‘ಮಣ್ಣಿನ ಕನಸು’: ಒಂದು ಸಮೀಕ್ಷೆ - 6
ಉದಯನನಂಥ ಅಪ್ರತಿಮ ಕಲಾವಿದನ ಬಗೆಗೆ ಸ್ವತಃ ಕಲಾವಿದೆಯೂ ಕಲಾಪ್ರೇಮಿಯೂ ಆಗಿದ್ದ ವಾಸವದತ್ತೆಯ ಅಭಿಮಾನ, ಆಕರ್ಷಣೆಗಳು ಎಲ್ಲ ಕಾಲದಲ್ಲಿಯೂ ಸಹಜವಾದದ್ದು. ಅವಳು ತನ್ನ ತಾಯಿಯ ನೆರವಿನಿಂದ ತಂದೆಯನ್ನು ಒಪ್ಪಿಸಿ ಉದಯನನನ್ನು ಗುರುವಾಗಿ ಪಡೆದು ವೀಣಾವಾದನ ಕಲಿಯುತ್ತಿದ್ದಳು. ಹೀಗೆ ಮೆಚ್ಚುಗೆ ಪ್ರೇಮವಾಗಿ ಪ್ರಗತಿ ಹೊಂದಿತ್ತು. ಪಾಲಕನ ಕುತಂತ್ರ ತಿಳಿದ ಕೂಡಲೇ ವಾಸವದತ್ತೆ ತನ್ನ ಗುರು ರೇಭಿಲನನ್ನು ಪ್ರಾರ್ಥಿಸಿ ಹೇಗಾದರೂ ಮಾಡಿ ಈ ವಿಷಯವನ್ನು ಯೌಗಂಧರಾಯಣನಿಗೆ ತಿಳಿಸಲು ಹೇಳುತ್ತಾಳೆ. ಅದರಂತೆ ಶರ್ವಿಲಕ ವಿಂಧ್ಯಾಟವಿಯನ್ನು ಕ್ರಮಿಸಿ ಕೌಶಾಂಬಿಗೆ ಬರುವಷ್ಟರಲ್ಲಿ ಉದಯನ ಸೆರೆಯಾಗಿರುತ್ತಾನೆ. ಈ ಸನ್ನಿವೇಶದಲ್ಲಿ ಮಹಾಮಾತ್ಯನ ವ್ಯಕ್ತಿತ್ವದ ವಿಶ್ವರೂಪದ ಪರಿಚಯ ನಮಗಾಗುತ್ತದೆ.
