ಕಲಾಮೀಮಾಂಸೆಯು ಸಾಮಾನ್ಯವಾಗಿ ವಿದ್ವದ್ರಸಿಕರಿಂದಲೇ ಮೊದಲಾಗುತ್ತದೆ. ಇದೇ ಮುಂದೆ ಆಯಾ ಕಲೆಗಳ ಸೌಂದರ್ಯಶಾಸ್ತ್ರವಾಗಿ ರೂಪುಗೊಂಡು ಹೆಚ್ಚಿನ ವ್ಯಾಪ್ತಿ-ವೈಶದ್ಯಗಳನ್ನು ಗಳಿಸುತ್ತದೆ. ಅದೆಷ್ಟೋ ಬಾರಿ ಕಲಾನಿರ್ಮಾತೃಗಳಾದ ಕವಿ-ಕಲಾವಿದರಿಗೇ ತಮ್ಮ ತಮ್ಮ ಕಲೆಗಳ ರೂಪ-ಸ್ವರೂಪಗಳಲ್ಲಿ ಹುದುಗಿರುವ ಸೊಗಸನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಇಂಥ ಸೊಗಸಿನ ಲಕ್ಷಣಪರಿಷ್ಕಾರವನ್ನು ನಡಸುವ ಸಾಮರ್ಥ್ಯವಾಗಲಿ, ಮನೋಧರ್ಮವಾಗಲಿ ಅವರಿಗಿರುವುದಿಲ್ಲ. ಆದರೆ ಹಲಕೆಲವರು ಕವಿ-ಕಲಾವಿದರು ತಮ್ಮ ಕಲಾಮಾಧ್ಯಮದ ನಿರ್ಮಾಣರಹಸ್ಯವನ್ನೂ ಆಸ್ವಾದವೈಶಿಷ್ಟ್ಯವನ್ನೂ ವಿವರಿಸಬಲ್ಲವರಾಗಿರುತ್ತಾರೆ. ಇಂಥವರ ಸಂಖ್ಯೆ ಎಂದೂ ಕಡಮೆ.
ಹಿಂದಿನ ಯುಗದಲ್ಲಿ ಸಾಹಿತ್ಯೇತರವಾದ ಕಲೆಗಳನ್ನು ನಿರ್ಮಿಸಿದವರು ತಮ್ಮ ಮಾಧ್ಯಮದ ಮೀಮಾಂಸೆಯನ್ನು ಸ್ವತಂತ್ರವಾಗಿಯೋ ಆನುಷಂಗಿಕವಾಗಿಯೋ ನಡಸಿರುವ ನಿದರ್ಶನಗಳು ಇಲ್ಲವೆನ್ನುವಷ್ಟು ವಿರಳ. ಆದರೆ ಕವಿಗಳ ವಿಷಯ ಹೀಗಲ್ಲ. ವಿಶೇಷತಃ ಸಂಸ್ಕೃತಕವಿಗಳು ತಮ್ಮದೇ ದೃಷ್ಟಿಯಿಂದ ಕಾವ್ಯಮೀಮಾಂಸೆಯನ್ನು ನಡಸಿರುವುದುಂಟು. ದಂಡಿ, ಆನಂದವರ್ಧನ, ರಾಜಶೇಖರ, ಭೋಜರಾಜ, ಕ್ಷೇಮೇಂದ್ರ, ಜಗನ್ನಾಥ ಮುಂತಾದ ಎಷ್ಟೋ ಮಂದಿ ಕವಿಗಳು ಕಾವ್ಯಮೀಮಾಂಸೆಯನ್ನು ಕುರಿತ ಸ್ವತಂತ್ರಗ್ರಂಥಗಳನ್ನೇ ರಚಿಸಿ ಅದಕ್ಕೊಂದು ಶಾಸ್ತ್ರತ್ವವನ್ನು ದಕ್ಕಿಸಿದ್ದಾರೆ. ಇಂತಲ್ಲದೆ ಮತ್ತೆಷ್ಟೋ ಕವಿಗಳು ಕಾವ್ಯಮೀಮಾಂಸೆಯ ಹೊಳಹುಳ್ಳ ಅಸಂಖ್ಯಸೂಕ್ತಿಗಳನ್ನು ತಮ್ಮ ಕೃತಿಗಳಲ್ಲಿ ರೂಪಿಸಿರುವುದುಂಟು. ಇವರಲ್ಲಿಯೂ ಬಹಳಷ್ಟು ಮಂದಿ ತಮ್ಮ ಕಾವ್ಯಗಳ ಉಪಕ್ರಮದಲ್ಲಿಯೋ ರೂಪಕಗಳ ಪ್ರಸ್ತಾವನೆಗಳಲ್ಲಿಯೋ ಸೋದ್ದಿಷ್ಟವಾಗಿ ಇಂಥ ಸೂಕ್ತಿಗಳನ್ನು ಉಟ್ಟಂಕಿಸಿದ್ದಾರೆ. ಈ ಬಗೆಯ ಮಾತುಗಳನ್ನು ಅವರ ನೇರವಾದ ಅಭಿಪ್ರಾಯವಾಗಿ ಸ್ವೀಕರಿಸಬಹುದು. ಇಂತಲ್ಲದೆ ಕಾವ್ಯಗಳ ನಡುನಡುವೆ ಸಾಹಿತ್ಯಮೀಮಾಂಸೆಯ ಸ್ವಾರಸ್ಯಗಳನ್ನು ಆಗೀಗ ನಿಕ್ಷೇಪಿಸಿರುವುದುಂಟು. ಇದು ಹೆಚ್ಚಾಗಿ ಕವಿನಿಬದ್ಧಪ್ರೌಢೋಕ್ತಿಯಾಗಿ ಹರಳುಗಟ್ಟಿರುತ್ತದೆ. ಇಂಥವುಗಳ ಸಂಖ್ಯೆ ತುಂಬ ಹೆಚ್ಚಲ್ಲ. ಮತ್ತೆ ಕೆಲವೊಮ್ಮೆ ಸ್ವತಂತ್ರಸೂಕ್ತಿಗಳ ಆಕೃತಿಯನ್ನೂ ಮೀರಿದ ಧ್ವನಿಪೂರ್ಣಪ್ರಕರಣವೇ ಇನ್ನೆಷ್ಟೋ ಸಾಹಿತ್ಯಸ್ವಾರಸ್ಯಗಳನ್ನು ಹೊಮ್ಮಿಸುವುದುಂಟು. ಇವುಗಳ ಸಂಖ್ಯೆ ಮತ್ತಷ್ಟು ಕಡಮೆ. ಏಕೆಂದರೆ, ಮಹಾಕವಿಗಳ ಕಾವ್ಯಗಳೆಷ್ಟು ಧ್ವನಿಮಯವೋ ಕಾವ್ಯಮೀಮಾಂಸೆಯನ್ನು ಕುರಿತ ಅವರ ಆಲೋಚನೆಗಳೂ ಅಷ್ಟೇ ಧ್ವನಿಮಯ. ಇವನ್ನು ಗುರುತಿಸಿಕೊಳ್ಳಲು ಸಹೃದಯತೆಯೊಡನೆ ಶಾಸ್ತ್ರಸಂಸ್ಕಾರವೂ ಬೇಕು.[1]
ಹೀಗೆ ಮುಬ್ಬಗೆಯಾಗಿ ಮೈದಾಳಿದ ಕವಿಕೃತ ಕಾವ್ಯಮೀಮಾಂಸೆಯನ್ನು ಪರಿಚಯ ಮಾಡಿಕೊಳ್ಳುವುದೇ ಸದ್ಯದ ಉದ್ದೇಶ.
ಕವಿಗಳ ಕಾವ್ಯಮೀಮಾಂಸೆಯಲ್ಲಿ ಅಡಗಿರುವ ಮತ್ತೊಂದು ಅಂಶವೂ ಮಹತ್ತ್ವದ್ದು. ಅದನ್ನು ವೇದಾಂತಶಾಸ್ತ್ರದ ಜೊತೆ ತೌಲನಿಕವಾಗಿ ಪರಿಶೀಲಿಸಬಹುದು. ವೇದಾಂತವು ಜೀವನ್ಮುಕ್ತನ ಅನುಭವಕ್ಕೆ ಎಲ್ಲಕ್ಕಿಂತ ಮಿಗಿಲಾದ ಬೆಲೆಯನ್ನು ಕೊಡುತ್ತದೆ. ಏಕೆಂದರೆ, ವೇದಾಂತದ ಪರಮಲಕ್ಷ್ಯವೇ ಅನುಭವಾವಸಾನತ್ವ. ಎಷ್ಟೋ ಮಂದಿ ಜೀವನ್ಮುಕ್ತರು ತಮ್ಮ ಬ್ರಹ್ಮಾನುಭವವನ್ನು ದಾಖಲಿಸಿರುವುದಿಲ್ಲ; ಕೆಲವರು ಮಾತ್ರ ಆ ಅನುಭೂತಿಯನ್ನು ಲಿಪಿಬದ್ಧಗೊಳಿಸಿರುತ್ತಾರೆ. ಈ ಅಭಿವ್ಯಕ್ತಿಯೂ ಕೆಲವೊಮ್ಮೆ ಕೇವಲ ಶಾಸ್ತ್ರವಾಗಿ ಮೈದಾಳುವುದುಂಟು. ತುಂಬ ವಿರಳವಾಗಿ ಅದು ಸ್ಮರಣೀಯಸೂಕ್ತಿಗಳ ರೂಪದಲ್ಲಿ ಕಾವ್ಯಸ್ಪರ್ಶದಿಂದ ಹೊಮ್ಮುತ್ತದೆ. ಇದೇ ರೀತಿ ಮಹಾಕವಿಗಳು ಕೂಡ ತಮ್ಮ ರಸಾನುಭೂತಿಯನ್ನು ಅಪ್ಪಟ ಕಾವ್ಯವಾಗಿ ವ್ಯಕ್ತೀಕರಿಸುತ್ತಾರೆ. ಎಲ್ಲೋ ಕೆಲವೊಮ್ಮೆ ಮಾತ್ರ ಅವರ ಕೃತಿಗಳಲ್ಲಿ ಕಾವ್ಯಮೀಮಾಂಸೆಯ ಸ್ಫುಟವಾದ ಹೊಳಹುಗಳು ತೋರಿಕೊಳ್ಳುವುದುಂಟು. ಇವು ಜೀವನ್ಮುಕ್ತನ ಬ್ರಹ್ಮಾಸ್ವಾದದ ಉದ್ಗಾರಗಳಂತೆಯೇ ಅಮೂಲ್ಯ.
ಕವಿಗಳೇ ಹವಣಿಸಿಕೊಡುವ ಕಾವ್ಯಮೀಮಾಂಸೆಯು ಸಾಹಿತ್ಯಶಾಸ್ತ್ರದ ಮೂಲತತ್ತ್ವಗಳೆನಿಸಿದ ಕವಿ, ಕಾವ್ಯ, ಸಹೃದಯ, ಪ್ರತಿಭೆ, ಪಾಂಡಿತ್ಯ, ಅಲಂಕಾರ, ರಸ, ಧ್ವನಿ, ಔಚಿತ್ಯ ಮುಂತಾದ ಎಷ್ಟನ್ನೋ ಪರಾಮರ್ಶಿಸುತ್ತದೆ. ಆದರೆ ಇವಾವುವೂ ತರ್ಕಕರ್ಕಶವಾದ ಮಾರ್ಗದಿಂದ ಮೈದಾಳುವುದಿಲ್ಲ. ಇಲ್ಲಿ ಪ್ರಧಾನವಾಗಿ ಕಾಣುವುದು ಕವಿಯ ಮನೋಧರ್ಮ ರೂಪಿಸುವ ಭಾವಪೂರ್ಣ ವಿಚಾರಸಾಮಗ್ರಿ. ಈ ಕಾರಣದಿಂದಲೇ ಅದೆಷ್ಟೋ ಬಾರಿ ಇಂಥ ಸೂಕ್ತಿಗಳಿಗೆ ಶಾಸ್ತ್ರಸಿದ್ಧವಾದ ಉಪಪತ್ತಿಗಳು ಸಿಗದಿರಬಹುದು, ಅಂತರ್ವಿರೋಧದ ತೊಡಕೂ ತೋರಬಹುದು; ಅಷ್ಟೇಕೆ, ಕೆಲವೊಮ್ಮೆ ಬರಿಯ ಭಾವೋದ್ಗಾರವೆನಿಸಬಹುದು, ಹಲವೊಮ್ಮೆ ಗತಾನುಗತಿಕವಾದ ವಿಚಾರಗಳ ಅಂಧಾನುಕರಣೆಯೂ ಆಗಿರಬಹುದು. ಸಂಸ್ಕೃತದ ಅಭಿಜಾತಯುಗದಿಂದ ಈಚೆಗೆ ಬೆಳೆದ ಪಾಂಡಿತ್ಯಯುಗದ ಎಷ್ಟೋ ಕವಿಗಳು ಇಂಥ ಸೂಕ್ತಿಗಳನ್ನು ತಮ್ಮ ತಮ್ಮ ಕೃತಿಗಳ ಮೊದಲಿನಲ್ಲಿ ರಚಿಸುವುದು ಸ್ವೋಪಜ್ಞಸ್ಫುರಣೆಯಾಗುವುದಕ್ಕೆ ಬದಲಾಗಿ ಕೇವಲ ಪೂರ್ವಕವಿಸಂಪ್ರದಾಯದ ಶಿಸ್ತಾಗಿ ತೋರುವುದುಂಟು. ಹೀಗೆಲ್ಲ ಹತ್ತಾರು ಮಿತಿಗಳಿದ್ದರೂ ಕವಿಗಳ ಕಾವ್ಯಮೀಮಾಂಸಾಸ್ಫುರಣದಲ್ಲಿ ತನ್ನದೇ ಆದ ಸ್ವಂತಿಕೆಯಿರುತ್ತದೆ, ಸೊಗಸೂ ಇರುತ್ತದೆ.
ಈ ಕಾರಣದಿಂದಲೇ ಇಂಥ ಸೂಕ್ತಿಗಳಲ್ಲಿ ಕೇವಲಶಾಸ್ತ್ರಜ್ಞರು ಕಾಣಿಸಲಾಗದ ಒಳನೋಟಗಳೆಷ್ಟೋ ನಮ್ಮ ಪಾಲಿಗೆ ತೆರೆದುಕೊಳ್ಳುತ್ತವೆ. ಮಾತ್ರವಲ್ಲ, ಇಲ್ಲಿ ವ್ಯವಸ್ಥಿತವಾಗಿ ಹರಳುಗಟ್ಟದ ವಿಚಾರಶಕಲಗಳಿಂದಲೂ ಉದ್ಬೋಧಕವಾದ ತತ್ತ್ವಲೋಹಕ್ಕೆ ಉಪಾದಾನಸಾಮಗ್ರಿ ಎನಿಸುವ ಅದಿರಂತೂ ಸಿಗುವುದು ನಿಃಸಂಶಯ. ಎಲ್ಲಕ್ಕಿಂತ ಮಿಗಿಲಾಗಿ ಆಯಾ ಕವಿಗಳ ಅಭಿರುಚಿ-ಅಭಿನಿವೇಶಗಳು ಆವಿಷ್ಕೃತವಾಗುತ್ತವೆ; ತನ್ಮೂಲಕ ವ್ಯಕ್ತಿಸಾಪೇಕ್ಷವಾದ ವಿಚಾರಗಳು ವಸ್ತುನಿಷ್ಠವಾದ ಶಾಸ್ತ್ರವಾಗಲು ಬೇಕಾದ ಪೂರಕಸಾಮಗ್ರಿ ಒದಗಿಬರುತ್ತದೆ. ಸಾಹಿತ್ಯಮೀಮಾಂಸೆ ಎಷ್ಟೇ ಆಗಲಿ ಭೌತಾದಿಶಾಸ್ತ್ರಗಳಂತೆ ವಸ್ತುಮೀಮಾಂಸೆಯಲ್ಲದೆ ಭಾವಮೀಮಾಂಸೆ; ಆದುದರಿಂದ ಇಂಥ ಅಂಶಗಳೇ ಈ ಶಾಸ್ತ್ರವನ್ನು ಮುನ್ನಡಸಬಲ್ಲ ಸ್ವಾರಸ್ಯಗಳು. ಈ ಮಟ್ಟದ ವಿಚಾರಸಾಮಗ್ರಿ ಎಲ್ಲ ಕವಿಗಳ ಕೃತಿಗಳಲ್ಲಿ ಕಾಣಸಿಗದಿದ್ದರೂ ಮಹಾಕವಿಗಳ ಮಾತುಗಳಲ್ಲಿ ಎಲ್ಲಿಯೋ ಹೇಗೆಯೋ ಸಾಕ್ಷಾತ್ಕೃತವಾಗುತ್ತವೆ. ಅವಕ್ಕೆ ನಾವು ಶ್ರುತಿಯಾಗಬೇಕು: ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ಒರಟು ಯಾನವೊ ಭಾಷೆ!
ಸಂಸ್ಕೃತಭಾಷೆಯಲ್ಲಿ ಸರಸಮನೋಹರವಾದ ಕಾವ್ಯ-ನಾಟಕಗಳನ್ನು ರಚಿಸಿದ ಕವಿಗಳ ಸಂಖ್ಯೆ ಬಹಳಷ್ಟು. ಇಂದಿಗೂ ಈ ಪರಂಪರೆ ಅಖಂಡವಾಗಿ ಮುಂದುವರಿದಿರುವ ಕಾರಣ ಇದು ಹಲವು ಸಾವಿರ ವರ್ಷಗಳ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಆದುದರಿಂದಲೇ ಇಲ್ಲಿಯ ಎಲ್ಲ ಕವಿಗಳೂ ನಡಸಿದ ಕಾವ್ಯಮೀಮಾಂಸೆಯ ವಿವೇಚನೆ ಅಸಾಧ್ಯ. ಅಷ್ಟೇ ಅಲ್ಲದೆ ಸಾಮಾನ್ಯಶಕ ಹತ್ತು-ಹತ್ತೊಂದನೆಯ ಶತಮಾನಗಳ ಬಳಿಕ ಎದ್ದುಕಾಣುವಂಥ ಸ್ವೋಪಜ್ಞತೆಯನ್ನು ಉಳ್ಳ ಕಾವ್ಯಮೀಮಾಂಸಾತತ್ತ್ವಗಳೂ ಉದ್ಭವಿಸಲಿಲ್ಲ. ಹೀಗಾಗಿ ಸಂಸ್ಕೃತಸಾಹಿತ್ಯಮೀಮಾಂಸೆ ಹನ್ನೊಂದನೆಯ ಶತಾಬ್ದಿಯ ಅನಂತರ ಸ್ವೋಪಜ್ಞತಾಯುಗದಿಂದ ಪರಿಷ್ಕಾರಯುಗಕ್ಕೆ ಪದವಿರಿಸಿತೆಂದರೆ ತಪ್ಪಲ್ಲ. ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದಾದರೂ ಅವೆಲ್ಲ ರಸ-ಧ್ವನಿ-ವಕ್ರತೆ-ಔಚಿತ್ಯಗಳ ಮೂಲತತ್ತ್ವಗಳೊಳಗೇ ಅಡಕವಾಗುವಂಥವು. ಮಾತ್ರವಲ್ಲ, ಇವುಗಳಿಗೆ ವಿಸಂವಾದಿಯಾಗಿ ಬಂದವು ಅನುಪಾದೇಯವೂ ಹೌದು. ಹೀಗೆ ಹತ್ತೊಂಬತ್ತನೆಯ ಶತಾಬ್ದದ ಬಳಿಕ ತಲೆದೋರಿದ ಪಾಶ್ಚಾತ್ತ್ಯಸಾಹಿತ್ಯಮೀಮಾಂಸೆಯ ಪ್ರಭಾವಕ್ಕೆ ಮುನ್ನ (ಸ್ವೋಪಜ್ಞತಾಯುಗದ ಬಳಿಕ) ಬೆಳೆದುಬಂದ ದೇಶೀಯಕಾವ್ಯಮೀಮಾಂಸೆಯೆಲ್ಲ ಬಲುಮಟ್ಟಿಗೆ ಸಿದ್ಧಸಾಮಗ್ರಿಯ ಸಮರ್ಥನವೇ.
ಈ ಮನೋಧರ್ಮವು ಕವಿಗಳಲ್ಲಿ ಕೂಡ ಪ್ರತಿಫಲಿಸಿರುವುದು ಅಚ್ಚರಿಯ ಸಂಗತಿಯಲ್ಲ. ಪ್ರತಿಶತ ತೊಂಬತ್ತಕ್ಕೂ ಹೆಚ್ಚಿನ ಮಂದಿ ಕವಿಗಳು ತಮ್ಮ ಕೃತಿಗಳ ಆದಿಯಲ್ಲಿ ಸಾಹಿತ್ಯಶಾಸ್ತ್ರದ ಸ್ಥಾಪಿತಮೌಲ್ಯಗಳನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಸಿದ್ದಾರೆ. ಹೆಚ್ಚೆಂದರೆ ಈ ತತ್ತ್ವಗಳಿಗೆ ಆಕರ್ಷಕವಾದ ಕಾವ್ಯಮಯ ಸಮರ್ಥನೆಯನ್ನು ಉಪಮೆ, ರೂಪಕ ಮತ್ತು ದೃಷ್ಟಾಂತಗಳಂಥ ಅಲಂಕಾರಗಳಿಂದ ಒದಗಿಸಿ ಚಂದಗೊಳಿಸಿದ್ದಾರೆ. ಈ ಪ್ರಕಲ್ಪಗಳೆಲ್ಲ ಸತ್ಯ-ಸೌಂದರ್ಯಗಳಿಗೆ ವಿರೋಧಿಗಳಲ್ಲದ ಕಾರಣ ಇವಾವುವೂ ಆಕ್ಷೇಪಣೀಯವಲ್ಲ. ಆದರೆ ಕಾವ್ಯಮೀಮಾಂಸೆಯ ಸ್ವೋಪಜ್ಞತತ್ತ್ವಗಳನ್ನು ಅರಸುವವರಿಗೆ ನಿರಾಶೆ ತಪ್ಪದು. ಆದುದರಿಂದ ಸದ್ಯದ ಬರೆಹದಲ್ಲಿ ಯಾವೆಲ್ಲ ಪ್ರಮುಖಕವಿಗಳು ಸ್ವಾನುಭವದಿಂದ ಪರಿಪುಷ್ಟವಾದ ಒಳನೋಟಗಳನ್ನು ಒದಗಿಸಿದ್ದಾರೆಯೋ ಅಂಥವರ ಮಾತುಗಳನ್ನಷ್ಟೇ ವಿವೇಚಿಸುವುದಾಗುತ್ತದೆ. ಇದು ಸ್ವೋಪಜ್ಞತಾಯುಗಕ್ಕೇ ಅವಧಾರಣೆ ನೀಡುವುದು ಸಹಜ. ಸ್ವೋಪಜ್ಞತೆಯೆಂಬುದು ಕಲೆ-ಶಾಸ್ತ್ರ, ತತ್ತ್ವ-ಪ್ರಯೋಗ ಮತ್ತು ಕಾವ್ಯ-ಕಾವ್ಯಮೀಮಾಂಸೆಗಳಿಗೆ ಸಮಾನವಾಗಿ ಅನ್ವಿತವಾಗುವುದು ಎಲ್ಲಿಯೂ ಕಂಡುಬರುವ ವಿದ್ಯಮಾನ. ಇದಕ್ಕೆ ಭಾರತೀಯಸಾಹಿತ್ಯಪರಂಪರೆಯೂ ಹೊರತಲ್ಲ. ಹೀಗಾಗಿ ನಮ್ಮ ಸದ್ಯದ ಪ್ರತಿಪಾದನೆಯಲ್ಲಿ ಹತ್ತು-ಹನ್ನೊಂದನೆಯ ಶತಾಬ್ದಗಳ ಬಳಿಕ ಬಂದ ಕವಿಗಳ ಪೈಕಿ ಪ್ರಮುಖರಾದ ಕೆಲವರನ್ನಷ್ಟೇ ಪರಿಗಣಿಸಿ ಇವರಲ್ಲಿಯೂ ಕಾವ್ಯಮೀಮಾಂಸೆಯ ಹೊಸಹೊಳಹುಗಳಿದ್ದವರನ್ನೇ ಆದರಿಸುವುದು ಅನಿವಾರ್ಯ. ಈ ದೃಷ್ಟಿಯಿಂದ ಪ್ರಕೃತೋದ್ಯಮವನ್ನು ಸಮಗ್ರವೆಂದು ಭಾವಿಸಬೇಕಲ್ಲದೆ ಎಲ್ಲ ಕವಿಗಳ ಎಲ್ಲ ವಿಚಾರಗಳ ಸಂಗ್ರಹವೆಂದಲ್ಲ.
ಮಾತ್ರವಲ್ಲ, ನಮ್ಮ ಕವಿಗಳು ಅದೆಷ್ಟೋ ಬಾರಿ ಶ್ಲೇಷದ ಬಲದಿಂದ ಕಾವ್ಯ-ನಾಟಕಮೀಮಾಂಸೆಗಳ ಹಲವಾರು ತತ್ತ್ವಗಳನ್ನು ಉಪಮೆಯೇ ಮುಂತಾದ ಅಲಂಕಾರಗಳ ರೂಪದಲ್ಲಿ ಸಂದರ್ಭೋಚಿತವಾಗಿ ಬಳಸಿಕೊಂಡಿದ್ದಾರೆ. ಉದಾಹರಣೆಗೆ: ವಿಶಾಖದತ್ತನು “ಮುದ್ರಾರಾಕ್ಷಸ”ನಾಟಕದಲ್ಲಿ (೪.೩) ರಾಜಕೀಯನೇತೃವಿನ ತಂತ್ರಗಾರಿಕೆಯನ್ನು ರೂಪಕನಿರ್ಮಾತೃವಿನ ಕ್ರಿಯಾಕೌಶಲದೊಡನೆ ಸಮೀಕರಿಸುತ್ತಾನೆ. ಶ್ರೀಹರ್ಷನು “ನೈಷಧೀಯಚರಿತ”ಕಾವ್ಯದಲ್ಲಿ ವೈದರ್ಭೀ ಶೈಲಿಯನ್ನು ವಿದರ್ಭದೇಶದವಳಾದ ದಮಯಂತಿಗೆ ಹೋಲಿಸುತ್ತಾನೆ (೩.೧೧೬, ೧೪.೯೧); ಧ್ವನಿಯ ಪ್ರಭೇದವೊಂದನ್ನು ಶ್ಲಿಷ್ಟವಾಗಿ ನಿಕ್ಷೇಪಿಸುತ್ತಾನೆ (೯.೫೦); “ನಾಟಿಕಾ” ಎಂಬ ಉಪರೂಪಕದ ವಿವರಗಳನ್ನು ಶ್ಲಿಷ್ಟೋಪಮೆಯಾಗಿ ಹೊಂದಿಸುತ್ತಾನೆ (೯.೧೧೮). ಹೀಗೆ ಅಸಂಖ್ಯಕವಿಗಳು ಇಂಥ ಚಮತ್ಕಾರಗಳೆಷ್ಟನ್ನೋ ಸೊಗಸಾಗಿ ಮಾಡಿದ್ದಾರೆ. ಆದರೆ ಈ ಬಗೆಯ ಉಲ್ಲೇಖಗಳನ್ನು ಪ್ರಸ್ತುತಪ್ರಬಂಧದಲ್ಲಿ ಪರಾಮರ್ಶಿಸಲು ಎಡೆಯಿಲ್ಲ. ಏಕೆಂದರೆ ಇವೆಲ್ಲ ಅಲಂಕಾರಶಾಸ್ತ್ರದ ಮೂಲಕ ಈಗಾಗಲೇ ಸಿದ್ಧವಾಗಿರುವ ತತ್ತ್ವಗಳನ್ನು ಉಕ್ತಿವೈಚಿತ್ರ್ಯಕ್ಕಾಗಿ ಬಳಸಿಕೊಂಡ ಪ್ರಕಲ್ಪಗಳಲ್ಲದೆ ಕಾವ್ಯಮೀಮಾಂಸೆಗೆ ಹೊಸಹೊಳಹನ್ನು ತಂದೀಯುವ ಯತ್ನಗಳಲ್ಲ. ಇಂಥ ಹೊಸತನವನ್ನೇನಾದರೂ ಈ ಬಗೆಯ ಚಮತ್ಕೃತಿಗಳ ಮೂಲಕ ಕವಿಗಳು ತಂದುದೇ ಆದಲ್ಲಿ ಅವನ್ನು ಅವಶ್ಯವಾಗಿ ನಾವು ಬಳಸಿಕೊಳ್ಳುತ್ತೇವೆ.
ನಾವಿನ್ನು ಆದಿಕವಿ ವಾಲ್ಮೀಕಿಮುನಿಗಳಿಂದ ಮೊದಲ್ಗೊಂಡು ನೀಲಕಂಠದೀಕ್ಷಿತನವರೆಗೆ ನಮ್ಮ ಕವಿಗಳು ಹೇಗೆ ಕಾವ್ಯಮೀಮಾಂಸೆಯ ಸ್ಫುರಣಗಳನ್ನು ಹರಳುಗಟ್ಟಿಸಿರುವರೆಂಬುದನ್ನು ಕ್ರಮವಾಗಿ ಪರಿಶೀಲಿಸೋಣ.
[1] ದಂಡಿ-ಭಾಮಹರಂಥ ಪ್ರಾಚೀನ ಆಲಂಕಾರಿಕರಿಗೂ ಮುನ್ನವಿದ್ದ ಮಹಾಕವಿಗಳ ಮಾತುಗಳಲ್ಲಿ ಹುದುಗಿರುವ ಕಾವ್ಯಶಾಸ್ತ್ರೀಯತತ್ತ್ವಗಳನ್ನು ವಿವರಿಸುವಾಗ ಪರವರ್ತಿಗಳಾದ ಎಷ್ಟೋ ಮಂದಿ ಆಚಾರ್ಯರ ವಿಚಾರಗಳನ್ನು ಅವಲಂಬಿಸಬೇಕಾಗುತ್ತದೆ. ಭರತ, ಆನಂದವರ್ಧನ, ಅಭಿನವಗುಪ್ತರಂಥ ಮಹಾಶಾಸ್ತ್ರಜ್ಞರ ಅರಿವಿನಿಂದ ಸಂಸ್ಕೃತವಾಗದ ಮನಸ್ಸಿಗೆ ಮಹಾಕವಿಗಳ ಮಾತುಗಳು ತಮ್ಮೆಲ್ಲ ಅಂತಃಸ್ವಾರಸ್ಯಗಳನ್ನು ಬಿಟ್ಟುಕೊಡುವುದಿಲ್ಲ. ಆದುದರಿಂದ ಈ ಎಲ್ಲ ಆಲಂಕಾರಿಕರ ಪರಿಶ್ರಮವಿಲ್ಲದಿದ್ದಲ್ಲಿ ನಮಗೆ ಈ ಕೆಲವು ಮಾತುಗಳು ಮಹತ್ತ್ವದ್ದೆನಿಸಿದರೂ ಶಾಸ್ತ್ರಸರಣಿಯಿಂದ ಪರಿಷ್ಕೃತವಾಗಿ ಸ್ಫುಟವಾಗುತ್ತಿರಲಿಲ್ಲ. ಹೀಗಾಗಿ ಅಲಂಕಾರಶಾಸ್ತ್ರದ ಕ್ರಮವಾದ ಬೆಳೆವಣಿಗೆಗೆ ನಾವು ತುಂಬ ಕೃತಜ್ಞರಾಗಿರಬೇಕು. ಆದರೆ ಮಹಾಕವಿಗಳ ಮಾತುಗಳು ಈ ಎಲ್ಲ ಶಾಸ್ತ್ರೀಯವ್ಯಾಖ್ಯಾನಕ್ಕೂ ಮೂಲಭೂತವಾದ ಸತ್ತ್ವವನ್ನು ಹೊಂದಿವೆಯೆಂಬುದು ಅಷ್ಟೇ ಸತ್ಯ. ಇಲ್ಲಿಯ ಶಾಸ್ತ್ರಪರಿಷ್ಕಾರವೇನಿದ್ದರೂ ಅನುವ್ಯಾಖ್ಯಾನರೂಪದ್ದೇ ಹೊರತು ಅಲ್ಲಿಲ್ಲದ್ದನ್ನು ಹೇರುವ ಹುರುಡಲ್ಲ.
To be continued.