ಕನ್ನಡದಲ್ಲಿ ಸೀಸಪದ್ಯ ಎಂಬ ಛಂದಃಪ್ರಕಾರ ಬೆಳೆದುಬಂದ ಬಗೆಯನ್ನು ಈಗಾಗಲೇ ವಿದ್ವಾಂಸರು ವ್ಯಾಪಕವಾಗಿ ಚರ್ಚಿಸಿದ್ದಾರೆ.[1] ಇದೇ ರೀತಿ ಕನ್ನಡಕ್ಕೆ ಸಾನೆಟ್ ಬಂದ ಬಗೆಯನ್ನೂ ವಿಪುಲವಾಗಿ ವಿಶ್ಲೇಷಿಸಿದ್ದಾರೆ.[2] ಇವುಗಳ ಪುನರಾಲೋಕನ ಅನವಶ್ಯ ಮಾತ್ರವಲ್ಲ, ಸದ್ಯದ ವಿವೇಚನೆಗೆ ಬಹಿರ್ಭೂತವೂ ಹೌದು. ಹೀಗಾಗಿ ಈ ಎರಡು ಛಂದೋಬಂಧಗಳ ಪದ್ಯಶಿಲ್ಪದ ಸಂತುಲನ ಮಾತ್ರವೇ ಸದ್ಯದ ಬರೆಹದ ಉದ್ದೇಶ. ಈ ಕಾರಣದಿಂದಲೇ ಇಲ್ಲಿ ಛಂದಸ್ಸೌಂದರ್ಯದ ಮೀಮಾಂಸೆ ಮುನ್ನೆಲೆಗೆ ಬಂದಿದೆ.
ಸೀಸಪದ್ಯ ಕನ್ನಡ ಮತ್ತು ತೆಲುಗು ಸಾಹಿತ್ಯಗಳೆರಡಕ್ಕೂ ಸಂಬಂಧಿಸಿದೆಯಾದರೂ ಅದು ತೆಲುಗಿನಲ್ಲಿ ಕಂಡ ವ್ಯಾಪ್ತಿ ಹಿರಿದು. ಅಲ್ಲಿಯ ಅದರ ಇತಿಹಾಸವೂ ಸುದೀರ್ಘ. ಸೀಸಪದ್ಯವು ಕನ್ನಡಕ್ಕೆ ಸಹಜವಾದ ಗತಿಯನ್ನು ಹೊಂದಿದ್ದರೂ ಈ ನೆಲದಲ್ಲಿದು ಹೆಚ್ಚಾಗಿ ನೆಲೆಯೂರದಿದ್ದುದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ವಿದ್ವಾಂಸರೂ ಈ ಬಗೆಗೆ ಹೆಚ್ಚಿನ ಬೆಳಕನ್ನು ಬೀರಿಲ್ಲ. ಇದಕ್ಕೆ ಸೀಸಪದ್ಯದ ರಾಚನಿಕ ರೀತಿಯೇ ಕಾರಣವೆಂದು ಭಾವಿಸಿದರೆ ತಪ್ಪಾಗದು. ಅದನ್ನಿಷ್ಟು ಪರಿಶೀಲಿಸೋಣ.
ಸೀಸದ ಇತಿಹಾಸ ಮತ್ತು ಸ್ವರೂಪಗಳು
ಎಲ್ಲರೂ ಬಲ್ಲಂತೆ ಸೀಸಪದ್ಯವು ಕರ್ಷಣಜಾತಿಯ ವರ್ಗಕ್ಕೆ ಸೇರುವಂಥದ್ದು. ಅದು ಕ್ರಮೇಣ ಮಾತ್ರಾಜಾತಿಯ ವಲಯಕ್ಕೆ ಸೇರಿತು - ಅಂದರೆ ಈ ಬಂಧದಲ್ಲಿ ಪ್ರಧಾನವಾದ ವಿಷ್ಣುಗಣಗಳು ಐದು ಮಾತ್ರೆಗಳ ಗಣಗಳಾಗಿಯೂ ಗೌಣವಾದ ಬ್ರಹ್ಮಗಣಗಳು ಮೂರು ಮಾತ್ರೆಗಳ ಗಣಗಳಾಗಿಯೂ ರೂಪಾಂತರ ಹೊಂದಿದವು. ಹಲವೊಮ್ಮೆ ಪ್ರತಿಪಾದದ ಕೊನೆಗೆ ಬರುವ ಎರಡು ಬ್ರಹ್ಮಗಣಗಳು ಒಂದು ವಿಷ್ಣುಗಣ ಮತ್ತೊಂದು ಗುರು ಎಂಬ ವಿನ್ಯಾಸವನ್ನು ತಾಳುವುದೂ ಉಂಟು. ಹೀಗೆ ಸೀಸಪದ್ಯವು ಪಂಚಮಾತ್ರಾಮಾನದ ಎರಡು ಚತುಷ್ಪದಿಗಳಾಗಿ, ಅಥವಾ ಪ್ರಾಸರಹಿತವಾದ ಎರಡು ಕುಸುಮಷಟ್ಪದಿಗಳಾಗಿ ಮೈದಾಳುವ ಸಂಭವ ಹೆಚ್ಚಾಗಿದೆ. ಇನ್ನುಳಿದಂತೆ ಸೀಸಪದ್ಯದ ಕಡೆಗೆ ಅಂಟಿಬರುವ ಎತ್ತುಗೀತಿ ಎಂಬ ಹೆಸರಿನ ಆಟವೆಲದಿ ಅಥವಾ ತೇಟಗೀತಿಯ ಪದ್ಯಗಳು ಕನ್ನಡದ ಮಟ್ಟಿಗೆ ವಿರಳವೇ ಆಗಿವೆ. ಎಷ್ಟೋ ಬಾರಿ ಇವು ತಮ್ಮ ಮೂಲದ ತ್ರಿಮೂರ್ತಿಗಣರೂಪವನ್ನು ಕಳೆದುಕೊಂಡು ಅಪ್ಪಟ ಮಾತ್ರಾಜಾತಿಗಳಾಗಿ ಪರಿಣಮಿಸಿ, ಆಟವೆಲದಿ ಅಥವಾ ತೇಟಗೀತಿಗಳ ಗಣವಿನ್ಯಾಸಕ್ಕೆ ಹೊರತಾಗಿ ಕೇವಲ ಐದು ಮಾತ್ರೆಗಳ ಚೌಪದಿಗಳಾಗಿ ರೂಪುಗೊಳ್ಳುತ್ತವೆ. ಹೀಗೆ ಸೀಸಪದ್ಯವು ಬಲುಮಟ್ಟಿಗೆ ಏಕರೂಪತೆಯನ್ನುಳ್ಳ ಮೂರು ಚೌಪದಿಗಳ ಸಮಷ್ಟಿಯಂತೆ ಕಾಣುವುದುಂಟು. ಇಂಥ ಬಂಧ ಸಹಜವಾಗಿ ಅಖಂಡವೆನಿಸದ ಕಾರಣ ತನ್ನದಾದ ಆಕೃತಿಯಲ್ಲಿ ಉಳಿಯದೆ ಚೌಪದಿಗಳ ರೂಪದಿಂದಲೋ ಕುಸುಮಷಟ್ಪದಿಗಳ ರೂಪದಿಂದಲೋ ಉಳಿಯುತ್ತದೆ. ಚಿಕ್ಕದಾದ ಕುಸುಮಷಟ್ಪದಿಯಲ್ಲಿ ಮತ್ತೆ ಮತ್ತೆ ಬರಬೇಕಾದ ಆರು ಪ್ರಾಸಗಳ ನಿರ್ವಾಹ ಸಾಕಷ್ಟು ಕ್ಲೇಶವೀಯುವ ಕಾರಣ ಚೌಪದಿಯೇ ಇದಕ್ಕಿಂತ ಸುಕರವಾಗಿ ತೋರಿದರೆ ಅಚ್ಚರಿಯಿಲ್ಲ. ಅಲ್ಲದೆ ತೆಲುಗಿನ ಸೀಸಪದ್ಯದಂತೆ ಕನ್ನಡದ ಸೀಸವು ಪ್ರಾಸರಹಿತವಾದ ಬಂಧವಲ್ಲದ ಕಾರಣ ಎಂಟು ಸಾಲುಗಳಲ್ಲಿಯೂ ಪ್ರಾಸವನ್ನು ಪಾಲಿಸಿಕೊಂಡು ಈ ಬಂಧವನ್ನು ನಿರ್ವಹಿಸುವುದರಲ್ಲಿ ಹೆಚ್ಚಿನ ಲಾಭ-ಸೌಲಭ್ಯಗಳಿಲ್ಲ. ಆದುದರಿಂದ ಸೀಸಕ್ಕೆ ಪ್ರಾಶಸ್ತ್ಯ ಸಲ್ಲದಿದ್ದಲ್ಲಿ ಅಚ್ಚರಿಯೇನಿಲ್ಲ. ಜೊತೆಗೆ ಪ್ರಾಸದ ಭಾರವನ್ನೂ ಹೊತ್ತು ಈ ಬಂಧವನ್ನು ಸಮರ್ಥವಾಗಿ ಬಳಸುವ ಅನಿವಾರ್ಯ ಸಂದರ್ಭಗಳು ಸಾಹಿತ್ಯದಲ್ಲಿ ಒಡಮೂಡಬೇಕಷ್ಟೆ! ದಿಟವೇ, ಪ್ರತಿಭಾಶಾಲಿಗೆ ಯಾವ ಸಂದರ್ಭವನ್ನೂ ವಿಶಿಷ್ಟವಾಗಿ ಬಳಸಿಕೊಳ್ಳುವ ಬಲ್ಮೆ ಇರುತ್ತದೆ. ಇದು ತಾತ್ತ್ವಿಕವಾಗಿ ಮಾತ್ರ ಸತ್ಯವಲ್ಲದೆ ಸರ್ವತ್ರ ಸರ್ವದಾ ಸಲ್ಲುವ ವ್ಯಾವಹಾರಿಕ ತಥ್ಯವಲ್ಲ.
ಕನ್ನಡದಲ್ಲಿ ಸೀಸಪದ್ಯದ ಮಾದರಿಗಳು ಕಾಣಿಸಿಕೊಳ್ಳುವುದು ನಡುಗನ್ನಡದ ಸಾಹಿತ್ಯದಲ್ಲಿ. ಇದಕ್ಕೂ ಮುನ್ನವೇ ಸೀಸಪದ್ಯ ಇದ್ದಿರಬಹುದಾದರೂ ಅದರ ರಚನೆಯ ಸ್ವರೂಪ ಹಳಗನ್ನಡಕ್ಕಿಂತ ನಡುಗನ್ನಡಕ್ಕೇ ಹತ್ತಿರವೆಂಬುದು ನಿಸ್ಸಂಶಯ. ಏಕೆಂದರೆ ಪಂಚಮಾತ್ರೆಗಳ ಭಾಷಿಕ ಲಯವು ಹಳಗನ್ನಡಕ್ಕಿಂತ ನಡುಗನ್ನಡಕ್ಕೇ ಹೆಚ್ಚು ಹತ್ತಿರ. ಹಳಗನ್ನಡ ಚತುರ್ಮಾತ್ರಾಗತಿಗೆ ನಿಕಟ. ಹೀಗಾಗಿಯೇ ಅಲ್ಲಿ ಕಂದಪದ್ಯಗಳ ಪಾರಮ್ಯ ತೋರುತ್ತದೆ. ಅಲ್ಲದೆ ಎತ್ತುಗೀತಿಯಿಲ್ಲದ ಸೀಸಪದ್ಯದ ಪೂರ್ವರೂಪವೆನ್ನಬಹುದಾದ ಪಿರಿಯಕ್ಕರ ಕರ್ಷಣಜಾತಿಗೆ ಸೇರುವ ಬಂಧಗಳ ಪೈಕಿ ಪ್ರಮುಖವಾದುದು; ಮತ್ತಿದು ಹಳಗನ್ನಡದಲ್ಲಿ ಪ್ರತಿಷ್ಠಿತವಾಗಿಯೂ ಇದ್ದಿತು. ಇದರ ಪ್ರತಿ ಪಾದದ ಆದಿಯಲ್ಲಿರುವ ಬ್ರಹ್ಮಗಣಕ್ಕೆ ಬದಲಾಗಿ ವಿಷ್ಣುಗಣವು ಬಂದದ್ದೇ ಆದಲ್ಲಿ ಇದು ಎತ್ತುಗೀತಿಯಿಲ್ಲದ ಸೀಸವೇ ಆಗುವುದು. ಮಿಕ್ಕ ಅಕ್ಕರಗಳಿಗೆ ಹೋಲಿಸಿದರೆ ಪಿರಿಯಕ್ಕರವು ಹಳಗನ್ನಡದ ಕಾವ್ಯಗಳಲ್ಲಿ ಹೆಚ್ಚಾಗಿ ಬಳಕೆಗೊಂಡಿದ್ದರೂ ಕಂದ-ವೃತ್ತಗಳಿಗೆ ಹೋಲಿಸಿದರೆ ಅದರ ಸಂಖ್ಯೆ ಕಡಮೆಯೇ. ಹೀಗೆ ಎತ್ತುಗೀತಿಯಿಲ್ಲದ ಸೀಸವನ್ನು ಹೋಲುವಂಥ ಬಂಧವು ಪಿರಿಯಕ್ಕರದ ರೂಪದಿಂದ ಇದ್ದಾಗಲೂ ಅದಕ್ಕೆ ಹೆಚ್ಚಿನ ಪ್ರಾಚುರ್ಯ-ಪ್ರಾಮುಖ್ಯಗಳು ತೋರದಿದ್ದಾಗ ಹಳಗನ್ನಡದಲ್ಲಿ ಸೀಸಪದ್ಯದ ಅಸ್ತಿತ್ವ ಮತ್ತು ಅನಿವಾರ್ಯತೆಗಳನ್ನು ಊಹಿಸುವುದಾದರೂ ಹೇಗೆ?[3]
ನಡುಗನ್ನಡದ ಹಾಡುಗಬ್ಬಗಳಲ್ಲಿ, ಯಕ್ಷಗಾನಪ್ರಬಂಧಗಳಲ್ಲಿ, ಅನಂತರಕಾಲದ ಕಂಪೆನಿ ನಾಟಕಗಳ ಪದ್ಯಬಂಧಗಳಲ್ಲಿ ಮಾತ್ರಾಸೀಸವು ಆಗೀಗ ತಲೆದೋರಿದ್ದರೂ ಈ ಮುನ್ನ ಹೇಳಿದ ಚೌಪದಿ ಮತ್ತು ಷಟ್ಪದಿಗಳ ಕಾರಣ ಅದಕ್ಕೆ ಪ್ರಾಚುರ್ಯ ಒದಗಲಿಲ್ಲ. ಕನ್ನಡ ಮತ್ತು ತೆಲುಗು ನುಡಿಗಳ ಛಂದಃಪ್ರಭೇದಗಳ ಪೈಕಿ ಕಂದ, ವೃತ್ತ, ಅಕ್ಕರ ಮತ್ತು ರಗಳೆಗಳ ಏಕರೂಪತೆ ಎದ್ದುತೋರುವುದಾದರೂ ಷಟ್ಪದಿಗಳಂಥ ಬಂಧಗಳು ತೆಲುಗಿನಲ್ಲಿ ಕಾಣಸಿಗುವುದಿಲ್ಲ. ಈ ಮುನ್ನವೇ ಕಂಡಂತೆ ಕುಸುಮಷಟ್ಪದಿಯು ತನ್ನ ಅಲ್ಪಗಾತ್ರಕ್ಕೆ ಭಾರವೆನಿಸುವ ಆರು ಪ್ರಾಸಗಳ ನಿರ್ವಾಹಕ್ಲೇಶದ ಕಾರಣ ಕಥನಕ್ಕೆ ಒದಗಿಬರದಿದ್ದರೂ ಅದೇ ಪಂಚಮಾತ್ರೆಗಳ ಗತಿಯಲ್ಲಿರುವ ವಾರ್ಧಕಷಟ್ಪದಿ ತುಂಬ ಜನಪ್ರಿಯವಾಯಿತು. ಇದು ಎತ್ತುಗೀತಿಯಿಲ್ಲದ ಸೀಸಪದ್ಯದ ಗಾತ್ರವನ್ನು ಬಲುಮಟ್ಟಿಗೆ ಹೋಲುತ್ತದೆ. ಹೀಗೆ ಷಟ್ಪದಿಗಳ ಆವಿಷ್ಕಾರ ಕನ್ನಡದ ಮಟ್ಟಿಗೆ ಸೀಸಪದ್ಯದಂಥ ವಿಸ್ತೃತ ಬಂಧದ ಅನಿವಾರ್ಯತೆಯನ್ನು ಮೀರುವಂತೆ ಮಾಡಿತು. ಈ ತೆರನಾದ ಸೌಕರ್ಯವಿಲ್ಲದ ತೆಲುಗು ಸೀಸಪದ್ಯವನ್ನೇ ಉಳಿಸಿ ಬೆಳಸಿಕೊಂಡಿತು.
ಹೊಸಗನ್ನಡದಲ್ಲಿ ಸಾನೆಟ್
ವಸ್ತುಸ್ಥಿತಿ ಹೀಗಿದ್ದಲ್ಲಿ ಸೀಸಪದ್ಯವು ಹೊಸಗನ್ನಡದಲ್ಲಿ ಮತ್ತೇಕೆ ತೆಲೆಯೆತ್ತಿತೆಂಬ ಪ್ರಶ್ನೆ ಬಾರದಿರದು. ಆ ವೇಳೆಗೆ ಪಾಶ್ಚಾತ್ತ್ಯ ಸಾಹಿತ್ಯದ ಸಾನೆಟ್ ನಮ್ಮ ಕವಿಗಳಿಗೆ ಪರಿಚಿತವಾದ ಕಾರಣ ಇದಕ್ಕೆ ಸಂವಾದಿಯಾಗಬಲ್ಲ ನಮ್ಮದೇ ನೆಲದ ಬಂಧವಾಗಿ ಸೀಸ ಒದಗಿಬಂದಿತು. ಸಾನೆಟ್ಟಿನ ಎರಡು ಪ್ರಕಾರಗಳಲ್ಲಿ ಒಂದಾದ ಪೆಟ್ರಾರ್ಕನ್ ಮಾದರಿಯು ಮೊದಲ ಎಂಟು ಸಾಲುಗಳ ಬಳಿಕ ತಿರುವನ್ನು ಹೊಂದಿ ಕಡೆಯ ಆರು ಸಾಲುಗಳಲ್ಲಿ ಹೊಸತಾದ ಭಾವಸಂದರ್ಭವನ್ನು ಹೇಗೆ ಹರಳುಗಟ್ಟಿಸುವುದೋ ಹಾಗೆಯೇ ಸೀಸಪದ್ಯವು ತನ್ನ ಮುಖ್ಯಾಂಗದಲ್ಲಿ ಭಾವವೊಂದನ್ನು ರೂಪಿಸಿ ಕಡೆಯ ಎತ್ತುಗೀತಿಯಲ್ಲಿ ಅದಕ್ಕೊಂದು ತಿರುವನ್ನು ನೀಡುತ್ತದೆ. ಈ ಅಂಶವನ್ನು ಕನ್ನಡದ ನವೋದಯಲೇಖಕರು ಗುರುತಿಸಿಕೊಂಡು ತದನುಸಾರವಾಗಿ ಸೀಸಪದ್ಯದಲ್ಲಿ ಸಾನೆಟ್ಟಿಗೆ ಸಂವಾದಿಯನ್ನು ಕಂಡುಕೊಂಡರು. ಈ ಸಾಲಿನಲ್ಲಿ ಡಿ.ವಿ.ಜಿ., ಕುವೆಂಪು, ಬೇಂದ್ರೆ, ಪುತಿನ ಮೊದಲಾದವರಿದ್ದಾರೆ. ಡಿ.ವಿ.ಜಿ. ಅವರು ಸಾನೆಟ್ ಮಾಡಬಲ್ಲ ಎಲ್ಲ ಬಗೆಯ ಕೆಲಸಗಳನ್ನೂ ಸೀಸಪದ್ಯದ ಮೂಲಕವೇ ಸಾಧಿಸಿದರಲ್ಲದೆ ಮಿಕ್ಕವರಂತೆ ಹದಿನಾಲ್ಕು ಸಾಲಿನ ಬಂಧವಾದ ಸಾನೆಟ್ಟನ್ನು ಬಳಸಿಕೊಳ್ಳಲೇ ಇಲ್ಲ. ಕುವೆಂಪು, ಬೇಂದ್ರೆ, ಪುತಿನ ಮುಂತಾದವರು ಎರಡೂ ಬಂಧಗಳನ್ನು ಏಕೋದ್ದೇಶಕ್ಕಾಗಿ ಬಳಸಿಕೊಂಡ ಹಲವು ಉದಾಹರಣೆಗಳಿವೆ.
ಪೆಟ್ರಾರ್ಕನ್ ಮಾದರಿಗಿಂತ ಭಿನ್ನವಾದ ಸ್ಪೆನ್ಸೋರಿಯನ್ ಮಾದರಿಯ ಸಾನೆಟ್ ಶೇಕ್ಸ್ಪಿಯರನ ಮೂಲಕ ಹೆಚ್ಚಿನ ವ್ಯಾಪ್ತಿಯನ್ನು ಗಳಿಸಿ ಪ್ರಸಿದ್ಧಿ ಪಡೆಯಿತು. ಆದರೆ ನಮ್ಮ ನವೋದಯದ ಲೇಖಕರಿಗೆ ಇದಕ್ಕಿಂತ ಪೆಟ್ರಾರ್ಕನ್ ಮಾದರಿಯೇ ಹೆಚ್ಚಾಗಿ ಮೆಚ್ಚಾದುದು ಅಚ್ಚರಿಯ ಸಂಗತಿಯಲ್ಲ. ಕಡೆಯ ಎರಡು ಸಾಲುಗಳಲ್ಲಿ ಹರಳುಗಟ್ಟುವ ಭಾವವನ್ನುಳ್ಳ ಸ್ಪೆನ್ಸೋರಿಯನ್ ಮಾದರಿ ಹರಿದಾಸರ ಕೀರ್ತನೆಗಳ ಪ್ರತೀಪವಾಗಿ ತೋರುತ್ತದೆ. ಮೊದಲ ಎರಡು ಸಾಲುಗಳ ಪಲ್ಲವಿಯ ಬಳಿಕ ನಾಲ್ಕು-ನಾಲ್ಕು ಸಾಲುಗಳ ಮೂರು ಚರಣಗಳುಳ್ಳ ಕೀರ್ತನೆಗಳ ಸಾಮಾನ್ಯ ಸ್ವರೂಪವು ಪಲ್ಲವಿಯಲ್ಲಿ ಒಂದು ಭಾವವನ್ನು ಘನೀಕರಿಸಿ ಅದರ ವಿಸ್ತರಣವನ್ನು ಚರಣಗಳಲ್ಲಿ ಮೂಡಿಸುತ್ತದೆ. ಇದಕ್ಕೆ ವಿಲೋಮವಾಗಿ ಸಾಗುವ ಸ್ಪೆನ್ಸೋರಿಯನ್ ಮಾದರಿ ನಮ್ಮವರಿಗೆ ಹೆಚ್ಚಿನ ಹೊಸತನವನ್ನು ಕೊಡಲಿಲ್ಲವೇನೋ.
ಪುತಿನ ಅವರು ನಮ್ಮ ಹರಿದಾಸರ ಕೀರ್ತನೆಗಳ ವಿಲೋಮರೂಪದಂತೆ ಕಾಣುವ ಸಾನೆಟ್‌ಗಳನ್ನು ರಚಿಸಿದರಲ್ಲದೆ ಈ ಪಾಶ್ಚಾತ್ತ್ಯ ಬಂಧದ ಪ್ರಮುಖ ಲಕ್ಷಣವೆನಿಸಿದ ಅಂತ್ಯಪ್ರಾಸವನ್ನು ತೊರೆದು ಕನ್ನಡ ಚಿರಕಾಲದಿಂದ ಅನುಸರಿಸಿದ ಆದಿಪ್ರಾಸವನ್ನು ಅಳವಡಿಸಿಕೊಂಡರು. ಗೋವಿಂದ ಪೈ ಅವರು ಸ್ಪೆನ್ಸೋರಿಯನ್ ಮಾದರಿಯನ್ನೇ ಹೆಚ್ಚಾಗಿ ಅನುಸರಿಸಿದರು. ಆದರೂ ಈ ಜಾಡನ್ನು ಹಿಡಿದವರ ಸಂಖ್ಯೆ ಕಡಮೆ. ಅಂತೂ ಪೆಟ್ರಾರ್ಕನ್ ಮಾದರಿ ಬುದ್ಧಿಗೆ ಹೊಸತಾಗಿ, ಭಾವಕ್ಕೆ ಹತ್ತಿರವಾಗಿ ಕಂಡಿತು. ಹೀಗಾಗಿ ಇದಕ್ಕೆ ಸಂವಾದಿಯಾದ ಸೀಸ ಕೂಡ ನಮ್ಮವರಿಗೆ ಒದಗಿಬಂದಿತು.
[1] ಕನ್ನಡ ಛಂದಃಸ್ವರೂಪ, ಪು. ೩೬೦-೬೮; ಕನ್ನಡ ಛಂದಸ್ಸಿನ ಚರಿತ್ರೆ, ಮೊದಲನೆಯ ಸಂಪುಟ, ಪು. ೬೩೫-೪೬; ಸೇಡಿಯಾಪು ಛಂದಃಸಂಪುಟ, ಪು. ೪೩೩-೪೪
[2] ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ, ಪು. ೧೯೧-೨೨೧; ಹೊಸಗನ್ನಡ ಕವಿತೆಯ ಛಂದಸ್ಸು, ಪು. ೪೧೭-೫೬; ಕನ್ನಡ ಛಂದಸ್ಸಿನ ಚರಿತ್ರೆ, ಎರಡನೆಯ ಸಂಪುಟ, ಪು. ೬೭೫-೫೨೧; ಕನ್ನಡ ಛಂದಃಸ್ವರೂಪ, ಪು. ೬೩೪-೪೬
[3] ಸೇಡಿಯಾಪು ಅವರು ಛಂದೋವತಂಸವೆಂಬ ತ್ರಿಮೂರ್ತಿಗಣೀಯ ಬಂಧವನ್ನು ವಿವೇಚಿಸುವಾಗ ಇದು ಪಿರಿಯಕ್ಕರಕ್ಕೆ ಪುಚ್ಛವಾಗಿ ಪರಿಣಮಿಸಿ ಬಳಿಕ ಇವೆರಡೂ ಒಟ್ಟಾಗಿ ಸೀಸ-ಎತ್ತುಗೀತಿಗಳೆನಿಸಿದವೆಂಬ ಊಹೆಯನ್ನು ಮಾಡಿದ್ದಾರೆ (ಸೇಡಿಯಾಪು ಛಂದಃಸಂಪುಟ, ಪು. ೪೪೪). ಆದರೆ ಇದನ್ನು ಪುಷ್ಟೀಕರಿಸುವಂಥ ಸಾಹಿತ್ಯರಚನೆಗಳು ಎಲ್ಲಿಯೂ ಉಳಿದು ಬಂದಿಲ್ಲದ ಕಾರಣ ಹೆಚ್ಚಿನ ಊಹಾಪೋಹಕ್ಕೆ ಎಡೆಯಿಲ್ಲ. ಮಾತ್ರವಲ್ಲ, ಈ ಬಗೆಯ ಸಾಧ್ಯತೆಯ ಸಂಭಾವ್ಯತೆ ಕೂಡ ನಮ್ಮೀ ವಿವೇಚನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
To be continued.