ಸಾಹಿತ್ಯ-ಸಂಗೀತಗಳ ತೌಲನಿಕವ್ಯತ್ಯಾಸವನ್ನು ಕವಿಯು ಬಲ್ಲ:
ಕರ್ಣಂ ಗತಂ ಶುಷ್ಯತಿ ಕರ್ಣ ಏವ
ಸಂಗೀತಕಂ ಸೈಕತವಾರಿರೀತ್ಯಾ |
ಆನಂದಯತ್ಯಂತರನುಪ್ರವಿಶ್ಯ
ಸೂಕ್ತಿಃ ಕವೇರೇವ ಸುಧಾಸಗಂಧಾ || (೧.೧೭)
ಕಿವಿಯನ್ನು ಹೊಕ್ಕ ಹಾಡು ಮರಳಿಗೆ ಬಿದ್ದ ನೀರಿನಂತೆ ಅಲ್ಲಿಯೇ ಬತ್ತುತ್ತದೆ. ಆದರೆ ಅಮೃತಸಮಾನವಾದ ಕವಿಸೂಕ್ತಿ ಅಂತರಂಗವನ್ನು ಹೊಕ್ಕು ಆನಂದವನ್ನೀಯುತ್ತದೆ.
ನೀಲಕಂಠದೀಕ್ಷಿತನು ಬಹುಶಃ “ಸಂಗೀತವು ಆಪಾತಮಧುರ, ಸಾಹಿತ್ಯವಾದರೋ ಆಲೋಚನಾಮೃತ” ಎಂಬ ಪ್ರಸಿದ್ಧಸೂಕ್ತಿಯನ್ನು ನಚ್ಚಿಕೊಂಡು ಮೇಲಣ ಪದ್ಯವನ್ನು ಬರೆದಂತೆ ತೋರುತ್ತದೆ. ಸಂಗೀತದಲ್ಲಿ ನಾದಕ್ಕಿಂತ ವಿಭಿನ್ನವಾದ “ಅರ್ಥಸಾಮಗ್ರಿ” ಯಾವುದೂ ಇಲ್ಲ; ನಾದವೊಂದೇ ಆನಂದವನ್ನೀಯುತ್ತದೆ. ಆದರೆ ಸಾಹಿತ್ಯದಲ್ಲಿ ಶಬ್ದಾರ್ಥಗಳ ಮೂಲಕ ಸಲ್ಲುವ ಉಭಯಾನಂದವುಂಟೆಂಬ ಅಭಿಪ್ರಾಯ ಪ್ರಸಿದ್ಧ. ಇದು ಇಷ್ಟು ಸರಳವಲ್ಲ. ಏಕೆಂದರೆ ಸಂಗೀತದ ನಾದವು ರೂಪ-ಸ್ವರೂಪಗಳಾದ ವಾಗರ್ಥಗಳ ಅದ್ವೈತಸ್ಥಿತಿ. ಆದುದರಿಂದಲೇ ಅಲ್ಲಿ ವಸ್ತುಧ್ವನಿ-ಅಲಂಕಾರಧ್ವನಿಗಳಿಗೆ ಅವಕಾಶವಿಲ್ಲದೆ ರಸಧ್ವನಿಯೇ ನೇರವಾಗಿ ಸ್ಫುರಿಸುತ್ತದೆ. ಸಾಹಿತ್ಯಕ್ಕೆ ಇಂಥ ಸೌಲಭ್ಯವಿಲ್ಲ. ಆದರೆ ಮೂರೂ ಬಗೆಯ ಧ್ವನಿಗಳಿಗೆ, ಗುಣೀಭೂತವ್ಯಂಗ್ಯದ ಅಮಿತಪ್ರಕಾರಗಳಿಗೆ ಅದು ಅವಕಾಶ ಕೊಡುವ ಕಾರಣ ಅನುಭವಸಂಕೀರ್ಣತೆಗೆ ಎಡೆಯುಂಟು. ಸಂಗೀತದಲ್ಲಿ ರಸಾನುಭವವು ಸಾಂದ್ರ, ಅಖಂಡ. ಸಾಹಿತ್ಯದಲ್ಲಿ ಅಖಂಡಸಾಂದ್ರಾನುಭವದೊಡನೆ ಖಂಡಖಂಡವಾದ ಅಸಾಂದ್ರಾನುಭವಗಳೂ ಸಾಕಷ್ಟಿರುತ್ತವೆ. ಅತ್ಯುತ್ತಮ ಕವಿ ಮಾತ್ರ ಅಖಂಡಸಾಂದ್ರಾನುಭವವನ್ನು ಹೆಚ್ಚಾಗಿ ನೀಡಬಲ್ಲ: ಇದರಲ್ಲಿ ಆಸ್ವಾದ್ಯವೆನಿಸುವ ಸಮೃದ್ಧಸಂಕೀರ್ಣತೆಯನ್ನೂ ತರಬಲ್ಲ. ಈ ಕಾರಣದಿಂದಲೇ ಮಧುರವಾದ ಸಂಗೀತವನ್ನು ಅದೇ ರೂಪದಲ್ಲಿ ಎಷ್ಟು ಬಾರಿ ಕೇಳಿದರೂ ಸಪ್ಪೆಯೆನಿಸುವುದಿಲ್ಲ; ಆದರೆ ಧ್ವನಿಶೀಲವಲ್ಲದ ಕಾವ್ಯವನ್ನು ಮತ್ತೆ ಮತ್ತೆ ಆಸ್ವಾದಿಸುವುದು ಕಷ್ಟ. ಇಷ್ಟೇ ಅಲ್ಲದೆ ಕಾವ್ಯಧ್ವನಿಯನ್ನು ಗುರುತಿಸಲು ಹೆಚ್ಚಿನ ಸಂಸ್ಕಾರ ಬೇಕು. ವಸ್ತು-ಅಲಂಕಾರಧ್ವನಿಗಳನ್ನು ಅರಿಯಲು ತಿಳಿವಳಿಕೆ ಅನಿವಾರ್ಯವಷ್ಟೆ. ಆದರೆ ರಸಧ್ವನಿಮಾತ್ರದಲ್ಲಿ ನೆಲೆನಿಂತ ಸಂಗೀತ-ಸಾಹಿತ್ಯಗಳ ಆಸ್ವಾದಕ್ಕೆ ಹೆಚ್ಚಿನ ತಿಳಿವು ಅನವಶ್ಯ. ಶ್ರೋತೃವು ಭಾವುಕನಾದರೆ ಸಾಕು. ಆದುದರಿಂದ ಸಾಹಿತ್ಯದೆದುರು ಸಂಗೀತವನ್ನು ಗೌಣ ಮಾಡುವುದು ಅಂಧಾಭಿಮಾನವಾದೀತು. ಆದರೆ ಸಾಮಾನ್ಯಸಂಗೀತದಲ್ಲಿಯೂ ಪರಿಣಾಮತೀವ್ರತೆ ಹೆಚ್ಚು, ಅದರ ಪುನರುಕ್ತಿಯಲ್ಲಿಯೂ ಆಸ್ವಾದಾಂಶವಿರುತ್ತದೆ; ಸಾಹಿತ್ಯದಲ್ಲಿ ಸಂಕೀರ್ಣಾನುಭವಕ್ಕೆ ಅವಕಾಶ ಹೆಚ್ಚು, ಅದರ ಪುನರುಕ್ತಿಯು ನೀರಸವಾಗುವುದೆಂಬ ತಥ್ಯವನ್ನು ಮರೆಯುವಂತಿಲ್ಲ. ದುರ್ದೈವದಿಂದ ಹೆಚ್ಚಿನ ಆಲಂಕಾರಿಕರು ವಿವಿಧಕಲೆಗಳಿಗೆ ಸಂಬಂಧಿಸಿದ ಇಂಥ ತೌಲನಿಕದೃಷ್ಟಿಯನ್ನು ಅವಲಂಬಿಸಿಲ್ಲ. ಕೇವಲ ಆನಂದವರ್ಧನ ಮತ್ತು ಅಭಿನವಗುಪ್ತರು ಇದಕ್ಕೆ ಅಪವಾದ.[1]
ಮುಂದೆ ಕವಿಪ್ರತಿಭೆಯ ಆನಂತ್ಯವನ್ನು ಹೀಗೆ ನಿರೂಪಿಸುತ್ತಾನೆ:
ಪಶ್ಯೇಯಮೇಕಸ್ಯ ಕವೇಃ ಕೃತಿಂ ಚೇತ್
ಸಾರಸ್ವತಂ ಕೋಶಮವೈಮಿ ರಿಕ್ತಮ್ |
ಅಂತಃ ಪ್ರವಿಶ್ಯಾಯಮವೇಕ್ಷಿತಶ್ಚೇತ್
ಕೋಣೇ ಪ್ರವಿಷ್ಟಾ ಕವಿಕೋಟಿರೇಷಾ || (೧.೧೮)
ಒಬ್ಬ ಕವಿಯ ಕಾವ್ಯವನ್ನು ಕಂಡಾಗಲೂ ವಾಗ್ದೇವತೆಯ ಬೊಕ್ಕಸವೇ ಬರಿದಾದಂತೆ ತೋರುತ್ತದೆ. ಆದರೆ ಸಾಹಿತ್ಯಗೃಹದ ಒಳಹೊಕ್ಕಾಗ ಕೋಟ್ಯಂತರ ಕವಿಗಳು ಯಾವುದೋ ಒಂದು ಮೂಲೆಯೊಳಗೆ ಮುಗಿದುಹೋಗಿರುವುದು ಕಂಡುಬರುತ್ತದೆ.
ಇದಕ್ಕಿಂತ ಆಕರ್ಷಕವಾಗಿ ಪ್ರತಿಭೆಯ ಆನಂತ್ಯವನ್ನು ಹೇಳಲು ಸಾಧ್ಯವಿಲ್ಲ. ಮುಂದಿನ ಪದ್ಯವೊಂದರಲ್ಲಿ ಶಿವಭಕ್ತನಾದ ಈ ಕವಿ ಪ್ರತಿಭೆಯ ವ್ಯಾಪ್ತಿಯನ್ನು ಶಿವನೂ ಪೂರ್ಣವಾಗಿ ಅರಿಯಲಾರನೆಂದಿರುವುದು ಸ್ವಾರಸ್ಯಕರ (೧.೨೦). ಪ್ರತಿಭಾನುಪ್ರಾಣಿತವಾದ ಕಲೆ ಎಂದಿಗೂ ಹಳಸುವುದಿಲ್ಲವೆಂಬ ಮಾತೂ ಮೆಚ್ಚುವಂತಿದೆ:
ನ ಕಾಲಭೇದಾದ್ರಸವರ್ಣಭೇದೋ
ನ ಜಾಮಿತಾ ವಾ ನ ಋಜೀಷಭಾವಃ |
ಸಾರಸ್ವತಂ ನಾಮ ಫಲಂ ತದೇತತ್
ಸದೈಕರೂಪಕಂ ಕೃತಿನೋ ಲಭಂತೇ || (೧.೨೮)
ಸಾಹಿತ್ಯವೆಂಬ ರಸಫಲವು ಕಾಲಪ್ರಭಾವದಿಂದ ತನ್ನ ರುಚಿ-ಕಾಂತಿಗಳನ್ನು ಕಳೆದುಕೊಳ್ಳುವುದಿಲ್ಲ. ಅದು ಎಂದಿಗೂ ಹಳಸುವುದಿಲ್ಲ, ಬೇಸರವನ್ನೂ ಹುಟ್ಟಿಸುವುದಿಲ್ಲ. ಇದನ್ನು ಪುಣ್ಯಾತ್ಮರು ಮಾತ್ರ ಪಡೆಯುತ್ತಾರೆ.
ಇಲ್ಲಿಯ ಸ್ವಾರಸ್ಯ ಸ್ವಯಂವೇದ್ಯ. ಅಂತೆಯೇ ವಿರಳಪ್ರಚುರವಾದ “ಜಾಮಿತಾ” ಎಂಬ ಶಬ್ದವನ್ನು ಬೇಸರದ ವಾಚಕವಾಗಿ ಹಾಗೂ “ಋಜೀಷ” ಎಂಬ ವೈದಿಕಶಬ್ದವನ್ನು ಹಳಸುವಿಕೆಯೆಂಬ ಅರ್ಥದಲ್ಲಿ ಕವಿಯು ಬಳಸಿರುವುದು ಆತನ ವ್ಯುತ್ಪತ್ತಿಗೆ ಒಳ್ಳೆಯ ನಿದರ್ಶನ.
ಕವಿಗಳಿಗೆ ಸಹೃದಯವೈಮುಖ್ಯಕ್ಕಿಂತ ಮಿಗಿಲಾದ ಸಂಕಟವಿಲ್ಲವೆಂಬುದನ್ನು ಹೀಗೆ ಸಾರುತ್ತಾನೆ:
ಉಲ್ಲಂಘ್ಯ ತಂತ್ರಾಂತರಸಂಪ್ರದಾಯಾ-
ನುತ್ಪ್ರೇಕ್ಷಮಾಣಾ ಜಗದನ್ಯದನ್ಯತ್ |
ಕಸ್ಮಾದ್ಬಿಭೀಮಃ ಕವಯೋ ಭವಾಮಃ
ಕಾವ್ಯಜ್ಞದಂಡಾದ್ಬಿಭಿಮಸ್ತು ಕಾಮಮ್ || (೧.೨೧)
ಮಿಕ್ಕೆಲ್ಲ ಶಾಸ್ತ್ರಗಳ ಮರ್ಯಾದೆಯನ್ನು ಮೀರಿ ಜಗಜ್ಜೀವಗಳ ಸ್ವಭಾವವನ್ನು ಬಗೆಬಗೆಯಾಗಿ ಕಲ್ಪಿಸಿ ವರ್ಣಿಸುವ ನಮಗೆ ಭಯವೇಕೆ? ನಾವು ಕವಿಗಳು! ನಮಗೆ ಕಾವ್ಯರಸಜ್ಞರಾದ ಸಹೃದಯರ ಮುನಿಸೊಂದೇ ಭಯವನ್ನುಂಟುಮಾಡುತ್ತದೆ.
ಕಾವ್ಯಸ್ವರೂಪವನ್ನೂ ಕಾವ್ಯೋದ್ದೇಶವನ್ನೂ ಇದಕ್ಕಿಂತ ಪರಿಣಾಮಕಾರಿಯಾಗಿ ಬಣ್ಣಿಸಲು ಸಾಧ್ಯವಿಲ್ಲ. ಏಕೆಂದರೆ ಕಾವ್ಯದ ನಿರ್ಮಾಣಕ್ಕೆ ಅದೆಷ್ಟೇ ವ್ಯುತ್ಪತ್ತಿ ಬೇಕಿದ್ದರೂ ಅದರ ಉದ್ದೇಶ ವ್ಯುತ್ಪಾದಕತೆಯನ್ನು ತುಂಬಿಕೊಡುವುದಲ್ಲ. ಮಾತ್ರವಲ್ಲ, ಕಾವ್ಯದಲ್ಲಿ ಚಿತ್ರಿತವಾಗುವ ವಿಷಯಗಳು ಭವಕ್ಕೆ ಸಂಬಂಧಿಸದೆ ಭಾವಕ್ಕೆ ಬದ್ಧವಾಗಿರುವ ಕಾರಣ ಭವಜೀವನವನ್ನು ಕುರಿತ ಯಾವ ಶಾಸ್ತ್ರಗಳಿಗೂ ಇದು ಉತ್ತರವಾದಿಯಲ್ಲ. ಹೀಗೆ ಉಭಯರೀತಿಯಿಂದಲೂ ಶಾಸ್ತ್ರಾಂತರದ ಅಂಕೆಯಿಲ್ಲದ ಕಾರಣದಿಂದಲೇ ನಿಯತಿಕೃತನಿಯಮರಹಿತವೆಂದೂ ಅನನ್ಯಪರತಂತ್ರವೆಂದೂ ಅದು ಹೆಸರಾಗಿದೆ.[2]
ಸಾಹಿತ್ಯದಲ್ಲಿ ಸುಖ-ದುಃಖಗಳ ಭೇದವಿಲ್ಲದೆ ಸಕಲಭಾವಗಳೂ ಆನಂದಕರವೆಂದು ಹೇಳುತ್ತಾನೆ:
ತಂತ್ರಾಂತರೇಷು ಪ್ರತಿಪಾದ್ಯಮಾನಾ-
ಸ್ತೇ ತೇ ಪದಾರ್ಥಾ ನನು ತೇ ತ ಏವ |
ನಿರ್ವೇದಭೀಶೋಕಜುಗುಪ್ಸಿತಾನ್ಯ-
ಪ್ಯಾಯಾಂತಿ ಸಾಹಿತ್ಯಪಥೇ ರಸತ್ವಮ್ || (೧.೨೨)
ಮಿಕ್ಕೆಲ್ಲ ಶಾಸ್ತ್ರಗಳಲ್ಲಿ ನಿರೂಪಿತವಾಗುವ ಸಂಗತಿಗಳು [ಅವುಗಳ ಅರಿವಿಗೆ ಮುನ್ನ ಹಾಗೂ ಆ ಬಳಿಕ] ಅವುಗಳೇ ಆಗಿರುತ್ತವೆ. ಆದರೆ ಸಾಹಿತ್ಯಸೀಮೆಯಲ್ಲಿ ಬೇಸರ, ಭಯ, ಸಂಕಟ, ಅಸಹ್ಯಗಳೆಲ್ಲ ಆಸ್ವಾದ್ಯ ಎನಿಸುತ್ತವೆ.
ಈ ಪದ್ಯವು ಭವದ ವಲಯದಲ್ಲಿ ಸುಖ-ದುಃಖಾತ್ಮಕವಾದ ಭಾವಗಳು ಕಲೆಯ ವಲಯಕ್ಕೆ ಬಂದಾಗ ಆನಂದವನ್ನೇ ತುಂಬಿಕೊಡುವ ರಸಗಳೆನಿಸುವ ಅದ್ಭುತವನ್ನು ಧನಂಜಯನ ನುಡಿಜಾಡಿನಲ್ಲಿ ನಿರೂಪಿಸಿದೆ.[3]
ನೀಲಕಂಠದೀಕ್ಷಿತನು ಕವಿಗಳ ಯೋಗವೇ ಕಾವ್ಯವೆಂದು ಉತ್ಸಾಹದಿಂದ ಸಾರುತ್ತಾನೆ:
ಅನಾಯತಪ್ರಾಣಮಸಂಯತಾಕ್ಷ-
ಮಬ್ರಹ್ಮಚರ್ಯಾನಶನಾದಿಖೇದಮ್ |
ಚಿತ್ತಂ ಮಹೇಶೇ ನಿಭೃತಂ ವಿಧಾತುಂ
ಸಿದ್ಧಃ ಕವೀನಾಂ ಕವಿತೈವ ಯೋಗಃ || (೧.೨೬)
ಉಪವಾಸ ಮತ್ತು ಬ್ರಹ್ಮಚರ್ಯಗಳಂಥ ಕಷ್ಟವಿಲ್ಲದೆ, ಪ್ರಾಣಾಯಾಮ-ಇಂದ್ರಿಯನಿಗ್ರಹ ಗೋಜಿಲ್ಲದೆ ಮನಸ್ಸನ್ನು ಮಹೇಶ್ವರನಲ್ಲಿ ನೆಲೆಗೊಳಿಸಲು ಕವಿಗಳ ಪಾಲಿಗೆ ಕಾವ್ಯವೆಂಬ ಯೋಗ ಸಿದ್ಧವಾಗಿಯೇ ಇದೆ.
ಈ ಭಾವವನ್ನು ಭಕ್ತಕವಿಗಳೆಷ್ಟೋ ಮಂದಿ ದೇಶಭಾಷೆಗಳಲ್ಲಿಯೂ ಮರುದನಿಸಿರುವುದು ಗಮನಾರ್ಹ. ಪ್ರಸಿದ್ಧವಾದ ಒಂದು ಅಜ್ಞಾತಮೂಲದ ಶ್ಲೋಕವೂ ಇದಕ್ಕೆ ಪೂರಕವಾಗಿದೆ.[4] ಎಂ. ಹಿರಿಯಣ್ಣನವರಂಥ ಆಧುನಿಕರೂ ಇದನ್ನು ಪ್ರಕಾರಾಂತರವಾಗಿ ಸಮರ್ಥಿಸಿದ್ದಾರೆ.
ಬಳಿಕ ಕವಿಯ ಬಾಧ್ಯತೆಯನ್ನು ಹೀಗೆ ವಿವರಿಸುತ್ತಾನೆ:
ಕ್ವಾರ್ಥಾಃ ಕ್ವ ಶಬ್ದಾಃ ಕ್ವ ರಸಾಃ ಕ್ವ ಭಾವಾಃ
ಕ್ವ ವ್ಯಂಗ್ಯಭೇದಾಃ ಕ್ವ ಚ ವಾಕ್ಯರೀತಿಃ |
ಕಿಯತ್ಸು ದೃಷ್ಟಿಃ ಕವಿನಾ ನ ದೇಯಾ
ಕಿಮಸ್ತಿ ರಾಜ್ಞಾಮಿಯತೀಹ ಚಿಂತಾ || (೧.೩೦)
ಶಬ್ದಗಳೂ ಅರ್ಥಗಳೂ ರಸಗಳೂ ಭಾವಗಳೂ ಧ್ವನಿಪ್ರಕಾರಗಳೂ ವಾಕ್ಯವಿನ್ಯಾಸಗಳೇ ಮುಂತಾದ ಎಷ್ಟೋ ವಿಷಯಗಳನ್ನು ಕುರಿತು ಕವಿಯ ಅವಧಾನ ಹೇಗೆಲ್ಲ ಸಾಗಬೇಕು! ಈ ಮಟ್ಟದ ಎಚ್ಚರ ರಾಜರಿಗಾದರೂ ಉಂಟೋ ಇಲ್ಲವೋ!
ಕೌಟಿಲ್ಯನ “ಅರ್ಥಶಾಸ್ತ್ರ”ದಲ್ಲಿ ರಾಜಚರ್ಯೆಯೂ ರಾಜಶೇಖರನ “ಕಾವ್ಯಮೀಮಾಂಸೆ” ಕವಿಚರ್ಯೆಯೂ ವಿಸ್ತೃತವಾಗಿ ಬಂದಿವೆ. ಇವಕ್ಕೆ ಪೂರಕವಾಗಿ ವಾತ್ಯ್ಯಾಯನನ “ಕಾಮಸೂತ್ರ”ದಲ್ಲಿ ಸುಸಂಸ್ಕೃತನಾದ ನಾಗರಕನ ದಿನಚರ್ಯೆಯೂ ಇದೆ. ಅಷ್ಟೇಕೆ, ಚರಕನಲ್ಲಿ ಬರುವ ಸ್ವಸ್ಥವೃತ್ತ ಮತ್ತು ಋತುಚರ್ಯೆಗಳನ್ನು ಕೂಡ ಪೂರಕವಾಗಿ ಗಮನಿಸಿಕೊಳ್ಳಬಹುದು. ಇವೆಲ್ಲವನ್ನೂ ಕವಿಯು ಪರಿಶೀಲಿಸಿಕೊಂಡ ಹಿನ್ನೆಲೆಯಲ್ಲಿ ಸದ್ಯದ ಪದ್ಯ ರೂಪುಗೊಂಡಿದೆ. ಕಾವ್ಯರಚನೆಯೆಂಬುದು ಕೇವಲ ಹೊತ್ತು ಹೋಗುವ ಅಗ್ಗದ ಸಾಧನವಲ್ಲ. ಅದು ಗಂಭೀರವಾದ ಕೃಷಿ. ಅದಕ್ಕೆ ಎಷ್ಟೆಷ್ಟೋ ಶಾಸ್ತ್ರ-ಕಲೆಗಳ ವ್ಯುತ್ಪತ್ತಿ, ಲೋಕಾನುಭವ ಮತ್ತು ಸತತಾಭ್ಯಾಸಗಳು ಅವಶ್ಯ. ಈ ದೃಷ್ಟಿಯಿಂದ ಕಂಡಾಗ ಕವಿಯ ಭಾರ ಮಿಗಿಲೆಂಬುದರಲ್ಲಿ ಸಂಶಯವಿಲ್ಲ. ಈ ಮಾತುಗಳನ್ನು ಭರತ-ಭಾಮಹರಂಥ ಆದ್ಯರೇ ಸಾರಿದ್ದಾರೆ.[5]
[1] ಗೀತಧ್ವನೀನಾಮಪಿ ವ್ಯಂಜಕತ್ವಮಸ್ತಿ ರಸಾದಿವಿಷಯಮ್ | ನ ಚ ತೇಷಾಂ ವಾಚಕತ್ವಂ ಲಕ್ಷಣಾ ವಾ ಕಥಂಚಿಲ್ಲಕ್ಷ್ಯತೇ || (ಧ್ವನ್ಯಾಲೋಕ, ೩.೩೩ ವೃತ್ತಿ); ತತ್ತದ್ಗೀತಪದೇ ಚಾರ್ಥಾವಗಮಂ ವಿನೈವ ರಸಾವಭಾಸಃ ಸ್ಯಾತ್ ಕಾವ್ಯಶಬ್ದೇಭ್ಯಃ, ನ ಚೈವಮಿತಿ ವಾಚಕಶಕ್ತಿರಪಿ ತಥಾಪೇಕ್ಷಣೀಯಾ | ಸಾ ಚ ವಾಚ್ಯನಿಷ್ಠೈವೇತಿ ಪ್ರಾಗ್ವಾಚ್ಯೇ ಪ್ರತಿಪತ್ತಿರಿತ್ಯುಪಗಂತವ್ಯಮ್ || (ಲೋಚನ, ಅಲ್ಲಿಯೇ)
[2] ಕಾವ್ಯಪ್ರಕಾಶ, ೧.೧
[3] ರಮ್ಯಂ ಜುಗುಪ್ಸಿತಮುದಾರಮಥಾಪಿ ನೀಚ-
ಮುಗ್ರಂ ಪ್ರಸಾದಿ ಗಹನಂ ವಿಕೃತಂ ಚ ವಸ್ತು |
ಯದ್ವಾಪ್ಯವಸ್ತು ಕವಿಭಾವಕಭಾವ್ಯಮಾನಂ
ತನ್ನಾಸ್ತಿ ಯನ್ನ ರಸಭಾವಮುಪೈತಿ ಲೋಕೇ || (ದಶರೂಪಕ, ೪.೮೫)
[4] ಯೋಗಾನಂದಮಯಾಃ ಕೇಚಿದ್ಭೋಗಾನಂದಪರಾಃ ಪರೇ | ವಯಂ ಸರ್ವಪ್ರದಾತಾರಂ ರಸಾನಂದಮುಪಾಸ್ಮಹೇ ||
[5] ನ ತಜ್ಜ್ಞಾನಂ ನ ತಚ್ಛಿಲ್ಪಂ ನ ಸಾ ವಿದ್ಯಾ ನ ಸಾ ಕಲಾ | ನಾಸೌ ಯೋಗೋ ನ ತತ್ಕರ್ಮ ನಾಟ್ಯೇऽಸ್ಮಿನ್ ಯನ್ನ ದೃಶ್ಯತೇ ||
(ನಾಟ್ಯಶಾಸ್ತ್ರ, ೧.೧೧೬)
ನ ಸ ಶಬ್ದೋ ನ ತದ್ವಾಚ್ಯಂ ನ ಸ ನ್ಯಾಯೋ ನ ಸಾ ಕಲಾ | ಜಾಯತೇ ಯನ್ನ ಕಾವ್ಯಾಂಗಮಹೋ ಭಾರೋ ಮಹಾನ್ಕವೇಃ ||
(ಕಾವ್ಯಾಲಂಕಾರ, ೫.೪)