ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 7)

ಪಾಂಡವರಲ್ಲಿ ಭೀಮ, ಆಕಾರ ಮತ್ತು ಸ್ವಭಾವ ಎರಡರಲ್ಲಿಯೂ ವಿಶಿಷ್ಟನಾಗಿ ನಿಲ್ಲುತ್ತಾನೆ.  ಕಪಟ, ಕುತಂತ್ರಗಳಾಗಲೀ, ಇರದ ನೇರ ನುಡಿ ನೇರ ನಡೆಯವನು.  ಇವನ ಅಸಾಧ್ಯ ಹಸಿವಿನಿಂದಾಗಿ ಇವನಿಗೆ ವೃಕೋದರನೆಂಬ ಹೆಸರೂ ಸಹ ಇದ್ದಿತು.  ತನ್ನ ಮಗನ ಹಸಿವಿನ ಪ್ರಮಾಣ ಅರಿತಿದ್ದ ಕುಂತಿ, ಏಕಚಕ್ರನಗರದಲ್ಲಿ ಐವರು ಮಕ್ಕಳೂ ತಂದ ಭಿಕ್ಷೆಯಲ್ಲಿ ಅರ್ಧವನ್ನು ‘ಭೀಮ ಪಾಲು’ ಎಂದು ತೆಗೆದಿಡುತ್ತಿದ್ದಳು.  ಇಂಥ ಭೀಮ ದಿನ ಗಟ್ಟಳೆ ಉಪವಾಸ ಕೂಡ ಇರಬಲ್ಲವನಾಗಿದ್ದ.  ಬಕನಂತಹ ರಾಕ್ಷಸನನ್ನು, ಅದೊಂದು ವಿನೋದದ ಆಟವೆಂಬಂತೆ ತಣ್ಣಗೆ ಕೊಂದು ಬರುವ ಭೀಮ ಮಕ್ಕಳಿಂದ, ದೊಡ್ಡವರತನಕ ಎಲ್ಲರನ್ನೂ ಮುದಗೊಳಿಸುತ್ತಾನೆ.  ಭಿಕ್ಷಾನ್ನದ ರುಚಿ ಇರದ ಆಹಾರವನ್ನು ಅರೆಹೊಟ್ಟೆ ಉಂಡೂ ಉಂಡು ಬೇಸತ್ತಿದ್ದ ಭೀಮನಿಗೆ ಬಕನನ್ನು ಕೊಲ್ಲಲು ಹೊರಟಂದು ಸುಗ್ಗಿ.  ಗಾಡಿ ಅನ್ನ ಹಾಲು ತುಪ್ಪ ಭಕ್ಷ್ಯಗಳು ಅದೆಷ್ಟು ಆನಂದವಾಗಿರಬೇಡ. ಎಲ್ಲವನ್ನೂ ಉಂಡು, “ಮತ್ತೆ  ಶೇಷಾನ್ನದಲಿ ತೋರುತ ತುತ್ತುಗಳ ತೂಗುತ್ತ ಮಾರುತಿ ಮೆತ್ತಿಕೊಂಡನು ಬಾಯೊಳು. . .” (ಆದಿ ಪರ್ವ 10.32)

 ಇದನ್ನು ಕಂಡ ರಕ್ಕಸನಿಗೆ ಉಗ್ರಕೋಪ, ಮೇಲೆರಗಿದ ರಾಕ್ಷಸನೆದುರು ಇವನ ಪ್ರತಿಕ್ರಿಯೆ?

...ಬಂಡಿ ತುಂಬಿದ

ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ |

ವರ ಸಮಾಧಾನದಲಿ ಕೈದೊಳೆ-

ದುರವಣಿಪ ತೇಗಿದ ತರಂಗದ

ಪರಬಲಾಂತಕನೆದ್ದು ನಿಂತನು ಸಿಂಹನಾದದಲಿ || (ಆದಿ ಪರ್ವ 10.34)

 “ಉಂಡೆವೈ ಸಮಚಿತ್ತದಲಿ . . . ಇಂದಿನದು ಊಟ ಕಾಣಾ” (ಆದಿ ಪರ್ವ 10.35) ಎನ್ನುತ್ತಾ ಮದವೇರಿದ ಭೀಮ ಬಕನೊಡನೆ ಹೋರಾಡುತ್ತಾನೆ.  “ನೀನುಂಡ ಕೂಳಿನ ಕಡುಹ ತೋರೆಂದು” (ಆದಿ ಪರ್ವ 10.37) ಮೇಲೇರಿ ಬಂದ ದನುಜನನ್ನು ನಿಮಿಷ ಮಾತ್ರದಲ್ಲಿ ಕೊಲ್ಲುತ್ತಾನೆ ಭೀಮ.  ಏಕಚಕ್ರ ನಗರಿಯಿಂದ ಪಾಂಚಾಲ ನಗರಿಗೆ ಬರುವಾಗ ಅರ್ಜುನ ಮುಂಭಾಗದಲ್ಲಿ ಬೀಸುಗೊಳ್ಳಿ ಹಿಡಿದು ನಡೆದರೆ, ಕುಂತಿ, ಧರ್ಮಜ, ನಕುಲ ಸಹದೇವರ ಹಿಂದೆ ಕಾವಲುಭಟನಾಗಿ ಬೀಸಿಗೊಳ್ಳಿ ಹಿಡಿದು ನಡೆಯುತ್ತಾನೆ.  ಮತ್ರ್ಸಯಂತ್ರ ಭೇದಿಸಿದ ನಂತರ ಅರ್ಜುನ ಬಾಣಗಳಿಂದ ಯುದ್ಧ ಮಾಡಿದರೆ, ಭೀಮನಿಗೆ ಮರವೇ ಆಯುಧವಾಗುತ್ತದೆ.  ವಾಯುಪುತ್ರನಾದ ಭೀಮನಿಗೆ ಪ್ರಕೃತಿಯ ಸಕಲ ವಸ್ತುಗಳೂ ಸಂಬಂಧಿಗಳೇ, ಎಲ್ಲವೂ ಆಯುಧಗಳೇ.         

 ದ್ರೌಪದಿಯನ್ನು ಮದುವೆಯಾಗಿ ಪಾಂಚಾಲ ಪುರದಲ್ಲಿ ಒಂದು ವರ್ಷ ಕಳೆದು ಮತ್ತೆ ಹಸ್ತಿನಾವತಿಗೆ ಬಂದಾಗ ಧರ್ಮಜನಿಗೆ ಮೂವತ್ತಾರು, ಭೀಮನಿಗೆ ಮೂವತ್ತೈದು, ಕುಮಾರವ್ಯಾಸ ಆಗಾಗ ಪಾಂಡವರ ವಯಸ್ಸಿನ ಲೆಕ್ಕವನ್ನು ಕೊಡುತ್ತಾನೆ.  ಹಿಂದಿನ ದ್ವೇಷ ಹಗೆತನಗಳನ್ನು ಮರೆತು ಪಾಂಡವ ಕೌರವರು ಐದು ವರ್ಷಗಳನ್ನು, ಜೂಜು, ಬೇಟೆ, ವೈಹಾಳಿ ಎಂದು ಸಂತೋಷದಿಂದ ಕಳೆಯುತ್ತಾರೆ ಎಂದು ತಿಳಿಸುತ್ತಾನೆ ಕುಮಾರವ್ಯಾಸ.  ಒಳಗೇ ಹಗೆ ಹೊಗೆಯಾಡಿರಲೂ ಬಹುದು.  ಪಾಂಡವರಿಗೆ ರಾಜ್ಯದ ಅರ್ಧ ಸಂಪತ್ತನ್ನು ಕೊಟ್ಟು ಇಂದ್ರಪ್ರಸ್ಥನಗರದಲ್ಲಿ ಹೊಸ ಅರಮನೆಯೊಂದನ್ನು ಕಟ್ಟಿಸಿಕೊಂಡು ಇರುವ ವ್ಯವಸ್ಥೆಯಾಗುತ್ತದೆ.  ಧರ್ಮರಾಯ ರಾಜಸೂಯಯಾಗ ಮಾಡುವ ವೇಳೆಗಾಗಲೇ ಅರ್ಜುನ ಸುಭದ್ರೆಯನ್ನು ಮದುವೆಯಾಗಿ ಕರೆತಂದಿರುತ್ತಾನೆ.  ಯಾಗಕ್ಕೆ ಕಪ್ಪಕಾಣಿಕೆಗಳನ್ನು ತರಲು ಹೋದಾಗ ಮತ್ತೆ ಕೆಲವು ಮದುವೆಗಳೂ ಆಗುತ್ತವೆ ಅರ್ಜುನನಿಗೆ.  ಭೀಮನೂ ಕಪ್ಪಕಾಣಿಕೆಗಳನ್ನು ತರಲು ಹೋದರೂ ಯಾರನ್ನೂ ವಿವಾಹವಾಗುವುದಾಗಲೀ, ಮೋಹಿಸುವುದಾಗಲೀ ಕಂಡುಬರುವುದಿಲ್ಲ.  ಪಾಂಡವರಲ್ಲಿದ್ದ ದಾಂಪತ್ಯನಿಯಮದ ಪ್ರಕಾರ, ತಮ್ಮ ಸರತಿಗಾಗಿ ಒಬ್ಬೊಬ್ಬರೂ ದ್ರೌಪದಿಯ ಜೊತೆ ಇರುವ ಒಂದು ವರ್ಷದ ಕಾಲಾವಧಿಗಾಗಿ ಐದು ವರ್ಷ ಕಾಯಬೇಕಾಗುತ್ತಿತ್ತು ಎಂದಾಗ ಭೀಮನ ಸಂಯಮದ ಅರಿವಾಗುತ್ತದೆ.  ಕಾಡಿನಲ್ಲಿ ಮದುವೆಯಾಗಿದ್ದ ಹಿಡಿಂಬೆ ಕಾಡಿನಲ್ಲಿಯೇ ಇದ್ದಳು.  ದ್ರೌಪದಿಯೊಬ್ಬಳೇ ಭೀಮನ ಸತಿ.  ಧರ್ಮರಾಜ, ನಕುಲ, ಸಹದೇವರ ಸಂಯಮ ಆಶ್ಚರ್ಯವಾಗುವುದಿಲ್ಲ.  ಅವರಾರಿಗೂ ಕೂಡ ದ್ರೌಪದಿಯನ್ನುಳಿದು ಬೇರೆ ಹೆಣ್ಣುಗಳೊಡನೆ ಸಂಬಂಧ, ಒಡನಾಟಗಳಿರುವಂತೆ ಚಿತ್ರಿತವಾಗಿಲ್ಲ.  ಪಾರ್ಥನೋ ಅಸಂಯಮಿ.  ದ್ರೌಪದಿ, ಸುಭದ್ರೆಯರಲ್ಲದೆ, ಬೇರೆಯವರೊಡನೆಯೂ ಮದುವೆಗಳು, ಅಪ್ಸರೆಯೊಡನೆ ಒಡನಾಟ ಎಲ್ಲವೂ ಉಂಟು.  ಭೀಮನಂತಹ ಅತುಲ ಪರಾಕ್ರಮಿ, ದೈತ್ಯಕಾಯದ, ದೈತ್ಯ ಶಕ್ತಿಯುಳ್ಳವನ ಸಂಯಮ ನಿಜಕ್ಕೂ ಮೆಚ್ಚಬೇಕಾದ್ದು.  ರಾಕ್ಷಸ ಪತ್ನಿ ಹಿಡಿಂಬೆ, ಮಾನವ ಪತ್ನಿ ದ್ರೌಪದಿ ಇಬ್ಬರನ್ನು ಬಿಟ್ಟು ಬೇರೆ ಹೆಣ್ಣುಗಳ ಸಹವಾಸ ಅವನಿಗಿದ್ದುದು ಚಿತ್ರಿತವಾಗಿಲ್ಲ.  ಇದೇ ಕಾರಣಕ್ಕಾಗಿ ದ್ರೌಪದಿಗೆ ಭೀಮನ ಮೇಲೆ ಹೆಚ್ಚು ಅಧಿಕಾರ, ಹೆಚ್ಚು ಅಭಿಮಾನವಿದ್ದಿತೆನಿಸುತ್ತದೆ.          

ಮಯನು ಭೀಮನಿಗೆ ಕಾಣಿಕೆಯಾಗಿ ಕೊಟ್ಟಿದ್ದ ಗದೆ ಸಗರ ವಂಶದ ದುರ್ಜಯನಾದ ಯೌವನಾಶ್ವನದು ‘ಕೃತಾಂತನ ಕರದ ದಂಡವನಂಡಲೆವ ಬಲದ ಮದದೊಳೊಪ್ಪುವ ಗದೆಯದು’ (ಸಭಾ  ಪರ್ವ 1.16).  ಅದ್ಭುತ ದೈಹಿಕ ಬಲದ ಜೊತೆಗೇ ಇಂಥ ಗದೆ ಹಿಡಿದ ಭೀಮನನ್ನು ಹಿಡಿವರಾರು ಕಡೆವರಾರು?  ಆದರೂ ತನ್ನ ಬಲದ ಬಗೆಗೆ ಜಂಭಕೊಚ್ಚಿಕೊಳ್ಳುವಂತಹ, ಮನೋಭಾವವಿಲ್ಲ.  ಶಿಶುಪಾಲ, ಜರಾಸಂಧರು ರಾಜಸೂಯ ಯಾಗಕ್ಕೆ ಅಹಿತರಾಗಬಹುದೆಂದಾಗ “ಮುರಾರಿ ಕೃಪೆ ಸನ್ನಿಹಿತವಾಗಲಿ, ಸಾಕು ನೋಡಾ ತನ್ನ ಕೈಗುಣವ” (ಸಭಾ  ಪರ್ವ 2.26) ಎನ್ನುತ್ತಾನೆ ಭೀಮ.  ಕೃಷ್ಣ ಕೃಪೆಗೆ ಮೊದಲ ಸ್ಥಾನ, ತನ್ನ ಪರಾಕ್ರಮ, ಸಾಮರ್ಥ್ಯಗಳಿಗೆ ಎರಡನೆಯ ಸ್ಥಾನ ಎನ್ನುವುದು ಅವನ ನಂಬಿಕೆ.  ಕೃಷ್ಣ ಭಕ್ತಿ ಭೀಮನಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತದೆ.  ಕರೆಸು ಋಷಿಗಳನು ಯಾಗಕೆ, ಮಾಗಧ ಕರುಬಿದರೆ ರಣದಲಿ ತರಿವೆನಾತನ (ಸಭಾ  ಪರ್ವ 2.27) ಎಂದು ಭೀಮ ಅಣ್ಣನಿಗೆ ಹೇಳಿ ಕೃಷ್ಣಾರ್ಜುನರ ಸಹಿತ ಮಗಧಕ್ಕೆ ಬಂದಾಗ, ತಾವು ಮೂವರಲ್ಲಿ ಒಬ್ಬನನ್ನು ಯುದ್ಧ ಮಾಡಲು ಆರಿಸುವಂತೆ ಕೃಷ್ಣ ಜರಾಸಂಧನಿಗೆ ಹೇಳುತ್ತಾನೆ.  ಜರಾಸಂಧನ ಅಭಿಮತದಂತೆ, ಕೃಷ್ಣನೊಡನೆ ಯುದ್ಧ ಸಾಧ್ಯವಿಲ್ಲ.  ಅವನು ರಣನಾಟಕ ಪಲಾಯನ ಪಂಡಿತ, ಜೊತೆಗೆ ಬಂಧು.  ಪಾರ್ಥ “ಮಗು” ಹಾಗಾಗಿ “ಎಮ್ಮೊಡನೆ ರಣದರ್ಥಿಯಾದರೆ ಭೀಮಸೇನ ಸಮರ್ಥನಹನಾತಂಗೆ ಕೊಟ್ಟೆನು ಕಾಳಗವ” (ಸಭಾ  ಪರ್ವ 2.89)ಎಂದು ಭೀಮನನ್ನು ತನ್ನ ಪ್ರತಿಸ್ಫರ್ಧಿಯಾಗಿ ಆರಿಸುತ್ತಾನೆ ಮಹಾಪರಾಕ್ರಮಿ ಜರಾಸಂಧ.  ಭೀಮ ಜರಾಸಂಧರ ಕಾಳಗ ಮಾಗಧನ ಮಂದಿರಿದ ರಾಜಾಂಗಣದಲಿ ಕಾರ್ತಿಕ ಶುದ್ಧ ಪಾಡ್ಯದೊಳಾರಂಭವಾಗಿ ಚತುರ್ದಶಿಯಿರುಳಿನ ತನಕ ನಡೆಯುತ್ತದೆ. ಈ ಕಾಳಗವನ್ನು ಕುಮಾರವ್ಯಾಸ ವಿಸ್ತಾರವಾಗಿ, ರೋಚಕವಾಗಿ ವರ್ಣಿಸುತ್ತಾನೆ.  ಐದನೆಯ ದಿವಸ ಕಾಳಗ “ಉರುಭಯಂಕರ ವಾಯ್ತಂತೆ”.  ಕದನದ ಭರದೊಳೆಡೆದೆರಹಿಲ್ಲ, ವಿಶ್ರಮವಿಲ್ಲ, ನಿಮಿಷದಲಿ ಎರಡುದೆಸೆಯಲಿ ವೀಳೆಯದ ಕರ್ಪೂರದ ಕವಳದ ಕೈಚಳಕದಲಿ ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ” (ಸಭಾ  ಪರ್ವ 1.112) ಕೃಷ್ಣನ ಸೂಚನೆಯಂತೆ ಕಲಿ ವೃಕೋದರ ಅನಿಲರೂಪಧ್ಯಾನ ಪರನಾಗಿ, ಅನೂನ ಸಾಹಸನಾಗಿ ಜರಾಸಂಧನನ್ನು ಸೀಳಿ ಎಸೆದರೂ ಮತ್ತೆ ಜರೆಯ ವರದಿಂದಾಗಿ ಕೂಡಿಕೊಳ್ಳುತ್ತಿದ್ದ ಸೀಳುಗಳನ್ನು ಕೃಷ್ಣನ ಸನ್ನೆಯನ್ನರಿತು ಪಲ್ಲಟಮಾಡಿ ಸೇರಿಸಿ ಸೀಳುಗಳನ್ನು, ತನ್ನ ಉನ್ನತ ಬಾಹುಸತ್ವದಿಂದ ನೂರೆಂಟು ಸೂಳು ತಿರುಹಿ ಧರೆಯೊಳಪ್ಪಳಿಸುತ್ತಾನೆ.  ಎರಡು ವಾರಗಳು ಆಹಾರ ನಿದ್ರೆಗಳಿಲ್ಲದೆ ಹೋರಾಡುವ ದೇಹದಾರ್ಢ್ಯ, ಮನೋದಾರ್ಢ್ಯ ಭೀಮನಿಗೆ ಮಾತ್ರ ಸಾಧ್ಯ.  ನೂರಾರು ರಾಜರನ್ನು ಮಣಿಸಿ ಇಲ್ಲವೆ ಸ್ನೇಹದಿಂದ ಒಲಿಸಿ ರಾಜಸೂಯ ಯಾಗಕ್ಕೆ ಸಾಗರೋಪಮ ಧನವನ್ನು ಸಂಗ್ರಹಿಸಿ ತರುತ್ತಾನೆ.

ರಾಜಸೂಯ ಯಾಗದಲ್ಲಿ ಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಲು ನಿರ್ಧಾರವಾದಾಗ ಚೈದ್ಯ ಭೂಪಾಲ ಶಿಶುಪಾಲ ರೋಷಾವೇಷಿತನಾಗುತ್ತಾನೆ.  ಕೃಷ್ಣನನ್ನು, ಭೀಮಾರ್ಜುನರನ್ನು ಹೀಗಳೆಯುತ್ತಾನೆ, ಟೀಕಿಸುತ್ತಾನೆ, ರೋಷದಿಂದ ಕಿಡಿಕಿಡಿಯಾದ ಭೀಮನನ್ನು ಕುಮಾರವ್ಯಾಸ ಮಾತುಗಳಲ್ಲಿ ವರ್ಣಿಸುವುದೆಂದರೆ,

ಕೇಳಿ ಕಿಡಿಕಿಡಿಗೆದರಿ ತನು ರೋ-

ಮಾಳಿ ತಳೆದುದು ರೋಷವಹ್ನಿ-

ಜ್ವಾಲೆ ಝಳುಪಿಸೆ ಜಡಿದವರುಣಚ್ಛವಿಯಲಕ್ಷಿಗಳು |

ಸೂಳುರಿಯ ನಿಡುಸುಯ್ಲು ಕಬ್ಬೊಗೆ-

ಜೌಳಿಗೆಯಲೇಕಾವಳಿಯ ಮು-

ಕ್ತಾಳಿ ಕಂದಿತು ಖತಿಯ ಮೊನೆಯಲಿ ಮಸಗಿದನು ಭೀಮ || (ಸಭಾ  ಪರ್ವ 10.23)

ದುರ್ಯೋಧನನು ದ್ಯೂತಕ್ಕೆ ಆಹ್ವಾನಿಸಿರುವದರ ಬಗೆಗೆ ಭೀಮನ ಅಭಿಮತವನ್ನು ಕೇಳಿದಾಗ ಅವನಾಡುವ ಮಾತುಗಳು, ಅಣ್ಣನ ಬಗೆಗೆ ಅವನಿಗಿರುವ ನಂಬಿಕೆ, ಪ್ರೀತಿ, ಗೌರವಗಳ ಮಹಾಪೂರವನ್ನು ಅಭಿವ್ಯಕ್ತಿಸುತ್ತವೆ. 

ಜೀಯ ಬಿನ್ನಹವಿಂದು ದೇಹ-

ಚ್ಭಾಯೆಗುಂಟೇ ಬೇರೆ ಚೇಷ್ಟೆ ನ-

ವಾಯಿಯೇ ನಮ್ಮನಿಬರಿಗೆ ರಾಜಾಭಿಮಾನದಲಿ |

ನೋಯೆ ನೋವುದು ನಿಮ್ಮ ದೇಹದ

ಬೀಯದಲಿ ನಾಣ್ಬೀಯವಹುದೆ-

ಮ್ಮಾಯತಂ ಸ್ವಾತಂತ್ರ್ಯವೆಮಗಿಲ್ಲೆಂದನಾಭೀಮ || (ಸಭಾ  ಪರ್ವ 12.94)

ದುರ್ಯೋಧನನ ಕಪಟದ ಬಗೆಗೆ ಭೀಮನಿಗೆ ಅರಿವಿದ್ದಿರಬಹುದಾದರೂ, ಅವನಿಗೆ ಆ ಕುತಂತ್ರದ ಪಗಡೆಯಾಟವನ್ನು ಊಹಿಸಲು ಸಾಧ್ಯವಾಗುವುದಿಲ್ಲ.

ದುರ್ಯೋಧನ ಧರ್ಮರಾಯರ ನಡುವೆ ನಡೆಯುವ ಜೂಜಿನ ಪ್ರಸಂಗ ಹಲವು ಕಾರಣದಿಂದ ಪ್ರಮುಖ ಘಟನೆಯಾಗುತ್ತದೆ.  ದುರ್ಯೋಧನನಿಗೆ ಧರ್ಮರಾಜನ ದೌರ್ಬಲ್ಯದ ಅರಿವಿದೆ.  ಜೂಜಿಗೆ ಕರೆದರೆ ರಾಜನಾದವನು ನಿರಾಕರಿಸಬಾರದೆಂಬ ಕ್ಷತ್ರಿಯಧರ್ಮವನ್ನು ಧರ್ಮರಾಜ ಖಂಡಿತ ಮೀರುವುದಿಲ್ಲವೆಂಬ ಭರವಸೆಯಿದೆ ದುರ್ಯೋಧನನಿಗೆ.  ಆದ್ದರಿಂದಲೇ ಕೃತ್ರಿಮದ ಹಾಸಂಗಿ, ಶಕುನಿಯ ಮಾಯಾದಾಳಗಳ ಗರಗಳಿಗೆ ಧರ್ಮರಾಜನ ಸಮಸ್ತವನ್ನು ಪಣಕ್ಕಿಕ್ಕಿಸುವ, ವಿಜಯ ಸಾಧಿಸುವ ಲೆಕ್ಕಾಚಾರದ ಯೋಜನೆಯನ್ನು ಹಮ್ಮಿಕೊಳ್ಳುತ್ತಾನೆ ಅವನು.  ಜೂಜಿನ ಚಟ, ಧರ್ಮರಾಯನಂತಹ ಧರ್ಮಜ್ಞ, ವಿವೇಕಿಯನ್ನೂ ತನ್ನ ಪರಿಧಿಗೆ ಎಳೆದುಕೊಂಡು ಮತಿಭ್ರಷ್ಟನನ್ನಾಗಿ ಮಾಡುತ್ತದೆಂಬುದನ್ನು ಈ ಪ್ರಸಂಗ ಮನಮುಟ್ಟುವಂತೆ ನಿರೂಪಿಸುತ್ತದೆ.  ಜೂಜು ಮತ್ತು ಇಂತಹದೇ ಇತರ ಅನೇಕ ಸಂಗತಿಗಳು - ಪಣ ಒಡ್ಡುವಂಥವು – ಮಾನವನ ಮನಸ್ಸಿನ ಮೇಲೆ ಹೇಗೆ ಮಾದಕ ಪ್ರಭಾವ ಬೀರಿ, ಸಂಪೂರ್ಣ ವಿನಾಶದತ್ತ ಕರೆದೊಯ್ಯುತ್ತವೆ ಎಂಬ ಸಾರ್ವಕಾಲಿಕ ಸತ್ಯವನ್ನು ಸಹ ಅತ್ಯಂತ ಸಹಜವಾಗಿ, ನಾಟಕದ ದೃಶ್ಯದಂತೆ ಚಿತ್ರಿಸುತ್ತದೆ ಈ ಪ್ರಸಂಗ.  ಈ ನಶೆಗೊಳಗಾದ ಧರ್ಮರಾಜ, ಹಂತ ಹಂತವಾಗಿ, ನೋಡು ನೋಡಿತ್ತಿದ್ದಂತೆ ಅತ್ಯಲ್ಪ ಕಾಲದಲ್ಲಿ, ತನ್ನ ಸಾಮ್ರಾಜ್ಯ, ತಮ್ಮಂದಿರು, ಕಡೆಗೆ ಪತ್ನಿಯನ್ನೂ ಸಹ ಪಣವಿಟ್ಟು, ಕಳೆದು ಕೊಂಡು ದಟ್ಟ ದರಿದ್ರನಾಗುವ ದೃಶ್ಯ, ಭಯ, ಆಶ್ಚರ್ಯಗಳನ್ನುಂಟು ಮಾಡುತ್ತದೆ.  ಊಹಿಸಲೂ ಆಗದಷ್ಟು ಸಂಪತ್ತು ಕ್ಷಣಾರ್ಧದಲ್ಲಿ ಮಾಯಾದಾಳಗಳ ಉರುಳಿಗೆ ಬಲಿಯಾದಾಗ, ಹುಲುಮಾನವರು ಲಾಟರಿಗಳಲ್ಲಿ ರೇಸುಗಳಲ್ಲಿ ಆಮಿಷ, ನಶೆಗಳಿಗೆ ಸಿಲುಕಿ ಎಲ್ಲ ಕಳೆದುಕೊಂಡು ನಿರ್ಗತಿಕರಾಗುವುದೇನಚ್ಚರಿ? ಧರ್ಮರಾಜನ ಧರ್ಮದ ಜೊತೆ, ಈ ಜೂಜಿನ ಕರ್ಮ ಸೇರಿಕೊಂಡು, ಪಾಂಡವರನ್ನೆಲ್ಲ ಒಟ್ಟಿಗೇ ಕೆಳಕ್ಕೆಳೆದು (ಅಧೋಗತಿ) ಬಿಟ್ಟಿದ್ದು ಕಂಡಾಗ, ವ್ಯಕ್ತಿಯೊಬ್ಬನ ಕ್ರಿಯೆ ಸಂಬಂಧ ಪಟ್ಟವರೆಲ್ಲರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುವುದರ ಅರಿವಾಗುತ್ತದೆ. ಇಂದ್ರಪ್ರಸ್ಥದುರು ಭಂಡಾರ ತೀರಿ, ಅರಮನೆಯ ಪೈಕದ ಭಂಡಾರ ತೀರಿ, ನಾರಿಯರ ವಿವಿಧಾಭರಣ ಸಿಂಗಾರ ತೀರಿ, ನಕುಲ ಸಹದೇವಾರ್ಜುನರ ಮಣಿ ಮಕುಟ ಕರ್ಣಾಭರಣ ಎಲ್ಲವೂ ಕೌರವನ ವಶವಾಗಿ, ಕಡೆಗೆ ತನ್ನ ತಮ್ಮಂದಿರನ್ನೂ ಒಬ್ಬೊಬ್ಬರನ್ನಾಗಿ ಪಣವಿಟ್ಟು ಸೋತಾಗ ಭೀಮಸೇನನಂತಹ ಅಸೀಮ ಪರಾಕ್ರಮಿ ಆ ಸಭೆಯಲ್ಲಿ ಹೇಗೆ ತಾಳ್ಮೆ ತಂದು ಕೊಂಡಿದ್ದಿರಬಹುದು?  ತನ್ನನ್ನು ಪಣವಿಟ್ಟು ಸೋತಾಗಲೂ ಮೌನಿಯಾಗಿದ್ದ ಭೀಮ, ಧರ್ಮಜ ಮತಿಗೆಟ್ಟವನಂತೆ ದ್ರೌಪದಿಯನ್ನೂ ಸಹ ಪಣಕ್ಕೆ ಒಡ್ಡಿದನೆಂದರೆ, ಧರ್ಮಜನ ವಿಚಾರಶಕ್ತಿಯೇ ಸತ್ತು ಹೋಯಿತೋ, ಅಥವಾ ದ್ಯೂತದ ಮತ್ತೇರಿಸುವ ಶಕ್ತಿಯೇ ಅಂತಹುದೋ ತಿಳಿಯುವುದಿಲ್ಲ. 

ರಜಸ್ವಲೆಯಾಗಿದ್ದ ದ್ರೌಪದಿಯನ್ನು ಮುಡಿಹಿಡಿದು ತುಂಬಿದ ಸಭೆಗೆ ಎಳೆತಂದು “. . . ನೀ ಪುಷ್ಪವತಿಯಾಗಲ್ಲಿ ಫಲವತಿಯಾಗು ನಡೆ ಕುರುರಾಯಭವನದಲಿ” (ಸಭಾ  ಪರ್ವ 14.65) ಎಂದು ಮೂದಲಿಸಿ, ದುಶ್ಶಾಸನಾದಿಗಳು ಕೆಡುನುಡಿಯುತ್ತಿರುವಾಗ ಭೀಮಾರ್ಜುನರ ಅಂತರಂಗ ಎಷ್ಟು ಕುದಿದಿರಬಹುದು? ಆಗ ಧರ್ಮರಾಯ ಅವರಿಬ್ಬರ ಮುಖನೋಡಿ ಅವರು “...ಮನದೊಳಗೆ ಕೌರವನ ಕರುಳನು ತನಿರಕುತದಲಿ ಕುದಿಸಿದರು ವಾಜನಿಕ ಕರ್ಮ ಕ್ರಿಯೆಗೆ ನೆನೆವುದನು...” (ಸಭಾ  ಪರ್ವ 14.75)  ಅರಿಯುತ್ತಾನೆ. ತನ್ನ ತಮ್ಮಂದಿರ ಮೇಲೆ ಧರ್ಮಜನ ಪ್ರಭಾವವಾದರೂ ಎಂತಹುದು?

ಹುಬ್ಬಿನಲಿ ನಿಲಿಸಿದನು ಪವನಜ-

ನುಬ್ಬಟೆಯನರ್ಜುನನ ವಿಕೃತಿಯ-

ನಿಬ್ಬರಾಲಾಪವನು ಧರ್ಮರಹಸ್ಯ ನಿಷ್ಠೆಯಲಿ | (ಸಭಾ  ಪರ್ವ 14.76)

ಆದರೆ ಭೀಮನ ರೋಷವನ್ನು ಧರ್ಮಜನ ಈ ಧರ್ಮದ ಕಡಿವಾಣ ಎಷ್ಟು ಕಾಲ ತಡೆದು ನಿಲ್ಲಿಸೀತು? “ಈ ತಳೋದರಿ ತೊತ್ತಿರಲಿ ಸಂಘಾತವಾಗಲಿ ಸಾಕು” (ಸಭಾ  ಪರ್ವ 14.87) ಎಂದು  ದುರ್ಯೋಧನ, ದ್ರೌಪದಿಯ ಬಗೆಗೆ ಹೇಳಿದಾಗ ಭೀಮನ ರೋಷ ಹರಿ ಹಾಯುವುದು ದುರ್ಯೋಧನನ ಮೇಲಲ್ಲ ತನ್ನ ಒಲುಮೆಯ ಅಣ್ಣ ಧರ್ಮಜನ ಮೇಲೆ,

ನೊಂದನೀ ಮಾತಿನಲಿ ಮಾರುತ-

ನಂದನನು ಸಹದೇವನನು ಕರೆ-

ದೆಂದನಗ್ನಿಯ ತಾ ಯುಧಿಷ್ಠಿರ ನೃಪನ ತೋಳುಗಳ |

ಮಂದಿ ನೋಡಲು ಸುಡುವೆನೇಳೇ-

ಳೆಂದು ಜರೆದರೆ ಹಿಡಿದು ಮಾದ್ರೀ-

ನಂದನನ ನಿಲಿಸಿದನು ಫಲಗುಣ ನುಡಿದನನಿಲಜನ ||   (ಸಭಾ  ಪರ್ವ 14.88)

 ಭೀಮನ ಪಾತ್ರದಿಂದ ಸ್ವಲ್ಪ ಸರಿದು ಸಭಾಪರ್ವದ ವಿಶೇಷಗಳನ್ನು  ಗಮನಿಸೋಣ. 

 ಧರ್ಮವಿರುದ್ಧವಾದ ಕೃತ್ಯಗಳನ್ನು ಧರ್ಮ ಕಾರಣಕ್ಕಾಗಿಯೇ ಸಹಿಸಬೇಕಾದ ಅತ್ಯಂತ ಕಷ್ಟಕರವಾದ ಒತ್ತಡಗಳನ್ನು ಸಭಾಪರ್ವದ ಘಟನೆಗಳಲ್ಲಿ ಪಾಲುಗೊಂಡಿರುವ ವ್ಯಕ್ತಿಗಳಲ್ಲಿ ಕಾಣುತ್ತೇವೆ.  ದ್ರೌಪದಿಯ ಅಪಮಾನವನ್ನು, ಕಣ್ಣೆದುರೇ ಕಾಣುತ್ತಾ, ಒಳಗೊಳಗೆ ಉರಿಯುತ್ತಾ, ಧರ್ಮರಾಜನಿಂದ ಧರ್ಮಶೃಂಖಲೆಗಳನ್ನು ಬಿಗಿಸಿಕೊಂಡು ಕುಳಿತಿದ್ದ ಭೀಮಾರ್ಜುನರು ಉದಾಹರಣೆಯಾಗುವಂತೆಯೇ, ದುರ್ಯೋಧನನ ಉಪ್ಪಿನ ಋಣದ ಗರ ಹಿಡಿದಂತೆ ಕುಳಿತಿದ್ದ ಭೀಷ್ಮ, ದ್ರೋಣ, ಕೃಪ ಆದಿ ಮಹಾವೀರರು ಹಾಗೂ ಸಭಾಸದರು.  ಈ ಸಂದರ್ಭದಲ್ಲಿ ಕರ್ಣ ತನ್ನ ಘನತೆಗೆ ತಕ್ಕುದಲ್ಲದ ಮಾತನ್ನಾಡುತ್ತಾನೆ.  ಭೀಷ್ಮರ ಮಾತು ಸತ್ತ್ವಹೀನವಾಗಿದ್ದು, ದುರ್ಯೋಧನ ಕೃತ್ಯಗಳುನ್ನು ತಡೆಯುವ ಸಾಮರ್ಥ್ಯವಿಲ್ಲದ್ದು.  ಸಭಾಪರ್ವದ ಈ ಘಟನೆ ಕೂಡ ಸಾರ್ವಕಾಲಿಕ ಪ್ರಸ್ತುತತೆ ಹೊಂದಿದ್ದು, ಸಾರ್ವಕಾಲಿಕ ಸತ್ಯವನ್ನು ಸಾರುತ್ತದೆ.  ಕೆಡಕು ತನ್ನ ಸಂಪೂರ್ಣ ಶಕ್ತಿಯಿಂದ ವಿಜೃಂಭಿಸುತ್ತಿರುವಾಗ ಒಳಿತು, ಸಾತ್ತ್ವಿಕ ಶಕ್ತಿ, ಕೆಡುಕಿನ ವಿಜೃಂಭಣೆಗೆ ಅವಕಾಶಕೊಟ್ಟು, ತಾನು ತಲೆತಗ್ಗಿಸಿ ತಾಳ್ಮೆ ಯಿಂದ ಕಾಯುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲವೆಂಬುದನ್ನು ಈ ಪ್ರಸಂಗ ಅತ್ಯಂತ ಮಾರ್ಮಿಕವಾಗಿ ನಿರೂಪಿಸುತ್ತದೆ.  ಇಡೀ ಪ್ರಸಂಗವನ್ನು ವರ್ತಮಾನದಲ್ಲಿನ ಅನೇಕ ಪರಿಸ್ಥಿತಿಗಳೊಡನೆ ಹೋಲಿಸಿ ನೋಡಬಹುದಾಗಿದೆ.  ಒಮ್ಮೆ ಅಧಿಕಾರ ಪಡೆದು ಚಾಲನೆಗೊಂಡ ಕೆಡುಕಿನ ಚಕ್ರ ಸಂಪೂರ್ಣವಾಗಿ ಒಂದು ಸುತ್ತು ತಿರುಗಿದ ಹೊರತು, ಅದಕ್ಕೆ ಪರಿಭವವಿಲ್ಲ.  ಹೆಸರಿಸಲಾರದಂತಹ ಭೀತಿಯ, ನೈತಿಕ ಹೇಡಿತನದ ಗರ ಬಡಿದಿರುವ ಈ ಸಭೆಯಲ್ಲಿ ವಿದುರ, ವಿಕರ್ಣರ ವಿವೇಚನೆಯ ಧ್ವನಿ, ಕ್ಷೀಣ ದನಿಯಾಗಿ, ನಿಶ್ಯಬ್ದವಾಗುತ್ತವೆ.

This is the seventh part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.

Author(s)

About:

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.

Prekshaa Publications

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhāni Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...