ಕ್ಷೇಮೇಂದ್ರನು ತನ್ನ “ರಾಮಾಯಣಮಂಜರಿ” ಮತ್ತು “ಭಾರತಮಂಜರಿ”ಗಳ ಕಡೆಯಲ್ಲಿ ತುಂಬ ಒಳನೋಟವುಳ್ಳ ಎರಡು ಶ್ಲೋಕಗಳನ್ನು ರಚಿಸಿದ್ದಾನೆ. ಅವು ವಾಲ್ಮೀಕಿ-ವ್ಯಾಸರ ಕೃತಿಗಳಲ್ಲಿರುವ ಪ್ರಧಾನರಸ ಶಾಂತವೆಂದು ಪ್ರತಿಪಾದಿಸುತ್ತವೆ. ಈ ನಿಲವಿಗೆ ಬರುವುದಕ್ಕೆ ಕಾರಣವಾದ ಉಪಪತ್ತಿಗಳನ್ನು ಕೂಡ ಕ್ಷೇಮೇಂದ್ರನು ಕೊಟ್ಟಿರುವುದು ಮಹತ್ತ್ವದ ಸಂಗತಿ. ಶಾಂತರಸದ ಅಸ್ತಿತ್ವ-ಅನಸ್ತಿತ್ವಗಳನ್ನು ಕುರಿತು ತೀವ್ರವಾದ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ ಆನಂದವರ್ಧನ ಮತ್ತು ಅಭಿನವಗುಪ್ತರು ಮಹಾಭಾರತವನ್ನು ಶಾಂತರಸಪ್ರಧಾನವೆಂದೂ ಸಕಲರಸಗಳ ಪೈಕಿ ಶಾಂತವೇ ಮೌಲಿಭೂತವೆಂದೂ ಪ್ರತಿಪಾದಿಸಿದ ಬಳಿಕ ಕ್ಷೇಮೇಂದ್ರ ಅವರನ್ನೂ ಮೀರಿ ರಾಮಾಯಣ ಕೂಡ ಶಾಂತರಸಕ್ಕೆ ಅಗ್ರತಾಂಬೂಲವನ್ನಿತ್ತ ಕಾವ್ಯವೆಂದು ಸಾಧಿಸಿರುವುದು ಮುದಾವಹ. ಮಾತ್ರವಲ್ಲ, ವೀರ, ಕರುಣ, ಶೃಂಗಾರಗಳಂಥ ರಸಗಳಿಂದ ಸಮೃದ್ಧವಾದ ಕೃತಿಗಳೂ ಕವಿಯ ಜೀವನದರ್ಶನದ ಕಾರಣ ಶಾಂತರಸದಲ್ಲಿ ಪರ್ಯವಸಿಸುತ್ತವೆಂಬ ಒಳನೋಟಕ್ಕೆ ಇಂಬಾಗುವ ಇವನ ಮಾತುಗಳು ಅಲಂಕಾರಶಾಸ್ತ್ರಕ್ಕೆ ಹೊಸಕಾಣ್ಕೆಯನ್ನು ಇತ್ತಿವೆ.
ಭೋಗಾರ್ಹೇ ನವಯೌವನೇऽಪಿ ವಿಪಿನೇ ಚೀರಾಂಬರೋ ರಾಘವ-
ಸ್ತತ್ರಾಪ್ಯಸ್ಯ ಪರೇಣ ದಾರಹರಣಂ ಕ್ಲೇಶಸ್ತದನ್ವೇಷಣೇ |
ಸಂಪ್ರಾಪ್ತಾಪಿ ಜನಾಪವಾದರಜಸಾ ತ್ಯಕ್ತಾ ಪುನರ್ಜಾನಕೀ
ಸರ್ವಂ ದುಃಖಮಿದಂ ತದಸ್ತು ಭವತಾಂ ಶ್ಲಾಘ್ಯೋ ವಿವೇಕೋದಯಃ ||
(ರಾಮಾಯಣಮಂಜರಿ, ಪು. ೫೦೮)
ಸುಖಾನುಕೂಲಿಯಾದ ನವಯೌವನದಲ್ಲಿ ರಾಮನು ನಾರುಮಡಿಯುಟ್ಟು ಕಾಡಿಗೆ ಸಾಗಬೇಕಾಯಿತು. ಅಲ್ಲಿಯಾದರೂ ಅವನ ಪತ್ನಿ ಅಪಹೃತೆಯಾದ ಕಾರಣ ನೆಮ್ಮದಿಗೆ ಎರವಾಗಬೇಕಾಯಿತು; ಆಕೆಯನ್ನು ಮತ್ತೆ ಪಡೆಯುವಲ್ಲಿ ಅಪಾರಕಷ್ಟಗಳನ್ನೇ ಅನುಭವಿಸಬೇಕಾಯಿತು. ಹೀಗೆ ದಕ್ಕಿಸಿಕೊಂಡ ಮಡದಿಯನ್ನು ಲೋಕಾಪವಾದಕ್ಕಂಜಿ ತೊರೆಯಬೇಕಾಯಿತು. ಈ ರೀತಿ ಎಲ್ಲವೂ ದುಃಖಮಯ. ಆದುದರಿಂದ ವಿವೇಕವನ್ನು ತಂದುಕೊಳ್ಳುವುದೊಂದೇ ನಮ್ಮ ದಾರಿಯಾಗಲಿ.
ರತ್ನೋದಾರಚತುಃಸಮುದ್ರರಶನಾಂ ಭುಕ್ತ್ವಾ ಭುವಂ ಕೌರವೋ
ಭಗ್ನೋರುಃ ಪತಿತಃ ಸ ನಿಷ್ಪರಿಜನೋ ಜೀವನ್ ವೃಕೈರ್ಭಕ್ಷಿತಃ |
ಗೋಪೈರ್ವಿಶ್ವಜಯೀ ಜಿತಃ ಸ ವಿಜಯಃ ಕಕ್ಷೈರ್ಹತಾ ವೃಷ್ಣಯ-
ಸ್ತಸ್ಮಾತ್ಸರ್ವಮಿದಂ ವಿಚಾರ್ಯ ಸುಚಿರಂ ಶಾಂತ್ಯೈ ಮನೋ ದೀಯತಾಮ್ ||
(ಭಾರತಮಂಜರಿ, ಪು. ೮೫೧)
ರತ್ನಗರ್ಭೆಯೂ ಸಮುದ್ರಮೇಖಲೆಯೂ ಆದ ವಸುಂಧರೆಯನ್ನು ಅನುಭವಿಸಿದ ದುರ್ಯೋಧನ ತೊಡೆ ಮುರಿಸಿಕೊಂಡು ಬೀಳಬೇಕಾಯಿತು; ಕೇಳುವವರಿಲ್ಲದೆ ಕುಟುಕು ಜೀವವನ್ನು ಇಟ್ಟುಕೊಂಡಿರುವಾಗಲೇ ತೋಳಗಳಿಂದ ಕಿತ್ತುತಿನ್ನಲ್ಪಡಬೇಕಾಯಿತು. ವಿಶ್ವವಿಜಯಿಯಾದ ಅರ್ಜುನನು ಕಾಡುಗೊಲ್ಲರ ಕೈಯಲ್ಲಿ ಸೋತುಹೋಗಬೇಕಾಯಿತು. ಪರಾಕ್ರಮಿಗಳಾದ ಯಾದವರು ಪರಸ್ಪರ ಜೊಂಡಿನಿಂದ ಹೊಡೆದುಕೊಂಡು ಸಾಯಬೇಕಾಯಿತು. ಆದುದರಿಂದ ಇದನ್ನೆಲ್ಲ ಗಂಭೀರವಾಗಿ ಸಮಾಲೋಚಿಸಿ ಶಾಂತಿಯಲ್ಲಿಯೇ ಮನಸ್ಸನ್ನು ನೆಲೆಗೊಳಿಸಿರಿ.
ಋಷ್ಯಾಶ್ರಮಗಳ ವರ್ಣನೆ, ತೀರ್ಥ-ಕ್ಷೇತ್ರಗಳ ಬಣ್ಣನೆ ಮತ್ತು ಧ್ಯಾನ-ಯೋಗಾದಿಗಳ ವಿವರಗಳನ್ನೇ ಶಾಂತರಸದ ಅಭಿವ್ಯಕ್ತಿಯೆಂದು ಭಾವಿಸಿದ ಕಾಲದಲ್ಲಿ ವಿಪುಲವಾದ ಸಂಕೀರ್ಣಘಟನೆಗಳಿಂದ ಪರಿಪ್ಲುತವಾಗಿ ಅನೇಕಭಾವಗಳ ತುಮುಲಗಳಾಗಿ ಚಿತ್ರಿತವಾದ ರಾಮಾಯಣ-ಮಹಾಭಾರತಗಳಲ್ಲಿ ಶಾಂತರಸವನ್ನು ಅವುಗಳ ಯಥಾವತ್ತಾದ ಸ್ವರೂಪದಿಂದಲೇ ಕಾಣಿಸುವುದು ಹೆಚ್ಚಿನ ಪ್ರಜ್ಞಾವಂತಿಕೆ. ಇದನ್ನು ತೋರಿದ ಕ್ಷೇಮೇಂದ್ರನಿಗೆ ನಮ್ಮ ದೇಶದ ಕಾವ್ಯಮೀಮಾಂಸೆ ಸದಾ ಋಣಿ.
ಬಿಲ್ಹಣ
ಕಾಶ್ಮೀರದಲ್ಲಿ ಹುಟ್ಟಿ ಇಡಿಯ ದೇಶವನ್ನೆಲ್ಲ ಸುತ್ತಿ ಕಲ್ಯಾಣಚಾಲುಕ್ಯರ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಮನ್ನಣೆ ಗಳಿಸಿ ತನ್ನ ಜೀವಿತಶೇಷವನ್ನು ಪ್ರಾಯಶಃ ಕಾಶಿಯಲ್ಲಿ ಕಳೆದ ಬಿಲ್ಹಣನು ವಿದ್ವತ್ತೆ, ಕವಿತ್ವ ಮತ್ತು ವಿಜಿಗೀಷೆಗಳ ಸಾಕಾರ. ಈತನ ಮಹಾಕಾವ್ಯ “ವಿಕ್ರಮಾಂಕದೇವಚರಿತ”ದ ಮೊದಲನೆಯ ಸರ್ಗದಲ್ಲಿ ಕಾವ್ಯಮೀಮಾಂಸೆಯ ಕೆಲವೊಂದು ಅಂಶಗಳು ಪರಾಮೃಷ್ಟವಾಗಿವೆ. ಮೊದಲಿನಲ್ಲಿಯೇ ಸತ್ಕವಿಗಳಿಗೆ ಕೃತಿಚೋರರನ್ನು ಕುರಿತು ಎಚ್ಚರ ಹೇಳುತ್ತಲೇ ಭರವಸೆಯನ್ನು ಕೂಡ ಕೊಡುತ್ತಾನೆ:
ಸಾಹಿತ್ಯಪಾಥೋನಿಧಿಮಂಥನೋತ್ಥಂ
ಕರ್ಣಾಮೃತಂ ರಕ್ಷತ ಹೇ ಕವೀಂದ್ರಾಃ |
ಯದಸ್ಯ ದೈತ್ಯಾ ಇವ ಲುಂಠನಾಯ
ಕಾವ್ಯಾರ್ಥಚೋರಾಃ ಪ್ರಗುಣೀಭವಂತಿ ||
ಗೃಹ್ಣಂತು ಸರ್ವೇ ಯದಿ ವಾ ಯಥೇಷ್ಟಂ
ನಾಸ್ತಿ ಕ್ಷತಿಃ ಕಾಪಿ ಕವೀಶ್ವರಾಣಾಮ್ |
ರತ್ನೇಷು ಲುಪ್ತೇಷು ಬಹುಷ್ವಮರ್ತ್ಯೈ-
ರದ್ಯಾಪಿ ರತ್ನಾಕರ ಏವ ಸಿಂಧುಃ || (೧.೧೧–೧೨)
ಹೇ ಕವೀಂದ್ರರೇ, ಸಾಹಿತ್ಯಸಾಗರದ ಮಥನದ ಬಳಿಕ ಹುಟ್ಟಿದ ಕವಿತೆಯೆಂಬ ಕರ್ಣಾಮೃತವನ್ನು ಕಾಪಾಡಿಕೊಳ್ಳಿರಿ! ಇದನ್ನು ಅಪಹರಿಸಲು ಅಸುರರಂಥ ಕೃತಿಚೋರರು ವಿಪುಲವಾಗಿದ್ದಾರೆ. ಅಥವಾ ಕೃತಿಚೋರರು ಸತ್ಕವಿಗಳು ಕಾವ್ಯಗಳಿಂದ ಕಲ್ಪನೆಗಳನ್ನು ಕಸಿದುಕೊಳ್ಳುವುದಿದ್ದಲ್ಲಿ ಮನಬಂದಂತೆ ಕಸಿದು ಕೊಳ್ಳಲಿ. ಇದರಿಂದ ಮಹಾಕವಿಗಳಿಗೆ ಯಾವುದೇ ಕೊರತೆಯಾಗದು. ದೇವತೆಗಳು ಕಡಲಿನಾಳದ ರತ್ನಗಳನ್ನೆಲ್ಲ ಕಸಿದೊಯ್ದರೂ ಅದು ಇಂದಿಗೂ ರತ್ನಾಕರವೆನಿಸಿದೆ.
ನಾವು ಈಗಾಗಲೇ “ಹರಣ”ವೆಂಬ ಸಂಗತಿಯನ್ನು ಪರಾಮರ್ಶಿಸಿದ್ದೇವೆ. ಇದು ಕೃತಿಚೌರ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಎಲ್ಲ ಕವಿಗಳಿಗೂ ನಿರಪವಾದವೆಂಬಂತೆ ಕೃತಿಚೌರ್ಯವನ್ನು ಕುರಿತು ಕೋಪ-ಕಳವಳಗಳು ಇದ್ದೇ ಇವೆ. ಯಾವ ಕಾಲದಲ್ಲಿಯೂ ಕೃತಿಚೌರ್ಯವನ್ನು ತಡೆಯುವುದು ಕಷ್ಟ. ಇದಕ್ಕೆ ತಕ್ಕ ಮದ್ದೆಂದರೆ ಪ್ರಾಮಾಣಿಕರಾದ ಕವಿಗಳ ನಿತ್ಯನೂತನ ಪ್ರತಿಭೆಯೊಂದೇ. ಇದು ಬಿಲ್ಹಣ ಕಂಡುಕೊಂಡ ಸಮಾಧಾನ. ವಿದ್ವದ್ವಿಜಿಗೀಷೆಯಿಂದ ನಮ್ಮ ರಾಷ್ಟ್ರವನ್ನೆಲ್ಲ ಸುತ್ತಿಬಂದ ಬಿಲ್ಹಣನಿಗೆ ಕವಿಗಳ ಮಾತ್ಸರ್ಯ ಮತ್ತು ಕೃತಿಚರ್ಯಗಳ ಬಗೆ ಚೆನ್ನಾಗಿ ತಿಳಿದಿರಬೇಕು. ಆದುದರಿಂದ ಅವನ ಈ ನಿಲವು ಎಲ್ಲ ಕಾಲದಲ್ಲಿಯೂ ಉಪಾದೇಯ. ಹೀಗೆ ಚೌರ್ಯಕ್ಕೆ ಪ್ರತಿಯಾಗಿ ಪ್ರತಿಭೆಯನ್ನು ಮುಂದಿಡುವ ಪರಿಹಾರಮಾರ್ಗ ಸಾತ್ತ್ವಿಕರಿಗೆ ಸಲ್ಲುವಂಥದ್ದು. ಇದನ್ನು ಆನಂದವರ್ಧನನೂ ಧ್ವನ್ಯಾಲೋಕದ ನಾಲ್ಕನೆಯ ಉದ್ದ್ಯೋತದಲ್ಲಿ ಪರ್ಯಾಯವಾಗಿ ಹೇಳಿದ್ದಾನೆ.[1]
ಬಿಲ್ಹಣನು ತನಗೆ ಸಹಜವಾದ ಶೃಂಗಾರೌದ್ಧತ್ಯದ ಮೂಲಕ ಕವಿತೆಯಲ್ಲಿ ಹೊಸಹೊಸ ಭಾವಗಳ ಮಹತ್ತ್ವವನ್ನು ಹೀಗೆ ಸೂಚಿಸುತ್ತಾನೆ:
ಪ್ರೌಢಿಪ್ರಕರ್ಷೇಣ ಪುರಾಣರೀತಿ-
ವ್ಯತಿಕ್ರಮಃ ಶ್ಲಾಘ್ಯತಮಃ ಪದಾನಾಮ್ |
ಅತ್ಯುನ್ನತಿಸ್ಫೋಟಿತಕಂಚುಕಾನಿ
ವಂದ್ಯಾನಿ ಕಾಂತಾಕುಚಮಂಡಲಾನಿ || (೧.೧೫)
ಶಬ್ದಪ್ರೌಢಿಮೆಯನ್ನು ಮೆರೆಸುವ ಮೂಲಕ ಹಳೆಯ ಕಾವ್ಯಮಾರ್ಗವನ್ನು ಮೀರಿದರೆ ಅದು ಸ್ತುತ್ಯರ್ಹವೇ ಆಗುತ್ತದೆ. ಕಾಂತೆಯರ ಸ್ತನಗಳು ತಮ್ಮ ಉನ್ನತಿಯ ಕಾರಣ ಕಂಚುಕಗಳನ್ನು ಮೀರಿ ಬೆಳೆದರೆ ಅಂದವೇ ಹೆಚ್ಚುತ್ತದೆ.
ಧನಾತ್ಮಕವಾದ ಕಾರಣಗಳಿಗಾಗಿ ಪೂರ್ವಕವಿಪರಿಚಿತವಾದ ಕಾವ್ಯಪದ್ಧತಿಯನ್ನು ಉಲ್ಲಂಘಿಸಿದಲ್ಲಿ ಅದೆಂದೂ ನಿಂದ್ಯವೆನಿಸದೆ ವಂದ್ಯವೇ ಆಗುವುದೆಂಬ ಬಿಲ್ಹಣನ ಮಾತು ಸ್ಮರಣೀಯ. ಈ ದೃಷ್ಟಿಯನ್ನು ಜಗತ್ಸಾಹಿತ್ಯದಲ್ಲೆಲ್ಲ ವ್ಯಾಪಕವಾಗಿ ಮನಗಾಣಬಹುದು. ಶ್ರೇಷ್ಠಕವಿಯೊಬ್ಬನ ಸ್ವೋಪಜ್ಞತೆಯೇ ಇಲ್ಲಿದೆ. ಆದುದರಿಂದಲೇ “ಪ್ರೌಢಿಪ್ರಕರ್ಷ” ಎಂಬ ಇಲ್ಲಿಯ ಮಾತು ಮಿಗಿಲಾದ ಮಹತ್ತ್ವವನ್ನು ಹೊಂದಿದೆ. ರಸವಿವಕ್ಷೆಯಿಲ್ಲದೆ ಕೇವಲ ವಿಶೃಂಖಲವಾಗಿ ಪೂರ್ವಸೂರಿಗಳ ಪಥವನ್ನು ಮೀರುವುದು ಕಾವ್ಯಪರಂಪರೆಯ ಆತ್ಮಹತ್ಯೆಯೇ ಆಗುತ್ತದೆ. ದುರ್ದೈವವೆಂದರೆ, ಬಿಲ್ಹಣನಂಥ ಉದ್ದಂಡಕವಿಯೂ ಪದಗಳ ಪ್ರೌಢಿಯನ್ನು ಮೆಚ್ಚಿ ಇವನ್ನೇ ಮುಂದುಮಾಡಿರುವಷ್ಟರ ಮಟ್ಟಿಗೆ ಕಾವ್ಯದ ಸಮಗ್ರ ಅರ್ಥಪ್ರೌಢಿಮೆಯನ್ನು ಕಟಾಕ್ಷಿಸಿಲ್ಲ. ಇದು ಕಾಳಿದಾಸ, ಬಾಣಭಟ್ಟ, ವಿಶಾಖದತ್ತರಂಥ ವರಕವಿಗಳ ಪರವರ್ತಿಗಳಿಗೆಲ್ಲ ಬಲುಮಟ್ಟಿಗೆ ಸಲ್ಲುವ ಆಕ್ಷೇಪ. ಈ ನಿಟ್ಟಿನಲ್ಲಿ ಹೆಚ್ಚಿನ ಆಲಂಕಾರಿಕರೂ ದುಡಿದಿಲ್ಲವೆಂಬುದು ಮತ್ತೂ ಸಂಕಟದ ಸಂಗತಿ.
ಯಾವುದೇ ಕವಿಯಾಗಲಿ, ತನ್ನ ಕಾವ್ಯವನ್ನು ವಿದ್ವದ್ರಸಿಕರ ಪರೀಕ್ಷೆಗೆ ನಿಃಸಂಕೋಚವಾಗಿ ಒಡ್ಡಿಕೊಳ್ಳಬೇಕು. ಇದನ್ನು ಬಿಲ್ಹಣ ಉತ್ಸಾಹದಿಂದ ಪ್ರತಿಪಾದಿಸುತ್ತಾನೆ:
ಉಲ್ಲೇಖಲೀಲಾಘಟನಾಪಟೂನಾಂ
ಸಚೇತಸಾಂ ವೈಕಟಿಕೋಪಮಾನಾಮ್ |
ವಿಚಾರಶಾಣೋಪಲಪಟ್ಟಿಕಾಸು
ಮತ್ಸೂಕ್ತಿರತ್ನಾನ್ಯತಿಥೀಭವಂತು ||
ರಸಧ್ವನೇರಧ್ವನಿ ಯೇ ಚರಂತಿ
ಸಂಕ್ರಾಂತವಕ್ರೋಕ್ತಿರಹಸ್ಯಮುದ್ರಾಃ |
ತೇऽಸ್ಮತ್ಪ್ರಬಂಧಾನವಧಾರಯಂತು
ಕುರ್ವಂತು ಶೇಷಾಃ ಶುಕವಾಕ್ಯಪಾಠಮ್ ||
ಅಲೌಕಿಕೋಲ್ಲೇಖಸಮರ್ಪಣೇನ
ವಿದಗ್ಧಚೇತಃಕಷಪಟ್ಟಿಕಾಸು |
ಪರೀಕ್ಷಿತಂ ಕಾವ್ಯಸುವರ್ಣಮೇತ-
ಲ್ಲೋಕಸ್ಯ ಕಂಠಾಭರಣತ್ವಮೇತು || (೧.೧೯,೨೨,೨೪)
ರತ್ನಪರೀಕ್ಷಕರಂತೆ ಇರುವ ಸಹೃದಯರ ವಿಚಾರ ಒರೆಗಲ್ಲಿಗೆ ನನ್ನ ಪದ್ಯರತ್ನಗಳನ್ನು ಒಪ್ಪಿಸುತ್ತೇನೆ. ಅವರ ವಿಮರ್ಶನದಿಂದ ಇವುಗಳ ಸಾರಾಸಾರತೆಯು ತಿಳಿಯಲಿ. ಯಾರು ವಕ್ರೋಕ್ತಿಯ ರಹಸ್ಯಗಳನ್ನು ಅರಿಯಬಲ್ಲರೋ ರಸಧ್ವನಿಯ ಹಾದಿಯಲ್ಲಿ ಸಂಚರಿಸಬಲ್ಲರೋ ಅವರಷ್ಟೇ ನನ್ನ ಕಾವ್ಯಗಳನ್ನು ಪರಿಕಿಸಲಿ. ಮಿಕ್ಕವರೆಲ್ಲ ಬರಿಯ ಗಿಳಿಯೋದಿಗೆ ಮರುಳಾಗಲಿ. ನನ್ನೀ ಕಾವ್ಯವೆಂಬ ಸುವರ್ಣವು ವಿದ್ವದ್ರಸಿಕರೆಂಬ ಒರೆಗಲ್ಲುಗಳ ವಿಮರ್ಶನಕ್ಕೆ ತುತ್ತಾಗಿ ತನ್ಮೂಲಕ ಜನತೆಯ ಕಂಠಾಭರಣವಾಗಿ ಕಂಗೊಳಿಸಲಿ.
ಪ್ರಾಮಾಣಿಕವಾದ ವಿಮರ್ಶನಕ್ಕೆ ತೆರೆದುಕೊಳ್ಳದ ಕವಿಯನ್ನು ಕಾಲವು ಆದರಿಸುವುದಿಲ್ಲ. ಇದನ್ನು ಆಲಂಕಾರಿಕರು ತಮ್ಮ ತಮ್ಮ ವಿಮರ್ಶೆಗಳ ಮೂಲಕ ಸ್ಥಿರಗೊಳಿಸಿದ್ದರೂ ಹೆಚ್ಚಿನವರು ಇಂಥ ತೆರೆದ ಮನಸ್ಸು ಕವಿಗಿರಬೇಕೆಂದು ಕಂಠೋಕ್ತವಾಗಿ ಹೇಳಿಲ್ಲ. ರಾಜಶೇಖರ-ಕ್ಷೇಮೇಂದ್ರರಂಥ ಒಬ್ಬಿಬ್ಬರು ಕವಿಶಿಕ್ಷಾಗ್ರಂಥಕರ್ತರು ಮಾತ್ರ ಇದರತ್ತ ಗಮನ ಸೆಳೆದಿದ್ದಾರೆ.[2]
ಒಟ್ಟಿನಲ್ಲಿ ಬಿಲ್ಹಣನ ಕಾವ್ಯತತ್ತ್ವಚಿಂತನೆ ಕೆಲವೊಂದು ಹೊಸ ಹೊಳಹುಗಳನ್ನು ನೀಡುವುದರಲ್ಲಿ ಸಫಲವಾಗಿದೆ.
[1] ಇಂಥ ಸಾತ್ತ್ವಿಕದೃಷ್ಟಿಗೆ ವ್ಯತಿರಿಕ್ತವಾಗಿ ಜಗನ್ನಾಥನಂಥವರು ಕೃತಿಚೋರರಿಂದ ತಮ್ಮ ಕಾವ್ಯಗಳನ್ನು ಕಾಪಾಡಿಕೊಳ್ಳಲು ಮುಕ್ತಕಗಳ ಸ್ವತಂತ್ರಸಂಕಲನಗಳನ್ನು ಹವಣಿಸಿಕೊಂಡಿರುವುದು ಸ್ಮರಣೀಯ: ದುರ್ವೃತ್ತಾ ಜಾರಜನ್ಮಾನೋ ಹರಿಷ್ಯಂತೀತಿ ಶಂಕಯಾ | ಮದೀಯಪದ್ಯರತ್ನಾನಾಂ ಮಂಜೂಷೈಷಾ ಕೃತಾ ಮಯಾ || (ಭಾಮಿನೀವಿಲಾಸ, ೪.೪೫)
[2] ಪಿತುರ್ಗುರೋರ್ನರೇಂದ್ರಸ್ಯ ಸುತಶಿಷ್ಯಪದಾತಯಃ | ಅವಿವಿಚ್ಯೈವ ಕಾವ್ಯಾನಿ ಸ್ತುವಂತಿ ಚ ಪಠಂತಿ ಚ || ... ಚತುರ್ಥ ಏಕಾಕಿನಃ ಪರಿಮಿತಪರಿಷದೋ ವಾ ಪೂರ್ವಾಹ್ಣಭಾಗವಿಹಿತಸ್ಯ ಕಾವ್ಯಸ್ಯ ಪರೀಕ್ಷಾ | (ಕಾವ್ಯಮೀಮಾಂಸಾ, ಹತ್ತನೆಯ ಅಧ್ಯಾಯ, ಪು. ೫೧–೫೨)
ಕೃತಸಂಶೋಧನಂ ಮುಹುಃ ... ವ್ಯುತ್ಪತ್ತ್ಯೈ ಸರ್ವಶಿಷ್ಯತಾ ... ಸ್ವಸೂಕ್ತಿಪ್ರೇಷಣಂ ದಿಕ್ಷು ... ಪರಾಕ್ಷೇಪಸಹಿಷ್ಣುತ್ವಮ್ || (ಕವಿಕಂಠಾಭರಣ, ೨.೧೨,೧೪,೧೬,೧೯). ಈ ಮಾತುಗಳಿಂದ ಕ್ಷೇಮೇಂದ್ರನು ಕವಿಗಳ ಸ್ವವಿಮರ್ಶನಶೀಲತೆಯನ್ನು ವಿವರಿಸಿರುವುದು ಸ್ಪಷ್ಟವಾಗುತ್ತದೆ.
To be continued.