ಚಾರುದತ್ತ ಗೆಳೆಯ ಮೈತ್ರೇಯನ ಒತ್ತಾಯಕ್ಕೆ ಕಟ್ಟುಬಿದ್ದು ನಾಟ್ಯವನ್ನು ಕಾಣಲು ಬರುತ್ತಾನೆ. ಅವನಿಗೆ ಈ ಮುನ್ನ ತಾನು ಕಂಡಿದ್ದ ವಸಂತಸೇನೆಯ ಅಭಿನಯದಲ್ಲಿ ಅಷ್ಟಾಗಿ ಮನಸ್ಸಿರಲಿಲ್ಲ. ಹೀಗಾಗಿಯೇ ಅವನು ಹಿಂದೆ ಅವಳ ನೃತ್ಯಗಳಿಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದರೆ ಈಗ ಆಮ್ರಪಾಲಿಯ ಕೈಯಲ್ಲಿ ತರಪೇತಿ ಪಡೆದ ವಸಂತಸೇನೆಯ ಕಾರ್ಯಕ್ರಮಕ್ಕೆ ಹೋಗಲು ಹಿಂದೆಗೆಯುವ ಕಾರಣವೇ ಬೇರೆ. ಅವನೀಗ ಬರಿಗೈಯವನಾಗಿದ್ದಾನೆ. ಕೈಯೆತ್ತಿ ಕೊಡಲಾಗದಿರುವುದು ಅವನಿಗೆ ಮಿಗಿಲಾದ ಕಷ್ಟ:
ನನಗೆ ಸಂತೋಷ ಕೊಟ್ಟ ಕವಿ-ಕಲಾವಿದರಿಗೆ ನಾನು ಏನೂ ಕೊಡೋದಿಕ್ಕೆ ಆಗ್ತಾ ಇಲ್ಲ ಅನ್ನೋದು ನನಗೆ ಸಾವಿಗಿಂತ ಭೀಕರ ಅಂತ ಅನ್ನಿಸುತ್ತೆ ... ಅವರೆಲ್ಲ ಕೊಟ್ಟ ಆನಂದದ ಋಣವನ್ನ ನಾನು ಹೇಗೆ ತಾನೆ ತೀರಿಸೋದು? ಶಾಸ್ತ್ರಗಳೇನೋ ದೇವಋಣ, ಋಷಿಋಣ, ಪಿತೃಋಣ ಅಂತ ನಮ್ಮ ಮೇಲಿರೋ ಋಣಗಳನ್ನ ಬಗೆಬಗೆಯಾಗಿ ತಿಳಿಸುತ್ತವೆ. ಆದ್ರೆ ನನಗೆ ಇವೆಲ್ಲಕ್ಕಿಂತ ಮಿಗಿಲಾಗಿ ಆನಂದಋಣವೇ ಕಾಡುತ್ತೆ. (ಪು. ೫೩೬)
ಆನಂದದ ಋಣವನ್ನು ತೀರಿಸಬೇಕೆಂದು ರಸಾಭಿಜ್ಞ ಲೇಖರ ನವಕಲ್ಪನೆಯೆ?
ಆಮ್ರಪಾಲಿಯಿಂದ ಅಭಿನಯದ ಶಿಕ್ಷಣ ಪಡೆದು ಬಂದಿದ್ದ ವಸಂತಸೇನೆಯ ರಸಾಭಿನಯಕ್ಕೆ ಚಾರುದತ್ತ ಸಂಪೂರ್ಣವಾಗಿ ಮನಸೋತ. ಎಲ್ಲರ ಒತ್ತಾಯದಿಂದಾಗಿ ಆಯೋಜಕರ ಪರವಾಗಿ ತಾನೇ ಅವಳನ್ನು ಅಭಿನಂದಿಸಬೇಕಾದಾಗ ಮನದುಂಬಿ ಮಾತನಾಡಿದ. ಅಂದು ವಸಂತಸೇನೆ ಪ್ರದರ್ಶಿಸಿದ್ದು ಏಕಹಾರ್ಯ. ಹಿನ್ನೆಲೆಯಲ್ಲಿ ಮಾತ್ರ ಸಹನರ್ತಕಿಯರಿದ್ದರು. ಅವರು ವನದೇವತೆಗಳು, ಶಿವಗಣಗಳು, ಮನ್ಮಥನ ಪರಿವಾರ ಮುಂತಾದವರ ಅಭಿನಯ ಮಾಡಿದ್ದರು. ನಾಲ್ಕು ಮುಖ್ಯ ಪಾತ್ರಗಳ ನಿರ್ವಾಹವನ್ನು ವಸಂತಸೇನೆಯೊಬ್ಬಳೇ ಮಾಡಿದ್ದಳಾದರು ಏಕತಾನತೆಯ ಭಾವ ಯಾರಿಗೂ ಬರದಂತೆ ನರ್ತಿಸಿದ್ದಲು. ಇದು ರೇಭಿಲನಿಗೂ ಬೆರಗು ತಂದಿತ್ತು. ಚಾರುದತ್ತನ ಮೆಚ್ಚುಗೆ ವಸಂತಸೇನೆಯ ಮೈ ಮರೆಸುತ್ತದೆ. ಅವನೆಂದೂ ಅವಳ ಕಲೆಯನ್ನು ಹೀಗೆ ಕೊಂಡಾಡಿರಲಿಲ್ಲ:
ಇಂದು ನಮ್ಮ ವಸಂತಸೇನೆ ಮಾಡಿದ ನೃತ್ತ-ರಸಾಭಿನಯಗಳು ಎಂದೂ ಯಾರೂ ಮರೆಯಲಾಗದ ಮಧುರಾನುಭವಗಳು ... ವೈಶಾಲಿಯ ನಗರವಧು ಜನಪದಕಲ್ಯಾಣಿ ಆಮ್ರಪಾಲಿಗೆ ತಕ್ಕ ಶಿಷ್ಯೆಯೆಂದು ಈ ಪ್ರಯೋಗದ ಮೂಲಕ ಸಾರಿದ್ದಾಳೆ ... ಇಂದು ಶಿವ-ಶಿವೆಯರೂ ರತಿ-ಕಾಮರೂ ನಮ್ಮ ಕಣ್ಣುಗಳ ಮುಂದೆ ಮಾತ್ರವಲ್ಲ, ಅಂತರಂಗದಲ್ಲಿಯೂ ನಲಿದು ನರ್ತಿಸಿದ್ದಾರೆ. (ಪು. ೫೩೯-೪೦)
ಮುಂದುವರಿದ ಚಾರುದತ್ತ ಲಾಸ್ಯಾಂಗಗಳ ಬಗೆಗೆ ವಿವರವಾಗಿ ತಿಳಿಸುತ್ತಾನೆ. ಕಡೆಗೆ:
ವಸ್ತುತಃ ಶಾಸ್ತ್ರಕಾರರು ಹೇಳುವ ಎಲ್ಲ ಅಂಗಗಳನ್ನೂ ಎಲ್ಲ ವಿವರಗಳನ್ನೂ ನಮ್ಮ ಎಲ್ಲ ಪ್ರಯೋಗಗಳಲ್ಲೂ ಬಳಸಿಕೊಳ್ಳಬೇಕಿಲ್ಲ. ಹಾಗೆಲ್ಲ ಬಳಸಿಕೊಳ್ಳಲೂ ಆಗುವುದಿಲ್ಲ. ಏಕೆಂದರೆ ಔಚಿತ್ಯ ಹದಗೆಡುತ್ತದೆ. ಅದಿಲ್ಲದೆ ರಸವೇ ಇಲ್ಲ. (ಪು. ೫೪೧)
ಎಂದು ಕಲೆಯಲ್ಲಿ ರಸ ಮತ್ತು ಔಚಿತ್ಯಗಳ ಪ್ರಾಮುಖ್ಯವನ್ನು ತಿಳಿಸುತ್ತಾನೆ. ನಾಟ್ಯಪ್ರಿಯರು ಮತ್ತು ನರ್ತಕರು ಈ ಭಾಗವನ್ನು ಕೂಲಂಕಷವಾಗಿ ಓದಬೇಕು. ಚಾರುದತ್ತನ ಮೂಲಕ ಸ್ವತಃ ನಾಟ್ಯಕಲೆ ಮತ್ತು ನಾಟ್ಯಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿರುವ ಲೇಖಕರು ಲಾಸ್ಯಾಂಗಗಳ ಹಲವು ಲಕ್ಷಣಗಳನ್ನೂ ಸೂಕ್ಷ್ಮತೆಗಳನ್ನೂ ಇಲ್ಲಿ ತಿಳಿಸಿದ್ದಾರೆ. ಕಲೆಯ ರಸಪಾಕದ ಇಂತಹ ಘಳಿಗೆಯನ್ನು ಲೇಖಕರು ಚಾರುದತ್ತ ಮತ್ತು ವಸಂತಸೇನೆಯರ ನಡುವೆ ಪ್ರೇಮಾಂಕುರವಾಗಲು ಬಳಸಿದ್ದಾರೆ.
ಈ ರಸಮಯ ಸನ್ನಿವೇಶದಲ್ಲಿ ನೇಪಥ್ಯದಿಂದ ರಂಗದ ಮೇಲೆ ಇದ್ದಕ್ಕಿದ್ದಂತೆ ಅಡಿಯಿಂದ ಮುಡಿಯವರೆಗೆ ಭಸ್ಮೋದ್ಧೂಲಿತನಾಗಿದ್ದ ವಿಲಕ್ಷಣ ವ್ಯಕ್ತಿ ಆವಿರ್ಭವಿಸುತ್ತಾನೆ. ಅವನು ಕೆಂಜೆಡೆಗಳ ಮಂಡಲವನ್ನು ಎತ್ತರದ ಮುಡಿಯಾಗಿ ಕಟ್ಟಿದ್ದ. ಮುಖವೆಲ್ಲ ಆವರಿಸಿಕೊಂಡಿದ್ದ ಗಡ್ಡ-ಮೀಸೆಗಳು, ಕೆಂಡದುಂಡೆಗಳಂಥ ಕಣ್ಣುಗಳು, ವೀರತಿಲಕ, ರುದ್ರಾಕ್ಷಿಮಾಲೆ, ನರಕಪಾಲ, ಕೌಪೀನ ಅವನನ್ನು ಇನ್ನಷ್ಟು ಉಗ್ರನನ್ನಾಗಿಸಿತ್ತು. ಅವನನ್ನು ತಡೆಯಲು ಯಾರಿಗೂ ಆಗಲಿಲ್ಲ. ಅವನು ಮುನ್ನುಗ್ಗುತ್ತಿದ್ದಂತೆಯೇ ಅಂಜುತ್ತ ಅಳುಕುತ್ತ ವಸಂತಸೇನೆಯು ಚಾರುದತ್ತನಿಗೆ ಮತ್ತಷ್ಟು ಹತ್ತಿರವಾದಳು, ಅವನೂ ಅವಳನ್ನು ಸರ‍್ರನೆ ರಂಗದ ಬದಿಯ ಮತ್ತವಾರಿಣಿಯತ್ತ ಕರೆದೊಯ್ದ. ‘ಬ್ಲೆಸಿಂಗ್ ಇನ್ ಡಿಸ್‌ಗೈಸ್’ ಎಂದರೆ ಇದೇ ಅಲ್ಲವೆ! ಪ್ರೇಮಿಗಳು ಹತ್ತಿರವಾಗಲು ನಮ್ಮ ಲೇಖಕರು ಅದೆಷ್ಟು ಬೇಗೆ ಅವಕಾಶ ಮಾಡಿಕೊಟ್ಟುಬಿಟ್ಟರು!
ಆ ಉಗ್ರಾಕಾರದ ಸಿದ್ಧನು ಉಜ್ಜಯಿನಿಯ ಜನರಿಗೆ ನಾಡಿನ ಭವಿಷ್ಯ ಹೇಳಲು ಬಂದಿದ್ದ. ಅವನು ಆರ್ಯಕನಿನ್ನೂ ಬದುಕಿದ್ದಾನೆ, ಅವನೇ ಅವಂತಿಯ ದೊರೆಯಾಗಲಿದ್ದಾನೆ, ಇದು ಮಹಾಕಾಲನ ಶಾಸನ ಎಂದು ಹೇಳಿ ಬಂದಂತೆಯೇ ಕಣ್ಮರೆಯಾಗಿದ್ದ. ಮಹಾಮಾತ್ಯನ ಈ ತಂತ್ರದ ಮುಂದೆ ಇಂದಿನವರೂ ನಾಚಬೇಕು.
ಚಾರುದತ್ತ, ವಸಂತಸೇನೆಯರು ಅಪ್ಪಟ ಮೊದಲ ನೋಟದ ಪ್ರೇಮಿಗಳಂತೆ ಅನ್ಯೋನ್ಯವಾಗಿ ಚಿಂತಿಸಿಕೊಳ್ಳುತ್ತ ವಿರಹದಲ್ಲಿ ತೊಳಲುತ್ತಾರೆ. ವಸಂತಸೇನೆ ತನ್ನ ಸಖಿ ಮದನಿಕೆಯೊಡನೆ ತನ್ನ ತೊಳಲಾಟವನ್ನು ಹೇಳಿಕೊಳ್ಳುತ್ತಾನೆ. ಆದರೆ ಚಾರುದತ್ತ? ಮೊದಲೇ ಬಡತನದ ಕಷ್ಟ. ಇದೀಗ ಈ ಮಧುರ ಸಂಕಟ. ಗಣಿಕೆಯಾದ ವಸಂತಸೇನೆ ಕುಲವುಧವಾಗುವ ಶಪಥ ಮಾಡಿದ್ದಾಳೆ. ಆಮ್ರಪಾಲಿ ಸೋತ ವಿಷಯದಲ್ಲಿ ಇವಳು ಗೆಲ್ಲಬೇಕಾಗಿದೆ. ಜೊತೆಗೆ ಮಹಾಮಾತ್ಯ ಮತ್ತು ರೇಭಿಲರು ತನಗೆ ವಹಿಸಿರುವ ಮಹತ್ಕಾರ್ಯವನ್ನೂ ಸಾಧಿಸಬೇಕಾಗಿದೆ.
ಜನಪ್ರಿಯ ರಂಗಪ್ರಯೋಗ ಮತ್ತು ಚಲನಚಿತ್ರಗಳ ಮೂಲಕ ‘ಮೃಚ್ಛಕಟಿಕ’ದ ಘಟನೆಗಳು ಸಾಧಾರಣವಾಗಿ ಎಲ್ಲರಿಗೂ ತಿಳಿದಿರುವಂಥವೇ. ಬೆನ್ನಟ್ಟಿ ಬಂದ ಶಕಾರನಿಂದ ತಪ್ಪಿಸಿಕೊಳ್ಳುವ ನೆವದಲ್ಲಿ ವಸಂತಸೇನೆ ಚಾರುದತ್ತನ ಮನೆಯಲ್ಲಿ ತನ್ನ ಒಡವೆಗಳನ್ನು ಇಡುವುದು; ಅವು ಕಳವಾಗಿ ತಡೆಗೆ ಅವಳನ್ನೇ ತಲುಪುವುದು; ಚಾರುದತ್ತನ ಮಗ ರೋಹಸೇನ ಮಣ್ಣಿನ ಆಟದ ಬಂಡಿ ಬೇಡವೆಂದು, ಚಿನ್ನದ ಬಂಡಿ ಬೇಕೆಂದು ಬೇಡುವುದು; ಅವನಿಗೆ ವಸಂತಸೇನೆ ತನ್ನ ಒಡವೆಗಳನ್ನು ಕೊಡುವುದು; ಅವಳು ಶಕಾರನ ಬಂಡಿಯನ್ನು ಅರಿಯದೆಯೇ ಏರುವುದು; ಜೀರ್ಣೋದ್ಯಾನಕ್ಕೆ ಬಂದ ಅವಳ ಕತ್ತು ಹಿಸುಕಿ ಕೊಲ್ಲಲೆಳಸುವ ಶಕಾರ ಕೊಲೆಯ ಆರೋಪವನ್ನು ಚಾರುದತ್ತನ ಮೇಲೆ ಹೊರಿಸುವುದು; ಅದು ಅವನಿಗೆ ಮರಣದಂಡನೆಯನ್ನೇ ತರುವುದು - ಇವು ಆ ರೂಪಕದ ಪ್ರಧಾನ ಘಟನೆಗಳು. ಇವನ್ನೇ ಲೇಖಕರು ತಮ್ಮ ಕಲ್ಪನೆಯ ಚಪ್ಪರಕ್ಕೆ ಹಬ್ಬಿಸಿದ್ದಾರೆ. ಕಡೆಗೆ ಎಲ್ಲವೂ ಸುಖಾಂತವಾಗಿ, ಪಾಲಕ, ಶಕಾರ ಮತ್ತು ಕಾಮಲತೆಯರು ಸಾರ್ವಜನಿಕ ವಿಚಾರಣೆಗೆ ಗುರಿಯಾಗಿ ಮರಣದಂಡನೆಗೆ ತುತ್ತಾಗುತ್ತರೆ. ಸಾಂಕೃತ್ಯಾಯನಿ ಧರ್ಮಾಸನವನ್ನು ಅಲಂಕರಿಸಿ ಅಪರಾಧಿಗಳಿಗೆ ದಂಡನೆ ವಿಧಿಸುತ್ತಾಳೆ.
ಈ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯ ಹೇಳುವವರು ಸತ್ಯಪ್ರತಿಜ್ಞೆ ಮಾಡಲು ತಮ್ಮ ತಮ್ಮ ಕುಲವೃತ್ತಿಗಳನ್ನು ಪ್ರತಿನಿಧಿಸುವ ಸಾಧನಗಳನ್ನೇ ಹಿಡಿದು ಶಪಥ ಮಾಡಬೇಕಿತ್ತು. ಇಂದಿನ ನ್ಯಾಯಾಲಯಗಳಲ್ಲಿ ಸಾಕ್ಷ್ಯ ಹೇಳುವವರು ಪವಿತ್ರ ಗ್ರಂಥಗಳನ್ನು ಹಿಡಿದು ಪ್ರತಿಜ್ಞೆ ಮಾಡುತ್ತಾರಂತೆ. ಆದರೆ ಆಗ-
ಸಾಕ್ಷ್ಯ ಹೇಳುವವರೂ ಸೇರಿದಂತೆ ಎಲ್ಲರೂ ತಮ್ಮ ಮಾತುಗಳಿಗೆ ಮುನ್ನ ಸತ್ಯಪ್ರತಿಜ್ಞೆ ಮಾಡಬೇಕಿತ್ತು. ಇದಕ್ಕಾಗಿ ಎಲ್ಲ ವರ್ಣಗಳವರಿಗೂ ಎಲ್ಲ ಉದ್ಯೋಗದವರಿಗೂ ಆಯಾ ವರ್ಣ-ಶ್ರೇಣಿ-ಕುಲಗಳಿಗೆ ತಕ್ಕಂತೆ ಪರಿಕರಗಳನ್ನು ಇರಿಸಲಾಗಿತ್ತು. ವಿಪ್ರರಿಗೆ ಅಗ್ನಿ, ಕ್ಷತ್ತ್ರಿಯರಿಗೆ ಖಡ್ಗ-ಧನುಸ್ಸು-ಕುಂತಗಳಂಥ ಆಯುಧ, ವೈಶ್ಯರಿಗೆ ಅವರ ವಾಣಿಜ್ಯದ ಪದಾರ್ಥಗಳು ಅಥವಾ ತಕ್ಕಡಿ, ಶೂದ್ರರಿಗೆ ಅವರ ಕುಲಕ್ರಮಾಗತವಾದ ವೃತ್ತಿಗಳಿಗೆ ಅನುಸಾರವಾಗಿ ಬಾಚಿ, ಇಕ್ಕುಳ, ಕುಲುಮೆ, ಮೂಸೆ, ಮಗ್ಗ, ನೇಗಿಲು, ಬುಟ್ಟಿ ಮುಂತಾದ ಸಲಕರಣೆಗಳು, ಗಣಿಕೆಯರಿಗೆ ಕನ್ನಡಿ, ಗಾಯಕ-ವಾದಕರಿಗೆ ಆಯಾ ವಾದ್ಯಗಳು ಇತ್ಯಾದಿ. ಸಭ್ಯರ ಸ್ಥಾನದಲ್ಲಿ ಇಡಿಯ ಸಾಮ್ರಾಜ್ಯದ ಪ್ರಜೆಗಳೇ ಇದ್ದರು. (ಪು. ೬೩೦)
ಅವರವರಿಗೆ ಪೂಜ್ಯವೆನಿಸುವ, ಮುಖ್ಯವೆನಿಸುವ ವಸ್ತುಗಳನ್ನು ಹಿಡಿದು ಪ್ರಮಾಣ ಮಾಡಿಸುವ ಈ ಪದ್ಧತಿ ತುಂಬ ಅರ್ಥಪೂರ್ಣವಾಗಿದೆ.
ಆರ್ಯಕನ ಪಟ್ಟಾಭಿಷೇಕಕ್ಕೆ ತರುವ ಮೃತ್ತಿಕೆಯ ವಿವರವೂ ವಿಶಿಷ್ಟವಾಗಿದೆ. ವಾಸವದತ್ತೆ ತಾನು ಉಜ್ಜಯಿನಿಗೆ ಬರುವಾಗಲೇ ಗಂಗೆ-ಯಮುನೆಯರ ಪುಣ್ಯಸಲಿಲವನ್ನು ತಂದಿರುತ್ತಾಳೆ. ಕ್ಷಿಪ್ರಾನದಿಯ ತೀರ್ಥವೂ ಇರುತ್ತದೆ. ನನಗೆ ವಿಶೇಷವೆನಿಸಿದ್ದು ಮೃತ್ತಿಕೆಯನ್ನು ತರಲು ಆಯ್ಕೆ ಮಾಡಿಕೊಂಡ ಸ್ಥಳಗಳು. ಮಣ್ಣನ್ನು - ಭೂಮಿಯನ್ನು - ಆಳುವವರಿಗೆ ಮಣ್ಣಿನ ಅಭಿಷೇಕ ಕೂಡ ಆಗಬೇಕು ತಾನೆ! ಮಣ್ಣನ್ನು ಸಂಗ್ರಹಿಸಿದ ನದೀತೀರ, ರಾಜಾಂಗಣ, ನಗರದ್ವಾರ ಮುಂತಾದವು ಪವಿತ್ರ ಹಾಗೂ ಅಧಿಕಾರದ ಸ್ಥಳಗಳು. ಕೊಟ್ಟಿಗೆ, ಹುತ್ತ, ಕುಂಬಾರನ ಅಂಗಳ, ಗಣಿಕೆಯ ಮನೆ, ಇಲಿಯ ಬಿಲ ಹಾಗೂ ಗೋವಿನ ಕೊಂಬು, ಆನೆಯ ದಂತ, ಕಾಡುಹಂದಿಯ ದಾಡೆ ಮತ್ತು ರಥಚಕ್ರಗಳು ಕೆತ್ತಿದ ಎಡೆಗಳು ವ್ಯಾಪಕವಾದ ಸಮಾಜ ಮತ್ತು ನಿಸರ್ಗದ ನೆಲೆಗಳು. ಪವಿತ್ರ, ಅಪವಿತ್ರ, ಮೇಲು, ಕೀಳು ಮೊದಲಾದ ಯಾವ ಭೇದವೂ ಇರದೆ ಮೃತ್ತಿಕೆಯನ್ನು ತರುವ ಈ ಆರ್ಷಪದ್ಧತಿಯ ಒಳಗಿರುವ ಹೃದಯವಿಶಾಲ್ಯ ವಿಸ್ಮಯಾವಹ.
* * *
‘ಸ್ವಪ್ನವಾಸವದತ್ತ’ ಮತ್ತು ‘ಮೃಚ್ಛಕಟಿಕ’ ಎಂಬ ಎರಡು ಸುಂದರ ರೂಪಕಸೌಧಗಳನ್ನು ಒಂದುಗೂಡಿಸಿ ಕಾದಂಬರಿಯ ಮಹಾಸೌಧವೊಂದು ‘ಮಣ್ಣಿನ ಕನಸು’ವಿನಲ್ಲಿ ನಿರ್ಮಾಣವಾಗಿದೆ. ಮೂಲದ ಅಸ್ತಿಭಾರ, ಸ್ತಂಭಗಳು, ಬಾಗಿಲುವಾಡ - ಎಲ್ಲವನ್ನೂ ಉಳಿಸಿಕೊಂಡು ಅತ್ಯಂತ ಸುಂದರವಾದ, ನವುರಾದ ಕುಸುರಿಕೆಲಸಗಳನ್ನು, ಆಕರ್ಷಕವಾದ ಭಿತ್ತಿಚಿತ್ರಗಳನ್ನು, ಮೂರ್ತಿಶಿಲ್ಪಗಳನ್ನು ಕೃತಿಯ ಆದ್ಯಂತ ಹವಣಿಸಲಾಗಿದೆ. ಈ ಕುಶಲಶಿಲ್ಪಿಗೆ ಹೃತ್ಪೂರ್ವಕ ಅಭಿನಂದನೆಗಳು. ಎರಡು ನದಿಗಳು ಸಂಗಮಿಸಿ ಭೋರ್ಗರೆದು ಹರಿಯುವ ಮಹಾನದಿಯಂತೆ ಈ ಗದ್ಯಕಾವ್ಯ ಪ್ರವಹಿಸಿದೆ. ಎರಡು ಸಾವಿರದ ಐನೂರು ವರ್ಷಗಳ ಹಿಂದಿನ ಆಡಳಿತ ವ್ಯವಸ್ಥೆಗಳು, ಕಲೆ, ಮತ, ಧರ್ಮ, ಸಂಸ್ಕೃತಿ, ಸಮಾಜ ಮುಂತಾದವುಗಳ ದಟ್ಟವಾದ ಚಿತ್ರಣದೊಡನೆ ಮಾನವಹೃದಯಗಳ ತಲ್ಲಣ-ತಾಕಲಾಟಗಳು ಹೃದಯಸ್ಪರ್ಶಿಯಾಗಿ ಮೂಡಿವೆ. ಇಲ್ಲಿ ಅಂದು-ಇಂದು-ಮುಂದುಗಳನ್ನು ಬೆಸೆಯುತ್ತ ಅಧಿಭೂತ-ಅಧಿದೈವ-ಅಧ್ಯಾತ್ಮಗಳ ಸಾಕ್ಷಾತ್ಕಾರಕ್ಕೆ ಇಂಬುನೀಡುವ ಮಹತ್ತಾದ ಕನಸಿದೆ. ಒಟ್ಟಿನಲ್ಲಿ ‘ಮಣ್ಣಿನ ಕನಸು’ ಕನ್ನಡ ಕಾದಂಬರೀಲೋಕದ ದಿಶಾಪರಿವರ್ತಕ ಕೃತಿ. ಗಣೇಶರಿಂದ ಇನ್ನಷ್ಟು ಕಾದಂಬರಿಗಳು ಹೊರಬರಲಿ ಎಂದು ಆಶಿಸಿ ಅವರನ್ನು ಅಭಿನಂದಿಸುತ್ತೇನೆ.
Concluded.