ಕಾವ್ಯದ ರೂಪವಿಮರ್ಶೆ
ರಸವು ಕಾವ್ಯದ ಸ್ವರೂಪವಾದರೆ ಗುಣ, ರೀತಿ, ಧ್ವನಿ, ವಕ್ರತೆ, ಅಲಂಕಾರಾದಿಗಳು ಅದರ ರೂಪಸ್ತರದಲ್ಲಿ ಬರುತ್ತವೆ. ವಸ್ತುತಃ ಶಬ್ದವೇ ಕಾವ್ಯದ ರೂಪ (Form). ಇನ್ನು ರಸವಾದರೋ ಕಾವ್ಯದ ಅರ್ಥ, ಪರಮಾರ್ಥ (Content). ಭಟ್ಟರು “ಸಂಸ್ಕೃತಭಾಷೆಯಲ್ಲಿಯ ಶಾಸ್ತ್ರೀಯನಿರೂಪಣೆಯಲ್ಲಿ ವರ್ಗೀಕೃತಘಟಕಗಳು ಸಂಪೂರ್ಣಭಿನ್ನವಾಗಿರದೆ ಒಂದು ಇನ್ನೊಂದರ ವಿಕ್ಷೇಪದಂತಿರುವಂತಹವು” ಎಂದು ಹೇಳುತ್ತಾರೆ (ಪು. ೧೮). ಇದನ್ನು ಸುಲಭವಾಗಿ ಹೇಳುವುದಾದರೆ, ಋಷಿಪರಂಪರೆಯ ಶಾಸ್ತ್ರಗಳಲ್ಲಿ ವಿವಿಧವಿಭಾಗಗಳು ಪರಸ್ಪರಸಾಪೇಕ್ಷ ಹಾಗೂ ಪೂರಕವೆನ್ನಬಹುದು. ಇದು ಒಪ್ಪುವಂಥದ್ದೇ. ಭಟ್ಟರು ಗುಣವನ್ನು ಸೌಂದರ್ಯಕಾರಕವೆಂದೂ ಅಲಂಕಾರವನ್ನು ಸೌಂದರ್ಯವರ್ಧಕವೆಂದೂ ಹೇಳುತ್ತಾರೆ (ಪು. ೧೮).
ಆದರೆ ಈ ನಿಲವಿಗಿಂತ ಅವರೇ ಬೇರೊಂದೆಡೆ, ಗುಣವು ಭಾಷೆಯ ಸಮರ್ಥಪ್ರಯೋಗವೆಂದೂ ಅಲಂಕಾರವು ಭಾಷೆಯ ಸುಂದರಪ್ರಯೋಗವೆಂದೂ ಹೇಳಿರುವುದು ಹೆಚ್ಚು ಯುಕ್ತಿಯುಕ್ತ. ಏಕೆಂದರೆ ಅಲಂಕಾರಗಳು ಕೂಡ ಅದೆಷ್ಟೋ ಬಾರಿ ಸೌಂದರ್ಯಕಾರಕಗಳಾಗಿರುತ್ತವೆ. ಮಾತ್ರವಲ್ಲ, ವಿಶಿಷ್ಟವಾದ ಗುಣವೇನೂ ಸ್ಫುರಿಸಿದ ಸಂದರ್ಭಗಳಲ್ಲಿಯೂ ಸಾರ್ಥಕಾಲಂಕಾರಗಳ ಪ್ರಯೋಗದಿಂದ ಕಾವ್ಯವು ಸೊಗಯಿಸಿರುವುದನ್ನು ನಾವೆಲ್ಲ ಬಲ್ಲೆವು. ಈ ಕಾರಣದಿಂದಲೇ ಕುಂತಕನು ವಕ್ರತೆಯೆಂಬ ವ್ಯಾಪಕತತ್ತ್ವದಲ್ಲಿ ಗುಣ-ರೀತಿ-ಅಲಂಕಾರಾದಿಗಳನ್ನೆಲ್ಲ ಅಡಕಮಾಡಿದ್ದಾನೆ.
* * *
ಭಟ್ಟರೇ ಮತ್ತೊಂದು ಕಡೆ ಓಜಸ್ಸು, ಪ್ರಸಾದ, ಮಾಧುರ್ಯ ಮುಂತಾದ ಗುಣಗಳು ಕಾವ್ಯಮೀಮಾಂಸೆಯಲ್ಲಿ ವ್ಯಾವಹಾರಿಕವಾಗಿ ಹೆಚ್ಚಿನ ಸಾಧನೆ ಮಾಡದಿರುವುದು ಅವುಗಳ ಮೌಲ್ಯದ ಪರಿಮಿತಿ; ಏಕೆಂದರೆ ಇವುಗಳಲ್ಲಿ ಕೆಲವು ಅತಿವ್ಯಾಪ್ತಿಯ ಕಾರಣ ಅಸ್ಪಷ್ಟವಾಗಿವೆ, ಮತ್ತೆ ಕೆಲವು ಅವ್ಯಾಪ್ತಿಯ ಕಾರಣ ಅಸಮರ್ಥವಾಗಿವೆಯೆಂದು ಹೇಳುತ್ತಾರೆ (ಪು. ೨೯).
ಇದು ಸರ್ವಥಾ ಅಯುಕ್ತ. ಭಟ್ಟರ ಈ ಅಭಿಪ್ರಾಯ ಅವರ “ಪೂರ್ವಾಶ್ರಮ”ದ್ದೆಂದು ತಿಳಿದೇ ಇದೆಯಾದರೂ ಇದನ್ನೆಲ್ಲ ಅವರು ಮತ್ತೆ ಗ್ರಂಥರೂಪದಲ್ಲಿ ತಂದು ಅವುಗಳಿಗೆ ಪುನರ್ಜನ್ಮವೀಯಬೇಕಿರಲಿಲ್ಲ. ಅಲ್ಲದೆ ಅಲ್ಲಲ್ಲಿಯೇ ಟಿಪ್ಪಣಿಗಳ ರೂಪದಲ್ಲಿಯಾದರೂ ಇಂಥವುಗಳನ್ನು ಪೂರ್ವಪಕ್ಷೀಕರಿಸಬೇಕಿತ್ತು. ಈ ತೆರನಾದ ಗೊಂದಲಗಳು ಭಟ್ಟರ ಕೃತಿಯಲ್ಲಿ ಹಲವೆಡೆ ಎಡತಾಕುವುದು ಶೋಚನೀಯ. ಈ ಬಗೆಯ ಕಾರ್ಯವನ್ನು ಸೇಡಿಯಾಪು ಕೃಷ್ಣಭಟ್ಟರು ತಮ್ಮ “ಕನ್ನಡ ಛಂದಸ್ಸು” ಕೃತಿಯಲ್ಲಿ ಮಾಡಿರುವುದನ್ನು ನೆನೆದಾಗ ಶಾಸ್ತ್ರಶುದ್ಧಿಗೆ ಇಂಥ ಪ್ರಕಲ್ಪಗಳ ತುರ್ತು ಅದೆಷ್ಟೆಂದು ತಿಳಿಯದಿರದು.
* * *
ಭಟ್ಟರು ಗುಣ-ರೀತಿಗಳನ್ನು ಕುರಿತು ಹೇಳಿರುವುದೆಲ್ಲ ಯುಕ್ತಿಯುಕ್ತವಾಗಿಯೂ ಶಾಸ್ತ್ರಸಂಮತವಾಗಿಯೂ ಇವೆ (ಪು. ೧೮-೨೦). ಆದರೆ “ಶಬ್ದಬ್ರಹ್ಮಣಿ ನಿಷ್ಣಾತಃ ಪರಂ ಬ್ರಹ್ಮಾಧಿಗಚ್ಛತಿ” ಎಂಬ ಭರ್ತೃಹರಿಯ ಮಾತನ್ನು ವಿವೇಚಿಸುವಾಗ ಯೋಗಿಪ್ರತ್ಯಕ್ಷದ ಹಾದಿಯನ್ನು ಹಿಡಿಯುತ್ತಾರೆ. ಈ ಜಾಡನ್ನು ಹಿಡಿಯದೆಯೇ ಎಲ್ಲ ವಿವೇಚನೆಯನ್ನೂ ಮುಂದುವರಿಸಬಹುದಿತ್ತು. ಅಭಿನವಗುಪ್ತನಂಥ ಮಹಾಮಾಹೇಶ್ವರನೂ ಅದೆಷ್ಟೋ ಕಡೆ ಯೋಗಿಪ್ರತ್ಯಕ್ಶದ ಹಂಗಿಲ್ಲದೆ ಕಾವ್ಯತತ್ತ್ವನಿರೂಪಣೆಯನ್ನು ಸಮರ್ಥವಾಗಿ ಮಾಡುತ್ತಾನೆ (ಉದಾ: ರಸಸೂತ್ರವಿವರಣೆ, ರಸವಿಘ್ನಗಳ ನಿರೂಪಣೆ, ರಸ ಮತ್ತು ಪುರುಷಾರ್ಥಗಳ ಸಮೀಕರಣ, ಸಾಹಿತ್ಯಾದಿಕಲೆಗಳ ಪ್ರಮಾಣಮೀಮಾಂಸೆ ಇತ್ಯಾದಿ). ಅಷ್ಟೇಕೆ, ಅಲಂಕಾರಶಾಸ್ತ್ರದಲ್ಲಿ ಮತ್ತೆ ಮತ್ತೆ ಬರುವ ಕಾವ್ಯಶರೀರ ಮತ್ತು ಕಾವ್ಯಾತ್ಮಗಳನ್ನು ವೇದಾಂತದೃಷ್ಟಿಯಿಂದ ನೋಡಬೇಕಿಲ್ಲವೆಂದು ಭಟ್ಟರೇ ಹೇಳುವುದಿಲ್ಲಿ ಸ್ಮರಣೀಯ. ಆದರೆ ಅವರು ಇಂಥ ಆತ್ಮ-ಶರೀರಪರಿಕಲ್ಪನೆಯು ಕೇವಲ ದೃಷ್ಟಾಂತವೆಂದೂ ದಾರ್ಷ್ಟಾಂತಿಕವಾದ ರಸ-ವಕ್ರತೆಗಳ ಮೇಲೆ ಇದರ ಪರಿಣಾಮವು ಯಾವ ರೀತಿಯಲ್ಲಿಯೂ ಇಲ್ಲವೆಂದೂ ಸ್ಪಷ್ಟಪಡಿಸಬಹುದಿತ್ತು. ಇಂಥ ಅಪೂರ್ಣತೆಗಳನ್ನು ಅವರ ಪ್ರತಿಪಾದನಸಂದರ್ಭದಲ್ಲಿ ಹಲವೆಡೆ ಕಾಣಬಹುದು. ಆದರೆ ವ್ಯುತ್ಪನ್ನನಿಗೆ ಅವರ ಇಂಗಿತವು ಸ್ಫುರಿಸದಿರದು. ಹೀಗಾಗಿಯೇ ಓದುಗರು ಮಾಡಿಕೊಳ್ಳುವ ಸಮನ್ವಯವು ಇಲ್ಲಿ ಮಿಗಿಲಾಗಿ ಅನಿವಾರ್ಯ.
* * *
ಭಟ್ಟರು ಶಬ್ದ ಹಾಗೂ ಅದರ ರೂಢಿಮೂಲವಾದ ವಾಚ್ಯಾರ್ಥ, ಮತ್ತಿವುಗಳ ವಿಸ್ತೃತರೂಪವಾದ ಲಕ್ಷ್ಯಾರ್ಥಗಳಷ್ಟೂ ಸೇರಿ ಕಾವ್ಯಶರೀರವೆಂದೆನಿಸುತ್ತವೆ; ಇದನ್ನು ಮೀರಿದ ವ್ಯಂಗ್ಯಾರ್ಥವೇ ಕಾವ್ಯಾತ್ಮವೆಂದು ಹೇಳುವುದು (ಪು. ೨೩) ಶಾಸ್ತ್ರಾನುಗುಣವಷ್ಟೇ ಅಲ್ಲದೆ ಅಡಕವೂ ಆದ ನಿಸ್ಸಂದಿಗ್ಧನಿರೂಪಣೆ. ಅಂತೆಯೇ ಶಬ್ದಾರ್ಥಾಲಂಕಾರಗಳು ಸಾಕ್ಷಾತ್ತಾಗಿ ಶಬ್ದಾರ್ಥಸಂಬಂಧಿಗಳಾದರೂ ಪರಂಪರೆಯಿಂದ ರಸಸಂಬಂಧಿಗಳೆಂದು ಅಲಂಕಾರಗಳಿಗೆ ರಸದ ಸಂಪರ್ಕವನ್ನು ಸಾವಯವವಾಗಿ ಕಲ್ಪಿಸಿರುವುದೂ ಸ್ತುತ್ಯ (ಪು. ೨೩). ಇದನ್ನೆಲ್ಲ ಆನಂದವರ್ಧನನು ಹೇಳಿಯೇ ಇದ್ದರೂ ಅವನ ಮಹಾಗ್ರಂಥದ ಪ್ರವಾಹಧೋರಣೆಯಲ್ಲಿ ಸಾಮಾನ್ಯಜಿಜ್ಞಾಸುವಿಗೆ ಎಟುಕದಿರಬಹುದು. ಈ ದೃಷ್ಟಿಯಿಂದ ಭಟ್ಟರ ವಿವರಣೆಗಳು ತುಂಬ ಸ್ವಾಗತಾರ್ಹ. ಇದೇ ಬಗೆಯಲ್ಲಿ ರೀತಿ ಮತ್ತು ವೃತ್ತಿಗಳ ಲಕ್ಷಣೀಕರಣವನ್ನು ಅವರು ಮಾಡಿದ್ದಾರೆ. ಆ ಪ್ರಕಾರ ವಿಶಿಷ್ಟಕ್ರಮದಲ್ಲಿ ಪದಗಳ ಜೋಡಣೆಯೇ ರೀತಿಯೆನಿಸಿದರೆ ವಿಶಿಷ್ಟಪ್ರಕಾರದ ವಾಚ್ಯಾರ್ಥಗಳ ಜೋಡಣೆಯೇ ವೃತ್ತಿ (ಪು. ೨೩). ಆದರೆ ವೃತ್ತಿಯನ್ನು ವಾಚ್ಯಾರ್ಥಗಳ ಜೋಡಣೆಗೆ ಒಪ್ಪವಿಟ್ಟಿರುವುದು ಯುಕ್ತವಾಗಿ ತೋರದು. ಏಕೆಂದರೆ ಅದು ಮುಖ್ಯವಾಗಿ ವರ್ಣಸಂಘಟನೆಯನ್ನಾಶ್ರಯಿಸಿದೆ; ಮತ್ತಿದು ಬಲುಮಟ್ಟಿಗೆ ಅರ್ಥನಿರಪೇಕ್ಷ. ಮತ್ತೊಂದೆಡೆ ಭಟ್ಟರು “ರಸವು ಅಲೌಕಿಕಸ್ವರೂಪದಲ್ಲಿ ಸಹೃದಯನಿಷ್ಠವಾದರೂ ಅದರ ಲೌಕಿಕಸ್ವರೂಪದ ಪ್ರತಿನಿಧಿಯಾಗಿ ಉಳಿಯುವುದು ಕಾವ್ಯ” (ಪು. ೨೭) ಎಂದು ಹೇಳುವ ಮೂಲಕ ವಾಗರ್ಥಸಾಕಲ್ಯವನ್ನು ಕಾವ್ಯರೂಪವೆಂದು ನಿರ್ವಚಿಸಿರುವುದು ಮಹತ್ತ್ವದ ಸಂಗತಿ.
ಇದು ಅಲಂಕಾರಶಾಸ್ತ್ರಸಂಪ್ರದಾಯಕ್ಕೆ ವಿಹಿತವೂ ಆಗಿದೆ. ಅಲ್ಲದೆ ಈ ಅಂಶವೇ ಭಟ್ಟರ ಪ್ರಮುಖವಾದವೆನಿಸಿದ ಭಾರತೀಯಸಂವೇದನೆಯ ಯುಕ್ತವಾದ ಗ್ರಹಣೆಗೂ ದಿಕ್ಸೂಚಿಯಾಗಬಲ್ಲುದು. ಭಟ್ಟರು ನಿರಂತರವಾಗಿ ಭಾರತೀಯಮೌಲ್ಯಗಳ ಜಿಜ್ಞಾಸೆಯಲ್ಲಿ ಕೇಂದ್ರೀಯ ಮತ್ತು ಪಾರ್ಶ್ವೀಯಗಳ (ಸ್ವರೂಪ ಮತ್ತು ರೂಪಗಳ) ಆಧಾರಾಧೇಯಭಾವವನ್ನು ಎತ್ತಿಹಿಡಿಯುತ್ತಲೇ ಇರುವರಷ್ಟೆ. ಅಂಥ ಸಂದರ್ಭಗಳಲ್ಲಿ ಪಾರ್ಶ್ವೀಯವೆಂದು ಅವರೇ ನಿರ್ವಚಿಸುವ ರೂಪಸ್ತರವನ್ನು ಹಲವು ಬಾರಿ ಅಳತೆಮೀರಿ ಅವಗಣಿಸುವರೆಂದು ಕೆಲವರು ವಿದ್ವಾಂಸರು ಈಗಾಗಲೇ ನಮ್ಮ ಗಮನ ಸೆಳೆದಿದ್ದಾರೆ[1]. ಇದು ಸತ್ಯವೂ ಹೌದು. ಚೋದ್ಯವೆಂದರೆ ಇಂಥ ಪ್ರತಿಕೋಟಿಯ ವಿದ್ವಾಂಸರಿಗೆ ಉತ್ತರ ನೀಡುವಾಗ ಭಟ್ಟರು ತಮ್ಮನ್ನು ತಾವು ಹಳಿಗೆ ತಂದುಕೊಳ್ಳುತ್ತಿದ್ದರೂ ಪುನಃ ಪೂರ್ವೋಕ್ತವಿಪರ್ಯಾಸವನ್ನು ಕಲ್ಪಿಸುತ್ತಿರುತ್ತಾರೆ. ಹೀಗಾಗಿ ಅವರ ನಿಲವನ್ನು ಕಂಡುಕೊಳ್ಳುವುದು ಪ್ರಮಾಣಿಕಜಿಜ್ಞಾಸುವಿಗೆ ಕಷ್ಟವಾದೀತು. ಇಂಥ ಸಂದರ್ಭಗಳಲ್ಲಿ ಸಹೃದಯನಿಷ್ಠವಾದ ರಸ ಮತ್ತು ಕವಿನಿಷ್ಠವಾದ ವಕ್ರೋಕ್ತಿರೂಪದ ಕಾವ್ಯಗಳನ್ನು ಕುರಿತಾದ ಪೂರ್ವೋಕ್ತಪ್ರಕಾರದ ಸಮನ್ವಯವನ್ನು ಅವರು ಸಾಧಿಸಿದ ಪರಿಯನ್ನರಿತರೆ ಗೊಂದಲಗಳು ಬಗೆಹರಿದಾವು.
* * *
ರೀತಿ ಮತ್ತು ಮಾರ್ಗಗಳನ್ನು ವಿವೇಚಿಸುತ್ತ ಭಟ್ಟರು ಕಾವ್ಯದ ಮಾರ್ಗಗಳು ಅನಂತ, ಆದರೂ ಸರಳತೆ ಮತ್ತು ಪ್ರೌಢಿಗಳೆಂಬ ಎರಡು ತಳಹದಿಗಳ ಮೇಲೆ ಇವನ್ನು ಸ್ಥೂಲವಾಗಿ ವಿಭಾಗಿಸಬಹುದೆಂದು ಆಲಂಕಾರಿಕರ ಮತವನ್ನು ಗ್ರಹಿಸಿರುವುದು ಯುಕ್ತವಾಗಿದೆ (ಪು. ೫೧). ಹೀಗೆಯೇ ರಸಗಳನ್ನು ಮಧುರ ಮತ್ತು ಉದ್ಧತಗಳೆಂದು ಸ್ಥೂಲವಾಗಿ ವಿಭಾಗಿಸಿಕೊಂಡು, ವೈದರ್ಭ ಮತ್ತು ಗೌಡಮಾರ್ಗಗಳನ್ನು ಆಲಂಕಾರಿಕರು ಕ್ರಮವಾಗಿ ವಿಂಗಡಿಸಿದ ಪರಿಯನ್ನು ಚೆನ್ನಾಗಿ ವಿವೇಚಿಸಿದ್ದಾರೆ (ಪು. ೫೩). ಇವೆಲ್ಲದರ ಮಥಿತಾರ್ಥವೆಂಬಂತೆ ಅವರು “ಸಹೃದಯತೆ ಅಲಿಪ್ತವೂ ಪಕ್ಷಪಾತರಹಿತವೂ ಆಗಿ ಉಳಿಯಬೇಕಾದರೆ ಅಭಿವ್ಯಕ್ತಿವಿಧಾನವೂ ಕಾವ್ಯಸತ್ತ್ವದಷ್ಟೇ ಸಹಜವೂ ಅನುಪಮವೂ ಆದ ಸೃಷ್ಟಿ ಎಂಬ ಅರಿವು ಮಸುಕಬಾರದು. ಇದು ರೀತಿತತ್ತ್ವದ ಮರ್ಮ” (ಪು. ೫೪-೫೫) ಎಂದು ಸೂತ್ರೀಕರಿಸಿರುವುದು ಪ್ರಶಂಸನೀಯ.
ಇಲ್ಲಿ ಅವರು ಒಳ್ಳೆಯ ಹದವನ್ನು ಮುಟ್ಟಿದ್ದಾರೆ. ಇದೇ ವಿಭಿನ್ನಕಾವ್ಯಗಳ ಸಾಫಲ್ಯ-ವಿಫಲ್ಯಗಳನ್ನು ಅಳೆಯುವಲ್ಲಿ ಒಂದು ವಿಶ್ವಸನೀಯವಾದ ಮಾನದಂಡವಾಗಬಲ್ಲುದು. ಮಾತ್ರವಲ್ಲ, ಇಲ್ಲಿ ಮತ್ತೆ ಕಾವ್ಯದ ಶಬ್ದಾರ್ಥಾದ್ವೈತವು ಧ್ವನಿಸಿದೆ. ಜೊತೆಗೆ ಶಬ್ದವೆಂಬ ರೂಪವು ಅರ್ಥವೆಂಬ ಸ್ವರೂಪಕ್ಕೆ ಸರ್ವಾತ್ಮನಾ ವ್ಯಂಜಕವಾಗಿರಬೇಕೆಂಬ ಅಂಶವೂ ದೃಢವಾಗಿದೆ. ಈ ಪ್ರಕ್ರಿಯೆಯಲ್ಲಿ ನಮಗೆಟುಕಬಲ್ಲ ಮೂರ್ತದ್ರವ್ಯದ ಪರಾಕಾಷ್ಠೆಯೆನಿಸಿದ ಕಾವ್ಯವು ಅಮೂರ್ತದ್ರವ್ಯವಾದ ರಸಾನುಭೂತಿಗೆ ಅದೆಷ್ಟು ಮುಖ್ಯವೆಂಬ ತಥ್ಯವೂ ಪ್ರಸ್ಫುಟವಾಗಿದೆ. ಮೂಲತತ್ತ್ವಗಳ ವಿವರಣೆಯಲ್ಲಿ ಇಂಥ ಹದವನ್ನು ಮತ್ತೆ ಮತ್ತೆ ಕಾಣಿಸುವ ಭಟ್ಟರು ವಾದಕ್ಕೆ ನಿಂತಾಗ ಅತಿಗಳಲ್ಲಿ ಸುಳಿಯುವುದು ಖೇದಾಸ್ಪದ. ಅದೆಷ್ಟೋ ಬಾರಿ ಪೂರ್ವಸೂರಿಗಳಲ್ಲಿ ತಾವೇ ಆರೋಪಿಸಿಕೊಂಡ ಆತ್ಯಂತಿಕವೈರುದ್ಧ್ಯದ ಕಾರಣ ಇಂಥ ತೀವ್ರಗಾಮಿತ್ವವು ಅವರಲ್ಲಿ ತೋರುವುದೆನ್ನಬೇಕು.
* * *
ಭಟ್ಟರು ಸ್ವಭಾವೋಕ್ತಿ ಮತ್ತು ಅತಿಶಯೋಕ್ತಿಗಳ ವಿವೇಚನೆಯನ್ನು ಮಾಡುತ್ತ ಇದು ಸರಳತೆ ಮತ್ತು ವರ್ಣನೆಗಳ ನಡುವಣ ಹೋರಾಟವೆಂದು ಅಭಿಪ್ರಾಯಿಸುತ್ತಾರೆ (ಪು. ೩೬). ಇದೂ ಅವರ “ಪೂರ್ವಾಶ್ರಮ”ದ ಅಭಿಪ್ರಾಯವೇ. ಆದರೆ ಇದನ್ನು ಅವರು ಪೂರ್ವಪಕ್ಷೀಕರಿಸದ ಕಾರಣ ನಾವಿಲ್ಲಿ ಪುನರ್ವಿಮರ್ಶಿಸಬೇಕಾಗಿದೆ. ಮೇಲಣ ನಿಲವು ಕೆಲಮಟ್ಟಿಗೆ ಉಪಾದೇಯವೇ ಆದರೂ ಅತಿಶಯೋಕ್ತಿಯನ್ನು ಬರಿಯ ವರ್ಣನೆಯೆಂದೂ ಸ್ವಭಾವೋಕ್ತಿಯನ್ನು ಕೇವಲ ಸರಳತೆಯೆಂದೂ ಸಮೀಕರಿಸುವುದು ಸಾಧುವಲ್ಲ. ಏಕೆಂದರೆ ಇವೆರಡರಲ್ಲಿಯೂ ಉಭಯಗುಣಗಳಿವೆ. ಮಾತ್ರವಲ್ಲ, ಕವಿವಿವಕ್ಷೆಯಿಂದ ಅತಿಶಯೋಕ್ತಿಯೇ ಸರಳವಾಗಿ, ಸ್ವಭಾವೋಕ್ತಿಯೇ ವರ್ಣನಾತ್ಮಕವಾಗಿ ತೋರುವ ಸಂದರ್ಭಗಳು ಸಮೃದ್ಧ.
* * *
ವಕ್ರೋಕ್ತಿಯನ್ನು ಕುರಿತು ಭಟ್ಟರು ಹೇಳುತ್ತ ಅದು ಅನುಭವ-ಅಭಿವ್ಯಕ್ತಿಗಳ ಸಾಮರಸ್ಯವನ್ನು ಎತ್ತಿಹಿಡಿಯುವ ಪ್ರಯತ್ನವೆಂದು ಸುಂದರವಾಗಿ ವಿವರಿಸಿದ್ದಾರೆ (ಪು. ೯೨-೯೩). ಇಲ್ಲಿಯೇ ಅನುಭವ, ಅಭಿವ್ಯಕ್ತಿ, ಅಪೂರ್ವತೆ, ಸಹೃದಯಹೃದಯಾಹ್ಲಾದ, ಸಹಜತೆ, ಸಾಂಪ್ರದಾಯಿಕತೆ, ಲೌಕಿಕ, ಪಾರಮಾರ್ಥಿಕ ಮುಂತಾದ ಕೆಲವನ್ನು ಭಾರತೀಯಸಂವೇದನೆಯ ಮೂಲಘಟಕಗಳೆಂದು ಹೆಸರಿಸಿರುವುದೂ ಸೊಗಸಾಗಿದೆ.
[1] ನೋಡಿ: “ಭಾರತೀಯಸಂವೇದನೆ: ಸಂವಾದ”, ಸಂ. ಪಾದೇಕಲ್ಲು ವಿಷ್ಣುಭಟ್ಟ. ಉಡುಪಿ: ರಾಷ್ಟ್ರಕವಿ ಗೋವಿಂದಪೈ ಸಂಶೋಧನಕೇಂದ್ರ, ೨೦೧೨
To be continued.