ಕಾವ್ಯಕಲೆ ಸಕಲಮಾನವರಿಗೆ ಸಂತೋಷಕಾರಿಯೆಂಬ ತಥ್ಯವನ್ನು ತನ್ನದಾದ ನಿರುಪಮರೀತಿಯಲ್ಲಿ ಹೀಗೆ ಸಮರ್ಥಿಸುತ್ತಾನೆ:
ಆವರ್ಣಶಕ್ತಿಗ್ರಹಮಾಪವರ್ಗಂ
ದುಃಖೈಕರೂಪಾ ವಿರಚಯ್ಯ ವಿದ್ಯಾಃ |
ವಿಶ್ರಾಂತಿಹೇತೋಃ ಕವಿತಾಂ ಜನಾನಾಂ
ವೇಧಾಃ ಸದಾನಂದಮಯೀಂ ಕಿಮಾಧಾತ್ || (೧.೩೧)
ವರ್ಣಮಾಲೆ-ವ್ಯಾಕರಣಗಳಿಂದ ಮೊದಲ್ಗೊಂಡು ಮೋಕ್ಷಶಾಸ್ತ್ರದವರೆಗೆ ಕಲಿಯಲು ತುಂಬ ಕಷ್ಟವಾದ ವಿದ್ಯೆಗಳನ್ನೆಲ್ಲ ರೂಪಿಸಿದ ಬಳಿಕ ಬ್ರಹ್ಮನು ಎಲ್ಲರಿಗೆ ಆನಂದವೀಯುವ ಚಿತ್ತಕ್ಕೆ ವಿಶ್ರಾಂತಿಕಾರಿಯಾದ ಈ ಸಾಹಿತ್ಯಕಲೆಯನ್ನು ಸೃಷ್ಟಿಸಿದನೇನೋ!
ಮಿಕ್ಕೆಲ್ಲ ಶಾಸ್ತ್ರಗಳಲ್ಲಿ ಕಲಿಕೆ, ಕಲಿಸುವಿಕೆ ಮತ್ತು ಬೆಳಸುವಿಕೆಗಳು ಶ್ರಮಾವಹ. ಆದರೆ ಸಾಹಿತ್ಯದಂಥ ಕಲೆಗಳ ಸಂಗತಿ ಆಗಲ್ಲ. ಅವುಗಳ ನಿರ್ಮಾಣದ ಕಾಲದಲ್ಲಿ ಕಲಾವಿದರಿಗೆಷ್ಟು ಶ್ರಮವೆನಿಸಿದರೂ ಸಹೃದಯರಿಗೆ ಮಾತ್ರ ಆನಂದೈಕರೂಪವಾದ ಆಸ್ವಾದ ಲಭಿಸುತ್ತದೆ. ಇದೇ ಶಾಸ್ತ್ರ ಮತ್ತು ಕಲೆಗಳಿಗಿರುವ ಹಿರಿದಾದ ಅಂತರ. ಇದನ್ನು ಭರತಮುನಿಯೇ ಮೊದಲಿಗೆ ಗುರುತಿಸಿದ್ದಾನೆ.[1]
ಕವಿಗೆ ವಾಗರ್ಥಗಳ ಸಹಿತತೆಯಿಂದ ಬಂದೊದಗುವ ಅನಂತವೈವಿಧ್ಯವನ್ನು ಕುರಿತು ಎಣೆಯಿಲ್ಲದ ಕೌತುಕ, ಅಳವು ಮೀರಿದ ಮೆಚ್ಚಿಗೆ:
ಸಿದ್ಧಂ ಪದಂ ಸಿದ್ಧತರಸ್ತದರ್ಥಃ
ಸಾಧ್ಯಾ ಪದಾನಾಂ ಪರಮಾನುಪೂರ್ವೀ |
ತನ್ಮಾತ್ರಸಾರೇ ಕವಿತಾಪರೇऽಸ್ಮಿನ್
ಕಿಯದ್ವಿಧಾತ್ರಾ ಕೃತಮುಚ್ಚನೀಚಮ್ || (೧.೩೨)
ಪ್ರತಿಯೊಂದ ಪದವೂ ಸಿದ್ಧವಾಗಿದೆ. ಅದಕ್ಕೆ ನಿಶ್ಚಿತವಾದ ಅರ್ಥವೂ ಸಿದ್ಧವಾಗಿದೆ. ಈ ಪದಗಳನ್ನು ಅನ್ವಯಿಸುವ ಕ್ರಮವಷ್ಟೇ ಉಳಿದಿರುವುದು. ಸಾಹಿತ್ಯನಿರ್ಮಿತಿಗಿರುವ ಈ ಮಟ್ಟದ ಸ್ವಲ್ಪಾವಕಾಶದಲ್ಲಿಯೂ ಬ್ರಹ್ಮನು ಅದೆಷ್ಟು ಮೇಲು-ಕೀಳುಗಳನ್ನು ಮಾಡಿದ್ದಾನೆ!
ಕವಿಯು ಲೋಕಪ್ರಸಿದ್ಧವಾದ ವಾಗರ್ಥಗಳನ್ನೇ ಬಳಸಿಕೊಂಡು ಅವುಗಳ ಸಂಯೋಜನೆಯಲ್ಲಿ ವೈವಿಧ್ಯವನ್ನು ಸಾಧಿಸಬೇಕು. ಹೀಗಾಗಿ ಅವನಿಗಿರುವ ಅವಕಾಶ ಕಡಮೆ. ಆದರೆ ಈ ಅಲ್ಪಾವಕಾಶದಲ್ಲಿಯೇ ಅನಂತಪ್ರಕಾರದ ಸಾಹಿತ್ಯಗಳೂ ಅಶೇಷಸಂಖ್ಯೆಯ ಕವಿಗಳೂ ಸೇರಿಹೋಗುವರೆಂದರೆ ಅದೆಂಥ ಆಶ್ಚರ್ಯ! ಇದು ಮತ್ತೆ ಕವಿಯ ಗ್ರಥನಕೌಶಲವನ್ನು—ವಿಭಾವಾನುಭಾವಸಾಮಗ್ರೀಸಂಯೋಜನವನ್ನು—ಕಟಾಕ್ಷಿಸುತ್ತದೆ. ಇಂಥ ಅಭಿಪ್ರಾಯಗಳನ್ನು ನೀಲಕಂಠದೀಕ್ಷಿತನು ಮತ್ತೆ ಮತ್ತೆ ವ್ಯಕ್ತಪಡಿಸುತ್ತಾನೆ (೧.೧೨, ೧.೩೩).
ಅನೌಚಿತ್ಯವನ್ನು ಕುರಿತು ಹೀಗೆ ಹೇಳುತ್ತಾನೆ:
ಸಾಹಿತ್ಯವಿದ್ಯಾಂ ಪದಮೇಕಮೇವ
ಸರ್ವಾನವದ್ಯಾಮಪಿ ಹಂತಿ ದುಃಸ್ಥಮ್ |
ದಂತಾವಲಿಂ ಮೌಕ್ತಿಕದಾಮರಮ್ಯಾಂ
ದಂಷ್ಟ್ರೇವ ವಕ್ರ್ತಾದ್ಬಹಿರುಲ್ಲಸಂತೀ || (೧.೩೫)
ಸಾಹಿತ್ಯವೆಂಬ ಕುಂದಿಲ್ಲದ ಸುಂದರಿಯನ್ನು ಒಂದೇ ಒಂದು ಅನುಚಿತವಾದ ಪದವೂ ಹಾಳ್ಗೆಡವುತ್ತದೆ. ಮುತ್ತಿನ ಸಾಲಿನಂಥ ಹಲ್ಲುಗಳ ನಡುವೆ ಒಂದು ಹೆಚ್ಚು-ಕಡಮೆ ಆದರೂ ಅದು ಕೋರೆದಾಡೆಗಳ ಹಾಗೆ ಅಂದಗೆಡಿಸುತ್ತದೆ.
ಇದರ ಸ್ವಾರಸ್ಯವನ್ನು ಮತ್ತೆ ವ್ಯಾಖ್ಯಾನಿಸಬೇಕಿಲ್ಲ.
ಕವಿಯು ಯುಗಾನುಸಾರವಾದ ಧರ್ಮಹ್ರಾಸದಂತೆಯೇ ಸೌಂದರ್ಯಹ್ರಾಸವೂ ಸಾಗಿರುವುದನ್ನು ಹೀಗೆ ಗುರುತಿಸುತ್ತಾನೆ:
ಕೃತೇ ಯುಗೇ ವ್ಯಂಜನಯಾವತೀರ್ಣಂ
ತ್ರೇತಾಯುಗೇ ಸೈವ ಗುಣೀಬಭೂವ |
ಆಸೀತ್ತೃತೀಯೇ ತು ಯುಗೇऽರ್ಥಚಿತ್ರಂ
ಯುಗೇ ತುರೀಯೇ ಯಮಕಪ್ರಪಂಚಃ || (೧.೩೮)
ಕಾವ್ಯವು ಕೃತಯುಗದಲ್ಲಿ ವ್ಯಂಜನಾಪಾರಮ್ಯದಿಂದ ಕೂಡಿತ್ತು. ತ್ರೇತಾಯುಗದಲ್ಲದು ಗುಣೀಭೂತವ್ಯಂಗ್ಯದ ಸ್ತರಕ್ಕೆ ಇಳಿಯಿತು. ದ್ವಾಪರಯುಗದಲ್ಲಾದರೋ ಅರ್ಥಚಿತ್ರದ ಹಂತಕ್ಕೆ ಜಾರಿತು. ಇನ್ನು ಕಲಿಯುಗದಲ್ಲಂತೂ ಶಬ್ದಚಿತ್ರದ ಪಾತಾಳವನ್ನು ಕಂಡಿದೆ.
ಇದೊಂದು ಅದ್ಭುತವಾದ ಅಳತೆ. ಜಗನ್ನಾಥಪಂಡಿತನು ಹೇಳುವ ಉತ್ತಮೋತ್ತಮಕಾವ್ಯ, ಉತ್ತಮಕಾವ್ಯ, ಮಧ್ಯಮಕಾವ್ಯ ಮತ್ತು ಅಧಮಕಾವ್ಯಗಳಿಗೆ ಈ ನಾಲ್ಕು ಪ್ರಕಾರಗಳು ಸಂವಾದಿಗಳು. ವ್ಯಾಸ-ವಾಲ್ಮೀಕಿಗಳ ಕೃತಿಗಳಲ್ಲಿ ರಸಧ್ವನಿಯ ಪಾರಮ್ಯ ಹೆಚ್ಚು. ಭಾಸ-ಕಾಳಿದಾಸಾದಿಗಳ ಕಾಲಕ್ಕೆ ಉಕ್ತಿವೈಚಿತ್ರ್ಯದಲ್ಲಿ ಹೆಚ್ಚಿನ ಸೊಗಸುಳ್ಳ ಗುಣೀಭೂತವ್ಯಂಗ್ಯವು ಪ್ರಧಾನವಾದ ಅಲಂಕಾರಗಳಿಂದ ಕೂಡಿದ ಪುಷ್ಕಲವರ್ಣನೆ ಮತ್ತು ಸೀಮಿತ ಇತಿವೃತ್ತಗಳು ತೋರಿಕೊಳ್ಳುತ್ತವೆ. ಮಾಘ, ಶ್ರೀಹರ್ಷನಂಥವರ ಬರೆವಣಿಗೆಗಳು ಅರ್ಥಚಿತ್ರಕ್ಕೆ ಮಣೆಹಾಕಿದ ಅವನತಿಯ ಸಂಕೇತವಾಗಿವೆ. ಘಟಕರ್ಪರ, ವಾಸುದೇವ ಮುಂತಾದವರ ಕೃತಿಗಳಂತೂ ಅಕ್ಷರಶಃ ಶಬ್ದಚಿತ್ರದ ಯಮಕಕಾವ್ಯಗಳಾಗಿವೆ. ಈ ಬಗೆಯ ಪರಿಣಾಮ ಕಾಲಪ್ರವಾಹದಲ್ಲಿ ಬೆಳೆದುಬಂದಿರುವುದು ಗಮನಾರ್ಹ. ಆದುದರಿಂದಲೇ ಕವಿಯು ಇವನ್ನು ನಾಲ್ಕು ಯುಗಗಳೆಂಬಂತೆ ರೂಪಕೀಕರಿಸಿದ್ದಾನೆ.
ಚಿಂತಿಸಿ ಬರೆದಷ್ಟೂ ಕವಿತೆ ಸೊಗಯಿಸುತ್ತದೆಂಬುದು ಸಲ್ಲುವ ಮಾತು. ಆದರೆ ಅದು ರಚನಾಕೌಶಲದ ಅಶಕ್ತಿಯಿಂದ ಹುಟ್ಟಿರಬಾರದು. ಈ ಕುರಿತು ನೀಲಕಂಠದೀಕ್ಷಿತ ಹೀಗೆನ್ನುತ್ತಾನೆ:
ಅದ್ಯೈಕಮೇಕಂ ಕುಧಿಯಃ ಪರೇದ್ಯು-
ರನ್ಯೇದ್ಯುರೇಕಂ ಚ ಪದಂ ನಿಬಧ್ಯ |
ಶುಕ್ತಂ ಕ್ವಚಿತ್ ಪರ್ಯುಷಿತಂ ಕ್ವಚಿಚ್ಚ
ಕೋಷ್ಣಂ ಕ್ವಚಿಚ್ಚಾರಚಯಂತಿ ಪದ್ಯಮ್ || (೧.೪೨)
ಕುಕವಿಗಳು ಇಂದು ಒಂದು, ನಾಳೆ ಮತ್ತೊಂದು, ನಾಡದ್ದು ಮಗದೊಂದು ಎಂಬಂತೆ ಪದಗಳನ್ನು ತಿಣುಕಿ ತಿಣುಕಿ ಹೆಣೆದು ಹಸಿಬಿಸಿಯಾದ ಹಳಸಲು ಗಂಜಿಯಂಥ ಪದ್ಯವನ್ನು ಹೆರುತ್ತಾರೆ.
ಈ ಪದ್ಯದಲ್ಲಿ ಕವಿಯು ತೋರುವ ಅಸಹನೆ ಗಮನಾರ್ಹ. ಧಾರಾಶುದ್ಧಿಯಿಲ್ಲದ ಕಾವ್ಯ ಸೊಂಪಾಗಿ ಬೆಳೆಯದು. ಧಾರೆಯು ಪ್ರತಿಭೆ, ವ್ಯುತ್ಪತ್ತಿ ಮತ್ತು ಅಭ್ಯಾಸಗಳಿಗೆ ಅಧೀನ. ಇವು ಮೂರೂ ಒಡವರಿದಾಗಲೇ ಕಾವ್ಯಸಮಾಧಿ ಸಿದ್ಧಿಸುತ್ತದೆ. ಕ್ಷೇಮೇಂದ್ರಾದಿಗಳು ಇಂಥ ಗುಣಗಳನ್ನು ಗಮನಿಸಿಕೊಂಡು ಕವಿಗಳಿಗೆ ಕಿವಿಮಾತು ಹೇಳಿದ್ದಾರೆ.
ಧಾರಾಸಮೃದ್ಧಿಯಿಲ್ಲದ ಕವಿಗಳ ಪಾಡನ್ನು ಮತ್ತೂ ಮಾರ್ಮಿಕವಾಗಿ ವಿಡಂಬಿಸುತ್ತಾನೆ:
ವಿವಕ್ಷಿತಾರ್ಥಪ್ರತಿಪಾದಕಂ ಯೇ
ವಿನ್ಯಾಸಭೇದಂ ನ ವಿದುಃ ಪದಾನಾಮ್ |
ದುಃಖಾವಹೋऽರ್ಥಃ ಸ್ಫುರಿತೋऽಪಿ ತೇಷಾಂ
ದೌರ್ಭಾಗ್ಯಭಾಜಾಮಿವ ಪುತ್ರಲಾಭಃ || (೧.೪೫)
ತಮ್ಮ ಇಂಗಿತವನ್ನು ಸೂಚಿಸಬಲ್ಲ ಪದಗಳ ಗುಂಫನ ಶಕ್ಯವಿಲ್ಲದ ಕವಿಗಳು ಹೇಗೋ ಹೆಣಗಿ ಕಾವ್ಯ ರಚಿಸಿದರೂ ಅದು ಬಡವರಿಗಾದ ಸಂತಾನದಂತೆ ಮತ್ತಷ್ಟು ಕಷ್ಟವನ್ನೇ ಕೊಡುತ್ತದೆ!
ಭಾವ ಮತ್ತು ಭಾಷೆಗಳಿಗೆ ಅಂತರ ಕಡಮೆಯಾದಷ್ಟೂ ಕಾವ್ಯ ಉತ್ತಮವಾಗುತ್ತದೆ. ಇದು ಸಾಧ್ಯವಾಗುವುದು ಕವಿಯು ಅನುಭವ ಮತ್ತು ಅಭಿವ್ಯಕ್ತಿಗಳಲ್ಲಿ ಸಮೃದ್ಧನಾದಾಗಲೇ. ಲೋಕವ್ಯವಹಾರದಲ್ಲಿ ಬಾಳುತ್ತಿರುವ ಭಾಷೆಯನ್ನು ಅವಲಂಬಿಸಿದ ಕವಿಗಳಿಗೆ ಅಭಿವ್ಯಕ್ತಿಯ ಕ್ಲೇಶ ಅಷ್ಟಾಗಿ ಕಾಡದು. ಆದರೆ ಅಭಿಜಾತಭಾಷೆಗಳ ಕವಿಗಳಿಗೆ ಇದೊಂದು ಹಿರಿದಾದ ಕಷ್ಟ. ಈ ಸಮಸ್ಯೆ ಎಲ್ಲ ಅಭಿಜಾತಕಲೆಗಳನ್ನು ಅನುಸಂಧಾನಿಸುವ ಕಲಾವಿದರಿಗೂ ಉಂಟು. ಏಕೆಂದರೆ ಇವರೆಲ್ಲರ ಅನುಭವದ್ರವ್ಯ ವರ್ತಮಾನಜಗತ್ತಿನಿಂದಲ್ಲದೆ ಭೂತ-ಭವಿಷ್ಯಲ್ಲೋಕಗಳಿಂದ ಸಿದ್ಧವಾಗದು. ವರ್ತಮಾನದ್ದಲ್ಲದ ಯಾವುದೇ ಅಂಶವು ಜ್ಞಾಪಕಸ್ತರಕ್ಕೂ ಊಹನಸ್ತರಕ್ಕೂ ಸೇರುವುದಲ್ಲದೆ ಅನುಭವಕ್ಕೆ ಸೇರಿಕೊಳ್ಳದು. ಮಾತ್ರವಲ್ಲ, ಎಲ್ಲ ಕಲೆಗಳ ಮೂಲಸಾಮಗ್ರಿಯಾದ ಭಾವಗಳು ವರ್ತಮಾನದಿಂದಲೇ ಸಂವೇದ್ಯ. ಹೀಗಾಗಿ ಅಭಿಜಾತಕಲಾವಿದರಿಗೆ ವ್ಯುತ್ಪತ್ತಿ ಮತ್ತು ಅನುಭವಗಳು ಬಲುಮಟ್ಟಿಗೆ ಬೇರೆಬೇರೆಯಾಗಿಯೇ ಸಜ್ಜಾಗಬೇಕಾದ ಅನಿವಾರ್ಯತೆಯಿದೆ. ಆದುದರಿಂದಲೇ ಅವರಿಗೆ ಹೆಚ್ಚಿನ ಪ್ರತಿಭೆ ಮತ್ತು ಅಭ್ಯಾಸಗಳು ಆವಶ್ಯಕ. ಈ ಅಂಶಗಳನ್ನು ನಮ್ಮ ಹಿಂದಿನ ಆಲಂಕಾರಿಕರು ಗಮನಿಸಿಲ್ಲ; ಇದರ ಅನಿವಾರ್ಯತೆಯೂ ಅವರಿಗೆ ಇರಲಿಲ್ಲ. ಆದರೆ ಇಂದಿನ ಕಾವ್ಯಮೀಮಾಂಸಕರೂ ಕಲಾವಿಮರ್ಶಕರೂ ಈ ನಿಟ್ಟಿನಲ್ಲಿ ಚಿಂತಿಸಬೇಕಾದ ತುರ್ತು ಹೆಚ್ಚಾಗಿದೆ.
ನೀಲಕಂಠದೀಕ್ಷಿತನಿಗೆ ಕುಕವಿ ಮತ್ತು ಕುಕವಿತೆಗಳನ್ನು ಕುರಿತು ಅದೆಷ್ಟು ತಿಕ್ತಭಾವಗಳಿದ್ದರೂ ಅಲ್ಲಿಯ ಕಷ್ಟಗಳಿಗೆ ಅವನು ಕುರುಡಾಗಿಲ್ಲ. ಗೇಲಿಯ ಮಾತಾಗಿ ಹೇಳುವಾಗಲೂ ಅವನ ಚಿಕಿತ್ಸಕದೃಷ್ಟಿಯ ಗಾಂಭೀರ್ಯ ಅನುಪೇಕ್ಷಣೀಯ:
ಶ್ರಾಮ್ಯಂತಿ ಯಾವತ್ಕವಯಃ ಪರೇऽಪಿ
ಶ್ರಾಮ್ಯಂತಿ ತಾವಚ್ಚ ತತೋऽಧಿಕಂ ಚ |
ಗರ್ಭೋದ್ಭವಾದಿಃ ಪ್ರಸವಾವಸಾನಃ
ಕ್ಲೇಶೋ ಹಿ ದುಷ್ಪುತ್ರಸುವಾಂ ಚ ತುಲ್ಯಃ || (೧.೪೮)
ಕಾವ್ಯರಚನೆಗೆ ಸುಕವಿಗಳೆಷ್ಟು ಶ್ರಮಿಸುವರೋ ಕುಕವಿಗಳೂ ಅಷ್ಟೇ ಶ್ರಮಿಸುತ್ತಾರೆ; ಅವರು ಮತ್ತಷ್ಟು ಕಷ್ಟ ಪಡುವರೆಂದೇ ಹೇಳಬೇಕು. ಹೊತ್ತು, ಹೆತ್ತು ನೋವುಣ್ಣುವ ಕಷ್ಟ ಸುಪುತ್ರವತಿಯರಿಗೂ ದುಷ್ಪುತ್ರವತಿಯರಿಗೂ ಒಂದೇ.
ತುಂಬ ಮಾರ್ಮಿಕವಾದ ಈ ಪದ್ಯದ ಮೂಲಕ ಕವಿಯು ಧ್ವನಿಸುತ್ತಿರುವ ಸತ್ಯವಾದರೂ ಇಷ್ಟೇ: ಕೆಟ್ಟ ಕವಿತೆಗೂ ಒಳ್ಳೆಯ ಕವಿತೆಗೂ ಪಡಬೇಕಾದ ಪರಿಶ್ರಮ ಒಂದೇ ಆಗಿರುವಾಗ ಕುಕವಿತೆ ಬರೆದು ನಿಂದಿತರಾಗುವುದಕ್ಕಿಂತ ಸುಕವಿತೆ ರಚಿಸಿ ಸ್ತುತರಾಗುವುದೇ ಒಳಿತು. ಇದು ವ್ಯಾವಹಾರಿಕವಾಗಿ ಕೂಡ ಸಲ್ಲುವ ಮಾತು. ಈ ಕಾರಣದಿಂದ ನೀಲಕಂಠದೀಕ್ಷಿತ ದುಷ್ಕವಿತೆಯನ್ನು ತುಂಬ ಆಕ್ಷೇಪಿಸುತ್ತಾನೆ. ಧರ್ಮಶಾಸ್ತ್ರಕಾರರು ಬ್ರಹ್ಮಹತ್ಯೆಯಂಥ ಮಹಾಪಾಪಗಳಿಗೆ ಪ್ರಾಯಶ್ಚಿತ್ತವನ್ನು ಹೇಳಿದ್ದರೂ ಕುಕಾವ್ಯರಚನೆಯೆಂಬ ಪಾತಕಕ್ಕೆ ನಿಷ್ಕೃತಿಯನ್ನು ಹೇಳಿಲ್ಲದ ಕಾರಣ ಇದು ಮತ್ತೂ ಮಿಗಿಲೆಂಬುದು ಅವನ ಇಂಗಿತ (೧.೫೦).
ರಸಿಕರಿಗೂ ವಿಮರ್ಶಕರಿಗೂ ಇರುವ ರುಚಿಭೇದಗಳನ್ನು ಕವಿ ಬಲ್ಲ:
ರಸಂ ರಸಜ್ಞಾಃ ಕಲಯಂತಿ ವಾಚಿ
ಪರೇ ಪದಾರ್ಥಾನಪರೇ ಪದಾನಿ |
ವಸ್ತ್ರಂ ಕುವಿಂದಾ ವಣಿಜೋ ವಿಭೂಷಾಂ
ರೂಪಂ ಯುವಾನಶ್ಚ ಯಥಾ ಯುವತ್ಯಾಮ್ || (೧.೬೦)
ಕಾವ್ಯದಲ್ಲಿ ರಸಜ್ಞರು ರಸವನ್ನೂ ಮತ್ತಿತರರು ವಾಗರ್ಥಗಳನ್ನೂ ಇನ್ನು ಕೆಲವರು ಪದಗಳನ್ನೂ ಗಮನಿಸಿಕೊಳ್ಳುತ್ತಾರೆ. ಯುವತಿಯೊಬ್ಬಳ ಚೆಲುವನ್ನು ಯುವಕರು ಬಯಸಿದರೆ, ಅವಳ ಬಟ್ಟೆಯ ಸೊಗಸನ್ನು ನೇಯ್ಗೆಯವರೂ ಒಡವೆಗಳ ಬೆಡಗನ್ನು ವರ್ತಕರೂ ಆದರಿಸುತ್ತಾರೆ.
ಈ ಮೂಲಕ ಕಾವ್ಯದ ಪ್ರಧಾನಸೌಂದರ್ಯ ರಸದಲ್ಲಿದೆ, ಅದರ ಈಚೆಗೆ ಅಲಂಕಾರಗಳ ಬೆಡಗು ಮತ್ತು ಇನ್ನೂ ಈಚೆಗೆ ವ್ಯುತ್ಪಾದಕವಾದ ಶಬ್ದಗಳ ಮಹತ್ತ್ವ ಸಲ್ಲುತ್ತದೆಂದು ಕವಿ ಹೇಳುತ್ತಾನೆ. ಇದು ಕಾವ್ಯವನ್ನು ಕೇವಲ ವ್ಯುತ್ಪತ್ತಿಗಾಗಿ ಲೆಕ್ಕಿಸುವವರತ್ತ ಕವಿಯು ತೋರಿದ ಉಪೇಕ್ಷೆಯೇ ಆಗಿದೆ.
ನೀಲಕಂಠದೀಕ್ಷಿತನು ಕಣ್ಣೆದುರಿಗಿರುವ ಸುಕವಿಗಳತ್ತ ಲೋಕವು ತೋರುವ ಅವಜ್ಞೆಯನ್ನು ತೀಕ್ಷ್ಣವಾಗಿ ಆಕ್ಷೇಪಿಸುತ್ತಾನೆ:
ಪ್ರಾಚೀನಪದ್ಯಭ್ರಮತಃ ಪ್ರವೃತ್ತಾಃ
ಸ್ತೋತುಂ ಖಲಾಃ ಪ್ರೇಕ್ಷ್ಯ ಕವಿಂ ಪುರಸ್ತಾತ್ |
ಯೇನಾನ್ಯಥಾ ಕರ್ತುಮಿದಂ ಯತಂತೇ
ಕ್ಲೇಶೇನ ತೇಷಾಂ ಹಿ ಸ ಏವ ದಂಡಃ || (೧.೬೪)
ತಾವು ಕೇಳಿದ ಕವಿತೆಯೊಂದನ್ನು ಪ್ರಾಚೀನಕವಿಯ ಕೃತಿಯೆಂದು ಭ್ರಮಿಸಿದ ನೀಚರು ಅದನ್ನು ಕೊಂಡಾಡಲು ತೊಡಗುವಾಗ ಅದರ ಕರ್ತೃ ತಮ್ಮೆದುರೇ ಇರುವನೆಂದು ಅರಿತು ತಾವು ಬೇಸ್ತುಬಿದ್ದದ್ದನ್ನು ಮರೆಮಾಚಿಕೊಳ್ಳಲು ಎಷ್ಟೆಲ್ಲ ಕಷ್ಟ ಪಡುವರೋ ಅದೇ ಅವರಿಗೆ ದಂಡನೆಯಾಗುತ್ತದೆ.
ಮೇಲಣ ಮಾತು ರಾಜಶೇಖರನ ಮಾರ್ಮಿಕೋಕ್ತಿಯನ್ನು ಚೆನ್ನಾಗಿ ನೆನಪಿಸುತ್ತದೆ.[2] ಇದು ವಿಶ್ವದಲ್ಲೆಲ್ಲ ತೋರಿಕೊಳ್ಳುವ ಅವಾಂಛಿತ ವಿದ್ಯಮಾನ.
[1] ದುಃಖಾರ್ತಾನಾಂ ಶ್ರಮಾರ್ತಾನಾಂ ಶೋಕಾರ್ತಾನಾಂ ತಪಸ್ವಿನಾಮ್ | ವಿಶ್ರಾಂತಿಜನನಂ ಕಾಲೇ ನಾಟ್ಯಮೇತದ್ಭವಿಷ್ಯತಿ ||
(ನಾಟ್ಯಶಾಸ್ತ್ರ, ೧.೧೧೪)
[2] ಗೀತಸೂಕ್ತಿರತಿಕ್ರಾಂತೇ ಸ್ತೋತಾ ದೇಶಾಂತರಸ್ಥಿತೇ | ಪ್ರತ್ಯಕ್ಷೇ ತು ಕವೌ ಲೋಕಃ ಸಾವಜ್ಞಃ ಸುಮಹತ್ಯಪಿ ||
(ಕಾವ್ಯಮೀಮಾಂಸೆ, ಪು. ೫೧)