ಅದ್ವೈತಂ ಸುಖದುಃಖಯೋಃ - 2
ಮಾಸ್ತಿ ಅವರು ಕಾಣಿಸಿದ ಗಂಡ-ಹೆಂಡಿರು ವಿಪ್ರಕುಲದವರು. ಅವರಿಬ್ಬರ ಸಂಸ್ಕಾರಪರಿಪಾಕಕ್ಕೆ ಆ ಕಾಲದಲ್ಲಿ ಈ ವರ್ಣಕ್ಕೆ ಸಹಜವಾಗಿಯೇ ಒದಗಿಬರುತ್ತಿದ್ದ ಅರಿವು-ಮನ್ನಣೆಗಳ ಅನುಕೂಲತೆಯೂ ನೆರವಾಗಿದೆ ಎನ್ನಬಹುದು. ಆದರೆ ನಾವೀಗ ನೋಡಲಿರುವ ಶಿವರಾಮ ಕಾರಂತರ ಕಲಾಸೃಷ್ಟಿಯ ಎರಡು ಗೌಣಪಾತ್ರಗಳಾದ ಪಮ್ಮ ಮತ್ತು ದುಗ್ಗಿಯರಿಗೆ ಇಂಥ ಸೌಲಭ್ಯವೂ ಇಲ್ಲ. ‘ಮೈ ಮನಗಳ ಸುಳಿಯಲ್ಲಿ’ ಎಂಬ ರಸೋಜ್ಜ್ವಲ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಈ ಜೋಡಿ ಸಿರಿ-ಅರಿಮೆಗಳ ಸಮೃದ್ಧಿಗಿರಲಿ, ಸಾಮಾನ್ಯದ ಹೊತ್ತುಹೊತ್ತಿನ ತುತ್ತಿಗೂ ಕಷ್ಟ ಪಡಬೇಕಿರುವ ಜೀವಗಳು. ಕಾರಂತರೇ ಹೇಳುವಂತೆ ಅವರು “ಮುಟ್ಟಾಳುಗಳಲ್ಲ.” ಅಂದರೆ, ಅಸ್ಪೃಶ್ಯತೆಯ ದಬ್ಬಾಳಿಕೆಯಲ್ಲಿ ನಲುಗಿದ ಸಮುದಾಯದವರು; ಕುಗ್ರಾಮಗಳಲ್ಲಿಯೋ ಅವುಗಳಾಚಿನ ಕಾಡು-ಮೇಡುಗಳಲ್ಲಿಯೋ ಪ್ರಾಯಶಃ ಬಾಳನ್ನು ಕಳೆಯಬೇಕಾದ ಹತಭಾಗ್ಯರು.