಿನ್ನ ಶರೀರಸ್ಪರ್ಶಕ್ಕೆ ಹಾತೊರೆಯುವ ನನಗೆ ನಿನ್ನ ಈ ಬಾಣಭರಿತಗಾತ್ರವು ಅಪ್ಪಿಕೊಳ್ಳಲೂ ಅಸಾಧ್ಯವೆಂಬಂತಾಯಿತಲ್ಲಾ!” ಎಂದು ಹೃದಯವಿದ್ರಾವಕವಾಗಿ ಶೋಕಿಸುತ್ತಾಳೆ:

ಕಾಂತಂ ವಿಹಾರೇಷ್ವಧಿಕಂ ದೀಪ್ತಂ ಸಂಗ್ರಾಮಭೂಮಿಷು |

ಭಾತ್ಯಾಭರಣಭಾಭಿರ್ಯದ್ವಿದ್ಯುದ್ಭಿರಿವ ತೋಯದಃ ||

ತದೇವಾದ್ಯ ಶರೀರಂ ತೇ ತೀಕ್ಷ್ಣೈರ್ನೈಕೈಃ ಶರೈಶ್ಚಿತಮ್ |

ಪುನರ್ದುರ್ಲಭಸಂಸ್ಪರ್ಶಂ ಪರಿಷ್ವಕ್ತುಂ ನ ಶಕ್ಯತೇ || (೬.೧೧೪.೪೪,೪೫)

ಈ ಯುಗ್ಮಕದಲ್ಲಿ ಶೃಂಗಾರವು ಕರುಣಕ್ಕೆ ಅದೆಂತು ಸಹಕಾರಿಯಾಗಿ ಬಂದೊದಗಿದೆಯೆಂಬುದನ್ನು ಗಮನಿಸಿದಾಗ ಆದಿಕವಿಗಳ ಕಾವ್ಯಚಾತುರಿ ವಿಸ್ಮಯ ತರುತ್ತದೆ. ತಾಂತ್ರಿಕವಾಗಿ ಇದನ್ನು “ರಸವದಲಂಕಾರ”ವೆಂದು ಗುರುತಿಸುವುದುಂಟು. ವ್ಯಾಸರಂಥ ಕವಿಬ್ರಹ್ಮರಿಗೂ ಈ ಬಗೆಯ ರಚನೆ ಸ್ಫೂರ್ತಿಪ್ರದವಾಗಿದೆಯೆಂಬುದನ್ನು ನಾವಿಲ್ಲಿ ನೆನೆಯಬಹುದು. ಮಹಾಭಾರತದ ಸ್ತ್ರೀಪರ್ವದಲ್ಲಿ ಬರುವ ಭೂರಿಶ್ರವನ ಪತ್ನಿಯರ ಪ್ರಲಾಪವು ಕೆಲಮಟ್ಟಿಗೆ ಇಂಥ ಅಂಶಗಳನ್ನು ಮೈದುಂಬಿಸಿಕೊಂಡಿದೆ.

* * *

ವಿರೋಧ ಅಥವಾ ವಿರೋಧಾಭಾಸಾಲಂಕಾರವು ಕೂಡ ತುಂಬ ಪರಿಣಾಮಕಾರಿ. ಇದನ್ನು ಕೆಲವರು ವಿಷಮಾಲಂಕೃತಿಗೇ ಸೇರಿಸುತ್ತಾರೆ. ವಿಶೇಷತಃ ಕಾಳಿದಾಸನು ಇದನ್ನು ಹಲವೆಡೆ ಬಳಸಿ ಅಜರಾಮರಗೊಳಿಸಿದ್ದಾನೆ. ಇವನಿಗೂ ಆದಿಕವಿಗಳೇ ಸ್ಫೂರ್ತಿಯೆಂಬುದು ಪುನರುಕ್ತಿಯಾದೀತು.

ಯುದ್ಧಕಾಂಡದ ಎರಡು ಮಾದರಿಗಳನ್ನು ನೋಡೋಣ: 

ತೀರ್ತ್ವಾ ಸಾಗರಮಕ್ಷೋಭ್ಯಂ ಭ್ರಾತರೌ ಗೋಷ್ಪದೇ ಹತೌ | (೬.೪೮.೧೫)

ನಾಗಾಸ್ತ್ರಬದ್ಧರಾದ ರಾಮ-ಲಕ್ಷ್ಮಣರನ್ನು ವಿಮಾನದಿಂದ ಕಂಡ ಸೀತೆಯು “ಅಯ್ಯೋ! ಶತಯೋಜನವಿಸ್ತಾರವಾದ ಸಾಗರವನ್ನು ಸಮರ್ಥವಾಗಿ ದಾಟಿ ಬಂದ ಇವರು ಇದೀಗ ಗೋಷ್ಪದಮಾತ್ರಜಲದಲ್ಲಿ ಸಿಲುಕಿ ನೊಂದರಲ್ಲಾ!” ಎಂದು ಹಲುಬುತ್ತಾಳೆ. ನಾಗಾಸ್ತ್ರಪ್ರಯೋಗಕ್ಕೆ ಇಂದ್ರಜಿತ್ತನು ಬಳಸಿದ ಮಂತ್ರೋದಕವು ಗೋಷ್ಪದಮಾತ್ರದ್ದೆಂಬ ಅರಿವು ನಮಗಿದ್ದಲ್ಲಿ ಈ ಅಲಂಕಾರದ ಪರಿಣಾಮ ಅದ್ಭುತವಾದೀತು.

ತಸ್ಮಿನ್ ಜೀವತಿ ವೀರೇ ತು ಹತಮಪ್ಯಹತಂ ಬಲಮ್ |

ಹನುಮತ್ಯುಜ್ಝಿತಪ್ರಾಣೇ ಜೀವಂತೋಪಿ ವಯಂ ಹತಾಃ || (೬.೭೪.೨೨)

ಸರ್ಪಾಸ್ತ್ರಕ್ಕೆ ಸಿಲುಕಿ ಕಪಿಸೇನೆಯೆಲ್ಲ ಮೂರ್ಛಿತವಾಗಿದ್ದಾಗ ಜಾಂಬವಂತನು ವಿಭೀಷಣನಿಗೆ ಹೇಳುವ ಮಾತಿದು. ಅವನ ಪ್ರಕಾರ ಹನುಮಂತನೊಬ್ಬನು ಬದುಕಿದ್ದರೆ, ಇಡಿಯ ಸೇನೆಯು ಸತ್ತಿದ್ದರೂ ಬದುಕಿದ್ದಂತೆ; ಅವನೇ ಒಂದು ವೇಳೆ ಸತ್ತಿದ್ದಲ್ಲಿ, ಅದು ಬದುಕಿದ್ದರೂ ಸತ್ತಿದ್ದಂತೆ!

ಈ ಮಾತಿಗೆ ಹೆಚ್ಚಿನ ವಿವರಣೆ ಬೇಕಿಲ್ಲ. ರಾಮಾಯಣಮಹಾಮಾಲೆಯ ಮಹಾರತ್ನವೆನಿಸಿದ ಮಾರುತಿಯ ಶಕ್ತಿ-ಸಾಮರ್ಥ್ಯಗಳನ್ನೂ ಸೇವೆ-ನಿಸ್ಸ್ವಾರ್ಥತೆಗಳನ್ನೂ ಬಲ್ಲವರಿಗೆ ಈ ಒಂದು ಶ್ಲೋಕವು ಆತನ ವ್ಯಕ್ತಿತ್ವವನ್ನು ಕಟ್ಟಿಕೊಡಲು ಸಾಕು.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.