ಇನ್ನು ಮುಂದೆ “ವಿಕ್ರಮೋರ್ವಶೀಯ”ವನ್ನು ಗಮನಿಸಬಹುದು.
ಇಲ್ಲಿಯ ಪ್ರಸ್ತಾವನೆಯ ಕೆಲವೊಂದು ಅಂಶಗಳು ಪರಿಶೀಲನೀಯ. ಮಾಲವಿಕಾಗ್ನಿಮಿತ್ರದಲ್ಲಿದ್ದಂತೆ ಈ ಕೃತಿಯಲ್ಲಿ ಕವಿಗೆ ತನ್ನ ರೂಪಕವನ್ನು ಪ್ರದರ್ಶಿಸುವಲ್ಲಿ ಹೆಚ್ಚಿನ ಸಂಕೋಚವಿಲ್ಲ; ಸಮರ್ಥನೆಯ ಒತ್ತಡವೂ ಹೆಚ್ಚಿಲ್ಲ. ಏಕೆಂದರೆ, ಅವನೇ ಬಲ್ಲಂತೆ ಸಹೃದಯಪರಿಷತ್ತು ಪೂರ್ವಕವಿಗಳ ರಚನೆಗಳನ್ನು ಆಸ್ವಾದಿಸಿದೆ; ಹಾಗೆಂದ ಮಾತ್ರಕ್ಕೆ ಹೊಸತರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಮಟ್ಟಕ್ಕೆ ಪರ್ಯಾಪ್ತಕುತೂಹಲವೂ ಆಗಿಲ್ಲ. ಇದನ್ನು ಅವನ ಸೊಗಸಾದ ಮಾತು ಹೀಗೆ ಧ್ವನಿಸಿದೆ: ಪರಿಷದೇಷಾ ಪೂರ್ವೇಷಾಂ ಕವೀನಾಂ ದೃಷ್ಟರಸಪ್ರಬಂಧಾ (೧ನೆಯ ಶ್ಲೋಕದ ಅನಂತರದ ಪ್ರಸ್ತಾವನಭಾಗ). ತಕ್ಕಮಟ್ಟಿಗೆ ಸಹೃದಯಾದರಣೆಯನ್ನು ಹೊಂದಿದ ಕವಿಗೆ ತನ್ನ ಹೊಸ ಬರೆವಣಿಗೆಯನ್ನು ಲೋಕಕ್ಕೆ ಅರ್ಪಿಸುವಾಗ ಇಂಥ ಮನೋಧರ್ಮವಿರುತ್ತದೆ. ಇದು ಕಾಳಿದಾಸನ ಬೆಳೆವಣಿಗೆಯ ಕುರುಹೂ ಹೌದು – ಅದು ವಿಮರ್ಶನಕ್ಕೆ ಪೂರ್ಣವಾಗಿ ವಿಮುಖವೂ ಅಲ್ಲ, ಸಮರ್ಥನೆಗೆ ಮುನ್ನುಗ್ಗುವಷ್ಟು ಆತಂಕದ್ದೂ ಅಲ್ಲ. ಈ ಕಾರಣದಿಂದಲೇ ಮುಂದೆ ಅವನು ತನ್ನ ಕೃತಿಯ ಹೂರಣವನ್ನು ಹೇಳಿಕೊಳ್ಳುವಾಗ ಸಹೃದಯರ ಸಹಕಾರವನ್ನೂ ಏಕಾಗ್ರತೆಯನ್ನೂ ಕೋರುತ್ತಾನೆ:
ಪ್ರಣಯಿಷು ವಾ ದಾಕ್ಷಿಣ್ಯಾದಥವಾ ಸದ್ವಸ್ತುಪುರುಷಬಹುಮಾನಾತ್ |
ಶೃಣುತ ಜನಾ ಅವಧಾನಾತ್ಕ್ರಿಯಾಮಿಮಾಂ ಕಾಲಿದಾಸಸ್ಯ || (೧.೨)
ಸಹೃದಯರೇ! ಕಾಳಿದಾಸನ ಈ ಕೃತಿಯನ್ನು ಪ್ರಣಯಿಗಳ ಮೇಲಣ ಪ್ರೀತಿಯಿಂದಲೋ ಒಳ್ಳೆಯ ವಸ್ತು ಮತ್ತು ಪಾತ್ರಗಳ ಬಗೆಗಿನ ಆದರದಿಂದಲೋ ಅವಧಾನವಿರಿಸಿ ಆಲಿಸಿರಿ.
ಪ್ರಣಯ-ಪ್ರಣಯಿಗಳೆಂಬ ಲೋಕಸಾಮಾನ್ಯದ ಸಂಗತಿಯಲ್ಲಿ ಪ್ರೀತಿಯಿರಿಸಿ ಸಹೃದಯರು ಕೇಳುವಂತಾಗಲೆಂಬ ಮಾತಿನಲ್ಲಿ ಪೂರ್ಣವಾಗಿ ನಿರ್ಮಮನಲ್ಲದ ಕವಿಯ ಭಾವವನ್ನು ಗ್ರಹಿಸಬಹುದು. ಏಕೆಂದರೆ, ವಸ್ತು ಮತ್ತು ಪುರುಷರನ್ನಷ್ಟೇ (ಇತಿವೃತ್ತ ಮತ್ತು ಪಾತ್ರಗಳನ್ನಷ್ಟೇ) ಗಮನದಲ್ಲಿರಿಸಿಕೊಂಡರೆ ಕೃತಿಯ ಮಹತ್ತ್ವ ತಾನಾಗಿಯೇ ಮನವರಿಕೆಯಾಗುತ್ತದೆ. ಇಂತಿರಲು ಪ್ರಣಯಿಗಳಲ್ಲಿ ದಾಕ್ಷಿಣ್ಯವನ್ನು ತೋರಿರೆಂಬ ಅಭ್ಯರ್ಥನೆ ಅನಿವಾರ್ಯವಲ್ಲ. ಆದರೆ ಇದು ವರ್ಧಿಷ್ಣುವಾದ ಕವಿಯೊಬ್ಬನ ಮಾತೆಂದು ನೆನೆದಾಗ ತುಂಬ ಸಹಜವೆನಿಸುತ್ತದೆ. ಇಷ್ಟು ಮಾತ್ರವನ್ನೇ ಹೇಳಿದರೆ ಕಾಳಿದಾಸನು ಕಾಳಿದಾಸನೆನಿಸಿಯಾನೇ! ಆದುದರಿಂದಲೇ ಜನರ ಅವಧಾನಪೂರ್ವಕವಾದ ಆಲಿಸುವಿಕೆಯನ್ನು ಪ್ರಾರ್ಥಿಸಿದ್ದಾನೆ. ಇದು ಪ್ರಬುದ್ಧತೆಯತ್ತ ಸಾಗುತ್ತಿರುವ ಆತನ ಪಯಣವನ್ನು ಧ್ವನಿಸಿದೆ.[1] ಧ್ವನ್ಯಾಲೋಕದ ಕೊನೆಯಲ್ಲಿ ಆನಂದವರ್ಧನನು ನ ಸಾದಃ ಕರ್ತವ್ಯಃ ಕವಿಭಿರನವದ್ಯೇ ಸ್ವವಿಷಯೇ (ಸುಕವಿಗೆ ನಿರ್ದುಷ್ಟವಾದ ತನ್ನ ಸಾಹಿತ್ಯಕೃಷಿಯ ವಿಷಯದಲ್ಲಿ ಹಿಂಜರಿಕೆ-ಕೀಳರಿಮೆಗಳು ಬೇಕಿಲ್ಲ; ೪.೧೭) ಎಂದು ಹೇಳಿರುವ ಆದರ್ಶಕವಿಯ ಧ್ಯೇಯವನ್ನು ಕಾಳಿದಾಸನು ಅನುಸರಿಸುವ ಹವಣಿನಲ್ಲಿರುವನೆಂದು ಈ ಮೂಲಕ ತಿಳಿಯುತ್ತದೆ.
ಸಾಮಾನ್ಯವಾಗಿ ನಮ್ಮ ಆಲಂಕಾರಿಕರೂ ಅವರನ್ನು ವಿಮರ್ಶಿಸುವ ಆಧುನಿಕವಿದ್ವಾಂಸರೂ ಕವಿಯ ವರ್ತನೆ ಮತ್ತವನ ಬೆಳೆವಣಿಗೆಯನ್ನು ಪ್ರತ್ಯೇಕವಾಗಿ ಚರ್ಚಿಸುವುದಿಲ್ಲ; ಮೇಲಾಗಿ ಇಂಥವನ್ನೆಲ್ಲ “ಕವಿಶಿಕ್ಷಾ”ವಿಚಾರವೆಂದು ಉಪೇಕ್ಷಿಸುತ್ತಾರೆ. ಹೀಗಾಗಿಯೇ ಕ್ಷೇಮೇಂದ್ರ, ರಾಜಶೇಖರ, ಕೇಶವಮಿಶ್ರ, ಅಮರಚಂದ್ರ ಮೊದಲಾದವರ ಬರೆಹಗಳು ಅವುಗಳಿಗೆ ಅರ್ಹವಾದ ಅಧ್ಯಯನದಿಂದ ವಂಚಿತವಾಗಿವೆ. ಈ ನಿಟ್ಟಿನಲ್ಲಿ ಕಾಳಿದಾಸನಂಥ ಮಹಾಕವಿಗಳ ಮಾತುಗಳು ಹೆಚ್ಚಿನ ಬೆಳಕನ್ನೀಯಬಲ್ಲವು.
ಕಾವ್ಯಮೀಮಾಂಸೆಯ ಇತಿಹಾಸದ ದೃಷ್ಟಿಯಿಂದ ನೋಡುವುದಾದರೆ, ನಾಟ್ಯಶಾಸ್ತ್ರದ ಪ್ರಾಚೀನಪಾಠಗಳಲ್ಲಿ ಎಂಟೇ ರಸಗಳ ವಿವರಣೆಯಿದ್ದುದನ್ನು ವಿಕ್ರಮೋರ್ವಶೀಯವು ಸೂಚಿಸಿರುವುದು ಮಹತ್ತ್ವದ ಸಂಗತಿ (೨.೧೭). ಬಳಿಕ ಅಭಿನವಗುಪ್ತನು ನಾಟ್ಯಶಾಸ್ತ್ರದ ಪಾಠಾಂತರವೊಂದರಲ್ಲಿ ಶಾಂತರಸದ ಅಸ್ತಿತ್ವವನ್ನು ಎತ್ತಿಹಿಡಿಯುತ್ತಾನೆ. ಆದರೆ ಶಾಂತವೊಂದು ಪ್ರತ್ಯೇಕರಸವಾಗದೆ ಎಲ್ಲ ರಸಗಳ ಪರ್ಯಂತಸ್ಥಿತಿಯೆಂದು ಬಲ್ಲವರಿಗೆ ಕಾಳಿದಾಸನು ಹೇಳುವ ಎಂಟು ರಸಗಳ ಒಕ್ಕಣೆ ಯುಕ್ತತರವೆಂದು ತೋರದಿರದು.
ಕಾಳಿದಾಸನು ಮೂರನೆಯ ಅಂಕದ ಆದಿಯಲ್ಲಿ ಬರುವ ಮಿಶ್ರವಿಷ್ಕಂಭಕದಲ್ಲಿ ಹಲವು ಹೊಳಹುಗಳನ್ನು ನೀಡಿದ್ದಾನೆ. ಇವುಗಳಲ್ಲಿ ಮುಖ್ಯವಾದುದು ಕವಿ-ಕಲಾವಿದರು ತಮ್ಮ ಕಲಾವಿಷ್ಕರಣದ ಕಾಲದಲ್ಲಿ ಮಗ್ನತೆಯನ್ನು ಅದೆಷ್ಟರ ಮಟ್ಟಿಗೆ ಹೊಂದಬೇಕೆಂಬುದನ್ನು ಸೂಚಿಸುವ ಭಾಗ. ಉರ್ವಶಿಯು ದೇವಲೋಕದಲ್ಲಿ “ಲಕ್ಷ್ಮೀಸ್ವಯಂವರ” ಎಂಬ ರೂಪಕದ ನಾಯಿಕೆಯಾಗಿ ಅಭಿನಯಿಸುವಾಗ ಪುರೂರವನ ಮೇಲಿರುವ ಪ್ರೀತಿಯ ಉತ್ಕಟತೆಯಲ್ಲಿ ಮೈಮರೆತು “ಪುರುಷೋತ್ತಮ” ಎನ್ನಬೇಕಿರುವಾಗ “ಪುರೂರವ” ಎಂದು ಹೇಳಿ ಎಡವುತ್ತಾಳೆ. ಇದು ರೂಪಕದ ರಚಯಿತ್ರಿಯಾದ ಸರಸ್ವತಿಗೂ ನಿರ್ದೇಶಕನಾದ ಭರತಮುನಿಗೂ ಮುನಿಸನ್ನು ತಂದು ಅವರಿಂದ ಶಾಪವನ್ನು ಪಡೆಯುತ್ತಾಳೆ. ಇದು ಅಭಿನವಗುಪ್ತನು ನಿರೂಪಿಸುವ “ನಿಜಸುಖಾದಿವಿವಶೀಭಾವ” ಎಂಬ ರಸವಿಘ್ನಕ್ಕೆ ಸಲ್ಲುವಂಥದ್ದು. ಅಭಿನವಗುಪ್ತನು ಇದನ್ನು ಸಹೃದಯನ ದೃಷ್ಟಿಯಿಂದ ಹೇಳಿದ್ದರೂ ಕವಿ-ಕಲಾವಿದರಿಗೆ ಕೂಡ ಇದು ಚೆನ್ನಾಗಿ ಅನ್ವಯಿಸುತ್ತದೆ. ಈ ಕಾರಣದಿಂದಲೇ ಕವಿಯು ರಸಾವೇಶದ ಸ್ಥಿತಿಯಲ್ಲಿದ್ದಾಗ ಬರೆದ ಕವಿತೆಯನ್ನೆಲ್ಲ ಪರಿಮಿತಸಂಖ್ಯೆಯ ಸಹೃದಯರ ಗೋಷ್ಠಿಯಲ್ಲಿ ಪರಿಷ್ಕಾರಕ್ಕಾಗಿ ಒಪ್ಪಿಸಬೇಕೆಂದು ರಾಜಶೇಖರ ಹೇಳುತ್ತಾನೆ.[2]
ಹೀಗೆ ವಿಕ್ರಮೋರ್ವಶೀಯವೂ ಕಾವ್ಯಮೀಮಾಂಸೆಗೆ ತನ್ನದಾದ ಯೋಗದಾನವನ್ನು ನೀಡಿದೆ.
ಪರಿಣತಪ್ರಜ್ಞನಾದ ಕಾಳಿದಾಸನ ಪಕ್ವಪ್ರಬಂಧಗಳಲ್ಲೊಂದು ಅಭಿಜ್ಞಾನಶಾಕುಂತಲ. ಇದರ ಪ್ರಸ್ತಾವನೆಯಲ್ಲಿ ತನ್ನ ಕಾವ್ಯಪ್ರತಿಜ್ಞೆಯನ್ನು ಹೀಗೆ ಮಾಡುತ್ತಾನೆ:
ಆ ಪರಿತೋಷಾದ್ವಿದುಷಾಂ ನ ಸಾಧು ಮನ್ಯೇ ಪ್ರಯೋಗವಿಜ್ಞಾನಮ್ |
ಬಲವದಪಿ ಶಿಕ್ಷಿತಾನಾಮಾತ್ಮನ್ಯಪ್ರತ್ಯಯಂ ಚೇತಃ || (೧.೨)
ವಿದ್ವದ್ರಸಿಕರಿಗೆ ತೃಪ್ತಿಯಾಗದಿದ್ದಲ್ಲಿ ನಾನು ನನ್ನ ಕಾವ್ಯಕೌಶಲವನ್ನು ಮಿಗಿಲೆಂದು ಭಾವಿಸುವುದಿಲ್ಲ. ವ್ಯುತ್ಪನ್ನರ ಅಂತರಂಗದಲ್ಲಿ ಕೂಡ ಅಳುಕಿಗೆ ಆಸ್ಪದವಿರುವುದಷ್ಟೆ.
ಕಾಳಿದಾಸನು ಹೇಳಿಕೊಳ್ಳುವ ತನ್ನೊಳಗಿನ ಅಳುಕು ಲೋಕಸಮ್ಮಾನನಿರೀಕ್ಷೆಯ ಕಾತರ್ಯವನ್ನು ಧ್ವನಿಸುವುದಿಲ್ಲ. ಅದಕ್ಕೆ ಬದಲಾಗಿ ಪರಿಪಕ್ವಬುದ್ಧಿಯ ಕವಿಯೊಬ್ಬನ ಪ್ರಾಮಾಣಿಕಭಾವವನ್ನು ಸಾರುತ್ತದೆ. ಇದು ಯಾವುದೇ ಶಕ್ತಕಲಾವಿದನ ಆತ್ಮವಿಮರ್ಶನೆಯ ಸಾಕಾರ. ಏಕೆಂದರೆ, ಅವನಿಗೆ ತನ್ನ ಕೃತಿಯು ಸಾಮಾನ್ಯರ ಮನಸ್ಸನ್ನು ರಂಜಿಸಿದರೆ ತೃಪ್ತಿಯಾಗದು; ಏನಿದ್ದರೂ ವಿದ್ವದ್ರಸಿಕರ ಮನ್ನಣೆಯೇ ಮನ್ನಣೆ. ಇದು ಸಹೃದಯರ ಪೈಕಿ ಒಂದು ಬಗೆಯವರೆಂದು ವಾಮನನು ತಿಳಿಸುವ “ಅರೋಚಕಿ”ಗಳಿಗೆ ಸಂಬಂಧಿಸಿದೆ ಎನ್ನಬಹುದು.[3]
ಮಾಲವಿಕಾಗ್ನಿಮಿತ್ರದಲ್ಲಿ ತನ್ನ ಕಾವ್ಯಾಸ್ತಿತ್ವವನ್ನು ಸಮರ್ಥಿಸಿಕೊಳ್ಳುವಾಗ ಕಂಡುಬರುವ ಯೌವನಸಹಜವಾದ ಕೆಚ್ಚಾಗಲಿ, ವಿಕ್ರಮೋರ್ವಶೀಯದಲ್ಲಿ ಇದನ್ನು ಅದೊಂದು ಬಗೆಯ ನಯದಿಂದ ನಿಭಾಯಿಸುವ ಜಾಣ್ಮೆಯಾಗಲಿ ಇಲ್ಲಿಲ್ಲ. ಇಲ್ಲಿ ಇರುವುದೇನಿದ್ದರೂ ನೇರವಾದ ಮನದಾಳದ ಮಾತು. ಮಿಕ್ಕೆರಡು ಕೃತಿಗಳಲ್ಲಿ ಸ್ವಸಮರ್ಥನೆಗಾಗಿ ಲೋಕನೀತಿಯನ್ನೂ ಪ್ರಣಯಿದಾಕ್ಷಿಣ್ಯ ಮತ್ತು ವಸ್ತು-ಪಾತ್ರಮಾಹಾತ್ಮ್ಯವನ್ನೂ ಮುಂದಿರಿಸಿದಂತೆ ಇಲ್ಲಿ ಯಾವುದೇ ಬಹಿರಾಲಂಬನವನ್ನು ಆಶ್ರಯಿಸಿಲ್ಲ; ಕೇವಲ ಅವಕ್ರವಾಕ್ಯದಲ್ಲಿಯೇ ತನ್ನ ಆದರ್ಶವನ್ನು ನಿವೇದಿಸಿಕೊಂಡಿದ್ದಾನೆ. ಇದು ನಿಶ್ಚಯವಾಗಿ ಅವನ ಬೆಳೆವಣಿಗೆಯ ಕುರುಹು.
ಈ ನಾಟಕದ ಐದನೆಯ ಅಂಕದಲ್ಲಿ ಬರುವ ಸುಪ್ರಸಿದ್ಧಪದ್ಯವೊಂದು ಬಹುಕಾರಣಗಳಿಂದ ಕಾವ್ಯಮೀಮಾಂಸೆಯ ಅಧ್ಯಯನಕ್ಕೆ ಮುಖ್ಯವೆನಿಸಿದೆ:
ರಮ್ಯಾಣಿ ವೀಕ್ಷ್ಯ ಮಧುರಾಂಶ್ಚ ನಿಶಮ್ಯ ಶಬ್ದಾನ್
ಪರ್ಯುತ್ಸುಕೀಭವತಿ ಯತ್ ಸುಖಿತೋऽಪಿ ಜಂತುಃ |
ತಚ್ಚೇತಸಾ ಸ್ಮರತಿ ನೂನಮಬೋಧಪೂರ್ವಂ
ಭಾವಸ್ಥಿರಾಣಿ ಜನನಾಂತರಸೌಹೃದಾನಿ || (೫.೨)
ಚೆಲುವಾದ ನೋಟವನ್ನು ಕಂಡಾಗ, ಇಂಪಾದ ಮಾತನ್ನು ಆಲಿಸಿದಾಗ ನಮಗೆ ಸಂತಸವೆನಿಸಿದರೂ ಮನಸ್ಸಿನೊಳಗೆ ಯಾವುದೋ ಖೇದವುಂಟಾಗುತ್ತದೆ. ಬಹುಶಃ ನಮ್ಮ ಅಂತರಂಗವು ಭಾವದಲ್ಲಿ ನೆಲೆ ನಿಂತ, ಅರಿವಿಗೆ ಮೀರಿದ ಜನ್ಮಾಂತರದ ಸ್ನೇಹಮಾಧುರ್ಯಗಳನ್ನು ನೆನೆಯುವುದೇ ಇದಕ್ಕೆ ಕಾರಣ.
ಇದೊಂದು ಒಗಟಿನಂಥ ಪದ್ಯ. ನಮಗೆ ವಿಭಿನ್ನವಿಷಯಗಳ ಮೂಲಕ “ಸುಖಾನುಭವ” ಆಗುತ್ತಿದ್ದರೂ ಅಂತರಂಗದಲ್ಲಿ ಅದೇನೋ ವೇದನೆಯಿರುವಂತೆ ತೋರುವುದೆಂಬ ಮಾತೇ ಇಲ್ಲಿಯ ಒಗಟಿನ ಕೇಂದ್ರಬಿಂದು. ಇದಕ್ಕೆ ಪೂರಕವಾಗಿ ಮತ್ತೊಂದು ಒಗಟೆಯು ಉತ್ತರದ ರೂಪದ್ಲಲಿ ಬಂದಿದೆ. ಅದು ಈ ಬಗೆಯ ವೇದನೆಗೆ ಕಾರಣ ನಾವು ನಮ್ಮ ಅಂತರಂಗದಲ್ಲಿ ನಿಕ್ಷಿಪ್ತವಾದ ಜನ್ಮಾಂತರದ ಸ್ನೇಹಾನುರಾಗಗಳನ್ನು ಅರಿವಿಲ್ಲದೆ ನೆನೆಯುವೆವೆಂಬ ಸಂಗತಿ. ಮೊದಲನೆಯದು ನಮ್ಮೆಲ್ಲರ ಅನುಭವಕ್ಕೆ ಸುಲಭವಾಗಿ ಬರುವಂಥದ್ದು. ಎರಡನೆಯದು ಕಾಳಿದಾಸನಂಥ ಪ್ರಬುದ್ಧನಾದ ದಾರ್ಶನಿಕಕವಿಯಷ್ಟೇ ಗುರುತಿಸಿ ಹೇಳಬಲ್ಲ ತತ್ತ್ವ. ಇದನ್ನು ನಾವು ಚೆನ್ನಾಗಿ ಮನಸ್ಸಿಗೆ ತಂದುಕೊಳ್ಳದೆ ಪದ್ಯದ ಅರ್ಥ ಸ್ಪಷ್ಟವಾಗದು.
ನಾಟ್ಯಶಾಸ್ತ್ರದಲ್ಲಿ ಬರುವ ರಸಸೂತ್ರದ ವಿವರಣೆ ಮಾಡುವಾಗ ಅಭಿನವಗುಪ್ತನು ಈ ಪದ್ಯವನ್ನು ಬಳಸಿಕೊಂಡಿದ್ದಾನೆ. ಅವನು ಪದ್ಯದ ಉತ್ತರಾರ್ಧವನ್ನು ವಿಶೇಷವಾಗಿ ವಿವರಿಸುತ್ತ, ಇದು ಹೇಳುವ ಸ್ಮರಣೆಯು ತಾರ್ಕಿಕರೇ ಮೊದಲಾದ ದಾರ್ಶನಿಕರು ನಿರೂಪಿಸುವ ಪೂರ್ವಾನುಭವಸಂಸ್ಕಾರದಿಂದ ಹುಟ್ಟುವ ನೆನಪಲ್ಲ; ಅದು ಪ್ರತಿಭಾನವೆಂದು ಪ್ರಸಿದ್ಧವಾದ ಪ್ರತ್ಯಭಿಜ್ಞೆಯ ಸ್ವರೂಪವುಳ್ಳ ರಸವೆಂದು ಒಕ್ಕಣಿಸುತ್ತಾನೆ. ಆದುದರಿಂದಲೇ ಇದರ ಪ್ರಸ್ಫುರಣೆಯ ಕಾಲದಲ್ಲಿ ಇತರ ಉಪಾಧಿಗಳು ಅಂಟದೆ ನಿರ್ವಿಶೇಷವೂ ಆಸ್ವಾದಮಾತ್ರವೂ ಆದ ಅನುಭವವು ಉಂಟಾಗುತ್ತದೆ. ಇಂಥ ಅನುಭವವು ಲೌಕಿಕವೂ ಅಲ್ಲ, ಮಿಥ್ಯೆಯೂ ಅಲ್ಲ.[4] ಇದರ ತಾತ್ಪರ್ಯವಿಷ್ಟೇ: ಲೌಕಿಕಸ್ತರದ ಖಿನ್ನತೆಯು ಸ್ವಾರ್ಥಲೇಪವನ್ನು ಹೊಂದಿರುವ ಕಾರಣ ದುಃಖಕಾರಿ. ಲೋಕೋತ್ತರಸ್ತರದ “ಖಿನ್ನತೆ”ಗೆ ಇಂಥ ಸೋಂಕಿಲ್ಲದ ಕಾರಣ ಅದು ಚಿತ್ತವಿಶ್ರಾಂತಿಕಾರಕ.
ಸಾಮಾನ್ಯವಾಗಿ ಕಾರ್ಯ-ಕಾರಣಭಾವದಿಂದ ಪ್ರವರ್ತಿತವಾಗುವ ತರ್ಕದ ಮೂಲಕ ಕಾಣುವ ವ್ಯವಹಾರಗಳಲ್ಲಿ ಸುಖವನ್ನೀಯುವ ಪದಾರ್ಥಗಳಿಂದ ಸುಖವೇ ಆಗಬೇಕು, ದುಃಖವನ್ನೀಯುವ ಪದಾರ್ಥಗಳಿಂದ ದುಃಖವೇ ಆಗಬೇಕೆಂಬುದು ನಿಯಮ. ಆದರೆ ದಿಟವಾಗಿ ಕಂಡರೆ ಈ ತರ್ಕ ಎಲ್ಲ ಕಡೆಯಲ್ಲಿಯೂ ಸಲ್ಲುವುದಿಲ್ಲ. ಇದನ್ನೇ ಚೆಲುವನ್ನು ಕಂಡು, ಇನಿದನ್ನು ಕೇಳಿ ಆಸ್ವಾದಿಸುವಾಗ ನಮಗೆ ಲೋಕರೂಢಿಯ ಸುಖಾನುಭವ ದಕ್ಕದೆ ಪರ್ಯುತ್ಸುಕತ್ವವೇ ಉಂಟಾಗುತ್ತದೆಂದು ಕಾಳಿದಾಸ ಹೇಳಿರುವುದು. ಹಾಗೆಂದ ಮಾತ್ರಕ್ಕೆ ಚೆಲುವು ಕುರೂಪವಾಯಿತೆಂದೂ ಇಂಪು ಕರ್ಕಶವಾಯಿತೆಂದೂ ಅರ್ಥವಲ್ಲ. ಲೋಕದ ವಸ್ತುಗಳನ್ನು ಸ್ವಾರ್ಥದೃಷ್ಟಿಯಿಂದ ಅನುಭವಿಸುವಾಗ ಅಲ್ಲಿಯ “ಚೆಲುವು”, “ಇಂಪು”, “ಕುರೂಪ” ಹಾಗೂ “ಕರ್ಕಶತೆ”ಗಳಿಗೆ ಅನುಸಾರವಾಗಿ ನಮಗೆ ಸುಖ-ಅಸುಖಗಳ ಪ್ರತೀತಿಯಾಗುವುದು ಸ್ಪಷ್ಟ. ಆದರೆ ಇವುಗಳನ್ನೇ ನಿಃಸ್ವಾರ್ಥದೃಷ್ಟಿಯಿಂದ ಆಸ್ವಾದಿಸುವಾಗ ಇಂತಾಗುವುದಿಲ್ಲ; ಆಗ ಕೇವಲ ಆನಂದವಿರುತ್ತದೆ. ನಿಃಸ್ವಾರ್ಥತೆಗೆ ಸಾಕ್ಷಿಭಾವವು ಪರಮಾವಶ್ಯಕ. ಇಂಥ ಸಾಕ್ಷಿಸ್ಥಿತಿಯ ಲಕ್ಷಣಗಳಾದರೋ ನಿರ್ವೇದ, ನಿರೀಹತೆ ಮತ್ತು ಅದೊಂದು ತೆರನಾದ ಅಲೌಕಿಕಜಿಹಾಸೆ. ಇದನ್ನೇ ಕಾಳಿದಾಸನು “ಪರ್ಯುತ್ಸುಕತ್ವ” ಎಂದಿರುವುದು.
ವ್ಯಷ್ಟಿಯು ಸಮಷ್ಟಿಯಲ್ಲಿ ಬಿರುಕಿಲ್ಲದೆ ಬೆರೆಯಬೇಕೆಂಬ ತುಡಿತವು ಇಂಥ ಅನುಭಗಳ ಹಿಂದಿರುವ ಆಪ್ಯಾಯಕಜುಗುಪ್ಸೆಯಾಗಿ ಕಾಣುತ್ತದೆ. ಕಲಾನುಭವದ ಸಮಯದಲ್ಲಿ ಭವಲೋಕದ ರಾಗ-ದ್ವೇಷಾತ್ಮಕವಾದ ಭಾವವಿಕಾರಗಳು ಅಳಿದು ಅಭವಲೋಕದ ವಿಗಲಿತವೇದ್ಯಾಂತರಸ್ಥಿತಿಯ ರಸವು ಸ್ಫುರಿಸುತ್ತದೆ. ಈ ಬಗೆಯ ರಸಸಮಾಧಿಯು “ಉಲ್ಲಾಸ”ವಲ್ಲ, “ಉತ್ಸಾಹ”ವಲ್ಲ; ಚಿತ್ತೋದ್ರೇಕವಂತೂ ಅಲ್ಲವೇ ಅಲ್ಲ. ಆದುದರಿಂದಲೇ ಇದು ಪರ್ಯುತ್ಸುಕತ್ವೇ ಸರಿ. ಇಲ್ಲಿ ಜೀವವು ತನ್ನ ಪ್ರತ್ಯೇಕತಾಸ್ಥಿತಿಗೆ ಕಾರಣವಾದ ಅವಿದ್ಯಾಮೂಲದ ರಾಗ-ದ್ವೇಷಗಳನ್ನೂ ಅಹಂಕಾರ-ಮಮಕಾರಗಳನ್ನೂ ಬೀಳ್ಗೊಡುವ ಹವಣುಂಟು. ಹೀಗೆ ವ್ಯಷ್ಟಿಯು ಅಡಗಿ ಸಮಷ್ಟಿಯು ಮೂಡುವ ಸಂಧ್ಯನುಭವವು ವ್ಯಷ್ಟಿಗೆ ಒಂದು ಬಗೆಯ ವೇದನೆಯೇ ಸರಿ. ಆದರೆ ಅದು ರಸಸೃಷ್ಟಿಗೆ ಅನಿವಾರ್ಯವಾದ ಸಾಧನೆಯೂ ಹೌದು. ಕೋಶದಿಂದ ಕಂಬಳಿಹುಳುವು ಪತಂಗವಾಗಿ ಹೊರಬರುವಾಗ, ಮೊಗ್ಗು ಹೂವಾಗಲೆಂದು ದಳಗಳನ್ನು ತೆರೆದುಕೊಳ್ಳುವಾಗ, ನದಿಯು ಸಾಗರವನ್ನು ಸೇರಿ ಸಮುದ್ರವಾಗುವಾಗ, ಮಿಥುನವು ಮೈಥುನವೇ ಆಗುವಾಗ ಉಂಟಾಗುವ ಮಧುರವೇದನೆಯ ಬಗೆಯಿದು.[5]
ಒಟ್ಟಿನಲ್ಲಿ ಕಾಳಿದಾಸನು ಈ ಪದ್ಯದ ಮೂಲಕ ಕೇವಲ ಕಾವ್ಯಮೀಮಾಂಸೆಗೆ ಮಾತ್ರವಲ್ಲ, ಇಡಿಯ ಸೌಂದರ್ಯಮೀಮಾಂಸೆಗೇ ಸ್ವೋಪಜ್ಞವಾದ ಕೊಡುಗೆ ನೀಡಿದ್ದಾನೆ. ಪರ್ಯಾಲೋಚಿಸಿದಷ್ಟೂ ಹೆಚ್ಚುಹೆಚ್ಚಾಗಿ ಸಾರ್ಥಕಧ್ವನಿಗಳನ್ನು ತೆರೆದಿಡುವ ಈ ಪದ್ಯವು ಉಪನಿಷದ್ದರ್ಶನಕ್ಕೆ ಸದೃಶವಾಗಿದೆ.
[1] ಮೇಲ್ನೋಟಕ್ಕೆ ಇದೇ ಬಗೆಯಾದ ಭಾವವನ್ನು “ರಘುವಂಶ”ದ ಆದಿಯಲ್ಲಿ ಕಾಣಬಹುದಾದರೂ ಅಲ್ಲಿಯ ಪರಿಪಾಕ ತುಂಬ ಮೇಲ್ಮಟ್ಟದ್ದು. ಇದನ್ನು ಆ ಪ್ರಕರಣದಲ್ಲಿಯೇ ಚರ್ಚಿಸುವುದಾಗುತ್ತದೆ.
[2] ರಸಾವೇಶತಃ ಕಾವ್ಯಂ ವಿರಚಯತೋ ನ ಚ ವಿವೇಕ್ತ್ರೀ ದೃಷ್ಟಿಃ, ತಸ್ಮಾದನುಪರೀಕ್ಷೇತ | ಅಧಿಕಸ್ಯ ತ್ಯಾಗೋ ನ್ಯೂನಸ್ಯ ಪೂರಣಮ್ ಅನ್ಯಥಾಸ್ಥಿತಸ್ಯ ಪರಿವರ್ತನಂ ಪ್ರಸ್ಮೃತಸ್ಯಾನುಸಂಧಾನಂ ಚ | ಇತ್ಯಹೀನಮ್ || (ಕಾವ್ಯಮೀಮಾಂಸಾ, ಪು. ೫೨)
[3] ಕಾವ್ಯಾಲಂಕಾರಸೂತ್ರವೃತ್ತಿ, ೧.೨.೧
[4] ಅತ್ರ ಹಿ ಸ್ಮರತೀತಿ ಯಾ ಸ್ಮೃತಿರುಪದರ್ಶಿತಾ ಸಾ ನ ತಾರ್ಕಿಕಪ್ರಸಿದ್ಧಾ | ಪೂರ್ವಮೇತಸ್ಯಾರ್ಥಸ್ಯಾನನುಭೂತತ್ವಾತ್ | ಅಪಿ ತು ಪ್ರತಿಭಾನಾಪರಪರ್ಯಾಯಸಾಕ್ಷಾತ್ಕಾರಸ್ವಭಾವೇಯಮಿತಿ | ಸರ್ವಥಾ ತಾವದೇಷಾಸ್ತಿ ಪ್ರತೀತಿರಾಸ್ವಾದಾತ್ಮಾ ಯಸ್ಯಾಂ ರತಿರೇವ ಭಾತಿ | ತತ ಏವ ವಿಶೇಷಾಂತರಾನುಪಹಿತತ್ವಾತ್ ಸಾ ರಸನೀಯಾ ಸತೀ ನ ಲೌಕಿಕೀ ನ ಮಿಥ್ಯಾ ನಾನಿರ್ವಾಚ್ಯಾ ನ ಲೌಕಿಕತುಲ್ಯಾ ನ ತದಾರೋಪಾದಿರೂಪಾ | ತಥೈವ ಚೋಪಚಯಾವಸ್ಥಾಸು ದೇಶಾದ್ಯನಿಯಂತ್ರಣಾದನುಕಾರೋऽಪ್ಯಸ್ತು | ಭಾವಾನುಗಾಮಿತಯಾ ಕರಣಾತ್ ವಿಷಯಸಾಮಗ್ರ್ಯಪಿ ಭವತು ವಿಜ್ಞಾನವಾದಾವಲಂಬನಾತ್ | ಸರ್ವಥಾ ರಸನಾತ್ಮಕವೀತವಿಘ್ನಪ್ರತೀತಿಗ್ರಾಹ್ಯೋ ಭಾವ ಏವ ರಸಃ || (ನಾಟ್ಯಶಾಸ್ತ್ರ, ಅಭಿನವಭಾರತಿಯ ಸಹಿತ; ಸಂ. ೧, ಪು. ೨೭೮-೭೯)
[5] “ಭಾಷಾಭೃಂಗದ ಬೆನ್ನೇರಿ” ಕೃತಿಯಲ್ಲಿ ಈ ಪದ್ಯವನ್ನು ಮತ್ತೂ ವಿವರವಾಗಿ ಚರ್ಚಿಸಲಾಗಿದೆ. ಆಸಕ್ತರು ಅದನ್ನು ಗಮನಿಸಬಹುದು (ಪು. ೧೦೯-೧೧೮).
To be continued.