ಉದಯನನಂಥ ಅಪ್ರತಿಮ ಕಲಾವಿದನ ಬಗೆಗೆ ಸ್ವತಃ ಕಲಾವಿದೆಯೂ ಕಲಾಪ್ರೇಮಿಯೂ ಆಗಿದ್ದ ವಾಸವದತ್ತೆಯ ಅಭಿಮಾನ, ಆಕರ್ಷಣೆಗಳು ಎಲ್ಲ ಕಾಲದಲ್ಲಿಯೂ ಸಹಜವಾದದ್ದು. ಅವಳು ತನ್ನ ತಾಯಿಯ ನೆರವಿನಿಂದ ತಂದೆಯನ್ನು ಒಪ್ಪಿಸಿ ಉದಯನನನ್ನು ಗುರುವಾಗಿ ಪಡೆದು ವೀಣಾವಾದನ ಕಲಿಯುತ್ತಿದ್ದಳು. ಹೀಗೆ ಮೆಚ್ಚುಗೆ ಪ್ರೇಮವಾಗಿ ಪ್ರಗತಿ ಹೊಂದಿತ್ತು. ಪಾಲಕನ ಕುತಂತ್ರ ತಿಳಿದ ಕೂಡಲೇ ವಾಸವದತ್ತೆ ತನ್ನ ಗುರು ರೇಭಿಲನನ್ನು ಪ್ರಾರ್ಥಿಸಿ ಹೇಗಾದರೂ ಮಾಡಿ ಈ ವಿಷಯವನ್ನು ಯೌಗಂಧರಾಯಣನಿಗೆ ತಿಳಿಸಲು ಹೇಳುತ್ತಾಳೆ. ಅದರಂತೆ ಶರ್ವಿಲಕ ವಿಂಧ್ಯಾಟವಿಯನ್ನು ಕ್ರಮಿಸಿ ಕೌಶಾಂಬಿಗೆ ಬರುವಷ್ಟರಲ್ಲಿ ಉದಯನ ಸೆರೆಯಾಗಿರುತ್ತಾನೆ. ಈ ಸನ್ನಿವೇಶದಲ್ಲಿ ಮಹಾಮಾತ್ಯನ ವ್ಯಕ್ತಿತ್ವದ ವಿಶ್ವರೂಪದ ಪರಿಚಯ ನಮಗಾಗುತ್ತದೆ. ತನ್ನ ದೊರೆಯನ್ನು ಸೆರೆಯಿಂದ ಬಿಡಿಸಿ ಅವನನ್ನು ವಾಸವದತ್ತೆಯೊಡನೆ ಮತ್ತೆ ಕೌಶಾಂಬಿಯ ಸಿಂಹಾಸನದಲ್ಲಿ ಪ್ರತಿಷ್ಠಾಪಿಸುವ ತನಕ ಅವನು ಬರಿಯ ಒಬ್ಬ ವ್ಯಕ್ತಿಯಾಗದೆ ಒಂದು ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಅವನ ಅದ್ಭುತ ಕಾರ್ಯಯೋಜನೆ, ಸಂಯಮ, ಸಮಯಪ್ರಜ್ಞೆ, ಸಮರನೀತಿ, ರಾಜನಿಷ್ಠೆಗಳಿಂದಾಗಿ ಉದಯನ, ವಾಸವದತ್ತೆ ಮತ್ತು ಪದ್ಮಾವತಿಯರ ಜೀವನಸೂತ್ರಗಳನ್ನು ಹಿಡಿದು ಮುನ್ನಡೆಸುತ್ತಾನೆ; ಕೌಶಾಂಬಿಯ ರಾಜ್ಯಭಾರವನ್ನೂ ಸುಸೂತ್ರಗೊಳಿಸುತ್ತಾನೆ. ಪ್ರತಿಯೊಂದು ಸನ್ನಿವೇಶದಲ್ಲಿಯೂ ಚದುರಂಗದ ಆಟದ ಪರಿಣತನಂತೆ ನಡೆಗೆ ಪ್ರತಿಯಾದ ನಡೆಯಿಂದ ಗೆಲುವನ್ನು ತನ್ನದಾಗಿಸಿಕೊಳ್ಳುವ ನಿಶಿತಮತಿ ಯೌಗಂಧರಾಯಣ. ಅವನ ಸುತ್ತ ಇರುವವರಿಗೆ ಇದೊಂದು ಅಚ್ಚರಿ.
ಉದಯನ ಬೇಟೆಗೆ ಹೊರಟಾಗ ಬೆಂಗಾಲಿನವರು ತಮ್ಮೊಳಗೇ ಹರಟೆಕೊಚ್ಚುತ್ತ ಇದ್ದರೆ ಮಹಾಮಾತ್ಯನು ಇವರಿಂದ ದೂರದಲ್ಲಿ ಮುದುಡಿಕೊಂಡು ಕುಳಿತಿರುತ್ತಿದ್ದ ಆಟವಿಕರನ್ನು ಹತ್ತಿರಕ್ಕೆ ಕರಿಸಿಕೊಂಡು ಅವರು ಇಷ್ಟಪಡುವ ತಿಂಡಿ-ತಿನಿಸು, ಬಟ್ಟ-ಬರೆಗಳನ್ನು ಕೊಟ್ಟು ಅವರ ಕಷ್ಟ-ಸುಖ ವಿಚಾರಿಸಿ ಅವರದೇ ಭಾಷೆಯಲ್ಲಿ ಆತ್ಮೀಯವಾಗಿ ಮಾತನಾಡುತ್ತ ಅವರ ಆತ್ಮಗೌರವ ಉಳಿಯುವಂತೆ ನಡೆದುಕೊಳ್ಳುತ್ತಿದ್ದನೆಂದು ರುಮಣ್ವಂತ ವಿವರಿಸುತ್ತಾನೆ.
ಆಡಳಿತದ ಚುಕ್ಕಾಣಿ ಹಿಡಿದವರು ಹೇಗಿರಬೇಕೆಂದು ಯೌಗಂಧರಾಯಣ ಶರ್ವಿಲಕನಿಗೆ ಹೇಳುವ ಮಾತುಗಳು ಇಂದಿನ ಮಂತ್ರಿಮಹೋದಯರು ತಿಳಿದು ಅನುಸರಿಸುವಂತಿದೆ:
ಶರ್ವಿಲಕ, ವತ್ಸದೇಶದ ಮಹಾಮಾತ್ಯ ಮಾತ್ರವಲ್ಲ, ಯಾವುದೇ ದೇಶದ, ಯಾವುದೇ ಕಾಲದ ಮಂತ್ರಿ ಕೂಡ ತಾನು ಸಮಾಜದ ಯಾವುದೋ ಒಂದು ರೀತಿಯ ವರ್ಗಕ್ಕೆ ಮಾತ್ರ ಸೇರಿದ್ದೀನಿ ಅನ್ನೋ ಭಾವನೆ ಇಟ್ಟುಕೊಳ್ಳಬಾರದು. ಸ್ವಾಮಿಹಿತಕ್ಕಾಗಿ, ಸಮಷ್ಟಿಹಿತಕ್ಕಾಗಿ ಎಲ್ಲರ ಒಡನಾಟದಲ್ಲೂ ಇರಬೇಕು. ಇದನ್ನೇ ನಮ್ಮ ಆರ್ಷಪರಂಪರೆ ಧರ್ಮ ಅಂತ ಹೇಳಿದೆ. (ಪು. ೧೨೪-೨೫)
ಈ ಚಿಂತನೆ ಅತ್ಯಂತ ಸೂಕ್ತ ಮತ್ತು ಸಾರ್ವಕಾಲಿಕವಾಗಿ ಪ್ರಸ್ತುತ.
ಉದಯನ ಸೆರೆಸಿಕ್ಕ ಸಂಗತಿ ಯಾರೊಬ್ಬರಿಗೂ ತಿಳಿಯದಂತೆ ಮಹಾಮಾತ್ಯ ವಹಿಸುವ ಮುನ್ನೆಚ್ಚರಿಕೆ, ನಡಾಗಿರಿಗೆ ಮತ್ತು ಬರಿಸಿ ಮತ್ತದನ್ನು ಇಳಿಸುವಲ್ಲಿ ಗಜಶಾಲೆಯ ಗಾತ್ರಸೇವಕ ಮೊದಲಾದವರನ್ನು ಬಳಸಿಕೊಳ್ಳುವುದು, ವಾಸವದತ್ತೆಯೊಡನೆ ಉದಯನನ ವಿಮೋಚನೆಗಾಗಿ ಮಾಡುವ ತಂತ್ರ ಎಲ್ಲವೂ ಪ್ರತಿ ಹಂತದಲ್ಲಿಯೂ ರೋಚಕತೆ, ಕುತೂಹಲಗಳನ್ನು ಹಿಡಿದಿಟ್ಟುಕೊಂಡಿವೆ.
ಯೌಗಂಧರಾಯಣನ ಕಾರ್ಯಯೋಜನೆಯ ಸಾಫಲ್ಯಕ್ಕೆ ಸದಾ ನೆರವಾಗುವ ರುಮಣ್ವಂತ, ವಸಂತಕ, ವಿಶಾಖ ಮೊದಲಾದ ಕೌಶಾಂಬಿಯ ಅಧಿಕಾರಿವರ್ಗ; ಚಾರುದತ್ತ, ರೇಭಿಲ ಮುಂತಾದ ಉಜ್ಜಯಿನಿಯ ವರ್ತಕಶ್ರೇಷ್ಠರು; ವಸಂತಸೇನೆ ಮತ್ತಿತರ ಗಣಿಕಾವರ್ಗ; ವಾಸವದತ್ತೆ, ಕಾಂಚನಮಾಲೆ, ಅಂಗಾರವತಿ ಮೊದಲಾದ ಮಹಾಸೇನನ ಅಂತಃಪುರಸ್ತ್ರೀಯರು; ವತ್ಸದೇಶದ ಆಟವಿಕರು - ಹೀಗೆ ಉದಯನನ ವಿಮೋಚನೆಗೆ ದೊಡ್ಡ ಸಮುದಾಯವೇ ದುಡಿದಿದೆ. ಈ ಮಹಾಯೋಜನೆಯಲ್ಲಿ ಸಾಸಿವೆಯಷ್ಟೂ ವ್ಯತ್ಯಾಸವಾಗದಂತೆ ಕ್ಷಿಪಣಿಯ ಉಡಾವಣೆಯಲ್ಲಿರುವ ಕರಾರುವಾಕ್ಕಾದ ನಿರ್ವಹಣೆಯಂತೆ ಎಲ್ಲ ಘಟನಾವಳಿಗಳ ವ್ಯವಸ್ಥೆ ಯೌಗಂಧರಾಯಣ ರೂಪಿಸಿದ್ದೇ, ಅವಥಾ ಲೇಖಕರೇ ತಮ್ಮ ಪ್ರತಿಭಾಲೋಚನದಿಂದ ಎಲ್ಲವನ್ನೂ ಪ್ರತ್ಯಕ್ಷದರ್ಶಿಯಾಗಿ ಕಂಡು ಓದುಗರೆದುದು ತೆರೆದಿಡುತ್ತಿದ್ದಾರೆಯೇ?
ಹೀಗೆ ಬಿಡುಗಡೆಗೊಂಡ ಉದಯನ ತನ್ನ ಪರಿವಾರದೊಡನೆ ಕೌಶಾಂಬಿಯ ಹಾದಿಯಲ್ಲಿ ಪದ್ಮಾವತಿಗೆ ಬರುತ್ತಾನೆ. ಅಲ್ಲಿ ಮಹಾಮಾತ್ಯನಿಗೆ ಹಿರಣ್ಯಶ್ರೇಷ್ಠಿಯ ಮೂಲಕ ಆರುಣಿಯು ಕೌಶಾಂಬಿಯನ್ನು ವಶಪಡಿಸಿಕೊಂಡ ಆಘಾತಕರ ವಾರ್ತೆ ತಿಳಿಯುತ್ತದೆ. ಈ ತಳಮಳಗಳ ನಡುವೆ ಮಗಳ ವಿವಾಹವನ್ನು ಸಂಪನ್ನಮಾಡಿಕೊಡಲೆಂದು ಕೌಶಾಂಬಿಗೆ ಬರುತ್ತಿದ್ದ ಪ್ರದ್ಯೋತ ಮತ್ತು ಅವನ ಪರಿವಾರದಲ್ಲಿರುವ ಅಂಗಾರವತಿ, ಗೋಪಾಲಕ ಹಾಗೂ ಆರ್ಯಕ ಮುಂತಾದ ಎಲ್ಲರೂ ಕಾಡಿನಲ್ಲಿ ದಳ್ಳುರಿಗೆ ಸಿಲುಕಿ ಭಸ್ಮವಾದ ಸುದ್ದಿ ಲಾವಾಣಕದಲ್ಲಿರುವ ವಾಸವದತ್ತೆಗೆ ತಲುಪುತ್ತದೆ. ಆಕೆಯನ್ನು ಸಾಂತ್ವನಗೊಳಿಸಿ ಉದಯನನ ರಾಜ್ಯಪ್ರಾಪ್ತಿಗಾಗಿ ಹೆಣಗುವ ಹೊಣೆ ಯೌಗಂಧರಾಯಣನ ಹೆಗಲಿಗೇ ಏರುತ್ತದೆ.
ಯೌಗಂಧರಾಯಣನ ಸಂದಿಗ್ಧತೆ; ಉದಯನ-ಪದ್ಮಾವತಿಯರ ವಿವಾಹ
ಕೌಶಾಂಬಿಯನ್ನು ಮತ್ತೆ ಗಳಿಸಲು ಬೇರೊಂದು ರಾಜ್ಯದ ನೆರವು ಅನಿವಾರ್ಯವೆಂದು ಮಹಾಮಾತ್ಯನಿಗೆ ತತ್ಕ್ಷಣ ಹೊಳೆಯುತ್ತದೆ. ಆದರೆ ಯಾವ ರಾಜ್ಯದ ಸ್ನೇಹ? ವಿಶಾಖನ ಅಜ್ಜ ವರ್ಷಕಾರ. ಈತನನ್ನು ಮಗಧಕ್ಕೇ ಹೋಗಿ ಕಂಡ ಬಳಿಕ ಈ ಸಮಸ್ಯೆ ಬಲುಮಟ್ಟಿಗೆ ಪರಿಹೃತವಾಗುತ್ತದೆ. ವರ್ಷಕಾರ ಮತ್ತು ಯೌಗಂಧರಾಯಣರ ಭೇಟಿ, ಅವರ ಸಂಭಾಷಣೆಗಳು, ರಾಜಕಾರಣ, ನಡುನಡುವೆ ಬರುವ ವೈದಿಕ ವಿಧಿಗಳ ಪ್ರಸ್ತಾವ ರೋಚಕವಾಗಿವೆ. ಈ ಸನ್ನಿವೇಶದಲ್ಲಿ ‘ಚರಮೇಷ್ಟಿಕೆ’ ಎಂಬ ಪದದ ಪ್ರಸ್ತಾವ ಬರುತ್ತದೆ. ಅದೇನೆಂದು ಅರಿಯದ ವಿಶಾಖನಿಗೆ ಯೌಗಂಧರಾಯಣ ಹೀಗೆ ವಿವರಿಸುತ್ತಾನೆ:
ಏನಿಲ್ಲ, ಸೋಮಯಾಗಗಳ ಪೈಕಿ ಹೆಸರಾದ ಅತಿರಾತ್ರ, ಆಪ್ತೋರ್ಯಾಮಗಳ ಮಹಾವೇದಿಕೆಯನ್ನ ನಿರ್ಮಾಣ ಮಾಡುವಾಗ ಗರುಡನ ಆಕಾರದಲ್ಲಿ, ರಥಚಕ್ರದ ಆಕಾರದಲ್ಲಿ ಆಮೆಯ ಆಕಾರದಲ್ಲೆಲ್ಲ ಇಟ್ಟಿಗೆಗಳನ್ನ ಜೋಡಿಸ್ತಾರಲ್ಲವೇ; ಆಗ ಕೊನೆಯ ಇಟ್ಟಿಗೆಯನ್ನ ಲೋಕಂಪೃಣೇಷ್ಟಿಕೆ ಅಂತ ಹೇಳ್ತಾರೆ. ಅಂದ್ರೆ ಅದು ಜಗತ್ತನ್ನೆಲ್ಲ ತುಂಬುವಂಥ ಸತ್ತ್ವ ಇರುವ ಸಾಧನ ಅಂತ ಅರ್ಥ. ಆಗ ಯಜುರ್ವೇದದ ಚಮಕಮಂತ್ರಗಳನ್ನ ಹೇಳ್ತಾರೆ. ಆ ಕೊನೆಯ ಇಟ್ಟಿಗೆ, ಅದೇ ಚರಮೇಷ್ಟಿಕೆ. (ಪು. ೪೨೭)
ಶುಷ್ಕ ಯಾಜ್ಞಿಕನಾದ ವರ್ಷಕಾರನಿಗಿಂತ ಅದೇ ಯಜ್ಞತತ್ತ್ವವನ್ನು ಅಧ್ಯಾತ್ಮದ ದೃಷ್ಟಿಯಿಂದ ವಿವರಿಸಬಲ್ಲ ಮಹಾಮಾತ್ಯನ ಸಂವೇದನಶೀಲತೆ ನಮಗೆ ಮೆಚ್ಚಿಕೆಯಾಗುತ್ತದೆ.
ಆರ್ಯ ವರ್ಷಕಾರನಿಂದ ಮಗಧ ರಾಜಪುತ್ರಿ ಪದ್ಮಾವತಿ ಉದಯನನನ್ನು ಮೆಚ್ಚಿ ಮದುವೆಯಾಗಲು ಸಿದ್ಧವಿರುವುದು ತಿಳಿಯುತ್ತದೆ. ಆದರೆ ಅವಳ ಅಣ್ಣ ಅಜಾತಶತ್ರುವಿಗೆ ತನ್ನ ತಂಗಿ ಸಮ್ರಾಟನೊಬ್ಬನ ಪಟ್ಟಮಹಿಷಿಯಾದರೆ ಚೆನ್ನ; ಸವತಿಯರ ಸೋಂಕಿಲ್ಲದಿದ್ದರೆ ಮತ್ತೂ ಚೆನ್ನ ಎನ್ನುವ ಅಭಿಪ್ರಾಯ. ಹೀಗಿರುವಾಗ ಇವರ ಮದುವೆ ಮಾಡಿಸುವುದು ಹೇಗೆ? ಮಹಾಮಾತ್ಯನ ಸಂದಿಗ್ಧತೆ, ಭಾವಸಂಘರ್ಷ ಸಾಮಾನ್ಯರ ಪರಿಧಿಗೆ ಮೀರಿದ್ದು:
ಅಪ್ಪಟ ಅಪರಂಜಿಯಂಥ ಹೆಣ್ಣುಮಗಳು ವಾಸವದತ್ತೆ ಉದಯನಪ್ರಭುವಿನ ಪ್ರೇಮದ ಸರ್ವಸ್ವವಾದಳು. ಒಡೆಯನ ಬಂಧಮುಕ್ತಿಗೆ ಹೆಣ್ಣೊಬ್ಬಳು ಒದಗಿಬಂದಳು. ಇದೀಗ ಆತ ಕಳೆದುಕೊಂಡ ರಾಜಧಾನಿಯನ್ನು ದಕ್ಕಿಸಿಕೊಳ್ಳಲು ಮತ್ತೊಬ್ಬ ಹೆಣ್ಣು ಒದಗಿಬರಲಿದ್ದಾಳೆ. ಆದರೆ ಉದಯನನ ಅಂತರಂಗದಲ್ಲಿ ಮಾಸದ ಮುದ್ರೆ ಹಾಕಿ ನೆಲೆಯಾಗಿರುವ ವಾಸವದತ್ತೆಯ ಸ್ಥಾನದಲ್ಲಿ ಪದ್ಮಾವತಿಯನ್ನು ತರುವುದಾದರೂ ಹೇಗೆ? ಇದು ಮೊದಲಿಗೆ ತನ್ನ ಮೌಲ್ಯಪ್ರಜ್ಞೆಗೇ ಅಪಥ್ಯ; ತನ್ನೊಡೆಯನ ಪ್ರಣಯನಿಷ್ಠೆಗೂ ಅನಿಷ್ಟ. ಮೊದಲಿನಿಂದ ತನ್ನನ್ನು ಅಘಟಿತಘಟನಾಘಟಕನೆಂದು ಹತ್ತಿರದವರೆಲ್ಲ ಅಭಿಮಾನದಿಂದ ಹೇಳಿಕೊಳ್ಳುತ್ತಿರುವುದನ್ನು ಗೇಲಿಮಾಡುವಂತೆ ಇದು ಮರೆಯಲಾಗದ ಸೋಲು ... ಸವತಿಯರನ್ನು ಸೃಜಿಸುವ ರಾಜಕೀಯ ವಿವಾಹಗಳಿಗೆ ತಾನು ವಿಮುಖ. ಮದುವೆಯೆಂಬುದು ತ್ರಿವರ್ಗದ ಸಮಷ್ಟಿಯಾಗಿ ಅಪವರ್ಗವೆನಿಸಿದ ಮೋಕ್ಷದಲ್ಲಿ ಮಿಗಿಯಬೇಕೆಂದು ತನ್ನ ಆದರ್ಶ. (ಪು. ೩೮೩)
ಹೀಗೆ ತುಂಬ ಅಂತರ್ಮಥನ ಮಾಡಿ ಕಡೆಗೂ ಈ ಮದುವೆ ನಡೆಸಲು ಮಹಾಮಾತ್ಯ ಸನ್ನದ್ಧನಾಗುತ್ತಾನೆ. ವಾಸವದತ್ತೆಯನ್ನು ಹೇಗೆ ಒಪ್ಪಿಸಿದನೋ, ಆ ದೇವನೇ ಬಲ್ಲ!
ಹತ್ತನೆಯ ಅಧ್ಯಾಯದಲ್ಲಿ ವಾಸವದತ್ತೆಯ ಮನಃಸ್ಥಿತಿಯು ಪ್ರಜ್ಞಾಪ್ರವಾಹತಂತ್ರದ ಮೂಲಕ ನಮಗೆ ಅರಿವಾಗುತ್ತದೆ. ತನ್ನ ತಂದೆ, ತಾಯಿ, ಅಣ್ಣ ಮತ್ತವನ ಕುಟುಂಬದ ಕೊಲೆಗೆ ಪಾಲಕನೇ ಕಾರಣವೆಂದು ನಿಚ್ಚಳವಾಗಿ ತಿಳಿದಾಗ ಈ ಸಾವುಗಳಿಗೆ ಸೇಡು ತೀರಿಸಿಕೊಳ್ಳಬೇಕೆಂದು ಅವಳಿಗೆ ಎನಿಸುತ್ತದೆ. ಇದು ನಡೆಯಬೇಕೆಂದರೆ ತನ್ನ ಪತಿ ಮತ್ತೆ ರಾಜ್ಯವನ್ನು ಪಡೆಯಬೇಕು. ಇದಕ್ಕಾಗಿ ಮಗಧದಂಥ ಪ್ರಬಲ ಸಾಮ್ರಾಜ್ಯದ ನೆರವು ಬೇಕು. ಇದು ಸಾಧ್ಯವಾಗಲು ಉದಯನ ಮತ್ತು ಪದ್ಮಾವತಿಯರ ವಿವಾಹ ಅನಿವಾರ್ಯ. ಹೀಗಾಗಿ ಮಹಾಮಾತ್ಯನ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುತ್ತಾಳೆ. ತಾವಿಬ್ಬರೂ ಬೆಂಕಿಯಲ್ಲಿ ಸುಟ್ಟುಹೋದರೆಂಬ ಸುದ್ದಿ ಕಾಳ್ಕಿಚ್ಚಿನಂತೆ ಹರಡುವ ಹಾಗೆ ಯೌಗಂಧರಾಯಣ ವ್ಯವಸ್ಥೆ ಮಾಡಿ ಯಾರಿಗೂ ಸಂದೇಹ ಬಾರದಂತೆ ವೇಷ ಮರೆಸಿಕೊಳ್ಳುತ್ತಾನೆ. ವಾಸವದತ್ತೆ ಆವಂತಿಕೆ ಎಂಬ ಸಾಮಾನ್ಯ ಹೆಣ್ಣಿನ ವೇಷ ಧರಿಸಿದರೆ ಆಕೆಯ ಅಣ್ಣನಾದ ಬ್ರಾಹ್ಮಣನೊಬ್ಬನ ವೇಷವನ್ನು ಮಹಾಮಾತ್ಯ ತಳೆಯುತ್ತಾನೆ. ಅವರು ಮಗಧಕ್ಕೆ ಹೊರಟ ಹಾದಿಯಲ್ಲಿಯೇ ಪದ್ಮಾವತಿಯ ಭೇಟಿಯಾಗುತ್ತದೆ. ಅವಳಲ್ಲಿ ಆವಂತಿಕೆಯನ್ನು ಕ್ಷೇಮವಾಗಿರುವಂತೆ ಒಪ್ಪಿಸಿದ ಮಹಾಮಾತ್ಯ ತನ್ನ ಕಾರ್ಯಸಿದ್ಧಿಗೆ ಹೊರಡುತ್ತಾನೆ. ಈ ಕಥಾಭಾಗವೂ ಸಹಜಸುಂದರವಾಗಿ ಮೂಡಿಬಂದಿದೆ.
ಉದಯನ-ಪದ್ಮಾವತಿಯರ ವಿವಾಹದ ವರಣಮಾಲೆಯನ್ನು ಆವಂತಿಕೆಯೇ ಕಟ್ಟಿಕೊಡಬೇಕಾದ ವಿಕಟ ಪರಿಸ್ಥಿತಿ ಬರುತ್ತದೆ. ಈ ಮಾಲೆಯಲ್ಲಿ ಮಂತ್ರದ ಪತ್ರೆ-ಮೂಲಿಕೆಗಳನ್ನು ಸೇರಿಸಿ ಕಟ್ಟುವ ರೂಢಿ ಮಗಧದಲ್ಲಿರುತ್ತದೆ. “ಇದು ಅವಿಧವಾಕರಣ ಅಂತ ತುಂಬ ಮುಖ್ಯವಾದ ಮೂಲಿಕೆ. ಇದನ್ನ ಮಹಾರಾಣಿ ತಾವೇ ಹುಡುಕಿಸಿ ತರಿಸಿದ್ರು” ಎನ್ನುತ್ತಾಳೆ ಸೇವಕಿ. “ಇಲ್ನೋಡು, ಈ ಪತ್ರೆ ಹೆಸರು ಸೌಭಾಗ್ಯಕರಣ ಅಂತ. ಇದು ಮದುವಣಗಿತ್ತಿಗೆ ಜನ್ಮವಿಡೀ ಸಮೃದ್ಧವಾಗಿ ಸಿರಿ-ಸಂಪತ್ತಿ ಕೊಡುತ್ತೆ ... ಅಯ್ಯೋ, ಇದೇನು, ಸಂತಾನಕರಣ ಅನ್ನೋ ಮೂಲಿಕೆಯನ್ನೇ ಮರೆತ ಹಾಗಿದ್ಯಲ್ಲ! ... ಇಲ್ಲ ... ಸದ್ಯ! ತಂದಿದ್ದಾರೆ.” ಆವಂತಿಕೆ ಎಲ್ಲ ಪತ್ರೆ-ಮೂಲಿಕೆಗಳನ್ನೂ ಸೇರಿಸಿ ಮಾಲೆ ಕಟ್ಟಿದಳಾದರೂ ಅವಿಧವಾಕರಣವನ್ನು ಮಾತ್ರ ಹೆಚ್ಚು ಹೆಚ್ಚಾಗಿ ಬಳಸಿದಳಂತೆ! ಹೆಣ್ಣಿನ ಮನಸ್ಸು ತನಗೆ ಸವತಿ ಬಂದರೂ ಪರವಾಗಿಲ್ಲ, ಪತಿ ದೀರ್ಘಾಯುವಾಗಿರಲಿ ಎಂಬ ಉದಾತ್ತ ಭಾವವನ್ನು ತಳೆಯುತ್ತದೆ. ಯಾವುದೇ ಕಾಲಘಟ್ಟದಲ್ಲಿ ನಿಜವಾಗಿಯೂ ಪ್ರೀತಿಸಿದ ಹೆಣ್ಣಿನ ಭಾವನೆ ಇದು. ಆವಂತಿಕೆ ಒಂದು ಪತ್ರೆಯನ್ನು ಮರೆಯುತ್ತಾಳೆ; ಅಥವಾ ಮರೆತಂತೆ ನಟಿಸುತ್ತಾಳೆ. ಅದರ ಹೆಸರು ಸಪತ್ನೀಮದಮರ್ದನವಂತೆ! ಇದು ಉಳಿದೇಹೋಯಿತೆಂದು ಚೇಟಿ ಉದ್ಗರಿಸಿದಾಗ ಒಡನೆಯೇ ಸಾವರಿಸಿಕೊಂಡ ಆವಂತಿಕೆ ಉತ್ತರಿಸುತ್ತಾಳೆ: “ಚಿಂತೆಯಿಲ್ಲ, ಅದನ್ನೇನೂ ಸೇರಿಸಿ ಕಟ್ಟಬೇಕಿಲ್ಲ ... ಹೇಗೂ ಇದ್ದೊಬ್ಬ ಸವತಿ ಸತ್ತೇ ಹೋಗಿದ್ದಾಳೆ. ಇನ್ನು ಮತ್ತೊಬ್ಬಳನ್ನ ಕಟ್ಟಿಕೊಳ್ಳೋದಿಕ್ಕೆ ನಮ್ಮ ದೊರೆಗಳಂತೂ ಅವಕಾಶ ಕೊಡೋದಿಲ್ಲ” (ಪು. ೪೭೦-೭೧). ಇಷ್ಟು ಮಾತನಾಡುವಷ್ಟರಲ್ಲಿ ಅವಳ ಕರುಳೇ ಬಾಯಿಗೆ ಬಂದಂತಾಗಿತ್ತಂತೆ. ಭಾಸ ಮಹಾಕವಿಯ ಕೃತಿಯಲ್ಲಿ ಬರುವ ಈ ಹೃದಯಸ್ಪರ್ಶಿ ಸನ್ನಿವೇಶವನ್ನು ಲೇಖಕರು ಚೆನ್ನಾಗಿ ಬಳಸಿಕೊಂಡಿದ್ದರೆ.
ಮದುವೆಯ ಬಳಿಕ ನಡೆಯುವ ಪ್ರಸಿದ್ಧ ‘ಸ್ವಪ್ನ’ದ ಸನ್ನಿವೇಶವೂ ಇದೇ ಅಧ್ಯಾಯದಲ್ಲಿ ನಿರೂಪಿತವಾಗಿದೆ. ಅದಕ್ಕೆ ಮುನ್ನ ಉದ್ಯಾನದಲ್ಲಿ ಪದ್ಮಾವತಿ ಮತ್ತು ಆವಂತಿಕೆಯರ ಆತ್ಮೀಯ ಮಾತುಕತೆ, ಆವಂತಿಕೆ ಹೃದಯಪೂರ್ವಕವಾಗಿ ಪದ್ಮಾವತಿಯನ್ನು ತನ್ನ ತಂಗಿ ಎಂದು ಒಪ್ಪಿಕೊಳ್ಳುವುದು, ವಾಸವದತ್ತೆ ಸತ್ತು ಬೂದಿಯಾದಳೆಂದು ಭಾವಿಸಿದ ಉದಯನ ಅವಳಲ್ಲಿ ಇನ್ನೂ ಗಾಢವಾದ ಪ್ರೀತಿ ಹೊಂದಿರುವುದು, ಉದಯನ-ವಸಂತಕರ ಮಾತುಗಳನ್ನು ಅಕ್ಕ-ತಂಗಿಯರಿಬ್ಬರೂ ಮರೆಯಲ್ಲಿ ನಿಂತು ಕೇಳುವುದು ಮುಂತಾದ ಘಟನೆಗಳು ಇಲ್ಲಿ ಬಂದಿವೆ. ಇವುಗಳಿಗೂ ಭಾಸನ ಪ್ರತಿಭೆಯೇ ಆಧಾರ. ಆವಂತಿಕೆಗೆ ಆಂದೋಳನ ಹೆಚ್ಚು, ಪದ್ಮಾವತಿಗೆ ಉತ್ಕಂಠತೆ ಹೆಚ್ಚು ಎನ್ನುವಂಥ ವಿವರಗಳು ಓದುಗರನ್ನು ಅವರೆಲ್ಲ ಇರುವ ಉದ್ಯಾನಕ್ಕೇ ಕರೆದೊಯ್ಯುತ್ತವೆ. ಪದ್ಮಾವತಿ ಹೇಳುವ “ಅವರಿಗೆ ಅಕ್ಕನ ನೆನಪು ಕಾಡ್ತಾ ಇರಬೇಕು” ಎಂಬ ಮಾತು ಆವಂತಿಕೆಗೆ ಹೊಸ ಹುರುಪು ನೀಡುತ್ತದೆ. ಅವಳಲ್ಲಿ “ಸಾಂತ್ವನದ ವೀಣಾವಾದನ” ವಿಜೃಂಭಿಸುತ್ತಿದ್ದಂತೆಯೇ ಲೇಖಕರ ಮಾತುಗಳು ದಾಂಪತ್ಯಸಿದ್ಧಿಯ ರಹಸ್ಯವನ್ನು ತೆರೆದಿಡುತ್ತವೆ:
ವತ್ಸರಾಜನ ಜೊತೆಯಲ್ಲಿ ಬಾಳನ್ನೇ ಹಂಚಿಕೊಳ್ಳಬಲ್ಲವಳಿಗೂ ಘೋಷವತಿಯನ್ನು ಹಂಚಿಕೊಳ್ಳಲು ಸಾಧ್ಯವಾಗಿಲ್ಲವೆಂಬ ವಾಸ್ತವದ ಅರಿವು ಅವಳ ಪಾಲಿಗೆ ಹೆಚ್ಚಿನ ಅರ್ಥವಂತಿಕೆಯನ್ನು ತಂದಿತ್ತು. ಭವವನ್ನು ಹಂಚಿಕೊಳ್ಳುವಷ್ಟು ಸುಲಭವಾಗಿ ಭಾವವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ; ಭಾವವನ್ನು ಬೇಕಾದರೂ ಹಂಚಿಕೊಳ್ಳಬಹುದು, ರಸವನ್ನು ಮಾತ್ರ ಹಂಚಿಕೊಂಡು ಸೃಜಿಸಲು ಸಾಧ್ಯವಿಲ್ಲ. ತನ್ನ ಮತ್ತು ಉದಯನನ ದಾಂಪತ್ಯ ರಸಸಿದ್ಧಿಯ ಮಟ್ಟದ್ದು. ಇದಕ್ಕೆ ಹೋಲಿಕೆ ಇಲ್ಲ; (ಪು. ೪೭೫)
To be continued.