ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ—ಅನುಮಾನ, ಸಾರ, ಉಲ್ಲೇಖ, ಉಪಮಾನೋಪಮೇಯ, ಅನನ್ವಯ, ಸ್ವಭಾವೋಕ್ತಿ

ಅನುಮಾನಾಲಂಕಾರವು “ಅನುಮಾನ”ವೆಂಬ ತಾರ್ಕಿಕಪ್ರಮಾಣವನ್ನೇ ಆಧರಿಸಿದೆ. ಇದನ್ನು ಕೆಲವರು ಅಲಂಕಾರವಾಗಿಯೇ ಅಂಗೀಕರಿಸರು. ಬಲುಮಟ್ಟಿಗೆ ಕಾವ್ಯಲಿಂಗದಲ್ಲಿಯೇ ಇದು ಅಡಕವಾದೀತು. ಆದರೆ ಇಂಥ ಅಲಂಕಾರದಲ್ಲಿಯೂ ಆದಿಕವಿಗಳ ಕೌಶಲ ಪ್ರಸ್ಫುಟ.

ಮಳೆಗಾಲದಲ್ಲಿ ಮೋಡ ಕವಿದು ಸೂರ್ಯನ ಸುಳಿವೇ ಇಲ್ಲದಿದ್ದಾಗ ಸಂಜೆಯಾಗುವುದನ್ನು ತಾವರೆಗಳ ಮುದುಡುವಿಕೆಯಿಂದ, ಹಕ್ಕಿಗಳ ಗೂಡುಸೇರುವಿಕೆಯಿಂದ, ಜಾಜಿಹೂಗಳ ಅರಳುಗಳಿಂದ ಅನುಮಾನಿಸಬೇಕಿದೆ:

ನಿಲೀಯಮಾನೈರ್ವಿಹಗೈರ್ನಿಮೀಲದ್ಭಿಶ್ಚ ಪಂಕಜೈಃ |

ವಿಕಸಂತ್ಯಾ ಚ ಮಾಲತ್ಯಾ ಗತೋಸ್ತಂ ಜ್ಞಾಯತೇ ರವಿಃ || (೪.೨೮.೫೨)

* * *

ಸಾರಾಲಂಕಾರದಲ್ಲಿ ವರ್ಣ್ಯವಸ್ತುಗಳು ಒಂದು ಮತ್ತೊಂದರ ಸಾರವೆಂಬಂತೆ ಕ್ರಮವಾಗಿ ಉತ್ಕರ್ಷವನ್ನು ಪಡೆಯುತ್ತವೆ.

ಮಂದೋದರಿಯು ಪತಿವಿಯೋಗದಿಂದ ವಿಲಪಿಸುತ್ತಾ, ರಾವಣನು ಭೂಮಿಯ ಸಾರಭೂತಭಾಗವಾದ, ಸಂಪತ್ತಿನ ಸಾರಭೂತಸಂಪತ್ತಿಯಾದ ಸೀತೆಯನ್ನು ಕಾಮಿಸಿದ್ದು ತಪ್ಪಾಯಿತೆಂದು ಹೇಳಿಕೊಳ್ಳುವಲ್ಲಿ ಸಾರಾಲಂಕಾರದ ಛಾಯೆಯನ್ನು ಕಾಣುತ್ತೇವೆ:

ವಸುಧಾಯಾಶ್ಚ ವಸುಧಾಂ ಶ್ರಿಯಃ ಶ್ರೀಂ ಭರ್ತೃವತ್ಸಲಾಮ್ | (೬.೧೧೪.೨೨)

* * *

ಉಲ್ಲೇಖಾಲಂಕಾರವು ವರ್ಣ್ಯವಸ್ತುವನ್ನು ಪರಿಪರಿಯಾಗಿ ಬಣ್ಣಿಸುವುದರಲ್ಲಿದೆ. ಇದು ಕೆಲವೊಮ್ಮೆ ರೂಪಕದ ಛಾಯೆಯನ್ನೂ ತಾಳುವುದುಂಟು. ಆಗ ಇದು ಮಾಲಾರೂಪಕದ ಜಾಡನ್ನು ಹಿಡಿದಂತೆ ತೋರುತ್ತದೆ. ಇಂತಲ್ಲದೆ ವರ್ಣ್ಯವಸ್ತುವಿನ ಚಟುವಟಿಕೆಯನ್ನೇ ಬಗೆಬಗೆಯಾಗಿ ಬಣ್ಣಿಸಿದಾಗ ಅದು ಸ್ವಭಾವೋಕ್ತಿಯಂತೆಯೂ ತೋರಬಹುದು. ಕೇವಲ ಪ್ರಧಾನವ್ಯಪದೇಶದಿಂದ ಅಲಂಕಾರಗಳನ್ನು ಗುರುತಿಸಬೇಕೆಂಬ ವಿವೇಕವನ್ನು ಅವಲಂಬಿಸಿ ನಿಶ್ಚಯಿಸಬೇಕಷ್ಟೆ.

ಅಣ್ಣನ ಅವಸಾನವನ್ನು ಕಂಡು ವಿಹ್ವಲನಾದ ವಿಭೀಷಣನು ಪ್ರಲಪಿಸುತ್ತ: ಸಜ್ಜನಿಕೆಯ ಸೇತುವೆಯಿಂದು ಮುರಿಯಿತು, ಧರ್ಮದ ಪ್ರತಿರೂಪವು ಅಳಿಯಿತು, ಹೆಪ್ಪುಗಟ್ಟಿದ ಸತ್ತ್ವವೇ ಸತ್ತುಹೋಯಿತು, ಸ್ತುತಿಪಾತ್ರತೆಯೇ ಗತಿಸಿತು, ಅಗ್ನಿಹೋತ್ರವು ಆರಿತು, ಉದ್ಯಮಶೀಲತೆಯು ಉರುಳಿತು ... ಎಂದೆಲ್ಲ ವ್ಯಥಿಸುತ್ತಾನೆ. ಇಲ್ಲಿಯ ಒಂದೊಂದು ಮಾತೂ ಸಾರೋಕ್ತಿ:

ಗತಃ ಸೇತುಃ ಸುನೀತಾನಾಂ ಗತೋ ಧರ್ಮಸ್ಯ ವಿಗ್ರಹಃ |

ಗತಃ ಸತ್ತ್ವಸ್ಯ ಸಂಕ್ಷೇಪಃ ಪ್ರಸ್ತಾವಾನಾಂ ಗತಿರ್ಗತಾ |

ಚಿತ್ರಭಾನುಃ ಪ್ರಶಾಂತಾರ್ಚಿರ್ವ್ಯವಸಾಯೋ ನಿರುದ್ಯಮಃ |

ಅಸ್ಮಿನ್ನಿಪತಿತೇ ಭೂಮೌ ವೀರೇ ಶಸ್ತ್ರಭೃತಾಂ ವರೇ || (೬.೧೧೨.೬-೮)

ರಾವಣನಂಥ ಅಪ್ರತಿಮಪ್ರತಿನಾಯಕನಿಗೆ ಈ ತೆರನಾದ ಚರಮಗೀತೆಯು ಸಲ್ಲುವಂಥದ್ದೇ ಹೌದು. ಆದರೆ ಇಲ್ಲಿಯ ಕೆಲವು ಮಾತುಗಳ ಅತ್ಯುಕ್ತಿಯು ಪ್ರಶಂಸೆಯಲ್ಲದೆ ಸ್ತುತಿಯಲ್ಲವೆಂಬುದನ್ನು ರಸಜ್ಞರು ಮರೆಯಬಾರದು.

* * *

ಉಪಮಾನೋಪಮೇಯಾಲಂಕಾರವು ಅದರ ಹೆಸರಿನಿಂದಲೇ ತಿಳಿಯುವಂತೆ ಉಪಮಾನ-ಉಪಮೇಯಗಳು ಪರಸ್ಪರಪರ್ಯಾಯವಾಗುವುದರಲ್ಲಿದೆ. ಇದು ಪ್ರತೀಪಾಲಂಕಾರಕ್ಕೆ ಹತ್ತಿರದ ನಂಟ. ಅನನ್ವಯಾಲಂಕಾರವು ಇದರ ಮತ್ತೂ ಪರಿಣಾಮಿರೂಪವೆನ್ನಬೇಕು. ಉಪಮಾಲಂಕಾರದಲ್ಲಿ ತೋರುವ ಯಾತಯಾಮತೆಯನ್ನು ನೀಗಲು ಇಂಥ ಅಲಂಕಾರಗಳು ಚೆನ್ನಾಗಿ ಒದಗಿಬರುತ್ತವೆ.

ಯುದ್ಧಕಾಂಡದ ಆರಂಭದಲ್ಲಿ ಸಮುದ್ರವನ್ನು ವರ್ಣಿಸುತ್ತ ಆದಿಕವಿಗಳು ಆಗಸವು ಸಾಗರದಂತೆಯೂ ಸಾಗರವು ಆಗಸದಂತೆಯೂ ಇತ್ತೆಂದು ಚಮತ್ಕರಿಸುತ್ತಾರೆ:

ಸಾಗರಂ ಚಾಂಬರಪ್ರಖ್ಯಮಂಬರಂ ಸಾಗರೋಪಮಮ್ |

ಸಾಗರಂ ಚಾಂಬರಂ ಚೇತಿ ನಿರ್ವಿಶೇಷಮದೃಶ್ಯತ || (೬.೪.೧೨೦)

* * *

ಅನನ್ವಯಾಲಂಕಾರವು ವರ್ಣ್ಯವಸ್ತುವಿಗೆ ಅದನ್ನೇ ಹೋಲಿಸುವಂಥ ವಿನೂತನಚಮತ್ಕೃತಿ. ಇದನ್ನು ಬ್ರಹ್ಮಾಸ್ತ್ರದಂತೆ ಅತ್ಯಂತವಿರಳೋತ್ಕಟಸಂದರ್ಭಗಳಲ್ಲಿಯೇ ಬಳಸಬೇಕಲ್ಲದೆ ಮನಬಂದಂತೆಲ್ಲ ದುಂದುಮಾಡುವಂತಿಲ್ಲ. ಬಹುಶಃ ಈ ಸೂಕ್ಷ್ಮವನ್ನು ಬಲ್ಲ ಮಹರ್ಷಿಗಳು ಅದನ್ನು ತುಂಬ ಅರ್ಥಪೂರ್ಣವಾಗಿಯೇ ಬಳಸಿದ್ದಾರೆ. ಆದುದರಿಂದಲೇ ಅವರ ಏಕಮೇವಾದ್ವಿತೀಯ ಅನನ್ವಯಾಲಂಕಾರಶ್ಲೋಕವು ಆಲಂಕಾರಿಕರೆಲ್ಲರ ಬಗೆ ಸೆಳೆದಿದೆ:

ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ | (೬.೧೧೦.೨೩)

ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ || (೬.೧೧೦.೨೪)

ಬಾನಿಗೆ ಬಾನೇ ಹೋಲಿಕೆ, ಕಡಲಿಗೆ ಕಡಲೇ ಹೋಲಿಕೆ; ರಾಮ-ರಾವಣರ ಸಂಗ್ರಾಮಕ್ಕೆ ರಾಮ-ರಾವಣರ ಸಂಗ್ರಾಮವೇ ಹೋಲಿಕೆಯೆಂಬ ಈ ಶ್ಲೋಕತಾತ್ಪರ್ಯವು ಪರ್ಯಾಯವಾಗಿ ವಾಲ್ಮೀಕಿಮುನಿಗಳ ಕವಿತೆಗೆ ಅದುವೇ ಹೋಲಿಕೆಯೆಂಬ ಧ್ವನಿಯನ್ನು ಬಿಂಬಿಸದಿರದು.

ಸ್ವಭಾವೋಕ್ತಿಯನ್ನು ಮೂಲಭೂತಾಲಂಕಾರಗಳಲ್ಲಿ ಒಂದೆನ್ನಬಹುದು. ಇದನ್ನು “ಉಪಗುಣ” ಅಥವಾ ಅರ್ಥವ್ಯಕ್ತಿ ಎಂಬ ಗುಣಕ್ಕೆ ತುಂಬ ನಿಕಟವಾದ ಅಲಂಕಾರವೆಂದು ಪ್ರಕೃತಲೇಖಕನು ಅನ್ಯತ್ರ ಸಿದ್ಧಪಡಿಸಿರುವುದುಂಟು[1]. ವಾಲ್ಮೀಕಿರಾಮಾಯಣದ ಅಕೃತಕಮನೋಹರಶೈಲಿಗೆ ಈ ಅಲಂಕಾರವು ಸೊಗಸಾಗಿ ಒದಗಿಬಂದಿದೆ. ಅಂಥ ಕೆಲವು ಸಂದರ್ಭಗಳನ್ನು ಪರಿಶೀಲಿಸೋಣ:

ವನವಾಸಕ್ಕೆ ತೆರಳುತ್ತಿದ್ದ ರಾಮನ ಹಾದಿಯಲ್ಲಿ ಗಂಗಾನದಿಯು ಎದುರಾಗುತ್ತದೆ. ಅದನ್ನು ಹತ್ತಾರು ಪದ್ಯಗಳಲ್ಲಿ ಆದಿಕವಿಗಳು ಮನದುಂಬಿ ವರ್ಣಿಸುತ್ತಾರೆ:

ತತ್ರ ತ್ರಿಪಥಗಾಂ ದಿವ್ಯಾಂ ಶಿವತೋಯಾಮಶೈವಲಾಮ್ |

ದದರ್ಶ ರಾಘವೋ ಗಂಗಾಂ ಪುಣ್ಯಾಮೃಷಿನಿಷೇವಿತಾಮ್ || (2.50.12)

ಕ್ವಚಿತ್ ಸ್ತಿಮಿತಗಂಭೀರಾಂ ಕ್ವಚಿದ್ವೇಗಜಲಾಕುಲಾಮ್ |

ಕಚಿದ್ಗಂಭೀರನಿರ್ಘೋಷಾಂ ಕ್ವಚಿದ್ಭೈರವನಿಸ್ಸ್ವನಾಮ್ || (2.50.17)

ದೇವಸಂಘಾಪ್ಲುತಜಲಾಂ ನಿರ್ಮಲೋತ್ಪಲಶೋಭಿತಾಮ್ |

ಕ್ವಚಿದಾಭೋಗಪುಲಿನಾಂ ಕ್ವಚಿನ್ನಿರ್ಮಲವಾಲುಕಾಮ್ || (2.50.18)

ಹಂಸಸಾರಸಸಂಘುಷ್ಟಾಂ ಚಕ್ರವಾಕೋಪಕೂಜಿತಾಮ್ |

ಸದಾ ಮತ್ತೈಶ್ಚ ವಿಹಗೈರಭಿಸನ್ನಾದಿತಾಂತರಾಮ್ || (2.50.19)

ಕ್ವಚಿತ್ಫುಲ್ಲೋತ್ಪಲಚ್ಛನ್ನಾಂ ಕ್ವಚಿತ್ಪದ್ಮವನಾಕುಲಾಮ್ | (2.50.20)

ಕ್ವಚಿತ್ಕುಮುದಷಂಡೈಶ್ಚ ಕುಡ್ಮಲೈರುಪಶೋಭಿತಾಮ್ | (2.50.21)

ಗಂಗೆಯು ಕೆಲವೆಡೆ ಸ್ತಿಮಿತಗಂಭೀರವಾಗಿ, ಕೆಲವೆಡೆ ವೇಗವಿಕ್ಷುಬ್ಧವಾಗಿ, ಮತ್ತೆ ಕೆಲವೆಡೆ ಗಂಭೀರಘೋಷಿಣಿಯಾಗಿ, ಇನ್ನೂ ಹಲವೆಡೆ ಭೀಕರನಿನಾದೆಯಾಗಿ ಹರಿಯುತ್ತಿದ್ದಳು. ಆಕೆಯ ನೀರಿನಲ್ಲಿ ದೇವತೆಗಳೂ ಮಿಂದೇಳುತ್ತಿದ್ದರು. ಅವಳ ಪಾತ್ರದಲ್ಲಿ ನಿರ್ಮಲವಾದ ಕನ್ನೈದಿಲೆಗಳು ಬೆಳಗುತ್ತಿದ್ದುವು. ಅವಳ ದಡಗಳು ವಿಹಾರಯೋಗ್ಯವಾಗಿದ್ದುವು, ಅಲ್ಲಿಯ ಮಳಲು ಚೊಕ್ಕಟವಾಗಿತ್ತು. ಆ ನೀರಿನಲ್ಲಿ ಹಂಸ-ಸಾರಸಗಳು ಗಲಗಲಿಸುತ್ತಿದ್ದುವು, ಚಕ್ರವಾಕಗಳು ಚೀತ್ಕರಿಸುತ್ತಿದ್ದುವು, ಇನ್ನಿತರ ಜಲಪಕ್ಷಿಗಳು ಕೋಲಾಹಲಿಸುತ್ತಿದ್ದುವು. ಅಲ್ಲಲ್ಲಿ ಕೆಂದಾವರೆಗಳೂ ಬೆಳ್ದಾವರೆಗಳೂ ಕಲ್ಹಾರಗಳೂ ಮೊಗ್ಗುಗಳಾಗಿ, ಹೂಗಳಾಗಿ ಮೆರೆದಿದ್ದುವು.

ಈ ಪ್ರವಾಹಧೋರಣೆಯ ಪದ್ಯಮಾಲಿಕೆಯ ನಾದಸೌಂದರ್ಯವು ಶ್ರವಣೀಯ.

ವಾಲ್ಮೀಕಿಮಹರ್ಷಿಗಳ ಸ್ವಭಾವೋಕ್ತಿಪದ್ಯಗಳಲ್ಲಿಯೂ ಅನನ್ಯವಾದುದು ಹನೂಮಂತನು ಮಂದೋದರಿಯನ್ನು ಸೀತೆಯೆಂದು ಭ್ರಮಿಸಿ ಹಿಗ್ಗಿ ಹಾರಾಡಿದ ಸಂದರ್ಭದ್ದು:

ಆಸ್ಫೋಟಯಾಮಾಸ ಚುಚುಂಬ ಪುಚ್ಛಂ

ನನಂದ ಚಿಕ್ರೀಡ ಜಗೌ ಜಗಾಮ |

ಸ್ತಂಭಾನರೋಹನ್ನಿಪಪಾತ ಭೂಮೌ

ನಿದರ್ಶಯನ್ ಸ್ವಾಂ ಪ್ರಕೃತಿಂ ಕಪೀನಾಮ್ || (೫.೧೦.೫೪)

ಅವನೊಮ್ಮೆಲೇ ಬಾಲವನ್ನಪ್ಪಳಿಸಿ, ಹಾರಿಸಿ, ಅದಕ್ಕೆ ಮುತ್ತುಕೊಟ್ಟನು! ಉಲ್ಲಾಸದಿಂದ ಹಾಡುತ್ತ, ಹಾರುತ್ತ ಕುಣಿದಾಡಿದನು! ಕಂಬಗಳನ್ನೇರಿ ಧುಮುಕಿದನು! ಹೀಗೆ ತನ್ನ ಕಪಿಸ್ವಭಾವವನ್ನು ಚೆನ್ನಾಗಿ ತೋರಿದನು.

ಇಲ್ಲಿಯ ಪ್ರತಿಯೊಂದು ವಿವರಗಳೂ ತಮ್ಮಂತೆ ರೋಚಕವಾಗಿವೆ. ವಿಶೇಷತಃ ಬಾಲಕ್ಕೆ ಮುತ್ತನ್ನಿತ್ತದ್ದಂತೂ ಮಹರ್ಷಿಗಳ ಪ್ರಕೃತಿಪರಿಶೀಲನೆಗೆ ನೀಡಿದ ಪರಮಾರ್ಘ್ಯ.

ಮಧುವನಧ್ವಂಸಪ್ರಸಂಗದಲ್ಲಿ ಆದಿಕವಿಗಳ ವಿನೋದವಾಣಿಗೆ ಮಿಗಿಲಾದ ಅವಕಾಶ. ಮಧುಪಾನ ಮಾಡಿ ಮತ್ತರಾಗಿ ಮಾರ್ಮಲೆತ ಕಪಿಗಳ ಕೋಲಾಹಲವನ್ನು ಅವರು ಸ್ವಭಾವೋಕ್ತಿಯಲ್ಲಿ ಹಿಡಿದಿಟ್ಟ ಪರಿ ಅನಿತರಸಾಧಾರಣ:

ಗಾಯಂತಿ ಕೇಚಿತ್ಪ್ರಣಮಂತಿ ಕೇಚಿ-

ನ್ನೃತ್ಯಂತಿ ಕೇಚಿತ್ಪ್ರಹಸಂತಿ ಕೇಚಿತ್ |

ಪತಂತಿ ಕೇಚಿದ್ವಿಚರಂತಿ ಕೇಚಿ-

ತ್ಪ್ಲವಂತಿ ಕೇಚಿತ್ಪ್ರಲಪಂತಿ ಕೇಚಿತ್ ||

ಪರಸ್ಪರಂ ಕೇಚಿದುಪಾಶ್ರಯಂತೇ

ಪರಸ್ಪರಂ ಕೇಚಿದುಪಾಕ್ರಮಂತೇ |

ಪರಸ್ಪರಂ ಕೇಚಿದುಪಬ್ರುವಂತೇ

ಪರಸ್ಪರಂ ಕೇಚಿದುಪಾರಮಂತೇ ||

ದ್ರುಮಾದ್ದ್ರುಮಂ ಕೇಚಿದಭಿದ್ರವಂತಿ

ಕ್ಷಿತೌ ನಗಾಗ್ರಾನ್ನಿಪತಂತಿ ಕೇಚಿತ್ |

ಮಹೀತಲಾತ್ಕೇಚಿದುದೀರ್ಣವೇಗಾ

ಮಹಾದ್ರುಮಾಗ್ರಾಣ್ಯಭಿಸಂಪತಂತಿ ||

ಗಾಯಂತಮನ್ಯಃ ಪ್ರಹಸನ್ನುಪೈತಿ

ಹಸಂತಮನ್ಯಃ ಪ್ರರುದನ್ನುಪೈತಿ |

ರುದಂತಮನ್ಯಃ ಪ್ರಣದನ್ನುಪೈತಿ

ನದಂತಮನ್ಯಃ ಪ್ರಣುದನ್ನುಪೈತಿ || (೫.೬೧.೧೪-೧೭)

ಅತ್ಯರ್ಥಂ ಚ ಮದಗ್ಲಾನಾಃ ಪರ್ಣಾನ್ಯಾಸ್ತೀರ್ಯ ಶೇರತೇ | (೫.೬೨.೧೧)

ಜಾನುಭಿಸ್ತು ಪ್ರಕೃಷ್ಟಾಶ್ಚ ದೇವಮಾರ್ಗಂ ಚ ದರ್ಶಿತಾಃ | (೫.೬೨.೧೬)

ವಿಮದಾನುತ್ಥಿತಾನ್ ಸರ್ವಾನ್ಮೇಹಮಾನಾನ್ಮಧೂದಕಮ್ | (೫.೬೪.೪)

ಆ ಕಪಿಗಳಲ್ಲಿ ಕೆಲವರು ಹಾಡುವರು, ಕೆಲವು ಕೈಮುಗಿಯುವರು, ಕೆಲವರು ಕುಣಿಯುವರು, ಕೆಲವರು ಕಿಲಕಿಲ ನಗುವರು, ಕೆಲವರು ಜಾರುವರು, ಕೆಲವರು ಓಡುವರು, ಕೆಲವರು ನೆಗೆಯುವರು, ಕೆಲವರು ಹಲುಬುವರು. ಕೆಲವರು ಪರಸ್ಪರ ಅಪ್ಪಿಕೊಳ್ಳುವರು, ಇನ್ನು ಕೆಲವರು ಪರಸ್ಪರ ತಳ್ಳಿಕೊಳ್ಳುವರು, ಮತ್ತೆ ಕೆಲವರು ಹರಟಿಕೊಳ್ಳುವರು, ಹಲವರನ್ಯರು ಆಡಿಕೊಳ್ಳುವರು. ಮರದಿಂದ ಮರಕ್ಕೆ ಹಾರುವವರು ಕೆಲವರು, ಬೆಟ್ಟದಿಂದ ಬುವಿಗೆ ಬೀಳುವವರು ಕೆಲವರು, ನೆಲದಿಂದ ತರುಶಿಖರಕ್ಕೆ ನೆಗೆಯುವವರು ಕೆಲವರು. ಒಬ್ಬನು ಹಾಡುತ್ತಿದ್ದರೆ ಮತ್ತೊಬ್ಬನು ಗೇಲಿಯಾಗಿ ನಗುತ್ತ ಹತ್ತಿರಬರುವನು, ಮತ್ತೊಬ್ಬನು ನಗುತ್ತಿದ್ದರೆ ಇನ್ನೊಬ್ಬನು ಅಳುತ್ತ ಅವನ ಬಳಿ ಸಾರುವನು, ಯಾರೋ ಒಬ್ಬನು ಅಳುತ್ತಿದ್ದರೆ ಅವನತ್ತ ಮತ್ತೊಬ್ಬನು ಚೀತ್ಕರಿಸುತ್ತ ಸಾಗುವನು, ಮತ್ತಾರೋ ಅಬ್ಬರಿಸುತ್ತಿದ್ದರೆ ಇನ್ನೊಬ್ಬನು ಅವನನ್ನು ತಬ್ಬಿ ತಳುತ್ತ ನುಗ್ಗುವನು. ಮದ್ಯದ ಮದ ಮಿತಿಮೀರಿ ಕೆಲವರು ಮರಗಳ ಕೆಳಗೆ ಎಲೆ-ಚಿಗುರುಗಳನ್ನು ಹಾಸಿ ಹಾಯಾಗಿ ಮಲಗಿದರು. ಇನ್ನು ಕೆಲವರು ಅಡ್ಡ ಬಂದ ಕಾವಲಿನವರನ್ನು ಬೀಳಿಸಿ, ಮಂಡಿಗಳ ನಡುವೆ ಹಿಡಿದು, ತಮ್ಮ ಕುಂಡಿಗಳನ್ನು ತೋರಿಸಿದರು. ಮತ್ತೆ ಹಲವರು ಮಿತಿಮೀರಿ ಕುಡಿದು ಮೂತ್ರವಿಸರ್ಜನೆಯಲ್ಲಿಯೂ ಮದ್ಯವನ್ನು ಹೊರಚೆಲ್ಲುತ್ತಿದ್ದರು!

ಈ ಪರಿಯ ಮುಕ್ತೋನ್ಮತ್ತವರ್ಣನೆಗೆ ಮತ್ತಾವ ಭಾಷ್ಯ ಬೇಕು? ಮಹರ್ಷಿಗಳು ಮಾನವಸಾಮಾನ್ಯರ ಚೆಲ್ಲಾಟಗಳನ್ನಿರಲಿ, ಮಂಗಗಳ ಲೀಲೆಯನ್ನೂ ಮಿಗಿಲಾದ ಸೂಕ್ಷ್ಮತೆ-ಸಹೃದಯತೆಗಳಿಂದ ಕಂಡು ಕಾಣಿಸಬಲ್ಲ ಅಂತರ್ವಾಣಿ.[1] ಗಮನಿಸಿ: “ಸ್ವಭಾವೋಕ್ತಿಯ ಸಮಸ್ಯೆ”, ಗಣೇಶ್, ಆರ್. ಹದನು ಹವಣು. ಮಂಗಳೂರು: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ೨೦೧೮. ಪು. ೧೭೭-೨೫೧

To be continued.

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.