ಮಹತ್ತಿನ ಉಪಾಸನೆ - ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ - 1
ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ‘ಮಹಾತ್ರಯ’ದ ಪ್ರಸ್ತಾವ ಬಂದಾಗಲೆಲ್ಲ ವೇದಮಂತ್ರವೊಂದರ ಭಾಗ ನನಗೆ ನೆನಪಾಗುತ್ತದೆ - “ಮಹೋ ದೇವೋ ಮರ್ತ್ಯಾನಾವಿವೇಶ.” ಮಹಿಮಶಾಲಿಯಾದ ಭಗವಂತ ಮನುಷ್ಯರಲ್ಲಿ ಪ್ರವೇಶಿಸಿದನು ಎಂದು ಅದರ ತಾತ್ಪರ್ಯ. ಸಾಮಾನ್ಯವಾಗಿ ಮನುಷ್ಯಬುದ್ಧಿಗೆ ನಿಲುಕದ, ಅದನ್ನೂ ಮೀರಿದ ಸಂಗತಿಗಳನ್ನು ವಿವರಿಸುವಾಗ ಇದನ್ನು ಉದ್ಧರಿಸಲಾಗುತ್ತದೆ. ಪ್ರಕೃತ ದೇವುಡು ಅವರ ಮೂರು ಕಾದಂಬರಿಗಳನ್ನು ಕುರಿತು ಚಿಂತಿಸುವಾಗ ಈ ಮಂತ್ರವೇ ನಮಗೆ ದಿಕ್ಕು. ಮನುಷ್ಯಮಾತ್ರರಿಂದ ಇಂಥ ಸೃಷ್ಟಿ ಅಸಾಧ್ಯವಷ್ಟೆ! ಈ ಹಿನ್ನೆಲೆಯಲ್ಲಿ ನರಸಿಂಹಶಾಸ್ತ್ರಿಗಳು ‘ದೇವುಡು’ ಮನೆತನದಲ್ಲಿ ಹುಟ್ಟಿದುದು ಅಚ್ಚರಿಯೆನಿಸದು.