ಗಂಗಾದೇವಿ
ಕಥನಕಾವ್ಯಗಳನ್ನು ರಚಿಸಿದ ಕವಯಿತ್ರಿಯರ ಪೈಕಿ ಗಂಗಾದೇವಿಯ ಸ್ಥಾನ ಅದ್ವಿತೀಯ. ಅಷ್ಟೇಕೆ, ವಾರ್ತಮಾನಿಕ ವಸ್ತುವನ್ನು ಆಧರಿಸಿ ಪ್ರಸನ್ನಗಂಭೀರವಾದ ಶೈಲಿಯಲ್ಲಿ ಕಲ್ಪನಾವೈಚಿತ್ರ್ಯವಿರುವಂತೆ ಕಾವ್ಯವನ್ನು ರಚಿಸಿದ ಕವಿಗಳ ಪಂಕ್ತಿಯಲ್ಲಿಯೇ ಇವಳ ಸ್ಥಾನ ಗಣ್ಯವಾದುದು. ಈಕೆಯ “ಮಧುರಾವಿಜಯ” ಅಥವಾ “ವೀರಕಂಪಣರಾಯಚರಿತ” ಎಂಬ ಐತಿಹಾಸಿಕಮಹಾಕಾವ್ಯದ ಮೊದಲಿಗೆ ಬರುವ ಕೆಲವು ಮಾತುಗಳು ನಮ್ಮ ಉದ್ದೇಶಕ್ಕೆ ಪೂರಕವಾಗಿವೆ.
ಗಂಗಾದೇವಿ ಗುಣ-ದೋಷಗಳನ್ನು ಕುರಿತು ಹೇಳುವ ಮಾತುಗಳು ಮನನೀಯ:
ಪ್ರಬಂಧಮೀಷನ್ಮಾತ್ರೋऽಪಿ ದೋಷೋ ನಯತಿ ದೂಷ್ಯತಾಮ್ |
ಕಾಲಾಗುರುದ್ರವಭರಂ ಶುಕ್ತಿಕ್ಷಾರಕಣೋ ಯಥಾ ||
ನಿರ್ದೋಷಾಪ್ಯಗುಣಾ ವಾಣೀ ನ ವಿದ್ವಜ್ಜನರಂಜಿನೀ |
ಪತಿವ್ರತಾಪ್ಯರೂಪಾ ಸ್ತ್ರೀ ಪರಿಣೇತ್ರೇ ನ ರೋಚತೇ ||
ಗುಣಂ ವಿಹಾಯ ಕಾವ್ಯೇಷು ದುಷ್ಟೋ ದೋಷಂ ಗವೇಷತೇ |
ವನೇಷು ತ್ಯಕ್ತಮಾಕಂದಃ ಕಾಕೋ ನಿಂಬಮಪೇಕ್ಷತೇ || (೧.೧೮–೨೦)
ಕಾಲಾಗುರುವಿನ ದ್ರವದಲ್ಲಿ ಮುತ್ತಿನ ಚಿಪ್ಪುಗಳ ಭಸ್ಮವನ್ನು ಬಳಸಿ ನಿರ್ಮಿಸಿದ ಕ್ಷಾರದ ಒಂದು ಹನಿ ಬಿದ್ದರೂ ಅದು ತನ್ನ ಪರಿಮಳವನ್ನು ಕಳೆದುಕೊಳ್ಳುವಂತೆ ಕಾವ್ಯದಲ್ಲಿ ತಲೆದೋರುವ ಅಲ್ಪಮಾತ್ರದ ದೋಷವೂ ಅದನ್ನು ಹಾಳುಗೆಡವುತ್ತದೆ. ಹಾಗೆಂದ ಮಾತ್ರಕ್ಕೆ ಕೇವಲ ನಿರ್ದೋಷವಾದ ಕವಿತೆ ತನ್ನದಾದ ಗುಣಗಳನ್ನು ಹೊಂದಿಲ್ಲದಿದ್ದರೆ ಸಹೃದಯರಿಗೆ ಸಂತೋಷವೀಯುವುದಿಲ್ಲ. ಚೆಲುವೆಯಲ್ಲದ ಮಡದಿ ಎಷ್ಟೇ ಹದಿಬದೆಯಾಗಿದ್ದರೂ ಗಂಡನಿಗೆ ಮುದವೀಯಳು.[1] ಇಂತಾದರೂ ನೀಚನು ಸತ್ಕಾವ್ಯದಲ್ಲಿಯ ಗುಣಗಳನ್ನು ಗಣಿಸದೆ ದೋಷಗಳನ್ನಷ್ಟೇ ಹುಡುಕುತ್ತಾನೆ. ಕಾಗೆಯು ಕಾಡಿನಲ್ಲಿ ಮಾವನ್ನು ತೊರೆದು ಬೇವನ್ನಷ್ಟೇ ಬಯಸುತ್ತದೆ.
ಈ ಮೂರು ಶ್ಲೋಕಗಳಲ್ಲಿ ಕವಯಿತ್ರಿಯು ಕಾಣಿಸಿರುವ ಗುಣ-ದೋಷವಿವೇಕ ಮೆಚ್ಚುವಂತಿದೆ. ಮೊದಲು ಕವಿಗಳ ದೃಷ್ಟಿಯಿಂದ ಕಾವ್ಯವೆಷ್ಟು ನಿರ್ದುಷ್ಟವಾಗಿರಬೇಕೆಂಬ ಎಚ್ಚರಿಕೆಯನ್ನು ಕೊಡುತ್ತ ಇದರೊಟ್ಟಿಗೆ ಗುಣಗಳನ್ನು ತುಂಬಿಸಿಕೊಳ್ಳುವ ಕಡೆಗೂ ಗಮನವೀಯಬೇಕೆಂಬುದನ್ನು ಮಾರ್ಮಿಕವಾಗಿ ತಿಳಿಸಿದ್ದಾಳೆ. ಹೀಗೆ ಕವಿಗಳೆಲ್ಲ ದೋಷವರ್ಜನ ಮತ್ತು ಗುಣಾಧಾನಗಳನ್ನು ಅವಶ್ಯವಾಗಿ ಲೆಕ್ಕಿಸಬೇಕೆಂಬ ಮೌಲ್ಯವನ್ನು ಸ್ಥಾಪಿಸಿದ ಬಳಿಕ ಇಂಥ ಸತ್ಕಾವ್ಯವನ್ನು ಆಸ್ವಾದಿಸುವ ಸಹೃದಯರು ಗುಣಾನುರಾಗಿಗಳಾಗಿರಬೇಕಲ್ಲದೆ ದೋಷೈಕದೃಷ್ಟಿಗಳಾಗಿ ಹುಳುಕು ಹುಡುಕಬಾರದೆಂದು ವಿನಂತಿಸಿಕೊಳ್ಳುತ್ತಾಳೆ. ಇದು ಕವಿ-ಸಹೃದಯರಿಬ್ಬರಿಗೂ ಉಪಯೋಗಿಯಾದ ನಿಷ್ಪಾಕ್ಷಿಕ ದೃಷ್ಟಿ.
ಆದುದರಿಂದಲೇ ಇಂಥ ಸತ್ಕಾವ್ಯವನ್ನು ರಚಿಸಿದ ಕವಿಗೆ ಅಹಂಕಾರವಾಗದ ಆತ್ಮವಿಶ್ವಾಸವಿರುತ್ತದೆ. ಇದು ತನ್ನ ಕಾವ್ಯವನ್ನು ಆಸ್ವಾದಿಸಬಲ್ಲ ಸಹೃದಯರಿಗಾಗಿ ಹಪಹಪಿಸದೆ ಸ್ವಕರ್ಮದಲ್ಲಿ ಸಂತುಷ್ಟಿಯನ್ನು ಕಾಣುವಂತೆ ಮಾಡುತ್ತದೆ. ಈ ಮೌಲ್ಯವನ್ನು ಗಂಗಾದೇವಿ ಹೀಗೆ ಹರಳುಗಟ್ಟಿಸುತ್ತಾಳೆ:
ನ ಪ್ರಾರ್ಥನೀಯಃ ಸತ್ಕಾವ್ಯಶ್ರುತ್ಯೈ ಸಹೃದಯೋ ಜನಃ |
ಸ್ವಾದುಪುಷ್ಪರಸಾಸ್ವಾದೇ ಕಃ ಪ್ರೇರಯತಿ ಷಟ್ಪದಮ್ || (೧.೨೪)
ಒಳ್ಳೆಯ ಕವಿತೆಯನ್ನು ಆಲಿಸಬೇಕೆಂದು ಸಹೃದಯರನ್ನು ಯಾರೂ ಗೋಗರೆಯಬೇಕಿಲ್ಲ. ಒಳ್ಳೆಯ ಹೂವಿನ ಮಕರಂದವನ್ನು ಆಸ್ವಾದಿಸಲು ದುಂಬಿಯನ್ನು ಯಾರು ತಾನೆ ಪ್ರೇರಿಸುತ್ತಾರೆ?
ಈ ಶ್ಲೋಕದಲ್ಲಿ ಗಂಗಾದೇವಿಯು ಚಿರಕಾಲದಿಂದ ಕವಿಗಳಿಗೆ ಅಂಟಿಬಂದಿರುವ ಗೀಳನ್ನು ಮಾರ್ಮಿಕವಾಗಿ ತಿವಿದಿದ್ದಾಳೆ. ಏಕೆಂದರೆ ಹೆಚ್ಚಿನ ಕವಿಗಳಿಗೆ ತಮ್ಮ ನಿರ್ಮಿತಿಗಳನ್ನು ಸಹೃದಯರು ಆಸ್ವಾದಿಸಿ ಮೆಚ್ಚಿಕೊಳ್ಳಲೆಂಬ ಹಂಬಲವಿರುತ್ತದೆ. ಆದರೆ ವಿಧಿವೈಕಟ್ಯವೆಂಬಂತೆ ಇಂಥ ನಿರೀಕ್ಷೆ ಫಲಿಸುವುದು ತುಂಬ ವಿರಳ. ಹೀಗಾಗಿಯೇ ಬಲುಮಟ್ಟಿನ ಕವಿಗಳೆಲ್ಲ ತಮ್ಮ ಆಶಾಭಂಗವನ್ನು ಬಗೆಬಗೆಯಾಗಿ ಹೇಳಿಕೊಂಡು ಸಂಕಟ ಪಡುತ್ತಾರೆ; ಮುನಿದು ಮೂದಲಿಸುತ್ತಾರೆ ಕೂಡ. ಸಂಸ್ಕೃತಸಾಹಿತ್ಯ ಒಂದನ್ನೇ ಅನುಲಕ್ಷಿಸಿದರೆ ಸಾಕು, ಹೀಗೆ ಕುದ್ದುಕೊಂಡ ಕವಿಗಳ ಸಾವಿರಾರು ಪದ್ಯಗಳು ಸಾಕ್ಷ್ಯವಾಗಿ ಸಿಗುತ್ತವೆ. ಇಂಥ ಹಲುಬಾಟ ಯಾವುದೇ ಸತ್ಫಲವನ್ನಿತ್ತಂತೆ ತೋರದು. ವಸ್ತುತಃ ಈ ಪರಿಯ ಪ್ರಲಾಪ ಸಹೃದಯರನ್ನು ಕಾವ್ಯವಿಮುಖರಾಗುವಂತೆಯೇ ಮಾಡುತ್ತದೆ. ಈ ವಿಷಯಗಳನ್ನು ಕುರಿತು ಕ್ಷೇಮೇಂದ್ರನಂಥ ಕವಿಶಿಕ್ಷಾಕೃತಿಕಾರರನ್ನುಳಿದು ಮಿಕ್ಕವರು ಹೆಚ್ಚಾಗಿ ಚರ್ಚಿಸಿಲ್ಲ. ಗಂಗಾದೇವಿಯು ಈ ನಿಟ್ಟಿನಲ್ಲಿ ಧೀರವಾಗಿ ನಡೆದಿರುವ ಪರಿ ಎಲ್ಲ ಕವಿಗಳಿಗೂ ಮಾರ್ಗದರ್ಶಕ.
ಹೆಚ್ಚಿನ ಒಳನೋಟಗಳನ್ನು ಕೊಡದಿದ್ದರೂ ಕೊಟ್ಟಿರುವಷ್ಟರಲ್ಲಿ ತೆಗೆದುಹಾಕಲಾಗದಂಥ ಮಹತ್ತ್ವದ ಮಾತುಗಳನ್ನು ಟಂಕಿಸಿದ ಗಂಗಾದೇವಿ ಮರೆಯಲಾಗದ ಸಾಹಿತೀಮೂರ್ತಿ.
ನೀಲಕಂಠದೀಕ್ಷಿತ
ಅಖಿಲಭಾರತಸ್ತರದ ವಿದ್ವತ್ಕವಿಗಳ ಪೈಕಿ ಸ್ವಂತಿಕೆಯ ವೈಶಿಷ್ಟ್ಯವುಳ್ಳ ಕೊನೆಯ ಕೊಂಡಿಯೆಂದು ಹೇಳಬಹುದಾದ ಹಿರಿಮೆ ನೀಲಕಂಠದೀಕ್ಷಿತನದು. ಇವನ ಸಮಕಾಲಿಕರೆನ್ನಬಹುದಾದ ವೇಂಕಟಾಧ್ವರಿ ಮತ್ತು ಜಗನ್ನಾಥರಿಗಿಂತಲೂ ಹಲವು ಬಗೆಯಿಂದ ಮೇಲೆನಿಸುವ ಈ ಕವಿಯ ಕಾವ್ಯಗಳಲ್ಲದೆ ಕಾವ್ಯತತ್ತ್ವಚಿಂತನೆಗಳೂ ಮೌಲಿಕವಾಗಿವೆ. ಅವುಗಳನ್ನು ಕ್ರಮವಾಗಿ ಪರಿಶೀಲಿಸೋಣ. ಇವನು ಬಹುಗ್ರಂಥಕರ್ತೃವಾದರೂ ಕೆಲವು ಕೃತಿಗಳಲ್ಲಿ ಮಾತ್ರ ಕಾವ್ಯತತ್ತ್ವಚಿಂತನೆಯನ್ನು ಪ್ರತ್ಯೇಕವಾಗಿ ನಡಸಿದ್ದಾನೆ.
ಇವುಗಳಲ್ಲಿ ಮೊದಲಿಗೆ “ಸಭಾರಂಜನಶತಕ”ವನ್ನು ಗಮನಿಸಬಹುದು. ಈ ಕೃತಿಯಲ್ಲಿ ಕವಿಗಳ ಮತ್ತು ಕವಿಕರ್ಮದ ಮಹತ್ತ್ವವನ್ನು ಸಾರುವ ಕೆಲವು ಶ್ಲೋಕಗಳಿವೆ:
ಸಂದರ್ಭಶಕ್ತಿಹೀನಾನಾಂ ಶಬ್ದಾಭ್ಯಾಸೋ ವೃಥಾಶ್ರಮಃ |
ಮುಗ್ಧಾನಿ ಲಬ್ಧ್ವಾ ಪುಷ್ಪಾಣಿ ಮುಂಡಿತಃ ಕಿಂ ಕರಿಷ್ಯತಿ ||
ಅಶಿಕ್ಷಿತಾನಾಂ ಕಾವ್ಯೇಷು ಶಾಸ್ತ್ರಾಭ್ಯಾಸೋ ನಿರರ್ಥಕಃ |
ಕಿಮಸ್ತ್ಯನುಪನೀತಸ್ಯ ವಾಜಪೇಯಾದಿಭಿರ್ಮಖೈಃ ||
ಸಾಹಿತ್ಯವಿದ್ಯಾಹೀನಾನಾಂ ಸರ್ವಶಾಸ್ತ್ರವಿದಾಮಪಿ |
ಸಮಾಜಂ ಪರಿಪಶ್ಯಂತಿ ಸಮಜಂ ಬುದ್ಧಿಶಾಲಿನಃ ||
ಆಂಜಸ್ಯಂ ವ್ಯವಹಾರಾಣಾಮಾರ್ಜವಂ ಪರಮಂ ಧಿಯಾಮ್ |
ಸ್ವಾತಂತ್ರ್ಯಮಪಿ ತಂತ್ರೇಷು ಸೂತೇ ಕಾವ್ಯಪರಿಶ್ರಮಃ || (೧೩,೧೭,೧೬,೧೫)
ರಚನಾಶಕ್ತಿ ಇಲ್ಲದವರ ಶಬ್ದಶಾಸ್ತ್ರಪರಿಶ್ರಮ ವ್ಯರ್ಥವೆನಿಸುತ್ತದೆ. ಸುಂದರವಾದ ಹೂಗಳನ್ನು ಪಡೆದ ಬೋಳನು ಏನನ್ನು ತಾನೆ ಮಾಡಿಯಾನು? ಕಾವ್ಯವ್ಯಾಸಂಗ ಮಾಡದವರ ಶಾಸ್ತ್ರವ್ಯಾಸಂಗ ವ್ಯರ್ಥ. ಉಪನಯನವೂ ಆಗದವನಿಗೆ ವಾಜಪೇಯದಂಥ ದೊಡ್ಡ ಯಾಗಗಳ ಪ್ರಸಕ್ತಿಯಾದರೂ ಏಕೆ? ಸಕಲಶಾಸ್ತ್ರಗಳನ್ನು ಬಲ್ಲವರಾದರೂ ಸಾಹಿತ್ಯಸೂಕ್ಷ್ಮಗಳನ್ನು ತಿಳಿಯದವರನ್ನು ಜಾಣರು ಪಶುಗಳೆಂಬಂತೆ ಭಾವಿಸುತ್ತಾರೆ. ಕಾವ್ಯಾಭ್ಯಾಸವು ವ್ಯವಹಾರದಲ್ಲಿ ಸಾಮರ್ಥ್ಯವನ್ನೂ ವಿಚಾರದಲ್ಲಿ ಸರಳತೆಯನ್ನೂ ಶಾಸ್ತ್ರಗಳಲ್ಲಿ ಸ್ವತಂತ್ರಗತಿಯನ್ನೂ ಕೊಡುತ್ತದೆ.
ನೀಲಕಂಠದೀಕ್ಷಿತನು ಈ ಮಾತುಗಳ ಮೂಲಕ ಸಾಹಿತ್ಯಕ್ಕಿರುವ ಹಲವು ಸ್ತರಗಳ ಮಹತ್ತ್ವವನ್ನು ಕಾಣಿಸಿದ್ದಾನೆ. ಆಲಂಕಾರಿಕರು ಇವುಗಳನ್ನೆಲ್ಲ ಕಾವ್ಯಪ್ರಯೋಜನಗಳಲ್ಲಿ ಹೇಳಿಯೇ ಇದ್ದಾರೆ. ಅಲ್ಲಿಯ ಒಣಮಾತುಗಳನ್ನು ರಸಮಯವಾಗಿಸುವುದು ಇವನ ಕೌಶಲ.[2] ಇಷ್ಟಾಗಿಯೂ ಕಾವ್ಯಾಭ್ಯಾಸವು ಶಾಸ್ತ್ರಾಭ್ಯಾಸಕ್ಕೊಂದು ಪ್ರವೇಶಿಕೆಯೆಂಬ ಭಾವನೆ ಇಂದಿಗೂ ಮುಂದುವರಿದಿರುವುದು ಸಖೇದಾಶ್ಚರ್ಯ.
ಅನಂತರ “ಗಂಗಾವತರಣ”ವೆಂಬ ಮಹಾಕಾವ್ಯವನ್ನು ಪರಿಶೀಲಿಸಬಹುದು.
ಕವಿಯು ಕಲ್ಪನೆಯನ್ನು ಕುರಿತು ಹೀಗೆ ಹೇಳುತ್ತಾನೆ:
ಕಲ್ಪನೇತ್ಯಸ್ತಿ ತತ್ ಕಿಂಚಿತ್ ಕವಿಲೋಕಸ್ಯ ಜೀವಿತಮ್ |
ಪ್ರವಿಶ್ಯೇವ ಗೃಹೀತಂ ಯದ್ಭಾರತ್ಯಾಃ ಕೋಷಮಂದಿರಾತ್ || (೧.೬)
ಕವಿಗಳ ಬದುಕೇ ಆದ ಕಲ್ಪನೆಯೆಂಬ ಒಂದು ಕಾವ್ಯತತ್ತ್ವವಿದೆ. ಇದು ಸರಸ್ವತಿಯ ಬೊಕ್ಕಸಕ್ಕೇ ಹೋಗಿ ಹೆಕ್ಕಿ ತಂದ ವಸ್ತು.
ನೀಲಕಂಠದೀಕ್ಷಿತನು ತನ್ನ ವಕ್ರೋಕ್ತಿವೈಚಿತ್ರ್ಯಕ್ಕೆ ವಿಖ್ಯಾತ. ಇಲ್ಲಿಯೂ ಅವನ ವಕ್ರೋಕ್ತಿ ಪ್ರತಿಫಲಿಸಿದೆ. ನಮ್ಮ ಆಲಂಕಾರಿಕರು ಪ್ರತಿಭೆಯನ್ನು ವಿವರಿಸಿರುವಷ್ಟು ವಿಶದವಾಗಿ ಕಲ್ಪನೆಯನ್ನು ಚರ್ಚಿಸಿಲ್ಲ. ವಸ್ತುತಃ ಪ್ರತಿಭೆಯ ಕ್ರಿಯಾರೂಪವೇ ಕಲ್ಪನೆ. ಹೊಸ ಹೊಳಹು ಪ್ರತಿಭೆಯಾದರೆ ಅದನ್ನು ಹವಣಿಸಿ ಕೊಡುವ ಬಾಧ್ಯತೆ ಕಲ್ಪನೆಯದು. ಈ ಅಂಶವು ಪ್ರಕೃತಶಬ್ಬದ ಧಾತ್ವರ್ಥದಿಂದಲೇ ಸ್ಪಷ್ಟವಾಗುತ್ತದೆ: ಕೃಪೂ – ಸಾಮರ್ಥ್ಯೇ. ಆಧುನಿಕರು ಇದನ್ನು ಹೆಚ್ಚಾಗಿ ವಿವೇಚಿಸಿರುವುದು ಮುದಾವಹ. ಇಷ್ಟಾಗಿಯೂ ಪೂರ್ಣವಾಗಿ ನಿರ್ವಚಿಸಲಾಗದ ನೆಲೆ ಕಲ್ಪನೆಯದು. ಪ್ರತಿಭೆ ಕೂಡ ಇಂಥ ತತ್ತ್ವವೇ ಆದ ಕಾರಣ ನಾವು ಇದರ ರೂಪ-ಸ್ವರೂಪಗಳನ್ನು ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ನೀಲಕಂಠದೀಕ್ಷಿತನು ಕಲ್ಪನೆಯನ್ನು ಕವಿಲೋಕದ ಜೀವಿತವೆಂದು ಗುರುತಿಸಿರುವುದು ಬೆಲೆಯುಳ್ಳ ಸಂಗತಿ. ಕಲ್ಪನೆಯ ಮೂಲ ಶಾರದೆಯ ಭಂಡಾರವೆಂದು ಹೇಳುವ ಮೂಲಕ ಇದರ ನೆಲೆ ಪೌರುಷವನ್ನು ಮೀರಿದ್ದೆಂದು ಕವಿಯು ಸಾರುತ್ತಲೇ ಇದನ್ನು ತಂದುಕೊಳ್ಳುವ ಪ್ರಯತ್ನ ಮಾತ್ರ ಪೌರುಷವೆಂದು ಸೂಚಿಸಿರುವುದು ಹೆಚ್ಚಿನ ಸ್ವಾರಸ್ಯ. ಏಕೆಂದರೆ ಮಿಕ್ಕ ಲೋಕದ ಭೋಗಸಾಮಗ್ರಿಗಳಂತಲ್ಲದೆ ಕಲಾಭೋಗದ ಸಾಮಗ್ರಿ ಪೂರ್ಣವಾಗಿ ಪುರುಷಾಯತ್ತವಲ್ಲ; ಹಾಗೆಂದು ಅದು ಸರ್ವಥಾ ದೈವಾಧೀನವೂ ಅಲ್ಲ. ಇಲ್ಲಿ ದೈವ ಮತ್ತು ಪೌರುಷಗಳ ಸಾಮರಸ್ಯ ಆದ್ಯಂತವಾಗಿ ತೋರುತ್ತದೆ.
[1] ಗಂಗಾದೇವಿಯ ಈ ಮಾತನ್ನು ಮತ್ತೂ ಮೊನಚಾಗಿ ನೀಲಕಂಠದೀಕ್ಷಿತನು ಕಂಡರಿಸಿರುವುದು ಉಲ್ಲೇಖನೀಯ:
ಅರ್ಥಾವಬೋಧೇऽಪಿ ಸಮೇ ರಸಜ್ಞೈರನ್ವಿಷ್ಯತೇ ಸತ್ಕವಿಸೂಕ್ತಿರೇವ |
ಅಪತ್ಯಲಾಭೇऽಪಿ ಸಮೇ ವಿದಗ್ಧಾ ರೂಪೋತ್ತರಾಮೇವ ಹಿ ರೋಚಯಂತೇ || (ಶಿವಲೀಲಾರ್ಣವ, ೧.೨೩)
[2] ಇಲ್ಲಿ ಮಾತ್ರವಲ್ಲದೆ ಮಿಕ್ಕ ಹಲವು ಕೃತಿಗಳಲ್ಲಿಯೂ ಕವಿ-ಕವಿತೆಗಳನ್ನು ಕೊಂಡಾಡಿದ ನೀಲಕಂಠದೀಕ್ಷಿತ “ಕಲಿವಿಡಂಬನ”ದಲ್ಲಿ ಅವುಗಳ ಕಟುವಿಮರ್ಶೆಯನ್ನೂ ಮಾಡಿದ್ದಾನೆ. ಇದು ಆತನ ಸಮದೃಷ್ಟಿಗೆ ಸಾಕ್ಷಿ. ಮುಖ್ಯವಾಗಿ ಕವಿಸೃಷ್ಟಿ ಮತ್ತು ಕವಿಗಳಿಗೆ ತಮ್ಮ ಸೃಷ್ಟಿಯಿಂದ ಉಂಟಾಗುವ ಪ್ರಯೋಜನವನ್ನು ಕುರಿತು ಈತ ಆಡಿರುವ ಒಂದೆರಡು ಕಟಕಿಯ ಮಾತುಗಳನ್ನು ಗಮನಿಸಬಹುದು:
ಸ್ತುತಂ ಸ್ತುವಂತಿ ಕವಯೋ ನ ಸ್ವತೋ ಗುಣದರ್ಶಿನಃ |
ಕೀಟಃ ಕಶ್ಚಿದಲಿರ್ನಾಮ ಕಿಯತೀ ತತ್ರ ವರ್ಣನಾ || (೩೫)
ಪ್ರಶಂಸಂತೋ ನರಾಭಾಸಾನ್ ಪ್ರಲಪಂತೋऽನ್ಯಥಾನ್ಯಥಾ |
ಕಥಂ ತರಂತು ಕವಯಃ ಕಾಮಪಾರಮ್ಯವಾದಿನಃ || (೩೯)
ಇಲ್ಲಿ ಕವಿಯು ಕಾವ್ಯಲೋಕದ ಮುದ್ದಿನ ವರ್ಣ್ಯವಸ್ತುವಾದ ದುಂಬಿಯನ್ನು ಕುರಿತು ಮಾಡಿರುವ ತಿವಿತ ಮಾರ್ಮಿಕವಾಗಿದೆ. ಅಂತೆಯೇ ಎಣೆಮೀರಿದ ಸ್ತ್ರೀವರ್ಣನೆ, ಶೃಂಗಾರವರ್ಣನೆ ಮತ್ತು ಆಶ್ರಯದಾತರ ಪ್ರಶಂಸೆಗಳು ಇಡಿಕಿರಿದ ಕಾವ್ಯಪರಂಪರೆಯನ್ನು ಗೇಲಿ ಮಾಡಿರುವುದೂ ಮೆಚ್ಚುವಂತಿದೆ. ಕಾವ್ಯಕೌಶಲವನ್ನು ನಿರ್ಲಜ್ಜವಾಗಿ ಸಕಲಪ್ರಯೋಜನಗಳಿಗೆ ದುರುಪಯೋಗಿಸಿಕೊಳ್ಳುವ ಚಾಳಿಯನ್ನು ಹೀಗೆ ಮೂದಲಿಸುತ್ತಾನೆ:
ಏಕೈವ ಕವಿತಾ ಪುಂಸಾಂ ಗ್ರಾಮಾಯಾಶ್ವಾಯ ಹಸ್ತಿನೇ |
ಅಂತತೋऽನ್ನಾಯ ವಸ್ತ್ರಾಯ ತಂಬೂಲಾಯ ಚ ಕಲ್ಪತೇ || (೩೬)
ಆಶ್ರಯದಾತರನ್ನು ಉಪ್ಪು-ಸೊಪ್ಪುಗಳಿಂದ ಮೊದಲ್ಗೊಂಡು ಹೆಣ್ಣು-ಹೊನ್ನುಗಳವರೆಗೆ ಎಲ್ಲಕ್ಕೂ ಹೊಗಳುವುದಲ್ಲದೆ ಒಂದೇ ಕಾವ್ಯವನ್ನು ನೇರವಾಗಿಯೋ ಅಷ್ಟಿಷ್ಟು ಮಾರ್ಪಡಿಸಿಯೋ ಬೇರೆ ಬೇರೆ ಪ್ರಭುಗಳ ಪ್ರಶಸ್ತಿರೂಪದಲ್ಲಿ ಮಾರಿಕೊಂಡು ಬದುಕುವ ನುಡಿಜಾಣರನ್ನು ಆಕ್ಷೇಪಿಸುವ ಭಾವ ಇಲ್ಲಿ ಮಡುಗಟ್ಟಿದೆ. ನೀಲಕಂಠದೀಕ್ಷಿತನ ಹಿರಿಯ ಸಮಕಾಲೀನನೆನ್ನಬಹುದಾದ ಜಗನ್ನಾಥನು ತನ್ನ ಒಂದೇ ಕಾವ್ಯವನ್ನು (“ಜಗದಾಭರಣ” / “ಪ್ರಾಣಾಭರಣ”) ಜಗತ್ಸಿಂಹ, ಶಾಹ್ ಜಹಾನ್, ದಾರಾ ಶಿಕೋ ಮತ್ತು ಪ್ರಾಣನಾರಾಯಣರ ಸ್ತುತಿಯಾಗಿ ರೂಪಿಸಿದ ವಿಕಟಸಂದರ್ಭವನ್ನು ನೆನೆದಾಗ ಇಲ್ಲಿಯ ಕಟಕಿ ಮತ್ತೂ ಅರ್ಥಪೂರ್ಣವಾದೀತು. ತನ್ನ ಹಿರಿಯಜ್ಜ ಅಪ್ಪಯ್ಯದೀಕ್ಷಿತರನ್ನು ಪರಿಪರಿಯಾಗಿ ಆಕ್ಷೇಪಿಸಿದ ಜಗನ್ನಾಥನನ್ನು ನೇರವಾಗಿ ಖಂಡಿಸಿದ ಪ್ರತೀತಿಯೂ ನೀಲಕಂಠದೀಕ್ಷಿತನ ಪಾಲಿಗಿದೆ. ಹೀಗಾಗಿ ಪರ್ಯಾಯರೂಪದ ಇಲ್ಲಿಯ ವಿಡಂಬನೆಗೆ ಹೆಚ್ಚಿನ ಮಹತ್ತ್ವವಿದೆ.
To be continued.