ಮಣ್ಣು ಕನಸು ಕಾಣುತ್ತದೆಯೇ? ‘ಮೃತ್’, ಮಣ್ಣು ಮೂರ್ತವಾದರೂ ಅಚೇತನ. ‘ಸ್ವಪ್ನ’, ಕನಸು ಅಮೂರ್ತವಾದರೂ ಚೇತನದ ಅಂಶ ಹೊಂದಿದ್ದು ಅರೆಕ್ಷಣದಲ್ಲಿ ಲೋಕಾಲೋಕಗಳನ್ನು ಕಾಣಿಸುತ್ತದೆ. ಮಣ್ಣು ನೆಲವನ್ನು, ಭೂಮಿಯನ್ನು, ರಾಜ್ಯಗಳನ್ನು ಪ್ರತಿನಿಧಿಸುವ ಪದ. ಕನಸು ಜೀವಿಗಳ ಮನಃಪ್ರಪಂಚದಲ್ಲಿ ಕಂಡುಬರುವ ವ್ಯಾಪಾರ. ಮಣ್ಣು ಇರದಿದ್ದರೆ ನೆಲೆ ಇಲ್ಲ, ಬೆಳೆ ಇಲ್ಲ; ಜೀವನವೂ ಇಲ್ಲ. ಜಡದಂತೆ ಮೂರ್ತರೂಪದಲ್ಲಿದ್ದರೂ ಕನಸು ಕಾಣಲು, ತನ್ನ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಲು, ತನ್ನಿಂದ ಮೂಡಿಬಂದ ಜೀವಚೈತನ್ಯಗಳ ಸಹಕಾರದಿಂದ ಮಾತ್ರ ಸಾಧ್ಯ. ಮಣ್ಣಿನ ಕನಸನ್ನು ಸಾಕಾರಗೊಳಿಸಲು ಜೀವಜಗತ್ತಿನ ವ್ಯಕ್ತಿಗಳು, ಮನಸ್ಸುಗಳು, ಬುದ್ಧಿಶಕ್ತಿ-ಆತ್ಮಶಕ್ತಿಗಳು, ಚೇತನಾಚೇತನ ವಸ್ತುಗಳು ಪರಸ್ಪರ ಹೇಗೆ ಸಮರಸದಿಂದಿರಬೇಕು ಎನ್ನುವ ಹಲವು ವಿಚಾರಗಳನ್ನು ‘ಮಣ್ಣಿನ ಕನಸು’ ಎಂಬ ಪದಜೋಡಣೆ ನಮ್ಮ ಮುಂದೆ ಕಾಣಿಸುತ್ತದೆ. ಅಚೇತನದಲ್ಲಿ ಚೇತನಶಕ್ತಿಯನ್ನು, ಅಜೀವದಲ್ಲಿ ಜೀವಸಂಚಲನವನ್ನು ಮೂಡಿಸಿ ಮಣ್ಣಿಗೆ ಕನಸು ಕಾಣುವ ಧೀಶಕ್ತಿಯನ್ನು ನೀಡಿರುವ ಈ ಶೀರ್ಷಿಕೆ ‘ಮಣ್ಣಿನ ಕನಸು’ ಪ್ರತಿಭೆಯ ಉಡ್ಡಯನಕ್ಕೆ ಉದಾಹರಣೆ.
ಅಸಂಖ್ಯ ಕನಸುಗಳು ಈ ಮಣ್ಣಿಗೆ. ಉದಯನ ಮಹಾರಾಜನಿಗೆ ನಡಾಗಿರಿಯಂಥ ಆನೆಯನ್ನು ಪಳಗಿಸುವ ಕನಸು, ವಾಸವದತ್ತೆಗೆ ಉದಯನನ ವೀಣಾವಾದನ ಕೇಳುವ ಕನಸು, ಪದ್ಮಾವತಿಗೂ ಅದೇ ಉದಯನನ ಕನಸು, ಮಹಾಮಾತ್ಯ ಯೌಗಂಧರಾಯಣನಿಗೆ ಧರ್ಮ-ಬ್ರಹ್ಮ-ರಸಗಳ ಬಲ-ಭಾಗ್ಯಗಳನ್ನು ಮೈಗೂಡಿಸಿಕೊಂಡಿರುವ ಒಬ್ಬ ಸಾರ್ವಭೌಮನ ಕನಸು, ಮಗು ರೋಹಸೇನನಿಗೆ ಚಿನ್ನದ ಬಂಡಿಯ ಕನಸು, ಧೂತಾದೇವಿಗೆ ತನ್ನ ಸಂಸಾರವನ್ನು ಉಳಿಸಿಕೊಳ್ಳುವ ಕನಸು, ಹಣವನ್ನೆಲ್ಲ ಕಳೆದುಕೊಂಡ - ದರಿದ್ರನಾದರೂ ಜಾಜಿ-ಮಲ್ಲಿಗೆಗಳ ಪರಿಮಳವನ್ನು ಪ್ರೀತಿಸುವ - ಸಾರ್ಥವಾಹ ಚಾರುದತ್ತನಿಗೆ ವಸಂತಸೇನೆಯ ಕನಸು, ವಸಂತಸೇನೆಗೆ ಗಣಿಕಾವೃತ್ತಿಯನ್ನು ಬಿಟ್ಟು ಗೃಹಿಣಿಯಾಗುವ ಕನಸು, ಶರ್ವಿಲಕನಿಗೆ ಮದನಿಕೆಯ ಕನಸು, ಆಮ್ರಪಾಲಿಯ ಛಿದ್ರಗೊಂಡ ಕನಸು, ರಾಜರಿಗೆ ರಾಜ್ಯಗಳನ್ನು ವಿಸ್ತರಿಸಿಕೊಳ್ಳುವ ಕನಸು, ಮೈತ್ರೇಯನಂಥವರಿಗೆ ರಸಭೋಜನದ ಕನಸು, ರೇಭಿಲನಿಗೆ ಕಲೆ-ಆದರ್ಶಗಳ ಕನಸು. ಅಚೇತನವಾದ ಮಣ್ಣು ಸಚೇತನವಾದ ಜೀವಗಳ ಕನಸುಗಳಿಗೆ ನೆಲೆಯಾಗಿ, ಅವು ಮಣ್ಣಿನ ಕನಸುಗಳಗಿ ಮಾರ್ಪಡುತ್ತವೆ. ಇಂಥ ಕನಸುಗಳೆಲ್ಲ ಸಾಕಾರಗೊಂಡು ನನಸಾಗಬೇಕಾದರೆ ಈ ಮಣ್ಣಿನ ಮಕ್ಕಳಲ್ಲಿ ಪ್ರೀತಿ, ಪ್ರೇಮ, ಸ್ನೇಹ, ತ್ಯಾಗ, ಪರಸ್ಪರ ಅರಿವು ಆವಶ್ಯಕ. ಆದರೆ ಇಲ್ಲಿ ಸಕಾರಣ ಅಥವಾ ಅಕಾರಣ ದ್ವೇಷ, ಅಸೂಯೆ, ವೈರ, ಕೋಪ, ಅಧಿಕಾರಲಾಲಸೆ, ಮಹಾಸ್ವಾರ್ಥಗಳು ತುಂಬಿಕೊಂಡು ಕನಸುಗಳ ಸಾಕ್ಷಾತ್ಕಾರ ಕಷ್ಟತರವಾಗುತ್ತದೆ. ಕೆಡುಕನ್ನು ಒತ್ತಿ ತುಳಿದು ಒಳಿತನ್ನು ಹಿಡಿದು ಮೇಲಕ್ಕೆತ್ತಿ ಮಣ್ಣು ತನ್ನ ಕನಸನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ. ಕೆಟ್ಟ ಬೀಜಗಳನ್ನು ತನ್ನೊಳಗಿರಿಸಿಕೊಂಡು ಮೊಳಯಿಸದೆ ಒಳ್ಳೆಯ ಬೀಜಗಳನ್ನು ಧರಿಸಿ ಫಲಿಯಿಸಿ ಹೆಮ್ಮರವಾಗಿಸಲು ಮಣ್ಣು ಕನಸು ಕಾಣಬೇಕು. ಆದರೆ ಈ ಮಣ್ಣಿನಲ್ಲಿ ಬಿದ್ದ ಮುಳ್ಳಿನ ಬೀಜಗಳು, ವಿಷವೃಕ್ಷದ ಬೀಜಗಳು ಎಷ್ಟೋ ಬಾರಿ ಮೊಳೆತು ಹೆಮ್ಮರವಾಗುವುದು ಅದರ ದುರ್ದೈವ.
ಮಣ್ಣಿನ ಕನಸು ಎಂದರೆ ವಿಶಾಲಾರ್ಥದಲ್ಲಿ ಈ ಭೂಮಿಯ ಕನಸು; ಇಡಿಯ ಜಗತ್ತಿನ ಕನಸು. ಇದು ಸಾಕಾರವಾಗಬೇಕಾದರೆ ಯಾವುದೋ ಒಂದು ಊರಿನ, ಒಂದು ರಾಜ್ಯದ ಒಂದು ಸ್ತರದ ವ್ಯಕ್ತಿಗಳಿಂದ ಸಾಧ್ಯವಿಲ್ಲ ಎನ್ನುವುದನ್ನು ಸಂಕೇತಿಸುವಂತೆ ಈ ಕಾದಂಬರಿಯ ಭಿತ್ತಿಯಲ್ಲಿ ವತ್ಸದೇಶದ ರಾಜ ಉದಯನ, ಅವಂತಿದೇಶದ ಪ್ರಭು ಪ್ರದ್ಯೋತ ಮಹಾಸೇನ, ಮಗಧಸಾಮ್ರಾಜ್ಯದ ಮಹಾರಾಜ ಅಜಾತಶತ್ರು-ದರ್ಶಕ, ಕೋಸಲದೇಶದ ಒಡೆಯ ಪ್ರಸೇನಜಿತ್ (ಕಾದಂಬರಿಯಲ್ಲಿ ಇವನಿಗೆ ಹೆಚ್ಚಿನ ಪಾತ್ರವಿಲ್ಲ), ಪಾಂಚಾಲದೇಶದ ದೊರೆ ಆರುಣಿ - ಈ ಎಲ್ಲ ರಾಜ-ಮಹಾರಾಜರ ಮಂತ್ರಿಗಳು, ಅಧಿಕಾರಿಗಳು, ರಾಣಿಯರು, ಸೇನಾಪತಿಗಳು, ಕಲಾವಿದರು, ಸಾರ್ಥವಾಹರು, ವಿದೂಷಕರು, ರಾಜ್ಯದಲ್ಲಿ ನಡೆಯುವ ಉತ್ಸವಗಳನ್ನು ಸಮರ್ಪಕವಾಗಿ ಸಾಗಿಸುವ ವ್ಯವಸ್ಥಾಪಕರು, ಅವುಗಳಲ್ಲಿ ಭಾಗವಹಿಸಿ ಹರ್ಷಿಸುವ ಪ್ರಜಾವರ್ಗ, ರಾಜರಿಗೆ ನಿಷ್ಠವಾಗಿರುವ ಸೇವಕವರ್ಗ, ಬೇಹುಗಾರರು, ಆರಣ್ಯಕರು - ಎಲ್ಲರ ಪರಸ್ಪರ ಸಹಕಾರ ಬೇಕಾಗುತ್ತದೆ.
‘ಸ್ವಪ್ನವಾಸವದತ್ತ’ ಮತ್ತು ‘ಮೃಚ್ಛಕಟಿಕ’ ಎಂಬ ಎರಡು ಭವ್ಯಕೃತಿಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ಈ ಕೃತಿಯಲ್ಲಿ ಹದವರಿತು ಬೆಸೆಯಲಾಗಿದೆ. ‘ಸ್ವಪ್ನವಾಸವದತ್ತ’ ರಾಜ-ಮಹಾರಾಜರನ್ನು, ಅರಮನೆ-ಅಂತಃಪುರಗಳನ್ನು ಕೇಂದ್ರವಾಗಿರಿಸಿಕೊಂಡು ಸಾಗುವ ನಾಟಕ. ‘ಮೃಚ್ಛಕಟಿಕ’ ವೇಶ್ಯೆ-ವರ್ತಕರನ್ನು, ಬೀದಿ-ಜೂಜುಕಟ್ಟೆಗಳನ್ನು ಒಳಗೊಂಡು ಬೆಳೆಯುವ ಪ್ರಕರಣ. ಒಂದು ಆಢ್ಯರ ಬದುಕು; ಮತ್ತೊಂದು ಸಾಮಾನ್ಯರ ಜೀವನ. ಸದ್ಯದ ಕಾದಂಬರಿ ಇವೆರಡನ್ನೂ ಸಮರಸವಾಗಿ ಹೆಣೆದಿದೆ. ಲೇಖಕರು ಇಂಥ ಕೃತಿಯ ಕನಸನ್ನು ನನಸಾಗಿಸಲು ಕಾಲಯಂತ್ರದಲ್ಲಿ ಕುಳಿತು ವರ್ತಮಾನದಿಂದ ಸುಮಾರು ಎರಡು ಸಾವಿರದ ಐನೂರು ವರ್ಷಗಳಷ್ಟು ಹಿಮ್ಮೊಗವಾಗಿ ಚಲಿಸಿ ಅಲ್ಲಿ ತಾವು ಕಂಡ ಕಾಣ್ಕೆಗಳನ್ನು ವರ್ತಮಾನದ ಕಣ್ಣುಗಳಿಂದ ಪರಿಶೀಲಿಸಿ ನಮ್ಮ ಜಗತ್ತಿನ ಆಗು-ಹೋಗುಗಳೊಡನೆ ತಾಳೆ ನೋಡಿ, ಕಲ್ಪನೆಯ ಮೂಸೆಯಲ್ಲಿ ಭೂತ-ವರ್ತಮಾನಗಳ ಸಂದರ್ಭಗಳನ್ನು ಕುದಿಸಿ ಹೊಸ ರೂಪವನ್ನು ಕೊಟ್ಟು ಇದೇ ಅಧಿಕೃತವೆನ್ನುವಂತೆ ದುಡಿದಿದ್ದಾರೆ. ಇದು ಐತಿಹಾಸಿಕವೆ? ಸಾಮಾಜಿಕವೆ? ಪ್ರಸಿದ್ಧ ಕೃತಿಗಳಿಂದ ಎರವಲು ಪಡೆದ ನವಸೃಷ್ಟಿಯೆ? ಎಲ್ಲವೂ ಹೌದು; ಆದರೆ ಎಲ್ಲವನ್ನೂ ಮೀರಿ ತನ್ನತನವನ್ನು ಪ್ರತಿಯೊಂದು ಹಂತದಲ್ಲಿಯೂ ಮೆರೆದಿರುವುದು ಕೂಡ ಹೌದು.
* * *
ವತ್ಸರಾಜ ಉದಯನ ಪ್ರಜಾಪ್ರೇಮಿ. ಆಟವಿಕರಲ್ಲಿಯೂ ಅವನಿಗೆ ಸ್ನೇಹ ಉಂಟು. ಉತ್ಸವಪ್ರಿಯ, ಸಾಹಸಪ್ರಿಯ, ಅದ್ಭುತ ವೀಣಾವಾದಕ. ತನ್ನ ವೀಣಾವಾದನದಿಂದ ಆನೆಗಳನ್ನೂ ಪಳಗಿಸಬಲ್ಲನೆಂಬ ಪ್ರತೀತಿ. ಇಂಥ ತರುಣಪ್ರಭುವಿನ ಅತ್ಯುತ್ಸಾಹಕ್ಕೆ ಕಡಿವಾಣ ಹಾಕಲು ಸಮರ್ಥ ನೀತಿವಿಶಾರದ, ವಿದ್ವಾಂಸ, ರಾಜನಿಗೂ ರಾಜ್ಯಕ್ಕೂ ಪರಮನಿಷ್ಠನಾಗಿರುವ ಯೌಗಂಧರಾಯಣನಂಥ ಮಾರ್ಗದರ್ಶಕ ಮಂತ್ರಾಲೋಚಕನ ಆವಶ್ಯಕತೆ ಇದೆ. ಕೌಶಾಂಬಿಯಲ್ಲಿ ನಡೆಸುವ ವಸಂತೋತ್ಸವಕ್ಕೆ ದೇಶ-ವಿದೇಶಗಳ ಕಲಾವಿದರು ಮತ್ತು ಪ್ರಜಾಪ್ರಮುಖರನ್ನು ಆಹ್ವಾನಿಸಲಾಗುತ್ತದೆ. ರಾಜ್ಯಗಳು ಪರಸ್ಪರ ಅರಿತುಕೊಳ್ಳಲು, ವಿಚಾರವಿನಿಮಯ ಮಾಡಿಕೊಳ್ಳಲು ಇಂಥ ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ನೆರವಾಗುತ್ತದೆ. ಇಲ್ಲವಾದರೆ ರಾಜ್ಯಗಳು ತಮ್ಮ ಪಾಡಿಗೆ ತಾವು ಪ್ರತ್ಯೇಕ ದ್ವೀಪಗಳಂತೆ ಆಗುತ್ತವೆ. ಈ ಬಾರಿಯ ವಸಂತೋತ್ಸವಕ್ಕೆ ಉಜ್ಜಯಿನಿಯ ಸಾರ್ಥವಾಹಮುಖ್ಯಸ್ಥ ರಾಜಾಹ್ವಾನದ ಮೇರೆಗೆ ಮುಖ್ಯ ಅತಿಥಿಯಾಗಿ ಬಂದಿದ್ದಾನೆ. ಈ ಮೂಲಕ ಎರಡೂ ರಾಜ್ಯಗಳ ವಿದ್ಯಮಾನವು ನಮಗೆ ಅರಿವಾಗುತ್ತದೆ. ಉದಯನನಂಥ ಕಲಾವಿದ ತನ್ನ ಪ್ರಜೆಗಳೆದುರು ತನ್ನ ಅಮೋಘ ಕಲೆಯನ್ನು ಪ್ರದರ್ಶಿಸುತ್ತಿರುತ್ತಾನೆ. ಇದರಿಂದ ಕಲಾಪ್ರೇಮಿಗಳಿಗೆ, ಸಾಮಾನ್ಯರಿಗೆ, ಆಟವಿಕರಿಗೆ ಅವನು ಹೆಚ್ಚು ಪ್ರಿಯನಾಗುತ್ತಾನೆ. ಅರಸ ಮತ್ತು ಪ್ರಜೆಗಳ ಇಂಥ ಸಾಮರಸ್ಯವೂ ಮಣ್ಣಿನ ಕನಸಾಗಿರುತ್ತದೆ.
ರಾಜ ಮತು ಪ್ರಜೆ ಸಾಂಸ್ಕೃತಿಕವಾಗಿ, ನೈತಿಕವಾಗಿ ಪರಸ್ಪರ ಪೂರಕವಾಗಿರುವ ರಾಜ್ಯಗಳಲ್ಲಿ ಸಾಮರಸ್ಯದ ವಾತಾವರಣ ಇರುತ್ತದೆ. ಉದಯನಪ್ರಭುವಿನ ರಾಜ್ಯದಲ್ಲಿ ಇಂಥ ವಾತಾವರಣವಿದ್ದಿತಾದರೂ ರಾಜನು ನಡಾಗಿರಿಯಂಥ ಆನೆಯನ್ನು ಪಳಗಿಸಿ ಅದನ್ನೇರುವ ಕನಸನ್ನು ಬೆಂಬತ್ತಿದಾಗ ರಾಜ್ಯದ ಶಾಂತಿ-ಭದ್ರತೆಗಳು ಹಾಳಾಗಿ ದೇಶವೇ ಶತ್ರುವಿನ ವಶವಾಗುತ್ತದೆ. ಇದು ಯೌಗಂಧರಾಯಣನ ಅನುಪಸ್ಥಿತಿಯಲ್ಲಿ ನಡೆದ ತರುಣರಾಜನ ಸಾಹಸದ ಪರಿಣಾಮ.
ಕೌಶಾಂಬಿಯ ವಸಂತೋತ್ಸವಕ್ಕೆ ಸಂವಾದಿ ಎಂಬಂತೆ ಉಜ್ಜಯಿನಿಯಲ್ಲಿ ಇಂದ್ರಧ್ವಜೋತ್ಸವ ಅತ್ಯಂತ ವೈಭವದಿಂದ ನಡೆಯುತ್ತದೆ. ಅಲ್ಲಿಯ ಮಹಾರಾಜ ಪ್ರದ್ಯೋತ ಮಹಾಪರಾಕ್ರಮಿ. ರಾಣಿ ಅಂಗಾರವತಿ. ಇವರಿಗೆ ಇಬ್ಬರು ಗಂಡುಮಕ್ಕಳು. ಒಬ್ಬಳೇ ಮಗಳು ವಾಸವದತ್ತೆ. ಈ ರಾಜಕುಟುಂಬದ ಮತ್ತು ಪ್ರಜೆಗಳ ನಡುವೆ ಉತ್ತಮವಾದ ಬಾಂಧವ್ಯವಿದ್ದರೂ ಕಿರಿಯ ಮಗ ಪಾಲಕನಂಥ ದುಷ್ಟಬುದ್ಧಿಯ ಸ್ವಾರ್ಥಿಯ ಮೂಲಕ ಅವಂತಿರಾಜ್ಯ ಅಶಾಂತಿ-ಅನ್ಯಾಯಗಳ ಮಡುವಾಗುತ್ತದೆ. ತನ್ನ ತಂದೆ, ತಾಯಿ ಮತ್ತು ಅಣ್ಣನ ಹತ್ಯೆ ಮಾಡಿಸಲೂ ಪಾಲಕ ಹೇಸುವುದಿಲ್ಲ.
ಪ್ರದ್ಯೋತನಿಗೆ ಉದಯನನ ಬಗೆಗೆ ಮೆಚ್ಚುಗೆಯ ಜೊತೆಗೇ ಒಂದು ರೀತಿಯ ಮತ್ಸರವೂ ಸೇರಿಕೊಂಡು ಕಿರಿಯ ಮಗ ಪಾಲಕನ ದುಷ್ಟ ಯೋಜನೆಗೆ ಸಮ್ಮತಿಸಿ ವತ್ಸರಾಜನನ್ನು ಸೆರೆಹಿಡಿಸುತ್ತಾನೆ. ಆದರೆ ಪ್ರದ್ಯೋತನ ಮಗಳು ವಾಸವದತ್ತೆ ಉದಯನನಿಗೂ ಅವನ ವೀಣಾವಾದನಕ್ಕೂ ಮಾರುಹೋದವಳು. ತಂದೆಯನ್ನು ಅನುನಯಿಸಿ ಸೆರೆಯಲ್ಲಿದ್ದ ಉದಯನನಿಂದಲೇ ವೀಣಾವಾದನವನ್ನು ಕಲಿತು, ಯೌಗಂಧರಾಯಣನ ತಂತ್ರಗಳಿಗೆ ತಾನೂ ಕೈಜೋಡಿಸಿ, ತಾನು ಒಲಿದ ವತ್ಸೇಶ್ವರನನ್ನು ಸೆರೆಯಿಂದ ಬಿಡಿಸಿಕೊಂಡು ಹೊರಟುಬಿಡುತ್ತಾಳೆ. ಪ್ರೇಮಿಗಳು ಹೀಗೆ ಒಂದಾಗುವುದರಲ್ಲಿ ಮಣ್ಣಿನ ಕನಸು ಸಾಕಾರವಾಗುವುದಾದರೂ ಈ ಸಂದರ್ಭದಲ್ಲಿ ನಡೆದ ಘೋರಕೃತ್ಯ ನಿಜವಾಗಿ ಮಣ್ಣಿನ ಕನಸಲ್ಲ; ಮಣ್ಣಿನ ಮಕ್ಕಳ ಸ್ವಾರ್ಥ, ದ್ವೇಷ, ಅಧಿಕಾರಲಾಲಸೆ, ಧರ್ಮವಿರುದ್ಧ ಕಾಮ.
* * *
ಪ್ರಾಚೀನ ಗ್ರೀಸಿನ ಪ್ರಖ್ಯಾತ ಚಿಂತಕ ಪ್ಲೇಟೊ ಧಾರ್ಮಿಕ ರಾಜ್ಯ ಮತ್ತು ರಾಜ್ಯಭಾರವನ್ನು ಕುರಿತು ಹೀಗೆ ಹೇಳಿದ್ದಾನೆ:
Until philosophers are kings, or the kings and princes of this world have the spirit and power of philosophy, and political greatness and wisdom meet in one, and those commoner natures who pursue either to the exclusion of the other are compelled to stand aside, cities will never have rest from their evils. (The Republic)
ಈ ಕಾಣ್ಕೆಯ ಸಂವಾದಿಯನ್ನು ಕೆಲಮಟ್ಟಿಗೆ ಯೌಗಂಧರಾಯಣನ ಅನಿಸಿಕೆಯಲ್ಲಿಯೂ ಗಮನಿಸಬಹುದು.
“ಯಥಾ ರಾಜಾ ತಥಾ ಪ್ರಜಾಃ” ಎನ್ನುವ ಮಾತು ಇಂದಿಗೂ ಎಂದಿಗೂ ಸತ್ಯ. ಹೀಗಾಗಿ ‘ಸ್ವಪ್ನವಾಸವದತ್ತ’ ಮತ್ತು ‘ಮೃಚ್ಛಕಟಿಕ’ಗಳ ಕಾಲಕ್ಕೂ ಇದು ಅನ್ವಯಿಸುತ್ತದೆ. ಆ ಕಾಲದ ಅರಸುಮನೆತನಗಳ ಸುಮನಸ್ಕರು, ಅಲ್ಲಿಯ ಸುಸಂಸ್ಕೃತ ಪ್ರಜೆಗಳು ಮತ್ತು ಮನುಕುಲದ ಹಿತಕ್ಕಾಗಿ ಚಿಂತಿಸುವ ಎಲ್ಲ ಧೀಮಂತರ ಕನಸುಗಳು ಯೌಗಂಧರಾಯಣನ ಮಾತುಗಳ ಮೂಲಕ ಕಾದಂಬರಿಯ ಕಡೆಯ ಭಾಗದಲ್ಲಿ ಕುಡಿಯೊಡೆಯುತ್ತವೆ. ಆ ವೇಳೆಗೇ ಕೌಶಾಂಬಿ ಮತ್ತು ಉಜ್ಜಯಿನಿಗಳ ವಿಪ್ಲವಗಳೆಲ್ಲ ಮುಗಿದು ಎಲ್ಲರ ಬದುಕಿನಲ್ಲಿ ಶಾಂತಿ-ಸೌಖ್ಯಗಳು ನೆಲೆಸಿರುತ್ತವೆ. ರೇಭಿಲನಿಗೆ ಯೌಗಂಧರಾಯಣ ತನ್ನ ಅಮೋಘ ಕನಸನ್ನು ತಿಳಿಸುತ್ತಾನೆ. ದೂರದೃಷ್ಟಿಯುಳ್ಳ ಈ ಮಹಾಮೇಧಾವಿಯ ಮೂಲಕ ಲೇಖಕರು ಬದಲಾಗುತ್ತಿರುವ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಸಾರ್ವಕಾಲಿಕ ಪ್ರಸ್ತುತತೆಯುಳ್ಳ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವನ್ನು ಮಾತ್ರ ಇಲ್ಲಿ ಉದಾಹರಿಸುತ್ತೇನೆ. ಓದುಗರು ಕಾದಂಬರಿಯ ಕಡೆಯ ಪುಟಗಳನ್ನು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳಬೇಕಾಗಿದೆ.
ರೇಭಿಲ ಹೇಳುತ್ತಾನೆ:
“ಬ್ರಾಹ್ಮ-ಕ್ಷಾತ್ತ್ರಗಳಲ್ಲಿರಲಿ, ವೈಶ್ಯದಲ್ಲಿ ಕೂಡ ನಾವು ನಿರೀಕ್ಷೆ ಮಾಡೋ ಮಟ್ಟದ ಸತ್ತ್ವ ಕಾಣ್ತಾ ಇಲ್ಲ ಅಂತ ಅನ್ನಿಸಿದಾಗ ನಾವಿನ್ನ ಶೌದ್ರದಲ್ಲಿಯೇ ಹುಡುಕಬೇಕೇನೋ!” ತುಂಬ ಆಳವಾದ ದನಿಯಲ್ಲಿ ಮಂದ್ರಷಡ್ಜವನ್ನು ಹುಡುಕುವ ಗಾಯಕನಂತೆ ರೇಭಿಲ ನುಡಿದ.
ಒಂದು ಸಪ್ತಕದ ನಿರ್ದಿಷ್ಟಸ್ವರದಿಂದ ಮತ್ತೊಂದು ಸಪ್ತಕದ ಅದೇ ಸ್ವರಕ್ಕೆ ಅಖಂಡವಾಗಿ ಧ್ವನಿಯು ಸಾಗುವಂತೆ ಅವನ ಮಾತಿನ ಜಾಡನ್ನೇ ಹಿಡಿದು ಮಹಾಮಾತ್ಯ ಹೇಳಿದ: “ರೇಭಿಲ, ಹೌದು, ಶೌದ್ರದಲ್ಲಿಯೂ ಹುಡುಕಬೇಕು; ಅದರಾಚೆ ಕೂಡ ನೋಡಬೇಕು. ಮಾತ್ರವಲ್ಲ, ಈ ಎಲ್ಲ ವಿಭಾಗಗಳೂ ಔಪಾಧಿಕ ಅನ್ನೋದನ್ನ ಮರೆಯಬಾರದು ... ರಕ್ತಸಂಬಂಧ, ಸ್ಥಾನಸಂಬಂಧ, ಸಂಕೇತಸಂಬಂಧಗಳಿಂAತ ಮುಖ್ಯವಾಗಿ ಭಾವಸಂಬಂಧಕ್ಕೆ ಬೆಲೆ ಕೊಡಬೇಕು. ಇದಾದರೂ ಭಾವಭ್ರಮೆಯಾಗದೆ ಭಾವಪ್ರಮೆಯಾಗಬೇಕು. ಅಂದರೆ ಭಾವಸಂಬಂಧದ ಹೆಸರಲ್ಲಿ ಮೆರೆಯುವ - ಆದರೆ ವೈಶ್ವಿಕವಾದ ನಿರ್ವಿಶೇಷಾನುಭವಕ್ಕೆ ಬೆಲೆಕೊಡದ - ಭಾವಾಭಾಸಗಳಿಗೆ ಮಣೆಹಾಕಬಾರದು. ಅಂದರೆ ಒಂದು ವರ್ಣ, ಒಂದು ವಂಶ, ಒಂದು ಪರಂಪರೆ ಅನ್ನೋ ಮೋಹಕ್ಕೆ ನಮ್ಮ ವಿವೇಕವನ್ನ ಪೂರ್ಣವಾಗಿ ಧಾರೆ ಎರೆಯಬಾರದು. (ಪು. ೬೩೬)
ಯೌಗಂಧರಾಯಣ ಮುಂದುವರಿದು ಹೇಳುತ್ತಾನೆ:
ಆರುಣಿ ... ಮಗಧೇಶ್ವರ ದರ್ಶಕ ... ಇವರಿಗೆಲ್ಲ ಕ್ರಾಂತಿಯಲ್ಲಿರೋ ಆಸ್ಥೆಯ ಒಂದಂಶವೂ ಶಾಂತಿಯಲ್ಲಿಲ್ಲ ... ಕ್ಷಾತ್ತ್ರ ಚೆನ್ನಾಗೇ ಇದ್ದರೂ ಬ್ರಾಹ್ಮವೇ ಇಲ್ಲವಾಗಿದೆ; ಹೀಗಾಗಿಯೇ ಪ್ರಜಾಸಾಮಾನ್ಯವಾದ ವಿಶ ಅಂತ ಯಾವುದನ್ನ ವೇದ ಹೇಳಿದೆಯೋ ಶೌದ್ರ ಅಂತ ಯಾವುದನ್ನ ಉಪನಿಷತ್ತು ತಿಳಿಸಿದೆಯೋ ಅವನ್ನೆಲ್ಲ ಇವರು ಪ್ರೀತಿಯಿಂದ ಕಾಣಲಿಲ್ಲ, ಸಹಾನುಭೂತಿಯಿಂದ ಆದರಿಸಲಿಲ್ಲ. ಈ ಅಂಶಗಳಲ್ಲಿ ನಮ್ಮ ಉದಯನ, ಚಾರುದತ್ತ ಎಲ್ಲ ತುಂಬ ಮಿಗಿಲು. ಆದರೆ ಇವರಿಗೆ ಕ್ಷಾತ್ತ್ರದ ಒಂದು ಮುಖ್ಯಾಂಶವಾದ ಶತ್ರುಭೇದನ ಚೆನ್ನಾಗಿ ಮೈಗೂಡಲೇ ಇಲ್ಲ. (ಪು. ೬೩೬)
ನಾಲ್ಕೂ ವರ್ಣಗಳಲ್ಲಿ ಇರಬೇಕಾದ ಪರಸ್ಪರ ಸಹಕಾರ, ಅರಿತುಕೊಳ್ಳುವಿಕೆ ಹಾಗೂ ತಮ್ಮ ತಮ್ಮ ಕ್ಷೇತ್ರಗಳ ಸೂಕ್ಷ್ಮ ಪರಿಜ್ಞಾನಗಳ ಬಗೆಗೆ ಇದು ಪ್ರಬುದ್ಧ ಹಾಗೂ ನಿಶಿತ ವಿಶ್ಲೇಷಣೆಯಾಗಿದೆ.
To be continued.