ವಾಲ್ಮೀಕಿಮುನಿಗಳ ಅಲಂಕಾರಸೌಭಾಗ್ಯ—ಸಮಾಸೋಕ್ತಿ, ಪರ್ಯಾಯೋಕ್ತ, ವಿನೋಕ್ತಿ, ಐತಿಹ್ಯ, ಯಥಾಸಂಖ್ಯಾ, ದೀಪಕ, ಸಹೋಕ್ತಿ

ಸಮಾಸೋಕ್ತಿಯು ಅಲಂಕಾರಪ್ರಪಂಚದ ಒಂದು ಸಾರ್ಥಕಸದಸ್ಯ. ಪ್ರಕೃತಾಪ್ರಕೃತವಸ್ತುಗಳಲ್ಲಿ ವಿಶೇಷಣೈಕ್ಯವನ್ನು ತರುವುದೇ ಇಲ್ಲಿಯ ಪ್ರಮುಖಸ್ವಾರಸ್ಯ. ಹೆಚ್ಚಿನ ಬಾರಿ ಇಂಥ ವಿಶೇಷಣೈಕ್ಯವು ಶ್ಲೇಷದಿಂದ ಸಿದ್ಧವಾಗುತ್ತದೆ. ಈ ಅಲಂಕಾರವು ಜಡವೂ ಅಚೇತನವೂ ಆದ ವಸ್ತು-ವಿಷಯಗಳ ವರ್ಣನಾವಸರದಲ್ಲಿ ಅವುಗಳ ಮೇಲೆ ಚೇತನತ್ವವನ್ನು ಆರೋಪಿಸುವ ಮೂಲಕ ಮತ್ತೂ ಆಕರ್ಷಕವಾಗುತ್ತದೆ. ಆದುದರಿಂದಲೇ ನಿಸರ್ಗವರ್ಣನೆಯಲ್ಲಿ ಈ ಅಲಂಕಾರದ ವಿನಿಯೋಗ ಮಿಗಿಲಾಗಿ ಸೊಗಯಿಸುತ್ತದೆ. ಈ ಬಗೆಯ ಸ್ವಾರಸ್ಯಕ್ಕೂ ಆದಿಕವಿಗಳೇ ಮಾರ್ಗದರ್ಶಿ.

ಕಿಷ್ಕಿಂಧಾಕಾಂಡದ ವರ್ಷಾಕಾಲವರ್ಣನೆಯ ಸಂದರ್ಭದಲ್ಲಿ ಮಹರ್ಷಿಗಳು ಮಳೆಯನ್ನು ಬಣ್ಣಿಸುತ್ತ ಅದು ನವಮಾಸ ಗರ್ಭವನ್ನು ಧರಿಸಿದ ನಭೋವನಿತೆಯು ಹೆರುವ ರಸಾಯನವೆಂದು ಒಕ್ಕಣಿಸುತ್ತಾರೆ:

ನವಮಾಸಧೃತಂ ಗರ್ಭಂ ಭಾಸ್ಕರಸ್ಯ ಗಭಸ್ತಿಭಿಃ |

ಪೀತ್ವಾ ರಸಂ ಸಮುದ್ರಾಣಾಂ ದ್ಯೌಃ ಪ್ರಸೂತೇ ರಸಾಯನಮ್ || (೪.೨೮.೩)   

ಕಡಲ ನೀರನ್ನು ಕುಡಿದು, ಸೂರ್ಯನ ಕಿರಣಗಳಿಂದ ಗರ್ಭವನ್ನು ತಳೆದ ಗಗನವನಿತೆಯ ಪ್ರಸೂತಿಚಿತ್ರಣವಿಲ್ಲಿ ಹೃದಯಂಗಮ. ವಿಶೇಷತಃ “ರಸ” ಮತ್ತು “ರಸಾಯನ”ಗಳೆಂಬ ಪದಗಳ ಶ್ಲೇಷ ಇಲ್ಲಿಯ ಸಮಾಸೋಕ್ತಿಗೆ ಜೀವ ತುಂಬಿದೆ. ಜೊತೆಗೆ ಮಳೆಮುಗಿಲುಗಳು ಒಂಬತ್ತು ತಿಂಗಳ ಕಾಲ ಆಗಸದಲ್ಲಿ ಕ್ರಮವಾಗಿ ರೂಪುಗೊಳ್ಳುವುದೂ ಅನಂತರ ಮೂರು ತಿಂಗಳು ಕರಗಿ ಇಳೆಗೆರಗುವುದೂ ಇಲ್ಲಿ ಅಭಿಪ್ರೇತವಾಗಿ ರಮಣೀಯನಿಸರ್ಗಚಿತ್ರಣವು ಮಾನುಷಸ್ಪಂದದಿಂದ ಮೈದುಂಬಿದೆ.

ಶರದ್ವರ್ಣನೆಯ ಸಂದರ್ಭದಲ್ಲಿ ಸಂಜೆಯು ಅನುರಾಗವತಿಯಾದ ಸುಂದರಿಯೆಂದು ರೂಪಿಸಿ, ಅವಳು ತನ್ನ ಇನಿಯನಾದ ಚಂದ್ರನ ಕಿರಣಕರಗಳಿಂದ ರೋಮಾಂಚಿತೆಯಾಗಿ ನಲಿದು ಕಣ್ಮಿಟಿಕಿಸುತ್ತಾ ಸ್ವಯಂ ಅಂಬರದಿಂದ ಜಾರಿಹೋಗುವ ಚಿತ್ರಣವನ್ನು ಕೊಟ್ಟಿರುವುದು ವಿದ್ವದ್ರಸಿಕಲೋಕಕ್ಕೆ ಶತಶತಮಾನಗಳಿಂದ ಸಂತಸವನ್ನಿತ್ತ ಸಂಗತಿ. ಇಲ್ಲಿಯ ಶಬ್ದಾರ್ಥಮೈತ್ರಿ ಮತ್ತು ಪ್ರತಿಪದಸಾರ್ಥಕ್ಯಗಳು ಪರಿಪೂರ್ಣತೆಯ ನಿಕಷವೇ ಆಗಿವೆ:  

ಚಂಚಚ್ಚಂದ್ರಕರಸ್ಪರ್ಶಹರ್ಷೋನ್ಮೀಲಿತತಾರಕಾ |

ಅಹೋ ರಾಗವತೀ ಸಂಧ್ಯಾ ಜಹಾತಿ ಸ್ವಯಮಂಬರಮ್ || (೪.೩೦.೪೫)   

ಈ ಶ್ಲೋಕದಲ್ಲಿ ಕರಸ್ಪರ್ಶ (ಕಿರಣಗಳ ಸ್ಪರ್ಶ, ಕೈಗಳ ಸ್ಪರ್ಶ), ಉನ್ಮೀಲಿತತಾರಕೆ (ತಾರೆಗಳ ತೋರಿಕೊಳ್ಳುವಿಕೆ, ಕಣ್ಪಾಪೆಯ ಅರಳುವಿಕೆ), ರಾಗವತೀ (ಸಂಜೆಗೆಂಪು, ಪ್ರಣಯವತೀ), ಅಂಬರ (ಆಗಸ, ವಸ್ತ್ರ) ಎಂಬ ಪದಗಳಲ್ಲಿ ಅನರ್ಘಭಾಸ್ವರಶ್ಲೇಷೆಯು ತನ್ನ ಕೃತಕೃತ್ಯತೆಯನ್ನು ಕಂಡಿದೆ.

* * *

ಪರ್ಯಾಯೋಕ್ತಾಲಂಕಾರವು ಸಂಗತಿಯೊಂದನ್ನು ಪ್ರಕಾರಾಂತರವಾಗಿ ಹೇಳುವ ಬಗೆ. ಈ ಪ್ರಕಾರಾಂತರವು ಮಿಗಿಲಾಗಿ ಪರಿಣಾಮಕಾರಿಯೆನಿಸಬೇಕೆಂಬುದು ಸ್ವಯಂಸಿದ್ಧನಿಯಮ. ಇದು ತುಂಬ ಪ್ರಖರವಾದ ಅಲಂಕಾರಗಳಲ್ಲೊಂದು. ವಕ್ರೋಕ್ತಿಯ ಜೀವಾಳವೇ ಇಲ್ಲಿದೆ. ಅಲ್ಲದೆ ಪ್ರಕಾರಾಂತರಕಥನದ ಮೂಲಕ ಸ್ಫುರಿಸುವ ಅಂಶವು ಧ್ವನಿಸ್ಪರ್ಶದಿಂದ ದೀಪ್ತವಾಗುವ ಕಾರಣ ಅಲಂಕಾರಗಳ ಅಲಂಕಾರತ್ವಕ್ಕೆ ಮೂಲವೆನಿಸಿದ ಗುಣೀಭೂತವ್ಯಂಗ್ಯವೇ ಇಲ್ಲಿ ನೆಲೆಸುತ್ತದೆ. ಅನುದಿನದ ಮಾತುಗಳಲ್ಲಿಯೂ ಸುಳಿದುಹೋಗುವ ಮೊನೆ-ಮಿನುಗುಗಳಲ್ಲಿ ಪರ್ಯಾಯೋಕ್ತದ ಪಾರಮ್ಯವಿರುತ್ತದೆ.

ಮಳೆಗಾಲ ಮುಗಿದರೂ ನೆರವನ್ನೀಯುವುದರಲಿ, ತನ್ನತ್ತ ತಿರುಗಿಯೂ ನೋಡದ ಸುಗ್ರೀವನ ವರ್ತನೆಗೆ ರೋಸಿದ ರಾಮನು ತಮ್ಮನ ಮೂಲಕ ಆತನಿಗೆ ಕಳುಹಿದ ಎಚ್ಚರಿಕೆ ರಾಮಾಯಣದ ಪ್ರಸಿದ್ಧಪದ್ಯಗಳಲ್ಲೊಂದು:

ನ ಚ ಸಂಕುಚಿತಃ ಪಂಥಾ ಯೇನ ವಾಲೀ ಹತೋ ಗತಃ |

ಸಮಯೇ ತಿಷ್ಠ ಸುಗ್ರೀವ ಮಾ ವಾಲಿಪಥಮನ್ವಗಾಃ || (೪.೩೦.೮೧)   

ಯಾವ ಹಾದಿಯಲ್ಲಿ ಅಳಿದ ವಾಲಿಯು ಹೋದನೋ ಅದಿನ್ನೂ ಮುಚ್ಚಿಹೋಗಿಲ್ಲ. ಎಲೈ ಸುಗ್ರೀವ! ಈ ವಾಸ್ತವವನ್ನರಿತು ಸಮಯಕ್ಕೆ (ಕಾಲ ಮತ್ತು ಕರಾರು) ಬದ್ಧನಾಗಿದ್ದು ಬದುಕು; ವಾಲಿಯ ಹಾದಿಯನ್ನು ಹಿಡಿಯಬೇಡವೆಂದು ರಾಮನು ಹೇಳುವ ಮಾತು ಇಂದಿಗೂ ಮಾಸದ ಮೊನೆಯಾದ ಕಟಕಿ, ಹಸನಾದ ಕವಿತೆ. ಇಲ್ಲಿಯ “ಸಮಯ”ಶಬ್ದದ ಶ್ಲೇಷೆಯಾಗಲಿ, ಮಧ್ಯಮಪುರುಷೈಕವಚನದ ಕ್ರಿಯಾಪದಗಳಾಗಲಿ ಎಣೆಯಿಲ್ಲದ ವ್ಯಂಜಕಸಾಮಗ್ರಿಗಳೆನಿಸಿವೆ. ಜೊತೆಗೆ ದ್ವಿತೀಯಚರಣದ ಎರಡೆರಡೇ ವರ್ಣಗಳ ಪದಗಳು ತಮ್ಮ ಅಸಂಯುಕ್ತಾಕ್ಷರತೆಯಿಂದ ವ್ಯಂಜಿಸಿರುವ ಕಾವು-ಕೆಚ್ಚು-ಅಬ್ಬರ-ನಿಬ್ಬರಗಳು ತುಂಬ ಗಮನಾರ್ಹ.

ರಾವಣನೊಡನೆ ಸೆಣಸುತ್ತ ಹನೂಮಂತನು ಆತನನ್ನು ಬರಿಗೈಗಳಿಂದಲೇ ಕೊಲ್ಲುವೆನೆಂಬುದನ್ನು ಪ್ರಕಾರಾಂತರವಾಗಿ ಹೇಳುವ ಬಗೆ ಸೊಗಸಾಗಿದೆ. ವೀರರಸದ ಅಮಿಶ್ರಿತಪಾರಮ್ಯವನ್ನೇ ನಾವಿಲ್ಲಿ ಆಸ್ವಾದಿಸಬಹುದು:

ಏಷ ಮೇ ದಕ್ಷಿಣೋ ಬಾಹುಃ ಪಂಚಶಾಖಃ ಸಮುದ್ಯತಃ |

ವಿಧಮಿಷ್ಯತಿ ತೇ ದೇಹಾದ್ಭೂತಾತ್ಮಾನಂ ಚಿರೋಷಿತಮ್ || (೬.೫೯.೫೬)   

ಇದೋ ನನ್ನ ಬಿಚ್ಚಿದ ಬಲದೋಳನ್ನೆತ್ತಿದ್ದೇನೆ. ಇದು ನಿನ್ನೊಡಲಿನಲ್ಲಿ ನಿಡುಗಾಲದಿಂದಿರುವ ಆತ್ಮವನ್ನು ಹೊರದಬ್ಬುವುದು! ಎಂದು ಹನೂಮಂತನು ಹೇಳುವಲ್ಲಿ ತೋರುವ ವೈದಾಂತಿಕಗಾಂಭೀರ್ಯಾಭಾಸವು ನಿಜಕ್ಕೂ ಮಾರ್ಮಿಕ. ಜೊತೆಗೆ “ವಿಧಮಿಷ್ಯತಿ” ಎಂಬ ಕ್ರಿಯಾಪದದ ಸ್ಥೈರ್ಯ-ಸಾಮರ್ಥ್ಯಗಳೂ ಗಮನಾರ್ಹ.   

* * *

ವಿನೋಕ್ತ್ಯಲಂಕಾರವು ಅದೊಂದು ಬಗೆಯ ಸರಳಸಾಮಾನ್ಯವಾದ ವಾಗ್ವಿಚ್ಛಿತ್ತಿ. ನೈಷೇಧಿಕರೂಪದಿಂದಲೇ ಸ್ವಾರಸ್ಯವೊಂದನ್ನು ಇದು ಹೇಳಲು ಹವಣಿಸುತ್ತದೆ. ಇದನ್ನೂ ಅದರ ಕೈಸಾಗುವ ಮಟ್ಟಿಗೆ ಆದಿಕವಿಗಳು ದುಡಿಸಿಕೊಂಡಿದ್ದಾರೆ.

ಅಯೋಧ್ಯಾಜನತೆಯ ಸಿರಿ-ಸಂಪದಗಳನ್ನು ಬಣ್ಣಿಸುವಾಗ ಸಾಕೇತವಾಸಿಗಳ ಪೈಕಿ ಯಾರೊಬ್ಬನೂ ಮುಕುಟವಿಡದೆ, ಕುಂಡಲ ತೊಡದೆ, ಹಾರ ಧರಿಸಿದೆ, ಚಂದನವನ್ನು ತೊಡೆಯದೆ, ಮಿಗಿಲಾದ ಭೋಗರಾಸಿಕ್ಯವಿಲ್ಲದೆ ಇರಲಿಲ್ಲವಂತೆ:

ನಾಕುಂಡಲೀ ನಾಮಕುಟೀ ನಾಸ್ರಗ್ವೀ ನಾಲ್ಪಭೋಗವಾನ್ |

ನಾಮೃಷ್ಟೋ ನಾನುಲಿಪ್ತಾಂಗೋ ನಾಸುಗಂಧಶ್ಚ ವಿದ್ಯತೇ || (೧.೬.೧೦)

ಇದೇ ಅಲಂಕಾರವನ್ನು ಬಳಸಿ ಅಯೋಧ್ಯಾಪೌರರನ್ನು ಮತ್ತೂ ವರ್ಣಿಸಿರುವುದನ್ನು ಮುಂದಿನ ಶ್ಲೋಕಗಳಲ್ಲಿ ಕೂಡ ಆಸಕ್ತರು ಗಮನಿಸಿಕೊಳ್ಳಬಹುದು (೧.೬.೧೧-೧೨).

ರಾಮನು ರಥಾರೋಹಿಯಾಗಿ ದಶರಥನ ಮನೆಗೆ ತೆರಳುತ್ತಿದ್ದಾಗ ಪಟ್ಟಾಭಿಷಿಕ್ತನಾಗಲಿದ್ದ ಆತನ ಕಣ್ಣಿಗೆ ಬೀಳದವರೂ ಅವನನ್ನು ಕಣ್ತುಂಬಿಸಿಕೊಳ್ಳದವರೂ ಅಯೋಧ್ಯೆಯಲ್ಲಿ ಯಾರೊಬ್ಬರೂ ಇರಲಿಲ್ಲ; ಅಂಥವರಿದ್ದಲ್ಲಿ ಅವರು ನಿಂದ್ಯರೂ ಆಗುತ್ತಿದ್ದರು, ತಮ್ಮನ್ನು ತಾವು ನಿಂದಿಸಿಕೊಳ್ಳುತ್ತಲೂ ಇದ್ದರೆಂದು ಮಹರ್ಷಿಗಳು ಹೇಳುವುದು ತುಂಬ ಪರಿಣಾಮಕಾರಿ. ಪ್ರಾಯಶಃ ವಿನೋಕ್ತ್ಯಲಂಕಾರಕ್ಕೇ ಇದು ಭೂಷಣ:

ಯಶ್ಚ ರಾಮಂ ನ ಪಶ್ಯೇತ್ತು ಯಂ ಚ ರಾಮೋ ನ ಪಶ್ಯತಿ | (೨.೧೭.೧೪)

ನಿಂದಿತಃ ಸ ಭವೇಲ್ಲೋಕೇ ಸ್ವಾತ್ಮಾಪ್ಯೇನಂ ವಿಗರ್ಹತೇ | (೨.೧೭.೧೫)

ತುಂಬ ಸೀಮಿತವಾದ ಚೌಕಟ್ಟಿರುವಂತೆ ತೋರುವ ಈ ಅಲಂಕಾರದಲ್ಲಿಯೂ ಮಹರ್ಷಿಗಳು ಸಾಧಿಸಿದ ವಿಕ್ರಮವನ್ನು ಕಂಡಾಗ “ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ” ಎಂಬ ಮಾತು ನೆನಪಾಗದಿರದು.

* * *

ಐತಿಹ್ಯಾಲಂಕಾರವು ಲೋಕಪ್ರಸಿದ್ಧವಾದ ಗಾದೆ, ಹೇಳಿಕೆ, ಸಾಮತಿ ಮುಂತಾದುವುಗಳನ್ನು ಬಳಸಿಕೊಂಡು ಬೆಳಗುವ ನುಡಿಬೆಡಗು. ಇದಕ್ಕೂ ಲೋಕೋಕ್ತ್ಯಲಂಕಾರಕ್ಕೂ ವ್ಯತ್ಯಾಸ ತುಂಬ ಕಡಮೆ. ಐತಿಹ್ಯವು ಜನಶ್ರುತಿಯೆಂದಾದರೆ, ಲೋಕೋಕ್ತಿಯು ಗಾದೆಮಾತೆನ್ನಬೇಕು.

ಅಶೋಕವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದ ಸೀತೆಯನ್ನು ಕಂಡು ಆಕೆಯನ್ನು ರಾಮವಾರ್ತೆಯಿಂದ ಮತ್ತೆ ಜೀವನ್ಮುಖಿಯಾಗಿಸಿದ ಹನೂಮಂತನು ಅವಳಿಗೆ ಧೈರ್ಯ ಹೇಳುವ ಮಾತಿದು:

ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮೇ |

ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ || (೫.೩೪.೬)

ಅಮ್ಮಾ, ಇದೊಂದು ಮಂಗಳಕರವಾದ ಗಾದೆಮಾತು ನನಗೆ ಸ್ಫುರಿಸುತ್ತಿದೆ: ಭರವಸೆ ನೀಗದೆ ಬಾಳಿದಲ್ಲಿ ನೂರಾರು ವರ್ಷಗಳು ಉರುಳಿದ ಬಳಿಕವಾದರೂ ಆನಂದವು ನಮ್ಮ ಹುಡುಕಿಕೊಂಡು ಬರುತ್ತದೆಂಬ ಮಾರುತಿಯ ಮಾತು ಎಲ್ಲರ ಪಾಲಿಗೂ ಆಶಾಕಿರಣ.

ಈ ಮಾತನ್ನು ಮುಂದೆ ಭರತನೂ ಆಡುತ್ತಾನೆ (೬.೧೨೬.೨). ಇದು ಹನುಮನೊಡನೆಯೇ ಅವನು ಹಂಚಿಕೊಂಡ ನುಡಿಯೆಂಬುದೂ ಗಮನಾರ್ಹ. ಈ ಶ್ಲೋಕವನ್ನು “ಕುವಲಯಾನಂದ”ವು ಐತಿಹ್ಯಾಲಂಕಾರಕ್ಕೆ ಉದಾಹರಣೆಯಾಗಿ ನೀಡಿದೆ.

ಅಶೋಕವನಧ್ವಂಸನವನ್ನು ಮಾಡುವ ಹನೂಮಂತನನ್ನು ಕಂಡು ಅಂಜಿ ಸೀತೆಯನ್ನೇ ಪ್ರಶ್ನಿಸುವ ರಾಕ್ಷಸಿಯರಿಗೆ ಆಕೆಯು ಜಾಣ್ಮೆಯಿಂದ ಹಾವಿನ ಹೆಜ್ಜೆಯನ್ನು ಹಾವೇ ಅರಿಯುವಂತೆ ಈ ಎಲ್ಲ ಮಾಯೆಯನ್ನು ನೀವೇ ಅರಿಯಬೇಕೆಂದು ಹೇಳಿ ಜಾರಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಆದಿಕವಿಗಳು ಬಳಸಿಕೊಳ್ಳುವ ಲೋಕೋಕ್ತಿಯು ಗಮನಾರ್ಹ:

ಅಹಿರೇವ ಹ್ಯಹೇಃ ಪಾದಾನ್ ವಿಜಾನಾತಿ ನ ಸಂಶಯಃ | (೫.೪೨.೯)

ರಾವಣನ ಮರಣದ ಬಳಿಕ ವಿಲಪಿಸುತ್ತಿದ್ದ ಮಂದೋದರಿಯು ಪತಿವ್ರತೆಯರ ಕಣ್ಣೀರು ಬಿದ್ದ ನಾಡಿನಲ್ಲಿ ನೆಮ್ಮದಿಯಿರುವುದಿಲ್ಲವೆಂಬ ನಾಣ್ನುಡಿ ಸತ್ಯ; ಇದು ಪ್ರಾಯಶಃ ತನ್ನ ಪತಿಯ ಸಾವಿಗೆ ಹೇತುವಾಯಿತೆಂದು ಹಲುಬುವಳು:

ಪ್ರವಾದಃ ಸತ್ಯ ಏವಾಯಂ ತ್ವಾಂ ಪ್ರತಿ ಪ್ರಾಯಶೋ ನೃಪ |

ಪರಿವ್ರತಾನಾಂ ನಾಕಸ್ಮಾತ್ಪತಂತ್ಯಶ್ರೂಣಿ ಭೂತಲೇ || (೬.೧೧೪.೬೭)

* * *

ಯಥಾಸಂಖ್ಯಾಲಂಕಾರವನ್ನು ಹಲವು ಕರ್ತೃ-ಕ್ರಿಯಾವಾಚಕಗಳ ಸಮಾನಾನುಪೂರ್ವಿಯೆನ್ನಬಹುದು. ಇದೊಂದು ಬಗೆಯಲ್ಲಿ ಶಾಲಾಪರೀಕ್ಷೆಗಳ ಪ್ರಶ್ನಪತ್ರಿಕೆಗಳಲ್ಲಿ ಎದುರಾಗುವ “ಹೊಂದಿಸಿ ಬರೆಯಿರಿ” (Match the Following) ಎಂಬ ಜಾಡಿನದು. ಇದರ ಅಲ್ಪಚಾರುತೆಯ ಕಾರಣದಿಂದಲೇ ಕುಂತಕನು ಇದನ್ನೊಂದು ಅಲಂಕಾರವಾಗಿಯೇ ಲೆಕ್ಕಿಸುವುದಿಲ್ಲ. ಆಧುನಿಕರಾದ ವಿ. ರಾಘವನ್ನಂಥವರೂ ಈ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಆದರೆ ಸಮಾನಶ್ರುತಿಯ ಪದಗಳು ಸೇರಿಕೊಂಡಾಗ ಯಥಾಸಂಖ್ಯಕ್ಕೆ ಅಂದ ಬಾರದಿರದು. ಆದಿಕವಿಗಳು ಇಂಥ ಸಂನಿವೇಶಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆಯುತ್ತಾರೆ.

ರಾಮ-ಸುಗ್ರೀವರ ಸಖ್ಯವಾದೊಡನೆ ವಾಲಿ-ರಾವಣ-ಮೈಥಿಲಿಯರ ಹೊನ್ನಿನಂತೆಯೂ ಬೆಂಕಿಯಂತೆಯೂ ಕಮಲದಂತೆಯೂ ಇರುವ ಎಡಗಣ್ಣುಗಳು ಮಿಡುಕಿದವೆಂದು ಕ್ರಮವಾಗಿ ಸಮೀಕರಿಸುವಾಗಲೇ ಇದು ಪುರುಷರಿಗೆ ಅಪಶಕುನ, ಸ್ತ್ರೀಯರಿಗೆ ಶುಭಶಕುನವೆಂದು ಬೆಳೆದುಬಂದ ನಂಬಿಕೆಯನ್ನು ಆಶ್ರಯಿಸಿದ ಕಾರಣ ಮತ್ತಷ್ಟು ಚಮತ್ಕಾರಕಾರಿಯಾಗಿದೆ. ಹೀಗೆ ಸಾಮಾನ್ಯದ ಅಲಂಕಾರಕ್ಕೂ ಅಂದವನ್ನು ಕಲ್ಪಿಸಬಲ್ಲ ಬಲ್ಮೆ ವಾಲ್ಮೀಕಿಮುನಿಗಳದು:

ಸೀತಾಕಪೀಂದ್ರಕ್ಷಣದಾಚರಾಣಾಂ

ರಾಜೀವಹೇಮಜ್ವಲನೋಪಮಾನಿ |

ಸುಗ್ರೀವರಾಮಪ್ರಣಯಪ್ರಸಂಗೇ

ವಾಮಾನಿ ನೇತ್ರಾಣಿ ಸಮಂ ಸ್ಫುರಂತಿ || (೪.೫.೩೨)

ಇಲ್ಲಿ “ಸ್ಫುರಂತಿ” ಎಂಬ ಒಂದೇ ಕ್ರಿಯಾಪದದಲ್ಲಿ ಎಲ್ಲವನ್ನೂ ನಿರ್ವಹಿಸಿದ ಕಾರಣ ಇದು ಸಹೋಕ್ತ್ಯಲಂಕಾರವೂ ಆಗಿದೆ. ಅನೇಕಕ್ರಿಯೆಗಳಿಗೆ ಒಂದೇ ವಾಚಕವನ್ನು ಬಳಸಿ ನಿರ್ವಹಿಸಿದಾಗ ಸಹೋಕ್ತ್ಯಲಂಕಾರವು ಸಿದ್ಧಿಸುತ್ತದೆ. ಹೀಗೆ ಹಲವು ಚಮತ್ಕೃತಿಗಳ ಕಾರಣ ಪ್ರಕೃತಪದ್ಯದಲ್ಲಿ ಸೊಗಸು ಮಿಗಿಲೆನಿಸಿದೆ.

ಇದೇ ಅಲಂಕಾರದ ಮತ್ತೊಂದು ಮಾದರಿಯನ್ನು ಮಳೆಗಾಲದ ಬಣ್ಣನೆಯಲ್ಲಿ ಕಾಣಬಹುದು. ಇಲ್ಲಿರುವುದು ಸಾಮಾನ್ಯವಾದ ಜೋಡಣೆ. ಇದು ಅಪ್ಪಟ ಯಥಾಸಂಖ್ಯೆ:

ವಹಂತಿ ವರ್ಷಂತಿ ನದಂತಿ ಭಾಂತಿ

ಧ್ಯಾಯಂತಿ ನೃತ್ಯಂತಿ ಸಮಾಶ್ವಸಂತಿ |

ನದ್ಯೋ ಘನಾ ಮತ್ತಗಜಾ ವನಾಂತಾಃ

ಪ್ರಿಯಾವಿಹೀನಾಃ ಶಿಖಿನಃ ಪ್ಲವಂಗಾಃ || (೪.೨೮.೨೭)

ಮಳೆಗಾಲದಲ್ಲಿ ನದಿಗಳು, ಮುಗಿಲುಗಳು, ಮತ್ತೇಭಗಳು, ಗಹನಾರಣ್ಯಗಳು, ವಿರಹಿಗಳು, ನವಿಲುಗಳು ಮತ್ತು ಕಪ್ಪೆಗಳು ಕ್ರಮವಾಗಿ ಹರಿಯುತ್ತ, ಸುರಿಯುತ್ತ, ಮೊರೆಯುತ್ತ, ಹೊಳೆಯುತ್ತ, ಹಲುಬುತ್ತ, ನಲಿಯುತ್ತ, ನೆಮ್ಮದಿವಡೆಯುತ್ತಿವೆ.

ಇಲ್ಲಿಯ ಸಮಾನಶ್ರುತಿಯ ಪದಗಳು ಮತ್ತು ಲೋಕಪರಿಶೀಲನೆ ಸ್ವಾರಸ್ಯವನ್ನು ಹೆಚ್ಚಿಸಿವೆ. ಈ ಪದ್ಯವೇ ಕಾಳಿದಾಸನ ಋತುಸಂಹಾರಕಾವ್ಯದಲ್ಲಿ ಬಂದಿರುವುದು ಗಮನಾರ್ಹ.

* * *

ದೀಪಕಾಲಂಕಾರವು ಪ್ರಕೃತಾಪ್ರಕೃತಗಳ ಧರ್ಮೈಕ್ಯದ ಮೇಲೆ ನಿಂತಿದೆಯೆಂದು ಶಾಸ್ತ್ರೀಯನಿರ್ವಚನ. ಇದೂ ಸಾದೃಶ್ಯಮೂಲಾಲಂಕಾರವೇ. ಆದರೆ ಇಲ್ಲಿಯ ಸಾದೃಶ್ಯವು ಧ್ವನಿತವಾಗುವುದೊಂದು ಸ್ವಾರಸ್ಯ.

ಮಳೆಗಾಲವು ಮುಗಿಯುವುದನ್ನೂ ಸುಗ್ರೀವನ ನೆರವು ಬರುವುದನ್ನೂ ಎದುರುನೋಡುತ್ತಿದ್ದ ರಾಮನು ತಾನೀಗ ನದಿಗಳ ಮತ್ತು ಸುಗ್ರೀವನ ಪ್ರಸನ್ನತೆಗಾಗಿ ಕಾದುನಿಂತಿದ್ದೇನೆಂದು ಹೇಳುವಲ್ಲಿ ಪ್ರಸನ್ನತೆಯೆಂಬ ಧರ್ಮೈಕ್ಯವು ದೀಪಕಾಲಂಕಾರವನ್ನು ಸಾಧಿಸಿದೆ. ಅಲ್ಲದೆ ಇದು ಶ್ಲೇಷಮೂಲದ್ದಾದ ಕಾರಣ ಚಮತ್ಕಾರವು ಮತ್ತೂ ಹೆಚ್ಚು:

ಸುಗ್ರೀವಸ್ಯ ನದೀನಾಂ ಚ ಪ್ರಸಾದಮನುಪಾಲಯನ್ | (೪.೨೭.೪೪)

* * *

ಈ ಮುನ್ನವೇ ಗಮನಿಸಿದಂತೆ ಸಹೋಕ್ತ್ಯಲಂಕಾರವು ಸಮಾನಕ್ರಿಯಾವಾಚಕದ ಮೂಲಕ ಉನ್ಮೀಲಿಸುತ್ತದೆ.

ಮಳೆಗಾಲದಲ್ಲಿ ಹಾದಿಗಳೆಲ್ಲ ನೀರಿನಲ್ಲಿ ಮುಳುಗಿ, ಯುದ್ದೋನ್ಮತ್ತರಾದ ರಾಜರ ಸೈನ್ಯಗಳಿಗೆ ಸಂಚಾರವಿಲ್ಲದೆ ಸಂಪರ್ಕಗಳೂ ವೈರಗಳೂ ಸಮಾನವಾಗಿ ಸ್ಥಗಿತವಾದುವೆಂಬ ಶ್ಲೋಕದಲ್ಲಿ ಸಹೋಕ್ತಿಯ ಸೊಗಸನ್ನು ಕಾಣಬಹುದು:

ವೃತ್ತಾ ಯಾತ್ರಾ ನರೇಂದ್ರಾಣಾಂ ಸೇನಾ ಪಥ್ಯೇವ ವರ್ತತೇ |

ವೈರಾಣಿ ಚೈವ ಮಾರ್ಗಾಶ್ಚ ಸಲಿಲೇನ ಸಮೀಕೃತಾಃ || (೪.೨೮.೫೩)

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.