ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 1
‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್‌ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು.