ನೋರಿ ನರಸಿಂಹಶಾಸ್ತ್ರಿಗಳ “ಕವಿಸಾರ್ವಭೌಮುಡು”: ಒಂದು ಪರಿಚಯ - 2

This article is part 2 of 3 in the series Kavisarvabhaumudu
KAVI SARVABHAUMUDU

“ಕವಿಸಾರ್ವಭೌಮುಡು” ಒಂದು ಚಿಕ್ಕ ಕಾದಂಬರಿ. ಇದರ ಕಾಲ ಹದಿನೈದನೆಯ ಶತಮಾನ. ಇಲ್ಲಿಯ ಕಥೆಯ ಘಟನಾವಧಿ ಸುಮಾರು ಆರು ತಿಂಗಳು (ಪುಷ್ಯಮಾಸದಿಂದ ಜ್ಯೇಷ್ಠಮಾಸದವರೆಗೆ). ನೋರಿಯವರ ಎಲ್ಲ ಕಾದಂಬರಿಗಳಲ್ಲಿಯೂ ಇತಿವೃತ್ತದ ಘಟನಾವಧಿ ಸೀಮಿತವಾಗಿರುತ್ತದೆ; ಆದರ ಈ ಕ್ಷಿಪ್ರಾವಧಿಯಲ್ಲಿಯೇ ಅನೇಕಘಟನೆಗಳು ನಡೆದುಹೋಗಿ ಕಥಾನಕವು ರೋಚಕವಾದ — ಆದರೆ ವಿಶ್ವಾಸಾರ್ಹವಾದ — ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇದು ಅವರ ಕಥನತಂತ್ರ ಮತ್ತು ಇತಿವೃತ್ತವಿನ್ಯಾಸಕೌಶಲಕ್ಕೆ ಸುಂದರಸಾಕ್ಷಿ. ಅಂತೆಯೇ,[1] ಈ ಅವಧಿಯೊಳಗೇ ಇತಿವೃತ್ತಕ್ಕೆ ಬೇಕಾದ ಹಿಂದಿನ-ಮುಂದಿನ ವಿಷಯವಿವರಣೆಯನ್ನೆಲ್ಲ ಪ್ರಸ್ತುತಾಖ್ಯಾನದಲ್ಲಿಯೇ ಅಂದವಾಗಿ ಅಡಕಗೊಳಿಸಿರುತ್ತಾರೆ.

ಪ್ರೌಢದೇವರಾಯನು ಅರಸನಾಗಿದ್ದ ಅವಧಿಯೂ ವಿಜಯನಗರಸಾಮ್ರಾಜ್ಯವೈಭವದ ಉಚ್ಛ್ರಾಯಕಾಲ[2]. ಈತನು ಮಹಾಯೋಧನೂ ರಾಜ್ಯತಂತ್ರವಿಚಕ್ಷಣನೂ ಕಲಾಪೋಷಕನೂ ಆಗಿದ್ದ. ಇವನ ಆಸ್ಥಾನದಲ್ಲಿ ಹಲವು ಭಾಷೆಗಳ ಕವಿಗಳಿದ್ದರು. ವಿದ್ಯಾರಣ್ಯರು ಮತ್ತು ಸಾಯಣಾಚಾರ್ಯರ ಕಾಲದಿಂದ ಮೊದಲುಗೊಂಡು ಅಖಿಲಭಾರತದ ಕವಿ-ಪಂಡಿತರಿಗೆ  ಪ್ರಧಾನಾಕರ್ಷಣೆಯಾದ ವಿಜಯನಗರಕ್ಕೆ ಎಲ್ಲ ದಿಕ್ಕುಗಳಿಂದ ಬಂದ ವಿದ್ವಾಂಸರ ಪೈಕಿ ವಂಗ ಅಥವಾ ಗೌಡದೇಶದವರೂ ಇದ್ದರು. ಇವರ ಪೈಕಿ ಶೋಣಾದ್ರಿನಾಥನೂ ಒಬ್ಬನು.

ಬುಕ್ಕರಾಯನು ಈತನಿಗೆ ಗೌರವಪೂರ್ವಕವಾಗಿ ನೀಡಿದ್ದ ಕಂಚಿನ ಢಕ್ಕೆಯೇ ಇವನ ಹಾಗೂ ಇವನ ಸಂತತಿಯ ವಿದ್ವಾಂಸರ ವಿದ್ವಲ್ಲಾಂಛನವಾಗಿತ್ತು. ಈ ವಂಶಜನಾದ ಅರುಣಗಿರಿನಾಥ ಡಿಂಡಿಮಭಟ್ಟಾರಕನೆಂಬಾತನು ಪ್ರೌಢದೇವರಾಯನ ಆಸ್ಥಾನದಲ್ಲಿ ವಿದ್ಯಾಧಿಕಾರಿಯಾಗಿದ್ದನು. ಇವನು ಕವಿಯೂ ಹೌದು. ಈತ ಸಂಚರಿಸಿದಲ್ಲೆಲ್ಲ ತಾನು ಮಹಾಪಂಡಿತಕವಿಯೆಂಬ ಆತ್ಮಪ್ರತ್ಯಯದಿಂದ ಸದಾ ಆ ಢಕ್ಕೆಯನ್ನು ರಣರಣಿಸಿಕೊಂಡೇ ಸಾಗುತ್ತಿದ್ದ. ಉಳಿದ ಕವಿಗಳಿಗೆ ಇದೊಂದು ರೀತಿಯಲ್ಲಿ ಪರಾಭವಾಸ್ಪದವಾಗಿತ್ತು. ವಾದದಲ್ಲಿ ಇವನನ್ನು ಹೇಗಾದರೂ ಸೋಲಿಸಿ ಈತನ ಅಹಂಭಾವವನ್ನಿಳಿಸಬೇಕೆಂದು ಅಂಥವರು ಉದ್ಯುಕ್ತರಾಗುತ್ತಿದ್ದರು. ಆದರೆ ಅರುಣಗಿರಿನಾಥನು ವಾದದಲ್ಲಿ ಅವರನ್ನು ಲೀಲಾಜಾಲವಾಗಿ ಸೋಲಿಸುತ್ತಿದ್ದ ಕಾರಣ ಈ ಎಲ್ಲ ಕವಿ-ಪಂಡಿತರ ಸಂಕಟಕ್ಕೆ ಕೊನೆಯಿರಲಿಲ್ಲ.

ವಿಜಯನಗರದ ನೆರೆನಾಡಾದ ಆಂಧ್ರಪ್ರದೇಶದ ಕೃಷ್ಣಾನದೀತೀರದಲ್ಲಿ ಕೊಂಡವೀಡು ಮತ್ತು ರಾಜವೀಡು ಎಂಬ ಎರಡು ಸಂಸ್ಥಾನಗಳಿದ್ದವು. ಸದಾ ಸಂಗ್ರಾಮಪರರಾದ ರೆಡ್ಡಿರಾಜವಂಶಗಳಿಗೆ ಸೇರಿದ ಈ ಎರಡು ಜನಪದಗಳ ರಾಜಧಾನಿಗಳು ಒಂದಕ್ಕೊಂದು ದೃಷ್ಟಿಗೋಚರವಾಗುವಂತೆ ಎದುರು-ಬದುರು ಗುಡ್ಡಗಳ ಮೇಲೆ ಇದ್ದವು. ಇವುಗಳ ದೊರೆಗಳೆಲ್ಲ ಮುಸ್ಲಿಮರ ವಿರುದ್ಧ ಹೋರಾಡಿದ್ದ ಮಲ್ಲಾರೆಡ್ಡಿಯ ವಂಶಜರು. ಅಂತಃಕಲಹದ ಕಾರಣ ಇವರ ರಾಜ್ಯಗಳು ಹ್ರಾಸಗೊಂಡಿದ್ದವು. ಪರಸ್ಪರವೈಷಮ್ಯವಿದ್ದರೂ ಉಭಯಜನಪದಗಳಲ್ಲಿದ್ದ ಕವಿ-ಶಿಲ್ಪಿ-ಕಲಾವಿದರ ಸಾಮರ್ಥ್ಯಗಳನ್ನು ಗುರುತಿಸುವ ಹಾಗೂ ಎದುರಿನವರಿಗಿಂತ ಚೆನ್ನಾಗಿ ತಮ್ಮಲ್ಲಿ, ತಮ್ಮವರಲ್ಲಿ ಅಂಥ ಎಲ್ಲ ಕೌಶಲಗಳೂ ಅಭಿವೃದ್ಧಿಯಾಗಬೇಕೆಂಬ ಸತ್ಪ್ರವೃತ್ತಿಯ ಹೆಮ್ಮೆ ಇಲ್ಲಿಯ ಅರಸರಲ್ಲಿದ್ದಿತು. ರಾಜಕೀಯಸ್ಪರ್ಧೆಯಲ್ಲದೆ ಸಾಂಸ್ಕೃತಿಕಸ್ಪರ್ಧೆಯೇ ಇದರ ಹಿನ್ನೆಲೆಯಾಗಿತ್ತು. ಶ್ರೀನಾಥನು ಕೊಂಡವೀಡು ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ. ಅಲ್ಲಿಯ ಮಹಾರಾಜ ವೇಮಾರೆಡ್ಡಿ[3]. ಆ ಸಾಮ್ರಾಜ್ಯದಲ್ಲಿ ಅಗಾಧವಾದ ಸಂಪನ್ಮೂಲವಿಲ್ಲದಿದ್ದರೂ ಶ್ರೀನಾಥನನ್ನು ಅಲ್ಲಿಯ ದೊರೆಯೂ ಅವನ ಆಶ್ರಿತರೂ ಚೆನ್ನಾಗಿ ಪೋಷಿಸಿದ್ದರು.

ಈ ಎರಡೂ ಸಂಸ್ಥಾನಗಳನ್ನು ವಶಪಡಿಸಿಕೊಳ್ಳುವಷ್ಟು ಸಮರ್ಥವಾಗಿ ವಿಜಯನಗರವು ಬೆಳೆದಿತ್ತು. ಬಲಾಢ್ಯವಾದ ವಿಜಯನಗರದ ಮೇಲೆ ತಾನು ರಾಜಕೀಯವಿಕ್ರಮವನ್ನು ಸಾಧಿಸಲಾರೆನೆಂದು ತಿಳಿದಿದ್ದ ವೇಮಾರೆಡ್ಡಿಯು ಕನಿಷ್ಠ ಸಾಹಿತ್ಯಕವಿಕ್ರಮವನ್ನಾದರೂ ತಾನು ಸಾಧಿಸಬೇಕೆಂಬ ಹಂಬಲದಿಂದ ವಿಜಯನಗರದ ವಿದ್ಯಾಧಿಕಾರಿಯಾದ ಅರುಣಗಿರಿನಾಥನನ್ನು ವಾದದಲ್ಲಿ ಸೋಲಿಸಲು ತನ್ನ ಆಸ್ಥಾನಕವಿಯೂ ವಿದ್ಯಾಧಿಕಾರಿಯೂ ಆದ ಶ್ರೀನಾಥನನ್ನು ಚೋದಿಸಿ ಪ್ರೋತ್ಸಾಹಿಸಿದ. ದಾಯಾದಕಲಹದಿಂದ ಬೇಸತ್ತ ಹಾಗೂ ಬೇರಿನ್ನೇನೂ ಆಕಾಂಕ್ಷೆಗಳಿರದ ತನ್ನ ವಯೋವೃದ್ಧಪ್ರಭುವು ತನಗೆ ಇಷ್ಟೆಲ್ಲ ಅನುಕೂಲಗಳನ್ನು ಮಾಡಿಕೊಟ್ಟಿರುವಾಗ ಅವನ ಅಭೀಷ್ಟವನ್ನು ಈಡೇರಿಸಿದರೆ ತನಗೆ ಋಣಮುಕ್ತಿಯಾಗುತ್ತದೆಂಬುದು ಶ್ರೀನಾಥನ ಮನೋಧರ್ಮವಾಗಿತ್ತು. ಸ್ವಯಂ ಭೋಗಿಯಾಗಿದ್ದರೂ ಇಂಥ ಮೌಲ್ಯಪ್ರಜ್ಞೆ ಅವನಿಗಿದ್ದುದು ಸ್ತುತ್ಯ. ಇಂಥ ಮಹತ್ಕಾರ್ಯಕ್ಕೆ ಉದ್ಯುಕ್ತನಾದ ಶ್ರೀನಾಥನು ಕವಿ-ಪಂಡಿತರ ಒಂದು ತಂಡವನ್ನೇ ಕಟ್ಟಿಕೊಂಡು ವಿಜಯನಗರಕ್ಕೆ ಹೋದನು.

ಆ ಮಹಾನಗರದಲ್ಲಿ ವಾಸ್ತವ್ಯವನ್ನು ಹೂಡಿ, ಅಲ್ಲಿಯ ವಿದ್ಯಮಾನಗಳನ್ನೆಲ್ಲ ಅರಿತುಕೊಂಡನು. ವಾದಾಹ್ವಾನಕ್ಕೆ ಪ್ರತಿಕ್ರಿಯಾತ್ಮಕವ್ಯಾಜವೊಂದು ಬೇಕಲ್ಲವೆ! ತಗಾದೆಯಿಲ್ಲದೆ ವಾದವೆಲ್ಲಿಯದು? ಹಾಗೆ ವೃಥಾವಾದಕ್ಕಿಳಿದರೆ ಸೋಲಲೂಬಹುದಷ್ಟೆ! ಹೀಗಾಗಿ ತನ್ನ ಪಕ್ಷಕ್ಕೆ ಗೆಲವಾಗುವಂತೆ ತಗಾದೆಯೊಂದನ್ನು ಸೃಷ್ಟಿಸುವುದು ಶ್ರೀನಾಥನ ಉದ್ದೇಶವಾಗಿತ್ತು. ಇದಕ್ಕಾಗಿ ವಿಜಯನಗರ, ಅಲ್ಲಿಯ ಜನಜೀವನ, ಪಂಪಾವಿರೂಪಾಕ್ಷನ ಸನ್ನಿಧಿ ಇತ್ಯಾದಿ ವರ್ಣನೆಗಳನ್ನೊಳಗೊಂಡ “ಮಾನಸೋಲ್ಲಾಸ”ವೆಂಬ ಖಂಡಕಾವ್ಯವನ್ನು ಸಂಸ್ಕೃತಭಾಷೆಯಲ್ಲಿ ರಚಿಸಿದ[4]. “ನೀವು ಈ ಮಹಾಸಾಮ್ರಾಜ್ಯದ ವಿದ್ಯಾಧಿಕಾರಿಗಳಾದ ಕಾರಣ, ನಿಮ್ಮ ವಿದ್ವತ್ತೆ-ಸಹೃದಯತೆಗಳಲ್ಲಿ ವಿಶ್ವಾಸವಿರಿಸಿ ನಮ್ಮೀ ಕೃತಿಯನ್ನು ಕುರಿತು ನಿಮ್ಮ ಅಮೂಲ್ಯಾಭಿಪ್ರಾಯವನ್ನು ಅರ್ಥಿಸುತ್ತಿದ್ದೇವೆ” ಎಂಬ ಒಕ್ಕಣೆಯೊಂದಿಗೆ ತನ್ನ  ತಂಡದವನೇ ಆದ ನೃಸಿಂಹಭಟ್ಟನೆಂಬ ಒಬ್ಬ ಮಹಾವ್ಯಾಕರಣವಿದ್ವಾಂಸನ[5] ಮೂಲಕ ತನ್ನ ಕೃತಿಯನ್ನು ಅರುಣಗಿರಿನಾಥನಲ್ಲಿಗೆ ಕಳುಹಿಸಿದನು.

ತನ್ನೊಂದಿಗೆ ವಾದಿಸಲೆಂದೇ ಆಂಧ್ರದಿಂದೊಬ್ಬ ವಿದ್ವಾಂಸನು ಬಂದಿದ್ದಾನೆಂಬುದನ್ನು ಈಗಾಗಲೇ ತಿಳಿದಿದ್ದ ಅರುಣಗಿರಿನಾಥನು ಅವನನ್ನು ತನ್ನ ಆಟಾಟೋಪದ ವಾದಕ್ರಮದಿಂದ ವಿಧ್ವಂಸಗೊಳಿಸಬೇಕೆಂದು ಸಂಕಲ್ಪಿಸಿದ್ದ. ಆದರೆ ವೃದ್ಧ ಡಿಂಡಿಮಭಟ್ಟನು (೬೦+ ವರ್ಷ) ಮಧ್ಯವಯಸ್ಸಿನಲ್ಲಿದ್ದ ಶ್ರೀನಾಥನಿಗಿಂತ (೪೦+ ವರ್ಷ) ಸುಮಾರು ಇಪ್ಪತ್ತು ವರ್ಷಕ್ಕೆ ಹಿರಿಯ. ಹೀಗಾಗಿ ಅವನ ಧಾರಣಶಕ್ತಿ ಮತ್ತು ಪ್ರತ್ಯುತ್ಪನ್ನಮತಿತ್ವಗಳು ಕೆಲಮಟ್ಟಿಗೆ ಕ್ಷೀಣಿಸಿದ್ದವು. ಶ್ರೀನಾಥನು ಈ ಅಂಶವನ್ನೂ ತನ್ನ ತಂತ್ರಗಾರಿಕೆಯ ಒಂದು ಅಂಗವಾಗಿ ಗಮನಿಸಿಕೊಂಡಿದ್ದನು. ಕ್ಲೃಪ್ತಕಾಲದಲ್ಲಿ ಅರುಣಗಿರಿನಾಥನ ಮನೆಗೆ ತೆರಳಿದ ನೃಸಿಂಹಭಟ್ಟನು ಆ ಖಂಡಕಾವ್ಯವನ್ನು ತಾನೇ ಓದಿ ಅವನಿಗೆ ಶ್ರುತಪಡಿಸಿದನು. ಆ ಕಾವ್ಯದಲ್ಲಿ ಶ್ರೀನಾಥನು “ಅಪಶಬ್ದಾಭಾಸ”ವೆಂಬ ಚಮತ್ಕಾರವನ್ನು ಮಾಡಿದ್ದನು. ಆಪಾತತಃ ವ್ಯಾಕರಣದೋಷವಿರುವಂತೆ ತೋರುವ ಅಲ್ಲಿಯ ಪದ್ಯಗಳು ವಸ್ತುತಃ ವ್ಯಾಕರಣಬದ್ಧವಾದ ರಚನೆಗಳು. ಈ ಸೂಕ್ಷ್ಮವನ್ನು ಗಮನಿಸಿಕೊಳ್ಳದ ಅರುಣಗಿರಿನಾಥನು ಈ ಕಾವ್ಯವು ದೋಷಪೂರ್ಣವೆಂದು ಸಾರಿದನು. ಇದಕ್ಕಾಗಿಯೇ ಕಾಯುತ್ತಿದ್ದ ಶ್ರೀನಾಥ “ನನ್ನಂಥ ಸತ್ಕವಿಯ ಕಾವ್ಯವನ್ನು ಮಹಾವೈಯಾಕರಣನನ ಸಂಮುಖದಲ್ಲಿಯೇ ನೀನು ದೋಷಪೂರ್ಣವೆಂದದ್ದು ಅನ್ಯಾಯ, ಅಕ್ರಮ. ಇದಕ್ಕಾಗಿ ನನ್ನ ಕ್ಷಮಾಪಣೆಯನ್ನು ಯಾಚಿಸತಕ್ಕದ್ದು. ಈ ಕ್ಷಮಾಪಣೆಯ ಸ್ವರೂಪವೆಂದರೆ, ನಿನಗೆ ನಿನ್ನ ವಂಶಪಾರಂಪರ್ಯವಾಗಿ ಬಂದಿರುವ ಕಂಚಿನ ಢಕ್ಕೆಯನ್ನು ನನಗೆ ಅರ್ಪಿಸಬೇಕು.” ಎಂಬ ಅಧಿಕ್ಷೇಪಪತ್ರಿಕೆಯನ್ನು ಕಳುಹಿಸಿದನು. ತನ್ನ ಪಟ್ಟನ್ನು ಬಿಡದ ಅರುಣಗಿರಿನಾಥನು ಕೋಪದಿಂದ ಅದನ್ನು ತಿರಸ್ಕರಿಸಿದ.

ಆಗ ಶ್ರೀನಾಥನು ತನ್ನ ಎರಡನೆಯ ಅಧಿಕ್ಷೇಪಪತ್ರವನ್ನು ಹೀಗೆ ಕಳುಹಿದನು: “ದುರಭಿನಿವೇಶದಿಂದ ನೀನೆಸಗಿದ ತಪ್ಪನ್ನು ಒಪ್ಪಿ, ವೈಶಾಖಪೂರ್ಣಮೆಯ ಒಳಗೆ ನಿನ್ನ ಕಂಚಿನ ಢಕ್ಕೆಯನ್ನು ನನಗೆ ಸಮರ್ಪಿಸದಿದ್ದರೆ ನಾನು ಕಂಚು-ಬೆಳ್ಳಿ-ಬಂಗಾರಗಳ ಢಕ್ಕೆಗಳನ್ನು ಮಾಡಿಸಿಕೊಂಡು “ನಾನೇ ಕವಿಸಾರ್ವಭೌಮ”ನೆಂದು ವಿಜಯನಗರವನ್ನೆಲ್ಲ ಮೆರವಣಿಗೆಯಲ್ಲಿ ಸುತ್ತಿ ಸಾರುತ್ತೇನೆ.” ಇದನ್ನೂ ಅರುಣಗಿರಿನಾಥನು ಅವಗಣಿಸಿದನು. ಆಗ ಆ ಕಾವ್ಯದ ಹಲವಾರು ಪ್ರತಿಗಳನ್ನು ಮಾಡಿಸಿ ಶ್ರೀನಾಥನು ರಾಜನಿಗೂ ಇತರ ಪ್ರಮುಖರಿಗೂ ಕಳುಹಿಸಿದನು. ಅಲ್ಲದೆ ತಾನು ಈ ಮುನ್ನ ಹೇಳಿದಂತೆ ಮೂರು ಢಕ್ಕೆಗಳನ್ನೂ ಮಾಡಿಸಿ ವಿಜಯನಗರದಲ್ಲಿ ಮೆರವಣಿಗೆ ಮಾಡಿಸಿಕೊಂಡನು. ಅರುಣಗಿರಿನಾಥನ ಹಿರಿಯ ಮಗ ರಾಜನಾಥನು[6] ಈ ಎಲ್ಲ ರಗಳೆಯೂ ನಡೆಯುತ್ತಿದ್ದಾಗ ವಿಜಯನಗರದಲ್ಲಿರಲಿಲ್ಲ.  ಧಾನ್ಯಸಂಗ್ರಹಕ್ಕೆಂದು ತಮ್ಮ ಮೀಸಲು ಅಗ್ರಹಾರಗಳಿಗೆ ತೆರಳಿದ್ದ ಆತನು ಆ ವೇಳೆಗೆ ಆಗಮಿಸಿದನು. ಅವನು ಊರಿಗೆ ಹೋಗುವ ಮುನ್ನವೇ ತನ್ನ ತಂದೆಗೆ ಎಚ್ಚರಿಕೆಯನ್ನು ಕೊಟ್ಟಿದ್ದ: “ಕೊಂಡವೀಡಿನಿಂದ ಶ್ರೀನಾಥನೆಂಬ ವಿದ್ವತ್ಕವಿಯು ಆಗಮಿಸಿದ್ದಾನೆ. ಆತನು ನಿಮ್ಮನ್ನು ಜಯಿಸಲು ಏನೋ ಕುತಂತ್ರವನ್ನು ಹವಣಿಸುತ್ತಿರುವಂತಿದೆ. ನಿಮಗೆ ಆತುರ, ಅಹಂಕಾರಗಳು ಹೆಚ್ಚು. ನೀವು ಸರಿಯಾಗಿ ಯೋಚಿಸದೆ ದುಡುಕಿ ನಡೆದಲ್ಲಿ ಕಷ್ಟಕ್ಕೆ ಸಿಲುಕುವಿರಿ.” ಮಗನ ಎಚ್ಚರಿಕೆಯನ್ನು ಈತ ಉಪೇಕ್ಷಿಸಿದ್ದುದರಿಂದಲೇ ಪರಿಸ್ಥಿತಿ ಈವರೆಗೆ ಬಂದಿತ್ತು. ಅಷ್ಟರಲ್ಲಿ ಹಿಂದಿರುಗಿದ್ದ ರಾಜನಾಥನು ತಂದೆಯು ಮಾಡಿಕೊಂದ ಅವಿವೇಕವನ್ನು ಕಂಡು ಆ ಕಾವ್ಯವನ್ನು ತಾನೇ ಓದಿ, “ಅಯ್ಯೋ, ಇದು “ಅಪಶಬ್ದಾಭಾಸ”ವೆಂಬ ಚಮತ್ಕಾರವಲ್ಲವೆ? ಹೀಗೆ ಸಾರ್ವಜನಿಕವಾಗಿ ನೀವು ತಪ್ಪು ನುಡಿಯಬಹುದೆ? ಈಗೇನು ಮಾಡುವುದು?” ಎಂದನು. ವ್ಯಾಕರಣದಿಂದ ಗೆಲ್ಲಲಾಗದಿದ್ದರೆ ಅಲಂಕಾರಶಾಸ್ತ್ರದಿಂದ ಗೆಲ್ಲೋಣವೆಂಬುದು ತಂದೆಯ ಇಂಗಿತ. ವ್ಯಾಕರಣಕ್ಕಾದರೆ ಮುನಿತ್ರಯವೇ (ಪಾಣಿನಿ, ವರರುಚಿ ಮತ್ತು ಪತಂಜಲಿ) ಪರಮಪ್ರಮಾಣ. ಆದರೆ ಅಲಂಕಾರಶಾಸ್ತ್ರಕ್ಕೆ ಹಾಗಲ್ಲ. ಇಲ್ಲಿ ಅಂಥ ನಿಖರವಾದ ಪ್ರಮಾಣಗಳಿಲ್ಲ. ಸಹೃದಯಪ್ರಮಾಣವೆಂಬುದನ್ನು ಹೇಗೂ ಜಗ್ಗಾಡಬಹುದು[7]. ಇದು ಸಾಮಾನ್ಯವಾಗಿ ಎಲ್ಲ ಶಾಸ್ತ್ರಜ್ಞರಿಗೂ ಸುವಿದಿತ.

ಅರುಣಗಿರಿನಾಥನ್ನು ಮಹಾತರ್ಕಪಂಡಿತನೆಂದು ನೋರಿಯವರು ಚಿತ್ರಿಸಿರುವುದು ತುಂಬ ಉಚಿತವಾಗಿದೆ. ಏಕೆಂದರೆ ಬಂಗಾಲದ ನವದ್ವೀಪ/ನಡಿಯಾದಿಂದ ನವೀನನ್ಯಾಯವು ಬೆಳೆದುಬಂದಿತು. ಅ ಪ್ರಾಂತದವನೇ ಆದ ಈತನು ತರ್ಕಶಾಸ್ತ್ರದಲ್ಲಿ ಕೋವಿದನೆಂಬ ಕಲ್ಪನೆ ಯುಕ್ತಿಸಹವೇ ಆಗಿದೆ. ಜಟಿಲವೂ ವಾಗಾಡಂಬರಭೂಯಿಷ್ಠವೂ ಆದ ನವೀನನ್ಯಾಯದ  ಪ್ರಕ್ರಿಯೆಗಳನ್ನು ಬಳಸಿಕೊಂಡು ಅಲಂಕಾರಶಾಸ್ತ್ರದಲ್ಲಿ ವಾದವನ್ನು ಮಾಡಿದರೆ ತಮ್ಮನ್ನು ಯಾರೂ ಗೆಲ್ಲಲಾರರೆಂದು ತಂದೆ-ಮಗ ತೀರ್ಮಾನಿಸಿಕೊಂಡರು. ತಾರ್ಕಿಕರಿಗೆ ಈ ಅಹಂಭಾವ ಸಹಜವಲ್ಲವೆ! ಅನೇಕಪಂಡಿತರೊಂದಿಗೆ ವಾದಗಳಲ್ಲಿ ತೊಡಗಿಕೊಂಡು, ಪ್ರತಿವಾದಿಯ ತಂತ್ರಗಳನ್ನೆಲ್ಲ ಅರಿತುಕೊಂಡಿರುವ ಶ್ರೀನಾಥನಂತೂ ವಾದಕ್ಕೆ ಸಿದ್ಧನೇ ಇದ್ದನು. ಅಲ್ಲದೆ, ಅವನೂ ತರ್ಕಶಾಸ್ತ್ರದಲ್ಲಿ ಕೋವಿದನೇ.

ಅರುಣಗಿರಿನಾಥನು ಮನೆಯಿಂದ ಹೊರಕ್ಕೆ ಅಡಿಯಿಟ್ಟನೆಂದರೆ ಅವನೊಡನೆ ಡಿಂಡಿಮವೈಭವ ತಾಂಡವಿಸುತ್ತಿತ್ತು:

ಅಗ್ರೇ ಡಿಂಡಿಮತಾಂಡವಂ ತತ ಇತೋ ವಂದಿವ್ರಜೋದ್ಘೋಷಣಂ
ದ್ವಿತ್ರಾಶ್ಚಿತ್ರಪಟಾಃ ಕಿಯಂತಿ ಬಿರುದಪ್ರೋತಾನಿ ಪದ್ಯಾನಿ ನಃ |
ಆಸ್ತಾಂ ತಾವದಲಂ ಮಹೇಶಮಕುಟೀಕೋಟೀರಕಲ್ಲೋಲಿನೀ-
ಕಲ್ಲೋಲಪ್ರತಿಮಲ್ಲಸೂಕ್ತಿವಿಭವೈರ್ದ್ವೇಷ್ಯಾನ್ವಿಜೇಷ್ಯಾಮಹೇ ||

(ಮುಂದೆ ಕಂಚಿನ ಢಕ್ಕೆಯ ಝಂಕಾರ, ಆಚೀಚೆಯಲ್ಲಿ ಹೊಗಳುವ ವಂದಿಮಾಗಧರು, ಈವರೆಗಿನ ಮಾಡಿದ ವಾದಗಳು ಮತ್ತು ವಿಜಯಗಳನ್ನು ಬಿಂಬಿಸುವ ಚಿತ್ರಗಳು, ಗಳಿಸಿದ ಬಿರುದುಬಾವಲಿಗಳು; ಇದೆಲ್ಲ ಒತ್ತಟ್ಟಿಗೆ ಇರಲಿ, ಶಿವನ ಜಟಾಜೂಟದಿಂದ ಧುಮ್ಮಿಕ್ಕಿಬರುವ ಗಂಗಾಪ್ರವಾಹದಂತಿರುವ ನನ್ನ ವಾಗ್ಧಾಟಿಯಿಂದ ಎಂಥವರನ್ನೂ ಗೆಲ್ಲುತ್ತೇನೆ) ಎಂಬ ಆತ್ಮಸ್ತುತಿಪದ್ಯವನ್ನು ಹಾಡಿಸಿಕೊಂಡು ಸಾಗುತ್ತಿದ್ದ. ಆಗ ಇವನ ದ್ವೇಷಿಗಳು, ಇವನೊಡನೆ ವಾದಿಸಲಾಗದವರು ತಮ್ಮ ಮನೆಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಶ್ರೀನಾಥನು ಅದೆಷ್ಟು ಜಾಣನೆಂದರೆ, ವಿಜಯನಗರವನ್ನು ಸೇರಿದ ಮೊದಲಿಗೇ ಅರುಣಗಿರಿನಾಥನ ವಿರೋಧಿಗಳನ್ನೆಲ್ಲ ಭೇಟಿಮಾಗಿ, ಅವನ ಬಲ-ದೌರ್ಬಲ್ಯಗಳನ್ನು ಅರಿತುಕೊಂಡಿದ್ದನು. ಅಲ್ಲದೆ ಇವನು ಡಿಂಡಿಮನಿಗೆ ತನ್ನ ಎರಡನೆಯ ಅಧಿಕ್ಷೇಪಪತ್ರವನ್ನು ಕಳುಹಿಸಿಕೊಡುವಾಗ ವೇದ, ನ್ಯಾಯ, ಮೀಮಾಂಸೆ ಮತ್ತು ವೇದಾಂತಗಳಲ್ಲಿ ಪಾರಂಗತರಾದವರನ್ನೂ ನೃಸಿಂಹಭಟ್ಟನೊಂದಿಗೆ ಕಳುಹಿಸಿಕೊಟ್ಟಿದ್ದನು, ಇವರೆಲ್ಲ ಅರುಣಗಿರಿನಾಥನನ್ನು ಮಾತಿನಲ್ಲಿ ತೊಡಗಿಸಿ ಅವನ ಮಿತಿಗಳೇನೆಂಬುದನ್ನು ತಿಳಿದುಕೊಳ್ಳಲೆಂದೇ ನಿಯುಕ್ತರಾಗಿದ್ದರು. ಅರುಣಗಿರಿನಾಥನು ನ್ಯಾಯದಲ್ಲಿ ಗಟ್ಟಿಗ, ಆದರೆ ವೇದ-ಮೀಮಾಂಸೆಗಳಲ್ಲಿ ದುರ್ಬಲ; ಪ್ರಾಕೃತಭಾಷೆಯಲ್ಲಿ ಪ್ರಾವೀಣ್ಯವಿಲ್ಲದವನು. ಶ್ರೀನಾಥನು ತನ್ನ ತಂಡದವರು ಶ್ರುತಪಡಿಸಿದ ಈ ಎಲ್ಲ ಮಾಹಿತಿಯನ್ನರಿತು ವಾದಕ್ಕೆ ಸನ್ನದ್ಧನಾದನು. ಅವನು ಈಗಾಗಲೇ ವಿಜಯನಗರದ ಪೌರರು ಧರಿಸುವಂಥ ವಸ್ತ್ರಗಳನ್ನು ಧರಿಸಿ ಅಲ್ಲಿಯ ದೇಶಾಚಾರವನ್ನು ರೂಢಿಸಿಕೊಂಡಿದ್ದನು. ಅರುಣಗಿರಿನಾಥನ ದ್ವೇಷಿಗಳಲ್ಲಿ ಒಬ್ಬನಾದ ತಮಿಳುನಾಡಿನ ಮುಮ್ಮಕವಿಯು ಬಹಳ ಪ್ರಭಾವಿಯಾದ ಸ್ಥಾನಿಕ ಹಾಗೂ ಬಹುಶ್ರುತನೆಂದರಿತು ಶ್ರೀನಾಥನು ಇವನನ್ನೂ ಒಮ್ಮೆ ಭೇಟಿಯಾಗಿ ಅವನ ಮನೆಯಲ್ಲಿ ಊಟ-ತಿಂಡಿಗಳನ್ನೂ ಸವಿದಿದ್ದ. ಹೀಗೆ ಸ್ಥಳೀಯವೇಷ-ಭೂಷಣಗಳನ್ನೂ ರೀತಿ-ನೀತಿಗಳನ್ನೂ ಬಲ್ಲವನಾದ ಕಾರಣ ವಾದದಲ್ಲಿ ಪ್ರಭಾವಶಾಲಿಯಾಗಲು ಎಲ್ಲ ಹಾದಿಗಳನ್ನೂ ಕ್ರಮಿಸಿದ್ದ. ಈ ಎಲ್ಲ ವಿವರಗಳಿಗೂ ಶ್ರೀನಾಥನ ಚಾಟುಪದ್ಯಗಳಲ್ಲಿ ಆಧಾರವಿದೆ.

ವಾದದ ದಿನ ತನ್ನ ಮೂರೂ ಢಕ್ಕೆಗಳನ್ನು ಬಾರಿಸಿಕೊಂಡು ಶ್ರೀನಾಥನು ಮೆರವಣಿಗೆ ಹೊರಟನು. ಇದು ಮಹಾರಾಜನಿಗೆ ತಿಳಿಯಿತು. ಅರುಣಗಿರಿನಾಥನ ದ್ವೇಷಿಗಳು ದಾರಿಯುದ್ದಕ್ಕೂ ಶ್ರೀನಾಥನಿಗೆ ಮರ್ಯಾದೆಗಳನ್ನು ಮಾಡಿದರು. ಆದರೆ ಉತ್ತರಭಾರತೀಯಕವಿಗಳಿರುವ ಅಗ್ರಹಾರದಲ್ಲಿ ಅವನು ಸಾಗುವಾಗ, ಅವರು ಶ್ರೀನಾಥನೆಡೆಗೆ ಕಲ್ಲೆಸೆಯುವುದು, ಕಲಶ-ಕಮಂಡಲುಗಳನ್ನು ಉತ್ತರೀಯದಲ್ಲಿ ಸುತ್ತಿ ಹೊಡೆಯುವುದು - ಇತ್ಯಾದಿ ಪ್ರತಿರೋಧದಲ್ಲಿ ತೊಡಗಿದರು. ಆಗ ಅಲ್ಲಿಗೆ ಧಾವಿಸಿ ಬಂದ ಸಾಂಪರಾಯನೆಂಬ[8] ಕಟಕಪಾಲನು (ನಗರಾಧಿಕಾರಿ) ವಾದಸಭೆಯನ್ನು ಏರ್ಪಡಿಸುವುದಾಗಿ ಆಶ್ವಾಸನೆಯನ್ನಿತ್ತು, ಈ ಪೌರಕ್ಷೋಭೆಯನ್ನು ಉಂಟುಮಾಡಬಾರದೆಂದು ಸಮಾಧಾನ ಹೇಳಿದನು. ಶ್ರೀನಾಥನಿಗೆ ಅಪೇಕ್ಷೆ ಕೂಡ ಇದೇ ಆಗಿತ್ತು.

ವಾದಸಭೆಯಲ್ಲಿ ತೀರ್ಪನ್ನೀಯುವ ಸಭ್ಯರು ಯಾರಿರಬೇಕು, ಎಷ್ಟು ಮಂದಿಯಿರಬೇಕು (ಹತ್ತು) ಎಂದೆಲ್ಲ ನಿಶ್ಚಯವಾಯಿತು. ವಾದವು ಕಾವ್ಯದ ಬಗೆಗಾದುದರಿಂದ ಐವರು ಆಲಂಕಾರಿಕರೂ ಐವರು ವೈಯಾಕರಣರೂ ಇದ್ದರು. ವಾದವಿಷಯವು “ಅಪಶಬ್ದಾಭಾಸ”ವಲ್ಲವೆ! ಇವೆಲ್ಲದರ ಸಮನ್ವಯಕ್ಕಾಗಿ ಮೀಮಾಂಸಾಶಾಸ್ತ್ರವೇತ್ತನೂ ಸರ್ವಶಾಸ್ತ್ರವಿದನೂ ಆದ ಕಾಳಾಮುಖಸಂಪ್ರದಾಯಸ್ಥ ಚಂದ್ರಭೂಷಕ್ರಿಯಾಶಕ್ತಿ[9] ಎಂಬಾತನು ನಿಶ್ಚಿತನಾದನು. ಇನ್ನು ಪ್ರಮಾಣಗ್ರಂಥಗಳಾವುವೆಂಬ ಚರ್ಚೆ ಮೊದಲಾಯಿತು. ವ್ಯಾಕರಣಕ್ಕೆ ಮುನಿತ್ರಯವಷ್ಟೇ ಪ್ರಮಾಣ. ಐಂದ್ರ, ಚಾಂದ್ರ, ಜೈನೇಂದ್ರಾದಿಪ್ರಕಾರಗಳೆಲ್ಲ ಸದ್ಯಕ್ಕೆ ಅಪ್ರಸ್ತುತ. ಅಲಂಕಾರಶಾಸ್ತ್ರಕ್ಕೆ ಭಾಮಹ, ದಂಡಿ, ಅಭಿನವಗುಪ್ತ, ಆನಂದವರ್ಧನಾದಿಗಳಲ್ಲದೆ ಸಹೃದಯರೂ ಪ್ರಮಾಣ. ನ್ಯಾಯಶಾಸ್ತ್ರಪಂಡಿತನಾದ ಡಿಂಡಿಮನು ಮಾಧ್ಯಸ್ಥರಲ್ಲಿ ನ್ಯಾಯಶಾಸ್ತ್ರದವರೂ ಬೇಕೆಂದು ಸಭ್ಯರೆದುರು ಬೇಡಿಕೆಯನ್ನು ಸಲ್ಲಿಸಿದನು. ಆದರೆ ನ್ಯಾಯಶಾಸ್ತ್ರವ್ಯಾಸಂಗಿಗಳು ವೇದಾಂತಶಾಸ್ತ್ರವ್ಯಾಸಂಗವನ್ನು ಮಾಡದಿದ್ದರೆ ಮುಂದಿನ ಜನ್ಮದಲ್ಲಿ ನರಿಯಾಗಿ ಹುಟ್ಟುತ್ತಾರೆಂದು ಸಂಪ್ರದಾಯ ಉಂಟು; ವಿದ್ಯಾರಣ್ಯರಂಥ ಮಹಾಯತಿವರ್ಯರಿದ್ದ ಈ ವಿಜಯನಗರದಲ್ಲಿ ಶುಷ್ಕನ್ಯಾಯಶಾಸ್ತ್ರಕ್ಕೆ ಎಡೆಯನ್ನು ನೀಡುವಂತಿಲ್ಲವೆಂಬ ಶ್ರೀನಾಥನ ಆಕ್ಷೇಪವು ಮಾನಿತವಾಗಿ ನೈಯಾಯಿಕರಿಲ್ಲದೆಯೇ ವಾದವು ಮೊದಲಾಯಿತು.

ವಾದದಲ್ಲಿ ಶ್ರೀನಾಥನಿಗೆ ಜಯವೂ ಆಯಿತು. “ಅಪಶಬ್ದಾಭಾಸ”ವೆಂಬುದೂ ಒಂದು ಅಲಂಕಾರಪ್ರಭೇದವೇ ಎಂದು ವಾದಿಸಿ, ಅಲಂಕಾರಶಾಸ್ತ್ರೀಯವಾಗಿಯೇ ತನ್ನ ನಿಲವನ್ನು ಶ್ರೀನಾಥನು ಸಮರ್ಥಿಸಿಕೊಂಡನು. ಡಿಂಡಿಮನು ತನ್ನ ಢಕ್ಕೆಯನ್ನು ಕವಿಸಾರ್ವಭೌಮನಿಗೆ ಸಮರ್ಪಿಸಿದನು. ಆದರೆ ಶ್ರೀನಾಥನು ತನ್ನ ಸೌಜನ್ಯದ ಕಾರಣ ಅದನ್ನು ತೆಗೆದುಕೊಳ್ಳಲಿಲ್ಲ. ಅಲ್ಲದೆ ಆ ಕಂಚಿನ ಢಕ್ಕೆಯಲ್ಲಿ ದುಷ್ಟಶಕ್ತಿಗಳಿವೆಯೆಂದೂ ಈ ಕಾರಣದಿಂದ ಅದು ತಮಗೆ ಅಮಂಗಳಪ್ರಾಯವಾಗುವುದೆಂದೂ ಶ್ರೀನಾಥನ ಪತ್ನಿಯು ಆತನಿಗೆ ಹೇಳಿದ್ದಳು.

ಈಕೆಗೂ ಅರುಣಗಿರಿನಾಥನ ಹೆಂಡತಿಗೂ ಸೊಗಸಾದ ಸ್ನೇಹವಿದ್ದಿತು. ಈ ಅಂಶವನ್ನು ಕಾದಂಬರಿಯಲ್ಲಿ ತುಂಬ ಸಹಜವೂ ಉಚಿತವೂ ಆದ ರೀತಿಯಲ್ಲಿ ಲೇಖಕರು ತಂದಿರುವುದು ಧ್ವನಿಪೂರ್ಣವಾಗಿದೆ. ರಾಜಮಾನಿತರಾದ ವಿದ್ವತ್ಕವಿಗಳೂ ತಮ್ಮ ತಮ್ಮ ಸ್ಥಾನ-ಮಾನಗಳಿಗೆ ಮಿಗಿಲಾಗಿ ಬೆಲೆಯಿತ್ತವರೂ ಆದ ಗಂಡಂದಿರ ತಗಾದೆಗೆಳೇನೇ ಇದ್ದರೂ ಅವುಗಳಿಗೆ ತಮ್ಮ ವ್ಯಕ್ತಿತ್ವ-ಮಿತ್ರತ್ವಗಳನ್ನು ಬಲಿಗೊಡದ ಈ ಹೆಣ್ಣುಮಕ್ಕಳ ಘನತೆ ದೊಡ್ಡದು. ಇಂಥ ಸ್ವಾರಸ್ಯಸ್ಥಾನಗಳು ನೋರಿಯವರ ಎಲ್ಲ ಕಾದಂಬರಿಗಳಲ್ಲಿಯೂ ಅಲ್ಲಲ್ಲಿ ಮಿಂಚಿ ಮೆರೆಯುತ್ತವೆ. ಒಟ್ಟಿನಲ್ಲಿ ಈ ವಿಜಿಗೀಷುಪಂಡಿತಕವಿಗಳ ಹೆಂಡತಿಯರು  ವಿದ್ಯಾರಣ್ಯಸ್ಥಾಪಿತವಾದ ಶ್ರೀಮಠಕ್ಕೊಮ್ಮೆ ತೆರಳಿದ್ದಾಗ ಅಲ್ಲಿ ಪರಸ್ಪರ ಪರಿಚಯವಾಯಿತೆಂದೂ ಮುಂದೆ ಈ ಬಗೆಯ ಭೇಟಿಗಳ ಫಲವಾಗಿ ಅವರಿಬ್ಬರ ನಡುವೆ ಮೈತ್ರಿ ಕುದುರಿತೆಂದೂ ಕಥಾನಕವನ್ನು ರೂಪಿಸಿದ ಬಗೆ ಸೊಗಸಾಗಿದೆ. ಇಂಥ  ಸಂನಿವೇಶದಲ್ಲಿ ಡಿಂಡಿಮನ ಪತ್ನಿಯು ಪ್ರಸ್ತಾವತ್ವೇನ ತನ್ನ ಗಂಡನ ಅಹಂಕಾರವನ್ನೂ ಆ ಕಂಚಿನ ಢಕ್ಕೆಯ ರಗಳೆಯನ್ನೂ ಕುರಿತು ಹೇಳಿಕೊಂಡು ದುಃಖಿಸಿದ್ದಳು. ಇದೆಲ್ಲವನ್ನೂ ಗಮನಿಸಿಕೊಂಡ ಶ್ರೀನಾಥನ ಪತ್ನಿ ಶ್ರೀದೇವಿಯು ತನ್ನ ಪತಿಗೆ ನಿಜಾಭಿಪ್ರಾಯವನ್ನು ತಿಳಿಸಿದ ಪರಿಯನ್ನು ನೋರಿಯವರು ಚಿತ್ರಿಸಿರುವುದು ನಿಜಕ್ಕೂ ಹೃದಯಂಗಮವಾಗಿದೆ.

ಇತ್ತ ವಾದದಲ್ಲಿ ಗೆದ್ದ ವಸ್ತುವನ್ನು ಸ್ವಯಂ ವಿಜೇತನೇ ನಿರಾಕರಿಸಿದರೆ ವಿಜಿತನು ಏನು ಮಾಡಬೇಕೆಂಬ ಧರ್ಮಶಾಸ್ತ್ರಚರ್ಚೆಯೇರ್ಪಟ್ಟಿತು. ಅಂಥ ವಸ್ತುವು ಸಾವಿರಪಟ್ಟು ಅಮಂಗಲಕಾರಿ; ಅದನ್ನು ಬೇರಾರೂ ಸ್ವೀಕರಿಸಲಾಗದು. ಹೀಗಾಗಿ ಅದು ನಾಶಾರ್ಹವೆಂದು ತೀರ್ಮಾನವಾಗಿ ಕಂಚಿನ ಢಕ್ಕೆಯನ್ನು ಒಡೆಯಬೇಕಾಗಿ ಬಂದಿತು. ಆಗ ಶ್ರೀನಾಥನು “ನಾನು ಈ ಊರಿಗೆ ಬಂದಾಗಲೇ ಡಿಂಡಿಮನ ಮೆರವಣಿಗೆಯನ್ನು ನೋಡಿದೆ. ವಿದ್ವಾಂಸನೆಂದು ಅರುಣಗಿರಿನಾಥನಲ್ಲಿ ಗೌರವವುಂಟಾಯಿತು. ಆದರೆ ಈ ಢಕ್ಕೆಯನ್ನು ಮೆರೆಸಿ ನಾನೇ ಕವಿಯೆಂದು ಮೆರೆಯುವುದು ತೀರ ಅಸಹ್ಯಕರವೆನಿಸಿತು. ಹೀಗಾಗಿ ತಾನೊಬ್ಬನೇ ಕವಿಯೆಂಬ ಈತನ ಅಹಂಕಾರವನ್ನೂ ಇತರಕವಿಗಳಿಗುಂಟಾಗಿದ್ದ ಅಪಮಾನವನ್ನೂ ಹೋಗಲಾಡಿಸಬೇಕೆಂಬುದು ನನ್ನ ಉದ್ದೇಶವಾಗಿತ್ತು.” ಎಂದನು. ಆಗ ಮಹಾರಾಜನು “ನೀನಂತೂ ಈ ವಾದದಲ್ಲಿ ಗೆದ್ದೆ. ಆದರೆ ನಿನಗೀಗ ಗೆಲುವಾಗಿರುವುದು ಬರಿಯ ಚಮತ್ಕಾರದಿಂದ. ಈ ಕಾವ್ಯವೇನೂ ಬಹಳ ವಿಶೇಷದ್ದಲ್ಲ. ಆದುದರಿಂದ ನಿನ್ನ ಪಾಂಡಿತ್ಯ-ಕವಿತ್ವಗಳ ನೈಜಸಮರ್ಥನೆಗಾಗಿ ನೀನು ಶತಾವಧಾನವನ್ನು ಮಾಡಬೇಕು” ಎಂದನು. ಶ್ರೀನಾಥನು ಅದನ್ನೊಪ್ಪಿ ಶತಾವಧಾನವನ್ನು ಮಾಡಿದನು. ಅದರಿಂದ ಮಿಗಿಲಾಗಿ ಆನಂದಿಸಿದ ದೇವರಾಯ ಮಹಾರಾಜನು ಶ್ರೀನಾಥನ ಅಭೀಷ್ಟವೇನೆಂದು ಕೋರಿದಾಗ ಆತನು “ಕುನೃಪಸ್ತೋತ್ರಸಮುದ್ಭವಂಬೈನ ವಾಗ್ದೋಷಂಬು ಶಾಂತಿಂಪಗಾ ಕನಕಸ್ನಾನಮು ಜೇಸಿ ಕಾಕ ಪೊಗಡಂಗಾ ಶಕ್ಯಮೇ ದೇವರನ್” (ಬಗೆಬಗೆಯ ಅನರ್ಹರಾಜರುಗಳೆಲ್ಲ ಹೊಗಳಿ ನನಗೆ ಮೈಲಿಗೆಯಾಗಿದೆ, ಆ ಮೈಲಿಗೆಯನ್ನು ನೀಗಲು ಕನಕಾಭಿಷೇಕವನ್ನು ಮಾಡಿಸು) ಎಂದನು. ಆಗ ಅದಕ್ಕೆ ಸಂತಸದಿಂದ ಒಪ್ಪಿದ ಪ್ರೌಢದೇವರಾಯನು  ಕನಕಾಭಿಷೇಕವನ್ನು ಮಾಡಿಸಿದ್ದಲ್ಲದೆ “ಕವಿಸಾರ್ವಭೌಮ”ನೆಂಬ ಬಿರುದನ್ನೂ ಇತ್ತು ಸಮ್ಮಾನಿಸಿದನು.

ಈ ಮುನ್ನ - ಶ್ರೀನಾಥನು ಕೊಂಡವೀಡಿನಿಂದ ವಿಜಯನಗರಕ್ಕೆ ವೈಭವದಿಂದ ಹೊರಟಾಗ – ಆ ಸಾಮ್ರಾಜ್ಯದ ಗಡಿಯಲ್ಲಿ ಅಧಿಕಾರಿಗಳು ಇವನನ್ನು ತಡೆದು ಆತನ ಬಿರುದು-ಬಾವಲಿಗಳ ಬಗೆಗೆ ವಿಚಾರಿಸಿದ್ದರು. ಆಗ “ಕವಿಸಾರ್ವಭೌಮ”ನೆಂಬ ಬಿರುದು ತನಗುಂಟೆಂದು ಇವನು ಹೇಳಿದ್ದನು. ಅದಕ್ಕವರು “ನಿಮ್ಮ ಈ ಬಿರುದುಗಳೆಲ್ಲ ನಮ್ಮ ವಿಜಯನಗರದಲ್ಲಿ ಸಲ್ಲವು[10]. ಹೀಗಾಗಿ ನೀವು ಬರಿಯ “ಶ್ರೀನಾಥಭಟ್ಟ”ನೆಂದು ಕೇವಲ ವಿಪ್ರನಾಗಿ ಪ್ರವೇಶಿಸಬೇಕು,” ಎಂದು ಆಣತಿಯಿತ್ತಿದ್ದರು. ಮುಂದೆ ಇದೇ ಪ್ರಶ್ನೆಯನ್ನು ಮುಮ್ಮಕವಿ ಕೇಳಿದ್ದಾಗ ಶ್ರೀನಾಥನು, “ನನಗೂ ಬಿರುದುಗಳುಂಟು. ಹಿಂದೆ ಧರ್ಮರಾಜನ ಆಜ್ಞೆಯಂತೆ ಅರ್ಜುನನು ತನ್ನ ಗಾಂಡೀವವನ್ನು ಶಮೀವೃಕ್ಷಕ್ಕೆ ಕಟ್ಟಿಟ್ಟಂತೆ ನಾನೂ ನನ್ನ ಬಿರುದುಗಳನ್ನು ನಿಮ್ಮ ಗಡಿಯಲ್ಲಿ ಬಿಟ್ಟುಬಂದಿದ್ದೇನೆ. ತಾಯಿನಾಡಿಗೆ ಮರಳುವಾಗ ಆ ಬಿರುದುಗಳನ್ನೆಲ್ಲ ಮತ್ತೆ ಅವುಗಳನ್ನು ಒಯ್ಯುತ್ತೇನೆ[11].” ಎಂದಿದ್ದನು. ಈಗ ಅದೇ “ಕವಿಸಾರ್ವಭೌಮ” ಎಂಬ ಬಿರುದು ವಿಜಯನಗರದಲ್ಲಿಯೇ ಇವನಿಗೆ ಸಂದಿತೆಂಬುದು ನಿಜಕ್ಕೂ ಐತಿಹಾಸಿಕತಥ್ಯದ ಹಿನ್ನೆಲೆಯಲ್ಲಿಯೇ ರೂಪುಗೊಂಡ ಕಲಾತ್ಮಕಸಂವಿಧಾನ. ಹೀಗೆ ಶ್ರೀನಾಥನು ಪ್ರೌಢದೇವರಾಯನಿಂದ ಸತ್ಕೃತನಾಗಿ ತನ್ನೂರಿಗೆ ಮರಳಿದನು.

ಅಲ್ಲಿಗೆ ಅವನು ತಲಪುವ ಹೊತ್ತಿಗೆ ರಾಜ ವೇಮಾರೆಡ್ಡಿಯು ತನ್ನ ದಾಯಾದನೊಂದಿಗೆ ಕಾದಾಡಿ ಮಡಿದಿದ್ದನು. ಆತನ ಉತ್ತರಾಧಿಕಾರಿಯಾದ ಅವನ ಮಗನಿಗೆ ತಂದೆಯಂತೆ ಸಾಹಿತ್ಯಾಭಿರುಚಿಯಿರಲಿಲ್ಲ. “ವಿಜಯನಗರದ ದೊರೆಯನ್ನು ಹೊಗಳಲೆಂದೇ ಹೋದ ನೀನು ಮತ್ತೇಕೆ ಇಲ್ಲಿಗೆ ಬಂದೆ?” ಎಂದು ಶ್ರೀನಾಥನನ್ನು ಆಕ್ಷೇಪಿಸಿದ ಕೂಡ! ಆ ರಾಜವಂಶಕ್ಕೆ ಪರಂಪರೆಯಿಂದ ಬಂದ ಪೂಜನೀಯವಸ್ತುವಾದ “ನಂದಿಕಂತ ಪೋತರಾಜು” ಎಂಬೊಂದು ಕಠಾರಿಯನ್ನು ವಿಜೇತೃವಾದ ದಾಯಾದನು ಕಸಿದೊಯ್ದಿದ್ದನು. ಇದು ತನಗೆ ಅಮಂಗಳಕರವೆಂದು ನಂಬಿದ್ದ  ಆ ತರುಣರಾಜನಿಗೆ ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯವೂ ಇರಲಿಲ್ಲವೆಂಬ ವ್ಯಂಗ್ಯ ತುಂಬ ಮಾರ್ಮಿಕವಾಗಿದೆ. ಮತ್ತೆ ಯುದ್ಧಕ್ಕೆ ನಿಂತು ತನ್ನ ತಂದೆಯ ಸಾವಿಗೆ ಸೇಡುತೀರಿಸಿಕೊಳ್ಳಲೂ ಸಾಮರ್ಥ್ಯವಿಲ್ಲದ ಅವನ ಸ್ಥಿತಿಯನ್ನು ಅರಿತುಕೊಂಡ ಶ್ರೀನಾಥನು ನೇರವಾಗಿ ರಾಜವೀಡಿಗೆ ಹೋಗಿ ಕಲಾಭಿರುಚಿಯುಳ್ಳ ಸರ್ವಜ್ಞ ಸಿಂಹಭೂಪಾಲನೆಂಬ ಅಲ್ಲಿಯ ರಾಜನ ಎದುರು ತನ್ನ ಪಾಂಡಿತ್ಯಪ್ರದರ್ಶನವನ್ನು ಮಾಡಿ, ರಾಜಚಾಟುಗಳ ಮೂಲಕ ಅವನನ್ನು ಮೆಚ್ಚಿಸಿ, ಬಹುಮಾನವಾಗಿ ಆ ಕಠಾರಿಯನ್ನು ಪಡೆದು ಕೊಂಡವೀಡಿಗೆ ಮರಳಿಸಿದನು. ಅವಿವೇಕಿಯಾದ ಯುವಕ ರಾಜನು ಆಗಲೂ ಆಕ್ಷೇಪಿಸಿದನು: “ನಮಗೆ ಅಪಮಾನವಾಗುವಂತೆ ನೀನು ಅವನನ್ನು ಹೊಗಳಿ ಪಡೆದ ಭಿಕ್ಷೆಯಿದು. ನಾನು ಪರಾಕ್ರಮದಿಂದಲೇ ಅದನ್ನು ಗೆದ್ದುಕೊಳ್ಳುತ್ತಿದ್ದೆ. ನಿನ್ನ ಈ ಉಪದ್ವ್ಯಾಪ ಬೇಕಿರಲಿಲ್ಲ” ಎಂದು ನಿಂದಿಸಿದನು. ಆಗ ತವರೂರಿನಲ್ಲಿ ನಿಲ್ಲಲು ಮನಸ್ಸಾಗದ ಶ್ರೀನಾಥನು ತನ್ನ ಬಾಲ್ಯಮಿತ್ರನಾದ ದ್ವೀಪಾಂತರವಾಣಿಜ್ಯನಿಪುಣ ಅವಚಿ ತಿಪ್ಪಯ್ಯಶ್ರೇಷ್ಠಿಯನ್ನು ಕಂಡು ಅವನಲ್ಲಿ ಆಶ್ರಯ ಪಡೆಯಲು ಕಂಚಿಗೆ ತೆರಳಿದನು[12]. ಇದು ಕಾದಂಬರಿಯ ಸ್ಥೂಲಕಥಾವಿವರ. ಇನ್ನು ಮುಂದೆ ಈ ಕಾದಂಬರಿಯ ಕೆಲವು ಪ್ರಸಂಗಗಳ ಸ್ವಾರಸ್ಯವನ್ನು ಗಮನಿಸೋಣ.

[1] ಉದಾಹರಣೆಗೆ, “ನಾರಾಯಣಭಟ್ಟು”ವಿನ ಕಾದಂಬರೀಕಥಾವಧಿಯು ವಸಂತನವರಾತ್ರದಿಂದ (ಚೈತ್ರ) ಅದೇ ಸಂವತ್ಸರದ ವೈಶಾಖಪೂರ್ಣಿಮೆಯ (ವೈಶಾಖ) ವರೆಗೆ. “ರುದ್ರಮದೇವಿ”ಯ ಕಾದಂಬರೀಕಥಾವಧಿಯು ದೀಪಾವಳಿಯಿಂದ (ಶರತ್) ಯುಗಾದಿಯವರೆಗೆ (ವಸಂತ).

[2] ಈತನ ಬಳಿಕ, ಸುಮಾರು ಅರ್ಧಶತಮಾನದ ಅನಂತರ ಬಂದವನು ಕೃಷ್ಣದೇವರಾಯ. ವಸ್ತುತಃ ಪ್ರೌಢದೇವರಾಯನ ಆಳ್ವಿಕೆಯೇ ವಿಜಯನಗರಸಾಮ್ರಾಜ್ಯದ ಸುವರ್ಣಕಾಲ, ಕೃಷ್ಣದೇವರಾಯನ ಕಾಲದ ಹೊತ್ತಿಗೆ ಒಳಜಗಳಗಳು ಕಾಣಿಸಿಕೊಂಡಿದ್ದವು ಎಂಬ ಅಭಿಪ್ರಾಯವೂ ಇದೆ.

[3] ಹೇಮ  ಎಂಬ ಸುವರ್ಣಾರ್ಥಕವಾದ ಸಂಸ್ಕೃತಶಬ್ದವೇ ವೇಮ ಎಂದು ತದ್ಭವರೂಪವನ್ನು ಹೊಂದಿರುವುದು ಸುವೇದ್ಯ.

[4] ಅಂಥ ಒಂದು ಕೃತಿಯನ್ನು ಶ್ರೀನಾಥನು ರಚಿಸಿದನೆಂಬುದಕ್ಕಾಗಲಿ ರಚಿಸಲಿಲ್ಲವೆಂಬುದಕ್ಕಾಗಲಿ ಪುರಾವೆಯಿಲ್ಲ. ಇದು ನೋರಿಯವರದೇ ಕಲ್ಪನೆಯೆಂದು ತೋರುತ್ತದೆ. ಆದರೆ ಇದು ವಾಸ್ತವೇತಿಹಾಸಕ್ಕಾಗಲಿ ಕಥಾಕ್ರಮಕ್ಕಾಗಲಿ ವಿರೋಧವಾಗಿಲ್ಲವೆಂದೇ ಸ್ವಾಗತಾರ್ಹವಾಗಿದೆ.

[5] ಐತಿಹಾಸಿಕವ್ಯಕ್ತಿಯಾದ ಈತನು ಬಾಣಭಟ್ಟನ “ಕಾದಂಬರಿ”ಯನ್ನು “ಪದ್ಯಕಾದಂಬರಿ”ಯೆಂಬ ನಾಟಕವಾಗಿ ರಚಿಸಿದ್ದಾನೆ. ಇವನ ಅಣ್ಣ ವಿಶ್ವೇಶ್ವರದೀಕ್ಷಿತನು “ಚಮತ್ಕಾರಚಂದ್ರಿಕೆ”ಯೆಂಬ ಅಲಂಕಾರಗ್ರಂಥವನ್ನು ರಚಿಸಿದ್ದಾನೆ.

[6] ಈತನೂ ಐತಿಹಾಸಿಕವ್ಯಕ್ತಿ, ಕವಿ. ಈತನ ಹೆಂಡತಿ ಕೂಡ ಕವಯಿತ್ರಿ. ಆಕೆ “ಅಭಿನವರಾಮಾಭ್ಯುದಯ” ಎಂಬ ಕಾವ್ಯವನ್ನು ರಚಿಸಿದ್ದಾಳೆ.

[7] ಶ್ರೀನಾಥನು ತನ್ನ ಕಾವ್ಯಗಳಲ್ಲಿ ತನ್ನ  ಈ ಸಾಧನೆಗಳನ್ನು ಹೇಳಿಕೊಂಡಿದ್ದಾನೆ: “ಪಗಲಗೊಟ್ಟಿಂಚಿತುದ್ಭಟವಿವಾದಪ್ರೌಢಿ ಗೌಡಡಿಂಡಿಮಭಟ್ಟು ಕಂಚುಢಕ್ಕ” (ಉದ್ಭಟಶಾಸ್ತ್ರವಾದದಲ್ಲಿ ಅವನ ಢಕ್ಕಯನ್ನು ನಾನು ಒಡೆಸಿದೆ), “ದೀನಾರಟಂಕಾಲ ತೀರ್ಥಮಾಡಿಂಚಿತಿ ದಕ್ಷಿಣಾಧೀಶು ಮುತ್ಯಾಲಶಾಲ” (ಪ್ರೌಢದೇವರಾಯನ ಆಸ್ಥಾನದಲ್ಲಿ ಮುತ್ತಿನ ಮಂಟಪದಲ್ಲಿ ಕನಕಾಭಿಷೇಕವನ್ನು ಮಾಡಿಸಿಕೊಂಡೆ). ಇವೆಲ್ಲ ಐತಿಹಾಸಿಕತಥ್ಯವೆಂಬುದರಲ್ಲಿ ಸಂದೇಹವಿಲ್ಲ.

[8] ಶ್ರೀನಾಥನು ಇವನನ್ನೂ ಭೇಟಿಯಾಗಿದ್ದನು. ಇಂಥ ಅಧಿಕಾರಿಗಳನ್ನು ಅವನು ಗಮನಿಸಿಕೊಂಡಿರದಿದ್ದರೆ, ಇವನು ಗೂಢಚರನೆಂದೂ ಸಂದೇಹಕ್ಕೆ ಒಳಗಾಗುತ್ತಿದ್ದನು! ಒಮ್ಮೆ “ನಿನಗೇನು ಬೇಕು,” ಎಂದು ಇವನು ಶ್ರೀನಾಥನನ್ನು ಕೇಳಿದ್ದನು. ಆಗ ಶ್ರೀನಾಥನು ಕಸ್ತೂರಿಯನ್ನು ಅಪೇಕ್ಷಿಸಿದನು. ಆಗಿನ ಕಾಲದಲ್ಲಿ ಕಸ್ತೂರೀವಿನಿಮಯವು ಸ್ನೇಹವು ಸ್ಥಿರವಾಗುವ ಸಂಕೇತ. ಇದೂ ಶ್ರೀನಾಥನ ಚಾಟುಗಳಲ್ಲಿವೆ:

“ಅಕ್ಷಯಂಬುಗ ಸಾಂಪರಾಯನಿ ತೆಲುಂಗಾಧೀಶ ಕಸ್ತೂರಿಕಾಭಿಕ್ಷಾದಾನಮು ಸೇಯರಾ ಸುಕವಿರಾಟ್ ಬೃಂದಾರಕಸ್ವಾಮಿಕಿನ್ ದ್ರಾಕ್ಷಾರಾಮಚಲುಕ್ಯಭೀಮವರಗಂಧರ್ವಪ್ಸರೋಭಾಮಿನೀವಕ್ಷೋಜದ್ವಯಕುಂಭಿಕುಂಭಮುಲಪೈ ವಾಸಿಂಚು ತದ್ವಾಸನಲ್” (ಅಯ್ಯಾ! ಕವಿಸಾರ್ವಭೌಮನಿಗೆ ಸಮೃದ್ಧವಾಗಿ ಮೃಗಮದವನ್ನು ನೀಡು. ಹೀಗೆ ನೀನು ಕೊಡುವ ಕಸ್ತೂರಿಯ ಪರಿಮಳವು ದ್ರಾಕ್ಷಾರಾಮ, ಭೀಮಾವರ ಮುಂತಾದ ಊರುಗಳ ಗಣಿಕಾಮಣಿಗಳ ವಕ್ಷಸ್ಥಲದಲ್ಲಿ ರಾಜಿಸುತ್ತದೆ!) ಎಂದು ಪ್ರೌಢವಿನೋದದ ಉತ್ತರವನ್ನೇ ಶ್ರೀನಾಥನು ದಿಟ್ಟತನದಿಂದ ನೀಡಿದ್ದನು.

[9] ಈತನೂ ಐತಿಹಾಸಿಕವ್ಯಕ್ತಿ; ಇವನು ಕಾಶೀವಿಲಾಸಕ್ರಿಯಾಶಕ್ತಿಯೆಂಬ ಕಾಳಾಮುಖಶೈವಾಚಾರ್ಯನ ಪರಂಪರೆಯ ಪಂಡಿತ. ಇವನ ಬಗೆಗೆ ಶ್ರೀನಾಥನ ಮಾತಿನಿಂದಲೇ ತಿಳಿಯುತ್ತದೆ: “ಚಂದ್ರಭೂಷಕ್ರಿಯಾಶಕ್ತಿ ರಾಯುಲಯೊದ್ದ ಬಾದುಕೊಲ್ಪಿತಿ ಸಾರ್ವಭೌಮಬಿರುದ”

[10] ಭಾರತೀಯಪದವಿಯು ಅಮೆರಿಕದಲ್ಲಿ ಸಲ್ಲದೆಂಬಂತೆ ಇದು

[11] “ತರುವುನ ಗಾಂಡಿವಂಬಿಡಡೆ ಧರ್ಮಜುನಾನ ಕಿರೀಟಿ ಯೇನು ವಾಕ್ಸರಿಸಿಜನೇತ್ರಯಾನತಿ ವಿಚಾರಚೊಪ್ಪನಗರ್ವಹೀನತನ್ ಮರಲ ತೆನುಂಗುನಾಟಿಕಸಮಾನಗತಿನ್ ಗೊನಿಪೋವುವಾಡನೈ ಬಿರುದಮು ನಾರಿವಾಗುಕಡ ಬೆಟ್ಟಿತಿ ಸತ್ಕವಿಸಾರ್ವಭೌಮುಡನ್”

[12] ಕತೆಯನ್ನು ಹೇಳಿದ ಬಳಿಕ “ಕಥ ಕಂಚಿಕಿ ಮನಮಿಂಟಿಕಿ” ಎನ್ನುವುದು ತೆಲುಗಿನ ಜಾನಪದೀಯಕ್ರಮ. ಆದನ್ನಿಲ್ಲಿ ಕಾದಂಬರಿಯ ಕೊನೆಯ ಮಾತಾಗಿ ನೋರಿಯವರು ಔಚಿತ್ಯಪೂರ್ಣವಾಗಿ ಬಳಸಿದ್ದಾರೆ. ಅಲ್ಲದೆ ಶ್ರೀನಾಥನು ಕಂಚಿಗೆ ಹೋದದ್ದು ಐತಿಹಾಸಿಕತಥ್ಯವೂ ಹೌದು.

ಪ್ರಕೃತಪ್ರಬಂಧವು ಲೇಖಕರು ಮಾಡಿದ ಅನೌಪಚಾರಿಕಭಾಷಣವೊಂದರ ಪರಿವರ್ಧಿತಲಿಖಿತರೂಪ.

Transcribed by Sri. Ranganath Prasad.

To be continued.

Comments

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.