ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 2)

ಭೀಮ ಹುಟ್ಟಿನಿಂದಲೇ ಮಹಾಬಲಶಾಲಿ, ವಜ್ರದೇಹಿ, ಉಳಿದವರಿಗಿಂತಲೂ ಸಂಪೂರ್ಣ ಭಿನ್ನ ಎಂದು ಚಿತ್ರಿಸುತ್ತಾನೆ ಕುಮಾರವ್ಯಾಸ.  ಭೀಮನ ಜನನದ ನಂತರ ಕುಂತಿ ಇಂದ್ರನನ್ನು ಜಪಿಸಿ, ಅರ್ಜುನನನ್ನು ಪಡೆಯುತ್ತಾಳೆ.  “ಲೋಕತ್ರಿತ್ರಯದಲಿ ಬಲುಗೈ ಕಣಾ, ಪಶುಪತಿಗೆ, ಪುರುಷೋತ್ತಮಗೆ ಸರಿ ಮಿಗಿಲೆಂಬ…” (ಆದಿಪರ್ವ 4.60), ಸುತನನಿತ್ತೆನು ಎಂದು ಹೇಳಿ ಇಂದ್ರ ಹಿಂದಿರುಗುತ್ತಾನೆ.  ಅರ್ಜುನ ಜನಿಸಿದಾಗ ದೇವದುಂದುಭಿ ಮೊಳಗಿ, ಕುಸುಮಾವಳಿಯ ಮಳೆ ಸುರಿದು ಪ್ರಕೃತಿಯಲ್ಲಿ ಶುಭ ಶಕುನಗಳಾಗುತ್ತವೆ.  ಅರ್ಜುನನ ಜನನಕ್ಕೆ ಮೂರು ತಿಂಗಳ ಮುನ್ನ ಶ್ರೀ ಕೃಷ್ಣನ ಜನನವಾಗಿ ಇವರಿಬ್ಬರೂ ಸುಮಾರು ಸಮ ವಯಸ್ಕರಾಗಿರುತ್ತಾರೆ.  ನಂತರ ಅಶ್ವಿನೀ ದೇವತೆಗಳಿಂದ ಮಾದ್ರಿಯಲ್ಲಿ ನಕುಲ ಸಹದೇವರು ಜನಿಸುತ್ತಾರೆ.  ಈ ಮಕ್ಕಳ ಜನನದ ವಿವರಗಳು ಭಾರತದ ಕಥೆಗೆ ಪ್ರಸ್ತಾವನೆಯಾಗುತ್ತದೆ.

ಮುಂದೆ ಹದಿನಾರು ವರ್ಷಗಳ ತನಕ ನಡೆದಿರಬಹುದಾದ ಯಾವುದೇ ಘಟನೆಗಳ ವಿವರ ಕುಮಾರವ್ಯಾಸನಲ್ಲಿ ಚಿತ್ರಿತವಾಗಿಲ್ಲ.  ಪಾಂಡು ಮಹಾರಾಜ, ಕುಂತಿ, ಮಾದ್ರಿ, ಪಾಂಡವರು ಅರಣ್ಯದಲ್ಲಿಯೇ ವಾಸಿಸುತ್ತಿರುತ್ತಾರೆ.  ಧರ್ಮಜನಿಗೆ ಹದಿನಾರು, ಭೀಮನಿಗೆ 15, ಅರ್ಜುನನಿಗೆ 14, ನಕುಲ ಸಹದೇವರಿಗೆ 13 ವರ್ಷಗಳಾಗಿದ್ದಾಗ, ಇದ್ದಕ್ಕಿದ್ದಂತೆ ಪಾಂಡುವಿನ ಮರಣದ ಸಿಡಿಲು ಬಡಿದು, ಕಥೆಗೆ ಚಾಲನೆ ದೊರೆಯುತ್ತದೆ.  ಹದಿನಾರು ವರ್ಷಗಳಿಂದ ಇಂದ್ರಿಯ ನಿಗ್ರಹಿಸಿದ್ದ ಪಾಂಡುವಿನ ಮೇಲೆ

“ಯೋಗಿಗೆತ್ತಿದ ಖಡುಗಧಾರೆ ವಿ-
ಯೋಗಿಗೆತ್ತಿದ ಸಬಳ, ಸಕಲ ವಿ-
ರಾಗಿಗಳ ಹೆಡೆತಲೆಯ ದಡಿ….
….
….
 ಭೋಗಿಗಳ ಕುಲದೈವವಾಗಿ, ಕುಸುಮಮಯ ಸಮಯ” (ಆದಿಪರ್ವ 5.06),

ಬಂದು ವಸಂತನೃಪಾಲ ಪಾಂಡುವಿನ ಮೇಲೆ ನಡೆಯುತ್ತಾನೆ (ಆದಿಪರ್ವ 5.07).  ಸಂಯಮ ಸಡಲಿದ ಪಾಂಡುವಿನ ಮನಸ್ಥಿತಿಯನ್ನು ಕುಮಾರವ್ಯಾಸ ಹೀಗೆ ವರ್ಣಿಸುತ್ತಾನೆ.  ಆತನ “ಪ್ರಜ್ಞಾ ಸಾಗರಂಗಳು ಮಧ್ಯಕಟಿ, ಜಾನ್ವಂಘ್ರಿ ಮಿತವಾಯ್ತು” (ಆದಿಪರ್ವ 5.12).  ಈ ಸಂದರ್ಭದಲ್ಲಿ ಕವಿ ವಸಂತ ಮಾಸದ ಸುಮನೋಹರ ವರ್ಣನೆಯನ್ನೂ, ಕಾಮದ ಅದಮ್ಯ ಶಕ್ತಿಯನ್ನೂ ಪ್ರಭಾವಶಾಲಿಯಾಗಿ ಚಿತ್ರಿಸುತ್ತಾನೆ.  “ಪಸರಿಸಿತು  ಮಧುಮಾಸ, ತಾವರೆಯೆಸಳ ದೋಣಿಯ ಮೇಲೆ ಹಾಯ್ದವು, ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು”, (ಆದಿಪರ್ವ 5.09) ಎನ್ನುವಾಗ, ವಸಂತಮಾಸವನ್ನು ಮಧುಮಾಸವೆಂದು ಕರೆದಿರುವ ಕಲ್ಪನೆ ಚೇತೋಹಾರಿ ಎನಿಸುತ್ತದೆ.  ಕಾಮನ ಶರನಿಕರದ ಪ್ರಭಾವವಾದರೂ ಕಡಿಮೆಯೇ?

“ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು
ಬೆಂಬಿಡದೆ ಮರಳಿದೊಡೆ ಮರುಮೊನೆ-
ಗೊಂಬುದೆಂಬವೊಲವನಿಪತಿಯೊ-
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ”  (ಆದಿಪರ್ವ 5.15)

 ಸಾವಿನ ಭೀತಿ ಕೂಡ ಪಾಂಡುವಿನಲ್ಲಿ ಮೂಡಿದ ಕಾಮದ ಒತ್ತಡವನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ.  ಬೇಡ ಬೇಡವೆಂದು ಚರಣಕ್ಕೆರಗುತ್ತಿರುವ ಮಾದ್ರಿಯನ್ನು ಕೂಡುತ್ತಾನೆ. “ಆ ಸುಖದ ಝೋಂಪಿನಲಿ ಮೈಮರೆದೋಸರಿಸಿದವನು…” (ಆದಿಪರ್ವ 5.16), ಹಾಗೆಯೇ ಮರಣವನ್ನಪ್ಪುತ್ತಾನೆ.  ಈ ಪ್ರಸಂಗದಲ್ಲಿ, ಶೃಂಗಾರ, ದು:ಖ, ಕರುಣೆಯ ರಸಭಾವಗಳು ಅದೆಷ್ಟು ಶೀಘ್ರವಾಗಿ ಕವಿಯ ಮನಸ್ಸಿನಲ್ಲಿ ಮೂಡಿ, ಓದುಗರ ಮನಸ್ಸನ್ನೂ ಅರೆಗಳಿಗೆ ಅರಳಿಸಿ ಮತ್ತೆ ಮುದುಡಿಸುತ್ತವೆಂಬುದು ಗಮನಿಸಬೇಕಾದ ಸಂಗತಿ.  ಮಧುಮಾಸ ಪಸರಿಸಿತು, ತಾವರೆ ಎಸಳ ದೋಣೆ, ದುಂಬಿಗಳ ಹಿಂಡನ್ನು ಚಿತ್ರಿಸಿಕೊಳ್ಳುವುದರಲ್ಲಿ ಪಾಂಡು, ಮಾದ್ರಿಯರ ಸಂಭೋಗ, ಪಾಂಡುವಿನ ಮರಣ ಎದುರಾಗುತ್ತದೆ.  ಕವಿ ವಿಭಿನ್ನ ರಸಭಾವದ ತೊಟ್ಟಿಲುಗಳಿಗೆ ಅರೆ ನಿಮಿಷದಲ್ಲಿ ನಮ್ಮನ್ನು ವರ್ಗಾಯಿಸುತ್ತಾನೆ.  ಚಿತ್ರ ಶಿಲ್ಪಗಳಂತೆ ವರ್ಣಿಸುವ ಕುಮಾರವ್ಯಾಸನ ಅದ್ಭುತ ಶಕ್ತಿಗೆ ಮನಸ್ಸು ಬೆರಗಾಗುತ್ತದೆ.  ಪಾಂಡುವಿನ ಮರಣಾನಂತರ  ಮಾದ್ರಿ ಆತನೊಡನೆ ಸಹಗಮನ ಮಾಡಿದುದರಿಂದ, ಕುಂತಿ ಐದು ಮಕ್ಕಳ ಹೊಣೆ ಹೊತ್ತು ಶತಶೃಂಗಶೈಲದಲ್ಲಿಯೇ ವಾಸಿಸುತ್ತ್ತಿದ್ದಾಗ ಅಲ್ಲಿಯ ಮುನಿಗಳು ಕುಂತಿಯನ್ನೂ, ಈ ಹದಿ ಹರೆಯದ ಮಕ್ಕಳನ್ನೂ ಹಸ್ತಿನಾಪುರಿಗೆ ಕರೆತಂದು ಭೀಷ್ಮಾದಿಗಳಿಗೊಪ್ಪಿಸಿ, ಪಾಂಡುವಿನ ವಿಕ್ರಮ, ಅವನು ಹದಿನಾರು ವರ್ಷಗಳ ಕಾಲ ಕಾಡಿನಲ್ಲಿ ಜೀವಿಸಿದ ರೀತಿ, ಮಕ್ಕಳ ಜನನ ಕ್ರಮ, ಪಾಂಡುವಿನ ಮರಣ ಎಲ್ಲವನ್ನೂ ವಿವರಿಸುತ್ತಾನೆ.

ನಾನು ಮೂಲ ವ್ಯಾಸ ಭಾರತವನ್ನು ಓದಿಲ್ಲ.  ಆದರೆ, ಕುಮಾರವ್ಯಾಸ ಭಾರತದಲ್ಲಿ, ಸ್ಪಷ್ಟವಾಗಿ, ಪಾಂಡವರು ಹಸ್ತಿನಾಪುರಕ್ಕೆ ಬಂದಾಗ ಧರ್ಮರಾಯ ಹದಿನಾರು ವರ್ಷದವನೆಂದು ತಿಳಿಸಲಾಗಿದೆ.  ಮಕ್ಕಳ ಈ ವಯಸ್ಸು, ಹಾಗೂ ಅದುವರೆಗೂ ಕೌರವರೂ ಪಾಂಡವರೂ ಒಬ್ಬರನ್ನೊಬ್ಬರು ನೋಡಿಯೇ ಇರದ ಸಂಗತಿಗಳಿಂದಾಗಿ ಇಬ್ಬರ ನಡುವೆ ಸ್ನೇಹ ಭಾಂಧವ್ಯಗಳ ಬದಲಿಗೆ ಅಸೂಯೆ, ಹಗೆತನಗಳು ಮೊಳೆಯಲು ಅವಕಾಶವಾಗುತ್ತದೆನಿಸುತ್ತದೆ.  ಹಸ್ತಿನಾಪುರಿಯಲ್ಲಿ, ಹಿರಿಯ ರಾಜಕುಮಾರನಾಗಿ ಎಲ್ಲರ ಕಣ್ಮಣಿಯಂತೆ ಮೆರೆಯುತ್ತಿದ್ದ ದುರ್ಯೋಧನನಿಗೆ, ತನಗಿಂತ ಹಿರಿಯನಾದ ಧರ್ಮರಾಜ ಬಂದಾಗ ಅವನು ಪ್ರತಿಸ್ಪರ್ಧಿಯಂತೆ ತೋರುವುದರಲ್ಲಿ ಅಚ್ಚರಿಯೇನಿಲ್ಲ.  ಜೊತೆಗೆ ತನ್ನ ಸಮವಯಸ್ಕನಾದ ಭೀಮನೋ ಅಸಾಮಾನ್ಯ ಪರಾಕ್ರಮಿ.  ಆತನೊಡನೆ ಹಗೆತನ, ಅಸೂಯೆಯಲ್ಲದೇ ಸ್ನೇಹ, ಪ್ರೀತಿ ಹೇಗೆ ಬೆಳೆದೀತು?  ಅಂತೆಯೇ ಹದಿನಾರು ವರ್ಷ ಕಾಲ ವಿಭಿನ್ನ ವಾತಾವರಣದಲ್ಲಿ ಬೆಳೆದ, ವಿಭಿನ್ನ ಮನೋಧರ್ಮದ ಮಕ್ಕಳಲ್ಲಿ ಸ್ನೇಹ ಪ್ರೀತಿ ಮೂಡುವುದೂ ದುಸ್ತರ.  ಹೇಳಿಕೇಳಿ ಪಾಂಡವರು ತಂದೆಯನ್ನು ಕಳೆದು ಕೊಂಡು, ಇದುವರೆಗೂ ಕಾಡಿನಲ್ಲಿ ವಾಸಿಸಿ, ಈಗ ಇಲ್ಲಿ ಬಂದಿರುವ ಕೇವಲ ಐದು ಮಂದಿ ಮಾತ್ರ.  ಕೌರವರು ನಗರ ನಾಗರೀಕತೆಯಲ್ಲಿ, ಅರಮನೆಯ ವೈಭವದಲ್ಲಿ ಬೆಳೆದು ಸಂಖ್ಯಾ ಬಲದಲ್ಲಿಯೂ ಹೆಚ್ಚಿಗೆ ಇರುವವರು.  ದುರ್ಯೋಧನನ ಮನಸ್ಸಿನಲ್ಲಿ, ಈ ಕಾರಣಗಳಿಂದಾಗಿ ತನ್ನ ಮತ್ತು ತನ್ನವರ ಶಕ್ತಿ, ಸಾಮರ್ಥ್ಯ, ಅಂತಸ್ತುಗಳ ಬಗ್ಗೆ ಅತಿಯಾದ ಅಹಂ ಉಂಟಾಗುವಂತೆಯೇ, ಪಾಂಡವರ ಬಗೆಗೆ ಒಂದು ರೀತಿಯ ಅಸಹನೆ ಅಸಡ್ಡೆಗಳು ಬರುವುದೂ ಸಹಜ. 

ಅದು ವಾಸ್ತವವೂ ಕೂಡ, ಈ ಐದು ಜನರೂ ಅರಮನೆಯಲ್ಲಿದ್ದು, ತಮ್ಮ ತಮ್ಮ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಾರೆಂದಾಗ ಈ ಅಸಹನೆ ಹೆಚ್ಚುತ್ತದೆ.  ಜೊತೆಗೆ ಈ ಐದು ಮಂದಿಯೂ ಮಹಾಪರಾಕ್ರಮಿಗಳು, ವಜ್ರಕಾಯದ ಭೀಮ ಇವರ ಪರಾಕ್ರಮಕ್ಕೊಂದು ವಜ್ರಕಿರೀಟದಂತೆ ಎಂಬ ಅಂಶವೂ ದುರ್ಯೋಧನನಿಗೆ ಅರಿವಾಗತೊಡಗಿದ ಮೇಲೆ, ಆಗೊಮ್ಮೆ ಈಗೊಮ್ಮೆ ದುರ್ಯೋಧನನ ಮನಸ್ಸಿನಲ್ಲಿ ಸುಳಿಯುತ್ತಿದ್ದ ಪ್ರೀತಿಯ, ಸ್ನೇಹದ, ಬಂಧುತ್ವದ ಸೆಳಕುಗಳು ಸಂಪೂರ್ಣವಾಗಿ ಮಾಯವಾಗುತ್ತವೆ.  ಇಂಥ ಸ್ನೇಹದ ಸೆಳಕುಗಳು, ಭೀಮನ ಪೌರುಷ, ಕುಹಕ, ಚೇಷ್ಟೆಗಳಿಂದಾಗಿ, ಹುಟ್ಟಿದ ಮರುಕ್ಷಣವೇ ದ್ವೇಷ, ಅಸೂಯೆಗಳಾಗಿಬಿಡುತ್ತಿದ್ದವು.  ಬಹುಶ: ಆ ಹದಿಹರೆಯದ ಯುವಕ ದುರ್ಯೋಧನನಲ್ಲಿ, ತನ್ನ ಉಳಿವಿನ ಚಿಂತೆ-ಭಯಗಳು ಹಗಲಿರುಳು ಕಾಡುತ್ತಿದ್ದಿರಬಹುದು.  ಈ ಪಾಂಡವರು ಉಳಿದುಕೊಂಡು, ಬೆಳೆದು ಬಿಟ್ಟರೆ, ತಾನು, ತನ್ನ ಅರಸೊತ್ತಿಗೆ ಯಾವುದಕ್ಕೂ ಸ್ಥಾನವಿಲ್ಲವೆಂಬ ಮಹಾಭಯ ಅವನನ್ನಾಕ್ರಮಿಸಿಕೊಳ್ಳುತ್ತದೆ.  ದುರ್ಯೋಧನ ಭೀಮರ ನಡುವಿನ ಸಂಬಂಧವಂತೂ ವೈರ-ಪ್ರೀತಿಯ ಸಂಭಂಧವೆನ್ನಬಹುದು.  ಪ್ರೀತಿ ಪಾತ್ರರು ನಮ್ಮ ಮನಸ್ಸನ್ನು ಸದಾ ಆಕ್ರಮಿಸಿಕೊಂಡಿರುವಂತೆಯೇ ವೈರಿಗಳೂ ಕೂಡ ಸದಾ ನಮ್ಮ ಮನಸ್ಸಿನಲ್ಲಿ ನೆಲೆಯೂರಿರುತ್ತಾರೆ.  ಈ ಹದಿಹರೆಯದ ಅರಸುಗುವರರಾದ ಕೌರವ ಪಾಂಡವರ ಸಂಬಂಧವನ್ನು ಕುಮಾರವ್ಯಾಸ ಸೊಗಸಾಗಿ, ಸಹಜವಾಗಿ ವರ್ಣಿಸುತ್ತಾನೆ.  ಭಯ ಮನುಷ್ಯನನ್ನು ಅನೇಕ ಅಪರಾಧಗಳತ್ತ ನೂಕುತ್ತದೆನ್ನುವ ಮನೋವೈಜ್ಞಾನಿಕ ಸತ್ಯವನ್ನು ದುರ್ಯೋಧನನ ಅನೇಕ ಕುಕೃತ್ಯಗಳ ಮೂಲಕ ನಿರೂಪಸುತ್ತಾನೆ.  ತನ್ನನ್ನೂ ತನ್ನ ಸ್ಥಾನವನ್ನೂ ಉಳಿಸಿಕೊಳ್ಳಬೇಕೆಂಬ ಹಂಬಲ, ವೈರಿ ಎನಿಸಿಕೊಂಡವನನ್ನು ಕೊಲೆ ಮಾಡಿ ಮುಗಿಸಲು ಪ್ರೇರೇಪಿಸುತ್ತದೆ.  ದುರ್ಯೋಧನನ ಮನಸ್ಸಿನಾಳದಲ್ಲಿ ಆಳುತ್ತಿದ್ದುದು ಈ ಭಯ.  ಪಾಂಡವರು ತನ್ನನ್ನೂ, ತನ್ನ ಸ್ಥಾನವನ್ನೂ ಇಲ್ಲವಾಗಿಸಿಬಿಡುವ ಮುನ್ನ ಅವರನ್ನು ತಾನು ಇಲ್ಲವಾಗಿಸಿಬಿಡಬೇಕು.  ಮನುಷ್ಯನ ಅಂತರಂಗವನ್ನಾಳುವ ಇಂತಹ ಸೂಕ್ಷ್ಮ ಭಾವನೆಗಳ ತಾಕಲಾಟದ ಅಭಿವ್ಯಕ್ತಿಯಿಂದಾಗಿ, ಮಹಾಭಾರತದ ಎಲ್ಲ ಪಾತ್ರಗಳೂ ಕಡೆತನಕ ರಸದೊರತೆಗಳಾಗಿ ನಿಲ್ಲುತ್ತವೆ.

ಅರಸು ಮಕ್ಕಳು ಬೆಳೆಯುತ್ತಾ “ಭೀಮ ದುರ್ಯೋಧನರ ಸೆಣಸಿನ ತಾಮಸಿಕೆ ಹೆಚ್ಚಿದುದು” (ಆದಿಪರ್ವ 6 ಸೂಚನಾ-ಪದ್ಯ) ಎನ್ನುತ್ತಾನೆ ಕವಿ.  ಈ ಮಕ್ಕಳ ಆಟಪಾಠ, ಶಸ್ತ್ರಾಭ್ಯಾಸ, ವಿದ್ಯಾಭ್ಯಾಸಗಳನ್ನು ವಿವರಿಸುತ್ತಾ ಕುಮಾರವ್ಯಾಸ ವರ್ಣಿಸುವ ಗ್ರಾಮೀಣ ಕ್ರೀಡೆಗಳ ಹೆಸರುಗಳು ಕೂಡ ಈಗ ಅನೇಕರಿಗೆ ತಿಳಿದಿರಲಾರದು.  (ಹದಿಹರೆಯದವರು ಈ ಕ್ರೀಡೆಗಳಲ್ಲಿ ತೊಡಗಿಕೊಂಡಿರುತ್ತಿದ್ದರೇ ಎಂದೂ ಅನಿಸುತ್ತದೆ).  ಆಳಿನೇರಿಕೆ, ಹಿಡಿಗವಡೆ, ಗುರಿಯಾಳು ಚೆಂಡಿನ ಹೊಡೆತ, ಚಿಣಿ ಕೋಲಾಳು, ಗೊತ್ತಿನ ದಂಡೆ, ಗುಡುಗು ಗುತ್ತಿನ ಚೆಂಡು, ಗುಮ್ಮನ ಬಡಿವ ಕತ್ತಲೆ ಗುದ್ದು, ಕಂಬದ ಗಡಣೆ, ಹರಿಹಲಗೆ, ನಿಡುಗವಣೆ ಹೀಗೆ ನಾನಾ ಕ್ರೀಡೆಗಳನ್ನು ಹೆಸರಿಸುತ್ತಾನೆ ಕುಮಾರವ್ಯಾಸ.  ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಆಡಿದರೂ ಐವರು ಒಂದು ತಂಡ, ನೂರು ಜನ ಮತ್ತೊಂದು ತಂಡವಾಗಿ ಉಳಿದು ಆಡಿದರೇ ಹೊರತು ನೂರು+ಐದು, ನೂರೈದು ಎಂದು ಆಗಲೇ ಇಲ್ಲ.  ಪಂಗಡಗಳನ್ನು ಬದಲಾಯಿಸಲೇ ಇಲ್ಲ.  ಮಹಾಭಾರತದ ಯುದ್ಧ ಆರಂಭವಾದಾಗ ದಾಸೀಪುತ್ರ ಯುಯುತ್ಸು ಮಾತ್ರ ಪಾಂಡವರ ಪಕ್ಷಕ್ಕೆ ಬರುತ್ತಾನೆ.

ಆಟ ಪಾಠಗಳ ನಡುವೆಯೇ ಕೌರವ ಪಾಂಡವರಿಗೆ, ಅದರಲ್ಲಿಯೂ ಭೀಮ ದುರ್ಯೋಧನರ ನಡುವೆ ಬೆಳೆದು ಬಂದ ಹಗೆತನವನ್ನು ಕುಮಾರವ್ಯಾಸ ಸಾಕಷ್ಟು ವಿವರವಾಗಿ, ಓದುವವರ ಮುಖದ ಮೇಲೆ ಮುಗುಳ್ನಗೆ ಮೂಡುವಂತೆ ಚಿತ್ರಿಸಿದರೂ, ಕ್ರಮೇಣ ಹಗೆಯ ಹೊಗೆ, ದಟ್ಟವಾಗಿ ವಿಷಯುಕ್ತವಾಗುತ್ತಿರುವುದನ್ನೂ ಚಿತ್ರಿಸುತ್ತಾನೆ.  ಭೀಮನೊಬ್ಬನೇ ನೂರು ಮಂದಿ ಕೌರವರನ್ನು ಆಟದಲ್ಲಿ ಸದೆಯುತ್ತಾನೆ.  ಸೋತರೆ ವಿಭಾಡಿಸಿ ಕೆದರುತ್ತಿದ್ದು, ಗೆದ್ದರೆ ಬೆಂಬತ್ತಿ ಹೋಗಿ ಹಿಡಿದು ಎಳೆದು ಸದೆದು, ತಾನೇ ಹೋಗಿ ಭೀಷ್ಮರ ಬಳಿ ದೂರು ಹೇಳುತ್ತಾನೆ.  ಒಮ್ಮೊಮ್ಮೆ ದುರ್ಯೋಧನಾದಿಗಳೆಲ್ಲ ಸೇರಿ ಭೀಮನನ್ನು ಮೈಮರೆಸೆ ಹಣಿದು ಬಿಡುವರು.  ಭೀಮನೇನು ಸುಮ್ಮನೆ ಬಿಡುವವನಲ್ಲ.  ದುರ್ಯೋಧನಾದಿಗಳು ಅಳುತ್ತ ಬಂದು ಧೃತರಾಷ್ಟ್ರನೊಡನೆ, ಭೀಮನಿಂದಾಗಿ ತಾವು ಹಲ್ಲು ಕಳೆದು ಕೊಂಡುದನ್ನು, ಮೊಣಕಾಲು ಒಡೆದು ಕೊಂಡದ್ದನ್ನೂ ಹೇಳಿದರೆ, ಭೀಮ ಮುಳ್ಳು ಮೊನೆಗಳಿಂದ ತನ್ನನ್ನು ತಾನೇ ಗೀರಿಕೊಂಡು, ರಕ್ತ ಬರಿಸಿಕೊಂಡು ಧೂಳಿನಲ್ಲಿ ಹೊರಳಾಡಿ ಅಳುತ್ತಾ ಬಂದು ಭೀಷ್ಮ ಮತ್ತು ಧೃತರಾಷ್ಟ್ರನೊಡನೆ ದೂರುವನು.  ಎಷ್ಟೋ ಬಾರಿ ಭೀಷ್ಮ ವಿದುರರು, ನೀವು ನೂರು ನಾಲ್ಕು ಜನರೂ ಒಂದಾಗಿರಿ, ಭೀಮನೊಬ್ಬನೇ ಬೇರೆಯಿರಲಿ ಎಂದರೆ, “ನಾಕು ಜಾವದೊಳಗೆ ಹಾಗೆ ಬೇರೆಯಿದ್ದು ಮರುದಿನ ಮತ್ತೆ ತಮ್ಮೊಳೊಂದಾಗಿಹರು ಗೆಳೆಯಾಗಿ” (ಆದಿಪರ್ವ 6.07) ಎನ್ನುವ ಮಾತುಗಳಿಂದ ಈ ಎರಡೂ ಬಣಗಳ ನಡುವಿನ ಹಗೆತನಕ್ಕೆ ಹುಡುಗತನದ ಛಾಯೆ ಸುಳಿಯುತ್ತದೆ.  ಒಮ್ಮೆ ಊರ ಹೊರಗಿನ ದೊಡ್ಡ ಮರವೊಂದನ್ನು ಈ ನೂರು ಜನರ ಗುಂಪು ಹತ್ತಿ ಕುಳಿತಾಗ ಭೀಮ ಆ ಮರವನ್ನು ಹಿಡಿದು ಅಲ್ಲಾಡಿಸುತ್ತಾನೆ.  ಆಗ “ತರುಫಲನಿಕರ ಬೀಳ್ವಂತೆ” (ಆದಿಪರ್ವ 6.09) ಎಲ್ಲರೂ ಕೆಳಗುರುಳುತ್ತಾರೆ.  ಇಂತಹ ನಗು ಬರಿಸುವ ಸಣ್ಣ ಪುಟ್ಟ ಹುಡುಗಾಟದ ಘಟನೆಗಳು ಕೇಡಿನ ಹಗೆ ತುಂಬಿದ ಘಟನೆಗಳಾಗಿ ಮುಂದುವರೆದಾಗ ಭೀಮನಿಗೂ ದುರ್ಯೋಧನನಿಗೂ ನಡುವೆ ಅತಿಯಾದ ವೈರ ಬೆಳೆಯುತ್ತದೆ.  ದುರ್ಯೋಧನನ ಹಗೆಯ ಮುಖ್ಯಗುರಿ ಭೀಮನೊಬ್ಬನೇ.  ಹಗೆತನದೊಡನೆಯೇ ದುರ್ಯೋಧನನ ಕುತಂತ್ರಗಳೂ ಹೆಚ್ಚುತ್ತವೆ.  ದ್ವೇಷ ಹಗೆತನಗಳನ್ನು ನೇರವಾಗಿ ಸಾಧಿಸಲು ಸಾಧ್ಯವಾಗದಾದಾಗ, ಬಳಸು ದಾರಿಯ ಮೋಸ ಕುತಂತ್ರಕ್ಕೆ ಶರಣು ಹೋಗುತ್ತದೆ ದುರ್ಯೋಧನನ ಮನಸ್ಸು. ಒಂದಾದಂತೆ ನಟಿಸಿ, ಕ್ರೀಡೆಗಳಲ್ಲಿ ಮೈಮರೆಸಿ ಭೀಮನನ್ನು ಕಟ್ಟಿಹಾಕಿ ಮಡುವಿಗೆ ಎಸೆಯುತ್ತಾರೆ.  ಕಟ್ಟು ಕಿತ್ತೆಸೆದು ಬಂದ ಭೀಮ ರೋಷಾವೇಷದಿಂದ ಎಲ್ಲರನ್ನೂ ಸದೆಯುತ್ತಾನೆ.  ಮತ್ತೆ ಭಾಷೆ, ಪ್ರಮಾಣ ಮಾಡಿಸಿಕೊಂಡು ಒಂದಾಗುತ್ತಾರೆ.  ಭೀಮ ಮೈಮರೆತ ಸಮಯದಲ್ಲಿ ವಿಷದ ಹಾವುಗಳಿಂದ ಕಚ್ಚಿಸುತ್ತಾರೆ.  ಹಗೆತನದ ವಿಷದಿಂದ ಕಲುಷಿತವಾದ ಕೌರವನ ಮನಸ್ಸು ವಿಷದ ಚಿಂತೆಯನ್ನೇ ಮಾಡುತ್ತದೆ.  ಆದರೆ ಪ್ರಾಣವಾಯುವಿನ ಸಂತಾನವಾದ ಭೀಮನನ್ನು ಕೊಲ್ಲುವುದು ಸುಲಭವೇ?  ಕಾಳಕೂಟ, ಹಾಲಾಹಲ, ಮುಂತಾದ ಎಂಟು ವಿಷಗಳನ್ನು ಬೆರೆಸಿ ಕಜ್ಜಾಯ ಮಾಡಿಸುತ್ತಾನೆ ದುರ್ಯೋಧನ.  ದುರ್ಯೋಧನ ಆಲೋಚಿಸುವ ಒಂದೊಂದು ವಿಧಾನದಲ್ಲಿಯೂ ಆತನ ಮನಸ್ಸಿನಲ್ಲಿದ್ದ ಹಗೆತನದ ವಿಷ ಗಾಢವಾಗುತ್ತಾ ಬರುವುದನ್ನೂ, ಮತ್ತು ತನ್ನ ಕಾರ್ಯವಿಧಾನಗಳನ್ನು ಪೂರೈಸಿಕೊಳ್ಳಲು ಅವನಿಗೆ ಸಿಗುತ್ತಿದ್ದ ನೆರವನ್ನೂ ಸೂಚಿಸುತ್ತದೆ.  ಭೀಮ ಮೊದಲೇ ಹೊಟ್ಟೆಬಾಕ ಜೊತೆಗೆ ಜಿಹ್ವಾಚಾಪಲ್ಯವೂ ಹೆಚ್ಚು.  ಇದನ್ನೇ ಬಳಸಿಕೊಂಡು ಭೀಮನಿಗೆ ವಿಷದ ಕಜ್ಜಾಯಗಳನ್ನು ತಿನ್ನಿಸುತ್ತಾರೆ.  ಅದೆಂತಹ ತೀಕ್ಷ್ಣ ವಿಷವೆಂಬುದನ್ನು ಕುಮಾರವ್ಯಾಸನ ಮಾತಿನಲ್ಲಿಯೇ ಕೇಳಬಹುದು.  “ಜಗಜಟ್ಟಿ ಹಾಯಿಕಿಕೊಂಡು ನುಣ್ಣಗೆ ಚಿಟ್ಟುಮುರಿಯಾಟದಲಿ ಸದೆದನು ಮತ್ತೆ ಕೌರವರ” (ಆದಿಪರ್ವ 6.14).  ದ್ರೋಣಾಚಾರ್ಯರಲ್ಲಿ ಶಿಷ್ಯ ವೃತ್ತಿಯಲ್ಲಿರುವಾಗಲೂ ಬೆಳೆದ ವೈರಶಿಖಿ ಕಡೆಗೆ ಅರಗಿನರಮನೆಯ ಉರಿಯಾಗಿ ಮಾರ್ಪಾಟುಗೊಂಡು, ದ್ವೇಷ, ಹಗೆತನಗಳು ಹುಡುಗಾಟದ ಮಜಲು ಬಿಟ್ಟು, ಯೌವನಾವಸ್ಥೆಯ ದಳ್ಳುರಿಯಾಗಿ ದಹಿಸುವ ಜ್ವಾಲೆಯಾಗುತ್ತದೆ.  ಪಾಂಡವರ ಸರ್ವನಾಶ ವಿನಾಶ ದುರ್ಯೋಧನನ ಗುರಿ, ಅದಕ್ಕೆ ಇಂಬುಕೊಡುವ, ಶಕುನಿ, ದುಶ್ಯಾಸನ, ಕರ್ಣ ಮುಂತಾದವರ ಮಂತ್ರಾಲೋಚನೆಗಳಿಂದಾಗೆ ಹಗೆತನ ಪ್ರೌಢಾವಸ್ಥೆ ತಲುಪುತ್ತದೆ.  ಪಾಂಡವರಿಗಾಗಿ ಬೇರೊಂದು ಅರಮನೆಯ ನಿರ್ಮಾಣಕ್ಕೆ ಪುರೋಚನ ನೇಮಕಗೊಂಡಾಗ, ಅರಗಿನರಮನೆಯ ವಿನ್ಯಾಸದೊಡನೆಯೇ, ದುಷ್ಟ ಮನಸ್ಸಿನೊಳಗಿನ ಹಗೆತನದ ವಿನ್ಯಾಸಗಳೂ ತೆರೆದುಕೊಳ್ಳುತ್ತವೆ.  ಅರಗಿನರಮನೆ ವಿಲಿಯಂ ಬ್ಲೇಕ್ ಕವಿಯ ‘ಪಾಯ್ಸನ್ ಟ್ರೀ’ ಕವನದಲ್ಲಿನ ಹೊಳೆಹೊಳೆವ ಆಕರ್ಷಕ ಬಣ್ಣದ ಸೇಬನ್ನು ನೆನಪಿಗೆ ತರುತ್ತದೆ.  ದ್ವೇಷ, ವೈರಗಳ ಮೂಲ ಕಾರಣವಾದ ಭಯ, ತನ್ನನ್ನು ತಾನು ನಿವಾರಿಸಿಕೊಳ್ಳಲು ಮೋಸ, ಕುತಂತ್ರಗಳ ಮೊರೆಹೋಗುತ್ತದೆಂಬ ಮೂಲಭೂತ ಮನೋವೈಜ್ಞಾನಿಕ ಸತ್ಯವೊಂದನ್ನು ಈ ಎಲ್ಲ ಪ್ರಸಂಗಳಲ್ಲಿ ಕವಿ ಅಭಿವ್ಯಕ್ತಿಸಿದ್ದಾನೆ.  (ಭೀಮ ದುರ್ಯೋಧನನ (arch-rival) ಮೂಲ ಪ್ರತಿಸ್ಪರ್ಧಿ (ವೈರಿ), ಈ ವೈರತ್ವಕ್ಕೆ ನೀರೆರೆದು ಪೋಷಿಸುವವರು ಶಕುನಿ ಕರ್ಣ ದುಶ್ಶಾಸನ.  ಶಕುನಿಯ ದುರ್ನೀತಿ ಬೋಧೆಗೆ ಸುಮಾರು ನಲವತ್ಮೂರು ಪದ್ಯಗಳನ್ನುಪಯೋಗಿಸಿದ್ದಾನೆ ಕುಮಾರವ್ಯಾಸ.  ಈ ಬೋಧನೆಯನ್ನು ವಂಶಚ್ಛೇದ ಮಾರ್ಗವೆಂದು ಕರೆಯುತ್ತಾನೆ ಕವಿ).  ಈ ಅರಗಿನರಮನೆಯ ಯೋಜನೆ, ಅರಸುಕುವರರ ಅಸ್ತ್ರ-ಶಸ್ತ್ರ-ಸಕಲ ವಿದ್ಯಾ ಪ್ರದರ್ಶನದ ಸಮಾರಂಭದ ನಂತರ ತಯಾರಾಗುತ್ತದೆ.  ಸುಮಾರು ಹದಿಮೂರು ವರ್ಷಗಳು ಅಸ್ತ್ರ-ಶಸ್ತ್ರ-ಸಕಲ ವಿದ್ಯೆಗಳನ್ನು ಕಲಿತರೆಂದು ತಿಳಿಸುತ್ತಾನೆ ಕುಮಾರವ್ಯಾಸ.  ಲಕ್ಷಣ, ಗಣಿತ, ಗಾರುಡ, ಭರತಾದ್ಯಖಿಲ, ಚತುರ್ದಶ ವಿದ್ಯೆಗಳಲ್ಲಿ ಪರಿಣತರಾದ ರಾಜಕುಮಾರರು, ಅಭಿನಂದನೀಯರೋ, ನಿಂದ್ಯರೋ ಎಂದು ಎಲ್ಲ ಜನರೂ ನೋಡಲು ಒಂದು ಪ್ರದರ್ಶನವನ್ನೇರ್ಪಡಿಸುತ್ತಾರೆ.  ಆ ಸಮಾರಂಭಕ್ಕೊಂದು ಶುಭದಿನವನ್ನು ಗೊತ್ತು ಮಾಡಿ ವಾಸ್ತುವಿಗನುಗುಣವಾಗಿ ಹನ್ನೆರಡು ಯೋಜನ ವಿಸ್ತಾರದಲ್ಲಿ ನಿರ್ಮಾಣಗೊಳ್ಳುವ ಪ್ರದೇಶವನ್ನು ಈಗಿನ ಕಾಲದ ದೊಡ್ಡದೊಂದು ಕ್ರೀಡಾಂಗಣಕ್ಕೆ ಹೋಲಿಸಬಹುದು.  ಪ್ರದರ್ಶನವನ್ನು, ಸ್ಪರ್ಧೆಗಳನ್ನು ನೋಡಲು ಉಪ್ಪರಿಗೆಗಳು, ಹೆಣ್ಣುಮಕ್ಕಳಿಗೆ ಅಂತ:ಪುರ, ಪುರಜನರ ಪರಿಜನರ ನೆಲೆಯುಪ್ಪರಿಗೆಗಳೂ ಎಲ್ಲವೂ ನಿರ್ಮಾಣಗೊಳ್ಳುತ್ತವೆ.  ಶಿಷ್ಯ ಸಮೂಹವನ್ನು ಹಿಂದಿಟ್ಟುಕೊಂಡು ಗುರು ದ್ರೋಣರು ಆಗಮಿಸುತ್ತಾರೆ.  ಪ್ರಾಣಿ ಬಲಿಯಿಂದ ಭೂತ ತೃಪ್ತಿಯಾದ ನಂತರ ‘ರಾಜಸುತನಿಕರ’ ರಂಗಸ್ಥಳವನ್ನು ಪ್ರವೇಶಿಸುತ್ತದೆ.  ದುರ್ಯೋಧನ ಈ ಪ್ರದರ್ಶನಕ್ಕೆ ಬರುವ ಠೀವಿಯಾದರೂ ಹೇಗೆ? ಆಗಿನ್ನೂ ಶಿಕ್ಷಣ ಮುಗಿಸಿದ ವಿದ್ಯಾರ್ಥಿಯಂತಲ್ಲ,

“ಹಗಲು ಕೈದೀವಿಗೆಯ ಬಿರುದಿನ
ವಿಗಡನಿವನಾರೆನಲು ಭೂಪಾ-
ಳಿಗಳ ರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಿಲು
 ಝಗಝಗಿಪ ತನುರುಚಿಯ ಮಿಂಚನು
 ಮಿಗುವ ಖಡ್ಗಚ್ಛವಿಯ ತಲೆಯೊ-
ತ್ತುಗಳ ಚಾವಡಿಯೊಳಗೆ ಕೌರವರಾಯನೈತಂದ” (ಆದಿಪರ್ವ 7.26)

ರಾಜ್ಯಾಭಿಷೇಕವಾಗದೆಯೇ, ರಾಜವೈಭವದಲ್ಲಿ ಮೆರೆಯುತ್ತಾ ಬರುವ ದುರ್ಯೋಧನನ್ನು ಕಂಡು ಭೀಮ ಕ್ರೋಧಗೊಳ್ಳುವುದು ಸಹಜ.  ಭೀಮನಲ್ಲಿ ಕ್ರೋಧವೇ ಹೊರತು ಅಸೂಯೆ, ಕಪಟ ಕಂಡುಬರುವುದಿಲ್ಲ.  ಭೀಮ ದುರ್ಯೋಧನರು ಗದಾಯುದ್ಧದ ‘ಪ್ರದರ್ಶನ’ವನ್ನಾರಂಭಿಸಿದಾಗ, ಅದು ಕೇವಲ ಪ್ರದರ್ಶನವಾಗದೇ ನಿಜವಾದ ಯುದ್ಧದಲ್ಲಿಯೇ ಪರ್ಯವಸಾನವಾಗುವ ಸೂಚನೆಗಳು ಕಂಡು ಬಂದು, ಕೃಪ ಮತ್ತು ಗುರುಸುತರು ನಡುವೆ ಬಂದು ಇಬ್ಬರನ್ನೂ ಬೇರೆ ಮಾಡುತ್ತಾರೆ.  ಮುಂದೆ ಹಬ್ಬುವ ಹಗೆಗಿದು ಉಪಲಕ್ಷಣವಾಯ್ತೆಂದು ಬುಧವ್ರಾತ ನುಡಿಯುತ್ತದೆ.

This is the second part of an eighteen-part essay on Kumaravyasa-Bharata by Prof. L.V. Shantakumari. Thanks to Smt. Kanchana Karki and Avadhani Ganesh Bhat Koppalatota for reviewing. Edited by G S Raghavendra.

Author(s)

About:

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.