ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 3)

ಪಾರ್ಥನ ಶರಕೌಶಲ, ಚಾಪವಿದ್ಯಾಪರಿಣತಿ, ಅಸ್ತ್ರಗಳಲ್ಲಿನ ಪ್ರಾವೀಣ್ಯ, ದುರ್ಯೋಧನನಲ್ಲಿ ಭಯ, ಮತ್ಸರಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ.  ಆ ಸಮಯದಲ್ಲಿ, ಕರ್ಣನ ಶರಕೌಶಲ, ಚಾಪವಿದ್ಯಾಪ್ರಾವೀಣ್ಯ ದುರ್ಯೋಧನನನ್ನು ಆಕರ್ಷಿಸುತ್ತದೆ.  ಅರಸುಕುವರರ ಜೊತೆಗೆ ಹೀನಕುಲದ ಕರ್ಣ ಯೋಗ್ಯನಲ್ಲವೆಂದಾಗ ತಕ್ಷಣವೇ ದುರ್ಯೋಧನ ಕರ್ಣನನ್ನು ಭದ್ರಾಸನದಲ್ಲಿ ಕುಳ್ಳರಿಸಿ ಮೂರ್ಧಾಭಿಷೇಚನ ಮಾಡಿ ಅರಸು ಪದವಿಯನ್ನು ನೀಡುತ್ತಾನೆ. ಅಂಗದೇಶದ ಅರಸನಾಗುತ್ತಾನೆ ಕರ್ಣ. ದುರ್ಯೋಧನ ಈ ಅಧಿಕಾರವನ್ನು ಹೇಗೆ ಪಡೆದ?  ಅದೇ ಸಮಯದಲ್ಲಿ ಕುಂತಿಗೆ, ಈ ಕರ್ಣ, ತಾನು ಅಂದು ಗಂಗೆಯಲ್ಲಿತೇಲಿ ಬಿಟ್ಟ ತನ್ನ ಮಗನಿರಬಹುದೆಂಬ ಶಂಕೆಯೂ ಮೂಡುತ್ತದೆ.  ಅವನೇ ತನ್ನ ಮಗನೆಂದೆನಿಸಿದರೂ "ಎನ್ನ ಮಗನೆನೆ ಬಂದುದಿಲ್ಲದು ತನ್ನ ವಶವೇ ವಿಷ್ಣುಮಾಯೆಯ ಬಿನ್ನಣವಲೇ” (ಆದಿ ಪರ್ವ, 7. 53) ಎಂದು ಮಾತು ಬಿಗಿದು ಮೂರ್ಛಾಪನ್ನೆಯಾಗುತ್ತಾಳೆ ಕುಂತಿ.  ಅಸ್ತ್ರವಿದ್ಯಾಪ್ರದರ್ಶನ ಒಂದು ಪ್ರಮುಖ ಘಟ್ಟವಾಗಿ ದುರ್ಯೋಧನನ ಸ್ವಭಾವದೊಳಗಡಗಿರುವ ಸ್ನೇಹ, ಔದಾರ್ಯಗಳ ಪರಿಚಯವನ್ನೂ ಮಾಡಿಸುತ್ತದೆ.  ಕರ್ಣನ ಕುಲದ ಬಗೆಗೆ ತನ್ನ ಪರಮವೈರಿ ಭೀಮನಾಡುವ ಕುಲಹೀನತೆಯ ಮಾತುಗಳು ದುರ್ಯೋಧನನ್ನು ರೊಚ್ಚಿಗೇಳಿಸುತ್ತದೆ.  ದುರ್ಯೋಧನ ಗುಡುಗುತ್ತಾನೆ ಭೀಮನ ತಂದೆ “ಪಾಂಡುವೋ ಪವನನೋ, ಕೃಪನ ಜನ್ಮ ಹೇಗೆ? ದ್ರೋಣರ ತಾಯಿ ಯಾರು ಎಂದೂ ಕೇಳುತ್ತಾನೆ (ಆದಿ ಪರ್ವ, 7.57).  ಕೋಪದ ಸಕಾರಾತ್ಮಕ ಗುಣವನ್ನು ದುರ್ಯೋಧನ ಕರ್ಣನಿಗೆ ರಾಜ್ಯಾಭಿಷೇಕ ಮಾಡುವಲ್ಲಿ ಕಾಣುತ್ತೇವೆ.  ದ್ರೋಣರು ತಮ್ಮ ಗುರುದಕ್ಷಿಣೆಯನ್ನಾಗಿ ದ್ರುಪದ ರಾಜನ ಸೆರೆಯನ್ನು ಬಯಸುತ್ತಾರೆ.  ಇಲ್ಲಿಯೂ ಜಯಗಳಿಸುವವರು ಭೀಮ, ಅರ್ಜುನಾದಿ ಪಾಂಡವರು.  ಇದು ಕೌರವನಲ್ಲಿ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ.  ನಂತರವೇ ಅರಗಿನರಮನೆಯ ನಿರ್ಮಾಣವಾಗುವುದು.  ಹೀಗಾಗಿ ಈ ಶಸ್ತ್ರ ವಿದ್ಯಾ ಪ್ರದರ್ಶನ ಕೌರವ ಪಾಂಡವರ ನಡುವಿನ ಹಗೆತನ ಅಸೂಯೆಗಳು ಫಲಿಸಲು ವೇಗವರ್ಧಕವಾಗುತ್ತದೆ.  ಕುಮಾರವ್ಯಾಸ ಈ ಶಸ್ತ್ರ ಅಸ್ತ್ರ ಪ್ರದರ್ಶನದ ಶುಭಾರಂಭ ಕಹಿಮುಕ್ತಾಯವನ್ನು “ಮಂಗಳದ ಬೆಳೆಗಿಂಗಳಿನ ಮಳೆ ಸುರಿದುದೆ ಮಹಾದೇವ” (ಆದಿ ಪರ್ವ, 7.36) ಎಂದು ವರ್ಣಿಸುತ್ತಾನೆ.

ದುರ್ಯೋಧನನಿಗೆ ಭೀಮಾರ್ಜುನರು ದ್ರುಪದನನ್ನು ಹೆಡೆಮುರಿ ಕಟ್ಟಿ ಗುರುದಕ್ಷಿಣೆಯಾಗಿ ಒಪ್ಪಿಸಿದ್ದನ್ನು ಮರೆಯಲಾಗುವುದಿಲ್ಲ. ಸಮರದಲ್ಲಿ ತಮಗಾದ ಪರಾಭವ ಅವನನ್ನು ಚುಚ್ಚಿ ನೋಯಿಸುತ್ತದೆ.  ಅದರಲ್ಲಿಯೂ ಭೀಮನ ಇರವಂತೂ “ವನಜ ವನದಲಿ ತುರುಚೆ, ಕಬ್ಬಿನ | ಬನದಿ ಕಡಸಿಗೆ. . .” (ಆದಿ ಪರ್ವ, 8.5) ಇತ್ಯಾದಿಗಳಂತೆ ಕಾಡುತ್ತದೆ.  ಶಕುನಿಯ ದುಷ್ಪ್ರೇರಣೆಯಿಂದಾಗಿ, ಧೃತರಾಷ್ಟ್ರನ ಬಳಿ ಬಂದು ಅಳುತ್ತಾನೆ.  ಕುರುಡುದೊರೆ ಮೊದಲು ಒಪ್ಪದಿದ್ದರೂ, ಮಗನ ಮೇಲಿನ ಕುರುಡು ಪ್ರೇಮದಿಂದ, ಅರ್ಧರಾಜ್ಯ ಕೊಟ್ಟ ನಾಟಕವಾಡಿ ಲಾಕ್ಷಾಭವನದಲ್ಲಿ ಪಾಂಡವನಾಶದ ಯೋಜನೆಗೆ ಒಪ್ಪುತ್ತಾನೆ.  ಹಸ್ತಿನಾಪುರವನ್ನು ಬಿಡುವ ಸಮಯಕ್ಕೆ ಧರ್ಮಜನಿಗೆ ಇಪ್ಪತ್ತೊಂಬತ್ತು ವರ್ಷವೆಂದು ಹೇಳುತ್ತಾನೆ ಕುಮಾರವ್ಯಾಸ.  ಹದಿನಾರು ವರ್ಷಗಳು ಕಾಡಿನಲ್ಲಿ ಕಳೆದು, ನಂತರ ಹದಿಮೂರು ವರ್ಷಗಳ ಹಸ್ತಿನಾಪುರದ ವಾಸದಲ್ಲಿ ಪಾಂಡವ ಕೌರವರ ನಡುವೆ ಮೊಳೆತ ಮತ್ಸರದ ಗಿಡ ಲಾಕ್ಷಾಗೃಹವೆಂಬ ಮಿರುಮಿರುಗುವ ವಿಷಫಲದಲ್ಲಿ ಪರ್ಯವಸಾನವಾದರೂ, ಕೊಲ್ಲುವ ಕೈಗಳಿಗಿಂತ ಕಾಯುವ ಕೈಗಳೇ ಬಲವಾಗಿ ಪಾಂಡವರು ಉಳಿದುಕೊಳ್ಳುತ್ತಾರೆ.  ವಿದುರ ಅಪಾಯದ ಸೂಚನೆಯನ್ನು ಸಂಕೇತದ ಮೂಲಕ ಸೂಚಿಸುವುದಲ್ಲದೇ, ನಂಬಿಕೆಯ ಖನಕನನ್ನು ಕಳಿಸಿ ಪಾಂಡವರ ಸೆಜ್ಜೆಮನೆಯಿಂದ ಹೊರಗೆ ಹೋಗಲು ಗುಪ್ತ ಮಾರ್ಗವೊಂದನ್ನು ತೆಗೆಸಿರುತ್ತಾನೆ.  ಪುರೋಚನ ಅರಮನೆಗೆ ಕಿಚ್ಚಿಕ್ಕಲು ಕಾಯುತ್ತಿರುವಾಗ ಭೀಮ ತಾನೇ ಬೆಂಕಿ ಇಟ್ಟು, ಕುಂತಿ ಮತ್ತು ಸೋದರರೊಡನೆ ಪಾರಾಗುತ್ತಾನೆ.  ಲಾಕ್ಷಾಗೃಹಯೋಜನೆಯ ಹಂತದಿಂದ ನಾವು ಕಾಣುವುದು ಹದಿಹರೆಯದ ಹುಡುಗರ ಹಗೆತನವನ್ನಲ್ಲ.  ಕೌರವ ಪಾಂಡವರ ಪ್ರೌಢಾವಸ್ಥೆಯೊಂದಿಗೆ ಅವರ ನಡುವಿನ ಮತ್ಸರ, ದ್ವೇಷಗಳೂ ಪ್ರೌಢಾವಸ್ಥೆ ತಲುಪುತ್ತವೆ.  ಈಗ ದುರ್ಯೋಧನನ ಮನಸ್ಸನ್ನಾವರಿಸಿರುವುದು ಹೇಗಾದರೂ ಮಾಡಿ ಪಾಂಡವರ ಮೂಲೋಚ್ಚಾಟನೆ ಮಾಡಬೇಕೆಂಬ ಛಲ.

ಈ ಎರಡೂ ಗುಂಪಿನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಗುಂಪಿನ ಸದಸ್ಯರಿಗೆ ತಮ್ಮ ತಮ್ಮ ನಾಯಕನ ಬಗೆಗಿರುವ ನಂಬಿಕೆ ಮತ್ತು ನಿಷ್ಠೆ.  ಧರ್ಮರಾಯನ ಬಗೆಗೆ ಆತನ ತಮ್ಮಂದಿರಿಗಿರುವ ಪ್ರೀತಿ, ನಿಷ್ಠೆ, ಗೌರವಗಳು, ಕೌರವನಲ್ಲಿ ಆತನ ತಮ್ಮಂದಿರಿಗೂ ಸಹ ಇದೆ.  ದ್ರೌಪದೀವಸ್ತ್ರಾಪಹರಣ ಸಮಯದಲ್ಲಿ ಭೀಮ ಧರ್ಮಜನಿಗೆ ಎದುರು ಮಾತನಾಡುತ್ತಾನೆ.  ಯುದ್ಧ ನಡೆಯುವಾಗ ಅರ್ಜುನ ಧರ್ಮಜನನ್ನು ಕೊಲ್ಲುವುದಾಗಿ ಹೇಳುತ್ತಾನೆ.  ಇವು ಕೇವಲ ಆ ಸಂದರ್ಭದಲ್ಲಿ ಆಡಿದ ಕೋಪದ ಮಾತುಗಳು ಮಾತ್ರ.  ದುರ್ಯೋಧನನ ಬಗೆಗೆ, ದ್ರೌಪದೀ ವಸ್ತ್ರಾಪಹರಣದ ಸಮಯದಲ್ಲಿ ವಿಕರ್ಣನೊಬ್ಬ ಮಾತ್ರ ಅಣ್ಣನನ್ನು ಖಂಡಿಸುತ್ತಾನೆ.  ಮತ್ತಾವ ಸೋದರನೂ ದುರ್ಯೋಧನನ ಯಾವ ಕಾರ್ಯಕ್ಕೂ ವಿರೋಧಿಸುವುದಿಲ್ಲ.  ಯುದ್ಧಾರಂಭದಲ್ಲಿ ಯುಯುತ್ಸು ಮಾತ್ರ ಪಕ್ಷ ತೊರೆದು ಪಾಂಡವ ಪಕ್ಷಕ್ಕೆ ಸೇರುತ್ತಾನೆ. 

ಲಾಕ್ಷಾಭವನದಲ್ಲಿ ಬೆಂದುಹೋದರೆಂದು ಕೊಂಡಿದ್ದ ಪಾಂಡವರು, ಫೀನಿಕ್ಸ್ ಪಕ್ಷಿಯಂತೆ ಮತ್ತು ಬದುಕಿದ್ದಾರೆಂಬ ಸುದ್ದಿಯಿಂದ, ದುರ್ಯೋಧನನ ಒಡಲಲ್ಲಿ ಮತ್ತೆ ಬೆಂಕಿ ಭುಗಿಲೇಳುತ್ತದೆ.  ಭೀಮ ಹಿಡಿಂಬಕನನ್ನು ಕೊಂದು ಹಿಡಿಂಬೆಯನ್ನು ಮದುವೆಯಾಗಿ ಘಟೋತ್ಕಚನನ್ನು ಮಗನಾಗಿ ಪಡೆದು, ಏಕಚಕ್ರ ನಗರಿಯಲ್ಲಿ ಬಕನನ್ನು ಕೊಂದು, ವಿಪ್ರವೇಶದಲ್ಲಿ ದ್ರೌಪದೀ ಸ್ವಯಂವರಕ್ಕೆ ಬಂದು, ಅರ್ಜುನ ಮತ್ಸಯಂತ್ರ ಭೇದಿಸಿ, ದ್ರೌಪದಿಯೊಡನೆ ವಿವಾಹವಾಗಿ, ಒಂದು ವರ್ಷ ಪಾಂಚಾಲನಗರಿಯಲ್ಲಿದ್ದು, ದ್ರೌಪದೀ ಸಮೇತ ಹಸ್ತಿನಾಪುರಕ್ಕೆ ಹಿಂದಿರುಗಿದಾಗ, ದುರ್ಯೋಧನನ ಮನಸ್ಸಿನಲ್ಲಿ ಏನು ನಡೆದಿರಬಹುದೆಂಬುದನ್ನು ಯೋಚಿಸಲೂ ಸಾಧ್ಯವಿಲ್ಲ.  ಆದರೂ, ವಿದುರ, ಭೀಷ್ಮರ ಆಶಯದಂತೆ, ಐದು ವರ್ಷಗಳ ಕಾಲ ಎಲ್ಲರೂ ಒಂದಾಗಿ ಬಾಳುತ್ತಾರೆ.  ಕುಮಾರವ್ಯಾಸನ ಪ್ರಕಾರ, ಇಷ್ಟು ಜನ ರಾಜ ಕುಮಾರರೂ ಬೇಟೆ, ವೈಹಾಳಿ, ಜೂಜುಗಳಲ್ಲಿ ವರ್ಷಪಂಚಕವನ್ನು ಕಳೆಯುತ್ತಾರೆ. 

ಪಾಂಡವ ಕೌರವರ ನಡುವಿನ ವೈಮನಸ್ಯ ಐದುವರ್ಷಗಳು ಮಲಗಿದ್ದಿತೆನಿಸುತ್ತದೆ.  ಬಹುಶ: ಮದುವೆ, ಹೆಂಡತಿ ಮಕ್ಕಳು, ಯೌವನದ ಸುಖಭೋಗಗಳನ್ನನುಭವಿಸುವುದರಲ್ಲಿ ಮಗ್ನರಾಗಿ, ಮಸಗುತ್ತಿದ್ದ ಮತ್ಸರಕ್ಕೆ ತೆರೆಬಿದ್ದಿರಬಹುದು.  ಕುಮಾರವ್ಯಾಸನಲ್ಲಿ ತಿಳಿದು ಬರುವ ನಿಖರವಾದ ಕಾಲದ ವಿವರಗಳು ದುರ್ಯೋಧನನ ಬಗೆಗೆ ಸಾಮಾನ್ಯವಾಗಿ ಕಂಡುಬರುವ ನಮ್ಮ ದುರಾಗ್ರಹವನ್ನು ಕಡಿಮೆ ಮಾಡುತ್ತವೆ.  ಒಳಗೊಳಗೇ ಏನು ಹೊಗೆಯಾಡುತ್ತಿತ್ತೋ ತಿಳಿದು ಬರುವುದಿಲ್ಲ.  ಬೇರೆ ಬೇರೆ ರಾಜ್ಯಗಳಲ್ಲಿದ್ದರೆ ದಾಯಾದಿಗಳಲ್ಲಿ “ಸೇತುವೆ ದೃಢವಹುದು” ಎಂದು ಧೃತರಾಷ್ಟ್ರ, ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ಆಳ್ವಿಕೆ ಮಾಡುವೆಂತೆಯೂ, ದುರ್ಯೊಧನ ಹಸ್ತಿನಾಪುರದಲ್ಲಿಯೇ ಇರುವಂತೆಯೂ, ರಾಜ್ಯವನ್ನು ಭಾಗ ಮಾಡುತ್ತಾನೆ.  ಒಳಗೊಳಗೇ ಮತ್ಸರ ಹೊಗೆಯಾಡುತ್ತಿದ್ದರೂ, ಬೇರೆ ಬೇರೆಯಾಗಿ ಧರ್ಮರಾಜ, ದುರ್ಯೋಧನರು ಆಡಳಿತ ನಡೆಸತೊಡಗಿ, ಹಗೆತನ ಕಡಿಮೆಯಾಗಬಹುದಿತ್ತೇನೋ. ಇಂದ್ರಪ್ರಸ್ಥ ನಗರಿಯ ವೈಭವ, ಯುಧಿಷ್ಠರನ ರಾಜ್ಯೋದಯದಲ್ಲಿ ಧರ್ಮ ನಾಲ್ಕು ಪಾದಗಳಲ್ಲಿ ಅಂಕುರಿಸಿದೆ ಎನ್ನುವ ಪ್ರತೀತಿ, ಅರ್ಜುನ ಸುಭದ್ರೆಯರ ವಿವಾಹ, ಖಾಂಡವದಹನ, ಒಂದೊಂದು ಘಟನೆಯೂ, ಸುದ್ದಿಯೂ, ಪಾಂಡವರ ಹಿರಿಮೆಯನ್ನೂ, ಏಳಿಗೆಯನ್ನೂ ಸಾರುತ್ತಿರುತ್ತದೆ.  ಕಣ್ಣೆದುರಿಗಿದ್ದುದಕ್ಕಿಂತಲೂ, ಹೊಸದಾಗಿ ಸ್ಥಾಪಿಸಿದ ರಾಜ್ಯದಲ್ಲಿ ಯಶಸ್ಸು ಸಾಧಿಸುತ್ತಿರುವ ಪಾಂಡವರು ದುರ್ಯೋಧನನ ಮನಸ್ಸಿನ ಮುಳ್ಳಾಗುತ್ತಾರೆ.  ಮಲಗುತ್ತಿದ್ದ ಮತ್ಸರ ಮತ್ತೆ ಹೆಡೆಯೆತ್ತುತ್ತದೆ ದುಯೋಧನನಲ್ಲಿ.  ಧರ್ಮರಾಯ ಕೈಗೊಳ್ಳುವ ರಾಜಸೂಯಯಾಗ ಈ ಮತ್ಸರಕ್ಕೆ ಮತ್ತಷ್ಟು ಆಜ್ಯ ಹುಯ್ಯುತ್ತದೆ.  ರಾಜಸೂಯ ಯಾಗದಿಂದಾಗಿ ಪಾಂಡವರ ಪರಾಕ್ರಮದ ಪರಿಚಯ ಮತ್ತಷ್ಟು ಸ್ಪಷ್ಟವಾಗಿ ಆಗುತ್ತದೆ.  ಭೀಮಾರ್ಜುನ ನಕುಲ ಸಹದೇವರು ರಾಜ್ಯರಾಜ್ಯಗಳಲ್ಲಿ ತಿರುಗಿ ರಾಜಾಧಿರಾಜರುಗಳನ್ನು ಮಣಿಸಿ ಇಲ್ಲವೇ ಸ್ನೇಹದಿಂದ ಒಲಿಸಿ ಕಪ್ಪಕಾಣಿಕೆಗಳನ್ನು ತರುವುದು, ಅರ್ಜುನನ ಸಾಹಸಗಳು, ಭೀಮ ಜರಾಸಂಧರನ್ನು ಕೊಲ್ಲುವುದು, ಇವುಗಳನ್ನು ಕೇಳಿದ ದುರ್ಯೋಧನನ ಮನಸ್ಸಿನಲ್ಲಿ ಅಡಗಿದ್ದ ಭಯ ಮತ್ತೆ ಭುಗಿಲೇಳುತ್ತದೆ.  ತನ್ನ ಸಾಮ್ರಾಜ್ಯದ ಉಳಿವಿಗಾಗಿ ಭಯ, ಮತ್ತೊಂದೆಡೆ ದಾಯಾದಿಗಳಾದ ಪಾಂಡವರ ಏಳಿಗೆಯ ಕಂಡು ಮತ್ಸರ ಇವುಗಳು ದುರ್ಯೋಧನನ ಮನಸ್ಸನ್ನು ಚೇಳಿನ ವಿಷದಂತೆ ನಂಜೇರಿಸುತ್ತವೆ.  ರಾಜಸೂಯ ಯಾಗದ ವೈಭವ, ಭೀಷ್ಮಾದಿಗಳು ಪಾಂಡವರ ಪಕ್ಷಪಾತಿಯಾದ ಕೃಷ್ಣನನ್ನು ಸ್ತುತಿಸಿ, ಅವನಿಗೇ ಅಗ್ರಪೂಜೆ ಸಲ್ಲಿಸುವಂತೆ ತಿಳಿಸಿ, ಅದನ್ನು ಒಪ್ಪದ ಶಿಶುಪಾಲನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಸಂಹರಿಸುವುದು, ಈ ಎಲ್ಲ ಘಟನೆಗಳನ್ನು ನೋಡುತ್ತಾ ನೋಡುತ್ತಾ, ದುರ್ಯೋಧನನಲ್ಲಿ ಮತ್ಸರ, ಅಸೂಯೆ ಭಯಗಳು ಹೊಣೆಯಾಡತೊಡಗುತ್ತವೆ.  ಈ ಹೊಗೆ ಭುಗಿಲು ಭುಗಿಲೆಂದು ಉರಿಯುವಂತೆ ಮಾಡುವುದು ದ್ರೌಪದಿ ಮತ್ತವಳ ಸಖೀಜನರ ಪರಿಹಾಸ.   ದುರ್ಯೋಧನ ಈ ಲಲನೆಯರ ಪರಿಹಾಸಕ್ಕೆ ಗುರಿಯಾಗುವ ಸಂದರ್ಭವನ್ನು ಕುಮಾರವ್ಯಾಸ ನೇರವಾಗಿ ವರ್ಣಿಸುವುದಿಲ್ಲ.  ಬದಲಾಗಿ ರಾಜಸೂಯ ಯಾಗ ಮುಗಿದ ಮೇಲೆ ಅತ್ಯಂತ ಖಿನ್ನನಾಗಿ ಹಸ್ತಿನಾವತಿಗೆ ಹಿಂತಿರುಗಿದ ದುರ್ಯೋಧನನಿಂದಲೇ, ಅವನು ಅನುಭವಿಸಿದ ಪರಿಭವವನ್ನು, ಅದರಿಂದುಟಾಗಿರುವ ಅವನ ಮನೋವ್ಯಥೆಯನ್ನು, ಮನದ ಸ್ಥಿತಿಯನ್ನು ಧೃತರಾಷ್ಟ್ರನೆದುರು ಹೇಳಿಸುತ್ತಾನೆ.  ಯಾಗ ಮುಗಿಸಿ ಬಂದ ದುರ್ಯೋಧನ

ಕೇಳು ಜನಮೇಜಯ ಧರಿತ್ರೀ-

ಪಾಲ ಕೌರವರಾಯನಿತ್ತಲು

ಮೇಲುಮುಸುಕಿನ ಹೊತ್ತ ದುಗುಡದ ಹೊಗರ ಹೊಗೆಮುಖದ |

ತಾಳುಗೆಯ ನಿರ್ದವದ ಮತ್ಸರ

ದೇಳಿಗೆಯಲಿಕ್ಕಡಿಯ ಮನದ ನೃ

ಪಾಲ ಹೊಕ್ಕನು ನಡುವಿರುಳು ನಿಜರಾಜಮಂದಿರವ || (ಸಭಾ ಪರ್ವ, 12.1)

ಆರತಿ, ಉಪ್ಪಾರತಿ, ಪಾಯವಧಾರು, ಮಂಗಳವಚನದೈದೆಯರ ದೂರದಲಿ ನಿಲಿಸಿ, ಸಿರಿಮಂಚದಲಿ ಪವಡಿಸಿದ (ಸಭಾ ಪರ್ವ, 12.2) ಅರಸ, ಪತ್ನಿ ಭಾನುಮತಿ ಬಂದರೂ ಮೌನಿ.  “ಭಾನುವಿಂಗರ್ಘ್ಯಾದಿ ಕೃತ್ಯವ | ನೇನುವನು ಮನ್ನಿಸದೆ ಚಿತ್ತದೊ | ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ |” (ಸಭಾ ಪರ್ವ, 12.3).  ಬೇಟೆ, ಮತ್ತಾವ ಮನರಂಜನೆಗೂ ಮನಗೊಡದೆ ತನ್ನ ಮಂದಿರದಲ್ಲಿ ಬಂದಿಯಂತೆ ಇರುವ ಕುಲಕುಲನೃಪಾಲನ ಬಗೆಗೆ ಜನರಲ್ಲಿ ಅನೇಕ ಊಹಾಪೋಹಗಳೇಳುತ್ತವೆ.  ಸ್ತ್ರೈಣ ಚೇಷ್ಟಿತ, ಕ್ಷೀಣ ರೋಗಿತ, ವಿಷ ಪ್ರಯೋಗದಲಿ ಪ್ರಾಣಶೋಷಿತ (ಸಭಾ ಪರ್ವ, 12.7) ಎಂದೆಲ್ಲಾ ಜನ ಮಾತನಾಡತೊಡಗುತ್ತಾರೆ.  ಸತ್ಯವನೆಂದು ತಿಳಿಯಲು ಬಲವಂತದಿಂದ ಒಳಬಂದು ನುಡಿಸಿದ ಶಕುನಿಗೆ ಅರಸ ಹೇಳುತ್ತಾನೆ “ಯಮ ಸೂನು ವೈಭವ ವಹ್ನಿದಗ್ಧ ಮ | ನೋನುಭಾವವನೇಕೆ ನುಡಿಸುವಿರಿ?|”. (ಸಭಾ ಪರ್ವ, 12.12)  ಶಕುನಿ, ಕರ್ಣರ ಸಲಹೆಯಂತೆ ದುರ್ಯೋಧನ ತನ್ನ ಅಳಲನ್ನು, ಪರಿಭವವನ್ನು ಕುರುಡು ತಂದೆಯೆದುರು ಹೇಳಿಕೊಳ್ಳುತ್ತಾನೆ.  ಈ ಸಂದರ್ಭದಲ್ಲಿ ದುರ್ಯೋಧನನಿಂದ, ಧರ್ಮರಾಯನ ಸಭಾಗೃಹದ ವಾಸ್ತುಶಿಲ್ಪದ ಅದ್ಭುತವನ್ನೂ, ಬೆರಗುಗೊಳಿಸುವ, ಗೊಂದಲವುಂಟುಮಾಡುವ ತಾಂತ್ರಿಕ ವಿನ್ಯಾಸವನ್ನೂ ಧೃತರಾಷ್ಟ್ರನಿಗೆ ಪರಿಚಯಿಸುತ್ತಾನೆ ಕುಮಾರವ್ಯಾಸ.  ಅವನನುಭವಿಸುವ ಪರಿಭವ ಕೂಡ ಓದುಗನಿಗೆ ತಿಳಿಯುವುದು ಈಗಲೇ.  ಕುಂತೀ ಸೂನುಗಳ ಸಾಮರ್ಥ್ಯ ನುಂಗಲಾರದ ತುತ್ತಾದರೆ, ಸಭೆಯಲ್ಲಿನ ದ್ರೌಪದಿಯ ಪರಿಹಾಸ ಒಳಗೆ ಸುಡುವ ಬೆಂಕಿಯಾಗುತ್ತದೆ ದುರ್ಯೋಧನನಿಗೆ.  ಕಥಾ ನಿರೂಪಣೆಯ ವಿನ್ಯಾಸದಿಂದ ಈ ಭಾಗ ಅತ್ಯಂತ ಪ್ರಭಾವಶಾಲಿಯಾಗಿದೆ.  “ತಾನು ನಪುಂಸಕನಾದೆ” (ಸಭಾ ಪರ್ವ, 12.29) ನೆಂದೆನಿಸುತ್ತದೆ ಅವನಿಗೆ.  “ಲಜ್ಜಾ ಮಾನಿನಿಗೆ ತನ್ನೊಕ್ಕತನವಿಂದಿಳಿದು ಹೋಯ್ತು” (ಸಭಾ ಪರ್ವ, 12.29) ಎನ್ನುತ್ತಾನೆ.  ಹಣೆಯ ಬುಗುಟು, ಓಲಗದ ಸಭೆಯಲ್ಲಿ ನೆನೆದ ತನ್ನ ಪಂಚೆಗೆ ಬದಲಾಗಿ ಯುಧಿಷ್ಥಿರ ತೆಗೆಸಿಕೊಟ್ಟ ‘ಮಡಿಯ ನವಾಂಬರ’, ಓಲಗದ ಸೂಳೆಯರವರ ಸೂಳಿನ ನಗೆ ನೆನೆನೆನೆದು (ಸಭಾ ಪರ್ವ, 12.30) ದುರ್ಯೋಧನನ ಮನಸ್ಸು ಜರ್ಝರಿತವಾಗುತ್ತದೆ.  ‘ಹಣೆಯ ಬುಗುಟು’, ‘ನೆನೆದ ಪಂಚೆಗೆ ಕಾರಣವೇನೆಂದು ಕುರುಡು ತಂದೆ ಕೇಳುತ್ತಾನೆ.  “. . . . ಸ್ಥಳವೆ ಜಲರೂಪದಲಿ ಜಲವೇ | ಸ್ಥಳದ ಪಾಡಿನಲ್ಲಿದ್ದುದು’ ದುರ್ಯೋಧನನಿಗೆ ಗೊಂದಲವುಂಟು ಮಾಡುತ್ತದೆ”. (ಸಭಾ ಪರ್ವ, 12.36)  . . . . ವಿಮಲ ಸ್ಫಟಿಕ ಭೂಮಿಯ ಕಂಡು ಕೊಳವೆಂದು ಬಗೆದು ಮುಂಜೆರಗನ್ನು ಸಂವರಿಸಿದಾಗ ದ್ರೌಪದೀ ಸಹಿತ ನಾರೀವೃಂದ ಗೊಳ್ಳೆಂದು ನಗುತ್ತದೆ. (ಸಭಾ ಪರ್ವ, 12.37)  ಸರೋವರವನ್ನು ಸ್ಫಟಿಕವೆಂದು ಕೊಂಡು ನೀರಲ್ಲಿ ಬಿದ್ದು ನೆನೆಯುತ್ತಾನೆ.  ಮತ್ತೆ ಗೊಳ್ಳೆನ್ನುತ್ತದೆ ನಾರೀ ವೃಂದ.  ಬಾಗಿಲಿದ್ದ ಕಡೆ ಬಾಗಿಲೆಂದರಿಯದೆ ಹಣೆಗಟ್ಟಿಸಿ ಕೊಳ್ಳುತ್ತಾನೆ.  ಬಾಗಿಲಿಲ್ಲದ ಕಡೆ ಬಾಗಿಲಿಗಾಗಿ ತಡಕಾಡುತ್ತಾನೆ. (ಸಭಾ ಪರ್ವ, 12.40-41)  ಈ ಅವಮಾನ ದುರ್ಯೋಧನನನ್ನು ಕಿತ್ತುತಿನ್ನುತ್ತದೆ.  ಈಗ ಅವನು ಅನುಭವಿಸುವುದು ಅರಸನೊಬ್ಬ, ಮತ್ತೊಬ್ಬ ಅರಸನ ತುಂಬು ಸಭೆಯಲ್ಲಿ, ಆ ಅರಸನ ಪತ್ನಿ ಮತ್ತು ಹೆಂಗೆಳೆಯರೆದುರು ಅನುಭವಿಸುವ ಅಪಮಾನದಿಂದುಂಟಾಗಿರುವ ಅತ್ಯಂತ ತೀಕ್ಷ್ಣವಾದ ಅಳಲು, ದ್ವೇಷ ಮತ್ತು ಅಂತಹ ಅರಸನನ್ನು, ಅವನ ಅನುಯಾಯಿಗಳನ್ನು ಹೇಗಾದರೂ ಮುಗಿಸಿಬಿಡಬೇಕೆಂಬ ಛಲ.

ಪಾಂಡವರನ್ನು ನೇರವಾಗಿ ವಿನಾಶಗೊಳಿಸಲು ಸಾಧ್ಯವಿಲ್ಲವೆಂದು ಅರಿವಾಗಿರುವುದರಿಂದ, ಶಕುನಿಯ ಕಪಟ ದ್ಯೂತದ ಸಲಹೆಗೆ ತನ್ನ ಕುರುಡು ತಂದೆಯನ್ನು ಒಪ್ಪಿಸುತ್ತಾನೆ.  ಸ್ನೇಹ ದ್ಯೂತಕ್ಕೆಂದು ಧರ್ಮರಾಯನನ್ನು ಕರೆಸದಿದ್ದರೆ “ಗಂಗೆಯಲಿ ಬಿದ್ದೊಡಲ ನೀಗುವೆ” ನೆನ್ನುತ್ತಾನೆ (ಸಭಾ ಪರ್ವ, 12.44).  ದ್ರೌಪದಿಯ ನಗೆ ಹೊಗೆಯಾಗಿ ಆವರಿಸಿ ಅವನ ಉಸಿರು ಕಟ್ಟಿಸುತ್ತದೆ.  “ಒಡ್ಡವಿಸಿತನ್ನಾಟ ನಗೆಯೊಳ | ಗಡ್ಡ ಬಿದ್ದಳು ಪಾಂಡುಪುತ್ರರ | ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲುಗುಣರು | . . ರೋಷದ ಗೊಡ್ಡು ನಾನಾದೆನು . . | (ಸಭಾ ಪರ್ವ, 12.43) ಎಂದು ವಿಲಪಿಸುತ್ತಾನೆ.  ಕಡೆಗೆ ಯುದಿಷ್ಠಿರ ಸಹಿತ ನೀನೇ ರಾಯನಾಗಿರು, ಅಥವಾ ದುಶ್ಯಾಸನನಿಗೆ ಪಟ್ಟಗಟ್ಟಿ ಸಂತಸಪಡಿ. . . (ಸಭಾ ಪರ್ವ, 12.45) ಎಂದಾಗ ಧೃತರಾಷ್ಟ್ರ ಸ್ವಲ್ಪ ಸಮಯ ದ್ವಂದ್ವದಲ್ಲಿ ಸಿಲುಕಿದರೂ ಕಡೆಗೆ ಪುತ್ರವ್ಯಾಮೋಹವೇ ಜಯಗಳಿಸುತ್ತದೆ.  ದುರ್ಯೋಧನ ನಾನಾ ರೀತಿಯಲ್ಲಿ ಮಾತುಗಳಾಡಿ ಧೃತರಾಷ್ಟ್ರ, ಮಣಿಯುವಂತೆ ಮಾಡುತ್ತಾನೆ.  ತನ್ನ ಉದ್ದೇಶವನ್ನು ಸ್ಪಷ್ಟವಾಗಿಯೇ ತಿಳಿಸುತ್ತಾನೆ”. 

 

ನೀ ಕರುಣದಿ ನಮ್ಮ ಸಲಹುವ

 ಡಾ ಕುಮಾರರ ಕರೆಸಿಕೊಟ್ಟರೆ

 ಸಾಕು ಮತ್ತೊಂದಿಹುದಲೇ ಪಾಂಚಾಲ ನಂದನೆಯ |

ನೂಕಿ ಮುಂದಲೆವಿಡಿದು ತೊತ್ತಿರೊ |

ಳಾಕೆಯನು ಕುಳ್ಳರಿಸಿದಂದು ವಿ

ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ ||  (ಸಭಾ ಪರ್ವ, 12.66)

 

ಸ್ನೇಹ ದ್ಯೂತದ ನೆವದಲ್ಲಿ ನಡೆವ ದ್ರೌಪದಿಯ ಈ ಭಂಗದ ಸಂಗತಿ ಧೃತರಾಷ್ಟ್ರನಿಗೆ ದ್ಯೂತ ನಡೆಯುವ ಮೊದಲೇ ತಿಳಿದಿರುತ್ತದೆ.  ಆದರೆ ಅವನ ಆಲೋಚನೆಗಳು ಹೀಗಿವೆ ದುರ್ಯೋಧನ ಮಾತನ್ನು “ಮುರಿವನೇ ಮುನಿದಿವರು ನೂರ್ವರು | ತೊರೆವರೆನ್ನನು, ತೊಡಕಿಸುವೆನೇ| ತರಿದು ಬಿಸುಡುವರಿವರು ಕೌರವ ಶತಕವನು |” (ಸಭಾ ಪರ್ವ, 12.69) ಹೀಗಾಗಿ ಕಪಟ ದ್ಯೂತದ ಮಹಾ ಯೋಜನೆ ಸಿದ್ಧವಾಗುತ್ತದೆ.

 

This is the third part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.

Author(s)

About:

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.

Prekshaa Publications

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhāni Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...